- ರಾಘವೇಂದ್ರ ಅಡಿಗ ಎಚ್ಚೆನ್.
ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಏರೋ ಇಂಡಿಯಾದ 15 ನೇ ಆವೃತ್ತಿಯನ್ನು 2025ರ ಫೆಬ್ರವರಿ 10 ರಂದು ಕರ್ನಾಟಕದ ಬೆಂಗಳೂರಿನಲ್ಲಿರುವ ಯಲಹಂಕ ವಾಯು ನಿಲ್ದಾಣದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಉದ್ಘಾಟಿಸಿದರು.
ಯಲಹಂಕ ವಾಯುಪಡೆ ನೆಲೆಯಲ್ಲಿ ಇಂದಿನಿಂದ 5 ದಿನಗಳ ಕಾಲ ಏರೋ ಇಂಡಿಯಾ ಶೋ ಆರಂಭವಗಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಮಾನಗಳ ಆಕರ್ಷಕ ಕಸರತ್ತು ಎಲ್ಲರನ್ನು ರಂಜಿಸಿತು.
ಆಕಾಶಗಂಗೆ ತಂಡದಿಂದ ಪ್ಯಾರಾಚೂಟ್ ಗಳಿಂದ ಸೈನಿಕರು ವಾಯುನೆಲೆಯ ರನ್ ವೇ ಬಳಿ ತ್ರಿವರ್ಣ ಧ್ವಜ ಹೊತ್ತು ಇಳಿದರು. ತೇಜಸ್ ಯುದ್ಧವಿಮಾನ ಫಾರ್ಮೇಶನ್, ಸುಖೋಯ್ ಎಂಕೆ35 ಆಗಸದಲ್ಲಿ ತ್ರಿಶೂಲ್ ವಿನ್ಯಾಸ ಮೂಡಿಸಿತು, ದ್ರೋಣಿಯರ್, ಜಾಗ್ವಾರ್ ಯುದ್ಧ ವಿಮಾನ, ಹಗು ಯುದ್ಧ ಹೆಲಿಕಾಪ್ಟರ್, ಜಾಗ್ವಾರ್ ಫಾರ್ಮೇಶನ್, ಎಂಬ್ರಿಯರ್ ಸಂವಹನ ವಿಮಾನ ಸೇರಿದಂತೆ ಹಲವು ವಿಮಾನ, ಹೆಲಿಕಾಪ್ಟರ್ ಗಳು ನೀಲಿ ಆಗಸದಲ್ಲಿ ಪ್ರದರ್ಶನ ತೋರಿದವು.
ಏರ್ ಶೋಗೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಿದರು. ಏರ್ ಶೋ ಮೂಲಕ ಮತ್ತೊಂದು ಕುಂಭ ಶುರುವಾದಂತಿದೆ. ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳ ಸಂಸ್ಕೃತಿ ಬಗ್ಗೆ ತೋರಿಸಿದ್ರೆ, ಏರ್ ಶೋ ಭಾರತದ ರಕ್ಷಣಾ ಬಲಿಷ್ಠತೆಯನ್ನ ಜಗತ್ತಿಗೆ ಸಾರುತ್ತಿದೆ. ಅಲ್ಲದೇ ಅಭಿವೃದ್ಧಿ, ಉತ್ಪಾದನೆಯ ಬಗ್ಗೆ ಭಾರತ ಕೇಂದ್ರೀಕೃತವಾಗಿದೆ. ಏರ್ ಶೋ ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಸಂಬಂಧ – ಬಾಂಧವ್ಯಗಳನ್ನ ಅಭಿವೃದ್ಧಿಗೊಳಿಸುತ್ತದೆ ಎಂದು ನುಡಿದರು.
ದೇಶ-ವಿದೇಶಗಳ ವಾಯುಪಡೆಯ ಅಧಿಕಾರಿಗಳು ಇಲ್ಲಿದ್ದಾರೆ. ಭಾರತದ ಜೊತೆ ಈ ಅಧಿಕಾರಿಗಳ ಸಹಭಾಗಿತ್ವ ಮುಖ್ಯವಾಗಿದೆ. ಈ ಸಂಬಂಧ ವೃದ್ಧಿಯಾದ್ರೆ ಜಗತ್ತಿನಲ್ಲಿ ಬಲಿಷ್ಠರಾಗುತ್ತೇವೆ. ಡಿಜಿಟಲ್, ಸ್ಟಾರ್ಟ್ ಆಪ್, ಕೈಗಾರಿಕೋದ್ಯಮ, ನವೋಧ್ಯಮದಲ್ಲಿ ಭಾರತ ಪ್ರಗತಿ ಹೊಂದುತ್ತಿದೆ. ಅದರಂತೆ ರಕ್ಷಣಾ ವಲಯ ಬಲಿಷ್ಠವಾಗುತ್ತಿದೆ ಎಂದು ಶ್ಲಾಘಿಸಿದರು.
ಇದೇ ವೇಳೆ ಬೆಂಗಳೂರಿನ ಹೆಚ್‌ಎಎಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜನಾಥ್ ಸಿಂಗ್, ಗುಜರಾತ್ ನಲ್ಲಿ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಉತ್ಪಾದನಾ ಘಟಕ ಆರಂಭವಾಗಿದೆ. ಬೆಂಗಳೂರನ್ನ ಸಿಲಿಕಾನ್ ವ್ಯಾಲಿ ಎನ್ನಬಹುದು. ಯುದ್ಧ ವಿಮಾನಗಳು, ಡ್ರೋನ್ಸ್, ರಡಾರ್ ಸೇರಿ ರಕ್ಷಣಾ ಉತ್ಪಾದನೆಯಲ್ಲಿ ಭಾರತ ಪ್ರಗತಿ ಸಾಧಿಸುತ್ತಿದೆ. 400ಕ್ಕೂ ಹೆಚ್ಚು ದೇಶಿಯ ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟ ಖಾಸಗಿ ಕಂಪನಿಗಳು ಪ್ರದರ್ಶಕರು ಭಾಗಿಯಾಗಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದ್ದೇವೆ. ಡಿಫೆನ್ಸ್ ರಪ್ತು 21,000 ಕೋಟಿಗೂ ಹೆಚ್ಚಾಗಿದೆ. ಅಲ್ಲದೇ ಮುಂದುವರೆದ ರಾಷ್ಟ್ರಗಳಲ್ಲಿ ರಕ್ಷಣಾ ಉತ್ಪನ್ನಗಳ ಪಾಲುದಾರಿಕೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಶ್ಲಾಘಿಸಿದ್ರು.