ಹಬ್ಬಗಳು ಸಾಲು ಸಾಲಾಗಿ ಬರುತ್ತಿರುವಂತೆ ನಾವು ಮನೆಯ ನವೀಕರಣದ ಬಗ್ಗೆ ಹೆಚ್ಚು ಗಮನಹರಿಸುತ್ತೇವೆ. ನೀವು ನಿಮ್ಮ ಮನೆಯ ನವೀಕರಣದ ಬಗ್ಗೆ ಯೋಚಿಸುವ ಮುನ್ನ ಟಿ.ವಿ. ಸೆಲೆಬ್ರಿಟಿ ರುಸ್ಲಾನ್‌ ಮುಮ್ತಾಜ್‌ ಅವರ ಮುಂಬೈನ ಜುಹು ಬೀಚ್‌ನಲ್ಲಿರುವ ಮನೆಯ ಬಗ್ಗೆ ತಿಳಿದುಕೊಳ್ಳಿ. ಆಗ ನಿಮಗೆ ಮತ್ತೊಂದಿಷ್ಟು ಹೊಸ ಮಾಹಿತಿಗಳು ತಿಳಿಯಬಹುದು.

ಮನೆಯ ಶೇ.90ರಷ್ಟು ನವೀಕರಣದ ಶ್ರೇಯಸ್ಸು ರುಸ್ಲಾನ್‌ ಹಾಗೂ ಅವರ ಪತ್ನಿ ನಿರಾಲಿಗೆ ಸಲ್ಲುತ್ತದೆ. ಆರಂಭದಲ್ಲಿ ಇಬ್ಬರೂ ಸೇರಿಯೇ ಮನೆಯ ನವೀಕರಣ ಮಾಡಲು ಆರಂಭಿಸಿದರು. ಆದರೆ ಆ ಬಳಿಕ ಅವರಿಗೆ ಮನೆಯನ್ನು ಚೆನ್ನಾಗಿ ನವೀಕರಣ ಮಾಡಲು ಪ್ರೊಫೆಶನಲ್ ಇಂಟೀರಿಯರ್‌ನ ಅವಶ್ಯಕತೆ ಇದೆ ಎಂಬುದು ಮನರಿಕೆಯಾಯಿತು. ಇದಾದ ಬಳಿಕ ಅವರು ಇಂಟೀರಿಯರ್‌ ಡಿಸೈನರ್‌ ಒಬ್ಬರ ನೆರವು ಪಡೆದುಕೊಂಡು, ಅವರಿಗೆ ಮಾರ್ಗದರ್ಶನ ನೀಡುತ್ತ ತಮ್ಮ ಮನೆಯನ್ನು ನವೀಕರಣ ಮಾಡಿಸಿದರು. ಆದರೆ ಪೀಠೋಪಕರಣಗಳಿಂದ ಹಿಡಿದು ಎಲ್ಲಾ ಅಲಂಕಾರಿಕ ಸಲಕರಣೆಗಳನ್ನು ತಾವೇ ಖರೀದಿಸಿದರು.

ನೀವು ಯಾವ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಫರ್ನೀಚರ್‌ ಆಯ್ಕೆ ಮಾಡಿದಿರಿ?

ಮನೆಗೆ ಅತಿಥಿಗಳನ್ನು ಆಹ್ವಾನಿಸುವ ಹವ್ಯಾಸ ನಮಗಿದೆ. ಅತಿಥಿಗಳು ನಿಂತು ತಿನ್ನುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಫರ್ನೀಚರ್‌ಗಳನ್ನು ಆಯ್ಕೆ ಮಾಡುವಾಗ ನಾವು ಸೀಟಿಂಗ್‌ ಅರೇಂಜ್‌ಮೆಂಟ್‌ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ. 12 ಕುರ್ಚಿಗಳ ಡೈನಿಂಗ್‌ ಟೇಬಲ್ ತಯಾರಿಸಿಕೊಂಡೆ. ಅದರ ಪಕ್ಕದಲ್ಲಿಯೇ 8 ಚೇರುಗಳ ಒಂದು ಪುಟ್ಟ ಟೇಬಲ್ ಇಟ್ಟೆ. ಹೀಗೆ 20 ಜನರು ಏಕಕಾಲಕ್ಕೆ, ನಿರಾಳರಾಗಿ ಕುಳಿತು ಊಟ ಮಾಡಲು ಸಾಧ್ಯವಾಯಿತು. ಕಿಟಕಿಗಳ ಬಳಿ ವಿಶೇಷ ದಿವಾನ್‌ವೊಂದನ್ನು ಇರಿಸಿದೆವು. ಏಕೆಂದರೆ ಚಹಾ-ಕಾಫಿ ಹೀರುತ್ತ ಸಮುದ್ರ ದರ್ಶನವನ್ನು ಮಾಡಲು ಸಾಧ್ಯವಾಗಬೇಕು. ಇಬ್ಬರಿಗೂ ಲಿವಿಂಗ್‌ ರೂಮ್, ಟಿವಿ ಸೆಕ್ಷನ್‌ ಮಾಡಿಸಿಕೊಂಡು ಎಲ್ ಶೇಪಿನ ಸೋಫಾ ಹಾಕಿಸಿಕೊಂಡೆವು. ನಮ್ಮ ಫಾರ್ಮ್‌ ಮೀಟಿಂಗ್‌ಗಾಗಿಯೂ ನಾವು ಪ್ರತ್ಯೇಕವಾಗಿ ಫರ್ನೀಚರ್‌ ಮಾಡಿಸಿದೆವು.

ಮನೆಯಲ್ಲಿ ನಿಮ್ಮ ಅತ್ಯಂತ ಮೆಚ್ಚಿನ ಜಾಗ ಯಾವುದು?

ನಮ್ಮ ಬೆಡ್‌ರೂಮ್. ಅದನ್ನು ನಾವು ಅತ್ಯಂತ ಮುತುವರ್ಜಿ ವಹಿಸಿ ಸಿದ್ಧಪಡಿಸಿಕೊಂಡೆವು. ಒಂದು ಮಾದರಿ ಬೆಡ್‌ರೂಮ್ ನಲ್ಲಿ ಏನೇನು ಇರಬೇಕೋ ಅವೆಲ್ಲ ನಮ್ಮ ಬೆಡ್‌ರೂಮ್ ನಲ್ಲಿ ಇವೆ. ನಮ್ಮ ಬೆಡ್‌ರೂಮ್ ನ ಒಂದು ಗೋಡೆಯಲ್ಲಿ ಬ್ರಿಕ್ಸ್ ನ ಡಿಸೈನ್‌ ಇರಬೇಕು, ಒಂದು ಗೋಡೆ ಪ್ಲೇನ್‌ ಆಗಿರಬೇಕು. ಅದರ ಮೇಲೆ ನಾವು ರೊಮ್ಯಾಂಟಿಕ್‌ ಪೇಂಟಿಂಗ್‌ಗಳನ್ನು ಅಲಂಕರಿಸಿ ಇಡಬೇಕು. ಒಂದು ಬದಿಯ ಗೋಡೆಯ ಮೇಲೆ ದೊಡ್ಡದಾದ (ಗೋಡೆಯ ಆಕಾರದ) ಕನ್ನಡಿ ಇರಬೇಕು. ನಮ್ಮ ಬೆಡ್‌ರೂಮ್ ನಲ್ಲಿ ಹೀಗೆಯೇ ಇದೆ. ನಮ್ಮ ಬೆಡ್‌ರೂಮ್ ನಲ್ಲಿ 65 ಇಂಚಿನ ದೊಡ್ಡ ಟಿ.ವಿ. ಇದೆ. ಬೆಡ್‌ ಮೇಲೆ ಕುಳಿತು ಟಿ.ವಿ. ನೋಡುವುದು ಬಹಳ ಚೆನ್ನಾಗಿ ಅನಿಸುತ್ತೆ.

ಮನೆಗೆ ಅಲಂಕಾರ ಮುಖ್ಯವೋ ಅಥವಾ ಸ್ವಚ್ಛತೆಯೋ?

ನಿಜ ಹೇಳಬೇಕೆಂದರೆ ಸ್ವಚ್ಛತೆ. ಆದರೆ ಮನೆಯ ಸ್ವಚ್ಛತೆಯ ಶ್ರೇಯಸ್ಸನ್ನು ನಾನು ನಿರಾಲಿಗೆ ಕೊಡಲು ಇಚ್ಛಿಸುವೆ. ಆಕೆ ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾಳೆ. ನಮ್ಮ ಮನೆಯಲ್ಲಿ ಪ್ರತಿಯೊಂದು ಸಾಮಗ್ರಿಗಳನ್ನು ಇಡಲು ಒಂದು ನಿಶ್ಚಿತ ಜಾಗ ಮಾಡಿದ್ದೇವೆ. ಉದಾಹರಣೆಗೆ ಸ್ನಾನದ ನಂತರ ಟವೆಲ್‌ ಒಣ ಹಾಕಲು, ಉಪಯೋಗಿಸಿದ ಬಟ್ಟೆಗಳು, ಚಪ್ಪಲಿಗಳನ್ನು ಇಡಲು. ಎಲ್ಲ ವಸ್ತುಗಳು ಸ್ವಸ್ಥಾನದಲ್ಲಿ ಇರಬೇಕು. ಬೆಡ್‌ ಮೇಲೆ ಏನೂ ಬೀಳಬಾರದು. ಇಲ್ಲದಿದ್ದರೆ ನಿರಾಲಿಯಿಂದ ನಾನು ಬೈಸಿಕೊಳ್ಳಬೇಕು.

ಹೋಮ್ ಡೆಕೋರೇಶನ್‌ಗೆ ಯಾವುದನ್ನು ಮಾಡುವುದು ನಿಮಗೆ ಇಷ್ಟ?

ನನಗೆ ಪೇಂಟಿಂಗ್‌ನ  ಹವ್ಯಾಸವಿದೆ. ಆದರೆ ನನಗೆ ಪೇಂಟಿಂಗ್‌ ಮಾಡಲು ಬರುವುದಿಲ್ಲ. ಆದರೆ ಮನೆಯ ಪ್ರತಿಯೊಂದು ಜಾಗದಲ್ಲಿ ಪೇಂಟಿಂಗ್‌ ಇರಬೇಕು ಎನ್ನುವುದು ನನ್ನ ಇಚ್ಛೆ. ನಮ್ಮ ಮನೆಯ ಪ್ರತಿಯೊಂದು ಕೋಣೆಯಲ್ಲಿ 2-3 ಪೇಂಟಿಂಗ್ಸ್ ಆದರೂ ನೋಡಲು ಸಿಗುತ್ತವೆ. ನನಗೆ ಫೋಟೋಗಳನ್ನು ಹಾಕುವ ಹವ್ಯಾಸ ಇದೆ. ಡೈನಿಂಗ್‌ ರೂಮಿನಿಂದ ಲಿವಿಂಗ್‌ ರೂಮಿಗೆ ಸಂಪರ್ಕ ಕಲ್ಪಿಸುವ ಗ್ಯಾಲರಿಯ ಗೋಡೆಗುಂಟ ಫೋಟೋಗಳನ್ನು ಅಳವಡಿಸಿದ್ದೇವೆ.

ನಿಮ್ಮ ಮನೆಯ ಅಲಂಕಾರದಲ್ಲಿ ಬಣ್ಣಗಳ ಪಾತ್ರವೇನು?

ಬಣ್ಣಗಳದ್ದು ಪ್ರಮುಖ ಪಾತ್ರ. ನಾವು ನಮ್ಮ ಮನೆಯನ್ನು ಅತ್ಯಂತ ಸಾಧಾರಣ ರೀತಿಯಲ್ಲಿ ಅಲಂಕರಿಸಿದ್ದೇವೆ. ಬಹಳಷ್ಟು ಗೋಡೆಗಳ ಮೇಲೆ ಬಿಳಿ ಬಣ್ಣವನ್ನೇ ಬಳಿಯಲಾಗಿದೆ. ಆದರೆ ಅವುಗಳಿಗೆ ಕಲರ್‌ಫುಲ್ ಎಫೆಕ್ಟ್ ಕೊಡಲು ಪೇಂಟಿಂಗ್‌ನ ಟಚ್‌ ಕೊಡಲಾಗಿದೆ. ಅದೇ ರೀತಿ ನಮ್ಮ ಮನೆಯ ಫರ್ನೀಚರ್‌ ಕೂಡ ತಿಳಿಬಣ್ಣದ್ದಾಗಿವೆ. ಅದರ ಮೇಲೆ ಕಲರ್‌ಫುಲ್ ಕುಶನ್‌ನ್ನು ಉಪಯೋಗಿಸಿ ಅದಕ್ಕೆ ಹೊಸ ಲುಕ್‌ ಕೊಡಲು ಪ್ರಯತ್ನಿಸಿದ್ದೇವೆ. ಬಣ್ಣವೇ ಮನೆಗೆ ಹೋಮ್ಲಿ ಲುಕ್‌ ಕೊಡುತ್ತದೆ ಎಂದು ನನಗನ್ನಿಸುತ್ತದೆ. ಬಣ್ಣಗಳ ಕೊರತೆಯಿಂದ ಮನೆಯು ಮನೆಯಂತಿರದೆ ರೆಸ್ಟೋರೆಂಟ್‌ನಂತೆ ಕಂಡುಬರುತ್ತದೆ.

ಮನೆಯ ಡೆಕೋರೇಶನ್‌ಗಾಗಿ ನೀವು ಲೈಟಿಂಗ್‌ ಅರೇಂಜ್‌ಮೆಂಟ್‌ ಹೇಗೆ ಮಾಡಿಸಿದಿರಿ?

ನಮ್ಮ ಮನೆಯಲ್ಲಿ ಬಹಳಷ್ಟು ಬಗೆಯ ಲೈಟ್ಸ್ ಇವೆ. ಡಿಮ್ ಬಲ್ಬ್ ಗಳು, ಡಿಮ್ ಗಿಂತಲೂ ಡಿಮ್ ಲೈಟ್‌ಗಳು, ಇನ್ನು ಕೆಲವು ಬಲ್ಬುಗಳು ಹೇಗಿವೆಯೆಂದರೆ, ಹಗಲು ಹೊತ್ತಿನಂತೆಯೇ ಕಂಡುಬರುವಂಥ. ಡ್ಯಾನ್ಸ್ ನ ಮೂಡ್‌ ಬಂದರೆ ಅದಕ್ಕೂ ಡಿಮ್ ಲೈಟ್‌ಗಳು ಆನ್‌ ಆಗುತ್ತವೆ. ರಾತ್ರಿ ಹೊತ್ತು ಫೋಟೋ ತೆಗೆಯಲು ಎಂತಹ ಲೈಟುಗಳು ಇವೆಯೆಂದರೆ, ಆಗ ಫ್ಲಾಶ್‌ನ ಅಗತ್ಯ ಉಂಟಾಗುವುದಿಲ್ಲ. ಇದರ ಜೊತೆ ಜೊತೆಗೆ ಮನೆಯಲ್ಲಿ ಸಾಕಷ್ಟು ಹ್ಯಾಂಗಿಂಗ್‌ ಲೈಟ್ಸ್ ಕೂಡ ಇವೆ. ಅವು ನೋಡಲು ಬಹಳ ಸುಂದರವಾಗಿ ಕಂಡುಬರುತ್ತವೆ.

ಮನೆ ನವೀಕರಣದ ಸಮಯದಲ್ಲಿ ನೀವು ವಾಸ್ತು ನಿಯಮಗಳನ್ನು ಅನುಸರಿಸಿದಿರಾ?

ಇಲ್ಲ. ನಾನು ವಾಸ್ತುವಿನ ಪ್ರಕಾರ ಏನನ್ನೂ ಮಾಡಲಿಲ್ಲ. ನನಗೆ ವಾಸ್ತುವಿನಲ್ಲಿ ನಂಬಿಕೆಯೂ ಇಲ್ಲ. ನನಗೆ ಯಾವುದು ಸೂಕ್ತ ಎನಿಸುತ್ತೋ ಅದರ ಮೇಲೆ ನಾನು ಗಮನಹರಿಸುತ್ತೇನೆ. ನಿಮಗೆ ಯಾವುದು ಸರಿಯೆನಿಸುತ್ತೋ, ಆರಾಮದಾಯಕ ಎನಿಸುತ್ತೋ ಅದನ್ನೇ ಮಾಡಿ. ಅದನ್ನು ಬಿಟ್ಟು ಏನನ್ನು ಮಾಡಲು ಹೋಗಬೇಡಿ.

ನಿಮ್ಮ ಮನೆ ನಿಮ್ಮ `ಡ್ರೀಮ್ ಹೋಮ್’ ಆಗಿದೆಯಾ?

ಅಂದಹಾಗೆ ನಾನು ಈ ಮನೆಯಲ್ಲಿ 32 ವರ್ಷಗಳಿಂದ ವಾಸಿಸುತ್ತಿರುವೆ. ಆದರೆ ಯಾವಾಗ ನಾನು ಈ ಮನೆಯನ್ನು ನವೀಕರಣ ಮಾಡಿಸಿದೆನೊ, ಆಗಿನಿಂದ ನನಗೆ ಈ ಮನೆ `ಡ್ರೀಮ್ ಹೋಮ್’ ಎಂಬಂತೆ ಭಾಸವಾಗುತ್ತಿದೆ. ಮನೆಯ ಎಲ್ಲ ಸಲಕರಣೆಗಳು ನನಗೆ ಕನಸಿನ ಮನೆಯಂತಿವೆ.

– ಪ್ರತಿನಿಧಿ 

Tags:
COMMENT