ಹಬ್ಬದ ಸೀಸನ್‌ನಲ್ಲಿ ಸಾಂಪ್ರದಾಯಿಕ ಮಾರುಕಟ್ಟೆ, ಮಾಲ್ಸ್ ಹಾಗೂ ಆನ್‌ಲೈನ್‌ ಮಾರುಕಟ್ಟೆಯ ಕ್ರೇಜ್‌ ಹೆಚ್ಚುತ್ತದೆ. ಆಗ ಎಲ್ಲೆಲ್ಲೂ ಆಫರ್‌ಗಳದ್ದೇ ಸುದ್ದಿ. ಹೀಗಾಗಿ ಯಾವ ರೀತಿ ಶಾಪಿಂಗ್‌ ಮಾಡಬೇಕೆಂದು ತಿಳಿಯುವುದಿಲ್ಲ. ಬಹಳಷ್ಟು ಪ್ರಶ್ನೆಗಳ ನಡುವೆಯೂ ಮಾರುಕಟ್ಟೆಯಲ್ಲಿ ಶಾಪಿಂಗ್‌ ಮಾಡುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚು ಇರುತ್ತದೆ. ಮಾಲ್ಸ್ ನಲ್ಲಿ ಖರೀದಿ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ಕೆಲವರು ಮಾರುಕಟ್ಟೆ ಹಾಗೂ ಮಾಲ್ಸ್ ನ ಜನದಟ್ಟಣೆಯ ಕಿರಿಕಿರಿಯಿಂದ ಬಚಾವಾಗಲು ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡಲು ಇಚ್ಛಿಸುತ್ತಾರೆ.

ವಾಸ್ತವ ಸಂಗತಿಯೇನೆಂದರೆ ಇಂದಿನ ಬದಲಾದ ಸನ್ನಿವೇಶದಲ್ಲಿ ಎಲ್ಲರಿಗೂ ಸಮಯದ ಕೊರತೆಯಿದೆ. ಸಮಯದ ಉಳಿತಾಯಕ್ಕಾಗಿಯೇ ಫೆಸ್ಟಿವಲ್‌ ಶಾಪಿಂಗ್‌ನ ಫಾರ್ಮುಲಾ ಸಿದ್ಧಪಡಿಸಲಾಗುತ್ತದೆ. ಇಂದಿನ ಯುವ ಜನಾಂಗದವರು ತಮಗೆ ಬೇಕಿರುವ ಆಧುನಿಕ ಸಲಕರಣೆಗಳನ್ನು ಆನ್‌ಲೈನ್‌ನಲ್ಲಿಯೇ ಖರೀದಿಸುವುದು ಹೆಚ್ಚು ಸೂಕ್ತ ಎಂದು ಭಾವಿಸುತ್ತಾರೆ.

ಬಿಎ ಫೈನಲ್‌ನಲ್ಲಿ ಓದುತ್ತಿರುವ ಕೃತಿ ಹೀಗೆ ಹೇಳುತ್ತಾರೆ, “ಆನ್‌ಲೈನ್‌ ಶಾಪಿಂಗ್‌ನ ಟ್ರೆಂಡ್‌ ಈಗ ಬದಲಾಗಿದೆ. ಮೊದಲು ಜನರಿಗೆ ಅದರ ಬಗ್ಗೆ ನಂಬಿಕೆಯೇ ಇರಲಿಲ್ಲ. ಪರದೆಯ ಮೇಲೆ ತೋರಿಸುವುದೊಂದು, ಕಳಿಸುವುದು ಇನ್ನೊಂದು ಎಂದಾದರೆ ಹೇಗೆ ಎಂದು ಅವರು ಯೋಚಿಸುತ್ತಿದ್ದರು. ಆದರೆ ಈಗ ಹಾಗಲ್ಲ, ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುವನ್ನು ಬದಲಿಸಬಹುದಾಗಿದೆ. ಇಲ್ಲಿ ಫ್ಯಾಷನ್‌ನ ಹೊಸ ಟ್ರೆಂಡ್‌ ನೋಡಲು ಸಿಗುತ್ತದೆ. ಹೊಸ ಡಿಸೈನ್‌ಗೆ ಮೊಬೈಲ್‌ ಇಂಟರ್‌ನೆಟ್‌ನಲ್ಲಿ ಸರ್ಚ್‌ ಹಾಕಿದರೆ ಸಾಕು, ಯಾವುದೇ ಟೆನ್ಶನ್‌ ಇಲ್ಲದೆ ನಿಮಗೆ ಬೇಕಾದ ವಸ್ತುವನ್ನು ಹುಡುಕಬಹುದು.”

ಈ ಕುರಿತಂತೆ ಅನುಶ್ರೀ ಹೇಳುವುದು ಹೀಗೆ, “ಆನ್‌ಲೈನ್‌ ಶಾಪಿಂಗ್‌ನಲ್ಲಿ ಈಗ ವಿಶಿಷ್ಟ ವಸ್ತುಗಳು ಕೂಡ ಲಭಿಸುತ್ತವೆ. ಹೀಗಾಗಿ ಆನ್‌ಲೈನ್‌ ಉತ್ತಮ ಆಯ್ಕೆ ಅನಿಸಿಕೊಳ್ಳುತ್ತದೆ. ಈಗ ಆನ್‌ಲೈನ್‌ ಮಾರ್ಕೆಟಿಂಗ್‌ ಕಂಪನಿಗಳು ಗ್ರಾಹಕರ ಜೊತೆ ಉತ್ತಮ ಸೌಹಾರ್ದ ಸಂಬಂಧ ಹೊಂದಲು ಪ್ರಯತ್ನ ನಡೆಸುತ್ತಿವೆ. ಕೆಲವು ವಸ್ತುಗಳು ಮಾರುಕಟ್ಟೆಯಲ್ಲಿ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಆದರೆ ಆನ್‌ಲೈನ್‌ನಲ್ಲಿ ಲಭಿಸುತ್ತವೆ. ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸಲು ಒಂದಿಷ್ಟು ಜಾಣ್ಮೆ ಇರಬೇಕು ಎನ್ನುವುದು ಮಾತ್ರ ನಿಜ.”

ಮಾರುಕಟ್ಟೆಯ ಆಕರ್ಷಣೆ

ಶಾಪಿಂಗ್‌ ಎನ್ನುವುದು ಕೆಲವರಿಗೆ ನೆಮ್ಮದಿ ನೀಡುವ ಕೆಲಸ. ಈ ಕುರಿತಂತೆ ರೇಡಿಯೊ ಜಾಕಿ ಅವಿನಾಶ್‌ ಹೇಳುವುದು ಹೀಗೆ, “ಪ್ರತಿಯೊಂದು ಊರಿನಲ್ಲೂ ಪಾರಂಪರಿಕ ಅಂಗಡಿಗಳು ಇದ್ದೇ ಇರುತ್ತವೆ. ಅಲ್ಲಿ ಗ್ರಾಹಕರನ್ನು ನಿರಾಳವಾಗಿ ಕೂರಿಸಿ ಅವರಿಗೆ ಬೇಕಾದ ವಸ್ತುಗಳನ್ನು ಅವರು ಕುಳಿತಲ್ಲಿಯೇ ತಂದು ಕೊಡಲಾಗುತ್ತದೆ. ಜೊತೆಗೆ ಕಾಫಿ, ಟೀ, ಜೂಸ್‌ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಹೀಗಾಗಿ ಗ್ರಾಹಕ ಹಾಗೂ ಮಾಲೀಕನ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.”

ಬಹಳ ವರ್ಷಗಳಿಂದ ಒಂದೇ ಕಡೆ ನೆಲೆಸಿರುವ ಜನರು ಹಬ್ಬದ ಖರೀದಿಗೆಂದು ತಮ್ಮ ಮೆಚ್ಚಿನ ಹಳೆಯ ಅಂಗಡಿಗಳಿಗೆ ಹೋಗುತ್ತಾರೆ. ಆ ಅಂಗಡಿಯ ಮೇಲಿನ ನಂಬಿಕೆಯೇ ಅವರು ಹೀಗೆ ಮಾಡಲು ಕಾರಣ.

ರೇಣುಕಾ ಹೇಳುವುದು ಹೀಗೆ, “ಮಾರುಕಟ್ಟೆಗೆ ಹೋಗಿ ಖರೀದಿ ಮಾಡುವುದರಿಂದ ಶಾಪಿಂಗ್‌ ಹಾಗೂ ಹಬ್ಬದ ಮಜ ಎರಡೂ ದೊರೆಯುತ್ತವೆ. ಯಾವಾಗಲಾದರೊಮ್ಮೆ ಆನ್‌ಲೈನ್‌ ಖರೀದಿ ಕೂಡ ಮಾಡಬೇಕಾಗುತ್ತದೆ.”

ಹಬ್ಬದ ಶಾಪಿಂಗ್‌ನಲ್ಲಿ ಮಾರುಕಟ್ಟೆಯ ರಂಗುರಂಗಿನ ವಾತಾವರಣ ಜನರನ್ನು ಆಕರ್ಷಿಸುತ್ತದೆ. ಈ ಕುರಿತಂತೆ ಸ್ನೇಹಾ ಹೇಳುವುದು ಹೀಗೆ, “ನನ್ನ ಮೊದಲ ಆಯ್ಕೆ ಮಾರುಕಟ್ಟೆಯಲ್ಲಿ ಖರೀದಿ. ಮಾರ್ಕೆಟ್‌ಗೆ ಹೋಗಿ ಖರೀದಿಸುವುದರಿಂದ ಹಬ್ಬದ ನಿಜವಾದ ಖುಷಿ ಸಿಗುತ್ತದೆ. ಸಾಮಾನ್ಯವಾಗಿ ನಾವು ಆನ್‌ಲೈನ್‌ ಶಾಪಿಂಗ್‌ ಮಾಡುವುದು ಸಮಯ ಉಳಿತಾಯ ಮಾಡಲು. ಆದರೆ ಮಾರುಕಟ್ಟೆಯಲ್ಲಿ ಖರೀದಿ ಹಬ್ಬದ ಬೆರಗನ್ನು ಕಣ್ಮುಂದೆ ನಿಲ್ಲಿಸುತ್ತದೆ.”

ಶಾಪಿಂಗ್‌ ಮುಗಿಸಿ ಹೋಟೆಲ್‌‌ಗೆ ಹೋಗಿ

ಮಾರುಕಟ್ಟೆಗೆ ಹೋಗಿ ಖರೀದಿ ಮಾಡುವುದರ ಮತ್ತೊಂದು ಮುಖ್ಯ ಕಾರಣವೆಂದರೆ, ಮೆಚ್ಚಿನ ಹೋಟೆಲ್‌ಗೆ ಭೇಟಿ ಕೊಡುವುದು ಕೂಡ ಆಗಿರುತ್ತದೆ. ಗಾಂಧಿ ಬಜಾರ್‌ಗೆ ಖರೀದಿಗೆ ಹೋದರೆ ಅಲ್ಲಿಯೇ `ವಿದ್ಯಾರ್ಥಿ ಭವನ’ದಲ್ಲಿ ದೋಸೆಯ ಸವಿ ಸವಿಯದೇ ಹೋಗಲು ಆಗುವುದಿಲ್ಲ ಎಂದು ಚಾಮರಾಜಪೇಟೆಯ ಶಶಿರೇಖಾ ಹೇಳುತ್ತಾರೆ. ಮತ್ತೆ ಕೆಲವರು ಖರೀದಿಯ ಜೊತೆಗೆ ವಿವಿ ಪುರಂ ಫುಡ್‌ ಸ್ಟ್ರೀಟ್‌ಗೂ ಭೇಟಿ ಕೊಡುತ್ತಾರೆ. ಶಾಪಿಂಗ್‌ಗೂ ಮುಂಚೆ ಇಂತಿಂಥ ಸ್ಥಳದಲ್ಲಿ ಇಂತಿಂಥದ್ದನ್ನು ತಿನ್ನಬೇಕೆಂದುಕೊಂಡೇ ಹೋಗಿರುತ್ತಾರೆ.

ಮಾಲ್‌ಗಳ ಕ್ರೇಜ್‌

ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರಗಳಲ್ಲಷ್ಟೇ ಅಲ್ಲ, ಎರಡನೇ ಕ್ರಮಾಂಕದ ನಗರಗಳಲ್ಲಿ ಕೂಡ ಮಾಲ್‌ನಲ್ಲಿ ಖರೀದಿಯ ಟ್ರೆಂಡ್‌ ಹೆಚ್ಚಾಗುತ್ತಿದೆ. ಇಲ್ಲಿ ಎಷ್ಟೋ ಸಲ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಶಾಪಿಂಗ್‌ ಆಗುತ್ತದೆ. ಹೆಚ್ಚಿನ ಖರೀದಿಗೆ ಹೆಚ್ಚು ರಿಯಾಯ್ತಿ ಸಿಗುತ್ತದೆ.

ರಶ್ಮಿ ಹೇಳುತ್ತಾರೆ, “ನನಗೆ ಆನ್‌ಲೈನ್‌ ಖರೀದಿಯಲ್ಲಿ ನಂಬಿಕೆಯಿಲ್ಲ. ಅಲ್ಲಿ ತೋರಿಸುವುದೊಂದು, ಕಳಿಸುವುದೊಂದು. ಮಾರುಕಟ್ಟೆ ಹಾಗೂ ಮಾಲ್‌ನಲ್ಲಿ ಖರೀದಿ ಮಾಡುವುದು ನನಗೆ ಖುಷಿ ಕೊಡುತ್ತದೆ. ಇಲ್ಲಿ ಯಾವುದೇ ಒಂದು ವಸ್ತುನ್ನು ನೋಡಿ ಖರೀದಿಸುವುದರಿಂದ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ.”

ಶ್ವೇತಾ ಹೇಳುವುದು ಹೀಗೆ, “ಸಮಯಕ್ಕೆ ತಕ್ಕಂತೆ ನಾನು ಖರೀದಿಯ ಖುಷಿ ಪಡೆಯುತ್ತೇನೆ. ಮಾಲ್‌ನಲ್ಲಿ ಮೆಚ್ಚಿನ ಹೋಟೆಲ್‌ನ ತಿಂಡಿ ಸಿಗುವುದಿಲ್ಲವಾದರೂ, ಬೇರೆ ತೆರನಾದ ರುಚಿ ಸವಿಯಲು ಅವಕಾಶ ದೊರಕುತ್ತದೆ.”

ವಿನಯ್‌ ಹೇಳುವುದು ಹೀಗೆ, “ಮಾಲ್ಸ್ ನಲ್ಲಿ ಶಾಪಿಂಗ್‌ಗೆ ಎಷ್ಟೊಂದು ಆಫರ್‌ಗಳು ಇರುತ್ತವೆಯೆಂದರೆ, ಒಮ್ಮೊಮ್ಮೆ ನಮ್ಮ ಬಜೆಟ್‌ ಏರುಪೇರಾಗುತ್ತದೆ. ಮಾರುಕಟ್ಟೆಯಲ್ಲಿ ಹೋಗಿ ಖರೀದಿ ಮಾಡುವಾಗ ನಮಗೆ ಏನು ಬೇಕು, ಎಷ್ಟು ಬೇಕು ಎನ್ನುವುದನ್ನು ನಿರ್ಧರಿಸುವುದು ಸುಲಭವಾಗುತ್ತದೆ.”

ನೀಲಾ ಹೀಗೆ ಹೇಳುತ್ತಾರೆ, “ಮಾರುಕಟ್ಟೆಯಲ್ಲಿ ಹೋಗಿ ಖರೀದಿ ಮಾಡುವುದೇ ನಿಜವಾದ ಜಾಣತನ. ಬಹಳಷ್ಟು ಜನ ಮಾಲ್ ಮತ್ತು ಮಾರುಕಟ್ಟೆಯಲ್ಲಿಯೇ ಖರೀದಿಯ ಮಜ ಪಡೆಯುತ್ತಾರೆ. ಮಾರುಕಟ್ಟೆಯ ರಂಗುರಂಗಿನ ವಾತಾವರಣ ಖರೀದಿಗೆ ಮತ್ತಷ್ಟು ಖುಷಿ ಬೆರೆಸುತ್ತದೆ. ಆ ಖುಷಿ ಆನ್‌ಲೈನ್‌ನಲ್ಲಿ ಖಂಡಿತ ದೊರೆಯುವುದಿಲ್ಲ.”

ಕೆಲವರಂತೂ ಜಯನಗರ, ಗಾಂಧಿಬಜಾರ್‌, ಮಲ್ಲೇಶ್ವರಂನಂತಹ ಪಾರಪಂರಿಕ ಮಾರುಕಟ್ಟೆಗೆ ಹೋಗಿ ಖರೀದಿಸಿದರೆ ಹೆಚ್ಚು ಖುಷಿ ದೊರೆಯುತ್ತದೆ ಎನ್ನುತ್ತಾರೆ. ಮಣ್ಣಿನ ಹಣತೆಗಳು ಹಾಗೂ ಪಾರಂಪರಿಕ ವಸ್ತುಗಳು ಇಲ್ಲಿ ಸುಲಭವಾಗಿ ದೊರೆಯುತ್ತವೆ. ನಮ್ಮ ಖರೀದಿಯಿಂದ ಕೆಲವು ಜನರಿಗೆ ಸಹಾಯವಾಗುತ್ತದೆ ಎಂಬ ಅನುಭವ ಅವರಿಗಿರುತ್ತದೆ.

– ಜಿ. ಸುಮಿತ್ರಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ