ಎಣಿಕೆಗೂ ನಿಲುಕದ ಇಂತಹುದೊಂದು ಅನುಭವ ನಮಗೆ ದೊರಕಿದ್ದು ಅಬುಧಾಬಿಯಲ್ಲಿರುವ ಲೋವರ್‌ ಮ್ಯೂಸಿಯಮ್ ನ ಎದುರು ನಿಂತಾಗ, ಅಂದಹಾಗೆ ಈ ಲೋವರ್‌ ಶಬ್ದವನ್ನು ಎಲ್ಲೋ ಕೇಳಿದಂತಿದೆಯಲ್ಲ ಅಂತ ನಿಮಗೆ ಅನಿಸಬಹುದು.ಹೌದು, ಪ್ಯಾರಿಸ್‌ನಲ್ಲಿ ಇದೇ ಹೆಸರಿನ ಜಗತ್ಪ್ರಸಿದ್ಧ ಇನ್ನೊಂದು ಮ್ಯೂಸಿಯಮ್ ಇದೆ. ಅಲ್ಲಿ ನಸುನಗೆಯ ಮೋನಾಲಿಸಾಳ ವರ್ಣಚಿತ್ರವಿದೆ ಎಂದ ಕೂಡಲೇ ನಮಗೆ ಥಟ್ಟನೆ ಎಲ್ಲ ನೆನಪಾಗುತ್ತದೆ. ಲೋವರ್‌ನಿಂದ ಮೊನಾಲಿಸಾ ಪ್ರಸಿದ್ಧಿ ಪಡೆದದ್ದೊ ಮೊನಾಲಿಸಾಳಿಂದ ಲೋವರ್‌ ಪ್ರಸಿದ್ಧಿ ಪಡೆದದ್ದೊ ಹೇಳೋದು ಕಷ್ಟ. ಪ್ಯಾರಿಸ್‌ಗೆ ಹೋದವರು ಯಾರೂ ಲೋವರ್‌ ನೋಡದೆ ಬರುವುದಿಲ್ಲ. ಮೋನಾಲಿಸಾಳನ್ನು ಕಾಣದೇ ಬರುವುದಿಲ್ಲ.

 

ಹಾಗೆಯೇ ಸಂಯುಕ್ತ ಅರಬ್‌ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಗೆ ಹೋದವರು ಅಲ್ಲಿನ ಲೋವರ್‌ನ್ನು ನೋಡಿಬರಬೇಕು. ಪ್ಯಾರಿಸ್‌ನ ಲೋವರ್‌ಗೆ ಮೋನಾಲಿಸಾ ಆಕರ್ಷಣೆಯಾದರೆ ಅಬುಧಾಬಿಯ ಲೋವರ್‌ಗೆ ಅದರ 180 ಮೀಟರ್‌ ವ್ಯಾಸವಿರುವ ಬೋರಲು ಹಾಕಿದ ಬೋಗುಣಿ ಆಕಾರದ ವಾಸ್ತುಶಿಲ್ಪವೇ ವಿಶೇಷ ಆಕರ್ಷಣೆ.

ROMAN-ARTEFACT

ಹಾಗಂತ ಅದನ್ನಷ್ಟೆ ನೋಡಿ ವಾಪಸ್ಸು ಬರಬೇಕೆಂದಿಲ್ಲ. ಅಬುಧಾಬಿಯ ಲೋವರ್‌ ಮ್ಯೂಸಿಯಮ್ ವಿಶ್ವದರ್ಜೆಯ ಒಂದು ಉತ್ಕೃಷ್ಟ ಮ್ಯೂಸಿಯಂ. ಪೂರ್ವ ಮತ್ತು ಪಶ್ಚಿಮ ಸಂಸ್ಕೃತಿಗಳ ಎಲ್ಲ ದಿಕ್ಕಿನಿಂದಲೂ ಅಪೂರ್ವ ವಸ್ತುಗಳನ್ನು ಸಂಗ್ರಹಿಸಿ ಇಲ್ಲಿ ಇಡಲಾಗಿದೆ. `ಮನುಕುಲವನ್ನು ಹೊಸ ಬೆಳಕಿನಲ್ಲಿ ನೋಡುವುದು’ ಎಂಬ ಉದ್ದೇಶದಿಂದ ಈ ಮ್ಯೂಸಿಮ್ ನ್ನು ನಿರ್ಮಿಸಿ 2017ರ ನವೆಂಬರ್‌ 8 ರಂದು ಉದ್ಘಾಟಿಸಲಾಯಿತು. ಈ ಮ್ಯೂಸಿಯಮ್ ಅಸ್ತಿತ್ವಕ್ಕೆ ಬರಲು ಫ್ರೆಂಚ್‌ ಸರ್ಕಾರ ಮತ್ತು ಎಂಜಿನಿಯರ್‌ಗಳ ನೆರವನ್ನು ಪಡೆಯಲಾಯಿತು.

GARDEN-IN-FRONT-OF-THE-MUSEUM

 

ಮ್ಯೂಸಿಯಮ್ ನ ವಾಸ್ತುಶಿಲ್ಪವನ್ನು ನೋಡಿದಾಗ ಓಯಸಿಸ್‌ ಸನಿಹ ಒತ್ತಾಗಿ ಬೆಳೆದು ನಿಂತ ಖರ್ಜೂರದ ಮರದ ಗರಿಗಳು ನಿರ್ಮಿಸುವ ಛಾವಣಿಯನ್ನು ನೋಡಿದಂತಾಗುತ್ತದೆ. ಹಾಗೆ ಕಾಣಬೇಕೆಂದೇ ವಾಸ್ತುಶಿಲ್ಪವನ್ನು ಆ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸುತ್ತ ಸಮುದ್ರದ ನೀರನ್ನು ನಿಲ್ಲುವಂತೆ ಮಾಡಿರುವುದರಿಂದ ಮ್ಯೂಸಿಯಮ್ ನೀರಿನಲ್ಲಿ ತೇಲುತ್ತಿದೆಯೇನೋ ಎಂದು ಭಾಸವಾಗುತ್ತದೆ. ಅನ್ಯಗ್ರಹ ಜೀವಿಗಳು ಭೂಮಿಗೆ ತಂದಿಟ್ಟ ಹಾರುವ ತಟ್ಟೆಯಂತೆಯೂ ಮ್ಯೂಸಿಯಮ್ ಕಂಗೊಳಿಸುತ್ತದೆ. ಹೀಗೆ ಹಲವು ಕಾರಣಗಳಿಗೆ ಅಬುಧಾಬಿಯ ಲೋವರ್‌ ಭೇಟಿ ಯೋಗ್ಯವಾಗಿದೆ.

ಸಾವಿರಾರು ಕೌತುಕಗಳು

INSIDE-LOUVRE-DOME

 

ಮ್ಯೂಸಿಯಮ್ ಒಳಗೆ ಕಾಲಿಡುತ್ತಿದ್ದಂತೆ ಒಳಗಿನ ವರ್ಣನಾತೀತ ಅಚ್ಚುಕಟ್ಟುತನ ನಮ್ಮನ್ನು ಸೆಳೆದುಬಿಡುತ್ತದೆ. ಪ್ರತಿಯೊಂದು ವಸ್ತುವನ್ನೂ ಅತ್ಯಂತ ವ್ಯವಸ್ಥಿತವಾಗಿ ಸೂಕ್ತ ಮಾಹಿತಿಯೊಂದಿಗೆ ಪ್ರದರ್ಶಿಸಿದ ಸೃಜನಶೀಲ ರೀತಿ ಮನಮೋಹಕವಾಗಿದೆ. ಬಹುಪಾಲು ಎಲ್ಲ ಭೂಖಂಡಗಳಿಂದಲೂ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ ಇಲ್ಲಿ ಇಡಲಾಗಿದೆ. 8 ಲಕ್ಷ ವರ್ಷಗಳಷ್ಟು ಹಿಂದಿನ ಕೈಕೊಡಲಿಯಿಂದ ಹಿಡಿದು 20ನೇ ಶತಮಾನದವರೆಗೂ ಇರುವ ಸಾವಿರಾರು ವಸ್ತುಗಳು ಬೆರಗು ಮೂಡಿಸುತ್ತವೆ. ಗ್ಯಾಲರಿಗಳಿಂದ ಗ್ಯಾಲರಿಗಳಿಗೆ ನಡೆದುಹೋಗುವಾಗ ಒಂದೇ ಒಂದು ವಸ್ತು ನಮ್ಮ ಕಣ್ತಪ್ಪಿ ಹೋಗದಂತೆ ಮಾರ್ಗದರ್ಶನವಿದೆ.

STATUE-WITH-TWO-HEADS-FROM-JORDAN-6500-BCE

ಜಗತ್ತಿನ ವಸ್ತುಗಳಿಗೆಲ್ಲ ಇಲ್ಲಿ ಜಾಗವಿದೆ ಎಂದು ತಿಳಿದ ಕೂಡಲೇ ಸಹಜವಾಗಿ ಭಾರತದಿಂದ ಏನೇನು ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂಬ ಕುತೂಹಲ ನಮ್ಮನ್ನು ಕೊರೆಯತೊಡಗಿತು. ಅರಸುತ್ತ ಹೊರಟಾಗ ಮೊದಲು ಕಂಡದ್ದು ಕುಶಾನರ ಕಾಲದ ಬುದ್ಧನ ಶಿರಪ್ರತಿಮೆ. ಆಮೇಲೆ ಇನ್ನಷ್ಟು ಮತ್ತಷ್ಟು ಭಾರತ ನೆಲದ ವಸ್ತುಗಳು ಕಂಡುಬಂದವು.

 

ಶಾತವಾಹನರ ಕಾಲದ ಬೌದ್ಧ ಸ್ತೂಪವೊಂದರ ಫಲಕದ ಅವಶೇಷ, ಚೋಳರ ಕಾಲದ ಮೋಹಕ ನಟರಾಜ ವಿಗ್ರಹ, ಪಲ್ಲರ ಕಾಲದ ಬೌದ್ಧ ತಾಳೆಗರಿಗಳು, ಯಕ್ಷಿಯ ಶಿಲ್ಪ, ಅಧ್‌ನಾಬ ಸಿರಾಜ್‌ ಉದ್‌ ದೌಲ ಮತ್ತು ಅವನ ಮಗನ ವರ್ಣಚಿತ್ರ, ಕೃಷ್ಣ ರಾಧೆ ಹಾಗೂ ಕಂಸ ದೇವಕಿಯರ ಮೊಗಲರ ಕಾಲದ ವರ್ಣಚಿತ್ರಗಳು, ಇಟಲಿಯಲ್ಲಿ ಶೃಂಗಾರಗೊಂಡ ಗುಜರಾತಿನ ಹೂಜಿ ಇನ್ನೂ ಮುಂತಾದವು.

WOMAN-DRESSED-IN-WOOLEN-GARMENT---BACTREA,-2300-BCE

ಅನೇಕ ಜಗತ್ಪ್ರಸಿದ್ಧ ವ್ಯಕ್ತಿಗಳ ಪ್ರಾಚೀನ ಪ್ರತಿಮೆಗಳು ಸೂಕ್ಷ್ಮ ಕುಸುರಿಗಾಗಿ ನಮ್ಮ ಗಮನಸೆಳೆಯುತ್ತವೆ. ನಾವು ಗಮನಿಸಿದ ಮತ್ತೊಂದು ಮುಖ್ಯ ಅಂಶವೆಂದರೆ `ಏಷ್ಯಾದ ಬೆಳಕು’ ಎಂದು ಖ್ಯಾತನಾಗಿರುವ ಬುದ್ಧನಿಗೆ ಸಂಬಂಧಿಸಿದ ಪ್ರತಿಮೆಗಳೇ ಇಲ್ಲಿ ಇರುವುದು ಹೆಚ್ಚು.

ENTRANCE-TO-LOUVRE

ಭಾರತದ ಗಾಂಧಾರ ಬುದ್ಧ, ನೇಪಾಳದ ಮೈತ್ರೇಯಿ ಬುದ್ಧ, ಚೀನಾದ ಬೋಧಿಸತ್ವ, ಜಪಾನಿನ ಬೋಧಿಸತ್ವ, ಗುಪ್ತರ ಕಾಲದ ಬುದ್ಧ, ಕಾಂಬೋಡಿಯಾದ ಧ್ಯಾನಸ್ಥ ಬುದ್ಧ…… ಇಷ್ಟು ನನಗೆ ನೆನಪಿರುವುದು. ಹಾಗೆಯೇ ಅಲೆಗ್ಸಾಂಡರ್‌, ಅಗಸ್ಟೀನ್‌ ಸೀಝರ್‌, ಸಾಕ್ರೆಟಿಸ್‌, ಐಗುಪ್ತದ ಫ್ಯಾರೋ, ಎರಡನೇ ರಾಮ್ಸೆಸ್‌, ಸ್ಪೇನಿನ ಅರಸ ಐದನೇ ಫಿಲಿಪ್‌ ಹೀಗೆ ಎಲ್ಲರೂ ಇಲ್ಲಿ ತಮ್ಮ ಹಾಜರಾತಿಯ ಮೂಲಕ ಮ್ಯೂಸಿಯಮ್ ನ ಮಹತ್ವವನ್ನು ಹೆಚ್ಚಿಸಿದ್ದಾರೆ.

ARABIAN-YOUTH-RADING-A-BOOK

ಲಿಯೊನಾರ್ಡೊ ಡಾರ್ವಿಂಚಿಯ `ಲ್ಯಾಬೆಲ್ಲಾ’ ಹೆಸರಿನ ಓರೆನೋಟದ ಮಹಿಳೆಯ ಚಿತ್ರ. ಮಲಗಿಕೊಂಡು ವಿರಾಮದಲ್ಲಿ ಪುಸ್ತಕ ಓದುತ್ತಿರುವ ಎಮಿರೇಟ್‌ ಯುವಕನ ಚಿತ್ರ, ನೆಪೋಲಿಯನ್‌ ಬೊನಾಪಾರ್ಟೆಯ ಚಿತ್ರಗಳು ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಇವೆಲ್ಲ ಒಂದಕ್ಕಿಂತ ಒಂದು ಚಾರಿತ್ರಿಕ ಮೌಲ್ಯವುಳ್ಳ. ಚೀನಾದಲ್ಲಿ ಗಾಜಿನ ಕ್ರಿಸ್ಟಲ್ ಗಳಿಂದ ತಯಾರಾದ 23 ಅಡಿ ಎತ್ತರದ `ಬೆಳಕಿನ ಕಾರಂಜಿ’ ಹೆಸರಿನ ಅಸದೃಶ ಶಿಲ್ಪದ ಪಕ್ಕ ನಿಂತು ನಾವು ಫೋಟೋ ತೆಗೆಸಿಕೊಳ್ಳಲೇಬೇಕು. ಹೀಗೆ ಲೋವರ್‌ ನಮ್ಮ ಅರಿವು ಮತ್ತು ಅನುಭವಗಳನ್ನು ವಿಸ್ತರಿಸುತ್ತದೆ.

WOOD-STATUES-FROM-PAPUA-NEWGUINEA

ದೊಡ್ಡವರನ್ನಷ್ಟೆ ಗಮನದಲ್ಲಿ ಇಟ್ಟುಕೊಂಡು ಲೋವರ್‌ ಮ್ಯೂಸಿಯಮ್ ನ್ನು ರೂಪಿಸಲಾಗಿದೆ ಎಂದುಕೊಂಡರೆ ತಪ್ಪಾಗುತ್ತದೆ. ಇಲ್ಲಿ ಮಕ್ಕಳಿಗೂ ವಿಶೇಷ ವಿಭಾಗವಿದೆ. ಅವರ ತಿಳಿವಳಿಕೆಯನ್ನು ಹೆಚ್ಚಿಸುವ ವಿಭಾಗವಿದು. ಚಿತ್ರಕಲಾವಿದರಿಗೆ ಖುಷಿ ತರುವ ಡಚ್‌ಕಲಾವಿದರಾದ ರೆಂಬ್ರಾಂಡ್ಟ್, ರ್ಮೀರ್‌ ಮುಂತಾದವರ ವರ್ಣಚಿತ್ರಗಳನ್ನು ಪ್ರದರ್ಶಿಸಿರುವ ಗ್ಯಾಲರಿಯೂ ಇದೆ.

HAND-AXE--8-LAKH-YEAR-OLD

ಲೋವರ್‌ ಮ್ಯೂಸಿಯಮ್ ಶುರುವಾಗಿ ಎರಡು ವರ್ಷಗಳಷ್ಟೆ ಕಳೆದಿರುವುದು. ಪ್ರವಾಸಿ ಏಜೆನ್ಸಿಗಳು ಇನ್ನೂ ಇದನ್ನು ತಮ್ಮ ಕ್ಯಾಟ್‌ಲಾಗ್‌ಗೆ ಸೇರಿಸಿಲ್ಲ. ನಾವೇ ಇಂಟರ್‌ನೆಟ್‌ನಲ್ಲಿ ತಿಳಿದುಕೊಂಡು ಭೇಟಿಕೊಡುವುದು ಉತ್ತಮ. ಅಬುಧಾಬಿಗೆ ಪ್ರವಾಸ ಹೋಗುವವರು ಲೋವರ್‌ ನೋಡಿಬರಲಿ. ಮಾನವಕುಲದ ಇತಿಹಾಸವನ್ನು ಸ್ವಾರಸ್ಯಕರವಾಗಿ ಪರಿಚಯಿಸು ಎಮಿರೇಟ್‌ ಸರ್ಕಾರದ ಒಂದು ಪ್ರಯತ್ನವನ್ನು ಕಂಡುಬರಲಿ.

– ಕೆ.ಎಸ್‌. ರವಿಕುಮಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ