ಗಂಡ 100% ಅಂಧ ವ್ಯಕ್ತಿ. ಐಎಎಸ್ ಪರೀಕ್ಷೆಯಲ್ಲಿ ಅವರಿಗೆ ಯಶಸ್ಸು ದೊರೆಯುವಲ್ಲಿ ಪತ್ನಿ ಹಗಲಿರುಳು ಶ್ರಮಿಸುತ್ತಾಳೆ. ತನ್ನ ಮೆಚ್ಚಿನ ಕೆಲಸ ಬಿಟ್ಟು, ಗಂಡ ಗ್ರಹಿಸಿಕೊಳ್ಳಬೇಕಾದ ಎಲ್ಲ ವಿಷಯಗಳನ್ನು ಅವರ ಮುಂದೆ ಕುಳಿತು ದಿನ ಗಟ್ಟಿಯಾಗಿ ಓದಿ ಹೇಳುತ್ತಾಳೆ. ಅಷ್ಟೇ ಅಲ್ಲ, ಕೆಲವು ವಿಷಯಗಳನ್ನು ರೆಕಾರ್ಡ್ ಕೂಡ ಮಾಡಿಕೊಡುತ್ತಾಳೆ. ಇದೆಲ್ಲದರ ಒಟ್ಟು ಫಲಶ್ರುತಿ ಗಂಡ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ!
ಈ ಯಶೋಗಾಥೆ ಭಾರತದ ನಾಗರಿಕ ಪರೀಕ್ಷೆಯ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲಾಗಿ ನಿಲ್ಲುತ್ತದೆ. ಆ ದಾಖಲೆ ಬರೆದವರು ಮೈಸೂರಿನ ಸಿದ್ಧಾರ್ಥ ನಗರದ ಕೆಂಪಹೊನ್ನಯ್ಯ. ಅವರ ಈ ಯಶೋಗಾಥೆಗೆ ಕಾರಣೀಭೂತರಾದವರು ಅವರ ಪತ್ನಿ ಅಚಿಂತಾ.
ಬುದ್ಧಿಮಾಂದ್ಯ ಮಕ್ಕಳಿಗಾಗಿ ತರಬೇತಿ
ಅಚಿಂತಾ ಮೂಲತಃ ಬೆಂಗಳೂರಿನವರು. ಅವರ ತಂದೆ ಜಾರ್ಜ್ ವಿಲಿಯಂ ಕೊಡಗಿನಲ್ಲಿ ಶಿಕ್ಷಕರಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾಗಿ ಮೈಸೂರಿನಲ್ಲಿಯೇ ನೆಲೆಸಿದ್ದರು. ತಾಯಿ ಪದ್ಮಾ ವಿಲಿಯಂ ಕೂಡ ಶಿಕ್ಷಕಿ. ಹೀಗಾಗಿ ಅಚಿಂತಾರಿಗೆ ಮೈಸೂರೇ ಬಾಲ್ಯದ ಊರಾಗಿ, ಕಾರ್ಯಕ್ಷೇತ್ರದ ಊರಾಯಿತು.
ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅಚಿಂತಾ, ಬೆಂಗಳೂರಿನಲ್ಲಿ `ಡಿಪ್ಲೋಮಾ ಇನ್ ಸ್ಪೆಷಲ್ ಎಜುಕೇಶನ್' ಪೂರೈಸಿದರು. `ಬುದ್ಧಿಮಾಂದ್ಯ ಮಕ್ಕಳ ನಿರ್ವಹಣೆಗಾಗಿ ಒಂದು ಕೋರ್ಸ್ ಇದೆ. ಅದನ್ನು ನೀನ್ಯಾಕೆ ಮಾಡಬಾರದು?' ಎಂದು ಅವರ ಚಿಕ್ಕಪ್ಪ ಲಾರೆನ್ಸ್ ನೀರೋ ಹೇಳಿದ್ದನ್ನು ಕೇಳಿ ಅಚಿಂತಾ ಆ ಕೋರ್ಸ್ ಪೂರೈಸಿದರು.
ಬುದ್ಧಿಮಾಂದ್ಯ ವ್ಯಕ್ತಿಗಳಿಗೆ ಸ್ವಯಂ ನೆರವು ಹಾಗೂ ದೈನಂದಿನ ಜೀವನ ನಿರ್ವಹಣೆಯ ಕೌಶಲ ತಿಳಿಸಿಕೊಟ್ಟರೆ ಅವರು ಚೆನ್ನಾಗಿಯೇ ಜೀವನ ಸಾಗಿಸಬಹುದು ಎಂಬ ಅರಿವು ಅಚಿಂತಾರಿಗೆ ಇತ್ತು. ಹೀಗಾಗಿ ಅವರು ಆ ತರಬೇತಿ ಪಡೆದು ಮೈಸೂರಿನಲ್ಲಿಯೇ ಕಾರ್ಯಪ್ರವೃತ್ತರಾದರು.
ಆರಂಭದಲ್ಲಿ ಅವರು `ಮೈತ್ರಿ ಚಾರಿಟೆಬಲ್ ಟ್ರಸ್ಟ್' ನಡೆಸಲು ಶಾಲೆಯ ಹೆಡ್ ಮಿಸೆಟ್ರಸ್ ಆಗಿ ಕೆಲಸ ಮಾಡಿದರು. ಬಳಿಕ `ಸ್ನೇಹ ಕಿರಣ'ದಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ತರಬೇತಿ ನೀಡಿ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತರಲು ಪ್ರಯತ್ನಿಸಿದರು.
ಕೆಂಪಹೊನ್ನಯ್ಯರ ಪರಿಚಯ
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆ ಗ್ರಾಮದ ಅಂಧ ವ್ಯಕ್ತಿ ಕೆಂಪಹೊನ್ನಯ್ಯ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿಕೊಂಡಿದ್ದರು. ಅಷ್ಟೊತ್ತಿಗೆ ಅಚಿಂತಾ ಬುದ್ಧಿಮಾಂದ್ಯ ಮಕ್ಕಳ ಶಾಲೆಗಳಿಗೆ ಹೋಗಿ ಕಲಿಸುವುದನ್ನು ನಿಲ್ಲಿಸಿ ತಮ್ಮ ಮನೆಯಲ್ಲಿಯೇ 7-8 ಬುದ್ಧಿಮಾಂದ್ಯ ವ್ಯಕ್ತಿಗಳಿಗೆ ಆಶ್ರಯ ಕಲ್ಪಿಸಿ, ಅಂಧ ವ್ಯಕ್ತಿಗಳ ಪೋಷಕರ ಅಷ್ಟಿಷ್ಟು ತಲೆನೋವನ್ನು ಕಡಿಮೆ ಮಾಡಿದ್ದರು. ಹೀಗೆಯೇ ಒಂದು ದಿನ ಬನ್ನಿಮಂಟಪ ಬಸ್‌ಸ್ಟಾಪ್‌ನಲ್ಲಿ ಅಚಿಂತಾ ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಅಲ್ಲಿ ಒಬ್ಬ ಅಂಧ ವ್ಯಕ್ತಿ ಕುಳಿತುಕೊಳ್ಳಲು ಪರದಾಡುತ್ತಿದ್ದರು. ಅದನ್ನು ಗಮನಿಸಿ ಅಚಿಂತಾ ಹತ್ತಿರ ಹೋಗಿ ಕುಳಿತುಕೊಳ್ಳಲು ಸ್ಥಳ ತೋರಿಸಿದ್ದಲ್ಲದೆ, ಸ್ವಲ್ಪ ಹೊತ್ತಿನ ಬಳಿಕ ಆತ ಹೋಗಬೇಕಾದ ಬಸ್ಸಿನಲ್ಲಿ ಕೂರಿಸಿ ಕಳಿಸಿದರು. ಈ ಮಧ್ಯೆ ಅವರ ನಡುವೆ ಪರಿಚಯ ಪ್ರಕ್ರಿಯೆ ನಡೆಯುತ್ತದೆ. ಅಚಿಂತಾ ತಾನು ಬುದ್ಧಿಮಾಂದ್ಯ ವ್ಯಕ್ತಿಗಳಿಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದನ್ನು ಕೇಳಿದ ಕೆಂಪಹೊನ್ನಯ್ಯ ತನಗೂ ಏನಾದರೂ ನೆರವು ಸಿಗಬಹುದೆಂಬ ಆಶಾಭಾವನೆಯಿಂದ ಒಂದು ವಿಷಯವನ್ನು ಅವರ ಮುಂದೆ ಪ್ರಸ್ತಾಪಿಸುತ್ತಾರೆ, ``ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತು ಯಾವುದಾದರೊಂದು ಸರ್ಕಾರಿ ಹುದ್ದೆ ಪಡೆದು ಕೊಳ್ಳಲೇಬೇಕೆಂಬ ಅಪೇಕ್ಷೆ ನನಗಿದೆ. ನನಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಓದಿ ಹೇಳುವವರು ಯಾರಾದರೂ ಸಿಗಬಹುದಾ? ಕೇಳಿ ಹೇಳ್ತಿರಾ....?'' ಎಂದರು.