ಅತಿರೇಕದ ಪ್ರದರ್ಶನ ಧಾರ್ಮಿಕ ಉಪವಾಸನಮ್ಮ ಆಸೆ ಅಭಿಲಾಷೆಗಳು ವ್ರತ ಉಪವಾಸ ಮಾಡುವುದರಿಂದ ಈಡೇರುವುದಿಲ್ಲ

ಧರ್ಮದ ಹೆಸರಿನಲ್ಲಿ ನಮ್ಮ ಸಮಾಜದಲ್ಲಿ ಶತಶತಮಾನಗಳಿಂದ ಬಗೆಬಗೆಯ ಕರ್ಮಕಾಂಡಗಳು ನಡೆಯುತ್ತಲೇ ಇವೆ. ವ್ರತ, ಉಪವಾಸ ಮಾಡುವುದು ಕೂಡ ಅದರಲ್ಲೊಂದಾಗಿದೆ. ಉಪವಾಸದಿಂದ ಪುಣ್ಯಪ್ರಾಪ್ತಿ, ಮೋಕ್ಷಪ್ರಾಪ್ತಿ, ಮನದಲ್ಲಿ ಅಂದುಕೊಂಡಂತೆ ನಡೆಯುತ್ತದೆ ಎಂದು ಭಾವಿಸಿ ವ್ರತ ಕೈಗೊಳ್ಳಲಾಗುತ್ತದೆ. ಆದರೆ ಹಲವು ದಿನಗಳ ಕಾಲ ನಿರಂತರವಾಗಿ ಉಪವಾಸ ಇರುವುದರಿಂದ ಅದು ಪ್ರಾಣಕ್ಕೆ ಕುತ್ತಾಗಿಯೂ ಪರಿಣಮಿಸಬಹುದು.

ಕೆಲವು ತಿಂಗಳುಗಳ ಹಿಂದೆ ಹೈದರಾಬಾದ್‌ನಲ್ಲಿ ಇಂಥದೇ ಒಂದು ಘಟನೆ ನಡೆಯಿತು. 8ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಹುಡುಗಿ ಆರಾಧನಾ ಚಾತುರ್ಮಾಸದ ಸಂದರ್ಭದಲ್ಲಿ ಆಹಾರ ಬಿಟ್ಟು ಕೇವಲ ನೀರು ಸೇವನೆ ಮಾಡುವ ವ್ರತ ಕೈಗೊಂಡಿದ್ದಳು. ಅವಳು ಉಪವಾಸ ಮಾಡಿದ್ದು ಕೇವಲ 1-2 ವಾರದ ಮಟ್ಟಿಗೆ ಅಲ್ಲ, 6-8 ದಿನಗಳ ಕಾಲ ಆಹಾರ ಬಿಟ್ಟುಬಿಟ್ಟಿದಳು! ಇದರಿಂದಾಗಿ ಅವಳು ದೈಹಿಕವಾಗಿ ಸಾಕಷ್ಟು ಕುಗ್ಗಿಹೋಗಿದ್ದಳು. ಅಷ್ಟಕ್ಕೆ ಸುಮ್ಮನಾಗದ ಆಕೆಯ ಪೋಷಕರು, ಧಾರ್ಮಿಕ ಮುಖಂಡರು ಆಕೆಯನ್ನು ವಧುವಿನಂತೆ ಸಿಂಗರಿಸಿ ಪ್ರಮುಖ ಬೀದಿಗಳಲ್ಲಿ ರಥದಲ್ಲಿ ಮೆರವಣಿಗೆ ನಡೆಸಿದ್ದರು.

ವ್ರತ ಮುಗಿದ 2 ದಿನಗಳಲ್ಲೇ ಆರಾಧನಾಳ ಸಾವು ಸಂಭವಿಸಿತು. ಆಕೆಯ ತಂದೆತಾಯಿಯ ಮೇಲೆ ಬೇಜಾಬ್ದಾರಿತನದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಯಿತು. ಆದರೆ ಧಾರ್ಮಿಕ ಕಾರಣದ ನೆಪವೊಡ್ಡಿ ಆಕೆಯನ್ನು  `ಬಾಲ ತಪಸ್ವಿ’ ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಯಿತು.

ಧರ್ಮ ಒಂದು ಅಫೀಮಿನಂತೆ. ಇಂತಹ ಧರ್ಮಾಂಧ ಭಕ್ತರು ನಮ್ಮ ದೇಶದಲ್ಲಿ ಭಾರಿ ಸಂಖ್ಯೆಯಲ್ಲಿದ್ದಾರೆ. ಅವರು ಧರ್ಮಗುರುಗಳ ಮಾತುಗಳಿಗೆ ಮರುಳಾಗಿ ತಮ್ಮ ಮುದ್ದು ಕಂದಮ್ಮಗಳನ್ನು ಅವರ ವಶಕ್ಕೆ ಒಪ್ಪಿಸುತ್ತಿದ್ದಾರೆ. ಮಂತ್ರವಾದಿಗಳ ಮಾತಿಗೆ ಮರುಳಾಗಿ ಕೆಲವರು ನಿಧಿಯಾಸೆಗಾಗಿ ತಮ್ಮ ಮುದ್ದುಮಕ್ಕಳನ್ನೇ ಬಲಿಕೊಟ್ಟವರೂ ಇದ್ದಾರೆ. ಇಂತಹ ಸುದ್ದಿಗಳು ಆಗಾಗ ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತವೆ.

ಧರ್ಮಾಂಧರಿಗೇನೂ ಕೊರತೆ ಇಲ್ಲ

ಕಣ್ಣುಚ್ಚಿಕೊಂಡು ವ್ರತ ಉಪವಾಸ ಕೈಗೊಳ್ಳುವ ನಿರ್ಧಾರ ಕೈಗೊಂಡು ಪ್ರಾಣ ಕಳೆದುಕೊಳ್ಳುವ ಈ ಘಟನೆ ಮೊದಲನೆಯದೇನಲ್ಲ. ಅದಕ್ಕೂ ಮುಂಚೆ ಬಿಜನೌರ್‌ಎಂಬ ಪಟ್ಟಣದಲ್ಲಿ ಒಬ್ಬ ಮಹಿಳೆ ದೇವಿಯ ಅನುಗ್ರಹಕ್ಕಾಗಿ ನವರಾತ್ರಿ ಸಂದರ್ಭದಲ್ಲಿ ಸತತ 9 ದಿನಗಳ ಕಾಲ ಉಪವಾಸ ಕೈಗೊಂಡಿದ್ದಳು. ಈ ಅವಧಿಯಲ್ಲಿ ಆಕೆ ದಿನವೊಂದಕ್ಕೆ ಕೇವಲ 2 ಲವಂಗಗಳನ್ನು ಮಾತ್ರ ನೀರಿನಲ್ಲಿ ನೆನೆಸಿ ಬಾಯಿಗಿಟ್ಟುಕೊಳ್ಳುತ್ತಿದ್ದಳು. ಒಂದು ದಿನ ಆಕೆಯ ಅನ್ನನಾಳದಲ್ಲಿ ಲವಂಗ ಸಿಲುಕಿಕೊಂಡು ಉಸಿರಾಟದಲ್ಲಿ ಏರುಪೇರಾಯಿತು. 4 ದಿನಗಳ ಬಳಿಕ ಆ ಮಹಿಳೆ ಸತ್ತೇ ಹೋದಳು. ಈ ಮಹಿಳೆ ವಯಸ್ಸಾದವಳು, ಆರಾಧನಾ ಕಿಶೋರ ವಯಸ್ಸಿನವಳು.

ಎಳೆ ವಯಸ್ಸಿನ ಹುಡುಗಿಗೆ 6-8 ದಿನಗಳ ಉಪವಾಸದ ಪರಿಣಾಮಗಳ ಬಗ್ಗೆ ಗೊತ್ತೇ ಇರಲಿಲ್ಲ. ಆಕೆಗೆ ಅಪಾಯ ತಂದಿಟ್ಟ ಆ ನಿರ್ಧಾರದ ಬಗ್ಗೆ ಆಕೆಗೆ ಒಂದಿಷ್ಟು ಕಲ್ಪನೆ ಕೂಡ ಇರಲಿಲ್ಲ. ಆಕೆಯ ತಂದೆತಾಯಿಗಳು ಇಷ್ಟೊಂದು ಕಠೋರ ಉಪವಾಸದ ಅಗತ್ಯವಿಲ್ಲ ಎಂದು ಆಕೆಗೆ ಅದರ ಮಾರಕ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಅವರಿಗೆ ಸಮಾಜದಿಂದ ಗೌರವ, ಆಸ್ತಿಪಾಸ್ತಿ ಮತ್ತು ಉಡುಗೊರೆಗಳನ್ನು ಪಡೆದುಕೊಳ್ಳಬೇಕಿತ್ತು.

ಪುಸ್ತಕಗಳಲ್ಲಿ ಮಹಿಮೆ

ಧರ್ಮಗ್ರಂಥಗಳಲ್ಲಿ ವ್ರತ ಉಪವಾಸದ ಪ್ರಾಮುಖ್ಯತೆ ಕುರಿತಂತೆ ಸಾಕಷ್ಟು ಮಾಹಿತಿ ನೀಡಲಾಗಿದೆ. ಉಪವಾಸದ ಬಗ್ಗೆ ಯೋಗದರ್ಶನ, ಜೈನೇಂದ್ರ ಸಿದ್ಧಾಂತ ಕೋಶ, ಸುನಂದಿ ಶ್ರಾಕಾಚಾರ, ಜೈನದರ್ಶನ ವ್ರತ ವಿಧಾನ, ಸರ್ವೋದಯ ಜೈನ ತಂತ್ರ ಮುಂತಾದ ಗ್ರಂಥಗಳಲ್ಲಿ ಸಾಕಷ್ಟು ವಿವರಣೆ ದೊರೆಯುತ್ತದೆ. ಉಪವಾಸದಿಂದ ಪಚನಕ್ರಿಯೆ ಸಮರ್ಪಕಗೊಳ್ಳುತ್ತದೆ. ಮುಖದಲ್ಲಿ ಕಾಂತಿ ಬರುತ್ತದೆ, ಅನೇಕ ರೋಗಗಳಿಂದ ಮುಕ್ತಿ ದೊರಕುತ್ತದೆ ಎಂದೆಲ್ಲ ಬರೆಯಲಾಗಿದೆ. ಇದರ ಹೊರತಾಗಿ ಜನರಿಗೆ  ಧಾರ್ಮಿಕ ಉಪವಾಸಗಳ ವಿಧಾನದ ಬಗ್ಗೆ ಉಲ್ಲೇಖಿಸುತ್ತಾ, ಅದರ ತಪ್ಪು ಪರಂಪರೆಯನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಅಂತಹ ಬಹಳಷ್ಟು ಪುಸ್ತಕಗಳು ತೀರ್ಥ ಸ್ಥಳಗಳು, ದೇವಸ್ಥಾನಗಳು, ಬೀದಿ ಬದಿಯ ಅಂಗಡಿಗಳಲ್ಲಿ ದೊರಕುತ್ತಿವೆ. ಸಂತೋಷಿ ಮಾತಾ, ವೈಭವ ಲಕ್ಷ್ಮೀ, ಸತ್ಯನಾರಾಯಣ ಮುಂತಾದ ದೇವಿದೇವತೆಯರ ಹೆಸರಿನಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಹೊರಟಿದೆ.

ಹುರುಳಿಲ್ಲದ ಸಂಗತಿಗಳು

ಯಾವಾಗಲಾದರೊಮ್ಮೆ ಹೊಟ್ಟೆಗೆ ವಿಶ್ರಾಂತಿ ಕೊಡಲು ಮಿತ ಪ್ರಮಾಣದಲ್ಲಿ ಆಹಾರ ಸೇವನೆ ಅಥವಾ ಒಂದು ಹಾಗೂ ಎರಡು ಹೊತ್ತಿನ ಊಟ ಬಿಡುವುದು ಅನಿವಾರ್ಯ ಸಂಗತಿ. ಆದರೆ ಮೋಕ್ಷ ಪ್ರಾಪ್ತಿಗಾಗಿ ನಿರಂತರವಾಗಿ ತಿಂಗಳ ಕಾಲ ಉಪವಾಸ ಮಾಡುವುದು ಆತ್ಮಹತ್ಯೆಯೇ ಹೌದು.

ಕಾಲ್ನಡಿಗೆಯಲ್ಲಿಯೇ ದೇಗುಲ ಭೇಟಿ, ಉರುಳು ಸೇವೆ ನಡೆಸುವುದು, ಮೈಮೇಲೆ ಬಾರುಕೋಲಿನಿಂದ ಹೊಡೆದುಕೊಳ್ಳುವುದು, ಬೇರೊಬ್ಬರಿಗೆ ಒಳಿತಾಗಲೆಂದು ಉಪವಾಸ ಕೂರುವುದು, ದೇಹದಂಡನೆ ಮಾಡಿಕೊಳ್ಳುವುದನ್ನು ಬಹಳ ಪವಿತ್ರ ಎಂದು ಹೇಳಲಾಗಿದೆ. ಹೀಗಾಗಿ ಬಹಳಷ್ಟು ಧರ್ಮಾಂಧರು ಆಹಾರ ತೊರೆದು ಉಪವಾಸ ವ್ರತ ಕೈಗೊಳ್ಳುತ್ತಾರೆ. ಕೆಲವು ಕಡೆ ಜನರು ತಿಂಗಳಾನುಗಟ್ಟಲೆ ಉಪವಾಸ ಕೂರುತ್ತಾರೆ.

ಅರ್ಥಹೀನ ಬೋಧನೆಗಳು

ಧರ್ಮಗುರುಗಳು ಉಪವಾಸ ವ್ರತಗಳನ್ನು ಮಹಾಕಲ್ಯಾಣಕಾರಿ, ವೈಜ್ಞಾನಿಕ, ಪಾಪನಾಶಕ, ಪುಣ್ಯ ಪ್ರಾಪ್ತಿಕರ ನೀವು ಅಂದುಕೊಂಡಿದ್ದನ್ನು ನೆರವೇರಿಸುವ ವಿಧಾನ ಹೀಗೆಲ್ಲ ಹೇಳುತ್ತಾರೆ. ತಮ್ಮ ಮಾತುಗಳನ್ನು ಸರಿ ಎಂದು ಸಾಬೀತುಪಡಿಸಲು ಅವರು ಅನೇಕ ನಿದರ್ಶನಗಳನ್ನು ಕೊಡುತ್ತಾರೆ. ಮನುಷ್ಯ ಅತಿಯಾಗಿ ಆಹಾರ ಸೇವನೆ ಮಾಡುವುದರಿಂದ ಸಾಯುತ್ತಾನೆಯೇ ಹೊರತು, ಉಪವಾಸ ಇರುವುದರಿಂದ ಅವನು ಖಂಡಿತ ಸಾಯುವುದಿಲ್ಲ. ದೀರ್ಘ ಉಪವಾಸ ಮಾಡಿಯೂ ಬದುಕುಳಿದವರ ಕಥೆಗಳನ್ನು ಅವರು ನಂಬಿಕೆ ಬರುವ ಹಾಗೆ ಹೇಳುತ್ತಾರೆ. ಏಕೆಂದರೆ ತಾವು ಹೇಳಿದ ಹಾಗೆ ಜನ ಕೇಳಬೇಕು ಎನ್ನುವುದು ಅವರ ಇಚ್ಛೆಯಾಗಿರುತ್ತದೆ.

ಉಪವಾಸ, ವ್ರತಗಳಿಗೆ ಧರ್ಮಗುರುಗಳು ಯಾಕೆ ಅಷ್ಟೊಂದು ಒತ್ತು ಕೊಡುತ್ತಾರೆಂದರೆ, ಸಲಹೆಗಳಿಂದಲೇ ಅವರ ಮಾತು ನಡೆಯುತ್ತದೆ. ವ್ರತಾಚರಣೆಯ ಸಂದರ್ಭದಲ್ಲಿ ದಾನ ಮಾಡುವುದು ಪುಣ್ಯ ಪ್ರಾಪ್ತಿ ಎಂದೆಲ್ಲ ಹೇಳಲಾಗುತ್ತದೆ. ಆ ಸಂದರ್ಭದಲ್ಲಿ ಸಂಗ್ರಹವಾದ ದಾನ ಅವರ ಜೋಳಿಗೆಗೆ ಬಂದು ಬೀಳುತ್ತದೆ. ದಾನ ಕೊಡುವವರ ಸಂಖ್ಯೆ ಹೆಚ್ಚುವುದರಿಂದ ಅವರು ಹೇಳಿದಂತೆ ಕೇಳುವವರ ಸಂಖ್ಯೆಯೂ ಹೆಚ್ಚುತ್ತದೆ.

ಹಳ್ಳಿಗಳ ಹುಡುಗಿಯರು ತಮಗೆ ಒಳ್ಳೆಯ ವರ ದೊರಕಬೇಕೆಂದು 16 ಸೋಮವಾರ ಸಂತೋಷಿ ಮಾತಾ ಉಪವಾಸ ಮಾಡುತ್ತಾರೆ. ಇವನ್ನು ಬೇರೆ ಬೇರೆ ಕಡೆ ಬೇರೆ ಬೇರೆ ದಿನಗಳಂದು ಉಪವಾಸ ಕೈಗೊಳ್ಳಲಾಗುತ್ತದೆ. ಬಡ ಮಹಿಳೆಯರು ತಮ್ಮ ಸಂಪತ್ತು ವೃದ್ಧಿಯಾಗಲೆಂದು ವೈಭವಲಕ್ಷ್ಮಿ ವ್ರತ ಕೈಗೊಳ್ಳುತ್ತಾರೆ. ಕೆಲವು ಪುರುಷರು ಒಳ್ಳೆಯ ಉದ್ಯೋಗ ದೊರಕಬೇಕು, ಉದ್ಯೋಗ ದೊರಕಿದವರು ಬಡ್ತಿ ಸಿಗಬೇಕೆಂದು ಉಪವಾಸ ಮಾಡುತ್ತಾರೆ.

ಢೋಂಗಿ ಪ್ರದರ್ಶನ

ಮಹಿಳೆಯರೇ ಆಗಿರಬಹುದು, ಪುರುಷರೇ ಇರಬಹುದು. ಅವರು ತಾವು ಕೈಗೊಳ್ಳುವ ಉಪವಾಸ ವ್ರತವನ್ನು ತೋರಿಕೆಗಾಗಿ ಮಾಡುತ್ತಾರೆ. ಹೆಸರಿಗಾಗಿ ವ್ರತ ಮಾಡುತ್ತಾರೆ. ಆಯಾ ದಿನಕ್ಕಿಂತ ಅಂದು ಹೆಚ್ಚಾಗಿಯೇ ಹಣ್ಣು ಹಂಪಲು ಸೇವನೆ ಮಾಡುತ್ತಾರೆ. ಏಕಾದಶಿ, ಅಮಾವಾಸ್ಯೆ, ಹುಣ್ಣಿಮೆ ಹಾಗೂ ಇತರೆ ಹಬ್ಬಗಳ ಸಂದರ್ಭಗಳನ್ನು ಸೇರಿಸಿ 250 ದಿನ ಇಂತಹ ಉಪವಾಸ ವ್ರತಗಳು ನಡೆಯುತ್ತವೆ. ಅನೇಕ ದಿನಗಳ ಕಾಲ ಸತತ ಉಪವಾಸ ಇರುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ.

ಹಸಿದ ಹೊಟ್ಟೆಯಲ್ಲಿ ಏನಾಗುತ್ತದೆ?

ಸಕಾಲಕ್ಕೆ ಆಹಾರ ಸೇವನೆ ಮಾಡದೇ ಇರುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ದೀರ್ಘ ಅವಧಿತನಕ ದೇಹಕ್ಕೆ ಇಂಧನ ದೊರೆಯದೇ ಇರುವುದರಿಂದ ದೇಹಕ್ಕೆ ಶಕ್ತಿ ಕೊಡುವ ಗ್ಲೈಕೋಜನ್‌ ತುಂಡರಿಸಲ್ಪಡುತ್ತದೆ. ಈ ಕಾರಣದಿಂದ ದೇಹದಲ್ಲಿ ದೌರ್ಬಲ್ಯ ಹಾಗೂ ದಣಿವು ಉಂಟಾಗುತ್ತದೆ, ಮಾಂಸಖಂಡಗಳು ದುರ್ಬಲವಾಗುತ್ತವೆ, ರೋಗದೊಂದಿಗೆ ಹೋರಾಡುವ ಸಾಮರ್ಥ್ಯ ಕುಸಿಯುತ್ತದೆ. ದೇಹ ತೂಕ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ನಿರಂತರವಾಗಿ ಹೀಗಾದರೆ ವ್ಯಕ್ತಿಯ ಸಾವು ಕೂಡ ಸಂಭವಿಸುತ್ತದೆ.

ಪರಿಣಾಮ ನಿಜವಾದ ತಪ್ಪಿತಸ್ಥರು ಧರ್ಮಗುರುಗಳು ಹಾಗೂ ಧರ್ಮ ಪ್ರಚಾರಕರು. ಅವರು ಒತ್ತಿ ಒತ್ತಿ ಹೇಳುವುದೇನೆಂದರೆ, ವ್ರತ ಉಪವಾಸದಿಂದ ದೇಹ ಶುದ್ಧಿಗೊಳ್ಳುತ್ತದೆ. ಆತ್ಮಶಕ್ತಿ ಹೆಚ್ಚುತ್ತದೆ. ದುಃಖದುಮ್ಮಾನಗಳು ನಿವಾರಣೆಯಾಗುತ್ತವೆ ಹಾಗೂ ನಮ್ಮೆಲ್ಲ ಇಚ್ಛೆಗಳು ನೆರವೇರುತ್ತವೆ. ಧರ್ಮಗುರುಗಳ ಈ ಮಾತುಗಳನ್ನು ಪುಕ್ಕಲು ಭಕ್ತರು ತಕ್ಷಣವೇ ಅನುಸರಿಸಲು ಮುಂದಾಗುತ್ತಾರೆ.

ಸುಖದಿಂದಿರಲು ವ್ರತ ಉಪವಾಸದ ಜಂಜಾಟದಿಂದ ಹೊರಬಂದು, ಮೂಢನಂಬಿಕೆಯ ಕವಚ ಕಿತ್ತೊಗೆದು ತಿಳಿವಳಿಕೆಯಿಂದ ನಿರ್ಧಾರ ಕೈಗೊಳ್ಳುವುದು ಅತ್ಯವಶ್ಯ. ಇದನ್ನು ತಾವಷ್ಟೇ ಅರಿತುಕೊಳ್ಳುವುದಲ್ಲ, ಬೇರೆಯವರಿಗೂ ತಿಳಿಸುವುದು ಅಷ್ಟೇ ಮುಖ್ಯ. ನಮ್ಮ ಅಭಿಲಾಷೆಗಳು ಉಪವಾಸ ಮಾಡುವುದರಿಂದ ಈಡೇರುವುದಿಲ್ಲ. ಪರಿಶ್ರಮ ಹಾಗೂ ಬುದ್ಧಿಪೂರ್ವಕ ಕೆಲಸ ಮಾಡುವುದರಿಂದ ಈಡೇರುತ್ತವೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ. ಅದೇ ರೀತಿ ಜೀವನದ ಸಮಸ್ಯೆಗಳು ಪೂಜೆ, ಪುನಸ್ಕಾರಗಳಿಂದ ಅಲ್ಲ, ತಿಳಿವಳಿಕೆಯ ನಿರ್ಧಾರದಿಂದ ಬಗೆಹರಿಯುತ್ತವೆ.

ದೀರ್ಘಕಾಲದವರೆಗೆ ಉಪವಾಸ ವ್ರತ ಕೈಗೊಳ್ಳುವುದರಿಂದ ಹಾನಿ ಉಂಟಾಗುವುದು ಭಕ್ತರಿಗೆ, ಅದರ ಲಾಭ ಪಡೆದುಕೊಳ್ಳುವವರು ಧರ್ಮಗುರುಗಳು. ಇಂದಿನ ವೈಜ್ಞಾನಿಕ ಯುಗದಲ್ಲಿ ಈ ರೀತಿಯ ಸೋಗು ಹಾಕಿಕೊಂಡು ಮನೋಭಿಲಾಷೆ ಈಡೇರಿಸಿಕೊಳ್ಳುವ ಕನಸು ಕಾಣುವುದು ನಮಗೆ ನಾವೇ ಮೋಸ ಮಾಡಿಕೊಂಡಂತೆ. ಒಂದು ವೇಳೆ ವ್ರತ ಉಪವಾಸದಿಂದ ಒಳ್ಳೆದಾಗುತ್ತದೆ ಎನ್ನುವುದಾದರೆ ಎಲ್ಲ ಭಕ್ತರು ಸುಖಿಯಾಗಿರುತ್ತಿದ್ದರು, ಧನಿಕರಾಗಿರುತ್ತಿದ್ದರು. ಹೀಗಾಗಿ ಉಪವಾಸ ಇರುವುದರಿಂದ ಯಾವುದೇ ಲಾಭ ಇಲ್ಲ.

ವಿ. ಹರಿಣಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ