ಮಹಾಭಾರತದ ಅನುಶಾಸನ ಪರ್ವದಲ್ಲಿ ಭೀಷ್ಮ ಪಿತಾಮಹರು ಧರ್ಮರಾಜನಿಗೆ ಪಿತೃ ಪಕ್ಷದ ನಿಯಮಗಳನ್ನು ತಿಳಿಸುವಾಗ ಹೇಳಿದರು. ಪಿತೃ ಕಾರ್ಯದಲ್ಲಿ ಸಣ್ಣ ತಪ್ಪು ಆಗಬಾರದು. ಪಿತೃಗಳು ಕಾಗೆ ರೂಪದಲ್ಲಿ ಬಂದು ಅನ್ನವನ್ನು ಸ್ವೀಕರಿಸುತ್ತಾರೆ ಕಾಗೆಯನ್ನು ತೃಪ್ತಿ ಪಡಿಸಿದರೆ ಪಿತೃಗಳು ತೃಪ್ತರಾಗುವರು ಎಂದಾಗ, “ಪಿತಾಮಹ” ಪಿತೃ ಕಾರ್ಯದಲ್ಲಿ ಕಾಗೆಗಳಿಗೆ ಯಾಕಿಷ್ಟು ಮಹತ್ವ ಎಂದು ಯುಧಿಷ್ಠಿರ ಕೇಳಿದನು, ಪಿತಾಮಹ ಹೇಳುತ್ತಾ ನಮ್ಮ ಧರ್ಮ ಶಾಸ್ತ್ರದಲ್ಲಿ ಕಾಗೆಗಳಿಗೆ ವಿಶೇಷ ಮಹತ್ವ ಕೊಟ್ಟಿದ್ದಾರೆ.
ತ್ರೇತಾಯುಗದಲ್ಲಿ ದೇವತೆಗಳು ಲಂಕಾದೀಶ ರಾವಣನಿಗೆ ಹೆದರುತ್ತಿದ್ದರು. ಇದೆ ಕಾಲದಲ್ಲಿದ್ದ ಇಕ್ವ್ಷಾಕು ವಂಶದ “ಮರುತ್ತ ರಾಜನು” ಒಮ್ಮೆ ದೊಡ್ಡ ಯಾಗವನ್ನು ಹಮ್ಮಿಕೊಂಡನು. ಯಾಗದ ಹವಿಸ್ಸನ್ನು ಸ್ವೀಕರಿಸಲು ದೇವಾನು ದೇವತೆಗಳೆಲ್ಲ ಯಾಗಕ್ಕೆ ಬಂದರು. ಸ್ವಲ್ಪ ಹೊತ್ತಿಗೆ ರಾವಣನು ಯಾಗ ಮಂಟಪಕ್ಕೆ ಬಂದನು. ಅವನನ್ನು ನೋಡಿ ಹೆದರಿದ ದೇವಾನು ದೇವತೆಗಳು. ತಕ್ಷಣ ಪ್ರಾಣಿ- ಪಕ್ಷಿಗಳ ರೂಪ ಧರಿಸಿದರು. ಪಿತೃ ಲೋಕದ ಅಧಿಪತಿಯಾದ ಯಮ ‘ಕಾಗೆ’ ರೂಪ ಧರಿಸಿದನು.
ಯಾಗ ಮುಗಿದ ಮೇಲೆ ತನ್ನ ರಹಸ್ಯ ಕಾಪಾಡಲು ಕಾರಣವಾದ ಕಾಗೆಗೆ ಯಮನು ಒಂದು ವರವನ್ನು ಕರುಣಿಸುತ್ತಾನೆ. ಕಾಗೆ ನಿನಗೆ “ಭೂಮಿಯಲ್ಲಿ ಯಾವುದೇ ವ್ಯಕ್ತಿ ಅನ್ನ ಹಾಕಿ ಅದನ್ನು ನೀನು ಸ್ವೀಕರಿಸಿದರೆ, ನನ್ನ ಲೋಕದಲ್ಲಿರುವ ಅನ್ನ ಕೊಟ್ಟ ವ್ಯಕ್ತಿಯ ಪಿತೃಗಳಿಗೆ ತೃಪ್ತಿ ಉಂಟಾಗಲಿ” ಎಂಬ ವರವನ್ನು ಕೊಟ್ಟನು.
ವೈದಿಕ ಮಾಡುವಾಗ ಪಿತೃ ರೂಪದಲ್ಲಿರುವ ಕಾಗೆಗಳಿಗೆ ಅನ್ನದ ಪಿಂಡ ಪ್ರಧಾನ ಮಾಡಿ ಅದನ್ನು ಕಾಗೆ ತಿಂದು ಆ ಮೂಲಕ ಪಿತೃಗಳಿಗೆ ಸೇರು ವಂತಾಯ್ತು. ಅಂದಿನಿಂದ ಕಾಗೆಯನ್ನು ಯಮನ ಸಂಕೇತವೆಂದು ಕರೆಯುತ್ತಾರೆ.

ಕಾಗೆಗಳು ಮನೆಯ ಸುತ್ತ ಸುತ್ತಾಡಿದರೆ ಅಥವಾ ಕಾಗೆಗಳನ್ನು ನೋಡಿ ದರೆ ಪಿತೃಗಳು ಎಂದು ಹೇಳುತ್ತಾರೆ. ಪಿತೃಪಕ್ಷದಲ್ಲಿ ಕಾಗೆಗಳಿಗೆ ಆಹಾರ ಕೊಡದಿದ್ದರೆ ಪಿತೃಗಳು ಕೋಪಿಸಿಕೊಳ್ಳುತ್ತಾರೆ.
ಇದರಿಂದ ಅನೇಕ ಸಮಸ್ಯೆಗಳನ್ನು ಬರುತ್ತವೆ ಎಂದು ಹೇಳುತ್ತಾರೆ. ಕಾಗೆ ಆಹಾರ ಸೇವಿಸಿದರೆ ಪಿತೃಗಳು ತೃಪ್ತಿಯಾಗುತ್ತಾರೆ, ಅವರು ಸಂತುಷ್ಟರಾದರೆ ಕುಟುಂಬದ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾರೆ ಎಂಬ ಮಾತಿದೆ. ಕಾಗೆಗಳ ವಿಶಿಷ್ಟ ಗುಣಗಳು ಎಂದರೆ ಇವು ಮನುಷ್ಯರು ವಾಸಿಸುವ ಜಾಗದಲ್ಲಿ ವಾಸಿಸುತ್ತವೆ. ಕಾಗೆಯ ಬಳಗ ಎಂಬಂತೆ, ಕಾಗೆಗಳು ಆಹಾರ ಸಿಕ್ಕರೆ ಬಳಗವನ್ನೆಲ್ಲ ಕೂಗಿ ಕರೆದು ಹಂಚಿ ತಿನ್ನುತ್ತವೆ. ಕೋಗಿಲೆಗೆ ‘ಪರಪುಟ್ಟ’ ಎನ್ನುತ್ತಾರೆ ಕಾರಣ ಕಾಗೆ ತನ್ನ ವೈರಿಯಾದ ಕೋಗಿಲೆಯ ಮರಿಗಳನ್ನು ಸಾಕಿ ಸಲಹುತ್ತದೆ.
ಕಾಗೆ ಶನಿವಾಹನ. ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲವನ್ನು ಶನಿ ನಿರ್ಣಯ ಮಾಡುತ್ತಾನೆ ಎಂಬ ಅಭಿಪ್ರಾಯವಿದೆ. ಇನ್ನೊಂದು ವಿಶೇಷ ಅಂದರೆ ಕಾಗೆ ಪುಟ್ಟ ಮಕ್ಕಳಿಗೆ ಹೆದರುವುದಿಲ್ಲ ಅವುಗಳ ಕೈಯಲ್ಲಿರುವ ತಿಂಡಿ ಕಿತ್ತುಕೊಂಡು ಹೋಗುತ್ತ ವೆ. ಏಕೆಂದರೆ ನಿಷ್ಕಲ್ಮಶ ಮನಸ್ಸುಳ್ಳ ಪುಟ್ಟ ಮಕ್ಕಳ ಕೈಯಲ್ಲಿರುವ ಆಹಾರ ಶ್ರೇಷ್ಠ ಎಂಬುದು ಅದಕ್ಕೆ ತಿಳಿದಿದೆ.
ಸಾಧಾರಣವಾಗಿ ಸೂರ್ಯಾಸ್ತದ ನಂತರ ಮನುಷ್ಯರು ಆಹಾರ ಸೇವಿಸು ವಂತಿಲ್ಲ. ಆದರೆ ಸೇವಿಸುತ್ತಾರೆ. ಆದರೆ ಕಾಗೆಗಳು ಸೂರ್ಯಾಸ್ತದ ನಂತರ ಆಹಾರ ಸೇವಿಸುವುದಿಲ್ಲ. ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕೂಗಿ ಕೂಗಿ ಕರೆದು ಎಲ್ಲರನ್ನು ಎಬ್ಬಿಸುವ ಏಕೈಕ ಪಕ್ಷಿ ಕಾಗೆ. ಪಿತೃ ಪಕ್ಷದಲ್ಲಿ ಇಡುವ ಅನ್ನವನ್ನು ಕಾಗೆಗಳು ತಿನ್ನಲು ಬರದೆ ಹೋದರೆ ಹಸು ಗಳಿಗೆ ಅಥವಾ ನಾಯಿಗಳಿಗೆ ಕಾಗೆಗಳ ಹೆಸರಿನಲ್ಲಿ ಕೊಡುತ್ತಾರೆ.





