ನೀವು ಏಕಾಂಗಿಯಾಗಿದ್ದು, ಜಗತ್ತಿನ ಪ್ರವಾಸ ಮಾಡಲು ಇಚ್ಛಿಸುವಿರಾದರೆ, ಅದು ನಿಮಗೆ ಎಷ್ಟೊಂದು ರೋಮಾಂಚಕಾರಿ ಆಗಿರಬಹುದು ಎನ್ನುವುದನ್ನು ಅವಶ್ಯವಾಗಿ ತಿಳಿದುಕೊಳ್ಳಿ……!
ನೀವು ಸುತ್ತಾಡಲು ಹೋಗುವ ಹವ್ಯಾಸವುಳ್ಳವರಾಗಿದ್ದೀರಾ? ಆದರೆ ಜೊತೆಗೆ ಯಾರೊಬ್ಬರೂ ಇಲ್ಲವೆಂಬ ಕಾರಣಕ್ಕೆ ಸುತ್ತಾಡಲು ಹೋಗಲು ಆಗದಿದ್ದರೆ ಈಗ ಹೋಗಲು ತಯಾರಾಗಿ. ಏಕಾಂಗಿಯಾಗಿರುವ ಕಾರಣದಿಂದ ಪ್ರವಾಸ ಹೋಗಬಾರದು ಎಂದೇನಿಲ್ಲ. ಏಕಾಂಗಿಯಾಗಿ ಪ್ರವಾಸ ಹೋಗುವ ಸೊಗಸು ಇತರರ ಜೊತೆ ಹೋಗುವಾಗ ಇರುವುದಿಲ್ಲ. ಇಂತಹ ಪ್ರವಾಸದಲ್ಲಿ ಮಕ್ಕಳ ಆರೋಗ್ಯದ ಚಿಂತೆಯಾಗಲಿ, ಸಂಗಾತಿ ಅಗತ್ಯದ ಬಗ್ಗೆ ಕಾಳಜಿ ತೋರಿಸಬೇಕಾದ ಅನಿವಾರ್ಯತೆ ಇರುವುದಿಲ್ಲ.
ಏಕಾಂಗಿಯಾಗಿ ಸುತ್ತಾಡಲು ಹೋಗುವುದರಿಂದ ಅನೇಕ ಲಾಭಗಳಿವೆ. ಅವನ್ನು ತಿಳಿದುಕೊಂಡ ಬಳಿಕ ನೀವು ಏಕಾಂಗಿಯಾಗಿ ಸುತ್ತಾಡಲು ಹೋಗುವ ಮನಸ್ಸು ಮಾಡುವಿರಿ.
ನಿಮ್ಮನ್ನು ನೀವು ಭೇಟಿಯಾಗುವ ಅವಕಾಶ
ನೀವು ಮನೆಯಲ್ಲಿದ್ದಾಗ ಮಗಳು, ಆಫೀಸ್ ನಲ್ಲಿ ಸಹೋದ್ಯೋಗಿ ಹಾಗೂ ಸ್ನೇಹಿತರ ಮಧ್ಯೆ ಗೆಳತಿಯ ಪಾತ್ರ ನಿಭಾಯಿಸುವಿರಿ. ಹಾಗಾದರೆ ನಿಮಗೆ ನಿಮ್ಮದೇ ಆದ ಅಸ್ತಿತ್ವ ಏನೂ ಇಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದ್ದರೆ ಏಕಾಂಗಿಯಾಗಿ ಪ್ರವಾಸಕ್ಕೆ ಹೊರಡಿ. ನಿಮ್ಮನ್ನು ನೀವು ಅರಿತುಕೊಳ್ಳಲು ಇದಕ್ಕಿಂತಲೂ ಒಳ್ಳೆಯ ಅವಕಾಶ ಮತ್ತೊಮ್ಮೆ ಸಿಗಲಿಕ್ಕಿಲ್ಲ. ನೀವು ಒಬ್ಬರೇ ಪ್ರವಾಸ ಹೊರಟಾಗ ನೀವು ನಿಮ್ಮ ಹೃದಯದ ಮಾತನ್ನು ಆಲಿಸುವಿರಿ. ನಿಮ್ಮ ಮನಸ್ಸಿನಲ್ಲಿ ಏನು ಅನ್ನಿಸುತ್ತೊ ಅದನ್ನೇ ಮಾಡುತ್ತೀರಿ. ನಿಮ್ಮ ಮೇಲೆ ಯಾರೊಬ್ಬರ ಒತ್ತಡ ಇರದು. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. ಅದರಿಂದಾಗಿ ನಿಮ್ಮ ಯೋಚನೆಯಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತದೆ.
ಆತ್ಮವಿಶ್ವಾಸ ತುಂಬುತ್ತದೆ
ಒಂದು ವೇಳೆ ನಿಮ್ಮೊಳಗೆ ಆತ್ಮವಿಶ್ವಾಸದ ಕೊರತೆ ಇದ್ದರೆ, ಏಕಾಂಗಿ ಪ್ರವಾಸ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಏಕೆಂದರೆ ಪ್ರವಾಸದ ಸಂದರ್ಭದಲ್ಲಿ ನೀವು ಹಲವು ಹೊಸ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರುತ್ತದೆ. ಅದರಿಂದ ಹಲವು ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅದಕ್ಕೆ ಪರಿಹಾರೋಪಾಯಗಳನ್ನು ನೀವೇ ಕಂಡುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಎಷ್ಟೋ ಸಲ ನೀವು ಎಚ್ಚರಿಕೆಯಿಂದ ಕೂಡಿದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಿಂದಾಗಿ ನಿಮ್ಮೊಳಗೆ ಸಾಹಸ ಹಾಗೂ ಆತ್ಮವಿಶ್ವಾಸ ಎರಡೂ ಹೆಚ್ಚುತ್ತವೆ.
ಅನುಭದ ಜೊತೆಗೆ ವಾಪಸ್
ಕೆಲವೇ ನಿಮಿಷಗಳಲ್ಲಿ ಸಾಕಷ್ಟು ಅನುಭವ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಅದರಿಂದಾಗಿ ಜೀವನದ ಗುರಿ ಮತ್ತಷ್ಟು ಸುಲಭ ಎನಿಸುತ್ತದೆ. ಅನುಭವಗಳಿಂದ ಕಲಿತುಕೊಳ್ಳಲು ನೀವು ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಅದು ಮನೆಯಲ್ಲಿಯೇ ಇದ್ದರೆ ಸಾಧ್ಯವಾಗುವಂಥದ್ದಲ್ಲ. ಹಾಗಾಗಿ ನೀವು ಮನೆಯಿಂದ ಹೊರಗೆ ಹೋಗುವುದು ಅನಿವಾರ್ಯ. ನೀವು ಹೊರಗೆ ಹೋದಾಗ ಮಾತ್ರ ಅಂತಹ ಅನುಭವಗಳಿಗೆ ಸಾಕ್ಷಿಯಾಗುವಿರಿ.
ಮರೆತುಬಿಡುವಿರಿ ಏಕಾಂಗಿತನದ ದುಃಖ
ಪ್ರವಾಸಕ್ಕೆ ಹೊರಡುವಾಗ ನಾನು ಏಕಾಂಗಿಯಾಗಿ ಹೋಗುತ್ತಿದ್ದೇನೆ ಏನಾಗುತ್ತೋ ಏನೋ ಎಂಬ ಅಳಕು ನಿಮಗಿರುತ್ತದೆ. ಆದರೆ ನಿಮ್ಮ ಪ್ರವಾಸ ಶುರುವಾದ ಬಳಿಕ ನಿಮಗೆ ಎಂತಹ ಕೆಲವು ಸ್ನೇಹಿತೆಯರು ಸಿಗುತ್ತಾರೆಂದರೆ ಅವರೂ ನಿಮ್ಮ ಹಾಗೆಯೇ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿರುತ್ತಾರೆ. ನಿಮ್ಮನ್ನು ಭೇಟಿಯಾದ ಒಬ್ಬ ಮಹಿಳೆ ನಿಮ್ಮ ಹಾಗೆಯೇ ಏಕಾಂಗಿಯಾಗಿರಬಹುದು ಅಥವಾ ಆಕೆಯದು ನಿಮಗಿಂತಲೂ ಹೆಚ್ಚು ಕಠಿಣ ಸ್ಥಿತಿ ಇರಬಹುದು. ಅವರನ್ನು ನೋಡಿ ನಿಮ್ಮ ಏಕಾಂಗಿತನ ಏನೇನೂ ಅಲ್ಲ ಎಂದೆನಿಸಬಹುದು. ಪ್ರವಾಸದ ಸಂದರ್ಭದಲ್ಲಿ ಅವರೊಂದಿಗಿನ ಮಾತುಕತೆ, ಅವರ ಗತಕಾಲದ ನೆನಪುಗಳು ಮತ್ತು ಅನುಭವ ನಿಮಗೆ ಬಹಳಷ್ಟು ಕಲಿಯಲು ಅವಕಾಶ ನೀಡುತ್ತದೆ.