ಗೋಪಿ ತನ್ನ ಗರ್ಲ್ ಫ್ರೆಂಡ್ ಲೀಲಾಳಿಗೆ ಫೋನ್ ಮಾಡುತ್ತಿದ್ದ.
ಗೋಪಿ : ಏ ಲೀಲಾ…. ನಿನ್ನ ವಾಟ್ಸ್ಆ್ಯಪ್ ಸ್ವಲ್ಪ ಅಪ್‌ಡೇಟ್ ಮಾಡ್ಕೋ!
ಲೀಲಾ : ಅದನ್ನು ಹೇಗೆ ಮಾಡೋದು…. ನಂಗೆ ಗೊತ್ತಿಲ್ವಲ್ಲ?
ಗೋಪಿ : ವೆರಿ ವೆರಿ ಈಝಿ….. ಪ್ಲೇ ಸ್ಟೋರ್‌ಗೆ ಹೋಗು, ಅಲ್ಲಿಂದ ಮಾಡಿಕೋ.
ಲೀಲಾ : ಆದ್ರೆ….. ನಮ್ಮ ಏರಿಯಾದಲ್ಲಿ ಪ್ಲೇ ಸ್ಟೋರ್ ಇಲ್ಲ, ಜನರಲ್ ಸ್ಟೋರ್ ಮಾತ್ರ ಇದೆ. ಅಲ್ಲಿಗೆ ಹೋದ್ರೆ ಸರಿಹೋಗುತ್ತಾ?
ಮನೆಯಲ್ಲಿ ಕುಳಿತಿದ್ದ ಕಲ್ಪನಾಳಿಗೆ ಬಾಯ್‌ಫ್ರೆಂಡ್ ಸುರೇಶ್ ಫೋನ್ ಮಾಡಿ, ಕಂಪ್ಯೂಟರ್‌ನಲ್ಲಿ ಯಾವುದೋ ಫೈಲ್ ಅಪ್‌ಲೋಡ್ ಮಾಡುವುದರ ಬಗ್ಗೆ ಸೂಚನೆ ನೀಡುತ್ತಿದ್ದ.
ಸುರೇಶ್ : ಮೊದಲು ಮೈ ಕಂಪ್ಯೂಟರ್‌ಗೆ ಹೋಗಿ ರೈಟ್ ಕ್ಲಿಕ್ ಮಾಡು.
ಕಲ್ಪನಾ : ಆಯ್ತು. ಮುಂದೆ…..?
ಸುರೇಶ್ : ನೆಕ್ಸ್ಟ್ ಕಮ್ಯಾಂಡ್ ಅಂದ್ರೆ… ಈಗ ಡೀ ಡ್ರೈವ್‌ಗೆ ಹೋಗು.
ಕಲ್ಪನಾ : ಆಯ್ತು. ಮುಂದೆ….?
ಸುರೇಶ್ : ಸರಿ…. ಈಗ ಮೇಲೆ ನೋಡು ಏನಿದೆ ಅಂತ.
ಕಲ್ಪನಾ : ಮೇಲೆ… (ಛಾವಣಿ ನೋಡುತ್ತಾ) ಫ್ಯಾನ್ ಓಡ್ತಾ ಇದೆ.
ಸುರೇಶ್ : ನಿನ್ನ ತಲೆ! ಗೊತ್ತಾಗ್ಲಿಲ್ಲ ಅಂದ್ರೆ ಅದಕ್ಕೆ ಉರುಲು ಹಾಕ್ಕೋ… ಅಷ್ಟರಲ್ಲಿ ಬಂದಿರ್ತೀನಿ.
ಗುಂಡ ಬ್ಯಾಂಕಿಗೆ ಹೋದವನೆ, ಬಹಳ ಹೊತ್ತಿನಿಂದ ಒಂದೇ ಸಮನೆ ಬೇರೆ ಬೇರೆ ಮಹಡಿಗಳಿಗೆ ಹತ್ತಿ ಇಳಿದು ಸುಸ್ತಾಗಿ ಹೋಗಿದ್ದ.
ಇದನ್ನು ಗಮನಿಸಿದ ಬ್ಯಾಂಕ್ ಸಿಬ್ಬಂದಿಯೊಬ್ಬರು ಕೇಳಿದರು, “ಏನ್ರಿ…. ಆಗ್ಲಿಂದ ಓಡಾಡ್ತಾನೇ ಇದ್ದೀರಿ. ನಿಮಗೆ ಏನಾಗಬೇಕಿತ್ತು?”
“ಬ್ಯಾಂಕಿನಿಂದ 2 ಲಕ್ಷ ರೂ. ಸಾಲ ತೆಗೆದುಕೊಂಡು 2 ವರ್ಷ ಆಯ್ತು. ತೀರಿಸಕ್ಕೆ ಆಗ್ತಿಲ್ಲ. ಅದಕ್ಕೆ ಯಾರನ್ನು ಕೇಳಿದರೆ ಸಾಲ ಮನ್ನಾ ಮಾಡ್ತಾರೆ ಅಂತ….?”
ಗುಂಡ ವಿವರಿಸಿದಾಗ ಪ್ರಶ್ನೆ ಕೇಳಿದವರು ಸುಸ್ತೋ ಸುಸ್ತು!
ಬಹಳ ದಿನಗಳಾದ ಮೇಲೆ ಗುಂಡನ ತಂದೆ ಮಗನ ವಿದ್ಯಾಭ್ಯಾಸದ ಪ್ರಗತಿ ಬಗ್ಗೆ ವಿಚಾರಿಸಲೆಂದು ಶಾಲೆಗೆ ಬಂದಿದ್ದರು.
ತಂದೆ : ಟೀಚರ್…. ನಮ್ಮ ಗುಂಡ ಓದಿನಲ್ಲಿ ಪರಾಗಿಲ್ವಾ?
ಟೀಚರ್ : ಆರ್ಯಭಟ್ಟ ಇವನಿಗಾಗಿಯೇ ಸೊನ್ನೆ ಕಂಡುಹಿಡಿದಿದ್ದಾನೆ ಅಂದುಕೊಳ್ಳಿ.
ಸೋಮು ತನ್ನ ಹೊಸ ಗರ್ಲ್ ಫ್ರೆಂಡ್‌ಗೆ ಮೆಸೇಜ್ ಕಳಹಿಸಿದ, “ಐ ಲವ್ ಯೂ!”
ಸ್ಮಿತಾ ತಕ್ಷಣ ಜವಾಬು ನೀಡಿದ್ದಳು, “ಹ….ಹ್ಹ… ಹಾ….”
ಸೋಮು : ನೀನಿಲ್ಲದೆ ನಾನು ಬದುಕಿರಾರೆ. ನಿನಗಾಗಿ ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ.
ಸ್ಮಿತಾ : ಹ….ಹ್ಹ… ಹಾ….!
ಸೋಮು : ನಿನಗಾಗಿ ನಾನೆಂಥ ಸಾಹಸ, ತ್ಯಾಗ ಮಾಡಲಿಕ್ಕೂ ಸಿದ್ಧ.
ಸ್ಮಿತಾ : ಹ….ಹ್ಹ… ಹಾ….!
ಎಚ್ಚೆತ್ತ ಹುಡುಗ ಈ ಬಾರಿ ಪ್ರ್ಯಾಕ್ಟಿಕಲ್ ಮೆಸೇಜ್ ಕಳುಹಿಸಿದ.
ಸೋಮು : ನಿನ್ನ ಫೋನ್‌ಗೆ 1000/ ರೂ. ಕರೆನ್ಸಿ ಹಾಕಿಸಿದ್ದೀನಿ. ಮಿಸ್ಟ್ ಕಾಲ್ಡ್ ಕೊಡುವ ಬದಲು ಆಗಾಗ ನೀನೇ ಮಾತನಾಡಬಹುದು.
ಸ್ಮಿತಾ : ಯಾವಾಗ…. ಎಷ್ಟು ಹೊತ್ತಿಗೆ…. ಯಾವ ದಿನ?
ಸೋಮು : ಹ….ಹ್ಹ… ಹಾ….!
ಪ್ರೀತಿ ತನ್ನ ಬಾಯ್‌ಫ್ರೆಂಡ್‌ನ್ನು ಕಳೆದುಕೊಂಡು ಕಂಗಾಲಾಗಿದ್ದಳು. ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟು 4 ದಿನಗಳಾದರೂ ಏನೂ ಸುಧಾರಣೆ ಆಗಿರಲಿಲ್ಲ. ರೋಸಿ ಹೋದ ಪ್ರೀತಿ ಮಾರನೇ ದಿನ ಬಂದು ಕೇಳಿದಳು, “ಸರ್, ಕಂಪ್ಲೇಂಟ್ ಕೊಟ್ಟು 4 ದಿನ ಆಯ್ತು. ನನ್ನ ಬಾಯ್‌ಫ್ರೆಂಡ್‌ನ ನೀವು ಇನ್ನೂ ಹುಡುಕಲೇ ಇಲ್ಲ.”
“ನೋಡಮ್ಮ ನಿನ್ನ ವಿವರಗಳ ಪ್ರಕಾರ ಅವನ ಸಾಕ್ಸ್ ಸಿಕ್ಕಿದೆ. ಅದರ ನೆರವಿನಿಂದ ಹುಡುಕೋಣ ಎಂದು ನಮ್ಮ ಶ್ವಾನ ದಳವನ್ನು ಅವನ ಸಾಕ್ಸ್ ಮೂಸಿಸಿದರೆ ಪ್ರಜ್ಞೆ ತಪ್ಪಿದ ಅದು ಇದುವರೆಗೂ ಎದ್ದಿಲ್ಲ. ಅದು ಎದ್ದ ಮೇಲೆ ನೋಡೋಣ…”
ಈಗ ಪ್ರಜ್ಞೆ ಕಳೆದುಕೊಳ್ಳುವ ಸರದಿ ಪ್ರೀತಿಯದಾಗಿತ್ತು!
ಕಿರಣ್ ಸದಾ ಕವಿತಾ ಹಿಂದೆ ಬಿದ್ದಿರುತ್ತಿದ್ದ. ಕಾಲೇಜ್ ಕ್ಯಾಂಪಸ್‌ನಲ್ಲಿ ಅವಳು ಎಲ್ಲೇ ಹೋಗಲಿ ಇವನು ಕೂಡಲೇ ಹಾಜರಾಗುತ್ತಿದ್ದ. ಏನಾದರೊಂದು ನೆಪ ತೆಗೆದು ಅವಳನ್ನು ಮಾತಿಗೆ ಎಳೆಯುತ್ತಿದ್ದ. ಇದರಿಂದ ರೋಸಿಹೋಗಿದ್ದ ಕವಿತಾ ಅವನಿಂದ ದೂರವಿರುತ್ತಿದ್ದಳು. ಹೀಗೆ ಮತ್ತೊಂದು ದಿನ ಕವಿತಾ ಲೈಬ್ರೆರಿಗೆ ಬಂದಾಗ ಎಲ್ಲರೂ ಗಂಭೀರವಾಗಿ ಪುಸ್ತಕಗಳನ್ನು ಓದುತ್ತಾ ಕುಳಿತಿದ್ದರು. ಅಲ್ಲಿಗೆ ವಕ್ಕರಿಸಿದ ಕಿರಣ್, ಸುಮ್ಮನಿರಲಾಗದೆ ಪಿಸುದನಿಯಲ್ಲಿ “ಹಾಯ ಕವಿ… ಐ ಲವ್ ಯೂ!!” ಎಂದ.
“ಏನಂದೆ….?” ಎಂದು ಸಿಡುಕುತ್ತಾ ಕವಿತಾ ಅವನ ಕೆನ್ನೆಗೊಂದು ಬಾರಿಸಿದಾಗ, ಗ್ರಂಥಪಾಲಕರ ಸಮೇತ ಎಲ್ಲರೂ ಕಿರಣನತ್ತ ಕೆಕ್ಕರಿಸಿಕೊಂಡು ನೋಡತೊಡಗಿದರು.
“ಕೇಳಿಸಲಿಲ್ಲ ಅಂದ್ಮೇಲೆ… ಹೊಡೆದದ್ದು ಯಾಕೆ…?” ಕಿರಣ್ ಪೆಕರನಂತೆ ನುಡಿಯುತ್ತಾ ನಡೆದಾಗ ಎಲ್ಲರೂ ಜೋರಾಗಿ ನಕ್ಕುಬಿಟ್ಟರು.
ರಾಹುಲ್ ತನ್ನ ಗರ್ಲ್ ಫ್ರೆಂಡ್ ರೇಖಾಳಿಗೆ ವಾಟ್ಸ್ಆ್ಯಪ್ ಮೆಸೇಜ್ ಕಳುಹಿಸಿದ, “ಏನು ಮಾಡ್ತಿದ್ದೀಯಾ ಡಾರ್ಲಿಂಗ್…?”
ರೇಖಾ ಉತ್ತರಿಸಿದಳು, “ಏನೂ ಇಲ್ಲ. ಬಹಳ ಹೊತ್ತಿನಿಂದ ನೆಟ್‌ನಲ್ಲಿ ಬಿಝಿ ಆಗಿದ್ದೀನಿ.”
“ಅದಕ್ಕೆ ಅನ್ಕೊಂಡೆ…. ನಮ್ಮ ಏರಿಯಾದಲ್ಲಿ ಯಾಕೆ ನೆಟ್‌ವರ್ಕ್ ಅಷ್ಟು ಸ್ಲೋ ಆಗಿದೆ ಅಂತ. ನೀನು ಬಿಝಿ ಆದ್ಮೇಲೆ ಕೇಳ್ಬೇಕಾ?”
ರಾಹುಲ್ ಮೆಸೇಜ್‌ಗೆ ಅವಳು ಏನು ಉತ್ತರಿಸಿಯಾಳು?
ಗುಂಡ ಬೇಕೆಂದೇ ಕಾಲೇಜಿನ ಹೊಸ ಹುಡುಗಿ ಪ್ರೇಮಾಳ ಹಿಂದೆ ಸುತ್ತುತ್ತಿದ್ದ. ಅವನನ್ನು ಹುಡುಗಿಯರು ಲವ್ ಮಾಡುವ ನೆಪದಲ್ಲಿ ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಅಂತೂ ಗುಂಡ ಪ್ರೇಮಾಳ ಪ್ರೀತಿಗಾಗಿ ಕಾಯುತ್ತಿದ್ದ.
ಒಂದು ದಿನ ಅವನನ್ನು ಇಷ್ಟಪಡುತ್ತಿದ್ದ ಬೇರೊಬ್ಬ ಹುಡುಗಿ ಜೊತೆ ಕಾಲೇಜಿನಲ್ಲಿ ಕಾಣಿಸಿಕೊಂಡ ಗುಂಡ ಹೆಮ್ಮೆಯಿಂದ ಬೀಗತೊಡಗಿದ. ಅಷ್ಟರಲ್ಲಿ ಪ್ರೇಮಾ ಬಂದು ಅವನೆಡೆ ಕಣ್ಣುಬೀರಿದಾಗ, ಹಲ್ಲುಕಿರಿಯುತ್ತಾ ಅವನು ನಿಂತುಬಿಟ್ಟ. ಆಗ ಆ ಹುಡುಗಿ ಕೋಪದಿಂದ ಹೊರಟೇಹೋದಳು. ಪ್ರೇಮಾಳನ್ನು ಮಾತನಾಡಿಸಲು ಧೈರ್ಯವಾಗದೆ ಅವನು ಬೆವರತೊಡಗಿದ.
“ಪ್ರೇಮದಲ್ಲಿ ಹಿಗ್ಗುವ ಬದಲು ಗುಂಡ ಬೆರುತ್ತಿದ್ದಾನಲ್ಲ…..” ಯಾರೋ ಛೇಡಿಸಿದಾಗ ಎಲ್ಲರೂ ನಕ್ಕರು.
ವಿನುತಾ ಕಾಲೇಜಿನ ಮಹಾನ್ ಅಪ್ ಟು ಡೇಟ್ ಅಮ್ಮಣ್ಣಿ ಆಗಿದ್ದಳು. ಎಲ್ಲದರಲ್ಲೂ ದೋಷ ಹುಡುಕುವುದೇ ಅವಳ ಸ್ವಭಾವ ಬಲು ಸೂಕ್ಷ್ಮ ಪ್ರಕೃತಿಯ ಅವಳು ಬಡಪಟ್ಟಿಗೆ ಯಾವುದನ್ನೂ ಒಪ್ಪುತ್ತಿರಲಿಲ್ಲ.
ಕಾಲೇಜಿನಿಂದ ಸಹಪಾಠಿಗಳೆಲ್ಲ ಸೇರಿ ಗೆಳೆಯ ಅರುಣನ ಮನೆಗೆ ಪಾರ್ಟಿಗೆಂದು ಹೊರಟರು. ಅರುಣನ ಮನೆ ಇಕ್ಕಟ್ಟಾದ ಗಲ್ಲಿ ಮಧ್ಯೆ, ನಡೆಯಲು ಅನಾನುಕೂಲ ಆಗುವಂತೆ, ಮೋರಿ ದಾಟಿಕೊಂಡು ಹೋಗಬೇಕಿತ್ತು. ಅಲ್ಲಿ ನೊಣಗಳ ಕಾಟ ಹೆಚ್ಚು.
2 ನೊಣಗಳು ಆಗಾಗ ಬಂದು ವಿನುತಾಳ ಮುಖ, ಮೈಕೈ ಮೇಲೆ ಕುಳಿತು ಹಿಂಸೆ ಕೊಡುತ್ತಿದ್ದವು. ಅವನ್ನು ಓಡಿಸಿ ಓಡಿಸಿ ಅವಳು ಸೋತಳು.
ಆ ನೊಣಗಳ ಕಾಟದಿಂದ ಪಾರ್ಟಿ ಎಂಜಾಯ್ ಮಾಡಲಾಗದೆ ಅವಳು ಸಿಡುಕಿದಳು, “ಅರುಣ್, ನಿಮ್ಮ ಮನೆ ನೊಣ ಸಹಿಸಿ ಸಾಕಾಯ್ತಪ್ಪ…. ಥೂ!”
“ಎಲ್ಲಿ ಕೊಳೆ ಇರುತ್ತೋ ಅಲ್ಲಿ ನೊಣ ಹೋಗಿ ಕೂರುವುದು ಸಹಜ ಅಲ್ವೇ?” ಎಂದು ಅರುಣ್ ಹೇಳಿದಾಗ ಎಲ್ಲರೂ ಹೋ ಎಂದು ಹುಯಿಲಿಟ್ಟರು. ವಿನುತಾ ತೆಪ್ಪಗಾದಳು.