ಈಗ ಎಲ್ಲೆಡೆ ಹೊಸ ಹೊಸ SOP(Standard Operating Procedure - ಪ್ರಮಾಣಿತ ಕಾರ್ಯಾಚರಣೆ ವಿಧಾನ)ಗಳದೇ ಚರ್ಚೆ. ಆನೆ ಶಿಬಿರಕ್ಕೆ SOP, ಟ್ರೆಕ್ಕಿಂಗ್ ಗೆ SOP, ಕಾಡುಕೋಣ ಹಿಡಿಯೋದಕ್ಕೆ SOP... ಅರಣ್ಯ ಸಚಿವರ ಪ್ರಯತ್ನ ಶ್ಲಾಘನೀಯ. ಆದರೆ, ದುರಂತವೆಂದರೆ ಈಗಾಗಲೇ ಇರುವ SOPಗಳನ್ನು ಅನುಷ್ಠಾನ ಮಾಡುವುದಕ್ಕೆ ಮಾತ್ರ ಅರಣ್ಯಾಧಿಕಾರಿಗಳಿಗೆ ಯಾವುದೇ ಉತ್ಸಾಹವಿಲ್ಲ.
ಉರಗ ರಕ್ಷಣೆಯ SOP (ಪರಿಣಾಮಕಾರಿ ಮಾನವ-ಹಾವು ಸಂಘರ್ಷ ನಿರ್ವಹಣೆ ಮತ್ತು ತಗ್ಗಿಸುವಿಕೆ ಕಾರ್ಯಾಚರಣೆ ಕೈಪಿಡಿ - 2022) ಈಗಾಗಲೇ ಇದೆ. ರಾಜ್ಯದ ಯಾವ ಅರಣ್ಯ ವಿಭಾಗದಲ್ಲೂ ಅನುಷ್ಠಾನ ಮಾಡಲು ಯಾರಿಗೂ ಮನಸ್ಸಿಲ್ಲ. ಅರಣ್ಯ ಸಚಿವರು, ದಿನಾಂಕ: 18/09/2025 ರಂದು, "ಅರಣ್ಯ ಇಲಾಖೆಯಲ್ಲಿ ಉರಗ ರಕ್ಷಕರ ಕೊರತೆ ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ರಾಜ್ಯದ ಎಲ್ಲಾ ಅರಣ್ಯ ವಲಯಗಳ ವ್ಯಾಪ್ತಿಯಲ್ಲಿ ಕನಿಷ್ಠ 4-5 ಮುಂಚೂಣಿ ಸಿಬ್ಬಂದಿಗೆ ಉರಗ ರಕ್ಷಣೆಯ ತರಬೇತಿ ಕೊಡಿಸುವುದು ಸೂಕ್ತವಾಗಿರುತ್ತದೆ" ಎಂದು ಮಹತ್ವದ ಆದೇಶ ಹೊರಡಿಸಿದರು. ದುರಾದೃಷ್ಟವಶಾತ್, 8 ತಿಂಗಳು ಕಳೆದರೂ ಹೆಚ್ಚಿನ ಅರಣ್ಯ ವಿಭಾಗಗಳಲ್ಲಿ ಅಧಿಕಾರಿಗಳು ಇದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನ ಮಾಡುತ್ತಿಲ್ಲ. ಸಿಬ್ಬಂದಿಗಳಿಗೆ ಉರಗ ರಕ್ಷಣೆಯ ಸೂಕ್ತ ತರಬೇತಿ ಕೊಡಿಸುತ್ತಿಲ್ಲ. ಉರಗ ರಕ್ಷಣೆಯ SOP ಯಲ್ಲಿ, "ಹಾವು ರಕ್ಷಣೆಯ ತರಬೇತಿ 4-5 ದಿನಗಳದ್ದಾಗಿರಬೇಕು, ವಸತಿ ಸ್ವರೂಪದಿಂದ ಕೂಡಿರಬೇಕು" ಎಂಬರ್ಥದಲ್ಲಿ ಹೇಳಲಾಗಿದೆ. ಶಿವಮೊಗ್ಗ ಅರಣ್ಯ ವಿಭಾಗದಲ್ಲಿ ಕಾಟಾಚಾರಕ್ಕೆ ಒಂದು ದಿನದ ಕಾರ್ಯಕ್ರಮ ಮಾಡಲಾಗಿದೆ.

"ಕಾಳಿಂಗ ಸರ್ಪಗಳು ಮನೆ-ತೋಟ ಪ್ರದೇಶಗಳಿಗೆ ಬಂದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ತರಬೇತಿ ಪಡೆದ ಸಿಬ್ಬಂದಿಯೇ ರಕ್ಷಣಾ ಕಾರ್ಯಾಚರಣೆ ನಡೆಸಬೇಕು. ಖಾಸಗಿ ವ್ಯಕ್ತಿಗಳು ಮತ್ತು ಖಾಸಗಿ ಸಂಸ್ಥೆಗಳ ನೆರವು ಪಡೆಯಬಾರದು" ಎಂದು ಸಚಿವರು ಐತಿಹಾಸಿಕ ಆದೇಶ ಹೊರಡಿಸಿದರು. ಅದರಿಂದ ಬೇಕಾಬಿಟ್ಟಿ ಕಾಳಿಂಗ ಸರ್ಪ ಸೆರೆ ಹಿಡಿಯುವುದು ಬಹುತೇಕ ನಿಂತಿತು. ದುರಾದೃಷ್ಟವಶಾತ್, ಇಲಾಖೆಯ ಸಿಬ್ಬಂದಿಗಳು ಜನವಸತಿ ಪ್ರದೇಶಗಳಿಗೆ ಕಾಳಿಂಗ ಸರ್ಪ ಬಂದಾಗ, ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಕೌಶಲ್ಯ ಕಲಿಯುವ ಪ್ರಯತ್ನ ಮಾಡುವುದು ಬಿಟ್ಟು, ಈಗಲೂ ಖಾಸಗಿ ವ್ಯಕ್ತಿಗಳಿಂದ ಹಾವು ಹಿಡಿಸುವುದು ಅಲ್ಲಲ್ಲಿ ಕಂಡುಬರುತ್ತಿದೆ. ಜೊತೆಗೆ ದೊಣ್ಣೆ, ಪ್ಲಾಸ್ಟಿಕ್ ಚೀಲದಲ್ಲಿ ಹಾವು ಹಿಡಿಯಲಾಗುತ್ತಿದೆ. ಕನಿಷ್ಠ ಸ್ನೇಕ್ ಕ್ಯಾಚಿಂಗ್ ಬ್ಯಾಗ್, ಸ್ಟಿಕ್ ಮತ್ತು ಸಂಬಂಧಿಸಿದ ಕಿಟ್ ಕೊಡಲಾರದಷ್ಟು, ಉರಗ ರಕ್ಷಣೆಯ ಬಗೆಗೆ ಇಲಾಖೆ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ.
ಅರಣ್ಯ ಸಚಿವರ ಆದೇಶಗಳಿಗೆ ನಿಜವಾದ ಬೆಲೆ ಬರಬೇಕಾದರೆ ಅದನ್ನು ಅಧಿಕಾರಿಗಳು ಪಾಲಿಸುವ ಪ್ರಯತ್ನ ಮಾಡಬೇಕು ಅಲ್ಲವೇ...? Eshwar Khandre Karnataka Forest Department
- Nagaraj Koove/ನಾಗರಾಜ ಕೂವೆ





