ಸ್ವಾತಿ ಕಾಲೇಜಿಗೆ ಹೊಸದಾಗಿ ಸೇರಿದ್ದಳು. ಅಂತಿಮ ವರ್ಷದ ಸುರೇಶ್‌ ಸದಾ ಅವಳನ್ನು ಹಿಂಬಾಲಿಸುತ್ತಾ, ಚುಡಾಯಿಸುತ್ತಿದ್ದ. ಅವಳು ಯಾವ ಹೊತ್ತಿಗೆ ಯಾವ ಬಸ್ಸಿನಲ್ಲಿ ಓಡಾಡುತ್ತಾಳೆ ಎಂಬುದನ್ನು ಗಮನಿಸಿಕೊಂಡು ಬೇಕೆಂದೇ ಅವಳನ್ನು ಹಿಂಬಾಲಿಸುತ್ತಾ ಸದಾ ಗೋಳುಗುಟ್ಟಿಸುತ್ತಿದ್ದ.

ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಅವಳು ತನ್ನ ಮುಸ್ಲಿಂ ಫ್ರೆಂಡ್‌ ಶಾಹೀನಾಳ ಸಲಹೆ ಕೇಳಿದಳು. ಶಾಹೀನಾ ಅವಳಿಗೆ ದಿನ ಬುರ್ಖಾ ಧರಿಸಿ ಓಡಾಡುವಂತೆ ಸಲಹೆ ನೀಡಿದಳು. ಕೆಲವು ದಿನ ಆ ಕಾಟವೇನೋ ಕಳೆಯಿತು. ಆದರೆ ಮುಂದೆ ಈ ಹೊಸ ಬುರ್ಖಾಧಾರಿಯ ಚಲನವಲನಗಳಿಂದ ಅದು ಸ್ವಾತಿ ಎಂಬುದು ಅವನಿಗೆ ಖಾತ್ರಿಯಾಯಿತು. ಆಗಿನಿಂದ ಮತ್ತೆ ಅವನ ಕಾಟ ಶುರುವಾಯ್ತು.

`ತೆರೆಮರೆಯ ಅಂದ ನೋಡು….’  ಎಂದು ಏನೇನೋ ಹಾಡು ಹೇಳಿ ಅವಳನ್ನು ರೇಗಿಸುತ್ತಿದ್ದ.

ಪರಿಸ್ಥಿತಿ ಏಕೋ ವಿಪರೀತ ಆಯಿತು ಎಂದು ಸ್ವಾತಿ ತನ್ನ ಅಣ್ಣ ಸೋಮುವಿಗೆ ವಿಷಯ ತಿಳಿಸಿದಳು. ಹೆದರದಿರು ಎಂದ ಸೋಮು, ಅವಳ ತರಹವೇ ಬುರ್ಖಾ ತೊಟ್ಟು ಕಾಲೇಜ್‌ ಕ್ಯಾಂಪಸ್‌ಗೆ ಬಂದ. `ಪರ್‌ದಾ ರೇ ಪರ್‌ದಾ… ಪರ್‌ದೇ ಕೇ ಪೀಛೆ…’ ಎಂದು ಹಾಡುತ್ತಾ ಸುರೇಶ್‌ ಸ್ವಾತಿಯನ್ನು ಮತ್ತೆ ಛೇಡಿಸಲು ಯತ್ನಿಸಿದ. ತಕ್ಷಣ ಅವನ ಬಳಿ ಧಾವಿಸಿದ ಸೋಮು ಛಟೀರನೆ ಅವನ ಕೆನ್ನೆಗೆ ಬಾರಿಸಿ, “ಈಗ ಗೊತ್ತಾಯ್ತಾ ಪರದೆ ಹಿಂದಿನ ಅಂದ?” ಎಂದ. ಅಂದಿನಿಂದ ಸುರೇಶ್‌ ಸ್ವಾತಿಯ ತಂಟೆಗೆ ಬಂದಿದ್ದರೆ ಕೇಳಿ!

ನೀರಜಾ ರೋಹಿತ್‌ನನ್ನು ಬಹಳ ಇಷ್ಟಪಡುತ್ತಿದ್ದಳು. ರೋಹಿತ್‌ಗೂ ಅವಳೆಂದರೆ ಇಷ್ಟ, ಆದರೆ ಬಾಯಿ ಬಿಟ್ಟು ಹೇಳಿರಲಿಲ್ಲ, ಅಷ್ಟೆ.

ನೀರಜಾ ಪ್ರತಿ ದಿನ ತನ್ನ ಟಿಫನ್‌ ಬಾಕ್ಸ್ ನಲ್ಲಿ ರೊಟ್ಟಿ, ಪರೋಟ, ಪೂರಿ, ಕೇಸರಿಭಾತ್‌ ಇತ್ಯಾದಿ ರೋಹಿತ್‌ ಇಷ್ಟಪಡುವಂಥ ತಿನಿಸನ್ನೇ ತಂದುಕೊಡುತ್ತಿದ್ದಳು.

ಅದರ ಮುಂದಿನ ವಾರ ರೋಹಿತ್‌ ಬರ್ತ್‌ಡೇ ಬಂತು. ಅವನಿಗೆ ಇಷ್ಟವೆಂದು ಜಾಮೂನು, ಆಲೂ ಪರೋಟ ತಯಾರಿಸಿ ತಂದಿದ್ದ ನೀರಜಾ, “ರೋಹಿತ್‌, ಇದನ್ನು ಟೇಸ್ಟ್ ಮಾಡಿ ಹೇಳು,” ಎಂದಳು.

ಆಲೂ ಪರೋಟ ನೋಡುತ್ತಲೇ ರೋಹಿತ್‌, “ಇಂದು ನೀನು ಮೊದಲಿಗಿಂತ ಸುಂದರವಾಗಿದ್ದಿ…” ಎಂದ.

ಅದನ್ನು ಕಾಂಪ್ಲಿಮೆಂಟ್‌ ಆಗಿ ಸ್ವೀಕರಿಸಿದ ನೀರಜಾ, “ಹೌದೇ? ಏನೋ ಗೊತ್ತಿಲ್ಲಪ್ಪ….” ಎಂದು ನಾಚಿದಳು.

“ಹೌದು ಮತ್ತೆ…. ನಿನ್ನಂದ ಕಂಡು ಪರೋಟ ಮತ್ಸರದಿಂದ ಉರಿದು ಸೀದುಹೋಗಿದೆ ನೋಡು,” ಎಂದು ತೋರಿಸಿದಾಗ ಅವಳು ಪೆಚ್ಚಾದಳು.

ಗುಂಡ ತನ್ನ ಕ್ಲಾಸಿಗೆ ಸೇರಿದ ಹೊಸ ಹುಡುಗಿ ಲತಾಳನ್ನು ಕಂಡು ರೇಗಿಸಲು ಹಾಡಲಾರಂಭಿಸಿದ, `ನಿಂತಲ್ಲಿ ನಿಲ್ಲಲಾರೆ, ಕುಂತಲ್ಲಿ ಕೂರಲಾರೆ, ಇದೇ ಪ್ರೀತಿಯಾ, ಪ್ರೇಮಾ…’ ಲತಾ ಅವನಿಗೆ ಜವಾಬು ಕೊಟ್ಟಳು, “ಅಣ್ಣಯ್ಯ, ಅದೆಲ್ಲ ಅಲ್ಲ ಬಿಡು. ಇದೊಂದು ದೌರ್ಬಲ್ಯ. ಬೇಗ ಡಾಕ್ಟರ್‌ಗೆ ತೋರಿಸಿ ಚಿಕಿತ್ಸೆ ತಗೋ.”

ಸುಮತಿ ವಿನುತಾ ತಮ್ಮ ಕಾಲೇಜಿಗೆ ಹೊಸದಾಗಿ ಸೇರಿದ ರಾಜೇಶನನ್ನು ಬಹಳ ಪ್ರೀತಿಸತೊಡಗಿದರು. ಒಬ್ಬಳು ರಾಜೇಶ್‌ ಜೊತೆ ಮಾತನಾಡಿದರೆ ಮತ್ತೊಬ್ಬಳಿಗೆ ಕೆಂಡದಂಥ ಸಿಟ್ಟು. ಈ ಕಾರಣದಿಂದ ಇಬ್ಬರಲ್ಲೂ ಆಗಾಗ ಜಗಳವಾಗುತ್ತಿತ್ತು.

ಒಂದು ದಿನ ಎಲ್ಲರೂ ಕಾಲೇಜ್‌ ಗೇಟ್‌ ಬಳಿ ನಿಂತಿದ್ದರು. ಆಗ ಯಾರೋ ಸುಮತಿಯನ್ನು ಕೇಳಿದರು, “ಯಾರಿಗಾಗಿ ಕಾಯ್ತಾ ನಿಂತಿರುವೆ?”

“ಇನ್ಯಾರಿಗಾಗಿ? ರಾಜೇಶ್‌ ಬರಲಿ ಅಂತ!”

ಇದನ್ನು ಕೇಳಿಸಿಕೊಂಡ ವಿನುತಾ ಥಟಕ್ಕನೆ ಸಿಡುಕಿದಳು, “ರಾಜೇಶ್‌, ನನ್ನ ಬಾಯ್‌ಫ್ರೆಂಡ್‌ ಅಂತ ನೆನಪಿಡು!”

ಇನ್ನೇನು? ಇಬ್ಬರಲ್ಲೂ ನೀನು ತಾನು ಎಂದು ಜಗಳ ಶುರುವಾಯ್ತು. ಆಗ ಎದುರಿಗೆ ಒಬ್ಬ ಭಿಕಾರಿ ಹಾದುಹೋದ.

ಈಗ ಸುಮತಿ ಗುಡುಗಿದಳು, “ನೀನು ರಾಜೇಶ್‌ನ ಮರೆತುಬಿಡು. ಅಲ್ಲಿದ್ದಾನಲ್ಲ…. ಅವನೇ ನಿನಗೆ ತಕ್ಕ ಬಾಯ್‌ಫ್ರೆಂಡ್‌!”

ವಿನುತಾ ಸುಮ್ಮನೆ ಬಿಟ್ಟಾಳೆಯೇ? ಅವಳು ವಾಚಾಮಗೋಚರವಾಗಿ ಸುಮತಿಯನ್ನು ನಿಂದಿಸಿದಳು. ಇವರಿಬ್ಬರ ಗಲಾಟೆ ನೋಡಿ ಭಿಕಾರಿ ತಾನೇ ಹೇಳಿದ, “ಮೇಡಂ, ಯಾಕೆ ಕಿತ್ತಾಡ್ತೀರಿ? ನಿಮ್ಮಿಬ್ಬರಲ್ಲಿ ರಾಜೇಶ್‌ ತನಗೆ ಯಾರಿಷ್ಟ ಅಂತ ಹೇಳಲಿ, ಉಳಿದ ಇನ್ನೊಬ್ಬರಿಗೆ ನಾನು ರೆಡಿ….!” ಎಂದಾಗ ಎಲ್ಲರೂ ಸೂರು ಹಾರುವಂತೆ ನಕ್ಕರು. ಯಾಕಾದರೂ ಜಗಳ ಆಡಿದೆವೋ ಎಂದು ಇಬ್ಬರೂ ತೆಪ್ಪಗಾದರು.

ರಾಯರು : ಏ ಗುಂಡ… ಈ ಬೆಂಕಿಪೊಟ್ಟಣ ಎಲ್ಲಿಂದ ತಗೋಬಂದೆ? ಒಂದು ಕಡ್ಡಿಯೂ ಉರಿಯುತ್ತಿಲ್ಲ….

ಆಳು : ಅದು ಹೇಗೆ ಸಾಧ್ಯ ಸ್ವಾಮಿ? ನಾನು ಅಂಗಡಿ ಮುಂದೆ ಒಂದೊಂದೇ ಕಡ್ಡಿ ಗೀರಿ ಪರೀಕ್ಷೆ ಮಾಡಿ ತಂದಿದ್ದೀನಿ… ಇನ್ನೊಂದು ಸಲ ಪ್ರಯತ್ನಿಸಿ ನೋಡಿ.

ರಾಜಕೀಯ ಚರ್ಚೆ ಬಿರುಸಾಗಿ ನಡೆದಿತ್ತು. ಮಧ್ಯೆ ಟೀ ಬ್ರೇಕ್‌ ಆದಾಗ ಯಾರೋ ಲಾಲೂರನ್ನು ಕೇಳಿದರಂತೆ, “ನೀವು ಯಾರ ಪೈಕಿ… ಸಸ್ಯಾಹಾರಿ ಅಥವಾ ಮಾಂಸಾಹಾರಿ?”

“ಅದೆಲ್ಲ ಗೊತ್ತಿಲ್ಲ. ನಾನು ಪಕ್ಕಾ ಬಿಹಾರಿ!” ಅಂದರಂತೆ ಲಾಲು.

ದಿನೇಶ್‌ ಕಾಲೇಜಿನ ಮಹಾ ರಸಿಕ ವಿದ್ಯಾರ್ಥಿ ಎಂದೇ ಖ್ಯಾತಿ ಗಳಿಸಿದ್ದ. ಒಂದು ದಿನ ಅವನು ಗೆಳೆಯರ ಜೊತೆ ಕ್ಯಾಂಟೀನ್‌ನಲ್ಲಿ  ಕುಳಿತು ಹೊರಟೆ ಕೊಚ್ಚುತ್ತಾ, ತನ್ನ ಅಫೇರ್‌ಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ನಡುನಡುವೆ ಅವರ ಹೊಟ್ಟೆ ಉರಿಸಬೇಕೆಂದು ರಜನಿ, ರೇಖಾ, ರಮ್ಯಾ ಮುಂತಾದವರಿಗೆ ಫೋನ್‌ ಮಾಡಿ, `ಜಾನು… ಐ ಲವ್ ಯೂ! ನೀನಿಲ್ಲದೆ ನಾನಿಲ್ಲ..’ ಎಂದು ಏನೇನೋ ರೊಮ್ಯಾಂಟಿಕ್‌ ಡೈಲಾಗ್‌ ಹೊಡೆಯುತ್ತಾ ಮಿಂಚುತ್ತಿದ್ದ. ಬೇರೆ ಹುಡುಗರೆಲ್ಲ ಜೊಲ್ಲು ಸುರಿಸುತ್ತಾ ಇವನ ಪ್ರತಾಪ ಕಂಡು ಕರುಬತೊಡಗಿದರು. ಅಷ್ಟರಲ್ಲಿ ರಜನಿಯಿಂದ ಇವನಿಗೆ ಫೋನ್‌ ಬಂತು. ಅದನ್ನು ಸ್ಟೈಲಾಗಿ ರಿಸೀವ್ ‌ಮಾಡುತ್ತಾ, “ಡಾರ್ಲಿಂಗ್‌…ಹೌ ಆರ್‌ ಯೂ?” ಎಂದ.

“ಅದೆಲ್ಲ ಆಮೇಲಿರಲಿ… ನಿನ್ನ ಬಿಟ್ಟರೆ ನಾನಿಲ್ಲ ಅಂತ ರೇಖಾ, ರಮ್ಯಾ, ಪುಷ್ಪಾ ಎಲ್ಲರಿಗೂ ಹೇಳಿದ್ದಿ ತಾನೇ…?” ಎಂದು ಸಿಡುಕಿದಳು.

“ಛೇ…ಛೇ! ಖಂಡಿತಾ ಹಾಗೇನೂ ಇಲ್ಲ ಡಿಯರ್‌. ನಮ್ಮಿಬ್ಬರ ಪ್ರೀತಿ ಕಂಡು ಸಹಿಸದ ಕಿಡಿಗೇಡಿಗಳು ಯಾರೋ ನಿನಗೆ ಹಾಗೆ ಹೇಳಿರಬೇಕು…”

“ಏಯ್‌ ಮುಠ್ಠಾಳ! ಸಾಕು ನಿನ್ನ ಬೊಗಳೆ… ಇನ್ನು ಎಷ್ಟು ಹುಡುಗಿಯರನ್ನು ಹೀಗೆ ಏಮಾರಿಸ್ತೀಯಾ?” ಎಂದು ಅದೇ ಫೋನ್‌ನಲ್ಲಿ ರೇಖಾ ಗುಡುಗಿದಳು.

ರೇಖಾ ಅದೇ ಲೈನ್‌ನಲ್ಲಿ ಹೇಗೆ ಮಾತನಾಡಿದಳೆಂದು ಅವನು ಕಂಗಾಲಾಗುವಷ್ಟರಲ್ಲಿ ರಮ್ಯಾ, ಪುಷ್ಪಾ ಸಹ ಒಬ್ಬರಾದ ಮೇಲೆ ಒಬ್ಬರು ಹಿಗ್ಗಾಮುಗ್ಗ ಝಾಡಿಸಿದರು. ಏನಾಯಿತು ಎಂದು ಅವನು ಕಣ್ಕಣ್ಣು ಬಿಡುತ್ತಿದ್ದಾಗ ಕೊನೆಯಲ್ಲಿ ರಜನಿ, “ಏ ಗುಗ್ಗೂ! ಸ್ವಲ್ಪ ಕ್ಯಾಂಟೀನಿನ ಮೊದಲ ಟೇಬಲ್ ಕಡೆ ತಿರುಗಿ ನೋಡು…. ನಾವೆಲ್ಲ ಇಲ್ಲೇ ಇದ್ದೀವಿ!” ಎಂದಾಗ ಅವರ ಕಡೆ ನೋಡಿದ ದಿನೇಶ್‌ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದ. ಅವನ ಸ್ಥಿತಿ ಕಂಡು ಗೆಳೆಯರೆಲ್ಲ ನಕ್ಕಿದ್ದೇ ನಕ್ಕಿದ್ದು.

ಆಗ ಪರೀಕ್ಷೆ ನಡೆಯುತ್ತಿತ್ತು. ಸೀಮಾ ಕಾಲೇಜಿನ ಗ್ರೌಂಡ್‌ ಫ್ಲೋರ್‌ನ ಮೂಲೆಯಲ್ಲಿ ಒಬ್ಬಳೇ ಬೇಸರದಿಂದ ಕುಳಿತಿದ್ದಳು. ಇವಳನ್ನು ಕಂಡು ಬೇರೆ ಗೆಳತಿಯರೆಲ್ಲ ಅಲ್ಲಿಗೇ ಬಂದರು. ತನುಜಾ ಅವಳ ಬೆಸ್ಟ್ ಫ್ರೆಂಡ್‌. ಸೀಮಾಳನ್ನು ಕಂಡವಳೇ, “ಯಾಕೆ ಇಲ್ಲಿ ಒಬ್ಬಳೇ ಬೇಸರದಲ್ಲಿ ಕುಳಿತಿದ್ದಿ? ಏನು ವಿಷಯ?” ಎಂದಳು.

“ಏನು ಹೇಳಲಿ? ನಮ್ಮ ತಂದೆ ಈ ಸಲ ಖಡಾಖಂಡಿತಾಗಿ ಹೇಳಿದ್ದಾರೆ, ಈ ಬಾರಿ ಪರೀಕ್ಷೆಯಲ್ಲಿ ಫೇಲಾದ್ರೆ ಮತ್ತೆ ಕಾಲೇಜಿಗೆ ಸೇರಿಸಲ್ಲ. ಮದುವೆ ಮಾಡಿ ಅತ್ತೆಮನೆಗೆ ಓಡಿಸೋದೇ ಅಂತ!”

“ಹಾಗಿದ್ದರೆ ನೀನು ಸೀರಿಯಸ್‌ ಆಗಿ ತಯಾರಿ ಶುರುಮಾಡಿದ್ದಿ ಅನ್ನು.”

“ಸೀರೆ, ಒಡವೆ ಏನೋ ಸೆಲೆಕ್ಟ್ ಮಾಡಿದ್ದಾಯ್ತು. ಇನ್ನುಳಿದ ಆ್ಯಕ್ಸೆಸರೀಸ್‌ ಬಾಕಿ ಇದೆ ಅಷ್ಟೆ,” ಎಂದಾಗ ತನುಜಾ ಜೊತೆ ಉಳಿದವರೂ ಸುಸ್ತಾದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ