ಪ್ರಮೋಟರ್ ಕಾರ್ಯನಿರ್ವಾಹಕ ಅಧ್ಯಕ್ಷರು, ಮೆಟ್ರೋ ಪೊಲೀಸ್
ಹೆಲ್ತ್ ಕೇರ್ ಫೈನಾನ್ಸ್ ನಲ್ಲಿ ಪದವಿ ಪಡೆದ ಅಮೀರಾ ಶಾಹ್ ವೈದ್ಯಕೀಯ ಉದ್ಯಮದಲ್ಲಿ ಮೆಟ್ರೋ ಪೊಲೀಸ್ ಹೆಲ್ತ್ ಕೇರ್ ನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು.
ಅಮೀರಾ ಶಾಹ್ ಮೆಟ್ರೋ ಪೊಲೀಸ್ ಹೆಲ್ತ್ ಕೇರ್ ಲಿಮಿಟೆಡ್ ನ ಪ್ರವರ್ತಕರು ಹಾಗೂ ಕಾರ್ಯ ನಿರ್ವಾಹಕ ಅಧ್ಯಕ್ಷೆ. ಅಮೀರಾ ಮೆಟ್ರೋ ಪೊಲೀಸ್ ನ್ನು ಭಾರತ ಮತ್ತು ಆಫ್ರಿಕಾದಾದ್ಯಂತ ಎರಡನೇ ಅತಿದೊಡ್ಡ ರೋಗ ನಿರ್ಣಯ ಸರಪಳಿಯಾಗಿ ನಿರ್ಮಿಸಿದ್ದಾರೆ. ಮೆಟ್ರೋ ಪೊಲೀಸ್ ಡಯಾಗ್ನೋಸ್ಟಿಕ್ಸ್ ಇಂದು ಭಾರತದ 700ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಮೀರಾರ ಅಸಾಧಾರಣ ಕೌಶಲ್ಯ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸಿ, ಅವರು 2021ರ ಹೆಲ್ತ್ ಕೇರ್ ನಲ್ಲಿ `ವರ್ಷದ ಉದ್ಯಮಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಪ್ರಶಸ್ತಿಯನ್ನು ಪಡೆದ ಕೇವಲ ಮೂವರು ಮಹಿಳೆಯರಲ್ಲಿ ಒಬ್ಬರು ಹಾಗೂ ಅತ್ಯಂತ ಕಿರಿಯರು ಎಂಬ ಹೆಗ್ಗಳಿಕೆ ಅಮೀರಾ ಶಾಹ್ ರಿಗೆ ಸಲ್ಲುತ್ತದೆ. ಅಲ್ಲದೆ ಅವರನ್ನು ಪೇರ್ಬ್ಸ್ ಏಷ್ಯಾ `ಏಷ್ಯಾದ ಶಕ್ತಿಶಾಲಿ ಉದ್ಯಮಿ' ಎಂದು ಹೆಸರಿಸಿದೆ ಹಾಗೂ ಬಿಸ್ ನೆಸ್ ಟುಡೇ ಮತ್ತು ಫಾರ್ಚೂನ್ ಇಂಡಿಯಾ ವ್ಯವಹಾರದಲ್ಲಿ 50 ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಅಮೀರಾ ಶಾಹ್ ಒಬ್ಬರು ಎನ್ನಲಾಗಿದೆ.
ಅಮೀರಾ ಆಸ್ಟ್ರಿನ್ ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಫೈನಾನ್ಸ್ ಪದವೀಧರೆ ಹಾಗೂ ಹಾರ್ವರ್ಡ್ ಬಿಸ್ ನೆಸ್ ಸ್ಕೂಲ್ ನಲ್ಲಿ ಮಾಲೀಕ/ ಅಧ್ಯಕ್ಷ ನಿರ್ವಹಣಾ ಕಾರ್ಯಕ್ರಮದ ಹಳೆಯ ವಿದ್ಯಾರ್ಥಿನಿ.
ಇಂದು ನಾವು ಅಮೀರಾರ ಶಿಕ್ಷಣ ಹಾಗೂ ವೃತ್ತಿ ಪಯಣದ ಬಗ್ಗೆ ಮಾತುಕತೆ ನಡೆಸೋಣ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಸ್ಛೂರ್ತಿ ದೊರೆಯುತ್ತದೆ ಎಂಬ ಆಶಯದೊಂದಿಗೆ ಅವರ ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
ನಿಮ್ಮ ಕುಟುಂಬ ಹಾಗೂ ಶೈಕ್ಷಣಿಕ ವಿಷಯಗಳ ಬಗ್ಗೆ ತಿಳಿಸಬಹುದೇ?
ನನ್ನ ಬಾಲ್ಯ ಬಹಳ ಅದ್ಭುತವಾಗಿತ್ತು. ನನ್ನ ಪೋಷಕರಿಬ್ಬರೂ ವೈದ್ಯರು. ಅವರು ಶಿಕ್ಷಣ ಹಾಗೂ ಕಠಿಣ ಪರಿಶ್ರಮದ ಮೇಲೆ ಬಹಳ ನಂಬಿಕೆ ಇಟ್ಟರು. ಅವರು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೂ ಕೆಲಸ ಮಾಡುತ್ತಿದ್ದರು ಎಂಬುದನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ. ಅವರು ನನ್ನನ್ನು ಸಹ ಅದೇ ನೀತಿ ಹಾಗೂ ಮೌಲ್ಯಗಳೊಂದಿಗೆ ಬೆಳೆಸಿದರು.
ಬಾಲ್ಯದಿಂದಲೂ ನನಗೆ ಮೂರು ಮೌಲ್ಯಗಳನ್ನು ಕಲಿಸಲಾಯಿತು. ಅವೆಂದರೆ ಶಿಕ್ಷಣ, ಕಠಿಣ ಪರಿಶ್ರಮ ಹಾಗೂ ನಮ್ರತೆ. ಇದಲ್ಲದೆ ನನ್ನ ಪೋಷಕರು ಎಂದಿಗೂ ಹುಡುಗ ಮತ್ತು ಹುಡುಗಿಯರ ನಡುವೆ ವ್ಯತ್ಯಾಸವನ್ನು ತೋರಿಸಲಿಲ್ಲ. ಹುಡುಗರನ್ನು ಕೈಬಿಡಬೇಕು ಆದರೆ ಹುಡುಗಿಯರನ್ನು ರಕ್ಷಿಸಬೇಕು ಅಥವಾ ಹುಡುಗಿಯರು ಮದುವೆಯಾಗಿ ಹೋಗುತ್ತಾರೆ ಎಂದು ಹುಡುಗರಿಗೆ ಮಾತ್ರ ಹೆಚ್ಚಿನ ಶಿಕ್ಷಣ ನೀಡಬೇಕು ಎಂಬುದನ್ನು ಎಂದಿಗೂ ಒಪ್ಪುವುದಿಲ್ಲ ಎನ್ನುತ್ತಿದ್ದರು.
ಹುಡುಗರು ಹಾಗೂ ಹುಡುಗಿಯರು ಇಬ್ಬರೂ ಒಂದೇ ರೀತಿಯ ಸಾಮರ್ಥ್ಯ ಹೊಂದಿರುತ್ತಾರೆ ಮತ್ತು ಅವರಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದು ನಮ್ಮ ಕೆಲಸ ಎಂದು ಅವರು ಹೇಳುತ್ತಿದ್ದರು. ನಾನು 7-8 ದಿನಗಳ ಪಾದಯಾತ್ರೆಗೆ ಹೋಗುತ್ತಿದ್ದಾಗ, ನನ್ನ ಪೋಷಕರು ಎಂದಿಗೂ ನನ್ನನ್ನು, `ನೀನು ಹೇಗೆ ಹೋಗ್ತೀಯಾ? ನಿನಗೆ ಏನಾದರೂ ತೊಂದರೆಯಾಯಿತೆ? ನಿನಗೆ ರಕ್ಷಣೆ ಬೇಕೇ ಎಂದಾಗಲೀ ಅಥವಾ ಹುಡುಗರು ಸಹ ಬರುತ್ತಿದ್ದಾರೆ,'' ಎಂದೂ ಸಹ ಎಂದಿಗೂ ಹೇಳಿಲ್ಲ ಎಂಬುದು ನನಗೆ ನೆನಪಿದೆ. ಅದಕ್ಕೆ ಬದಲಾಗಿ ಅವರು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು ಹಾಗೂ ನನ್ನಲ್ಲಿ ಸಂಪೂರ್ಣ ನಂಬಿಕೆ ಇಟ್ಟರು.





