ಆರನೇ ತರಗತಿಯಲ್ಲಿ ಓದುವ ಮೋಹನ್‌ಮನೆಯಿಂದ ಕಾಣೆಯಾಗಿದ್ದ. ಹಾಲು ತರಲೆಂದು ಹೋದ ಹುಡುಗ ಮನೆಗೆ ಬಂದಿರಲೇ ಇಲ್ಲ. ಒಂದು ವಾರದ ಬಳಿಕ ಒಬ್ಬ ವ್ಯಕ್ತಿ ಬಂದು ಮೋಹನ್‌ನನ್ನು ಮನೆಗೆ ಬಿಟ್ಟುಹೋದ. ಅಂದಹಾಗೆ ಪರೀಕ್ಷೆಯಲ್ಲಿ ಅವನಿಗೆ ಕಡಿಮೆ ಅಂಕಗಳು ಬಂದಿದ್ದವು. ಈ ಕಾರಣದಿಂದ ಅವನು ಮನೆಯಿಂದ ಓಡಿಹೋಗಿದ್ದ. ಅಪ್ಪನ ಭಯ ಅವನಿಗೆ ಅರಗಿಸಿಕೊಳ್ಳಲಾರದಷ್ಟು ಕಷ್ಟಕ್ಕೆ ದೂಡಿತ್ತು.

ಪುಟ್ಟ ಸೋಮು ಒಮ್ಮೆ ಗಂಟಲಿನಲ್ಲಿ ಏನೋ ಸಿಕ್ಕಿಕೊಂಡಿದೆ ಎಂದು ದೂರು ಹೇಳುತ್ತಿದ್ದ. ಮತ್ತೊಮ್ಮೆ ಹೊಟ್ಟೆ ನೋವು ಎನ್ನುತ್ತಿದ್ದ. ಅವನು ಸದಾ ಮೌನದಿಂದಿರುತ್ತಿದ್ದ, ಏನೋ ಕಳೆದುಕೊಂಡವನ ರೀತಿ ಇರುತ್ತಿದ್ದ. ಚಿಕ್ಕಪುಟ್ಟ ಮಾತುಗಳಿಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ವೈದ್ಯರ ಪರೀಕ್ಷೆಯಲ್ಲಿ ಅವನಲ್ಲಿ ಯಾವುದೇ ಸಮಸ್ಯೆ ಕಂಡುಬರಲಿಲ್ಲ.

ಈ ಮೇಲಿನ ಎರಡೂ ಮಕ್ಕಳು ಪೋಷಕರ `ಸೂಪರ್‌ ಕಿಡ್‌ ಸಿಂಡ್ರೋಮ್’ ಸಮಸ್ಯೆಗೆ ತುತ್ತಾಗಿದ್ದರು.

ಕ್ಲಿನಿಕ್‌ ಸೈಕಾಲಜಿಸ್ಟ್ ಡಾ. ಮೆಡ್ಲಿನ್‌, ತಮ್ಮ ಪುಸ್ತಕ `ಪ್ರೈಸ್‌ ಆಫ್‌ ಪ್ರಿಲಿನ್‌’ನಲ್ಲಿ ಹೀಗೆ ಬರೆದಿದ್ದಾರೆ, ಯಾವ ಪೋಷಕರು ತಮ್ಮ ಯಶಸ್ಸಿಗಾಗಿ ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರುತ್ತಿರುತ್ತಾರೊ, ಅವರು ತಮಗೆ ಗೊತ್ತಿಲ್ಲದಂತೆ ಮಕ್ಕಳನ್ನು ಟೆನ್ಶನ್‌ ಹಾಗೂ ಖಿನ್ನತೆಗೆ ದೂಡುತ್ತಿರುತ್ತಾರೆ. ಈ ಪೋಷಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳಿಗಿಂತ ಎಲ್ಲಕ್ಕೂ ಮುಂದೆ ಇರಬೇಕೆಂದು ಬಯಸುತ್ತಾರೆ. ಓಡುವ ಕ್ರೀಡೆ ಅಥವಾ ಇನ್ನಾವುದೇ ಚಟುವಟಿಕೆ ಆಗಿರಬಹುದು. ಪ್ರತಿಯೊಂದು ಕ್ಷೇತ್ರದಲ್ಲೂ ಅವರು ತಮ್ಮ ಮಗುವನ್ನು ಮುಂದೆ ಸಾಗು, ಮುಂದೆ ಸಾಗು ಎನ್ನುತ್ತಿರುತ್ತಾರೆ. ತನ್ನ ತಂದೆತಾಯಿಯ ಅಪೇಕ್ಷೆಗನುಗುಣವಾಗಿ ತನ್ನನ್ನು ತಾನು ಪ್ರೂವ್‌ ಮಾಡದೇ ಇದ್ದಾಗ ಅದು ದುಃಖ, ನಿರಾಶೆ, ದ್ವಂದ್ವದ ಸ್ಥಿತಿಯನ್ನು ಎದುರಿಸುತ್ತದೆ.

ಡಾ. ಲೆವಿನ್‌ರ ಪ್ರಕಾರ, ಸಾಧಾರಣ ಹಾಗೂ ಬಡತನದ ಸ್ಥಿತಿಯಲ್ಲಿರುವ ಮಕ್ಕಳಿಗಿಂತ ಸಾಕಷ್ಟು ಅನುಕೂಲವುಳ್ಳ ಹಾಗೂ ಶ್ರೀಮಂತರ ಮಕ್ಕಳಲ್ಲಿ ಚಿಂತೆ ಹಾಗೂ ಖಿನ್ನತೆಯ ಪರಿಸ್ಥಿತಿ 3 ಪಟ್ಟು ಹೆಚ್ಚಿಗೆ ಇರುವುದನ್ನು ಕಾಣಬಹುದು. ಇಂತಹ ಮಕ್ಕಳು ತಪ್ಪು ದಾರಿ ತುಳಿಯಬಹುದು. ಅವರು ಮಾದಕ ದ್ರವ್ಯಗಳ ಚಟಗಳಿಗೆ ತುತ್ತಾಗಬಹುದು. ಕೆಲವೊಮ್ಮೆ ಈ ಮಕ್ಕಳು ತಮ್ಮನ್ನು ತಾವು ದ್ವೇಷಿಸಿಕೊಳ್ಳುತ್ತಾರೆ. ಮಕ್ಕಳ ಆರೋಗ್ಯಕರ ಬೆಳಣಿಗೆಗೆ, ಯಾವ ಪೂರಕ ವಾತಾವರಣ ಬೇಕೋ ಅದು ಅವರಿಗೆ ದೊರಕುವುದಿಲ್ಲ. ಒಂದರ ಬಳಿಕ ಒಂದು ಕ್ಲಾಸ್‌ಗಳು, ಶಾಲೆಯ ಬಳಿಕ ಕೋಚಿಂಗ್‌, ಆ ನಂತರ ಕ್ಲಾಸ್‌ ಹೋಂವರ್ಕ್‌ಮುಗಿಸಬೇಕಾದ ಅನಿವಾರ್ಯತೆ ಈ ಮಧ್ಯೆ ತಮ್ಮ ಸೃಜನಶೀಲ ಚಟುವಟಿಕೆ ಅರಿತುಕೊಳ್ಳಲು ಅವರಿಗೆ ಸಮಯವೇ ಸಿಗುವುದಿಲ್ಲ. ಪ್ರತಿಯೊಬ್ಬ ತಂದೆತಾಯಿ ತಮ್ಮ ಮಗು ಕೇವಲ ವಿದ್ಯಾಭ್ಯಾಸದಲ್ಲಷ್ಟೇ ಅಲ್ಲ, ಇತರೆ ಚಟುವಟಿಕೆಗಳಲ್ಲೂ ಉತ್ಸಾಹ ತೋರಿಸಬೇಕು, ಪ್ರೋತ್ಸಾಹ ಪಡೆದುಕೊಳ್ಳಬೇಕೆನ್ನುತ್ತಾರೆ. ಶಾಲೆ ಆರಂಭಗೊಳ್ಳುತ್ತಿದ್ದಂತೆ ಪೋಷಕರು ಟೊಂಕಕಟ್ಟಿ ನಿಂತುಕೊಳ್ಳುತ್ತಾರೆ. ಕಳೆದ ವರ್ಷ ಮಗು ಎಷ್ಟು ಸಾಧನೆ ಮಾಡಿತ್ತೊ, ಈ ವರ್ಷ ಅದಕ್ಕೂ ಮೀರಿದ ಒಳ್ಳೆಯ ಸಾಧನೆ ಮಾಡಬೇಕೆಂದು ಅವರು ಅಪೇಕ್ಷಿಸುತ್ತಾರೆ. ಹಾಗಾಗಿ ಆರಂಭದಿಂದಲೇ ಹೆಚ್ಚು ಗಮನ ಕೊಡುತ್ತಾರೆ. ಪ್ರತಿದಿನದ ಚಟುವಟಿಕೆ, ಹೋಂವರ್ಕ್‌, ಸ್ಪೋರ್ಟ್ಸ್ ಹೀಗೆ ಪ್ರತಿಯೊಂದು ಕ್ಷೇತ್ರ ಅವರ ದಿನಚರಿಯ ಪ್ರಮುಖ ಭಾಗವಾಗುತ್ತದೆ. ನೀವು ಕೂಡ `ಸೂಪರ್‌ಪೇರೆಂಟ್ಸ್  ಸಿಂಡ್ರೋಮ್’ಗೆ ತುತ್ತಾಗಿದ್ದರೆ ಈ ಸಲಹೆಗಳನ್ನು ಗಮನಿಸಿ :

ಪ್ರೀತಿಯಿಂದ ತಿಳಿಸಿ ಹೇಳಿ : ಮಗುವಿನ ಭವಿಷ್ಯದ ಕುರಿತಂತೆ ನಿಮ್ಮ ಮನಸ್ಸಿನಲ್ಲಿರುವ ಅಸುರಕ್ಷತೆಯ ಭಾವನೆ ಸ್ವಾಭಾವಿಕ. ಎಷ್ಟೋ ಸಲ ನಿಮ್ಮಲ್ಲಿ ಆತ್ಮವಿಶ್ವಾಸ ಕಡಿಮೆ ಇರುವುದರಿಂದ ನಿಮ್ಮನ್ನು ನೀವು ಅಸುರಕ್ಷಿತ ಎಂಬಂತೆ ಭಾವಿಸುವಿರಿ. ಇದೇ ಭಾವನೆಯನ್ನು ನೀವು ಮಕ್ಕಳಲ್ಲಿಯೂ ತುಂಬುತ್ತೀರಿ. ಇಂತಹ ಸ್ಥಿತಿಯಲ್ಲಿ ನಿಮ್ಮ ಮಗು ತನ್ನ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ನಿಮ್ಮಲ್ಲಿ ನೀವು ನಂಬಿಕೆಯ ಭಾವನೆಯನ್ನು ಇಟ್ಟುಕೊಂಡು ಮಗುವಿಗೂ ಸುರಕ್ಷತೆಯ ಅನುಭವ ಕೊಡಿ. ಮುಗುಳ್ನಗು ಹಾಗೂ ಖುಷಿಯಿಂದಿರುವುದು ಸಕಾರಾತ್ಮಕತೆಯ ದೃಷ್ಟಿಕೋನ. ನೀವು ನಕ್ಕರೆ ಮಗು ಕೂಡ ನಗುತ್ತದೆ. ಅದನ್ನೇ ಮಗು ಕಲಿಯುತ್ತದೆ.

ಹೋಲಿಸಬೇಡಿ : ನಿಮ್ಮ ಮಗುವನ್ನು ಬೇರೆ ಯಾವುದೇ ಮಗು ಅಥವಾ ಸಂಬಂಧಿಕರ ಮಗುವಿನ ಜೊತೆಗೆ ಹೋಲಿಕೆ ಮಾಡಲು ಹೋಗಬೇಡಿ. ಒಂದು ವೇಳೆ ನಿಮ್ಮ ಮಗು ಪರೀಕ್ಷೆಯಲ್ಲಿ ಬೇರೆ ಮಗುವಿಗಿಂತ ಕಡಿಮೆ ಅಂಕ ಪಡೆದಿದ್ದರೆ, ಯಾವುದೊ ಒಂದು ಸ್ಪರ್ಧೆಯಲ್ಲಿ ಸೋತಿದ್ದರೆ, ಗೆದ್ದ ಮಗುವಿನ ಜೊತೆ ಅದನ್ನು ಹೋಲಿಸಲು ಹೋಗಬೇಡಿ. ಅದರ ತಲೆಯ ಮೇಲೆ ಕೈಯಿರಿಸಿ. ಈ ಸಲ ಸೋತರೇನು, ಮುಂದಿನ ಸಲ ಗೆಲುವಿಗಾಗಿ ಸಾಕಷ್ಟು ಪ್ರಯತ್ನ ಮಾಡಬೇಕು ಎಂದು ಹೇಳಿ.

ಭಾಷಣ ಕೊರೆಯಲು ಹೋಗಬೇಡಿ : ಮಾತುಕತೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತದೆ. ನೀವು ಎಡೆಬಿಡದೆ ಮಾತನಾಡುವುದು, ಮಗು ಅದನ್ನು ಕೇಳಿಸಿಕೊಳ್ಳುವುದು ಆಗಬಾರದು. ನೀವು ಎಡೆಬಿಡದೆ ಹೇಳುತ್ತ ಹೋದರೆ ಮಗು ಅದನ್ನು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ.

ಮಗುವಿನ ಸಾಮರ್ಥ್ಯ ಹಾಗೂ ಇತಿಮಿತಿ ಗುರುತಿಸಿ : ಒಂದರ ನಂತರ ಒಂದು ಕ್ಲಾಸ್‌ಗೆ ಅಡ್ಮಿಶನ್‌ ಮಾಡಿಸಿ ನೀವು ಒಳ್ಳೆಯದನ್ನು ಮಾಡಿದಿರೊ, ತಪ್ಪು ಮಾಡಿದಿರೊ ಅದನ್ನು ಮಗುವಿನ ದೃಷ್ಟಿಕೋನದಿಂದ ನೋಡಿ. ಯಾರನ್ನೋ ನೋಡಿ ನೀವು ಹೀಗೆ ಮಾಡಿದ್ರೆ ಅದು ತಪ್ಪು. ನೀವು ಮಗುವಿನ ಸಾಮರ್ಥ್ಯ ಗಮನಿಸದೆ, ಅದರ ಇತಿಮಿತಿ ತಿಳಿದುಕೊಳ್ಳದೆ, ಅದರ ಮೇಲೆ ಒತ್ತಡ ಹಾಕುವುದು ನೀವು ಅದರ ಪ್ರಗತಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದೀರಿ ಎಂದರ್ಥ. ನೀವು ನಿಮ್ಮ ಯೋಚನೆಯಲ್ಲಿ ಬದಲಾವಣೆ ತಂದುಕೊಳ್ಳಿ. ಇನ್ನೊಂದು ಮಗುವನ್ನು ನೋಡಿ ನಿಮ್ಮ ಮಗುವಿನ ಅರ್ಹತೆಯನ್ನು ನಿರ್ಧರಿಸುವುದು ಒಳ್ಳೆಯದಲ್ಲ. ಅದರ ಅರ್ಹತೆಯ ಮಟ್ಟವನ್ನು ಕ್ರಮೇಣ ಹೆಚ್ಚಿಸಲು ಪ್ರೋತ್ಸಾಹಿಸಿ.

ಏಕಾಂಗಿತನಕ್ಕೂ ಗೌರವ ಕೊಡಿ : ಶಿಸ್ತು ಹಾಗೂ ಅದನ್ನು ಅನುಸರಿಸುವುದು ಮಹತ್ವದ್ದು. ಆದರೆ ಕಾಲಕಾಲಕ್ಕೆ ಒಂದಿಷ್ಟು ಉದಾರತೆ ತೋರಿಸುವುದೂ ಅತ್ಯವಶ್ಯಕ. ಒಂದು ವೇಳೆ ನಿಮ್ಮ ಮಗು ಏಕಾಂಗಿಯಾಗಿರಲು ಇಚ್ಛಿಸುತ್ತಿದ್ದರೆ, ಮೊಬೈಲ್‌ನಲ್ಲಿ ಯಾರೊಂದಿಗಾದರೂ ಚಾಟ್‌ ಮಾಡಲು ಇಚ್ಛಿಸುತ್ತಿದ್ದರೆ ಸ್ವಲ್ಪ ಹೊತ್ತು ಅದಕ್ಕೆ ಅವಕಾಶ ಕೊಡಿ. ಒಂದು ವೇಳೆ ಅದು ಏನಾದರೂ ತಪ್ಪು ಮಾಡುತ್ತಿದ್ದರೆ, ಅದನ್ನು ದಂಡಿಸುವ ಬದಲು ಮಾರ್ಗದರ್ಶನ ನೀಡಿ.

ಒಳ್ಳೆಯ ಕೆಲಸವನ್ನು ಪ್ರೋತ್ಸಾಹಿಸಿ : ಒಂದು ವೇಳೆ ಮಗು ತಪ್ಪು ಮಾಡಿದಾಗ ನೀವು ಅದನ್ನು ಗದರಿಸುವವರಾಗಿದ್ದರೆ, ಅದು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಹೊಗಳಲು ಮರೆತುಬಿಡುತ್ತೀರಾ? ಮಗುವನ್ನು ಹೊಗಳಲು ಅದರ ಮಾರ್ಕ್ಸ್ ಕಾರ್ಡ್‌ಗಷ್ಟೇ ಸೀಮಿತಗೊಳಿಸಬೇಡಿ. ಅದರ ಒಳ್ಳೆಯ ಪರ್ಫಾರ್ಮೆನ್ಸ್ ಗೆ ಅದರ ಬೆನ್ನು ತಟ್ಟಿ ಏನಾದರೂ ಪುಟ್ಟ ಕಾಣಿಕೆ ಕೊಡಿ.

ಮನೋತಜ್ಞರ ಪ್ರಕಾರ, ನಿಮ್ಮ ಮಗು ತನ್ನ ಸ್ನೇಹಿತರೊಡಗೂಡಿ ಯಾವುದಾದರೊಂದು ಒಳ್ಳೆಯ ಯೋಜನೆ ರೂಪಿಸುತ್ತಿದ್ದರೆ, ಯಾರೊಂದಿಗಾದರೂ ತಪ್ಪಾಗಿ ಮಾತನಾಡಿ ಅದಕ್ಕೆ ಕ್ಷಮೆ ಯಾಚಿಸಿದ್ದಲ್ಲಿ ಮಗುವನ್ನು ತಕ್ಷಣವೇ ಪ್ರಶಂಸಿಸಿ. ನೀವು ಹೀಗೆ ಮಾಡದೇ ಹೋದಲ್ಲಿ ನಾನು ಏನು ಮಾಡಿದರೂ ಇವರಿಗೆ ಖುಷಿ ಆಗುವುದಿಲ್ಲ ಎಂದು ಅಂದುಕೊಳ್ಳುತ್ತದೆ.

ಸೋಲುವುದು ಕೂಡ ಅವಶ್ಯ : ಮಗುವನ್ನು ಗೆಲ್ಲುವುದಕ್ಕಷ್ಟೇ ಪ್ರೋತ್ಸಾಹಿಸುವುದಲ್ಲ, ಒಳ್ಳೆಯ ರೀತಿಯಲ್ಲಿ ಪ್ರಯತ್ನ ಮಾಡಲು ಕೂಡ ಪ್ರೇರೇಪಿಸಿ. ಒಂದು ವೇಳೆ ಮಗು ಆ ಪ್ರಯತ್ನದಲ್ಲಿ ಸೋಲು ಕಂಡರೆ ಅಪ್ಪಿತಪ್ಪಿಯೂ ಕೂಡ ಖೇದ ವ್ಯಕ್ತಪಡಿಸಬೇಡಿ. ಸೋತಿದ್ದರೂ ಅದರ ಒಳ್ಳೆಯ ಪ್ರಯತ್ನದ ಬಗ್ಗೆ ಪ್ರಶಂಸಿಸಿ. ಕೆಲವು ಪೋಷಕರು ತಮ್ಮ ಮಕ್ಕಳೊಂದಿಗೆ ಆಟ ಆಡುವಾಗ ಅವರನ್ನು ಖುಷಿಪಡಿಸಲು ಉದ್ದೇಶ ಪೂರ್ವಕವಾಗಿ ಸೋಲುತ್ತಾರೆ.

ಎಂದೂ ಹೀಗೆ ಮಾಡಬೇಡಿ. ಹೀಗೆ ಮಾಡುವುದರಿಂದ ಅದು ಪ್ರಯತ್ನ ಮಾಡುವುದನ್ನೇ ನಿಲ್ಲಿಸಬಹುದು. ಪ್ರತಿ ಸಲ ಪ್ರಯತ್ನ ಮಾಡದೇ ಗೆಲುವಿನ ಅಪೇಕ್ಷೆ ಮಾಡಬಹುದು. ಗೆಲುವಿನ ಜೊತೆ ಜೊತೆಗೆ ಅದಕ್ಕೆ ಸೋಲನ್ನು ಸ್ವೀಕರಿಸಲು ಕಲಿಸಿ.

ಜವಾಬ್ದಾರಿಯುತ ಮನೆಯ ವಾತಾರಣ : ಮಗುವಿನ ಮೊದಲ ಶಾಲೆ ಮನೆಯೇ ಆಗಿರುತ್ತದೆ. ತನ್ನ ಪೋಷಕರ ನೆರಳಿನಲ್ಲಿ ಅದು ಆತ್ಮವಿಶ್ವಾಸ, ದೃಢ ನಿರ್ಧಾರ, ಸಾಹಸ ಹಾಗೂ ಸ್ಪಷ್ಟ ಯೋಚನೆಯಂತಹ ಗುಣಗಳನ್ನು ತನ್ನ ವ್ಯಕ್ತಿತ್ವದ ಭಾಗವಾಗಿಸಿಕೊಳ್ಳುತ್ತದೆ.

ಮನೋಚಿಕಿತ್ಸಕರ ಪ್ರಕಾರ, ಮನೆಯಲ್ಲಿ ಹಿರಿಯರಿಗೆ ಅವಮಾನ, ಚಿಕ್ಕಪುಟ್ಟ ಜಗಳಗಳು, ಕೆಟ್ಟ ಶಬ್ದಗಳ ಬಳಕೆ, ತಂದೆತಾಯಿಗಳ ಮದ್ಯ, ಧೂಮಪಾನದ ಚಟ ಇವೆಲ್ಲ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.

ಒತ್ತಡವನ್ನು ನಿಮ್ಮಷ್ಟಕ್ಕೆ ನೀವು ಸೀಮಿತಗೊಳಿಸಿಕೊಳ್ಳಿ : ಆಫೀಸ್‌ ಹಾಗೂ ಮನೆಯ ಟೆನ್ಶನ್‌ನ್ನು ತೆಗೆದುಕೊಂಡು ಬಂದು ಮಕ್ಕಳ ಮುಂದೆ ಕುಳಿತಾಗ, ಅವರು ನಿಮ್ಮ ಜೊತೆ, ಸಮಯ ಕಳೆಯಲು ಇಷ್ಟಪಡದೆ ಬೇರೆ ಕಡೆ ಸಮಯ ಕಳೆಯಲು ಇಷ್ಟಪಡುತ್ತಾರೆ. ನೀವು ಖುಷಿಯಿಂದಿರುವುದನ್ನು ಮಕ್ಕಳು ಇಷ್ಟಪಡುತ್ತಾರೆ. ಏಕೆಂದರೆ ಅವರು ತಮ್ಮ ಸಮಸ್ಯೆಗಳನ್ನು ನಿಮ್ಮ ಮುಂದೆ ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಬೇರೆ ಯಾವುದೊ ಟೆನ್ಶನ್‌ಗಾಗಿ ಮಕ್ಕಳನ್ನು ಗದರುವುದು ಒಳ್ಳೆಯದಲ್ಲ.

ನಿಮ್ಮನ್ನು ಮಕ್ಕಳೊಂದಿಗೆ ಹೋಲಿಸಿ ಕೊಳ್ಳಬೇಡಿ : ಬಾಲ್ಯದಲ್ಲಿ ನಿಮಗೆ ಏನನ್ನು ಪಡೆದುಕೊಳ್ಳಲಾಗಲಿಲ್ಲ, ಅದನ್ನೆಲ್ಲ ಮಕ್ಕಳಿಗೆ  ದೊರಕಿಸಿಕೊಡಲೇಬೇಕೆಂದಿಲ್ಲ. ನೀವು ಕಾಲೇಜಿನಲ್ಲಿದ್ದಾಗ ಚಿನ್ನದ ಪದಕ ಪಡೆದುಕೊಂಡಿದ್ದಿರಿ, ನೀವೊಬ್ಬ ಒಳ್ಳೆಯ ಗಾಯಕರಾಗಿದ್ದಿರಿ ಅಥವಾ ಯಾವುದೊ ಒಂದು ಕ್ರೀಡೆಯಲ್ಲಿ ಚಾಂಪಿಯನ್‌ ಆಗಿದ್ದಿರಿ. ನಿಮ್ಮ ಮಗು ಕೂಡ ಹಾಗೆಯೇ ಆಗಬೇಕೆಂದು ನೀವು ಬಯಸಬಹುದು. ಮಕ್ಕಳಿಗೆ ತಮ್ಮದೇ ಆದ ಆಸಕ್ತಿ, ಪ್ರವೃತ್ತಿ ಮತ್ತು ಇತಿಮಿತಿಗಳಿರುತ್ತವೆ. ಅದರ ಆಸಕ್ತಿಗನುಗುಣವಾಗಿಯೇ ಚಟುವಟಿಕೆಯಲ್ಲಿ ತೊಡಗಲು ಅವಕಾಶ ಮಾಡಿಕೊಡಿ. ಮಗುವಿನ ಬಗ್ಗೆ ಅತಿಯಾದ ಅಪೇಕ್ಷೆ  ಇಟ್ಟುಕೊಳ್ಳುವುದು ಸರಿಯಲ್ಲ. ನೀವು ನಿಮ್ಮ ಕರ್ತವ್ಯ ನಿಭಾಯಿಸಿ. ಅದಕ್ಕೆ ತನ್ನ ಪ್ರತಿಭೆ ಹೊರಹೊಮ್ಮಿಸಲು ಅವಕಾಶ ಮಾಡಿಕೊಡಿ.

ಮಗು ಯಾವುದರಲ್ಲಿ ಆಸಕ್ತಿ ತೋರಿಸುತ್ತದೋ ಅದನ್ನೇ ಪ್ರೋತ್ಸಾಹಿಸಿ.

– ಪುಷ್ಪಲತಾ

Tags:
COMMENT