ಚೀನಾ ಇಡೀ ವಿಶ್ವದ ಅಪರೂಪದ ಪ್ರಾಣಿಗಳನ್ನು ಸ್ವಾಹಾ ಮಾಡಿಬಿಡಬಹುದು ಎನಿಸುತ್ತಿದೆ. ಬಹಳಷ್ಟು ಪ್ರಾಣಿಗಳ ಪ್ರಭೇದಗಳು ಕಣ್ಮರೆಯಾಗುತ್ತಿವೆ. ಅವುಗಳ ಅಂಗಾಂಗಗಳು ಚೀನಾದಲ್ಲಿ ಮಾರಾಟವಾಗುತ್ತಿವೆ. ಏಡಿಗಳಿಂದ ಹಿಡಿದು ಶಾರ್ಕ್‌ಗಳು ಹಾಗೂ ಚಿರತೆಯಂತಹ ಪ್ರಾಣಿಗಳನ್ನು ನಮ್ಮ ಪಕ್ಕದ ದೇಶ ಅನಧಿಕೃತ ರೀತಿಯಲ್ಲಿ ಬೇಟೆಯಾಡುತ್ತಿದೆ. ಚೀನಾಕ್ಕೆ ಹೊಂದಿಕೊಂಡ ರಾಜ್ಯಗಳಲ್ಲಿ ಕಾಗೆಗಳ ಸಂಖ್ಯೆ ಹೆಚ್ಚು ಕಡಿಮೆ ಮುಗಿದೇ ಹೋಗಿದೆ ಎನಿಸುತ್ತಿದೆ. ಚೀನಾದ ಪಾರಂಪರಿಕ ಔಷಧಿಗಳ ಹೆಸರಿನಲ್ಲಿ ಅನಧಿಕೃತ ವ್ಯಾಪಾರ ಇದಕ್ಕೆ ಮುಖ್ಯ ಕಾರಣವಾಗಿದೆ. ಆಯುರ್ವೇದದ ಹಾಗೆ ಚೀನಾ ಕೂಡ ಔಷಧಿಗಳಲ್ಲಿ ಗಿಡಬಳ್ಳಿಗಳು, ಪ್ರಾಣಿಗಳ ಅಂಗಗಳು, ಖನಿಜ ಪದಾರ್ಥಗಳನ್ನು ಉಪಯೋಗಿಸಿಕೊಳ್ಳುತ್ತದೆ. ಚೀನಾದ ಪಾರಂಪರಿಕ ಚಿಕಿತ್ಸೆಯ ಪ್ರಕಾರ, ದೇಹವನ್ನು ಆರೋಗ್ಯದಿಂದಿಡಲು ಅದಕ್ಕೆ ಜೀವಂತ ಶಕ್ತಿಯನ್ನು ಸೇರ್ಪಡೆ ಮಾಡುವುದು ಅತ್ಯವಶ್ಯ. ಈ ಜ್ಞಾನ 3ನೇ ಶತಮಾನದಲ್ಲಿ ಬರೆದ `ನಾಯಲ್ ಝಿಂಗ್‌’ ಎಂಬ ಪುಸ್ತಕವನ್ನು ಆಧರಿಸಿದೆ. ಚೀನಾ ವೈದ್ಯ ಪದ್ಧತಿ ಸುಮಾರು 1000 ಬಗೆಯ ಗಿಡಬಳ್ಳಿ, 36 ಪ್ರಕಾರದ ಪ್ರಾಣಿ, 100ಕ್ಕೂ ಹೆಚ್ಚು ಬಗೆಯ ಕ್ರಿಮಿಕೀಟಗಳನ್ನು ಉಪಯೋಗಿಸುತ್ತದೆ. ಅವುಗಳಲ್ಲಿ ಹೆಚ್ಚಿನ ಭಾರತದಲ್ಲಿಯೇ ಲಭಿಸುತ್ತವೆ.

ಸಮುದ್ರದಲ್ಲಿ ಕಂಡುಬರುವ ಸಮುದ್ರ ಕುದುರೆ ಅಥವಾ `ಸೀಹಾರ್ಸ್‌’ ಎಂಬ ಮೀನನ್ನು ಬೇಟೆಯಾಡುವುದು ಅಪರಾಧವೇ ಹೌದು. ಆದರೆ ಲಕ್ಷಾಂತರ ಸೀಹಾರ್ಸ್‌ಗಳನ್ನು ಹೊತ್ತ ಹಡಗು ಚೆನ್ನೈನಿಂದ ಚೀನಾಕ್ಕೆ ಹೊರಟಿತ್ತು. ಅದನ್ನು ವಶಪಡಿಸಿಕೊಳ್ಳಲಾಯಿತು.

ಚೀನಾದಲ್ಲಿನ ತಿಂಡಿಪೋತರ ಬಾಯಿ ಚಪಲ ತೀರಿಸಲು ನಮ್ಮ ಕಾಡುಗಳಲ್ಲಿನ ಕರಡಿಗಳನ್ನು ಹೆಚ್ಚು ಕಡಿಮೆ ಕಳೆದುಕೊಳ್ಳುತ್ತಿದ್ದೇವೆ. ಉಳಿದ ಮೃಗಾಲಯಗಳ ಸಂರಕ್ಷಣೆಯಲ್ಲಿವೆ.

ಸಿಂಹಗಳಿಗೂ ಅಪಾಯ : ಕಳೆದ 100 ವರ್ಷಗಳಲ್ಲಿ ಭಾರತದಲ್ಲಿ ಸಿಂಹಗಳ ಸಂಖ್ಯೆ 1 ಲಕ್ಷದಿಂದ 1000ಕ್ಕೆ ಬಂದು ನಿಂತಿದೆ. ಇವುಗಳಲ್ಲೂ ಸುಮಾರು 60,000 ಸಿಂಹಗಳನ್ನು ಚೀನಾ ದೇಶಕ್ಕಾಗಿಯೇ ಸಂಹರಿಸಲಾಗಿದೆ. ಸಿಂಹಗಳು ಹಾಗೂ ಚಿರತೆಗಳ ಬೆನ್ನುಮೂಳೆಗಳನ್ನು ಟಿಬೆಟ್‌ನಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಸಿಂಹಗಳು ಔಷಧದಲ್ಲಿ ನಿಖರ ಪರಿಣಾಮ ಬೀರುತ್ತವೆ. ಚೀನಿ ವೈದ್ಯಕೀಯದಲ್ಲಿ ಸಿಂಹಗಳ ಮೂಳೆಗಳನ್ನು ಪ್ಲ್ಯಾಸ್ಟರ್‌ನ ಹಾಗೆ ಬಳಸುತ್ತಾರೆ. ಅದರಿಂದ ಕೀಲುಗಳ ಸಮಸ್ಯೆ ನಿವಾರಣೆ ಆಗುತ್ತದೆ ಎಂಬುದು ಅವರ ನಂಬಿಕೆ. ಫಿಟ್ಸ್ ರೋಗಿಗಳು ಅದರ ಕಣ್ಣುಗಳನ್ನು ಸೇವಿಸುತ್ತಾರೆ. ಹಲ್ಲುನೋವಿಗೆ ಅದರ ಮೀಸೆಗಳನ್ನು ಉಪಯೋಗಿಸಲಾಗುತ್ತದೆ. ಪುರುಷತ್ವ ಹೆಚ್ಚಿಸಲು ಅದರ ಗುಪ್ತಾಂಗವನ್ನು ಬಳಸಲಾಗುತ್ತದೆ.

ಚೀನಾ ದೇಶ ಜಗತ್ತಿನ ಬಹುತೇಕ ಸಿಂಹಗಳನ್ನು ಮುಗಿಸಿಬಿಟ್ಟಿದೆ. ಇವುಗಳಲ್ಲಿ ಸೈಬೀರಿಯಾ ಹಾಗೂ ಸುಮಾತ್ರಾದ ಸಿಂಹಗಳು ಕೂಡ ಸೇರಿವೆ. ಈಗ ಅದು ತನ್ನದೇ ದೇಶದಲ್ಲಿ ಸಿಂಹ ಸಂತತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಚೀನಾದ ಫಾರ್ಮ್ ಹೌಸ್‌ಗಳಲ್ಲಿ ಸುಮಾರು 5000 ಸಿಂಹಗಳನ್ನು ಬೆಳೆಸಲಾಗುತ್ತಿದೆ. ಕ್ರಮೇಣ ಅವನ್ನು ಮುಗಿಸಿ ಹಾಕುತ್ತದೆ.

2007ರಲ್ಲಿಯೇ ಚೀನಾ ಒಂದು ವಿಷಯ ಸ್ಪಷ್ಟಪಡಿಸಿತ್ತು. ಅದೇನೆಂದರೆ ಫಾರ್ಮ್ ಹೌಸ್‌ನಲ್ಲಿ ಬೆಳೆಸಿದ ಸಿಂಹಗಳ ಅಂಗಾಂಗಗಳನ್ನಷ್ಟೇ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿತ್ತು. ಆದರೆ ಅದು ಅವರ ಒಂದು ಹೊಸ ಉಪಾಯವಾಗಿತ್ತು. ಜಗತ್ತಿನ ಯಾವುದೇ ಸ್ಥಳದಲ್ಲಿ ಸಿಂಹದ ಬೇಟೆ ಮಾಡಿದರೂ, ಅದನ್ನು `ಫಾರ್ಮ್ ಹೌಸ್‌ ಸಿಂಹ’ ಎಂದೇ ಹೇಳಿ ಎನ್ನುವುದು ಅದರ ಹಿಂದಿನ ತಂತ್ರವಾಗಿದೆ. ಚೀನಾದ ಪ್ರಾಣಿ ಸಂಗ್ರಹಾಲಯಗಳಲ್ಲಿ ಅವು ಸತ್ತು ಹೋಗುವ ತನಕ ಹಸಿವಿನಿಂದ ಇಡಲಾಗುತ್ತದೆ. ಏಕೆಂದರೆ ಎಷ್ಟು ಪ್ರಮಾಣದಲ್ಲಿ ಪ್ರಾಣಿ ಸಂಗ್ರಹಾಲಯಗಳಿಂದ ಆದಾಯ ಬರುತ್ತದೊ, ಅದೆಷ್ಟೋ ಪಟ್ಟು ಆದಾಯ ಅವುಗಳ ಅಂಗಾಂಗ ಮಾರಾಟ ಮಾಡುವುದರಿಂದ ಬರುತ್ತದೆ.

ಚೀನಾ ವೈದ್ಯಕೀಯ ಪದ್ಧತಿ ತನ್ನ ಔಷಧಿ ತಯಾರಿಕೆಯಲ್ಲಿ ಸಿಂಹದ ಮೂಳೆಗಳಿಂದ ನಡೆಸುವ ಚಿಕಿತ್ಸಾ ಪದ್ಧತಿಯನ್ನು ಅಧಿಕೃತವಾಗಿ ತೆಗೆದುಹಾಕಿದೆ. ಅದರ ಸ್ಥಾನವನ್ನು ಕಾಡು ಇಲಿ, ನಾಯಿಗಳು, ಹಸುಗಳು ಹಾಗೂ ಕುರಿಮೇಕೆಗಳು ಪಡೆದುಕೊಂಡಿವೆ. ಈ ಅಪರೂಪದ ಪ್ರಾಣಿಯ ಮೇಲೆಯೇ ಏಕೆ ಪ್ರಯೋಗ? ಸರ್ವೆಗಳು ಇನ್ನೂ ಬೇರೇನನ್ನೋ ಹೇಳುತ್ತವೆ. ಅದರ ಪ್ರಕಾರ, ನಿಷೇಧದ ಹೊರತಾಗಿಯೂ ಶೇ.3 ರಿಂದ 5ರಷ್ಟು ಚೀನಾದ ಅಂಗಡಿಗಳು ಮತ್ತು ಜಗತ್ತಿನ ಶೇ.45ರಷ್ಟು ಅಂಗಡಿಗಳಲ್ಲಿ ಸಿಂಹದ ಅಂಗಾಂಗಗಳ ಮಾರಾಟ ಈಗಲೂ ಎಗ್ಗಿಲ್ಲದೆ ನಡೆದಿದೆ. ಇಂತಹ ಕೆಲವು ಅಂಗಡಿಗಳು ಅಮೆರಿಕದಲ್ಲೂ ಇವೆ.

ಕರಡಿಗಳ ಮೇಲೂ ಅಪಾಯದ ತೂಗುಗತ್ತಿ : ಕಪ್ಪು ಕರಡಿಗಳ ಪಿತ್ತರಸವನ್ನು ಬಳಸಿ ಲಿವರ್‌ಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಹಾಗೂ ತಲೆನೋವನ್ನು ಕಡಿಮೆಗೊಳಿಸಲು ಬಳಸಲಾಗುತ್ತದೆ. ಕರಡಿಯ ಪಿತ್ತದ ಹೊರತಾಗಿ ಮತ್ತೂ ಕೆಲವು ಪರ್ಯಾಯಗಳಿದ್ದು, ಅವು ರೋಗದ ಸಂದರ್ಭದಲ್ಲಿ ನೆರವಾಗುತ್ತವೆ. ಆದರೆ ಚೀನಿ ವೈದ್ಯಕೀಯ ಪದ್ಧತಿಯು ಅಸಲಿ ವಸ್ತುವನ್ನೇ ಅಪೇಕ್ಷಿಸುತ್ತದೆ. ಬೇಟೆಯ ಕಾರಣದಿಂದ ಏಷ್ಯಾದ ಕಾಡುಗಳಲ್ಲಿ ನಿರಂತರವಾಗಿ ಕಡಿಮೆಯಾಗುತ್ತಿರುವ ಕಪ್ಪು ಕರಡಿಗಳ ಫಾರ್ಮಿಂಗ್‌ ಕೂಡ ಚೀನಾದಲ್ಲಿ 1984ರಿಂದಲೇ ನಡೆಯುತ್ತಿದೆ. ಫಾರ್ಮ್ ಹೌಸ್‌ಗಳಲ್ಲಿ ಸುಮಾರು 7000 ಕರಡಿಗಳನ್ನು ಚಿಕ್ಕ ಚಿಕ್ಕ ಪಂಜರಗಳಲ್ಲಿ ಬಂಧಿಯಾಗಿ ಇಡಲಾಗುತ್ತದೆ.

ಅವುಗಳನ್ನು ಇಡುವ ರೀತಿ ಹೇಗಿದೆ ಎಂದರೆ, ಇಲಿಗಳನ್ನು ಉಸಿರುಗಟ್ಟಿಸುವ ರೀತಿಯಲ್ಲಿ ಇಡಲಾಗುತ್ತದೆ. ಅಲ್ಲಿ ಕರಡಿಗಳು ಸರಿಯಾಗಿ ಆಕಡೆ ಈಕಡೆ ಅಲ್ಲಾಡಲು ಕೂಡ ಆಗುವುದಿಲ್ಲ. ಅದರ ಹೊಟ್ಟೆಯಲ್ಲಿ ಒಂದು ಕೆಥೆಟರ್‌ನ್ನು ಅಳಡಿಸಲಾಗಿರುತ್ತದೆ. ಅದರಿಂದ ಪಿತ್ತವನ್ನು ಹೊರತೆಗೆಯಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕರಡಿಗಳು ಅಸಾಧ್ಯ ನೋವಿನಿಂದ ಪಂಜರಕ್ಕೆ ತಲೆ ಅಪ್ಪಳಿಸಿಕೊಂಡು ಘೋರ ರೀತಿಯಲ್ಲಿ ಸಾವನ್ನಪ್ಪುತ್ತವೆ.

ಕಸ್ತೂರಿ ಮೃಗದ ಕಸ್ತೂರಿಯನ್ನು ರಕ್ತದ ಹರಿವಿನ ಪ್ರಕ್ರಿಯೆ ಸಮತೋಲನಗೊಳಿಸಲು, ತ್ವಚೆಯ ಸೋಂಕು ಹಾಗೂ ಹೊಟ್ಟೆನೋವಿನಿಂದ ಮುಕ್ತಿ ದೊರಕಿಸಿಕೊಳ್ಳಲಾಗುತ್ತದೆ. ಕಸ್ತೂರಿ ಮೃಗದ ಹೊಟ್ಟೆ ಹಾಗೂ ಅದರ ಜನನಾಂಗದ ನಡುವೆ ಇರುವ ಒಂದು ಗ್ರಂಥಿಯಲ್ಲಿ ಅದು ಉತ್ಪಾದನೆಯಾಗುತ್ತದೆ. ಪರಿಸರ ರಕ್ಷಣೆಗಾಗಿ ರಚಿಸಿಕೊಳ್ಳಲಾದ ಟ್ರಾಫಿಕ್‌ನ ಒಂದು ವರದಿಯ ಪ್ರಕಾರ, ಚೀನಾ ದೇಶದಲ್ಲಿ ಪ್ರತಿವರ್ಷ 1000 ಕಿಲೋದಷ್ಟು ಕಸ್ತೂರಿ ಬೇಕಾಗುತ್ತದೆ. ಇಷ್ಟು ಪ್ರಮಾಣದ ಕಸ್ತೂರಿ ಪೂರೈಸಲು ಸುಮಾರು 1 ಲಕ್ಷದಷ್ಟು ಕಸ್ತೂರಿ ಮೃಗದ ಗ್ರಂಥಿಗಳು ಬೇಕಾಗುತ್ತವೆ. ಭಾರತೀಯ ಕಸ್ತೂರಿ ಮೃಗಗಳ ಬೇಟೆಯನ್ನು ಚೀನಾ ಅದೆಷ್ಟು ವೇಗವಾಗಿ ಕೈಗೊಳ್ಳುತ್ತಿದೆ ಎಂದರೆ, ಕಸ್ತೂರಿ ಮೃಗಗಳ ಸಂಖ್ಯೆ ಅದೆಷ್ಟೋ ಸಾವಿರಗಳಿಂದ ಈಗ ಕೇವಲ 1000ದಷ್ಟು ಮಾತ್ರ ಉಳಿದಿವೆ.

ಸೀಹಾರ್ಸ್‌ನ್ನು ಚೀನಾದ 90 ವೈದ್ಯಕೀಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದರಿಂದ ತಯಾರಾದ ಔಷಧದಿಂದ ಕಿಡ್ನಿ, ರಕ್ತ ಚಲನೆ, ನಪುಂಸಕತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ  ಚಿಕಿತ್ಸೆ ಕೈಗೊಳ್ಳಲಾಗುತ್ತದೆ. 32 ದೇಶಗಳಲ್ಲಿ ಸುಮಾರು 2 ಕೋಟಿಯಷ್ಟು ಸೀಹಾರ್ಸ್‌ಗಳ ಸಂಹಾರ ಮಾಡಲಾಗುತ್ತದೆ. ಏಕೆಂದರೆ ಚೀನಾದ 250 ಟನ್‌ಗಳಷ್ಟು ವಾರ್ಷಿಕ ಬೇಡಿಕೆ ಪೂರೈಕೆ ಸಾಧ್ಯವಾಗಬೇಕು.

ಕಣ್ಮರೆಯಾಗುತ್ತಿರುವ ಘೇಂಡಾಗಳು : ಘೇಂಡಾಗಳ ಕೋಡುಗಳು ಚೀನಾದ ಚಿಕಿತ್ಸಾ ಪದ್ಧತಿಯಲ್ಲಿ ಉಪಯೋಗಕ್ಕೆ ಬರುತ್ತವೆ. ಆ ಕಾರಣದಿಂದಾಗಿ ಭಾರತದಲ್ಲೀಗ 500 ಘೇಂಡಾಗಳು ಮಾತ್ರ ಉಳಿದಿವೆ. `ವರ್ಲ್ಡ್ ವೈಲ್ಡ್ ಲೈಫ್‌ ಫಂಡ್‌’ನ ಪ್ರಕಾರ, ಆಫ್ರಿಕಾದಲ್ಲಿ 3000 ಘೇಂಡಾಗಳು ಹಾಗೂ ಸುಮಾತ್ರಾ, ಜಾವಾ ಹಾಗೂ ಭಾರತ ಈ ಮೂರುದೇಶಗಳಲ್ಲಿ ಸೇರಿ 2000 ಘೇಂಡಾಗಳು ಉಳಿದಿವೆ. ಘೇಂಡಾದ ಕೋಡುಗಳನ್ನು ಜ್ವರ, ತಲೆನೋವು, ಟೈಫಾಯಿಡ್‌ ಹೊಟ್ಟೆಗೆ ಸಂಬಂಧಪಟ್ಟ ತೊಂದರೆಗಳು, ಬೇಧಿ ಆರ್ಥರೈಟಿಸ್‌, ಮಾನಸಿಕ ಖಿನ್ನತೆ, ಧ್ವನಿ ಕಟ್ಟಿಕೊಂಡಿರುವುದು, ರಕ್ತಸ್ರಾವ, ಮೂಗಿನಿಂದ ರಕ್ತಸ್ರಾವ, ಫುಡ್‌ ಪಾಯಿಸನಿಂಗ್ ಮುಂತಾದವುಗಳಲ್ಲಿ ಬಳಸಲಾಗುತ್ತದೆ.

ಘೇಂಡಾದ ಮೂಗಿನ ಮೇಲೆ ಬೆಳೆದ ಕೂದಲು ಎಷ್ಟೋ ತೊಂದರೆಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗಿದೆ. ಘೇಂಡಾದ ರಕ್ಷಣೆಗಾಗಿ ನೇಮಿಸಲ್ಪಟ್ಟ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಘೇಂಡಾಗಳ ಅಕ್ರಮ ಬೇಟೆಯಲ್ಲಿ ಭಾರಿ ದೊಡ್ಡ ಗ್ಯಾಂಗ್‌ಗಳೇ ಮಗ್ನವಾಗಿವೆ. ಘೇಂಡಾಮೃಗದ ಕೋಡುಗಳಿಗೆ ಚೀನಾ, ಹಾಂಕಾಂಗ್‌ ಹಾಗೂ ತೈವಾನ್‌ನಲ್ಲಿ ಅಪಾರ ಬೇಡಿಕೆ ಇದೆ. ಅಂದಹಾಗೆ ಭಾರತ ಸರ್ಕಾರ ಘೇಂಡಾಮೃಗಗಳ ಕೋಡುಗಳ ಖರೀದಿ, ಮಾರಾಟದ ಮೇಲೆ 1979ರಲ್ಲಿಯೇ ನಿಷೇಧ ಹೇರಿದೆ. ಆದಾಗ್ಯೂ ಇವುಗಳ ಸ್ಮಗ್ಲಿಂಗ್‌, ಮಕಾ, ಮ್ಯಾನ್ಮಾರ್‌, ಇಂಡೋನೇಷಿಯಾ, ಮಲೇಷಿಯಾ, ತೈವಾನ್‌ ಹಾಗೂ ದ. ಆಫ್ರಿಕಾದಲ್ಲಿ ನಡೆಯುತ್ತಲೇ ಇದೆ. ದಿ ಇಂಟರ್‌ ನ್ಯಾಷನಲ್ ಯೂನಿಯನ್‌ ಫಾರ್‌ ಕನ್ಸರ್ವೇಶನ್‌ ಆಫ್‌ ನೇಚರ್‌ ಅಳಿವಿನ ಅಂಚಿನಲ್ಲಿರುವ ಪ್ರಬೇಧಗಳ ಒಂದು ಪಟ್ಟಿಯನ್ನು ನೀಡಿದ್ದರು. ಅದರಲ್ಲಿ ಬ್ಲ್ಯಾಕ್‌ ರೈನೋ (ಕಪ್ಪು ಘೇಂಡಾ) ಕೂಡ ಸೇರಿದೆ.

ಕೊರಿಯಾ ಕೂಡ ಹಿಂದೆ ಬಿದ್ದಿಲ್ಲ : ಕೊರಿಯಾದ ಔಷಧಿ ತಯಾರಿಕಾ ವಿಧಾನ ಕೂಡ ಚೀನಾದ ವಿಧಾನವನ್ನೇ ಹೋಲುತ್ತದೆ. ಕೊರಿಯಾ ಕೂಡ ಘೇಂಡಾದ ಕೋಡುಗಳನ್ನು ಹೃದಯಾಘಾತ, ಡರ್ಮೆಟೈಸ್‌, ಫೇಶಿಯಲ್, ಪೆರಾಲಿಸಿಸ್‌, ಹೈ ಬ್ಲಡ್‌ ಪ್ರೆಶರ್‌ ಮತ್ತು ಕೋಮಾ ಮುಂತಾದವುಗಳಲ್ಲಿ ಬಳಸಿಕೊಳ್ಳುತ್ತಿದೆ.

ಮೀನುಗಳೂ ಸುರಕ್ಷಿತವಲ್ಲ : ಪ್ರಾಣಿಗಳ ಅಂಗಾಂಗಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ವಿಶಾಲಕಾಯದ ಮಂತಾ ರೇ ಮೀನುಗಳು ಕೂಡ ಈಗ ಸುರಕ್ಷಿತವಾಗಿಲ್ಲ. ಅವುಗಳ ಸಂಖ್ಯೆಯ ಕುರಿತಂತೆ ಸಾಕಷ್ಟು ಚರ್ಚೆ ನಡೆಯಿತು. ಅದಕ್ಕಾಗಿ ಆಸ್ಚ್ರೇಲಿಯಾ ಸರ್ಕಾರ ಆ ಬಗೆಯ ಮೀನುಗಳನ್ನು ಸಂರಕ್ಷಿತ ಮೀನು ಎಂದು ಘೋಷಿಸಿದೆ. ಅವುಗಳ ಬೇಟೆಯಾಡುವುದು, ಆಸ್ಟ್ರೇಲಿಯಾದಿಂದ ಹೊರಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಈ ಮಂತಾ ರೇ ಮೀನುಗಳ ಕಣ್ಮರೆಯ ಹಿಂದೆಯೂ ಚೀನಾದ ಕೈವಾಡ ಇದೆ. ಈ ಮೀನಿನ ಆಹಾರ ಶೋಧಿಸುವ ಒಂದು ತೆಳ್ಳನೆಯ ಭಾಗಕ್ಕೆ ಚೀನಾದಲ್ಲಿ ಅಪಾರ ಬೇಡಿಕೆ ಇದೆ. ಅದನ್ನು ಚಿಕನ್‌ ಪಾಕ್ಸ್ ನ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಭಾರತ, ಶ್ರೀಲಂಕಾ, ಇಂಡೋನೇಷಿಯಾ ಹಾಗೂ ಪೆರು ದೇಶದಲ್ಲೂ ಇದನ್ನು ಅಕ್ರಮವಾಗಿ ಬೇಟೆಯಾಡಲಾಗುತ್ತಿದೆ.

ಕಣ್ಮರೆಯಾಗುತ್ತಿರುವ ಸೈಗಾ : ಜಿಂಕೆಯಂತೆ ಕಾಣುವ ಸೈಗಾ ಆ್ಯಂಟಿಯೋಪ್‌ ಹೆಚ್ಚುಕಡಿಮೆ ಅಳಿವಿನ ಅಂಚಿನಲ್ಲಿದೆ. ಅವುಗಳನ್ನು ಬೇಟೆಯಾಡುವುದು ಅವುಗಳ ಕೋಡುಗಳಿಗಾಗಿ.

ಚೀನಿ ಮೋಸಳೆಗಳ ಸಂಖ್ಯೆ 200ಕ್ಕಿಂತ ಕಡಿಮೆಯಾಗಿದೆ. ಅವುಗಳನ್ನು ಆನ್‌ಹುಯಿ ಪ್ರಾಂತ್ಯದಲ್ಲಿ ಸಂರಕ್ಷಿತ ಎಂದು ಘೋಷಿಲಾಗಿದೆ. ಈ ಮೊಸಳೆಗಳ ಮಾಂಸ ಮತ್ತು ಇತರೆ ಅಂಗಗಳನ್ನು ಕ್ಯಾನ್ಸರ್‌ ಹಾಗೂ ಶೀತದ ಔಷಧಿಗೆಂದು ಬಳಸಲಾಗುತ್ತದೆ.

ಎಲಿಫೆಂಟ್‌ ಫುಟ್‌ನ ಪೇಸ್ಟ್ ತಯಾರಿಸಿಕೊಂಡು ಅದನ್ನು ಹರ್ನಿಯಾದ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಕಾಡೆಮ್ಮೆಗಳನ್ನು ಜ್ವರ ನಿವಾರಣೆಯಿಂದ ಹಿಡಿದು ಉಳುಕಿನ ತನಕ ಹಲವು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕಾಂಬೋಡಿಯಾ, ಲಾವೋಸ್‌, ಬಾಂಗ್ಲಾದೇಶ, ಇಂಡೋನೇಷಿಯಾ ಮತ್ತು ಶ್ರೀಲಂಕಾದಲ್ಲಿ ಈ ಪ್ರಬೇಧ ಹೆಚ್ಚು ಕಡಿಮೆ ಅಳಿವಿನ ಅಂಚಿನಲ್ಲಿದೆ.

ಶಾರ್ಕ್‌ಗಳ ಸಂಖ್ಯೆಯಲ್ಲೂ ಭಾರಿ ಇಳಿಕೆ ಕಂಡು ಬಂದಿದೆ. ಏಕೆಂದರೆ ಇದರ ಈಜು ರೆಕ್ಕೆ (ಫಿನ್‌) ಚೈನೀಸ್‌ ಡಿಶ್‌ಗೆ ಹಾಗೂ ಬೇರೆ ಅಂಗಗಳು ಔಷಧಿ ನಿರ್ಮಾಣದಲ್ಲಿ ಬಳಕೆಯಾಗುತ್ತಿವೆ. ಶೇ.95ರಷ್ಟು ಶಾರ್ಕ್‌ ಈಜು ರೆಕ್ಕೆಗಳ ಕೊರತೆಯನ್ನು ಭಾರತ ನೀಗಿಸುತ್ತಿದೆ. ಫಿನ್‌ನ್ನು ಪ್ರತ್ಯೇಕಗೊಳಿಸಿದ ಬಳಿಕ ಶಾರ್ಕ್‌ ಮೀನು ನರಳಿ ನರಳಿ ಸಾಯುವಂತೆ ಮಾಡಲು ಪುನಃ ಅದನ್ನು ನೀರಿಗೆ ಎಸೆಯಲಾಗುತ್ತದೆ.

ಅಂದಹಾಗೆ, ಪ್ರಾಣಿಗಳ ಅಂಗಗಳು ಔಷಧಿಯಲ್ಲಿ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಅವುಗಳ ದೇಹದಲ್ಲಿ ಯಾವುದೇ ಚಮತ್ಕಾರಿ ಗುಣವೂ ಇಲ್ಲ. ಅದೆಲ್ಲ ಈ ದೇಶದ ಕ್ರೂರತೆ ಮತ್ತು ಉದಾಸೀನತೆಯ ಪ್ರತೀಕ. ಯಾವುದೇ ಮುಖಂಡರು ಚೀನೀಯರ ಮುಂದೆ ತಲೆ ತಗ್ಗಿಸಿ  ನಿಂತಾಗ ನಮಗೆ ಬಹಳ ಸಂಕೋಚ ಎನಿಸುತ್ತದೆ.

ಮನೇಕಾ ಗಾಂಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ