ಚಂದದ ಮನೆ ನಿರ್ಮಿಸಬೇಕೆನ್ನುವುದು ಎಲ್ಲರ ಬದುಕಿನ ಒಂದ ದೊಡ್ಡ ಕನಸು. ಆ ಕನಸನ್ನು ನನಸಾಗಿಸಲು ಹಲವು ವರ್ಷಗಳ ಹೋರಾಟ ಸವೆಸುವ ಹಾದಿ ಎಲ್ಲ ಅವರ್ಣನೀಯ. ಕನಸು ಪೂರ್ಣಗೊಂಡು ಸೊಗಸಾದ ಮನೆ ಎದ್ದು ನಿಂತಾಗ ಬದುಕಿನ  ಸಾರ್ಥಕ ಕ್ಷಣದ ಆನಂದ. ತಮ್ಮ ಕನಸಿನ ಮನೆಯ ನಿರ್ಮಾಣ ನಕ್ಷೆಯಿಂದಲೇ ಆರಂಭಗೊಂಡಿರುತ್ತೆ. ರೂಮುಗಳು, ಹಾಲ್‌, ಕಿಚನ್‌, ಇಂಟರೀಯರ್‌ ಎಲ್ಲವೂ ಅವರವ ಯೋಜನೆಯಂತೆಯೇ ನಿರ್ಮಾಣಗೊಂಡಿರುತ್ತದೆ. ಆದರೆ ಎಲ್ಲದರ ನಡುವೆ ತಮ್ಮ ಕನಸಿನ ಸೌಧಕ್ಕೆ ಎಂತಹ ಬಣ್ಣದಿಂದ ಸಿಂಗರಿಸಬೇಕೆನ್ನುವ ವಿಚಾರದಲ್ಲಿ ತುಸು ಗೊಂದಲಕ್ಕೀಡಾಗುವುದು ಸಹಜ. ಬಣ್ಣಗಳು ಬದುಕಿನ ಭಾವೈಕ್ಯತೆಯ ಸಂಕೇತ ಎನ್ನುತ್ತಾರೆ.

ನಾವು ನಮ್ಮ ಮನೆಗೆ ಒಪ್ಪುವ ಬಣ್ಣವನ್ನು ಆಯ್ಕೆ ಮಾಡುವಾಗ ನಿಮ್ಮ ಅಭಿರುಚಿ ಹಾಗೂ ವ್ಯಕ್ತಿತ್ವವನ್ನು ತೋರ್ಪಡಿಸುವಂತಿರಬೇಕು. ಜೊತೆಗೆ ಆ ರಂಗು ನಮ್ಮ ನಿಲುವು, ಒಳನೋಟ ಹಾಗೂ ಅಭಿವೃದ್ಧಿಯನ್ನು ಪ್ರತಿಬಿಂಬಿಸುವಂತಿರಬೇಕು. ಮಾತ್ರವಲ್ಲ, ನೋಡುಗರ ಮನ ಸೆಳೆಯುವಂತಿರಬೇಕು. ಅಲ್ಲದೆ ಅದೂ ಸದಾ ಮನೆಯಲ್ಲಿ  ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ನೆಲೆಸುವಂತೆ ಪ್ರತಿನಿಧಿಸುವಂತಿರಬೇಕು.

ಹಿಂದೆಲ್ಲ ಮನೆಗೆ ಬಣ್ಣ ಬಳಿಯುವುದೆಂದರೆ ಯಾವುದೋ ಒಂದು ಬಣ್ಣವನ್ನು ಆಯ್ಕೆ ಮಾಡಿಕೊಂಡು ಒಂದೇ ಬಣ್ಣದಲ್ಲಿ ಇಡೀ ಮನೆಯನ್ನು ಬಣ್ಣವಾಗಿಸುತ್ತಿದ್ದರು. ಆದರೆ ಕಾಲ ಬದಲಾದ ಹಾಗೇ 3 ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಹಾಲ್‌ಗೆ ಒಂದು ಬಣ್ಣ, ರೂಮ್ ಗೆ ಇನ್ನೊಂದು ಬಣ್ಣ, ಕಿಟಕಿ ಬಾಗಿಲುಗಳಿಗೆ ಮತ್ತೊಂದು ಬಣ್ಣ ಹೀಗೆ ಪ್ರತ್ಯೇಕ ಬಣ್ಣಗಳಿಂದ ಅಲಂಕರಿಸುತ್ತಾರೆ. ಇದರೊಂದಿಗೆ ಇತ್ತೀಚೆಗೆ ಕೆಲವರು ಕಾಂಟ್ರಾಸ್ಟ್ ಶೈಲಿಯನ್ನು ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ. ಆದರೆ ಕೆಲವರಿಗೆ ಮನೆಯ ಅಂದವನ್ನು ಹೆಚ್ಚಿಸುವ ಈ ಬಣ್ಣಗಳ ಆಯ್ಕೆಯಲ್ಲಿ ಇನ್ನೂ ಗೊಂದಲದಲ್ಲಿರುತ್ತಾರೆ. ಕೆಲವರಿಗೆ ಗಾಢವಾಗಿ ಎದ್ದು ಕಾಣುವ ಬಣ್ಣಗಳು ಇಷ್ಟವಾದರೆ, ಮತ್ತೆ ಕೆಲವರಿಗೆ ತಿಳಿ ಬಣ್ಣಗಳೇ ಬಹಳ ಇಷ್ಟ. ಅಲ್ಲದೆ ಒಂದಿಷ್ಟು ವಿಭಿನ್ನ ಅಭಿರುಚಿಯುಳ್ಳ ಮಂದಿಗೆ ಮಿಶ್ರ ಬಣ್ಣದಲ್ಲಿ ಹೆಚ್ಚು ಆಸಕ್ತಿ. ನಿಮ್ಮ ಬಣ್ಣಗಳ ಆಯ್ಕೆ ಸಮರ್ಪಕವಾಗಿರಲು ಕೆಲವು ಸಲಹೆಗಳು :

ಎಂತಹ ಬಣ್ಣದ ಆಯ್ಕೆ?

ಮನೆಗೆ ಬಣ್ಣ ಬಳಿಯುವ ಮುನ್ನ ಯಾವ ಬಣ್ಣ ನಿಮಗಿಷ್ಟ ಅನ್ನೋದನ್ನು ಮೊದಲೇ ಸ್ಪಷ್ಟವಾಗಿ ನಿರ್ಧರಿಸಿ. ನಿಮ್ಮ ಮನಸ್ಸಿಗೊಪ್ಪುವ, ನಿಮಗೆ ಇಷ್ಟವಾಗುವ ಹಾಗೂ ನೋಡುಗರನ್ನು ಆಪ್ತವಾಗಿ ಸೆಳೆಯುವಂತಹ ಆಕರ್ಷಕ ಬಣ್ಣವಾಗಿರಲಿ. ಅದು ನಿಮ್ಮ ಅಭಿರುಚಿ, ವ್ಯಕ್ತಿತ್ವ, ಒಳನೋಟವನ್ನು ಬಿಂಬಿಸುವಂತಿರಬೇಕು. ಉದಾಹರಣೆಗೆ ನಿಮಗೆ ತಿಳಿ ನೀಲಿ ಬಣ್ಣದ ಮೇಲೆ ವಿಶೇಷ ಆಸಕ್ತಿಯಿದ್ದರೆ, ಅದನ್ನು ಆಯ್ಕೆ ಮಾಡಿಕೊಂಡು ಮನೆಯ ಹೊರಭಾಗಕ್ಕೆ ಬಳಿಯಿರಿ. ಮನೆಯ ಒಳಗಡೆ ಅದಕ್ಕೆ ಅನುರೂಪವಾಗಿರೋ ತಿಳಿ ಬಣ್ಣವನ್ನೇ ಉಪಯೋಗಿಸಿ. ಆಗ ನಿಮ್ಮ ಮನಸ್ಸಿಗೆ ಆಪ್ತವೆನಿಸಿ, ತುಂಬಾ ಹೆಮ್ಮೆಯಿಂದ ಬೀಗುವಿರಿ. ನೆನಪಿರಲಿ, ನೀವು ಆಯ್ಕೆ ಮಾಡಿಕೊಳ್ಳುವ  ಬಣ್ಣ ನಿಮ್ಮ ಮನೆಯ ಸಂಸ್ಕೃತಿ, ವಾತಾವರಣ, ಅಭಿರುಚಿ,  ಸೊಗಸು, ಪ್ರತಿಷ್ಠೆ ಎಲ್ಲ ಅದರಲ್ಲಿ ಅಡಗಿರುತ್ತದೆ.

ನಿಮ್ಮ ಆಯ್ಕೆ ಸೂಕ್ತವೆನಿಸಿದೆಯೇ?

ಬಣ್ಣವನ್ನು ಆಯ್ಕೆ ಮಾಡುವಾಗ ಮನದಲ್ಲಿ ಯಾವುದೇ ಗೊಂದಲಗಳಿರಬಾರದು. ಮುಕ್ತ ಮನಸ್ಸಿನಿಂದ ಆಯ್ಕೆ ಮಾಡಿ. ಅದು ನಿಮಗೆ ತೃಪ್ತಿ ತರಬೇಕು ಹಾಗೂ ಹಿತವಾಗಿರಬೇಕು. ಯಾರದ್ದೋ ಬಲವಂತ ಅಥವಾ ಒತ್ತಾಯಕ್ಕಾಗಿ, ಅವರ ಇಚ್ಛೆ ಅಭಿರುಚಿಗಾಗಿ ನೀವು ಒಪ್ಪದಿರಿ. ಬಣ್ಣಗಳ ಆಯ್ಕೆಯಲ್ಲಿ ಎಲ್ಲರ ಅಭಿರುಚಿ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಒಬ್ಬರಿಗೆ ಇಷ್ಟವಾಗುವ ಬಣ್ಣ ಇನ್ನೊಬ್ಬರಿಗೆ ಇಷ್ಟವಾಗದೆ ಇರಬಹುದು. ಹಾಗಾಗಿ ಆಯ್ಕೆಗಾಗಿ ಬೇರೆಯವರ ಅಭಿಪ್ರಾಯವನ್ನು ಬಯಸದಿರಿ. ನಿಮ್ಮ ಮನೆ ಅಂದವಾಗಿ ಕಾಣಿಸಲು ನಿಮ್ಮ ಆಯ್ಕೆಯೇ ಮುಖ್ಯವಾಗಿರುತ್ತದೆ.

ಬಣ್ಣಗಳ ಉತ್ಕೃಷ್ಟ ಗುಣಮಟ್ಟ

ಬಣ್ಣಗಳನ್ನು ಆಯ್ಕೆಯ ಸಮಯದಲ್ಲಿ ಕೇವಲ ವಿವಿಧ ನಮೂನೆಯ ಕಲರ್‌ಗಳನ್ನಷ್ಟೇ ಚೂಸ್‌ ಮಾಡಿದರೆ ಸಾಲದು. ಜೊತೆಗೆ ಗುಣಮಟ್ಟದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದಿರಿ. ಸಾಧ್ಯವಾದಷ್ಟು ಬ್ರ್ಯಾಂಡ್‌ ಕಂಪನಿಗಳ ಪೇಂಟ್‌ನ್ನು ಖರೀದಿಸಿ. ಇದರಿಂದಾಗಿ ದೀರ್ಘಕಾಲದ ಬಾಳಿಕೆ, ಗುಣಮಟ್ಟ ಹಾಗೂ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಬಹುದು. ಒಮ್ಮೆ ಬಣ್ಣ ಬಳಿದರೆ ಸರಿ ಸುಮಾರು ಕಡಿಮೆ ಎಂದಾದರೂ 3 ವರ್ಷಗಳ ಕಾಲ ಮಾಸದಿರದಂತಹ ಉತ್ಕೃಷ್ಟ ಬ್ರ್ಯಾಂಡ್‌ ಪೇಂಟ್‌ನ್ನು ಆಯ್ಕೆ ಮಾಡಿಕೊಳ್ಳಿ. ಜೊತೆಗೆ ಮಳೆಗಾಲದಲ್ಲಿ ಅಬ್ಬರಿಸುವ ಗಾಳಿ, ಮಳೆಯ ಹೊಡೆತವನ್ನು ತಾಳಿಕೊಂಡು ದೀರ್ಘಕಾಲ ಬಾಳಿಕೆ ಬರುವಂತಹ ಬಣ್ಣವನ್ನೇ ಖರೀದಿಸಿ. ಬೆಲೆ ಕೊಂಚ ದುಬಾರಿ ಎನಿಸಿದರೂ ದೀರ್ಘಕಾಲದ ಬಾಳಿಕೆಯಿಂದಾಗಿ ನಿಮಗೆ ಲಾಭವಾಗುತ್ತದೆ.

ದಂತದ ಬಣ್ಣ ಯೂನಿವರ್ಸ್

ಆಯ್ಕೆ ಮನೆಗೆ ಬಣ್ಣದಲ್ಲಿ ಸಿಂಗರಿಸಬೇಕಾದಲ್ಲಿ ಸುಮಾರು ಶೇ.60ರಷ್ಟು ಜನರ ಆಯ್ಕೆ ದಂತದ ಬಣ್ಣದ್ದಾಗಿರುತ್ತದೆ. ಇದು ಹಿಂದಿನಿಂದಲೂ ಜನರ ಆಪ್ತ ಆಯ್ಕೆಯಾಗಿದೆ. ಐವರಿ ಬಣ್ಣ ಏಕೆ ಎಲ್ಲರಿಗೂ ಇಷ್ಟವಾಗುತ್ತೆ? ಇಂದಿಗೂ ಕೂಡ ಅದೂ ಸಾರ್ವತ್ರಿಕ ಆಯ್ಕೆಯಾಗಿದೆ. ಏಕೆಂದರೆ ಹಾಲು ಬಿಳುಪಿನ ಬಣ್ಣ ಜನರನ್ನು ಆಕರ್ಷಿಸುವಲ್ಲಿ ಸಫಲತೆ ಕಂಡಿದೆ. ಅಲ್ಲದೆ, ದೀರ್ಘಕಾಲದವರೆಗೂ ಮಸುಕಾಗದೆ ಉಳಿಯುತ್ತದೆ. ಎಲ್ಲಾ ಋತುಗಳಲ್ಲಿಯೂ ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳುತ್ತದೆ. ಹಾಗೇ ಕೆಲವರಿಗೆ ಗಾಢ ಬಣ್ಣವಾದ ಹಸಿರು, ಕೆಂಪು, ಕಂದು ಬಣ್ಣಗಳೂ ಅಷ್ಟಾಗಿ ಹಿಡಿಸುತ್ತಿರಲಿಲ್ಲವಾದ್ದರಿಂದ ದಂತದ ಬಣ್ಣಕ್ಕೆ ಹೆಚ್ಚಿನ ಮಹತ್ವ ಸಿಗುವಂತಾಯಿತು. ಆದರೆ ಇತ್ತೀಚಿನ ಹಲವು ವರ್ಷಗಳಿಂದೀಚೆಗೆ ಬದಲಾದ ಕಾಲಮಾನದಲ್ಲಿ ಜನರ ಅಭಿರುಚಿ ಬದಲಾವಣೆಗೊಳಪಟ್ಟು ವರ್ಗೀಕೃತ ಬಣ್ಣಗಳತ್ತ ವಾಲಿದೆ. ಹಾಗಾಗಿ ಇಂದು ಐವರಿ ಬಣ್ಣ ತನ್ನ ಹಿಂದಿನ ವೈಭವವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಅದರ ಸ್ಥಾನವನ್ನು ಗಾಢ ಬಣ್ಣಗಳಾದ ಹಸಿರು, ಕೆಂಪು, ಕಿತ್ತಳೆ, ಮೆಜಂತಾ ಬಣ್ಣಗಳು ಅಲಂಕರಿಸಿವೆ. ನೀವು ಒಂದು ವೇಳೆ ಇಂದಿನ ಟ್ರೆಂಡ್‌ ಸೆಟರ್‌ ಜೊತೆ ಹೋಗಬಯಸುವಿರಾದರೆ ನಿಮ್ಮ ಆಯ್ಕೆ ನಿಜವಾಗಿಯೂ ಕಿತ್ತಳೆ ಅಥವಾ ಮೆಜೆಂತಾ ಆಗಿರಲಿ. ಒಟ್ಟಿನಲ್ಲಿ ನಿಮ್ಮ ಮನೆ ನಿಮ್ಮ ಆಯ್ಕೆ ನಿಮ್ಮ ತೃಪ್ತಿಗೆ ತಕ್ಕುದಾಗಿ ಮಾಡಿಕೊಳ್ಳಿ.

ಬಿಳಿ ಬಣ್ಣ ಭಾವೈಕ್ಯತೆಯ ಸಂಕೇತ

ಕೆಲವರು ತಮ್ಮ ಮನೆಗಳಿಗೆ ಬಿಳಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿರುವುದನ್ನು ನೀವು ಕಾಣಬಹುದು. ಅದು ಅವರ ಆಪ್ತ ಬಣ್ಣ. ಬಿಳಿ ಬಣ್ಣ ಯಾವಾಗಲೂ ಶಾಂತಿ ಸೌಭಾಗ್ಯದ ಪ್ರತೀಕವೆನಿಸಿದೆ. ನಿರ್ಮಲ, ಸಜ್ಜನಿಕೆ, ಸರಳತೆಯನ್ನು ಸೂಚಿಸುವುದಲ್ಲದೆ, ಸದಾ ಮುದುಡಿದ ಮನಸ್ಸಿನಲ್ಲಿ ಅರಳಿಸುವ ಶಕ್ತಿ ಈ ಬಣ್ಣಕ್ಕಿದೆ. ಆದ್ದರಿಂದ ಲೇಖಕರು, ಕಲಾವಿದರು, ಸಂಗೀತಗಾರರು…. ಮುಂತಾದ ಲಲಿತ ಕಲೆಗಳಲ್ಲಿ ತೊಡಗಿಸಿಕೊಂಡಿರುವವರು ಬಿಳಿ ಬಣ್ಣವನ್ನು ಹೆಚ್ಚು ಇಷ್ಟುಪಡುತ್ತಾರೆ. ಜೊತೆಗೆ ತಮ್ಮ ಮನೆಗೂ ಬಿಳಿ ಬಣ್ಣದಿಂದ ಸಿಂಗರಿಸಿ ಸಂಭ್ರಮಿಸುತ್ತಾರೆ.

ಬಿಳಿ ಬಣ್ಣ ಸೌಜನ್ಯ ಭಾವೈಕ್ಯತೆಯ ಸಂಕೇತವಾದರೂ, ಬಾಳಿಕೆಯ ವಿಚಾರದಲ್ಲಿ ಇದು ಅಲ್ಪಾಯುಷಿ. ತಕ್ಷಣಕ್ಕೆ ಕಲೆಯಾಗುವ ಈ ಬಿಳಿ ಬಣ್ಣವನ್ನು ವರ್ಷಪೂರ್ತಿ ಕೊಳೆಯಾಗದಂತೆ ನಿಗಾ ಇಟ್ಟು ಕಾಯ್ದುಕೊಳ್ಳುವುದು ಕೊಂಚ ಕಷ್ಟ. ಮಳೆಗಾಲ ಬಂತೆಂದರೆ ಸಾಕು, ಬಿಳಿ ಬಣ್ಣವೆಲ್ಲಾ ಕಂದು ಬಣ್ಣವಾಗಿ ಮಾರ್ಪಡುತ್ತದೆ. ಬಿಳಿ ಬಣ್ಣ ಮಾನಸಿಕ ನೆಮ್ಮದಿ, ಹುರುಪು, ಉಲ್ಲಾಸ ತಂದುಕೊಟ್ಟರೂ ಬಾಳಿಕೆ ಬಲು ತ್ರಾಸ. ಹಾಗಾಗಿ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗಷ್ಟೇ ಬಿಳಿ ಬಣ್ಣ ಸೀಮಿತವಾಗಿದೆ.

ಇಂದಿನ ಟ್ರೆಂಡ್‌ ಸೆಟರ್‌ ಜಾಗತೀಕರಣದ ಪ್ರಭಾವದಿಂದಾಗಿ ಜನರ ಬದುಕಿನ ಶೈಲಿ ಕೂಡ ಬದಲಾಗಿದೆ. `ಫಾಸ್ಟ್ ಲೈಫ್‌’ ಎನ್ನುವ ಪರಿಕಲ್ಪನೆಯಲ್ಲಿ  ಬದುಕು ಸಾಗುತ್ತಿರುವುದರಿಂದ ಜನರ ಅಭಿರುಚಿ ಆಯ್ಕೆಗಳು ಬದಲಾವಣೆಗೊಂಡಿವೆ. ಹಿಂದೆಲ್ಲಾ ಕೇವಲ ಒಂದೇ ಬಣ್ಣವನ್ನಷ್ಟೇ ಆಯ್ಕೆ ಮಾಡಿಕೊಂಡು ಇಡೀ ಮನೆಯನ್ನು ಏಕಮಾತ್ರ ಬಣ್ಣದಲ್ಲಿ ಸಿಂಗರಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ವೈವಿಧ್ಯಮಯ ಬಣ್ಣಗಳತ್ತ ಮನಸ್ಸು ಹರಿಯುತ್ತಿರುವುದರಿಂದ ಹಲವು ಬಣ್ಣಗಳ ಮಿಶ್ರಣವನ್ನು ಒಂದೇ ಕಡೆ ನೋಡಲು ಬಯಸುತ್ತಾರೆ.

ಕಾಂಟ್ರಾಸ್ಟ್ ಎನ್ನುವ ಪರಿಕಲ್ಪನೆಯಲ್ಲಿ 3-4 ಬಣ್ಣಗಳ ಮಿಶ್ರಣಗಳಿಂದ ಮನೆಯನ್ನು ಝಗಮಗಿಸುತ್ತ ಉತ್ಸಾಹ ತೋರುತ್ತಿದ್ದಾರೆ. ಬೆಡ್‌ ರೂಮ್, ಹಾಲ್‌, ಕಿಚನ್‌, ಡ್ರಾಯಿಂಗ್‌ ರೂಮು, ಹೊರಾಂಗಣ…. ಹೀಗೆ ಎಲ್ಲಾ ವಿಭಾಗಕ್ಕೂ ಒಂದೊಂದು ಬಣ್ಣವನ್ನು ತುಂಬಿಸಿ `ಕಾಂಟ್ರಾಸ್ಟ್’ ಪ್ರಿಯರೆನಿಸಿಕೊಂಡಿದ್ದಾರೆ. ಕೆಲವರಂತೂ ತೀರಾ ಗಾಢ ಬಣ್ಣವಾದ ಹಸಿರು, ಹಳದಿ, ಕಡುನೀಲಿ, ಮೆಜೆಂತಾ, ಕಿತ್ತಳೆ ಬಣ್ಣಗಳಿಂದ ಮನೆಯನ್ನು ಎದ್ದುಕಾಣುವಂತೆ ಮಾಡಿರುತ್ತಾರೆ. ಸ್ವತಃ ತಮ್ಮ ಮನಸ್ಸಿಗೆ ನೋಡುಗರಿಗೆ ಒಪ್ಪುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ತಮ್ಮ ಮನೆ ಮಾತ್ರ ಎಲ್ಲರ ಕಣ್ಣು ಕುಕ್ಕುವಂತಿರಬೇಕು ಎಂಬ ಭಾವನೆಯಲ್ಲಿ ಬೀಗುತ್ತಿರುತ್ತಾರೆ. ಇದೇ ಇಂದಿನ ಟ್ರೆಂಡ್‌ ಸೆಟರ್‌ ಎನ್ನುತ್ತಾ ಮೈಮರೆಯುತ್ತಾರೆ. ಗಾಢ ಬಣ್ಣಗಳು ಮನುಷ್ಯನ ಮನಸ್ಸಿನ ಮೇಲೆ ಎಂತಹ ಕೆಟ್ಟ ಪ್ರಭಾವ ಬೀರುತ್ತವೆ ಎಂಬುದು ಎಷ್ಟೋ ಜನರಿಗೆ ಅರಿವಿಲ್ಲ. ಗಾಢ ಬಣ್ಣಗಳು ಮನಸ್ಸನ್ನು ಒತ್ತಡಕ್ಕೆ ಸಿಲುಕಿಸಿ ಶೂನ್ಯವನ್ನು ಸೃಷ್ಟಿಸುತ್ತದೆ. ಸಿಟ್ಟು, ಗೊಂದಲ, ದ್ವೇಷ, ಕಿರಿಕಿರಿ ಮುಂತಾದ ಭಾವನೆಗಳ ಹೊರಸೂಸುವಿಕೆಗೆ ಕಾರಣವಾಗುತ್ತದೆ. ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಆದ್ದರಿಂದ ಗಾಢ ಬಣ್ಣಗಳು ಇಂದಿನ ಟ್ರೆಂಡ್‌ ಸೆಟರ್‌. ಆದರೂ ಅದು ಅಷ್ಟು ಸೂಕ್ತವಾದ ಆಯ್ಕೆಯಲ್ಲ ಎಂಬುದನ್ನು ಗಮನದಲ್ಲಿಡಿ. ತಿಳಿ ಬಣ್ಣಗಳಷ್ಟೇ ಮನೆಯ ನೆಮ್ಮದಿ, ಸ್ಛೂರ್ತಿ, ಚೈತನ್ಯವನ್ನು ತುಂಬಿ ಸದಾ ಲವಲವಿಕೆಯಿಂದಿರಲು ಪ್ರೇರೇಪಿಸುತ್ತದೆ.

ಇಂದಿನ ವಿಶೇಷ ತಂತ್ರಜ್ಞಾನದ ಮೂಲಕ ವಿನ್ಯಾಸಗೊಂಡ, ಅದ್ಭುತ ಇಂಟೀರಿಯರ್‌ಗಳಿಂದ ನಿರ್ಮಾಣಗೊಂಡಿದ್ದರೂ, ಅವುಗಳಿಗೊಂದು ಮೌಲ್ಯ ಬರಬೇಕಾದರೆ ಅದಕ್ಕೊಪ್ಪುವ ಸುಂದರ ಬಣ್ಣಗಳಿಂದ ಕಂಗೊಳಿಸುತ್ತಿರಬೇಕು. ಕೋಟಿ ಕೋಟಿ ಸುರಿದ ಮನೆಗೆ ಆಕರ್ಷಣೆಯ ಶೋಭೆ ಈ ಸುಂದರವಾದ ಬಣ್ಣಗಳಿಂದಷ್ಟೇ ದೊರೆಯಲು ಸಾಧ್ಯ. ಆಗ ಅದು ಮನೆಯ ಸೌಂದರ್ಯವನ್ನು ಹೆಚ್ಚಿಸಿ ನಿಮ್ಮ ಗೌರವ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ.

ರಂಗುರಂಗಿನ ರಂಗೋಲಿಯಂತೆ ಶೋಭಿಸುವ ಬಣ್ಣಗಳಿಗೆ ಒಲಿಯದ ಮನಸ್ಸುಗಳುಂಟೆ…? ಹಾಲಿನಂತೆ ಸ್ಛುರಿಸುವ ಶ್ವೇತ ವರ್ಣ, ತಿಳಿ ನೀಲಿಯ ಮೋಹಕ ಬಣ್ಣ, ಕೆನ್ನೆಯ ರಂಗೇರಿಸುವ ಸಂಜೆಯ ಓಕುಳಿ ಬಣ್ಣ….. ಹೀಗೆ ನಿಮ್ಮ ಕನಸಿನ ಅಂದದ ಅರಮನೆಯನ್ನು ಒಪ್ಪ ಓರಣವಾಗಿಸಿ ಸಿಂಗರಿಸು ಈ ಬಣ್ಣ ಪ್ರೀತಿಯ ಸಂಕೇತ, ಭಾವೈಕ್ಯತೆಯ ಪ್ರತೀಕ, ಪ್ರತಿಷ್ಠೆಯ ದ್ಯೋತಕ. ಒಟ್ಟಿನಲ್ಲಿ ಇದು ಸುಂದರ ಕನಸಿನ ರಂಗಿ ತರಂಗ.

ಅಶೋಕ್ಎಂ

Tags:
COMMENT