ಮಕ್ಕಳಿಗೆ ಈಗಾಗಲೇ ಸಾಕಷ್ಟು ವಿಧವಾದ ವಿನ್ಯಾಸಗಳಿರುವ ಆದರೆ ರೇಷ್ಮೆಯಲ್ಲಿ ಸಿದ್ಧವಾದ ಸಾಂಪ್ರದಾಯಿಕ ಉಡುಗೆಗಳಿಲ್ಲ. ಅವುಗಳಲ್ಲಿ ಇನ್ನೂ ವಿಭಿನ್ನವಾದ ಉಡುಗೆಗಳನ್ನು ವಿನ್ಯಾಸ ಮಾಡಿದ್ದೇನೆ. ಮುಂದಿನ  ಸೆಪ್ಟೆಂಬರ್‌ ತಿಂಗಳಲ್ಲಿ ಫ್ಯಾಷನ್‌ ಶೋ ಆಯೋಜಿಸಿ ಎಲ್ಲ ಪ್ರದರ್ಶನ ಮಾಡುತ್ತೇನೆ. ಇದರ ಜೊತೆಗೆ ದೊಡ್ಡವರಿಗೂ ವಿಭಿನ್ನ ವಿನ್ಯಾಸ ಮಾಡಲು ಆಲೋಚಿಸಿದ್ದೇನೆ, ಎನ್ನುತ್ತಾರೆ ಅರ್ಪಿತಾ ರಾಜ್‌ ರಂದೀಪ್‌.

ಫ್ಯಾಷನ್‌ ಈಗ ಮಕ್ಕಳ ಲೋಕವನ್ನೂ ಆವರಿಸಿಕೊಳ್ಳುತ್ತಿದೆ. ಪೋಷಕರೂ ಕೂಡ ತಮ್ಮ ಮಕ್ಕಳಿಗೆ ವಿಭಿನ್ನ ವಿನ್ಯಾಸದ ಬಟ್ಟೆಗಳನ್ನು ತೊಡಿಸಿ ಆ ಬಟ್ಟೆಯಲ್ಲಿ ಅವರು ಸುಂದರವಾಗಿ ಕಾಣುವುದನ್ನು ನೋಡಿ ಸಂತೋಪಪಡುತ್ತಾರೆ.

ಹಾಗಾಗಿ ಮಕ್ಕಳ ವಿಭಿನ್ನ ವಿನ್ಯಾಸದ ಫ್ಯಾಷನೆಬಲ್ ಡ್ರೆಸ್‌ಗಳಿಗೆ ಈಗ ಬೇಡಿಕೆಯೂ ಹೆಚ್ಚಾಗಿದೆ. ಅಂದ ಮೇಲೆ ಮಕ್ಕಳ ಬಟ್ಟೆಗಳ ವಿನ್ಯಾಸ ಮಾಡುವವರ ಸಂಖ್ಯೆಯೂ ಕ್ರಮೇಣ ಹೆಚ್ಚಾಗುತ್ತಿದೆ. ಫ್ಯಾಷನ್‌ ಕ್ಷೇತ್ರದಲ್ಲಿ ಅನೇಕರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಮಕ್ಕಳ ಬಟ್ಟೆಗಳನ್ನು ವಿನ್ಯಾಸ ಮಾಡುವವರು ಅಪರೂಪ.

ಅಂಥದ್ದೊಂದು ಅಪರೂಪದ ಪ್ರತಿಭೆ ಮೈಸೂರಿನಲ್ಲಿದೆ. ಮೈಸೂರಿನ ಜಿಲ್ಲಾಧಿಕಾರಿ ಆಗಿದ್ದ ಡಿ. ರಂದೀಪ್‌ರ ಪತ್ನಿ ಅರ್ಪಿತಾ ರಾಜ್‌ರಂದೀಪ್‌, ಮಕ್ಕಳಿಗಾಗಿ ವೈವಿಧ್ಯಮಯ ವಿನ್ಯಾಸವನ್ನು ರೂಪಿಸಿದ್ದಾರೆ. ಇತ್ತೀಚೆಗೆ ಮಕ್ಕಳ ಬಟ್ಟೆಗಳನ್ನು ವಿಭಿನ್ನ ಹಾಗೂ ಆಕರ್ಷಕವಾಗಿ ವಿನ್ಯಾಸಗೊಳಿಸಿ ಜಯಂತಿ ಬಲ್ಲಾಳ್‌ ಅವರೊಂದಿಗೆ ಫ್ಯಾಷನ್‌ ಶೋ ನಡೆಸಿದ್ದರು. ಇಶ್‌ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ನೀವು ಫೇಸ್‌ಬುಕ್‌ನಲ್ಲಿ `ಇಶ್‌’ ಸರ್ಚ್‌ ಮಾಡಿದರೆ, ಅವರ ಹೊಸ ವಿನ್ಯಾಸಗಳನ್ನು ನೋಡಬಹುದು. ಈ ಮೂಲಕ ತಾವು ವಿನ್ಯಾಸಗೊಳಿಸಿರುವ ವಿನೂತನ ಹಾಗೂ ವೈಶಿಷ್ಟ್ಯಪೂರ್ಣ ಆಕರ್ಷಕ ಧಿರಿಸುಗಳನ್ನು ಆನ್‌ಲೈನ್‌ ಮೂಲಕ ಆರ್ಡರ್‌ ಬುಕ್‌ ಮಾಡಿದರೆ, ಅವರಿಗೆ ನೂತನ ವಿನ್ಯಾಸ ಮಾಡಿಕೊಡುತ್ತಾರೆ.

ಕಲಿಕೆ…… ಪ್ರವೃತ್ತಿ

ಅರ್ಪಿತಾ ಎಂಬಿಎ ಪದವಿ ಪಡೆದಿದ್ದಾರೆ. ಅವರಿಗೆ ಪಿಯುಸಿ ಓದುವಾಗಲೇ ಫ್ಯಾಷನ್‌ ಬಗ್ಗೆ ಅಪಾರ ಕಾಳಜಿ ಇತ್ತಂತೆ. ಆಗಾಗ ವಿನ್ಯಾಸ ಮಾಡಿ ತಾವೇ ಸಂತೋಷಪಡುತ್ತಿದ್ದರು. ವಿದ್ಯಾಭ್ಯಾಸದ ಸಮಯದಲ್ಲಿ ಅದಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ. ಮದುವೆ ನಂತರ ಪತಿಯ ಸಹಕಾರದಿಂದಾಗಿ ಈಗ ತಮ್ಮ ಅಭಿಲಾಷೆಗೆ ಇನ್ನಷ್ಟು ಚೈತನ್ಯ ತುಂಬಿಕೊಂಡು ಫ್ಯಾಷನ್‌ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಸಾಂಪ್ರದಾಯಿಕ ವಿನ್ಯಾಸ ವಿಶೇಷ

ಇತ್ತೀಚೆಗೆ ಮೈಸೂರು ನಗರದಲ್ಲಿ ಆಯೋಜಿಸಿದ್ದ ಫ್ಯಾಷನ್‌ ಶೋನಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಇವರೇ ವಿನ್ಯಾಸಗೊಳಿಸಿರುವ ಸಾಂಪ್ರದಾಯಿಕ ಉಡುಗೆಗಳನ್ನು ತೊಡಿಸಿದ್ದು, ಹೆಚ್ಚು ಆಕರ್ಷಕವಾಗಿತ್ತು.

ಮೈಸೂರಿನ `ಕ್ವೀನ್‌ ಸ್ಕೂಲ್ ‌ಆಫ್‌ಡಿಸೈನ್‌’ನಲ್ಲಿ ವಿನ್ಯಾಸದ ಬಗ್ಗೆ ತರಬೇತಿ ಪಡೆದ ಇವರು, ಎಥ್ನಿಕ್‌ ಡಿಸೈನ್ಸ್ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ವಿಶೇಷವಾಗಿ ಶುದ್ಧ ಹಾಗೂ ವಿವಿಧ ಗುಣಮಟ್ಟದ ರೇಷ್ಮೆ ಬಟ್ಟೆಗಳಲ್ಲಿ ವಿನ್ಯಾಸ ಮಾಡುತ್ತಾರೆ. ಹೆಣ್ಣುಮಕ್ಕಳಿಗೆ ಲಂಗ ಬ್ಲೌಸ್‌, ಲೆಹಂಗಾ, ಸ್ಕರ್ಟ್‌, ಆಫ್‌ಕೋಟ್‌ ಇವುಗಳ ಮೇಲೆ ಹ್ಯಾಂಡ್‌ ಮೇಡ್‌ ವಿನ್ಯಾಸವನ್ನು ಇವರೇ ಚಿತ್ರಿಸುತ್ತಾರೆ. ಗಂಡುಮಕ್ಕಳಿಗೆ ಕುರ್ತಾ ಪ್ಯಾಂಟ್‌, ಕಚ್ಚೆ ರೇಷ್ಮೆ ಜುಬ್ಬಾ, ವೇಸ್ಟ್ ಕೋಟ್‌, ಶೇರ್ವಾನಿ ಮುಂತಾದ ಧಿರಿಸುಗಳು, ಅದರ ಬಣ್ಣ, ವಿನ್ಯಾಸ, ಕೈಯಲ್ಲಿ ಮಾಡಿರುವ ಕುಸುರಿ ಮತ್ತು ಚಮಕಿ ಕೆಲಸಗಳು, ಬಾರ್ಡರ್‌ನಲ್ಲಿ ಮಾಡಿರುವ ಆಕರ್ಷಕ ಕೈ ಕೆಲಸಗಳೂ ಇಲ್ಲಿ ವಿಶೇಷವಾಗಿದೆ.

ಅರ್ಪಿತಾ ತಮ್ಮೆಲ್ಲಾ ಕೌಟುಂಬಿಕ ಜವಾಬ್ದಾರಿಗಳ ಜೊತೆಗೆ ಮಕ್ಕಳಿಗೇ ವಿಶೇಷವಾದ ವಿನ್ಯಾಸಗಳನ್ನು ಮಾಡಬೇಕೆಂಬ ಛಲ ಹೊಂದಿದ್ದಾರೆ. ಈಗಾಗಲೇ ಮಕ್ಕಳಿಗೆ ಸಾಕಷ್ಟು ಆಕರ್ಷಕ ವಿನ್ಯಾಸಗಳೇ ಇರುವಾಗ ಇವರು ಸಾಂಪ್ರದಾಯಿಕ ವಿನ್ಯಾಸ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಪತಿಯ ಸಹಕಾರ ಹಾಗೂ ಬೆಂಬಲದಿಂದಾಗಿ ಮುಂದಿನ ದಿನಗಳಲ್ಲಿ ಮೈಸೂರು ಹಾಗೂ ಬೆಂಗಳೂರು ನಗರಗಳಲ್ಲಿ ಮಕ್ಕಳಿಗಾಗಿಯೇ ವಿಶೇಷ ವಿನ್ಯಾಸದ ಬಟ್ಟೆಗಳನ್ನು ಸಿದ್ಧ ಮಾಡಿ ಫ್ಯಾಷನ್‌ ಶೋ ನಡೆಸಬೇಕೆಂದು ಆಲೋಚಿಸಿದ್ದಾರೆ.

– ಸಾಲೋಮನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ