ಗುಂಡ : ಆಗ್ರಾದ ತಾಜ್‌ ಮಹಲ್ ಯಾವುದಕ್ಕೆ ಸಾಕ್ಷಿ ಅಂತೀಯ?

ಕಿಟ್ಟಿ : ಹೆಂಡತಿ ಬದುಕಿರುವಾಗ ಮಾತ್ರವಲ್ಲ, ಸತ್ತ ಮೇಲೂ ಗಂಡನ ಕಾಸು ಹೇಗೆ ಖಾಲಿ ಮಾಡಿಸುತ್ತಾಳೆ ಎಂಬುದಕ್ಕೆ!

ವರದಿಗಾರ : ಸ್ವಾಮಿ, ಮದುವೆಗೆ ಮೊದಲು ನೀವೇನು ಮಾಡುತ್ತಿದ್ದಿರಿ?

ನವಪತಿ : (ಕಂಗಳಲ್ಲಿ ಕಂಬನಿ ಮಿಡಿಯುತ್ತಾ) ನನ್ನ ಮನಸ್ಸು ಬಯಸ್ಸಿದ್ದನ್ನು…..

ಆಗ ರಾತ್ರಿ 10 ಗಂಟೆ ದಾಟಿತ್ತು. ಒಂದೇ ಸಮನೆ ಜೋರಾಗಿ ಮಳೆ ಸುರಿಯುತ್ತಿತ್ತು. 60 ದಾಟಿದ ವಿಶಾಲ ಕಾಯದ ವಿಶಾಲಮ್ಮ ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ಬಸ್ಸು ಹತ್ತಿದರು.

ವಿಶಾಲಮ್ಮ : ಏನಪ್ಪ, ಮದ್ದೂರು ಬಂದಾಗ ನನ್ನ ಸ್ವಲ್ಪ ಎಬ್ಬಿಸಿಬಿಡು.!

ಕಂಡಕ್ಟರ್‌ : ಆಯ್ತಮ್ಮ…. ನೀವು ಮಲಗಿ.

ಆದರೆ ಕಂಡಕ್ಟರ್‌ ಯಾವುದೋ ಜ್ಞಾನದಲ್ಲಿ ಮದ್ದೂರು ಬಂದಾಗ ಅವರನ್ನು ಎಬ್ಬಿಸುವುದನ್ನು ಮರೆತಬಿಟ್ಟ. ಬಸ್ಸು ಶರವೇಗದಲ್ಲಿ ಚಲಿಸಿ ಅದಾಗಲೇ ಬಿಡದಿಗೆ ಬಂದಿತ್ತು.

ಎಚ್ಚರಗೊಂಡ ವಿಶಾಲಮ್ಮ ಕೇಳಿಯೇಬಿಟ್ಟರು, “ಏನಪ್ಪ… ಮದ್ದೂರು ಬಂತೇ?”

ಕಂಡಕ್ಟರ್‌ : ಓ…. ಆಗಲೇ ಬಂತಲ್ಲ… ನಾವೀಗ ಬಿಡದಿ ತಲುಪಿಬಿಟ್ಟಿದ್ದೇವೆ.

ವಿಶಾಲಮ್ಮ : ಈ ನಡುರಾತ್ರಿಯಲ್ಲಿ ನಾನು ಏನಪ್ಪ ಮಾಡಲಿ? ನನ್ನನ್ನು ವಾಪಸ್ಸು ಅಲ್ಲಿಗೇ ಕರೆದುಕೊಂಡು ಹೋಗಪ್ಪ… (ಜೋರಾಗಿ ಬಿಕ್ಕಳಿಸಿ ಅಳತೊಡಗಿದರು)

ಆಕೆ ಅಷ್ಟು ಜೋರಾಗಿ ಅಳುವುದನ್ನು ಕಂಡು, ಸಮಯ ಸಂದರ್ಭ ಅರಿತ ಇತರ ಸಹಪ್ರಯಾಣಿಕರು ಬಸ್ಸನ್ನು ವಾಪಸ್ಸು ಮದ್ದೂರಿನ ಕಡೆ ತಿರುಗಿಸುವಂತೆ ಹೇಳಿದರು.

ಅಂತೂ ವಾಪಸ್ಸು ಮದ್ದೂರಿಗೆ ಬಂದಿದ್ದಾಯಿತು. ಕಂಡಕ್ಟರ್‌ ಸಿಡುಕುತ್ತಾ, “ಓ ಇಳಿಯಮ್ಮೋ…. ನಿನ್ನ ಮದ್ದೂರು ಬಂದಿದೆ ನೋಡು,” ಎಂದ.

ವಿಶಾಲಮ್ಮ : ಆದರೆ… ನಾನು ಯಾಕಪ್ಪ ಇಳಿಯಲಿ?

ಕಂಡಕ್ಟರ್‌ : ಮತ್ತೆ…. (ರಪ ರಪ ತಲೆ ಕೆರೆದುಕೊಳ್ಳುತ್ತಾ)  ವಾಪಸ್ಸು ಮದ್ದೂರಿಗೆ ಕರೆದೊಯ್ಯಲು ಗಲಾಟೆ ಮಾಡಿದ್ದು ನೀನೇ ತಾನೇ?

ವಿಶಾಲಮ್ಮ : ಅಯ್ಯೋ.. ಮೈಸೂರು ಬಿಡೋವಾಗ ಡಾಕ್ಟರ್‌ ಹೇಳಿದ್ದರು, ಹೇಗೂ ಪ್ರಯಾಣ ಹೊರಟು ಬಿಟ್ಟಿದ್ದೀರಿ, ಸರಿ. ಮದ್ದೂರು ಬಂದಾಗ ಮರೆಯದೆ ಈ 2 ಮಾತ್ರೆ ತಗೊಳ್ಳಿ ಅಂದಿದ್ದರು. ಈಗ ತಗೊಂಡಾಯಿತು. ನನ್ನ ಮಗಳ ಮನೆ ಇರೋದು ಬೆಂಗಳೂರಿನಲ್ಲಿ… ನಡಿ ಅಲ್ಲಿಗೇ!

ಕಂಡಕ್ಟರ್‌ ಸಮೇತ ಬಸ್ಸಿನಲ್ಲಿ ಅನೇಕರು ಪ್ರಜ್ಞೆ ತಪ್ಪಿ ಬಿದ್ದರಂತೆ….!

ಗಂಡನ 5 ಮಿಸ್‌ ಕಾಲ್ ‌ಇದ್ದರೆ ಅದನ್ನು ಗಮನಿಸಿ ಹೆಂಡತಿ ಹೇಳಿದಳಂತೆ, “ಏನಾಯ್ತೋ ಏನೋ…?”

ಅದೇ ಗಂಡನಿಗೆ ಹೆಂಡತಿಯಿಂದ 5 ಮಿಸ್‌ ಕಾಲ್ ಹೋಗಿದ್ದರೆ ಅವನು ಪೇಚಾಡುತ್ತಾನೆ, “ಇಂದು ಏನು ಕಾದಿದೆಯೋ ಏನೋ…?”

ಆಧುನಿಕ ಟೆಕ್ನಾಲಜಿ ತಂದೊಡ್ಡಿದ ಅವಾಂತರ ನೋಡಿ :

ಬಹಳ ಹೊತ್ತಾಗಿತ್ತು. ರಾತ್ರಿ 11.45 ದಾಟಿದರೂ ಅಡುಗೆಮನೆಯಲ್ಲಿ ಸಾವಿತ್ರಮ್ಮನ ಕೆಲಸ ಮುಗಿದಿರಲಿಲ್ಲ. ಏನೋ ಸಹಾಯ ಬೇಕೆಂದು ಆಕೆ ಪತಿಯನ್ನು ಕೂಗಿದರು. ಪಾಪ, ಆಕೆಗೆ ಯಾವ ಸಹಾಯವೂ ಸಿಗಲಿಲ್ಲ. ಎಲ್ಲೋ ಮಲಗಿರಬೇಕು ಎಂದು ಸುಮ್ಮನಾದರು.

ಎಲ್ಲಾ ಕೆಲಸ ಮುಗಿಸಿ ಸಾವಿತ್ರಮ್ಮ ಮಲಗಲು ಹೋದಾಗ ರಾತ್ರಿ 12 ಹೊಡೆಯಿತು. ನೋಡುತ್ತಾರೆ, ಪತಿ ತಮ್ಮ ಆಫೀಸ್‌ಫೈಲುಗಳ ನಡುಲೆ ತಲೆ ಇರಿಸಿಕೊಂಡು ಹಾಗೇ ನಿದ್ರಿಸಿಬಿಟ್ಟಿದ್ದಾರೆ.

`ಎಷ್ಟು ಕೆಲಸವೋ ಏನೋ…’ ಎಂದು ಪೇಚಾಡುತ್ತಾ ಪತಿಯ ಮುಗ್ಧ ಮುಖ ಸವರುತ್ತಾ, ಒಳಗೆದ್ದು ಮಲಗುವಂತೆ ಹೇಳಿದರು. ಏನಾಯಿತೋ ಏನೋ… ಇದ್ದಕ್ತಿದ್ದಂತೆ ಜೋರಾಗಿ ಪತಿಯ ಬೆನ್ನ ಮೇಲೆ ಗುದ್ದಿಬಿಡುವುದೇ?

ಪತಿ ಮಹಾಶಯರು, “ಏನಾಯ್ತು.. ಏನು…?” ಎನ್ನುತ್ತಾ ಎದ್ದು ಕುಳಿತರು.

ಸಾವಿತ್ರಮ್ಮ ಅವರಿಗೆ ಅವರ ವಾಟ್ಸ್ ಆ್ಯಪ್‌ ಕಡೆ ತೋರಿಸಿದರು. ಅದರಲ್ಲಿ ಸ್ಪಷ್ಟವಾಗಿ ಲಾಸ್ಟ್ ಸೀನ್‌ 5 ಮಿನಿಟ್‌ ಅಗೋ ಎಂದಿರಬೇಕೇ? ಯಂತ್ರ ಎಂದೂ ಸುಳ್ಳು ಹೇಳದಂತೆ!

ಪತಿ : ನನ್ನ ಹೃದಯ ಒಂದು ಮೊಬೈಲ್ ‌ಆದರೆ ನೀನು ಅದರ ಸಿಮ್ ಇದ್ದಂತೆ….

ಪತ್ನಿ : ಅದೇನೋ ಸರಿ, ನಿಮ್ಮನ್ನು ಒಂದು ಮಾತು ಕೇಳಬೇಕು.

ಪತಿ : ಏನದು…. ಕೇಳು!

ಪತ್ನಿ : ನಿಮ್ಮ ಮೊಬೈಲ್ ಡಬಲ್ ಸಿಮ್ ನದು ಅಲ್ಲ ತಾನೇ?

ಗುಂಡ ಮಲಗುವ ಮುನ್ನ ಪ್ರತಿ ರಾತ್ರಿ ಅಡುಗೆಮನೆಗೆ ಬಂದು ಸಕ್ಕರೆ ಡಬ್ಬಾ ತೆಗೆದು ಪರೀಕ್ಷಿಸುತ್ತಿದ್ದ. ನಂತರ ಮಲಗಲು ಹೋಗುತ್ತಿದ್ದ. ಇದನ್ನು ಗಮನಿಸಿದ ಗುಂಡಿ ತಡೆಯಲಾರದೆ ಕೇಳಿಯೇಬಿಟ್ಟಳು.

ಗುಂಡಿ : ಯಾಕ್ರಿ, ಹೀಗೆ ಪ್ರತಿ ಸಲ ಸಕ್ಕರೆ ಡಬ್ಬಾ ಚೆಕ್‌ ಮಾಡಿ ಮಲಗುತ್ತೀರಿ?

ಗುಂಡ : ಅದೇ ಕಣೆ, ನನಗೆ ಡಾಕ್ಟರ್‌ ಹೇಳಿದ್ದಾರೆ. ಪ್ರತಿ ದಿನ ನಿಮ್ಮ ಶುಗರ್‌ ಲೆವೆಲ್ ‌ಚೆಕ್‌ ಮಾಡಿ ಮಲಗಿ ಅಂತ.

ಗುಂಡಿ ಕೂಡಲೇ ಪ್ರಜ್ಞಾಶೂನ್ಯಳಾದಳು!

ಆಪರೇಶನ್‌ಗೆ ಬೇಕಾದ ಎಲ್ಲಾ ಸಿದ್ಧತೆ ಪೂರೈಸಿ, ವಿಮಲಮ್ಮನಿಗೆ ಡಾಕ್ಟರ್‌ ಪ್ರಜ್ಞೆ ತಪ್ಪುವ ಇಂಜೆಕ್ಷನ್‌

ಕೊಡಬೇಕಿತ್ತು. “ನಿಮ್ಮ ಹೆಸರೇನು ತಾಯಿ? ವಯಸ್ಸು?”

ರೋಗಿ : ವಿಮಲಮ್ಮ… 28 ವರ್ಷ.

ಡಾಕ್ಟರ್‌ : ನೋಡೀಮ್ಮ , ನೀವು ಏನು ಹೇಳುತ್ತಿದ್ದೀರಿ ಅಂತ ನಿಮಗೆ ಚೆನ್ನಾಗಿ ನೆನಪಿದೆ ತಾನೇ? ಏಕೆಂದರೆ ನಾನು ನಿಮ್ಮ ವಯಸ್ಸಿಗೆ ತಕ್ಕಂತೆ ನಿಮಗೆ ಪ್ರಜ್ಞೆ ತಪ್ಪುವ ಔಷಧೀಯ ಪ್ರಮಾಣ ನಿರ್ಧರಿಸಬೇಕು.

ವಿಮಲಮ್ಮ : 30 ವರ್ಷ

ಡಾಕ್ಟರ್‌ : ನೋಡೀಮ್ಮ, ಔಷಧಿಯ ಪ್ರಮಾಣ ಕಡಿಮೆ ಅಥವಾ ಜಾಸ್ತಿಯಾದರೆ ರೋಗಿ ಆಪರೇಶನ್‌ ಮಧ್ಯೆ ಎದ್ದು ಕೂರಬಹುದು ಅಥವಾ ಕೋಮಾಗೆ ಹೋಗಬಹುದು.

ವಿಮಲಮ್ಮ : 38 ವರ್ಷಗಳು.

ಡಾಕ್ಟರ್‌ : ನೋಡೀಮ್ಮ… ನೀವೇನಾದ್ರೂ ಅಪ್ಪಿತಪ್ಪಿ ವಯಸ್ಸು ಕಡಿಮೆ ಹೇಳಿದ್ರೆ ನಿಮಗೆ ಈ ಔಷಧೀಯ ಅಡ್ಡಪರಿಣಾಮದಿಂದ ಎರಡೂ ಕಿಡ್ನಿಗಳೂ ಏಕಕಾಲಕ್ಕೆ ಫೇಲ್ಯೂರ್‌ ಆಗಬಹುದು….

ವಿಮಲಮ್ಮ : ನನಗೆ 45 ವರ್ಷ! (ಚೀರಾಡುತ್ತಾ) ಏನಾದರೂ ಹಾಳಾಗಿಹೋಗಲಿ, ಆಪರೇಶನ್‌ ಥಿಯೇಟರ್‌ನಿಂದ ನೇರವಾಗಿ  ನನ್ನ ಹೆಣ ಹೊರಬರಲಿ. ಖಂಡಿತಾ ಇದಕ್ಕಿಂತ ನನ್ನ ವಯಸ್ಸು ಹೆಚ್ಚಿಗೆ ಮಾಡಿಕೊಳ್ಳಲಾರೆ!”

ಡಾಕ್ಟರ್‌ ಸದಾಶಿವ ತಮ್ಮ ಪತ್ನಿಗೆ ಖುದ್ದಾಗಿ ತಾವೇ ಅಪೆಂಡಿಕ್ಸ್ ಆಪರೇಷನ್‌ ಮಾಡಲು ನಿರ್ಧರಿಸಿದರು. ಆಗ ಅವರು ಸಹಾಯಕ್ಕಾಗಿ ತಮ್ಮ ಇಬ್ಬರು ಮಹಿಳಾ ಜೂನಿಯರ್‌ ವೈದ್ಯರನ್ನು ಕರೆಸಿಕೊಂಡರು. ಜೊತೆಗೆ ಇಬ್ಬರು ನರ್ಸ್‌ಗಳೂ ಇದ್ದರು.

ಎಲ್ಲಾ ಸಿದ್ಧತೆ ನಡೆಸಿದ ಡಾಕ್ಟರ್‌ ಪ್ರಜ್ಞೆ ತಪ್ಪಿಸಲು ಔಷಧಿ ನೀಡಿದರು. ಆದರೆ ಆಕೆ ಪ್ರಜ್ಞೆ ತಪ್ಪಲಿಲ್ಲ. ಆಗ ಡಾಕ್ಟರ್‌ ಡೋಸೇಜ್‌ ಡಬ್ಬಲ್ ಮಾಡಿ ಇಂಜೆಕ್ಷನ್‌ ಚುಚ್ಚಿದರು. ಆಗಲೂ ಆಕೆ ಪ್ರಜ್ಞೆ ಕಳೆದುಕೊಳ್ಳಲಿಲ್ಲ. ಬಹಳ ಚಿಂತೆಗೆ ಒಳಗಾದ ಡಾಕ್ಟರ್‌ ಹೆಚ್ಚಿನ ಪ್ರಮಾಣದಲ್ಲಿ ಕ್ಲೋರೋಫಾರ್ಮ್ ತಂದು ಆಕೆಯ ಮೂಗಿಗೆ ಒತ್ತಲು ಆರಂಭಿಸಿದರು.

ಅದಕ್ಕೆ ಕೂಡಲೇ ಆಕೆ ಅವರ ಕೈ ತಳ್ಳುತ್ತಾ, “ಏನೂಂದ್ರೆ, ನೀವೇನೇ ಮಾಡಿ…. ನನಗೆ ಪ್ರಜ್ಞೆ ತಪ್ಪದು. ಇಲ್ಲಿರುವ ಎಲ್ಲಾ ಹೆಂಗಸರನ್ನೂ ಕಳುಹಿಸಿಬಿಡಿ, ಇಲ್ಲದಿದ್ದರೆ ಈ ಆಪರೇಷನ್‌ ನಡೆಯೋಲ್ಲ!” ಎನ್ನುವುದೇ?

ನಮ್ಮ ದೇಶಕ್ಕಾಗಿ ನಾನು ಏನಾದರೂ ಸೇವೆ ಮಾಡಬೇಕು ಅಂತಿದ್ದೀನಿ.

ಹೌದೇ…?

ಹಾಗಿದ್ದರೆ ಮೊದಲು ನಿಮ್ಮ ಆದಾಯ ತೆರಿಗೆಯನ್ನು ಚುಕ್ತಾ ಮಾಡಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ