ಮಾಸಿಕ ಸ್ರಾವದ ಬಗ್ಗೆ ಇಂದಿಗೂ ಜನರಲ್ಲಿ ಮೂಢನಂಬಿಕೆ ಇದೆ. ಆ ದಿನಗಳಲ್ಲಿ ಮಹಿಳೆಯರನ್ನು ಅಪವಿತ್ರರು ಎಂದು ತಿಳಿಯಲಾಗುತ್ತದೆ. ಆದರೆ ಅದರ ಬಗೆಗಿನ ವೈಜ್ಞಾನಿಕ ನೋಟ ಬೇರೇನೋ ಹೇಳುತ್ತದೆ.....!
ಒಂದು ಎಲೆಕ್ಟ್ರಿಕ್ ಅಪ್ಲೆಯನ್ಸ್ ಕಂಪನಿಯ ಜಾಹೀರಾತಿನಲ್ಲಿ ಮಹಿಳೆಯರನ್ನು ಗೌರವಿಸುವ ಸಂದೇಶ ಕೊಡುತ್ತಲೇ `ಇಂದಿನ ಮಹಿಳೆ ಎಲ್ಲರಿಗೂ ಹೊರೆ' ಎಂಬ ವಾಕ್ಯವನ್ನೂ ಕೇಳಲಾಗುತ್ತದೆ. ಅವರಿಗೆ ಅರ್ಧ ಸ್ವಾತಂತ್ರ್ಯ ಕೊಡಲಾಗುತ್ತಿದೆ. ಆದರೆ ಎಲ್ಲ ಕಡೆ ಮಹಿಳಾ ಸಬಲೀಕರಣದ ಮಾತುಗಳು ಕೇಳಿಬರುತ್ತಿವೆ.
ಆಶ್ಚರ್ಯವೆಂದರೆ ಅದೇ ಸಮಾಜದಲ್ಲಿ ಹುಡುಗಿಯರು ಮತ್ತು ಮಹಿಳೆಯರು ಪೀರಿಯಡ್ಸ್ ಅಂದರೆ ಮಾಸಿಕ ಸ್ರಾವದ ಸಮಯದಲ್ಲಿ ದೈಹಿಕ ನೋವನ್ನು ಅನುಭವಿಸುತ್ತಾ ಅಪವಿತ್ರರಾದೆವೆಂಬ ಮಾನಸಿಕ ನೋವನ್ನೂ ಸಹಿಸಬೇಕಾಗುತ್ತದೆ. ಅದರ ಬಗ್ಗೆ ಮಾತಾಡುವುದು ಮತ್ತು ವಿಚಾರ ವಿಮರ್ಶೆ ಮಾಡುವುದನ್ನು ನಿರ್ಲಜ್ಜತನವೆಂದು ತಿಳಿಯಲಾಗುತ್ತದೆ. ಏಕೆಂದರೆ ಜನರಿಗೆ ಇಂದಿಗೂ ಈ ಜೈವಿಕ ಪ್ರಕ್ರಿಯೆಯ ವೈಜ್ಞಾನಿಕ ಮಜಲುಗಳ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಹುಡುಗಿಯರು ಹಾಗೂ ಮಹಿಳೆಯರನ್ನು ಈ ದಿನಗಳಲ್ಲಿ ಅಪವಿತ್ರರೆಂದು ತಿಳಿಯಲಾಗುತ್ತದೆ. ಅವರನ್ನು ಅಸ್ಪೃಶ್ಯರಂತೆ ತಿಳಿಯಲಾಗುತ್ತದೆ. ಅವರನ್ನು ಧಾರ್ಮಿಕ ಉತ್ಸವಗಳಲ್ಲಿ, ಹಬ್ಬಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧಿಸಲಾಗುತ್ತದೆ. ಪತಿಯಿಂದ ದೂರ ಬೇರೆ ಹಾಸಿಗೆಯಲ್ಲಿ ಮಲಗಬೇಕಾಗುತ್ತದೆ.
ಮೆನ್‌ಸ್ಟ್ರುಯೇಷನ್ ಅಥವಾ ಮಾಸಿಕ ಸ್ರಾವಕ್ಕೆ ಸಂಬಂಧಿಸಿದ ಈ ಮೂಢನಂಬಿಕೆಗಳು ಬಹಳ ವರ್ಷಗಳಿಂದ ನಡೆದುಬಂದಿವೆ. ಎಲ್ಲ ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಇದನ್ನು ಕಲಿಸುತ್ತಾರೆ. ಅದರಿಂದ ಅಭಿೃದ್ಧಿಯ ಹಾದಿಯಲ್ಲಿ ಅವರ ಆತ್ಮವಿಶ್ವಾಸಕ್ಕೆ ಆಳವಾದ ಪೆಟ್ಟು ಬೀಳುತ್ತದೆ ಹಾಗೂ ಅವರ ವ್ಯಕ್ತಿತ್ವದ ವಿಕಾಸ ನಿಂತುಹೋಗುತ್ತದೆ.
ಬದಲಾವಣೆಯ ಗಾಳಿ
ಭಾರತದಲ್ಲಿ ಚರ್ಚೆಗೆ ವರ್ಜ್ಯವೆಂದು ತಿಳಿಯಲಾಗುವ ಮೆನ್‌ಸ್ಟ್ರುಯೇಷನ್‌ನ್ನು ಚರ್ಚೆಯ ವಿಷಯವನ್ನಾಗಿ ಮಾಡಿ ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಝಾರ್ಖಂಡ್‌ನ ಗಢಾ ಗ್ರಾಮದ ಅದಿತಿ ಗುಪ್ತ ಶುರು ಮಾಡಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್.ಐ.ಡಿ) ಅಹಮದಾಬಾದ್‌ನಿಂದ ಪೋಸ್ಟ್ ಗ್ರ್ಯಾಜುಯೇಟ್ ಪದವಿ ಪಡೆದಿರುವ ಅದಿತಿ ಹೀಗೆ ಹೇಳುತ್ತಾರೆ, ಚಿಕ್ಕಂದಿನಲ್ಲಿ ಟಿವಿಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಬಗ್ಗೆ ಜಾಹೀರಾತು ಬಂದಾಗ ನಾನು ಅದರ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುತ್ತಿದ್ದೆ. ಆದರೆ ನನ್ನಮ್ಮ ಆ ಚಾನೆಲ್ ನ್ನು ಬದಲಾಯಿಸುತ್ತಿದ್ದರು. ನಾನು ಅದರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕೆಂದಿದ್ದೆ. ಆದರೆ ಅವರು ನೀನು ದೊಡ್ಡವಳಾದ ಮೇಲೆ ಎಲ್ಲ ತಿಳಿಯುತ್ತದೆ ಎನ್ನುತ್ತಿದ್ದರು. 12 ವರ್ಷದವಳಾಗಿದ್ದಾಗ ನನ್ನ ಪೀರಿಯಡ್ಸ್ ಶುರುವಾದಾಗ ಅಮ್ಮ ನನಗೆ ಹಳೆಯ ಬಟ್ಟೆ ಕೊಟ್ಟರು. ಅವರೂ ಅದನ್ನೇ ಉಪಯೋಗಿಸುತ್ತಿದ್ದರು ಆ ಸಮಯದಲ್ಲಿ ನನಗೆ ಹೊಟ್ಟೆಯಲ್ಲಿ ನೋವಾಗುತ್ತಿತ್ತು. ನನ್ನ ಇಡೀ ದಿನ ಹಾಳಾಗುತ್ತಿತ್ತು. ನನ್ನ ಬಟ್ಟೆಯನ್ನು ಸ್ವಚ್ಛಗೊಳಿಸುವಾಗ ತೊಂದರೆ ಇನ್ನೂ ಹೆಚ್ಚಾಗುತ್ತಿತ್ತು. ಪೀರಿಯಡ್ಸ್ ಮುಗಿದ ನಂತರ ಬೆಡ್‌ಶೀಟ್‌ಗಳನ್ನೂ ಒಗೆಯಬೇಕಾಗುತ್ತಿತ್ತು. ಮಾಸಿಕ ಸ್ರಾವಕ್ಕೆ ಸಂಬಂಧಿಸಿದ ಮೂಢನಂಬಿಕೆಗಳಿಂದಾಗಿ ಅಂಗಡಿಗೆ ಹೋಗಿ ಸ್ಯಾನಿಟರ್ ನ್ಯಾಪ್‌ಕಿನ್ ಖರೀದಿಸುವುದು ನಾಚಿಕೆಯ ವಿಷಯವಾಗಿತ್ತು. ಆದರೂ ಆ ಸಮಯದಲ್ಲಿ ನನ್ನ ಕುಟುಂಬ ನನಗೆ ಸಂಪೂರ್ಣ ಬೆಂಬಲ ನೀಡಿತು.