ನಾವು ಮನೆಯ ಒಳಾಲಂಕಾರ ಚೆನ್ನಾಗಿರಲಿ ಎಂದು ಏನೇನೋ ಪ್ರಯತ್ನ ಮಾಡುತ್ತಿರುತ್ತೇವೆ. ಅದರಲ್ಲಿ ಬಹುತೇಕ ಬದಲಾವಣೆಗಳಾದ ಮೇಲೂ ಮನಸ್ಸಿಗೆ ಸಮಾಧಾನ ಎನಿಸುವುದಿಲ್ಲ. ಹಾಗಿರುವಾಗ ಮನೆಯ ಲುಕ್ಸ್ ಎದ್ದು ತೋರಲು ಏನು ಮಾಡಬೇಕು? ರಾಷ್ಟ್ರೀಯ ಖ್ಯಾತಿವೆತ್ತ ಇಂಟೀರಿಯರ್ ಡೆಕೋ ಎಕ್ಸ್ ಪರ್ಟ್‌ಗಳ ಸಲಹೆ ನಿಮಗಾಗಿ ಈ ರೀತಿ ಇವೆ :
ಮನೆಯನ್ನು ಹೀಗೆ ಸುಂದರಗೊಳಿಸಿ
ನೀವು ಹೊಸ ಮನೆ ಕಟ್ಟಿಸುತ್ತಿರಬಹುದು, ಇರುವ ಮನೆಯನ್ನೇ ರೆನೋವೇಟ್ ಮಾಡಿಸುತ್ತಿರಬಹುದು ಅಥವಾ ಬಹಳ ವರ್ಷಗಳಿಂದ ಮನೆಯನ್ನು ಒಂದೇ ರೀತಿ ಇಟ್ಟುಕೊಂಡಿರಬಹುದು, ಆಗ ನಿಮಗೆ ಇದನ್ನೆಲ್ಲ ಬದಲಾಯಿಸಿ ಏನಾದರೂ ಹೊಸ ರೂಪ ಕೊಡಬಹುದೆಂಬ ಐಡಿಯಾ ಬರುತ್ತದೆ. ಅದರಿಂದ ಮನೆಯ ಅಂದ ಖಂಡಿತಾ ಹೆಚ್ಚುತ್ತದೆ. ಇದನ್ನೇ ಹೋಮ್ ಸ್ಟೈಲಿಂಗ್ ಎನ್ನುತ್ತಾರೆ. ಇದಕ್ಕಾಗಿ ನೀವು ರಚನಾತ್ಮಕ ವಿಧಾನಗಳನ್ನು ಬಳಸಿ ಒಂದು ಕಟ್ಟಡಕ್ಕೆ ಮನೆಯ ಜೀವಂತಿಕೆ ತಂದುಕೊಡಬಹುದು. ಒಂದು ಕೋಣೆಯ ಸ್ವರೂಪವನ್ನು ಅರಿಯುವುದರಿಂದ ಇದರ ಆರಂಭವಾಗುತ್ತದೆ. ಆ ಕೋಣೆಯನ್ನು ತದನಂತರ ಇಡೀ ಮನೆಯನ್ನು ಹೇಗೆ ಗೃಹಾಲಂಕಾರದಿಂದ ಇನ್ನಷ್ಟು ಸುಂದರವಾಗಿಸಬಹುದು ಎಂಬುದೇ ಉದ್ದೇಶ.
ಕೆಲವು ಸಲವಂತೂ ನೀವು ಎಷ್ಟೇ ಪ್ರಯಾಸಪಟ್ಟರೂ, ಮನೆ ಅಂದವಾಗಿ ಕಂಗೊಳಿಸದು. ಹೀಗಾದಾಗ ನೀವು ಅದಕ್ಕೆ ಕಾರಣವೇನು ಎಂದು ಹುಡುಕುವುದು ಸೂಕ್ತ. ಕಾರಣವೇನೇ ಇರಲಿ... ಕೆಟ್ಟ ಫರ್ನೀಚರ್, ಅಂದಹೀನ ಲೇಔಟ್, ಸಹಜ ಬೆಳಕಿನ ಕೊರತೆ ಇತ್ಯಾದಿ... ಉದಾ : ಇತ್ತೀಚೆಗೆ ಸವಿತಾ ತನ್ನ ಮನೆಯ ಗೆಸ್ಟ್ ಬೆಡ್‌ರೂಂಗೆ ಮೇಕ್‌ಓವರ್‌ನ ಪ್ಲಾನ್ ಮಾಡಿದಳು. ನೋಡಲು ಆ ಕೋಣೆ ಸಾಮಾನ್ಯವಾಗಿಯೇ ಕಂಡುಬರುತ್ತಿತ್ತು, ಆದರೆ ವಾಸ್ತವದಲ್ಲಿ ಅಲ್ಲಿ ಶಕ್ತಿ ಮತ್ತು ಜೀವಂತಿಕೆಯ ಅಭಾವವಿತ್ತು.
ಆಗ ಸವಿತಾ 2 ಮಹತ್ವಪೂರ್ಣ ವಿಷಯ ಗಮನಿಸಿಕೊಂಡಳು. ಆ ಕೋಣೆಗೆ ಸೂರ್ಯನ ಬೆಳಕು ಸಹಜವಾಗಿ ಸಿಗುತ್ತಿರಲಿಲ್ಲ ಹಾಗೂ ಮತ್ತೊಂದು ಎಂದರೆ ಬಹು ಸಾಮಗ್ರಿ ಸೇರಿಕೊಂಡು ಇಡೀ ಕೋಣೆ ಗಿಜಿಗುಟ್ಟುತ್ತಾ ಕಿಷ್ಕಿಂಧೆಯಾಗಿತ್ತು. ಅಲ್ಲಿನ ಅನಗತ್ಯ ಸಾಮಗ್ರಿ ತೊಲಗಿಸಿ, ಸಹಜ ಬೆಳಕು ಒಳಬರುವಂತೆ ಮಾಡಿದರೆ, ಕಿಟಕಿ ತೆರೆದಿಟ್ಟರೆ, ಗಾಢ ಬಣ್ಣಕ್ಕೆ ಬದಲಾಗಿ ತೆಳು ಬಣ್ಣದ ಪರದೆ ಬಳಸಿದರೆ ಅದೇ ಕೋಣೆ ಹೆಚ್ಚು ಬ್ರೈಟ್ ಆಗಿ ಕಾಣುವುದರಲ್ಲಿ ಸಂದೇಹವಿಲ್ಲ ಎಂದು ಮನಗಂಡು ಹಾಗೇ ಮಾಡಿದಳು..... ಅದು ಅಕ್ಷರಶಃ ನಿಜವಾಯಿತು!
ನೀವು ಮಲಗಿರುವಾಗ, ಕಿಟಕಿ ಬಾಗಿಲಿಗೆ ದಪ್ಪ ಕಪ್ಪು ತೆರೆಯಿರಲಿ ಎಂದು ಬಯಸಿದರೆ, ನೀವು ಸಣ್ಣ ಪರದೆಯ ಜೊತೆ ಮತ್ತೊಂದು ಬಿಲ್‌ಕುಲ್ ತೆಳು ಇರುವಂಥ ಪರದೆ ಜೋಡಿಸಿಕೊಳ್ಳಿ. ಇದನ್ನು ಹಗಲು ಹೊತ್ತಿನಲ್ಲಿ ಧಾರಾಳವಾಗಿ ಬಳಸಬಹುದು.
ನಿಮ್ಮ ಮನೆಯನ್ನು ಹೆಚ್ಚು ಹೆಚ್ಚು ಸಾಮಗ್ರಿಗಳಿಂದ ತುಂಬಿಸಿ ಡಂಜನ್ ಮಾಡಬೇಡಿ. ಹಾಲ್‌ನಲ್ಲಿ ಟಿವಿ ಯೂನಿಟ್ ನಿಮ್ಮ ಮನೆಯ ಅತ್ಯಧಿಕ ಜಾಗ ಬೇಡುವ ಫರ್ನೀಚರ್. ಆದರೆ, ಅದು ಖಂಡಿತಾ ವಿಶುಯೆಲ್ ಬ್ಲಾಕ್ ಕ್ರಿಯೇಟ್ ಮಾಡುತ್ತದೆ. ಹೀಗಾಗಿ ಟಿವಿಯನ್ನು ತೆಳು ಬಣ್ಣದ ಗೋಡೆಗೆ ಆನಿಸಿಡಿ ಅಥವಾ ಹ್ಯಾಂಗ್ ಮಾಡಿ.
ಒಂದು ಕಲರ್ ಟೋನ್ ಜೊತೆ ಕೆಲಸ ಮಾಡುವುದು ಸುಲಭ, ಆಗ ಬೇರೆ ಬೇರೆ ಘಟಕಗಳನ್ನು ಒಟ್ಟಿಗೆ ಇಡಬಹುದು. ಕಾಂಟ್ರಾಸ್ಟ್ ಕಲರ್ಸ್ ಜೊತೆ ಕೆಲಸ ಮಾಡುವುದು ಚಾಲೆಂಜಿಂಗ್ ಎನಿಸುತ್ತದೆ. ಆದರೆ ನೀವು ಡಿಸೈನರ್ ಕಡೆ ಗಮನಹರಿಸಿದರೆ, ಆಗ ಅದು ಸಾಕಷ್ಟು ಉತ್ತಮ ಪರಿಣಾಮ ನೀಡಬಲ್ಲದು.