ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಹಿಕಾರು ನಕಾಮುರ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್ ಅವರ ಗೆಲುವಿನ ಸರಪಣಿ ಮುರಿದು ಅಮೋಘ ಜಯ ಸಾಧಿಸಿದ್ದಾರೆ.
ಭಾರತದ ಇನ್ನೊಬ್ಬ ಆಟಗಾರ ಅರ್ಜುನ್ ಇರಿಗೇಶಿ ಮಂಗಳವಾರ ಎಂಟನೇ ಸುತ್ತಿನಲ್ಲಿ ಅಮೆರಿಕದ ಫ್ಯಾಬಿಯಾನೋ ಕರುವಾನ ಅವರನ್ನು ಸೋಲಿಸಿದ್ದಾರೆ.
ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಹಾಗೂ ಮಾಜಿ ಚಾಂಪಿಯನ್ ನಕಾಮುರ ಅವರು 19 ವರ್ಷದ ಗುಕೇಶ್ ಅವರನ್ನು ಸೋಲಿಸುವ ಮೂಲಕ ಮೂರನೇ ಸುತ್ತಿನಲ್ಲಿ ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸಿಕೊಂಡರು. ನಾಲ್ಕೂವರೆ ಗಂಟೆ ಕಾಲ ಬೆಳೆದ ಎಂಟನೇ ಸುತ್ತಿನ ಪಂದ್ಯದಲ್ಲಿ 37 ವರ್ಷ ವಯಸ್ಸಿನ ನಕಾಮುರ, ಗುಕೇಶ್ ಅವರಿಗೆ ಚೇತರಿಸಿಕೊಳ್ಳಲು ಯಾವುದೇ ಅವಕಾಶ ಕೊಡಲಿಲ್ಲ.
ಎರಡು ಸುತ್ತಿನ ಪಂದ್ಯಗಳು ಉಳಿದಿದ್ದು, ಗುಕೇಶ್ ಮತ್ತು ನಕಾಮುರ ತಲಾ 11.5 ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಇರಿಗೇಶಿ ಅವರಿಗೆ ಸೋತರೂ ಕರುವಾನ 12.5 ಪಾಯಿಂಟ್ಸ್ ಕಲೆಹಾಕಿದ್ದು ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಕಾರ್ಲ್ಸನ್ (12 ಪಾಯಿಂಟ್) ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಎರಡು ಸುತ್ತಿನ ಆಟ ಮಾತ್ರ ಬಾಕಿ ಉಳಿದಿದೆ.
ಕಾರ್ಲ್ಸನ್ ಎಂಟನೇ ಸುತ್ತಿನಲ್ಲಿ ಚೀನಾದ ವೀ ಯಿ (8) ಅವರ ಎದುರು ಆರ್ಮ್ಗೆಡನ್ನಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಇರಿಗೇಶಿ (10.5 ಪಾಯಿಂಟ್ಸ್) ಆರನೇ ಸ್ಥಾನದಲ್ಲಿದ್ದಾರೆ.
ಕೊನೇರು ಹಂಪಿ ಮುನ್ನಡೆ: ಎರಡು ಬಾರಿಯ ವಿಶ್ವ ರ್ಯಾಪಿಡ್ ಚಾಂಪಿಯನ್ ಕೋನೇರು ಹಂಪಿ (13.5 ಪಾಯಿಂಟ್ಸ್) ಮಹಿಳಾ ವಿಭಾಗದ ಎಂಟನೇ ಸುತ್ತಿನಲ್ಲಿ ಸ್ಪೇನ್ನ ಸಾರಾ ಖಾಡೆಮ್ ಅವರನ್ನು ಮಣಿಸಿ ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ.ವಿಶ್ವ ಚಾಂಪಿಯನ್, ಚೀನಾದ ವೆನ್ಜುನ್ (12.5) ಎರಡನೇ ಸ್ಥಾನದಲ್ಲಿದ್ದಾರೆ. ಜು ಅವರ ಆರು ಪಂದ್ಯಗಳ ಗೆಲುವಿನ ಸರಣಿಯನ್ನು ಭಾರತದ ಆರ್.ವೈಶಾಲಿ ಅವರು ಟೈಬ್ರೇಕ್ ಪಂದ್ಯದ ಮೂಲಕ ಮುರಿದರು. ವೈಶಾಲಿ (9.5) ಐದನೇ ಸ್ಥಾನದಲ್ಲಿದ್ದಾರೆ.