“ನೀನು ಸದಾ ಟೆನ್ಶನ್‌ನಲ್ಲಿ ಏಕಿರ್ತಿಯಾ? ಯಾವುದೇ ಸಂಗತಿಯನ್ನು ಬಹಳ ಸೀರಿಯಸ್ಸಾಗಿ ತಗೊಳ್ಳೋಕೆ ಹೋಗಬೇಡ. ಪ್ರತಿಯೊಂದು ವಿಷಯಕ್ಕೂ ಪರಿಹಾರ ಅನ್ನೋದು ಇದ್ದೇ ಇರುತ್ತದೆ. ಅದು ಹೇಗೆ ಅಂತ ಯೋಚಿಸಬೇಕು ಅಷ್ಟೆ,” ಗಂಡ ಹೀಗೆ ಹೇಳಿದಾಗ ಸುನೀತಾ ಮುಖ ಗಂಟು ಹಾಕಿಕೊಂಡಳು.

“ಯಾವಾಗ ನೋಡಿದ್ರೂ ನೀವು ನನಗೆ ಬುದ್ಧಿ ಇಲ್ಲದವಳು ಎಂಬಂತೆ ಸಲಹೆ ಕೊಡೋಕೆ ಬರ್ತಿರಾ? ನಾನು ಎಲ್ಲರ ಬಗ್ಗೆ ಯೋಚಿಸ್ತೀನಿ. ಹೀಗಾಗಿ ಟೆನ್ಶನ್‌ ಆಗುತ್ತೆ. ನನ್ನ ಬಗ್ಗೆ ಅಷ್ಟೇ ಯೋಚಿಸು ಅಂತಾ ನೀವು ಹೇಳ್ತಿರಲ್ಲ, ಹಾಗೇ ಆಗಲಿ. ಇವತ್ತಿನಿಂದ ನೀವಾಯ್ತು ಮಕ್ಕಳಾಯ್ತು, ಏನು ಮಾಡ್ತಿರೊ ಮಾಡಿಕೊಳ್ಳಿ, ನಾನು ಕೇಳೋಕೆ ಹೋಗೊಲ್ಲ,” ಎಂದು ಹೇಳುತ್ತಾ ಸುನೀತಾ ಕೋಣೆಗೆ ಹೋದಳು.

“ನೋಡು, ನೀವು ಸುಮ್ಮನೇ ಕೋಪಿಸಿಕೊಳ್ತಿದೀಯ. ನಾನು ನಿನಗೆ ಹೇಳುವುದರ ಅರ್ಥ ಇಷ್ಟೇ, ನಿನಗೆ ಯಾವುದೇ ವಿಷಯದ ಬಗ್ಗೆ ಸರಿಯಾದ ಕಲ್ಪನೆ ಇದ್ದರೆ, ನೀನು ಬೇರೆಯವರ ದೃಷ್ಟಿಯಲ್ಲಿ ಆ ಸಮಸ್ಯೆಗಳನ್ನು ಅರಿತರೆ ಟೆನ್ಶನ್‌ ಆಗುವುದಿಲ್ಲ, ಬೇರೆಯವರು ನಿನ್ನ ಮಾತುಗಳ ಬಗ್ಗೆ ಅವಹೇಳನವನ್ನೂ ಮಾಡುವುದಿಲ್ಲ,” ಗಂಡ ರಾಜೇಶ್‌ ಆಕೆಗೆ ತಿಳಿವಳಿಕೆ ಹೇಳಲು ಪ್ರಯತ್ನಿಸಿದ.

ಆದರೆ ಗಂಡ ಕೂಡ ತನ್ನ ಮಾತುಗಳನ್ನು ಆಲಿಸುವುದಿಲ್ಲ ಇನ್ನು ಮಕ್ಕಳು ಹೇಗೆ ಎಂದು ಯೋಚಿಸಿಯೇ ಅವಳಿಗೆ ಒತ್ತಡ ಉಂಟಾಗಿತ್ತು.

“ಇದು ನೀವು ನೀಡಿದ ಸ್ವಾತಂತ್ರ್ಯದ ಪರಿಣಾಮವೇ ಆಗಿದೆ. ಮಾನಸಾ ನಾನು ಹೇಳಿದಂತೆ ಕೇಳುವುದೇ ಇಲ್ಲ. ಕಾಲೇಜಿಗೆ ಶಾರ್ಟ್ಸ್ ಧರಿಸಿ ಹೋಗುತ್ತಾಳೆ. ಅಷ್ಟೊಂದು ಶಾರ್ಟ್ಸ್ ಬಟ್ಟೆ ಧರಿಸುವ ಅಗತ್ಯ ಇದೆಯೇ?”

“ನೀನು ಅವಳ ದೃಷ್ಟಿಕೋನದಲ್ಲಿ ಅದನ್ನು ಅರ್ಥ ಮಾಡಿಕೊಂಡರೆ, ಅವಳು ಧರಿಸುವ ಶಾರ್ಟ್ಸ್ ಬಗ್ಗೆ ಕೆಡುಕೆನಿಸುವುದಿಲ್ಲ,” ಎಂದು ಹೇಳಿ ರಾಜೇಶ್‌ ಆಫೀಸಿಗೆ ಹೊರಟುಹೋದ. ಆದರೆ ಸುನೀತಾ ಮಾತ್ರ ಇಡೀ ದಿನ ಟೆನ್ಶನ್‌ನಲ್ಲಿಯೇ ಇದ್ದಳು. ಆಕೆಗೆ ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ರಾಜೇಶ್‌ಗೆ ಏಕೆ ಸ್ವಲ್ಪವೂ ಟೆನ್ಶನ್‌ ಆಗುವುದಿಲ್ಲ ಎಂಬುದಾಗಿತ್ತು.

ಮಾಹಿತಿ ಕೊರತೆ

ಇದು ಕೇವಲ ಸುನೀತಾಳೊಬ್ಬಳದೇ ವಿಷಯವಲ್ಲ, ಇಂತಹ ಅನೇಕ ಮಹಿಳೆಯರು ಯಾವುದಾದರೊಂದು ಸಂಗತಿಗೆ ಸಂಬಂಧಪಟ್ಟಂತೆ ಒತ್ತಡಕ್ಕೊಳಗಾಗುತ್ತಾರೆ. ತಮ್ಮದೇ ಜೀವನದಲ್ಲಿ ಇಷ್ಟೆಲ್ಲ ತೊಂದರೆ ತಾಪತ್ರಯಗಳಿವೆ ಎಂದು ಅವರಿಗೆ ಅನಿಸತೊಡಗುತ್ತದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಪುರುಷರು ಒತ್ತಡವನ್ನು ತಮ್ಮ ಮೈಮೇಲೆ ಎಳೆದುಕೊಳ್ಳುವ ಶೇಕಡವಾರು ಪ್ರಮಾಣ ಬಹಳ ಕಡಿಮೆಯಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅವರು ಸಾಕಷ್ಟು ವಿಷಯಗಳ ಬಗ್ಗೆ ತಿಳಿದುಕೊಂಡಿರುವುದಾಗಿದೆ.

ರಾಜೇಶ್‌ ಸುನೀತಾಗೆ, “ನೀನು ಮಾನಸಾಳ ದೃಷ್ಟಿಕೋನದಿಂದ ನೋಡಿದರೆ ಅದು ಸರಿಯಾಗೇ ಕಾಣುತ್ತೆ,” ಎಂದು ಸರಿಯಾಗೇ ಹೇಳಿದ್ದ. ಇದು ಇತ್ತೀಚಿಗಿನ ಟ್ರೆಂಡ್‌, ನನಗೆ ಇದರಲ್ಲಿ ಕಂಫರ್ಟ್‌ ಎನಿಸುತ್ತೆ ಎಂದು ಮಾನಸಾ ಹೇಳಿದ್ದಳು. ಆಕೆ ಯಾವಾಗಲೂ ಹೇಳುತ್ತಿದ್ದ ಮತ್ತೊಂದು ಮಾತೆಂದರೆ, “ಅಮ್ಮಾ, ನೀನು ಹೊರಗೆ ಬಂದು ಸ್ವಲ್ಪ ನೋಡು, ನಿನಗೆ ಆಗಲೇ ಗೊತ್ತಾಗುತ್ತೆ. ನನಗೆ ನನ್ನ ಇತಿಮಿತಿ ಗೊತ್ತು. ಹೀಗಾಗಿ ನೀನು ಹೆದರುವ ಅಗತ್ಯವಿಲ್ಲ.”

ಮಹಿಳೆಯರು ಬಹುಬೇಗ ಒತ್ತಡಗ್ರಸ್ಥರಾಗಲು ಮುಖ್ಯ ಕಾರಣ ಯಾವುದೇ ವಿಷಯದ ಬಗ್ಗೆ ಗಹನವಾಗಿ ಯೋಚಿಸದೆ ಒಮ್ಮೆಲೆ ನಿರ್ಧಾರಕ್ಕೆ ಬಂದು ಬಿಡುವುದಾಗಿದೆ ಎಂದು ಮನೋತಜ್ಞರು ಹೇಳುತ್ತಾರೆ. ಯಾವುದೇ ಸತ್ಯ ಗೊತ್ತಿಲ್ಲದಿರುವಾಗ ಟೆನ್ಶನ್‌ ಆಗುತ್ತದೆ. ಸಾಮಾನ್ಯವಾಗಿ ವ್ಯಕ್ತಿಗಳು ಏನೇನೋ ಯೋಚಿಸಿ ದುಃಖಿತರಾಗುತ್ತಾರೆ. ನೀವು ಯಾವುದಾದರೂ ವಿಷಯದ ಬಗ್ಗೆ ಚಿಂತಿತರಾಗಿದ್ದರೆ, ಅದರ ಪ್ರತಿಯೊಂದು ಪಾರ್ಶ್ವಗಳ ಬಗ್ಗೆ ಯೋಚಿಸಿ. ಅಂದರೆ, ಹೀಗೇಕಾಗುತ್ತಿದೆ? ಹೀಗಾಗುವುದು ಅನಿವಾರ್ಯವೇ? ಹೀಗೆ ವಿಶ್ಲೇಷಣೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದರೆ ಟೆನ್ಶನ್‌ ಆಗುವುದಿಲ್ಲ.ಮಹಿಳೆಯರು ಸಂವೇದನಾಶೀಲ ಮನಸ್ಸುಳ್ಳವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅವರು ಚಿಕ್ಕಪುಟ್ಟ ಸಂಗತಿಗಳ ಬಗ್ಗೆ ಬಹುಬೇಗ ವ್ಯಾಕುಲಗೊಳ್ಳುತ್ತಾರೆ. ಆದರೆ ಅವರ ಒತ್ತಡಕ್ಕೆ ಮುಖ್ಯ ಕಾರಣ ಅವರ ಸಂವೇದನಾಶೀಲತೆಗಿಂತ ಬಹಳಷ್ಟು ಸಂಗತಿಗಳ ಬಗ್ಗೆ ಜಾಗರೂಕರಾಗದೇ ಇರುವುದಾಗಿದೆ. ಅವರು ವಿಷಯವನ್ನು ಓದುವುದರ ಮೂಲಕ, ಇನ್ನೊಬ್ಬರಿಂದ ತಿಳಿದುಕೊಳ್ಳುವುದರ ಮೂಲಕ ಅಥವಾ ಸ್ವತಃ ಅನುಭವ ಮಾಡಿಕೊಳ್ಳುವುದರ ಮೂಲಕ ತಮ್ಮ ಮಾಹಿತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇಂತಹವರು ಕ್ರಮೇಣ ಚಿಕ್ಕಪುಟ್ಟ ಹಾಗೂ ನಿರರ್ಥಕ ಸಂಗತಿಗಳ ಬಗ್ಗೆ ಎಂದೂ ಒತ್ತಡಗ್ರಸ್ಥರಾಗುವುದಿಲ್ಲ.

ಎಕ್ಸ್ ಪೋಶರ್ ಕೊರತೆ

ಮಹಿಳೆ ಹಾಗೂ ಪುರುಷರಿಗೆ ಸಮಾನತೆ ಇರುವ ದೇಶಗಳಲ್ಲೂ ಕೂಡ ಮಹಿಳೆಯರು ಒತ್ತಡಗ್ರಸ್ಥರಾಗುತ್ತಾರೆ ಎನ್ನುವುದು ಕಂಡುಬಂದಿದೆ. ಪುರುಷರು ಮನೆಗಿಂತ ಹೆಚ್ಚಾಗಿ ಹೊರಗಡೆಯೇ ಇರುತ್ತಾರೆ. ಅವರಿಗೆ ಬಗೆಬಗೆಯ ಜನರು ಭೇಟಿಯಾಗುತ್ತಾರೆ ಹಾಗೂ ಹತ್ತು ಹಲವು ಬಗೆಯ ಜನರ ಸಮಸ್ಯೆಗಳ ಅರಿವಾಗುತ್ತದೆ. ಈ ಕಾರಣದಿಂದ ಅವರ ಯೋಚನೆಯ ವ್ಯಾಪ್ತಿ ಹೆಚ್ಚುತ್ತದೆ. ಎಷ್ಟು ಹೆಚ್ಚು ಜನರೊಂದಿಗೆ ಸಂಪರ್ಕ ಬೆಳೆಸುತ್ತಾರೋ, ಅಷ್ಟೇ ಅವರ ಎಕ್ಸ್ ಪೋಶರ್‌ ಹೆಚ್ಚುತ್ತದೆ. ಇದರಿಂದ ಅವರಿಗೆ ಬೇರೆಯವರ ಕಾರ್ಯಶೈಲಿಯ ಅರಿವಾಗುತ್ತದೆ. ಇದರ ಜೊತೆಗೆ ಮೂಲಭೂತ ವ್ಯವಸ್ಥೆಯ ಬಗೆಗೂ ಅರಿವಾಗುತ್ತದೆ. ಈ ಕಾರಣದಿಂದ ಯಾವುದೇ ಸಮಸ್ಯೆ ಉದ್ಭವಿಸಿದರೆ ಅವರು ತಕ್ಷಣವೇ ತಮ್ಮ ಬಳಿ ಇರುವ ಮಾಹಿತಿಯ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ.

ಮಹಿಳೆಯರಿಗೆ ಪುರುಷರಷ್ಟು ಎಕ್ಸ್ ಪೋಶರ್‌ ದೊರೆಯುವುದಿಲ್ಲ. ಏಕೆಂದರೆ ಅವರು ಪುರುಷರಂತೆ ಹೆಚ್ಚಾಗಿ ಹೊರಗೆ ಹೋಗುವುದೂ ಇಲ್ಲ, ಜನರನ್ನು ಭೇಟಿಯಾಗುವುದೂ ಇಲ್ಲ. ಉದ್ಯೋಗಸ್ಥ ಮಹಿಳೆಯರು ಕೂಡ ತಮ್ಮ ಕೌಟುಂಬಿಕ ಜವಾಬ್ದಾರಿಗಳ ಕಾರಣದಿಂದ ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯುವುದು ಅನಿವಾರ್ಯವಾಗುತ್ತದೆ. ಈ ಕಾರಣದಿಂದ ಅವರ ಯೋಚನೆಯ ವ್ಯಾಪ್ತಿ ವಿಸ್ತಾರವಾಗುವುದಿಲ್ಲ.

ಮೀರಾಳ ತಾಯಿ ಅನಾರೋಗ್ಯ ಪೀಡಿತರಾಗಿದ್ದರು. ಆಕೆ ಅವರನ್ನು ಭೇಟಿಯಾಗಲು ಹೋದಳು. ಆಗ ಮೀರಾಗೆ ಅಣ್ಣ ಅಮ್ಮನನ್ನು ನೋಡಲು ಬಂದೇ ಇಲ್ಲ ಎಂಬ ಸಂಗತಿ ತಿಳಿದು ಭಾರಿ ಕೋಪ ಬಂತು. ಅಮ್ಮನ ಮುಂದೆಯೇ ಮೀರಾ ಅಣ್ಣ ಅತ್ತಿಗೆಯ ಬಗ್ಗೆ ಬಾಯಿಗೆ ಬಂದದ್ದೆನ್ನೆಲ್ಲಾ ಮಾತಾಡಿಬಿಟ್ಟಳು. ಮೀರಾ ಮನೆಗೆ ಬಂದಾಗ ಆಕೆಗೆ ಅಣ್ಣನಿಂದ ಫೋನ್‌ ಬಂತು. ಅವನು ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸುತ್ತಲಿದ್ದ. ಬಳಿಕ ಅವನು ತನ್ನ ಕಾಲಿಗೆ ಫ್ರ್ಯಾಕ್ಚರ್‌ ಆಗಿದ್ದು, ಸದ್ಯದ ಸ್ಥಿತಿಯಲ್ಲಿ ನಾನು ಎಲ್ಲಿಗೂ ಹೋಗುವ ಹಾಗಿಲ್ಲ, ಹಾಗಾಗಿ ನೀನೇ ಅಮ್ಮನನ್ನು ಸರಿಯಾಗಿ ನೋಡಿಕೊ ಎಂದು ಹೇಳಿದ. ಆಕೆ ಮೊದಲೇ ಅಣ್ಣನಿಗೆ ಏನೋ ತೊಂದರೆಯಿರಬಹುದು. ಹಾಗಾಗಿ ಅಮ್ಮನನ್ನು ನೋಡಲು ಬಂದಿರಲಿಕ್ಕಿಲ್ಲ ಎಂದು ಯೋಚಿಸಿದ್ದರೆ ಆಕೆಗೆ ಟೆನ್ಶನ್‌ ಆಗುವ ಸಂಭವೇ ಇರುತ್ತಿರಲಿಲ್ಲ. ಆಕೆಯ ಗಂಡ ನೀನು ಮೊದಲು ಅಣ್ಣನಿಗೆ ಫೋನ್‌ ಮಾಡಿ ನೋಡು, ಆಮೇಲೆ ಪ್ರತಿಕ್ರಿಯೆ ಕೊಡು ಎಂದು ಹೇಳಿದ್ದ. ಆದರೂ ಆಕೆ ಹೀಗೆ ಪ್ರತಿಕ್ರಿಯೆ ನೀಡಿ ತನ್ನ ಸ್ವಭಾವ ಎಂಥದು ಎಂಬುದನ್ನು ತೋರಿಸಿಕೊಟ್ಟಳು.

ತಂತ್ರಜ್ಞಾನ ಅರಿತುಕೊಳ್ಳದೇ ಇರುವುದು

ಹಾಗೆ ನೋಡಿದರೆ ಅವು ಚಿಕ್ಕಪುಟ್ಟ ಸಂಗತಿಗಳೇ. ಆದರೆ ಇವೇ ಸಂಬಂಧದಲ್ಲಿ ಒತ್ತಡವನ್ನುಂಟು ಮಾಡುತ್ತಿವೆ. ಅಷ್ಟೇ ಅಲ್ಲ, ಬಹಳಷ್ಟು ಮಹಿಳೆಯರು ಮನೆಯಲ್ಲಿ ಉಪಯೋಗಿಸಲ್ಪಡುವ ಉಪಕರಣಗಳ ತಂತ್ರಜ್ಞಾನದ ಬಗ್ಗೆ ಹೆಚ್ಚು ಕಡಿಮೆ ಅಪರಿಚಿತರಾಗಿಯೇ ಇರುತ್ತಾರೆ. ಹೀಗಾಗಿ ಅವರು ಮತ್ತೆ ಮತ್ತೆ ಒತ್ತಡಕ್ಕೊಳಗಾಗುತ್ತಾರೆ. ಉದಾಹರಣೆಗೆ ಟೋಸ್ಟರ್‌ ಸರಿಯಾಗಿ ಕೆಲಸ ಮಾಡಲಿಲ್ಲವೆಂದರೆ ಅವರು ಟೆನ್ಶನ್‌ಗೊಳಗಾಗುತ್ತಾರೆ. ಬಲ್ಬ್ ಅಥವಾ ಟ್ಯೂಬ್‌ ಉರಿಯದಿದ್ದರೂ ಕೂಡ ಅವರಿಗೆ ಕಸಿವಿಸಿಯಾಗುತ್ತದೆ. ಗೋಡೆಯಲ್ಲಿ ಮೊಳೆ ಹೋಗದಿದ್ದರೆ ಗೋಡೆ ಕಟ್ಟಿದವನ ಮೇಲೆ ದೋಷ ಹೊರಿಸುತ್ತಾರೆ. ಬೀಗವೊಂದು ಕೆಲಸ ಮಾಡದೇ ಇದ್ದಾಗ ಮುಂದೇನು ಮಾಡಬೇಕೆಂದು ಅವರಿಗೆ ತೋಚುವುದಿಲ್ಲ.

ಎ.ಸಿ.ಯ ಸರ್ವೀಸ್‌ ಮಾಡಿಸಬೇಕು ಆದರೆ ಹೇಗೆ ಎಂದು ಅವರಿಗೆ ಗೊತ್ತಿಲ್ಲ. ಎಷ್ಟೋ ಸಲ ಗ್ಯಾಸ್‌ ಬುಕ್ಕಿಂಗ್‌ ಬಗೆಗೆ ಗೊಂದಲವುಂಟಾಗಿ ಟೆನ್ಶನ್‌ಗೆ ತುತ್ತಾಗುತ್ತಾರೆ. ಮಹಿಳೆಯರ ಅತ್ಯಂತ ದೊಡ್ಡ ತೊಂದರೆಯೆಂದರೆ, ತಂತ್ರಜ್ಞಾನದ ಬಗ್ಗೆ ಅರಿವು ಮಾಡಿಕೊಳ್ಳದೇ ಇರುವುದು ಅಥವಾ ಗ್ಯಾಜೆಟ್‌ಗಳ ಬಗ್ಗೆ ತಿಳಿದುಕೊಳ್ಳಲು ಹಿಂದೇಟು ಹಾಕುತ್ತಾರೆ. ಮನೆ ಸಾಮಾನುಗಳನ್ನು ದುರಸ್ತಿ ಮಾಡುವ ಹೊಣೆ ಪುರುಷರದ್ದೇ ಆಗಿರುತ್ತದೆ ಎಂದರು ಅಂದುಕೊಂಡಿರುತ್ತಾರೆ. ಹೀಗಾಗಿ ಕಲಿಯುವ ಮಾತು ಇರಲಿ, ಅದರ ಬಗ್ಗೆ ಆಸಕ್ತಿ ಕೂಡ ತೋರಿಸುವುದಿಲ್ಲ.

ಅಸುರಕ್ಷತೆಯ ಭಾವನೆ

ಮಹಿಳೆಯರು ಒತ್ತಡಕ್ಕೊಳಗಾಗುವ ಒಂದು ಪ್ರಮುಖ ಕಾರಣವೇನೆಂದರೆ, ಅವರು ತಮ್ಮನ್ನು ತಾವು ಅಸುರಕ್ಷಿತರು ಎಂದು ಭಾವಿಸುವುದಾಗಿದೆ. ಮನೆಯ ಒಳಗೂ ಕೂಡ ತಮ್ಮದೇ ಆದ ಒಂದು ಲಯದಲ್ಲಿ ಇರುತ್ತಾರೆ. ಅದರಿಂದ ಸ್ವಲ್ಪ ಹೊರಗೆ ಹೋದರೂ ಕೂಡ ಅವರಲ್ಲಿ ಭಯ ಅಥವಾ ಅಸುರಕ್ಷತೆಯ ಭಾವನೆ ಬರತೊಡಗುತ್ತದೆ. ಸಾಮಾನ್ಯವಾಗಿ ಪುರುಷರು ಹೆಚ್ಚಿನ ಸಮಯ ಮನೆಯಿಂದ ಹೊರಗಡೆಯೇ ಇರುತ್ತಾರೆ. ಅಸುರಕ್ಷಿತ ಲಯದಲ್ಲಿ ಇರುವ ಕಾರಣದಿಂದಾಗಿ ವಿಷಮ ಪರಿಸ್ಥಿತಿಗಳಿಂದ ಹೇಗೆ ಹೊರಬರಬೇಕೆಂದು ದಾರಿ ಕಂಡುಕೊಳ್ಳುತ್ತಾರೆ. ಹೊರಗಡೆ ಅಪಾಯ ಇರುವುದರ ಬಗ್ಗೆ ಅವರು ಸದಾ ಜಾಗ್ರತೆಯಿಂದಿರುತ್ತಾರೆ. ಆದರೆ ಮಹಿಳೆಯರ ಬಾಬತ್ತಿನಲ್ಲಿ ಮಾತ್ರ ಹೀಗಾಗುವುದಿಲ್ಲ.

ಜಾಗರೂಕತೆಯಿಂದ ಇರದೇ ಇರುವ ಕಾರಣದಿಂದ ನಿಖಿತಾ ಒಂದು ದುರ್ಘಟನೆಗೆ ಸಿಲುಕಿದಳು. ಅದು ರಾತ್ರಿಯ ಸಮಯ. ಮನೆಯಲ್ಲಿ ಒಬ್ಬಳೇ ಇದ್ದಳು. ಯಾರೋ ಮನೆ ಬಾಗಿಲು ತಟ್ಟಿದರು. ಆಕೆ ಯಾರು ಅಂತ ಕೇಳದೆಯೇ, ಕೀಹೋಲ್‌ನಿಂದ ನೋಡದೆಯೇ ತಕ್ಷಣ ಬಾಗಿಲು ತೆರೆದುಬಿಟ್ಟಳು. ಬಾಗಿಲು ತೆರೆಯುತ್ತಿದ್ದಂತೆ ಒಬ್ಬ ವ್ಯಕ್ತಿ ಆಕೆಯ ಮೇಲೆ ಒಮ್ಮೆಲೇ ದಾಳಿ ಮಾಡಿದ. ಆಕೆ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಳು. ಆ ವ್ಯಕ್ತಿ ಹಣ ಹಾಗೂ ಆಭರಣಗಳನ್ನು ಎತ್ತಿಕೊಂಡು ಓಡಿಹೋದ. ಅವಳು ಸ್ವಲ್ಪ ಎಚ್ಚರವಹಿಸಿದ್ದರೆ ಕೀಹೋಲ್‌ನಿಂದ ನೋಡಿದ್ದರೆ ಆಕೆ ಈ ದುರಂತದಿಂದ ಪಾರಾಗುತ್ತಿದ್ದಳೊ ಏನೋ? ಬಳಿಕ ಒತ್ತಡ ಉಂಟಾದರೆ ಏನು ಪ್ರಯೋಜನ?

ಒತ್ತಡ ಮುಕ್ತರಾಗಬೇಕೆಂದರೆ, ಮಹಿಳೆಯರು ಅಸುರಕ್ಷತೆಯ ವ್ಯಾಪ್ತಿಯಿಂದ ಹೊರಬಂದು, ವಾಸ್ತವ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದೇ ಒಂದು ಘಟನೆ ಘಟಿಸಿದರೂ ಅದೇಕೆ ಹೀಗೆ ಎಂದು ಆಳಕ್ಕೆ ಹೋಗಿ ನೋಡಿದರೆ ಒತ್ತಡದಿಂದ ಹೊರಬರಬಹುದಾಗಿದೆ. ಸ್ವಲ್ಪ ಮುಕ್ತಯೋಚನೆ ಮತ್ತು ಹೆಚ್ಚು ಎಕ್ಸ್ ಪೋಶರ್‌ ಅವರನ್ನು ಒತ್ತಡದಿಂದ ಹೊರತರಬಹುದಾಗಿದೆ.

ಸುಮನಾ ರಾವ್

Tags:
COMMENT