ಅಂಗವೈಕಲ್ಯವನ್ನು ದೊಡ್ಡ ಕೊರತೆಯಾಗಿ ಭಾವಿಸದೇ ಧನಲಕ್ಷ್ಮಿ ತಮ್ಮಂತೆಯೇ ಇರುವ ಇತರ ಅನೇಕ ವಿಕಲಚೇತನರಿಗೆ ಹೇಗೆ ಆಸರೆಯಾಗಿ ನಿಂತು ಆತ್ಮವಿಶ್ವಾಸದಿಂದ ಈ ಸಮಾಜವನ್ನು ಎದುರಿಸುತ್ತಿದ್ದಾರೆಂದು ವಿವರವಾಗಿ ತಿಳಿಯೋಣವೇ?

ಹದಿಹರೆಯ…..  ಮನದಲ್ಲಿ ನೂರಾರು ಆಸೆ…. ಸಾವಿರಾರು ಕಲ್ಪನೆ….. ಕನಸನ್ನೆಲ್ಲಾ ನನಸನ್ನಾಗಿಸಿಕೊಳ್ಳುವ ಹಂಬಲ. ಒಬ್ಬೊಬ್ಬರಿಗೂ ಒಂದೊಂದು ರೀತಿಯ ಹಸಿವು. ಪ್ರೀತಿ, ಪ್ರೇಮ, ಪ್ರಣಯ ಎನ್ನುವರು, ಓದಿನ ಹಂಬಲದವರು,  ಹಣ ಗಳಿಕೆ/ಕೆಲಸದ ಹಂಬಲ ಹೀಗೇ ಜೀವನದ ಪ್ರಮುಖ ಘಟ್ಟಗಳೆಡೆಗೆ ಗುರಿ ಸಾಗುತ್ತಿರುತ್ತದೆ. ಆದರೆ ಇದಕ್ಕೂ ಮೀರಿ ಕೆಲವೊಂದು ನಿರ್ಧಾರಗಳನ್ನು ಯುವಜನತೆ ತೆಗೆದುಕೊಂಡಾಗ ಅವರ ಮೇಲೆ ಹೆಮ್ಮೆ ಅಭಿಮಾನ ಹೆಚ್ಚುತ್ತೆ…. ಗೌರವ ಹುಟ್ಟುತ್ತದೆ. ಇಂತಹ ಕಾರ್ಯಕ್ಕಾಗಿ ಅಡಿಯಿಟ್ಟ ಹೆಮ್ಮೆಯ ಯುವತಿ ಧನಲಕ್ಷ್ಮಿ.

ಈಗ್ಗೆ 28 ವರ್ಷದ ಕೆಳಗೆ, ಮಂಡ್ಯದ ಕೆ.ಆರ್‌. ಪೇಟೆಯಲ್ಲಿ ಸರಸ್ವತಿಬಾಯಿ ಹಾಗೂ ರಾಮರಾಯರ ಪುತ್ರಿಯಾಗಿ, ನಾಲ್ಕು ಹೆಣ್ಣುಮಕ್ಕಳ ಪೈಕಿ ಮೂರನೆಯವರಾಗಿ ಜನಿಸಿದರು. ತಂದೆತಾಯಿ ನಾಲ್ಕೂ ಹೆಣ್ಣುಮಕ್ಕಳನ್ನು ಬಹಳ ಪ್ರೀತಿ ಹೆಮ್ಮೆಗಳಿಂದ ಸಾಕತೊಡಗಿದರು. ತಂದೆ ಬೆಳ್ಳಿ ಕಾಯಿನ್‌ ವ್ಯಾಪಾರ ಮಾಡುತ್ತಿದ್ದರು. ತಾಯಿ ಗೃಹಿಣಿ. ಹುಟ್ಟಿದ ಒಂದೂವರೆ ವರ್ಷಕ್ಕೆ ಜ್ವರ ಬಂದಿತು. ಅದು ಪೋಲಿಯೋಗೆ ತಿರುಗಿತು. ಮಗುವನ್ನು 3 ವರ್ಷ ಸತತ ಐಸಿಯುನಲ್ಲಿ ಅಡ್ಮಿಟ್‌ ಮಾಡಿದ್ದಾಯಿತು. ತಂದೆ ತಾಯಿ ಇದ್ದ ಆಸ್ತಿಯನ್ನು ಮಾರಿ ಮಗುವನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದಾಯಿತು. ಮಗುವಿಗಾಗಿ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಆದರೂ ಮಗು ಆಸ್ಪತ್ರೆಯಿಂದ ಹೊರಬಂದಾಗ ನಾರ್ಮಲ್ ಆಗಿ ಬರಲಿಲ್ಲ. ಪೋಲಿಯೋ ಪೀಡಿತ ಮಗುವಾಗಿ ಹೊರಬಂತು.  ತಂದೆ ತಾಯಿಗೆ ಆಘಾತವೇ ಆಯಿತು.

ಹೆಣ್ಣು ಮಗು ಬೇರೆ…. ಹೇಗೆ ಮುಂದಿನ ಜೀವನ? ಅದರ ಭವಿಷ್ಯ? ಬೆಟ್ಟದಷ್ಟು ಚಿಂತೆ ಮನದಲ್ಲಿ ಮನೆ ಮಾಡಿತು.

10ನೇ ತರಗತಿಯವರೆಗೂ ಮಗುವನ್ನು ಓದಿಸಿ ಬೆಳೆಸಿದರು. ಉತ್ತಮ ಅಂಕಗಳೊಟ್ಟಿಗೆ ಪಾಸಾಗುತ್ತ ಬೆಳೆಯುತ್ತ ಸಾಗಿದರು ಧನಲಕ್ಷ್ಮಿ. ಇವರ ಆತ್ಮೀಯ ಗೆಳತಿ ನಮಿತಾಂಜಲಿ. ಆಕೆಯೂ ಸಹ ಪಾರ್ಷಿಯಲ್ ಬ್ಲೈಂಡ್‌. ಇಬ್ಬರ ಸ್ನೇಹ ಬಹಳ ಗಾಢವಾಗಿತ್ತು. ತಮ್ಮ ಮನದಾಳದ ಮಾತುಗಳನ್ನು ಪರಸ್ಪರ ಶೇರ್‌ ಮಾಡಿಕೊಳ್ಳುತ್ತಿದ್ದರು. ಇಬ್ಬರ ಮನದಾಸೆಯೂ ಒಂದೇ ಆಗಿತ್ತು. ನಾವೀಗ ಅಂಗವಿಕಲರಾಗಿ ಏನೆಲ್ಲಾ ನೋವು ಅನುಭವಿಸುತ್ತಿರುವೆವೋ ನಮ್ಮನ್ನು ಜನ ನೋಡುವ ರೀತಿಯೇ ವಿಭಿನ್ನ. ಅದರಲ್ಲೂ ಹಳ್ಳಿಗಾಡಿನಲ್ಲಂತೂ ಇನ್ನೂ ವಿಭಿನ್ನ.

ಹಾಗಾಗಿ ನಮ್ಮಂತಿರುವ ಹಲವಾರು ಮಕ್ಕಳಿಗೆ ನಾವು ದಾರಿದೀಪವಾಗೋಣವೇ ಎಂದು ಕನಸು ಕಾಣುತ್ತಾ ಕೂರುತ್ತಿದ್ದರು ಈ ಇಬ್ಬರು ಮುಗ್ಧ ಹುಡುಗಿಯರು. ಬಹಳ ಚಿಕ್ಕವಯಸ್ಸಿನಲ್ಲೇ ಈ ಆಸೆಗಳು ಚಿಗುರೊಡೆದದ್ದು ವಿಶೇಷವೇ ಹೌದು. ಅದೊಂದು ದಿನ ಧನಲಕ್ಷ್ಮಿಗೇ ದೊಡ್ಡ ಆಘಾತವೇ ಆಯಿತು. ಮನೆಯಲ್ಲಿನ ಕೆಲವು ಚುಚ್ಚು ಮಾತುಗಳು, ಹಿಂಸೆ ತಾಳಲಾರದೆ ಆತ್ಮೀಯ ಗೆಳತಿ ನಮಿತಾಂಜಲಿ ಆತ್ಮಹತ್ಯೆಗೆ ಶರಣಾದಳು. ಇದರಿಂದ ಧನಲಕ್ಷ್ಮಿ ಅಪಾರ ನೋವು ಅನುಭವಿಸಿದಳು. ಇಂದು ಗೆಳತಿ ದೈಹಿಕವಾಗಿ ನನ್ನೊಂದಿಗಿಲ್ಲ. ಆದರೆ ನನ್ನ ಮನದಲ್ಲಿ ಸದಾ ನೆಲೆಸಿದ್ದಾಳೆ. ಅವಳ ಆಸೆಗಳನ್ನು ಕನಸುಗಳನ್ನು ನಾನು ನೆರವೇರಿಸುತ್ತೇನೆ, ಎನ್ನುತ್ತಾ ಆ ಯಶಸ್ಸಿನ ಹಾದಿಯ ಹಿಂದೆ ಸಾಗುತ್ತಿದ್ದಾರೆ ಧನಲಕ್ಷ್ಮಿ.

ಇದಾದ ಕೆಲವೇ ದಿನಗಳಲ್ಲಿ ತಂದೆತಾಯಿಯೂ ಕೆಲವು ದಿನಗಳ ಅಂತರದಲ್ಲಿ ಇಹಲೋಕವನ್ನು ತ್ಯಜಿಸಿದರು. ಸುಖವಾಗಿ ಸಾಕಿದ ತಂದೆತಾಯಿ ಇಲ್ಲವಾದಾಗ ದಿಕ್ಕುತೋಚದಂತಾಯಿತು. ಚಿಕ್ಕಪ್ಪನ ಮನೆ ಆಸರೆಯಾಯಿತು. ಆಗಲೂ ತನ್ನ ಸ್ವಾಭಿಮಾನದ ಕಿಚ್ಚು ಮನದಲ್ಲಿ ನೆಲೆಯೂರಿತ್ತು. ಸ್ಟೀಲ್‌ ಪಾತ್ರೆಗಳನ್ನು ಫುಟ್‌ಪಾತ್‌ನಲ್ಲಿ ಮಾರುತ್ತಾ ತನ್ನ ಜೀವನಕ್ಕೆ ಬೇಕಾದಷ್ಟು ಕೊನೆಗೊಮ್ಮೆ ಮನೆಗೊಂದಷ್ಟು ಸಹ ನೀಡುತ್ತಾ ಬಂದರು.

ಈಗಿನ ಕಾಲದಲ್ಲಿ ಇವೆಲ್ಲ ಎಷ್ಟು ದಿನ ನಡೆಯುತ್ತೆ? ಅಂದು ಅವರು ನನ್ನನ್ನು ಬಹಳ ಪ್ರೀತಿ ಪ್ರೇಮದಿಂದ ನೋಡಿದ್ದರೆ ನಾನಿಂದು ಈ ಸ್ಥಿತಿಗೆ ಬರಲಾಗುತ್ತಿರಲಿಲ್ಲ. ಅವರು ಅಂದು ನನಗೆ ಹಾಗೆ ಮಾಡಿದ್ದೇ ನನಗಿಂದು ಈ ಬೆಳವಣಿಗೆಗೆ ಸಹಕಾರವಾಯಿತು. ಅಂತೂ ಇಂತೂ ಪಿಯುಸಿಯನ್ನು ಚಿಕ್ಕಪ್ಪನ ಮನೆಯಲ್ಲಿದ್ದಾಗ ಮುಗಿಸಿ ಮನೆ ಮನಗಳಿಂದ ಹೊರಬಂದರು.

ಜೀವನದ ಗುರಿಯೇನೋ ಸ್ಪಷ್ಟವಾಗಿದೆ. ಆದರೆ ಎತ್ತ ಸಾಗಬೇಕು, ಹೇಗೆ ನಡೆಯಬೇಕು? ಜೊತೆಗೆ ಯಾರು ಬರುವವರು? ತನ್ನ ದೇಹದ ಸ್ಥಿತಿಯನ್ನಂತೂ ನೆನೆಸಿಕೊಂಡು ವ್ಯಥೆಯೇ ಬೆಟ್ಟದಂತಾಯಿತು. ಊರು ಬಿಟ್ಟಾಯಿತು. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡರು. ಗೆಳತಿಯ ಹೆಸರಿನಲ್ಲಿ 2004ರಲ್ಲಿ ಸಂಸ್ಥೆಯೊಂದನ್ನು ತೆರೆದೇಬಿಟ್ಟರು. ತನ್ನ ಬಳಿಯಿದ್ದ 3.70 ಲಕ್ಷ, ಕೊಂಚ ಒಡವೆ, ಬಾಂಡ್‌ಗಳ ಸಹಾಯದಿಂದ ಪ್ರಾರಂಭಿಸಿದರು.

ಇವರಂತಿರುವವರೇ ನಾಲ್ವರು ಬಂದು ಸೇರಿಕೊಂಡರು. ಒಟ್ಟು ಐದು ಜನರಿಂದ ಸಂಸ್ಥೆ ಪ್ರಾರಂಭವಾಯಿತು. ಹಿಂಭಾಗಕ್ಕೆ ಮನೆ ಕೊಟ್ಟರು. ಸಂಸ್ಥೆಯ ಬೋರ್ಡ್‌ ಹಾಕಲು ಅನುಮತಿ ನೀಡದಾದರು. ಇವರೋ 5 ತಿಂಗಳಿಗೆ ಬಾಡಿಗೆ ಹಣವನ್ನು ಜಾಸ್ತಿ ಮಾಡಿದರು. ಮನೆಯ ಓನರ್‌ ಕಿರಿಕಿರಿ ತಾಳಲಾರದೆ ಕೋಣನಕುಂಟೆಗೆ ಶಿಫ್ಟ್ ಆದರು. ಅಲ್ಲಿ 1 ವರ್ಷ ಇದ್ದಿದ್ದಾಯಿತು. ಸಂಸ್ಥೆ ಸ್ವಲ್ಪ ಮಟ್ಟಿಗೆ ಬೆಳವಣಿಗೆ ಕಂಡಿತು. ಅಲ್ಲಿಯೂ ಸಹಾ ತೊಂದರೆಗಳು ಮತ್ತೆ ಮತ್ತೆ ಬಂದೊದಗಿದಾಗ ಎಲ್ಲರನ್ನೂ ಕರೆದುಕೊಂಡು ಹೆಣ್ಣೂರು ದಿಣ್ಣೆಯ ಭೈರತಿಗೆ ವರ್ಗವಾದರು. ಈಗ ಸ್ವಲ್ಪ ನೆಮ್ಮದಿಯಾಗಿರುವರು.

ಪಬ್ಲಿಕ್‌ ಟಿ.ವಿಯ ರಂಗನಾಥ್‌ರ ಮುಖೇನ ಪ್ರತಿ ತಿಂಗಳೂ ಮನೆಯ ಬಾಡಿಗೆ ಸಿಗುತ್ತಿದೆ. ಮೇಲೆ ಹುಡುಗರಿಗೆ, ಕೆಳಗಿನ ಮನೆ ಹೆಣ್ಣುಮಕ್ಕಳಿಗೆ. ಕುರುಡು ಹಾಗೂ ಅಂಗವಿಕಲ ಮಕ್ಕಳ ವಸತಿಗೃಹ ಇದಾಗಿದೆ. 20 ಜನರಿರುವರು. ಪಬ್ಲಿಕ್‌ ಟಿ.ವಿಯ ಬೆಳಕು ಕಾರ್ಯಕ್ರಮದ ಮುಖೇನ ಬೆಳಕಿಗೆ ಬಂದ ಈ ಸಂಸ್ಥೆಗೆ ಕೃಷ್ಣಾರೆಡ್ಡಿ ಹಾಗೂ ಗಣೇಶ್‌ ಎಂಬುವವರು ತಿಂಗಳಿಗೊಂದಿಷ್ಟು ಆಹಾರ ಪದಾರ್ಥಗಳನ್ನು ತಂದುಕೊಡುತ್ತಿರುವರು.

“ಸರ್ಕಾರ ಕೊಡುವ ಪೆನ್ಶನ್‌, 4 ಜನ ದುಡಿಯುವವರು ಅವರಿಂದ ಸ್ವಲ್ಪ ಹಣ, ಫಂಡ್‌ ರೈಸ್‌ ಮಾಡುವ ಮುಖೇನ ಕೊಂಚ ಮಟ್ಟಿಗೆ ಇದೆ. ಪ್ರಾರಂಭದಲ್ಲಿ ಹಸಿದ ದಿನಗಳೆಷ್ಟೊ? ಈಗಲೂ ಕಷ್ಟವೇ ಇದೆ. ದಾನಿಗಳು ಕೊಡೋ ಒಂದು ಮೂಟೆ ಅಕ್ಕಿ ರಾಗಿ ಎಷ್ಟು ದಿನ ಬಂದಾತು…? ನಿತ್ಯ ಕರಗೋ ವಸ್ತುಗಳು ಗಟ್ಟಿಯಾಗಿ ನಿಲ್ಲಬೇಕಾಗಿದೆ. ಸವಲತ್ತುಗಳು ಬೇಕಾಗಿದೆ, ಪ್ರಯತ್ನ ನಿರಂತರವಾಗಿದೆ. ಒಂದು ನೆಲೆ ನಿಲ್ಲುವ ಹಾದಿಯಲ್ಲಿ ಸಾಗುತ್ತಿದ್ದೇವೆ.” ಎನ್ನುತ್ತಾರೆ.

15 ವರ್ಷದ ಮೇಲಿನವರೇ ಇರುವವರು. ಓದುವವರಿದ್ದಾರೆ, ಕೈಲಾಗದವರಿದ್ದಾರೆ, ತಾಯ್ತಂದೆ ಇರುವವರಿದ್ದಾರೆ, ಇಲ್ಲದವರಿದ್ದಾರೆ. ಹೀಗೇ ಸಂಸ್ಥೆಯ ಕಷ್ಟಗಳು ಬಹಳವೇ ಇದೆ.

ಇವನ್ನು ಈ ಸಂಸ್ಥೆಯ ಕಲಬುರ್ಗಿಯಲ್ಲಿ ಬಿಎಸ್ವಿ (ಬ್ಯಾಚುಲರ್‌ ಆಫ್‌ ಸೋಷಿಯಲ್ ವರ್ಕ್‌) ಓದುತ್ತಿರುವ ಸಿದ್ದು ಕಾರ್ಯದರ್ಶಿ. ಈತನೂ ಬ್ಲೈಂಡ್‌. ಧನಲಕ್ಷ್ಮಿಗೆ ಬಟ್ಟೆ ಹೊಲಿಯುವ ಅಭ್ಯಾಸ ಚಿಕ್ಕಂದಿನಿಂದಲೂ ಇದೆ. ಅದೇ ಈಗ ವೃತ್ತಿ. ಬಟ್ಟೆ ಹೊಲಿದು ಅದರ ಮುಖೇನ ಅಲ್ಪಸ್ವಲ್ಪ ಹಣ ಸಂಪಾದನೆ. ಇಷ್ಟೆಲ್ಲಾ ಕಷ್ಟಪಟ್ಟು ಮಕ್ಕಳನ್ನು ಸಾಕುತ್ತಿರುವ ಧನಲಕ್ಷ್ಮಿಯ ಆಸಕ್ತಿಗೆ ಅವರ ಕನಸಿಗೊಂದು ಸೆಲ್ಯೂಟ್‌…..!

ಇವರ ಹಂಬಲ, ಧ್ಯೇಯವೆಂದರೆ ಮುಂದೊಂದು ದಿನ ಜನರ ಸಹಕಾರ, ದೇವರ ಅನುಗ್ರಹದೊಟ್ಟಿಗೆ ಈ ಮಕ್ಕಳ ಜೊತೆ ಸಾಮಾನ್ಯ ಮಕ್ಕಳ ಶಾಲೆಯೊಂದನ್ನು ತೆರೆಯುವ ಮಹದಾಸೆಯಿದೆ.

ನಾವಿಷ್ಟೆಲ್ಲ ಮಾತನಾಡುತ್ತಿದ್ದಾಗ ಅಲ್ಲೇ ಪಟಪಟ ಓಡಾಡುತ್ತಿದ್ದ ಹುಡುಗಿಯೊಬ್ಬಳು ಅಡುಗೆ ಮಾಡಿ, ಮನೆ ಕ್ಲೀನ್‌ ಮಾಡಿದ್ದಾಗಿತ್ತು. ಹೆಸರು ಅಕ್ಕಮ್ಮದೇವಿ [ಕಾಲೇಜಿನಲ್ಲಿ ಲಾ‌ ಓದುತ್ತಿದ್ದಾಳೆ). ಹೀಗೆ ಇಲ್ಲಿರುವ ಪ್ರತಿಯೊಬ್ಬರಿಗೂ ಟ್ರೇನಿಂಗ್‌ ದೊರೆಯುತ್ತದೆ. ಮನೆಯ ಪ್ರತಿ ಕೆಲಸ ಕಾರ್ಯಗಳ ತರಬೇತಿ ನೀಡುತ್ತಾರೆ. ಮೇಘಾಲಯದಿಂದ ಬಂದ ಕುರುಡು ಹೆಣ್ಣುಮಗಳೊಬ್ಬಳು, “ಅಕ್ಕಾ ಸಾಮಾನು ತರೋಕ್ಕೆ ಹೋಗ್ತೀನಿ,” ಎಂದು ಹೊರಟಳು. ಕನ್ನಡ ಬರೋಲ್ಲ ಎಂಬ ಕಾರಣಕ್ಕೆ ಇನ್ನೂ ಇವಳಿಗೆ ನೌಕರಿ ದೊರೆತಿಲ್ಲ.

ಇನ್ನೂ ಧನಲಕ್ಷಿಯ ವಿಶೇಷ ಸಂಗತಿಯೊಂದಿದೆ. ಇದುವರೆವಿಗೂ ಮೂರು ಮದುವೆಗಳನ್ನು ಮಾಡಿಸಿದ್ದಾರೆ! ಮೊದಲನೇ ಮದುವೆ ನಾರ್ಮಲ್ ಆಗಿರುವ ಬಡ ಜೋಡಿಯದ್ದು. ಎರಡನೆಯದು ಇಬ್ಬರೂ ಕುರುಡರು. ಮೂರನೆಯದು ಕುಂಟ ಹಾಗೂ ಕುರುಡರ ಮದುವೆ. ಎಲ್ಲ ಶಾಸ್ತ್ರೋಕ್ತವಾಗಿ ದೇವಸ್ಥಾನದಲ್ಲಿ, ಪೊಲೀಸರ ಸಮ್ಮುಖದಲ್ಲಿ ನಡೆದಿದೆ. ಮದುವೆ ಮಾಡಿದ್ದಲ್ಲದೇ ಅವರಿಗೆ ಮನೆಯೊಂದನ್ನು ಮಾಡಿಕೊಟ್ಟು ಹಾಲುಕ್ಕಿಸಿ ಹೊಸ ಸಂಸಾರಕ್ಕೆ ಅಣಿ ಮಾಡಿಕೊಟ್ಟಿರುವರು. ಈ ಜೋಡಿಯಲ್ಲೊಂದು ಜೋಡಿ ಈಗ ತಂದೆತಾಯಿಯಾಗುವ ಖುಷಿಯಲ್ಲಿದ್ದಾರೆ. ಅವರ ವಿಷಯ ಬರುತ್ತಿದ್ದಂತೆ ಬಹಳವೇ ಖುಷಿಯಾದರು ಧನಲಕ್ಷ್ಮಿ. ಅವಳನ್ನು ಸೀಮಂತ ಹಾಗೂ ಬಾಣಂತನಕ್ಕೆ ಕರೆತರುವ ಹುಮ್ಮಸ್ಸಿನಲ್ಲಿದ್ದಾರೆ.

ಇವರ ಮನಚುಚ್ಚುವ ಸಂಗತಿಯೊಂದನ್ನು ನೆನೆದು ಬೇಸರಿಸಿಕೊಂಡರು. ಗರ್ಭಿಣಿಯಾಗಿದ್ದ ಕುರುಡು ಹೆಣ್ಣುಮಗಳೊಬ್ಬಳು ತನ್ನ ಗಂಡನೊಂದಿಗೆ ಬಂದು ಇವರೊಟ್ಟಿಗೆ ಸೇರಿಕೊಂಡಳು. ಇವರ ತರಬೇತಿಯಲ್ಲಿ ಅಡುಗೆ ಕೆಲಸ ಕಾರ್ಯಗಳನ್ನು ಕಲಿತುಕೊಂಡಳು. ಗರ್ಭಿಣಿಯೆಂದು ಆರೈಕೆ ಮಾಡಿದ್ದೂ ಆಯಿತು. ಕೆಲಸ ಕಾರ್ಯವೆಲ್ಲ ಕಲಿತು, ಮಗು ಹುಟ್ಟಿದ ನಂತರ ಹೇಳದೇ ಕೇಳದೇ ಹೋಗಿದ್ದು ಬಹಳ ಬೇಸರ ತಂದಿತು. ಯಾಕೆ ಹಾಗೆ ಮಾಡಿದರೆಂದು ಅದಕ್ಕೆ ಕಾರಣವೇನೆಂದೂ ಈಗಲೂ ತಿಳಿಯುತ್ತಿಲ್ಲ…. ಆಕೆ ಹಾಗೆ ಮಾಡಬಾರದಿತ್ತು ಎಂದು ನೊಂದು ನುಡಿದರು.

ಇವರ ಈ ಕೆಲಸಗಳನ್ನು ಗುರುತಿಸಿದ ರಂಗಶ್ರೀ ಕಲಾಸಂಸ್ಥೆಯ ವತಿಯಿಂದ ಉತ್ತಮ ಸಮಾಜ ಸೇವಕಿ ಪ್ರಶಸ್ತಿ, ಅಂತಾರಾಷ್ಟ್ರೀಯ ಲಯನ್ಸ್  ಸಂಸ್ಥೆ ವತಿಯಿಂದ ಸಮಾಜಸೇವಕಿ ಪ್ರಶಸ್ತಿ ಹಾಗೂ ಸನ್ಮಾನ ದೊರೆತಿದೆ.

ಅಂಗವಿಕಲರ ತರಬೇತಿ ಕಾರ್ಯಾಗಾರದಲ್ಲಿ ಒಬ್ಬರು ಪರಿಚಿತರಾದರು. 15 ದಿನ ಜೊತೆಗಿದ್ದರು. ತನ್ನ ಪ್ರತಿಯೊಂದು ಕೆಲಸಕ್ಕೂ ಇನ್ನೊಬ್ಬರ ಸಹಾಯ ಕೇಳುತ್ತಿದ್ದರು. ಯಾಕೋ ಈ ಸೀನ್‌ ನೋಡಿ ಬೇಜಾರಾಗಿ…. ನೀನು ಈ ರೀತಿ ಡಿಪೆಂಡ್‌ ಆಗಬಾರದು. ನನ್ನ ದೇಹದ ಅಂಗಾಂಗಗಳಷ್ಟು ನಿನಗೆ ಊನವಿಲ್ಲ. ನಿನ್ನ ಕೆಲಸ ನೀನು ಮಾಡಿಕೊಳ್ಳುವಷ್ಟು ನೀನು ಸಮರ್ಥಳು. ಆದರೂ ತುಂಬಾ ಸಹಾಯ ಪಡೆಯುತ್ತಿರುವೆ ಸ್ವಾಭಿಮಾನದಿಂದ ಬದುಕು, ನಿನ್ನ ಕೈಲಾಗುತ್ತೆ, ಸಹಾಯವಿಲ್ಲದೇ ಬದುಕು ಎಂದಾಗ ಅವಳೂ ಕೊಂಚ ಯೋಚಿಸಿ ಹೌದು ತಾನು ಮಾಡುತ್ತಿರುವುದು ತಪ್ಪು ಹಾಗೂ ಸೋಮಾರಿತನ ಎಂದರಿವಾಗಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಿದ್ದಾಳೆ ಎಂದು ಹೇಳಿ ಹೆಮ್ಮೆಪಟ್ಟರು.

ತಮ್ಮಲ್ಲಿನ ಹಲವು ನ್ಯೂನತೆಗಳೊಟ್ಟಿಗೆ ಬೇರೆಯವರಿಗೆ ಬದುಕನ್ನು ಕಟ್ಟಿಕೊಡುತ್ತಿರುವ, ಅವರ ಏಳಿಗೆ ಜೀವನಕ್ಕಾಗಿ ಶ್ರಮ ಪಡುತ್ತಿರುವ ಧನಲಕ್ಷ್ಮಿಗೆ ನಮ್ಮದೊಂದು ನಮನ….. ಉತ್ಸುಕತೆಗೊಂದು ಹ್ಯಾಟ್ಸ್ಆಫ್‌…!

– ಸವಿತಾ ನಾಗೇಶ್‌

Tags:
COMMENT