ಗೆಳೆಯನನ್ನು ಮದುವೆಯ ಒಂದು ವರ್ಷದ ನಂತರ ಭೇಟಿಯಾದ ಅಮಿತ್ ಪ್ರಶ್ನಿಸಿದ.
ಅಮಿತ್ : ಹೇಗಿದ್ದಿ ವಿಜಯ್? ನಿನ್ನ ವೈವಾಹಿಕ ಜೀವನ ಚೆನ್ನಾಗಿ ನಡೆಯುತ್ತಿದೆ ತಾನೇ?
ವಿಜಯ್ : ಹೌದು, ಮನೆ ಅಳಿಯನಾಗಿ ನಾನು ಬಲು ನೆಮ್ಮದಿಯಿಂದ ವೈವಾಹಿಕ ಜೀವನ ನಡೆಸುತ್ತಿದ್ದೇನೆ.
ಅಮಿತ್ : ನಿನ್ನ ವೈವಾಹಿಕ ಜೀವನದ ಯಶಸ್ಸಿನ ಗುಟ್ಟೇನು?
ವಿಜಯ್ : ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅನುಸರಿಸುತ್ತಿರುವಂತೆಯೇ ನಮ್ಮ ಮನೆಯಲ್ಲೂ ಇದೆ.
ಅಮಿತ್ : ಅಂ.....ದ....ರೆ.....?
ವಿಜಯ್ : ನನ್ನ ಹೆಂಡತಿ ಇಡೀ ಮನೆಗೆ ಗೃಹಮಂತ್ರಿ. ನಮ್ಮತ್ತೆ ರಕ್ಷಣಾಮಂತ್ರಿ. ನನ್ನ ಮಾವ ಮನೆಯ ವಿದೇಶಾಂಗ ಸಚಿವರು. ನನ್ನ ನಾದಿನಿ ಮುಖ್ಯಮಂತ್ರಿ, ನನ್ನ ಮೈದುನ ಪ್ರಧಾನಮಂತ್ರಿ.
ಅಮಿತ್ : ಮತ್ತೆ ಎಲ್ಲರೂ ಮಂತ್ರಿಗಳಾದರೆ ನೀನೇನಯ್ಯ ಅಲ್ಲಿ?
ವಿನಯ್ : ಅವರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುವ ಸಾಮಾನ್ಯ ಪ್ರಜೆ!
ಉಮೇಶ ಮದುವೆಯ ನಂತರ ಮೊದಲ ಸಲ ಮಾವನ ಮನೆಗೆ ಬಂದಿದ್ದ. ಅಳಿಯ ಮೊದಲ ಸಲ ಬಂದಿರುವನೆಂದು ಅವನಿಗೆ ಒಳ್ಳೆಯ ಪೌಷ್ಟಿಕ ಆಹಾರ ನೀಡಬೇಕೆಂದು ಅತ್ತೆ ಸಲಾಡ್, ರಾಯ್ತಾ, ಫಲಾಮೃತ, ರಸಾಯನ ನೀಡತೊಡಗಿದರು. ಅದಾದ ಮೇಲೆ ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು, ಮೂಲಂಗಿ, ಸೌತೇಕಾಯಿ, ದಂಟು, ಅರಿವೆ, ಸಬ್ಬಸಿಗೆ ಸೊಪ್ಪು ಇತ್ಯಾದಿ ಬರತೊಡಗಿತು. ಅಳೀಮಯ್ಯ ನಿಜಕ್ಕೂ ಕಂಗಾಲು!
ಮರುದಿನ ಔಪಚಾರಿಕವಾಗಿ ಅತ್ತೆ ಅಳಿಯನನ್ನು ``ಏನಪ್ಪ, ಇವತ್ತೇನು ಅಡುಗೆ ಮಾಡಿಸೋಣ?'' ಎಂದು ಕೇಳಿದರು.
``ನಾನು ಸಿಟಿಯಿಂದ ಹಳ್ಳಿಗೆ ಬಂದಿದ್ದೀನಿ ಸರಿ. ಇಲ್ಲಿ ಪೌಷ್ಟಿಕ ಆಹಾರ ಸಿಗುತ್ತೆ ಸರಿ. ದಿನಾ ಸೊಪ್ಪುಸೆದೆ ಹಾಕುವ ಬದಲು ನನ್ನನ್ನು ತೋಟದಲ್ಲೇ ಮೇಯಲಿಕ್ಕೆ ಬಿಟ್ಟುಬಿಟ್ಟರೆ ಒಳ್ಳೆಯದಲ್ಲವೇ?''
ಅಳಿಯನ ಮಾತು ಕೇಳಿ ಮಾವನ ಮನೆಯವರು ಸುಸ್ತಾದರು.
ಮೋಹನ್ : ಅದೇನಯ್ಯ, ನಿನ್ನ ಹೆಂಡತಿ ಬಜಾರಿ, ಬಾಯಿಬಡುಕಿ ಆಗಿದ್ದವಳು ಇದ್ದಕ್ಕಿದ್ದಂತೆ ಸೈಲೆಂಟ್ ಆಗಿಹೋಗಿದ್ದಾಳೆ?
ರಾಜೇಶ್ : ಹೀಗೆ ಒಂದು ಸಲ ನಮ್ಮೂರಿನ ಹೊಸ ಸ್ಟುಡಿಯೋಗೆ ಫೋಟೋ ತೆಗೆಸೋಕ್ಕೆ ಅಂತ ಇಬ್ಬರೂ ಹೋದೆವು. ದಾರಿ ಉದ್ದಕ್ಕೂ ಜಗಳ ಆಡುತ್ತಿದ್ದಳು. ಫೋಟೋಗ್ರಾಫರ್ ಇವಳಿಗೆ, ನೀವು ಮೌನವಾಗಿ ನಿಂತಿರುವಾಗ ರಮ್ಯಾ ತರಹ ಕಾಣಿಸುತ್ತೀರಿ ಅಂದಿದ್ದಕ್ಕೆ ಆಗಿನಿಂದ ಹೀಗಾಗಿದ್ದಾಳೆ.
ಆಕಸ್ಮಿಕವಾಗಿ ಎದುರಾದ ಗೆಳೆಯ ರಾಮಣ್ಣನವರನ್ನು ಕಂಡು ಸೋಮಣ್ಣ ಕೇಳಿದರು, ``ಅಯ್ಯೋ ಪಾಪ, ರಾಮಣ್ಣ ನಿಮ್ಮ ಹೆಂಡತಿ ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟರಂತೆ, ಹೌದೇ?''
``ಹ್ಞೂಂ ಸೋಮಣ್ಣ, ನಿಮಗೂ ಗೊತ್ತಾಯ್ತೇ?''
``ನೀವು ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ಕೊಟ್ಟಿರಿ ತಾನೇ?''
``ಇಲ್ಲ.... ಇಲ್ಲ....''
``ಅದೇಕೆ?''
``ಕಳೆದ ಸಲ ಅವಳು ಹೀಗೆ ಮಾಯವಾದಾಗ ಒಂದು ಎಡವಟ್ಟಾಗಿ ಹೋಯಿತು. ಅದಕ್ಕೆ ಈ ಸಲ ಬೇಡವೆಂದು ಸುಮ್ಮನಾದೆ''
``ಹೌದೇ? ಅಂಥದ್ದೇನಾಯ್ತು?''
``ಕಳೆದ ಸಲ ದೂರು ಕೊಟ್ಟಾಗ ಆ ಪೊಲೀಸ್‌ನವರು ಸೀರಿಯಸ್ ಆಗಿ ನನ್ನ ಹೆಂಡತಿಯನ್ನು ಹುಡುಕಿ ಮನೆಗೆ ಕರೆದುಕೊಂಡು ಬಂದುಬಿಡುವುದೇ?''
ಬಹಳ ದಿನಗಳ ನಂತರ ದಿವಾಕರ್ ಗೆಳೆಯ ಪ್ರತಾಪನ ಮನೆಗೆ ಬಂದಿದ್ದ. ಅಲ್ಲಿ ನಡೆಯುತ್ತಿದ್ದ ಘೋರ ಅನರ್ಥ ಕಂಡು ನಡುಗಿಹೋದ. ಏಕೆಂದರೆ 1-2 ಅಡಿಯ ಘಟಸರ್ಪ ಪ್ರತಾಪನ ಅತ್ತೆಯ ಕಾಲಿಗೆ ಸುತ್ತಿಕೊಂಡು ಅವರ ಕಾಲನ್ನು ಬಲವಾಗಿ ಕಚ್ಚಿ ಹಿಡಿದಿತ್ತು! ಆಕೆ ವಿಚಲಿತರಾಗದೆ ಸ್ವೆಟರ್ ಹೆಣೆಯುತ್ತಾ ನಿಂತಿದ್ದರು. ಎದುರಿಗೆ ಅಳಿಯ ಪ್ರತಾಪ್ ಹಾಯಾಗಿ ಪೇಪರ್ ಓದುತ್ತಾ ಕುಳಿತಿದ್ದ. ಅದನ್ನು ಕಂಡು ದಿವಾಕರ್ ಗಾಬರಿಯಿಂದ ಕಿರುಚಿದ, ``ಅಯ್ಯೋ! ಅತ್ತೆಯ ಮೇಲೆ ಏನೇ ಕೋಪವಿರಲಿ.... ಇಂಥ ಆಪತ್ತಿನ ಸಮಯದಲ್ಲಿ ದ್ವೇಷ ಸಾಧಿಸುವುದೇ? ಅವರನ್ನು ಆ ಹಾವು ಕಚ್ಚುತ್ತಿದ್ದರೆ ಸುಮ್ಮನೆ ಕುಳಿತಿದ್ದೀಯಲ್ಲ ನೀನು?'' ಎಂದು ಪ್ರತಾಪನತ್ತ ರೇಗಿದ. ಪ್ರತಾಪ್ ಶಾಂತ ಸ್ವರದಲ್ಲಿ ಸಮಾಧಾನವಾಗಿ, ``ನೀನು ಅಂದುಕೊಂಡಂಥ ಯಾವ ಪ್ರಮಾದ ಅಲ್ಲಿ ನಡೆಯುತ್ತಿಲ್ಲ. ಅದರ ವಿಷದ ಸ್ಟಾಕ್ ಖಾಲಿ ಆಗಿರಬೇಕು. ಇಲ್ಲಿ ಬಂದು ರೀಚಾರ್ಜ್ ಮಾಡಿಕೊಳ್ಳುತ್ತಿದೆ, ಅದಿರಲಿ ನೀನೇನು ತಗೋತೀಯಾ... ಕಾಫಿ ಟೀ?