25 ವರ್ಷದ ಸ್ನೇಹಾ, ಸುರೇಶ್ ನನ್ನು ಪ್ರೀತಿಸತೊಡಗಿದಳು. ತನ್ನ ಮಾಡರ್ನ್ ಮಮ್ಮಿ ಎಂದು ಕರೆಸಿಕೊಳ್ಳುವ ಅಮ್ಮ ಅನಿತಾ ಇದರ ಬಗ್ಗೆ ಕೊಂಕು ತೆಗೆದು ಈ ವಿವಾಹ ಸಾಧ್ಯವೇ ಇಲ್ಲ ಎಂದು ಹೇಳಿದ್ದನ್ನು ಕೇಳಿದಾಗ ಸ್ನೇಹಾಗೆ ಅಚ್ಚರಿಯಾಯಿತು. ಸುರೇಶ್ ಜೊತೆಗೆ ನಿನ್ನ ಜಾತಕ ಹೊಂದುವುದಿಲ್ಲ. ಹಾಗಾಗಿ ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಅಮ್ಮ ಖಡಾಖಂಡಿತವಾಗಿ ಹೇಳಿದ್ದರು.
ಸ್ನೇಹಾ ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳಲು ಯಾವ ಯಾವ ಮಾನಸಿಕ ತೊಂದರೆಗಳನ್ನು ದಾಟಿ ಹೋಗಬೇಕಾಯಿತು ಎನ್ನುವುದನ್ನು ಅವಳ ಮಾತುಗಳಲ್ಲಿ ಕೇಳಿ, “ಒಂದು ಒಳ್ಳೆಯ ವಿಷಯವೆಂದರೆ, ಸುರೇಶನ ಕುಟುಂಬದವರು ಮಾತ್ರ ಈ ಜಾತಕದ ನಾಟಕವನ್ನು ಒಪ್ಪುವವರಾಗಿರಲಿಲ್ಲ. ಅವರು ನನ್ನನ್ನು ಅತ್ಯಂತ ಖುಷಿಯಿಂದ ತಮ್ಮ ಮನೆಯ ಸೊಸೆಯಾಗಿಸಿಕೊಳ್ಳಲು ಸಿದ್ಧರಾಗಿದ್ದರು. ಅಮ್ಮ ಪ್ರತಿದಿನ ನಾನು ನಿರುಪಯುಕ್ತಳು, ಮದುವೆಗೆ ಅಷ್ಟು ಆತುರ ಏನು ಎಂದು ಕೇಳುತ್ತಿದ್ದರು.
“ಸುರೇಶ್ ನನ್ನು ಬಿಟ್ಟು ನಾನು ಬೇರಾರ ಜೊತೆಗೂ ಮದುವೆ ಮಾಡಿಕೊಳ್ಳುವ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ. ಮದುವೆಯ ದಿನದವರೆಗೂ ಅಮ್ಮ ನನ್ನನ್ನು ನಿಂದಿಸುತ್ತಲೇ ಇದ್ದರು. ಯಾವುದೇ ಕಾರಣಕ್ಕೂ ಸುರೇಶ್ ಜೊತೆಗೆ ನನ್ನ ಮದುವೆ ಆಗಬಾರದೆಂದು ಅವರು ಪ್ರಯತ್ನ ನಡೆಸಿದರು. ಪ್ರೀತಿಸಿ ಮದುವೆಯಾಗಿದ್ದ ಕಾರಣದಿಂದ ನಾನು ಅಮ್ಮನ ಆಶೀರ್ವಾದ ಪಡೆಯದೆ ಗಂಡನ ಮನೆಗೆ ಹೊರಟು ಹೋದೆ.”
ಪ್ರಿಯಾ ತನ್ನ ಕುಟುಂಬದವರಿಗೆ ತಾನು ಬ್ರಾಹ್ಮಣ ಕುಟುಂಬದ ಶಶಿಧರ್ ನನ್ನು ಪ್ರೀತಿಸುತ್ತಿದ್ದು, ಅವರನ್ನು ಮದುವೆ ಆಗುವುದಾಗಿ ಹೇಳಿದಳು. ಅದು ಎರಡೂ ಕುಟುಂಬದರಲ್ಲಿ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡಿತು. ನಾನ್ ವೆಜ್ ಸೇವನೆ ಮಾಡುವ ಕುಟುಂಬದ ಯುವತಿ ಪಕ್ಕಾ ಸಸ್ಯಾಹಾರಿ ಕುಟುಂಬದ ಜೊತೆ ಮದುವೆ ಎಂದರೆ ಹೇಗೆ ಸಾಧ್ಯ ಎಂದು ಚರ್ಚಿಸತೊಡಗಿದರು.
ಪ್ರಿಯಾಳ ತಂದೆ ಹೃದ್ರೋಗಿ. ಅವಳ ಅಮ್ಮ ಅವಳಿಗೆ ಹೇಗೆ ಹೆದರಿಸಿದರೆಂದರೆ, ನೀನೇನಾದರೂ ಆ ಹುಡುಗನನ್ನು ಮದುವೆಯಾದರೆ ನಿನ್ನ ತಂದೆಗೆ ಹೃದಯಾಘಾತವಾಗುತ್ತದೆ ಎಂದು ಹೆದರಿಸಿ ಆಕೆಯನ್ನು ಸುಮ್ಮನಾಗಿಸಿದರು. ಅದಾದ 6 ತಿಂಗಳಲ್ಲಿಯೇ ತಮ್ಮದೇ ಜಾತಿಯ ಯುವಕನ ಜೊತೆ ಮದುವೆ ಮಾಡಿದ ಬಳಿಕ ಆಕೆ ಕೆನಾಡಕ್ಕೆ ಹೊರಟುಹೋದಳು. ಅತ್ತ ಶಶಿಧರ್ ತನ್ನ ಇಚ್ಛೆಯಂತೆ ಮದುವೆಯಾಗದಿದ್ದಕ್ಕೆ ಬಹಳ ಬೇಸರಪಟ್ಟುಕೊಂಡ. ಪ್ರಿಯಾ ಕೂಡ ಬಹಳ ನೋವಿಂದ ಕೆನಡಾಕ್ಕೆ ಹೋದಳು. ಶಶಿಧರ್ ಒಳ್ಳೆಯ ಸ್ವಭಾವದ ಹುಡುಗನಾಗಿದ್ದೂ ಕೂಡ ಅವನನ್ನು ಒಪ್ಪಲಿಲ್ಲ. ಪ್ರಿಯಾ ಈಗ ಸೋಶಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದಾಳೆ. ಅವಳ ಗಂಡ ಒಬ್ಬ ಕುಡುಕ, ಅವನೊಂದಿಗೆ ಅವಳು ಖುಷಿಯಾಗಿಲ್ಲ.
ಎಲ್ಲೆಲ್ಲೂ ಜಾತಿಯ ಪ್ರಸ್ತಾಪ
ಪ್ರತಿಯೊಬ್ಬ ತಂದೆ ತಾಯಿಯರ ರೀತಿಯಲ್ಲಿ ಸುಧೀಂದ್ರ ಹಾಗೂ ಮನೀಷಾ ಶರ್ಮಾರ ಇಚ್ಛೆ ಏನಾಗಿತ್ತೆಂದರೆ, ತಮ್ಮ ಮಗ ಮೋಹನ್ ಕೂಡ ಬ್ರಾಹ್ಮಣ ಕುಟುಂಬದ ಹುಡುಗಿಯನ್ನೇ ಮದುವೆಯಾಗಬೇಕು ಎನ್ನುವುದಾಗಿತ್ತು. ಆದರೆ ಅವರ ಮಗ ತನ್ನದೇ ಆಫೀಸಿನ ಮರಾಠ ಸಮಾಜದ ಗೀತಾ ಪವಾರ್ ಳನ್ನು ಇಷ್ಟಪಡುತ್ತಿದ್ದ. ಹಲವು ವರ್ಷಗಳ ಪ್ರೀತಿ ಮದುವೆ ಮಾಡಿಕೊಳ್ಳಲು ಅವರನ್ನು ಪ್ರೇರೇಪಿಸಿತ್ತು. ಗೀತಾಳ ಪೋಷಕರಿಗೆ ಇದರಲ್ಲೇನೂ ಅಭ್ಯಂತರ ಇರಲಿಲ್ಲ. ಆದರೆ ಮೋಹನನ ಕುಟುಂಬದವರಿಗೆ ಮಾತ್ರ ಜಾತಿ ಧರ್ಮದ ಮುಖವೇ ಕಂಡುಬರುತ್ತಿತ್ತು.
ಮೋಹನ್ ನ ತಾಯಿ ನೀನು ಆ ಹುಡುಗಿಯನ್ನು ಮದುವೆಯಾದರೆ, ನನ್ನ ನಿನ್ನ ಸಂಬಂಧವೇ ಮುರಿಯುತ್ತದೆ ಎಂದು ಬೆದರಿಕೆ ಹಾಕಿದರೆ ಅವನ ತಂದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀನು ಪವಾರ್ ಜೊತೆ ಮದುವೆಯಾದರೆ ಮನೆಗೆ ಬರಲೇಬಾರದು ಎಂದು ಹೇಳಿಬಿಟ್ಟರು. ಮೋಹನ್ ತನ್ನ ಮಾತಿಗೆ ಕಟ್ಟುಬಿದ್ದು, ಮನೆ ಬಿಟ್ಟು ಹೊರಟುಬಿಟ್ಟ. ತನ್ನ ಹಾಗೂ ಗೀತಾ ನಡುವೆ ಪರಸ್ಪರ ಹೊಂದಾಣಿಕೆ ಇದೆ, ಇಬ್ಬರೂ ಒಬ್ಬರ ಮನಸ್ಸನ್ನು ಒಬ್ಬರು ಅರಿತುಕೊಂಡಿದ್ದೇವೆ ಎಂದು ಭಾವಿಸಿ, ಪೋಷಕರ ಹಳೆಯ ಕಂದಾಚಾರಗಳನ್ನು ಬದಿಗೊತ್ತಿ ರಿಜಿಸ್ಟರ್ಡ್ ಮದುವೆಯಾಗಲು ನಿರ್ಧರಿಸಿದರು. ಗೀತಾಳ ಪೋಷಕರು ನೋಂದಣಿ ಸಮಯದಲ್ಲಿ ಹಾಜರಿದ್ದರು. ಈ ಮೂಲಕ ಮೋಹನ್ ಗೀತಾ ಹೊಸ ಜೀವನಕ್ಕೆ ಕಾಲಿರಿಸಿದರು.
ಕೆಲವೇ ದಿನಗಳಲ್ಲಿ ಮೋಹನ್ ಗೆ ವಿದೇಶಕ್ಕೆ ಹೋಗುವ ಅವಕಾಶ ದೊರಕಿತು. ಅವನು ಗೀತಾಳ ಜೊತೆಗೆ ಅಲ್ಲಿಯೇ ಶಿಫ್ಟ್ ಆಗಿಬಿಟ್ಟ. ಎರಡನೇ ವರ್ಷ ಅವರಿಗೆ ಮಗು ಕೂಡ ಜೊತೆಯಾಯಿತು. ಇತ್ತ ಮೋಹನ್ ನ ತಂದೆ ತಾಯಿ ಮಗ ಮಾಡಿದ್ದನ್ನು ಇನ್ನೂ ಅಪರಾಧ ಎಂದು ಪರಿಗಣಿಸಿ ಗೀತಾಳನ್ನು ಸೊಸೆಯಾಗಿ ಸ್ವೀಕರಿಸಲು ಒಪ್ಪಿರಲಿಲ್ಲ. ಮೋಹನ್ ಅಪ್ಪ ಅಮ್ಮನಿಗೆ ಫೋನ್ ಮಾಡಿದಾಗ ಅವರು ತನ್ನನ್ನು ಹಾಗೂ ಗೀತಾಳನ್ನು ವಾಪಸ್ ಕರೆಸಿಕೊಳ್ಳುತ್ತಾರೆಂದು ಅಪೇಕ್ಷಿಸಿದ್ದ. ಆದರೆ ಅವರೆಂದೂ ಹಾಗೆ ಮಾಡಲಿಲ್ಲ.
ಮಕ್ಕಳಿಗಿಂತ ಧರ್ಮವೇ ಹೆಚ್ಚು
ನಮ್ಮಲ್ಲಿ ತಾಯಿ ತಂದೆಯರ ಕಣ್ಣಿಗೆ ಧರ್ಮ ಜಾತಿಯ ಪಟ್ಟ ಎಷ್ಟೊಂದು ಬಿಗಿಯಾಗಿ ಕಟ್ಟಲ್ಪಟ್ಟಿದೆ ಎಂದರೆ, ಅವರಿಗೆ ಏನೂ ಕಂಡುಬರುವುದೇ ಇಲ್ಲ. ಮಕ್ಕಳ ಖುಷಿಯಂತೂ ಗಮನಕ್ಕೆ ಬರುವುದೇ ಇಲ್ಲ. ಇಂತಹ ಸ್ಥಿತಿಯಲ್ಲಿ ಮಕ್ಕಳು ಏನು ಮಾಡಬೇಕು? ಅವರು ಬೇರೆ ಜಾತಿ ಧರ್ಮದ ತಮ್ಮ ಮೆಚ್ಚಿನ ಸಂಗಾತಿಯನ್ನು ಪೋಷಕರ ವ್ಯರ್ಥ ಮಾತುಗಳಿಗೆ ಬಿಟ್ಟು ಕೊಡುವುದಕ್ಕಂತೂ ಆಗುವುದಿಲ್ಲ. ಪೋಷಕರು ಹಠಕ್ಕೆ ಬಿದ್ದು ಆ ಸಂಬಂಧವೇ ಬೇಡ ಎಂದು ಹೇಳುತ್ತಾರೆ. ಮಕ್ಕಳು ಅದನ್ನು ಮೀರಿದರೆ ಅಚ್ಚರಿಯ ಉಲ್ಲಂಘನೆಯ ಆರೋಪ ಹೊರಿಸುತ್ತಾರೆ. ಅವರು ಗುಣ ಸ್ವಭಾವದ ಬಗ್ಗೆ ಗಮನ ಕೊಡದೆ ಜಾತಿ ಧರ್ಮದ ಆಧಾರದ ಮೇಲೆ ಅವರನ್ನು ತೂಗಿ ನೋಡುತ್ತಾರೆ.
ಯುವ ಪೀಳಿಗೆ ಮಾಡುತ್ತಿರುವುದು ಸರಿಯಾಗೇ ಇದೆ, ಅವರೇ ಇಂದಿನ ಧರ್ಮದ ಭೇದಭಾವವನ್ನು ತೊಡೆದು ಹಾಕಲು ಸಾಧ್ಯ. ಪರಿವರ್ತನೆಯ ವಾತಾವರಣದಲ್ಲಿ ಉಸಿರಾಡುವುದನ್ನು ಕೂಡ ಹಳೆಯ ತಲೆಮಾರಿನವರು ಸಂಸ್ಕಾರಕ್ಕೆ ಕುತ್ತು ಎಂದು ಭಾವಿಸುತ್ತಾರೆ.
ನೋಹನ್ ಗೀತಾರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರನ್ನು ಮಗ ಸೊಸೆಯೆಂದು ಒಪ್ಪದ ಅವನ ತಾಯಿ ತಂದೆಯರಿಗೆ ಸಿಕ್ಕಿದ್ದಾದರೂ ಏನು? ಕೇವಲ ವ್ಯಥೆ. ಸಿಗಬಹುದಾಗಿದ್ದ ಖುಷಿಗೆ ಅವರೇ ಕಲ್ಲು ಹಾಕಿಕೊಂಡರು. ಜಾತಿ ಧರ್ಮ ಎಂದು ಅವರಿಗೆ ವಿರೋಧಿಸಲು ಹೇಳಿದ್ದ ಪಂಡಿತ ಪುರೋಹಿತರು ಅವನ ತಾಯಿ ತಂದೆಯರಿಗೆ ಖುಷಿಯನ್ನು ವಾಪಸ್ ಕೊಡುತ್ತಾರೆಯೇ?
ತಾರಿಖ್ ಗೆ ಅಂಜಲಿಯ ಜೊತೆ ಪ್ರೀತಿಯಾದಾಗ ಅವರು ಮದುವೆಯ ನಿರ್ಧಾರ ಕೈಗೊಂಡು ತಮ್ಮ ಪೋಷಕರ ಮುಂದೆ ವಿಷಯ ಪ್ರಸ್ತಾಪಿಸಬೇಕೆಂದು ನಿರ್ಧರಿಸಿದರು. ಎರಡೂ ಕುಟುಂಬಗಳು ಕಂದಾಚಾರದ ಕುಟುಂಬಗಳು. ಹೀಗಾಗಿ ಮದುವೆಯ ಬಳಿಕವೇ ಮನೆಯವರಿಗೆ ತಿಳಿಸಬೇಕೆಂದು ನಿರ್ಧರಿಸಿದರು. ವಿಷಯ ತಿಳಿದ ಕುಟುಂಬಗಳಲ್ಲಿ ಬಿರುಗಾಳಿಯೇ ಎದ್ದಿತು. ಆದರೆ ಈಗೇನೂ ಮಾಡಲು ಸಾಧ್ಯವಿರಲಿಲ್ಲ. ಏಕೆಂದರೆ ಮದುವೆ ನಡೆದುಹೋಗಿತ್ತು.
ಅಂಜಲಿಯ ಮನೆಯವರು 10 ವರ್ಷಗಳ ಬಳಿಕ ತಮ್ಮ ಮುನಿಸನ್ನು ಬಿಟ್ಟರು. ತಾರಿಖ್ ಮತ್ತು ಅಂಜು ಕೆಲವು ತಿಂಗಳು ಬೇರೆ ಬೇರೆಯಾಗಿಯೇ ಇದ್ದರು. ಅದೊಂದು ಸಲ ತಾರಿಖ್ ತನ್ನ ತಾಯಿಯ ಅನಾರೋಗ್ಯದ ಸಂದರ್ಭದಲ್ಲಿ ಅಂಜಲಿಯನ್ನು ಮನೆಗೆ ಕರೆತಂದ. ಅಂಜಲಿಯ ಸ್ವಭಾವ ಅವಳನ್ನು ಎಲ್ಲರೂ ಒಪ್ಪುವಂತೆ ಮಾಡಿತು. ಈ ಕುರಿತಂತೆ ತಾರಿಖ್ ಹೀಗೆ ಹೇಳುತ್ತಾನೆ, “ಒಮ್ಮೊಮ್ಮೆ ಈ ತೆರನಾದ ನಿರ್ಧಾರ ಕೈಗೊಳ್ಳಲೇಬೇಕಾಗುತ್ತದೆ. ನಾನು ಯಾವುದೇ ಜಾತಿ ಧರ್ಮದ ಹೆಸರಿನಲ್ಲಿ ಅವಳನ್ನು ಕಳೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ.”
ಈ ಬಗ್ಗೆ ಅಂಜಲಿ ಹೀಗೆ ಹೇಳುತ್ತಾಳೆ, “ನನ್ನ ಪೋಷಕರ ವಿಚಾರ ನನಗೆ ಯಾವಾಗಲೂ ಇರುಸುಮುರುಸು ಉಂಟು ಮಾಡುತ್ತಿತ್ತು. ಕಂದಾಚಾರದ ಆಡಂಬರದಲ್ಲಿ ಬಂಧಿಸಲ್ಪಟ್ಟು ಕುಟುಂಬಕ್ಕೆ ಬೇಸರ ತರುವುದು ನನಗೆ ಅಷ್ಟೊಂದು ಕೆಟ್ಟದ್ದೇನೂ ಅನ್ನಿಸಲಿಲ್ಲ. ಯಾರಿಗೆ ಮನುಷ್ಯನ ಗುಣ ಮುಖ್ಯ ಅನಿಸುವುದಿಲ್ಲವೋ, ಅವರು ಧರ್ಮ ಜಾತಿಯನ್ನೂ ಅಲಂಬಿಸಿರುತ್ತಾರೆ.”
ಅಂತರ್ಜಾತೀಯ ವಿವಾಹದ ವಿವಾದ
ಭಾರತದಲ್ಲಿ ಅಂತರ್ಜಾತೀಯ ಮದುವೆ ಒಂದು ವಿವಾದಿತ ವಿಷಯವಾಗಿದೆ. ತಮ್ಮ ಮಗಳ ಮಕ್ಕಳು ತಮ್ಮದೇ ಜಾತಿ ಧರ್ಮದ ವ್ಯಕ್ತಿಯ ಜೊತೆಗೇ ಮದುವೆ ಮಾಡಿಕೊಳ್ಳಬೇಕೆಂದು ಪೋಷಕರು ಅಪೇಕ್ಷೆ ಪಡುತ್ತಾರೆ. ಆದರೆ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳು ಆಗುತ್ತಿವೆ. ಅವು ಅಗತ್ಯ ಕೂಡ. ಕೆಲವು ವರ್ಷಗಳ ಹಿಂದೆ ಇಂಡಿಯಾ ಹ್ಯೂಮನ್ ಡೆವಲಪ್ ಮೆಂಟ್ ನ ಸರ್ವೆ ಪ್ರಕಾರ, ಭಾರತದಲ್ಲಿ ಶೇ.5ರಷ್ಟು ಜನರು ಮಾತ್ರ ಅಂತರ್ಜಾತೀಯ ಮದುವೆ ಆಗಿದ್ದರು. ಈ ಬಗ್ಗೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲ. ಗುಜರಾತ್, ಬಿಹಾರದಲ್ಲಿ ಶೇ.11ರಷ್ಟು, ಮಧ್ಯಪ್ರದೇಶದಲ್ಲಿ ಶೇ.1ರಷ್ಟು ಜನರು ಮಾತ್ರ ಅಂತರ್ಜಾತೀಯ ಮದುವೆ ಆಗಿದ್ದಾರೆ. ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್, ಧಮೇಂದ್ರ, ಕಬೀರ್ ಬೇಡಿ, ರಾಜೇಶ್ ಖನ್ನಾ, ಸಲೀಮ್ ಖಾನ್, ಅಭಿಷೇಕ್ ಬಚ್ಚನ್, ಅಜಯ್ ದೇವಗನ್ ಹೀಗೆ ಅದೆಷ್ಟೋ ತಾರೆಯರು ಜಾತಿ ಧರ್ಮವನ್ನು ಉಲ್ಲಂಘಿಸಿದರು.
ಇತ್ತೀಚಿನ ದಿನಗಳಲ್ಲಿ ಜಾತಿ ವಾದ ಭಾರಿ ವೇಗದಲ್ಲಿ ಹೆಚ್ಚುತ್ತಿದೆ. ಸಮಾಜದಲ್ಲಿ ಜಾತಿಧರ್ಮ, ಮೇಲು ಕೀಳು ಇದರ ಬಗ್ಗೆ ಹೆಚ್ಚು ವಿಶ್ವಾಸ ಇಡಲಾಗುತ್ತಿದೆ. ಇದನ್ನು ಕೊನೆಗೊಳಿಸಲು ಅಂತರ್ಜಾತೀಯ ವಿವಾಹ ಬಹುದೊಡ್ಡ ಪಾತ್ರ ವಹಿಸುತ್ತದೆ. ಸಾಮಾಜಿಕ ಬೇಧಭಾವವನ್ನು ಕೊನೆಗಾಣಿಸಲು ಸರ್ಕಾರ ಕೆಲವು ಯೋಜನೆಗಳನ್ನು ರೂಪಿಸುತ್ತದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಮೇಲ್ಜಾತಿಯ ವ್ಯಕ್ತಿ ಕೆಳ ಜಾತಿಯ ವ್ಯಕ್ತಿಯೊಂದಿಗೆ ಮದುವೆಯಾದಲ್ಲಿ 2.5 ಲಕ್ಷ ರೂ ನಗದು ಮೊತ್ತ ನೀಡುತ್ತದೆ.
ಅಂತರ್ಜಾತೀಯ ವಿವಾಹದಿಂದ ಹಲವು ಲಾಭಗಳಿವೆ. ಬೇರೆ ಬೇರೆ ತೆರನಾದ ಸಂಸ್ಕೃತಿಯ ಬಗ್ಗೆ ಗಂಡಹೆಂಡತಿ ಹಾಗೂ ಮಕ್ಕಳು ಸಾಕಷ್ಟು ಎಂಜಾಯ್ ಮಾಡುತ್ತಾರೆ. ಅದರಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಡಿಮೆ ಇರುತ್ತದೆ. ಯುವ ಜನಾಂಗ ಅಂತರ್ಜಾತೀಯ ವಿವಾಹಗಳ ಬಗ್ಗೆ ಭೀತಿಗೊಳಗಾಗಬಾರದು. ಕಂದಾಚಾರಯುಕ್ತ ಯೋಚನೆಯಿಂದ ಸಮಾಜನ್ನು ಮುಕ್ತಗೊಳಿಸಲು ಯುವ ಪೀಳಿಗೆ ಮಹತ್ವದ ಪಾತ್ರ ವಹಿಸುತ್ತಾರೆ. ಈವರೆಗೆ ಹಳೆಯ ತಲೆಮಾರಿನವರು ಆಡಂಬರದಿಂದ ಕೂಡಿದ, ಧರ್ಮದ ಗುತ್ತಿಗೆದಾರರ ಕಪಿಮುಷ್ಟಿಗೆ ಸಿಲುಕಿ ಸಮಾಜವನ್ನು ಮುನ್ನಡೆಸಲು ಹಿಂದೇಟು ಹಾಕುತ್ತಿದ್ದರು. ಈಗ ಯುವಕರು ಮುಂದೆ ಸಾಗಬೇಕು, ಜಾತಿ ಧರ್ಮವನ್ನು ಕೊನೆಗಾಣಿಸಬೇಕು. ಕುಟುಂಬ ದೇಶಕ್ಕೆ ಸಕಾರಾತ್ಮಕ ಸಂದೇಶ ಕೊಡಿ.
– ಪ್ರತಿನಿಧಿ
ಪ್ರಿನ್ಸ್ ಟೋನ್ ಯೂನಿವರ್ಸಿಟಿಯ ಒಂದು ಸಮೀಕ್ಷೆಯ ಪ್ರಕಾರ, ಅತಿ ಹೆಚ್ಚು ಅಂತಜಾತೀಯ ಮದುವೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತವೆ. ಅಲ್ಲಿ ಇದರ ಪ್ರಮುಖ್ಯತೆ ಬಹಳಷ್ಟಿದೆ ಇದೆ. ಗೋವಾ 26.67%, ಪಂಜಾಬ್ 22.36%, ಮೇಘಾಲಯ 22.36%, ಕೇರಳ 21.35%, ಹರಿಯಾಣ 17.16%, ತ್ರಿಪುರಾ 17.81%, ಮಹಾರಾಷ್ಟ್ರ 17.79%, ಕರ್ನಾಟಕ 16.47%, ಜಮ್ಮುಕಾಶ್ಮೀರ 1.67%, ರಾಜಸ್ಥಾನ 2.36%, ಛತ್ತೀಸ್‌ಗಡ 3.38%, ಮಧ್ಯಪ್ರದೇಶ 3.57%, ತಮಿಳುನಾಡು 2.59%.