ಹೊಸ ವರ್ಷದ ಉತ್ಸವವನ್ನು ಆಚರಿಸಲು ನೀವು ದುಬಾರಿ ಪ್ರವಾಸಿ ಸ್ಥಳಗಳಿಗೆ ಹೋಗಬೇಕೆಂದಿಲ್ಲ. ಭಾರತ ಹಾಗೂ ವಿದೇಶಗಳಲ್ಲಿಯೂ ಹೊಸ ವರ್ಷ ಆಚರಿಸಬಹುದಾದಂತಹ ಅಗ್ಗದ ನಗರಗಳೂ ಇವೆ. ಎಲ್ಲಾ ಕಡೆಗಳಿಂದಲೂ ಪ್ರವಾಸಿಗಳನ್ನು ತಮ್ಮತ್ತ ಆಕರ್ಷಿಸುವ ಅಂತಹ ಮನೋರಂಜಕ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ.

ಓರ್ಛಾದ ಮಂಟಪಗಳು

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ಎಲ್ಲೆಗಳಲ್ಲಿರುವ ಓರ್ಛಾದ ಪುರಾತನ ಅರಮನೆಗಳು ಮತ್ತು ಭವನಗಳನ್ನು ನೋಡಬಹುದು. ಇಲ್ಲಿನ ರಾಜರುಗಳ ಸ್ಮೃತಿಯ ರೂಪದಲ್ಲಿ ಮಂಟಪಗಳನ್ನು ನಿರ್ಮಿಸಿದ್ದು, ಅವು ಇಂದಿಗೂ ನೋಡುಗರ ಆಕರ್ಷಣೀಯ ಪ್ರಮುಖ ಕೇಂದ್ರವಾಗಿದೆ.

ಓರ್ಛಾದಲ್ಲಿ ರಾಜರುಗಳ ನೆನಪಲ್ಲಿ ನಿರ್ಮಿತವಾದ 14 ಮಂಟಪಗಳು ಬೇತ್ವಾ ನದಿಯ ದಡದಲ್ಲಿ ಕಂಚನ್‌ ಘಾಟ್‌ನಲ್ಲಿ ಇವೆ. 1800ರಲ್ಲಿ ನಿರ್ಮಿಸಲಾದ ಗಾಜಿನ ಅರಮನೆ ಹೆರಿಟೇಜ್‌ ಹೋಟೆಲ್ ‌ಆಗಿ ಬದಲಾಗಿದೆ. ಓರ್ಛಾ ಝಾನ್ಸಿಯಿಂದ ಅರ್ಧ ಗಂಟೆ ದೂರದಲ್ಲಿದೆ. ಜಹಾಂಗೀರ್‌ ಮಹಲ್ ಇಲ್ಲಿನ ಪ್ರಮುಖ ಅರಮನೆ. ಇದರ ಪ್ರವೇಶದ್ವಾರದಲ್ಲಿ 2 ಬಾಗವಾಗಿರುವ ಆನೆಗಳನ್ನು ನಿರ್ಮಿಸಲಾಗಿದೆ. ತೀನ್‌ ಮಂಜಿಲಾ ಈ ಅರಮನೆಯ ವಾಸ್ತುಕಲೆಯ ಅದ್ಭುತ ನಮೂನೆಯಾಗಿದೆ. ಇದಲ್ಲದೆ ಪ್‌ಬಾಗ್‌, ಸುಂದರ ಮಹಲ್ ಮತ್ತು ರಾಯ್‌ ಪ್ರಾಣ್‌ ಮಹಲ್ ಕೂಡ ನೋಡಲು ಚೆನ್ನಾಗಿರುತ್ತದೆ.

ಇಲ್ಲಿನ ಮಾರುಕಟ್ಟೆಗಳಲ್ಲಿ ಲೋಹದ ತುಂಡುಗಳಿಂದ ಮಾಡಿದ ವಸ್ತುಗಳನ್ನು ಖರೀದಿಸಬಹುದು. ಓರ್ಛಾದ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಖಜುರಾಹೋ ಮತ್ತು ಗ್ವಾಲಿಯರ್‌. ಹತ್ತಿರದ ರೇಲ್ವೆ ಸ್ಟೇಷನ್‌ ಝಾನ್ಸಿ. ದಿಗೀ ಮುಂಬೈ ಮತ್ತು ದಿಗೀ ಚೆನ್ನೈ ಹೈವೇ ಝಾನ್ಸಿಗೆ ಹೋಗಿ ತಲುಪುತ್ತದೆ. ಓರ್ಛಾಗೆ ಹತ್ತಿರದ ಎಲ್ಲ ನಗರಗಳಿಂದ ಬಸ್‌ ಸೌಲಭ್ಯವಿದೆ.

ಮುನ್ನಾರ್ ಮುಟ್ಟುಪೆಟ್ಟಿ ಸರೋವರ

ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿರುವ ಮುನ್ನಾರ್‌ ಪ್ರವಾಸಿ ಸ್ಥಳ ಎಲ್ಲರಿಗೂ ಪರಿಚಿತವಾಗಿದೆ. ಇದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಇದು ದಕ್ಷಿಣ ಭಾರತದ ಪರ್ವತ ಪ್ರದೇಶಗಳ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆ 12 ಸಾವಿರ ಹೆಕ್ಟೇರುಗಳಲ್ಲಿ ಹರಡಿದ ಸುಂದರ ಟೀ ತೋಟಗಳು. ಪ್ರತಿವರ್ಷ ಇಲ್ಲಿ ಸಾವಿರಾರು ಪ್ರವಾಸಿಗಳು ಟೀ ಸಂಗ್ರಹಾಲಯ ಮತ್ತು ಟೀ ಪ್ರೋಸೆಸಿಂಗ್‌ ನೋಡಲು ಬರುತ್ತಾರೆ. ಟೀ ತೋಟಗಳಲ್ಲದೆ, ಮುನ್ನಾರ್‌ನಿಂದ 15 ಕಿ.ಮೀ. ದೂರದಲ್ಲಿ ಎರ್ನಾಕುಲಂ ರಾಷ್ಟ್ರೀಯ ಉದ್ಯಾನವನ ಇದೆ. ಇದು ದೇವಕುಲಂನಲ್ಲಿದೆ. ನೀಲಗಿರಿ ಕಾಡುಕುರಿಗಳ ರಕ್ಷಣೆಗಾಗಿ ಇದನ್ನು ನಿರ್ಮಿಸಲಾಗಿತ್ತು. ಪ್ರವಾಸಿಗಳಿಗೆ ಇಲ್ಲಿ ಟ್ರೆಕ್ಕಿಂಗ್‌ನ ಸೌಲಭ್ಯ ಇದೆ.

ಟೀ ತೋಟಗಳಲ್ಲದೆ ಪ್ರವಾಸಿಗಳು ಮುಟ್ಟುಪೆಟ್ಟಿ ಸರೋವರವನ್ನೂ ನೋಡಬಹುದು. ಇಲ್ಲಿ ಪ್ರವಾಸಿಗಳು ಪಿಕ್ನಿಕ್‌ ಮಾಡಲು ಬರುತ್ತಾರೆ. ಮುಟ್ಟುಪೆಟ್ಟಿ ಸಮುದ್ರ ಮಟ್ಟದಿಂದ 1700 ಮೀಟರ್‌ ಎತ್ತರದಲ್ಲಿದೆ. ಮುಟ್ಟುಪೆಟ್ಟಿಯ ಕಾಡುಗಳಲ್ಲಿ ವಿಭಿನ್ನ ರೀತಿಯ ಪಕ್ಷಿಗಳ ನಿವಾಸಗಳಿವೆ. ಮುಟ್ಟುಪೆಟ್ಟಿಯ ಜೊತೆಜೊತೆಗೆ ಅಥುಕಡ್‌ ಫಾಲ್ಸ್ ನ್ನೂ ನೋಡಬಹುದು. ಈ ಝರಿ ಮುನ್ನಾರ್‌ನಿಂದ 8 ಕಿ.ಮೀ. ದೂರದಲ್ಲಿ ಕೋಗಿ ರೋಡ್‌ನಲ್ಲಿ ಗಾಢವಾದ ಘಾಟ್‌ನಲ್ಲಿ ಇದೆ. ಅಥುಕಡ್‌ ಫಾಲ್ಸ್ ಅಲ್ಲದೆ ಚೀಯೂಪರಾ ಮತ್ತು ವಾರ್ ಫಾಲ್ಸ್ ಕೂಡ ನೋಡಲು ಯೋಗ್ಯವಾಗಿದೆ. ಮುನ್ನಾರ್‌ಗೆ ಬರುವ ಪ್ರವಾಸಿಗಳು ಚಿನ್ನಾರ್‌ ವನ್ಯಜೀವಿ ಅಭಯಾರಣ್ಯವನ್ನೂ ನೋಡಬಹುದು. ಅದು ಇಲ್ಲಿಂದ 60 ಕಿ.ಮೀ. ದೂರದಲ್ಲಿ ಕೇರಳ ತಮಿಳುನಾಡು ಬಾರ್ಡರ್‌ನಲ್ಲಿದೆ.

ಮುನ್ನಾರ್‌ನ ಸಮೀಪದ ಏರ್‌ಪೋರ್ಟ್‌ ಕೋಚ್ಚಿ ಇಂಟರ್‌ ನ್ಯಾಷನ್‌ ಏರ್‌ಪೋರ್ಟ್‌. ಪ್ರಮುಖ ರೇಲ್ವೆ ಜಂಕ್ಷನ್‌ ಎರ್ನಾಕುಲಂ. ನ್ಯಾಷನಲ್ ಹೈವೇ 49 ಕೋಗಿ ಮತ್ತು ಮುನ್ನಾರ್‌ನ್ನೂ ಸೇರಿಸುತ್ತದೆ. ಇಲ್ಲಿ ಅಗ್ಗದ ಹಾಗೂ ಒಳ್ಳೆಯ ಆಹಾರ ಸಿಗುತ್ತದೆ. ಎಂ.ಜಿ. ರೋಡ್‌ನಲ್ಲಿ ಸರವಣ ಭವನದ ಸಸ್ಯಾಹಾರಿ ಊಟ ಬಹಳ ಪ್ರಸಿದ್ಧವಾಗಿದೆ. ಇದಲ್ಲದೆ ಆರ್ಯಭವನ ಮತ್ತು ಎಸ್‌.ಎನ್‌. ಐನೆಕ್ಸ್ ಕೂಡ ನೋಡಲು ಚೆನ್ನಾಗಿದೆ.

ಶೀತಲ್ ಖೇಡ್ನಲ್ಲಿ ಮಂಜಿನ ಬೆಟ್ಟಗಳು

ಒಂದುವೇಳೆ ನೀವು ಬೆಟ್ಟಗಳು, ಸುಂದರ ಘಟ್ಟಗಳು, ದೇವದಾರು ಮತ್ತು ಬೇವಿನ ಮರಗಳು, ಇಕ್ಕಟ್ಟಾದ ರಸ್ತೆಗಳು ಮತ್ತು ಪಕ್ಷಿಗಳ ಕಲರವ ಕೇಳಲು ಇಚ್ಛಿಸಿದರೆ ನಿಮಗೆ ರಾಣಿಖೇತ್‌ಗಿಂತ ಉತ್ತಮ ಜಾಗ ಬೇರೊಂದಿಲ್ಲ. 25 ಚದರ ಕಿ.ಮೀ.ನಲ್ಲಿ ಹರಡಿರುವ ರಾಣಿಖೇತ್‌ನ್ನು ಹೂಗಳ ಘಟ್ಟ ಎಂದೂ ಕರೆಯುತ್ತಾರೆ. ಇಲ್ಲಿ ಬೆಟ್ಟಗಳ ಮೇಲೆ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಬೇರೆ ಬೇರೆ ಬಣ್ಣಗಳು ಮನಸೂರೆಗೊಳ್ಳುತ್ತವೆ. ರಾಣಿಖೇತ್‌ನಲ್ಲಿ ಮೊದಲು ಚಿಕ್ಕ ಚಿಕ್ಕ ಹೊಲಗಳಿದ್ದವು. ಅದರಿಂದಾಗಿ ಅದನ್ನು ರಾಣಿಖೇತ್‌ ಎಂದು ಕರೆದರು. ಇಲ್ಲಿ ಪಂತನಗರ ಏರ್‌ಪೋರ್ಟ್‌ ಅತ್ಯಂತ ಸಮೀಪವಿದೆ. ಕಾಠ್‌ ಗೋದಾಮ್ ಅತ್ಯಂತ ಸಮೀಪದ ರೇಲ್ವೆ ಸ್ಟೇಷನ್‌.ಕಾಠ್‌ ಗೋದಾಮ್ ನಿಂದ ರಾಣಿಖೇತ್‌ 84 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಬಸ್‌ ಹಾಗೂ ಟ್ಯಾಕ್ಸಿಗಳ ಸೌಲಭ್ಯವಿದೆ. ರಾಣಿಖೇತ್‌ ನಗರದಿಂದ 6 ಕಿ.ಮೀ. ದೂರದಲ್ಲಿರುವ ಚಿಲಿಯಾನೌದಲ್ಲಿ ಟ್ರೆಕಿಂಗ್‌ ಮಾಡಬಹುದು. ಇಲ್ಲಿ ಸುಂದರ ಹೂದೋಟ ಇದೆ.

ರಾಣಿಖೇತ್‌ನಿಂದ 35 ಕಿ.ಮೀ. ದೂರದಲ್ಲಿ ಶೀತಲ್ ಖೇತ್‌ ಇದೆ. ಇಲ್ಲಿ ಮಂಜಿನಿಂದಾವೃತ್ತವಾದ ಬೆಟ್ಟಗಳನ್ನು ನೋಡಲು ಚೆನ್ನಾಗಿರುತ್ತದೆ. ಇಲ್ಲಿಂದ ಇಡೀ ರಾಣಿಖೇತ್‌ ಕಾಣುತ್ತದೆ. ರಾಣಿಖೇತ್‌ನಿಂದ 10 ಕಿ.ಮೀ. ದೂರದಲ್ಲಿ ಚೌಬಟಿಯಾ ಇದೆ. ಇಲ್ಲಿ ದೊಡ್ಡ ಹಣ್ಣುಗಳ ತೋಟ ಇದೆ. ಇಲ್ಲಿ 3 ನೀರಿನ ಬುಗ್ಗೆಗಳಿವೆ. ಅವು ಪ್ರವಾಸಿಗಳನ್ನು ಮೋಹಗೊಳಿಸುತ್ತವೆ.

ದಟ್ಟ ಕಾಡುಗಳ ಸೋಲನ್

ಹಿಮಾಚಲ ಪ್ರದೇಶದ ಪ್ರವಾಸಿ ಸ್ಥಳಗಳಲ್ಲಿ ಮೊದಲ ಹೆಸರು ಶಿಮ್ಲಾ ಬರುತ್ತದೆ. ಆದರೆ ಶಿಮ್ಲಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗಳು ಬರುವುದರಿಂದ ಹೆಚ್ಚು ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ಪ್ರವಾಸಕ್ಕೆ ಸೋಲನ್‌ ಒಳ್ಳೆಯ ಜಾಗ. ಸೋಲನ್ ಜಿಲ್ಲೆ ದಟ್ಟವಾದ ಕಾಡುಗಳಿಂದ ಕೂಡಿದ್ದು ಪ್ರವಾಸಿಗಳಿಗೆ ಖುಷಿ ನೀಡುತ್ತದೆ. ಸಮುದ್ರ ಮಟ್ಟದಿಂದ 1467 ಮೀ. ಎತ್ತರವಿರುವ ಸೋಲನ್‌ ತನ್ನ ಸುಂದರ ದೃಶ್ಯಗಳಿಂದ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಇಡೀ ಕ್ಷೇತ್ರ ದಟ್ಟವಾದ ಕಾಡುಗಳಿಂದ, ಎತ್ತರವಾದ ಬೆಟ್ಟಗಳಿಂದ ಸುತ್ತುವರಿದಿದೆ. ಇಲ್ಲಿನ ಅತಿ ಎತ್ತರದ ಶಿಖರ ಮತ್ತೊಂದಿಲ್ಲ‌. ಇದು ನಗರದ ಪೂರ್ವಭಾಗದಲ್ಲಿದೆ. ನಗರದ ಉತ್ತರದಲ್ಲಿ ಕಾರೊಲ್ ಶಿಖರವಿದೆ. ಕಂಡಾಘಾಟ್‌ ಕಸೌಲಿ, ಚೆಲ್ ‌ಮತ್ತು ದಗಶಾಯಿ ಇಲ್ಲಿನ ಇತರ ಪ್ರೇಕ್ಷಣೀಯ ಸ್ಥಳಗಳು. ಕಾರೊಲ್ ಪರ್ವತದ ಮೇಲೆ ಒಂದು ಗುಹೆಯೂ ಇದೆ.

ಸೋಲನ್‌ ಒಂದು ಔದ್ಯೋಗಿಕ ನಗರ ಆಗಿದೆ. ಇಲ್ಲಿ ಹೆಚ್ಚಾಗಿ ಮಶ್ರೂಮ್ ಬೆಳೆಯುತ್ತಾರೆ. ಚಂಡೀಘಡ್‌ ಇಲ್ಲಿಗೆ ಅತ್ಯಂತ ಸಮೀಪದ ಏರ್‌ಪೋರ್ಟ್‌. ಇದು ಸೋಲನ್‌ನಿಂದ 67 ಕಿ.ಮೀ. ದೂರದಲ್ಲಿದೆ. ಹತ್ತಿರದ ರೇಲ್ವೆ ಸ್ಟೇಷನ್‌ ಕಾಲ್ಕಾ. ಅದು ಸೋಲನ್‌ನಿಂದ 44 ಕಿ.ಮೀ. ದೂರದಲ್ಲಿದೆ.

ಅತ್ಯಂತ ಪ್ರಸಿದ್ಧ ರಾಸ್ದ್ವೀಪ

ಈಗ ಪ್ರವಾಸಿಗಳು ಹೆಚ್ಚಾಗಿ ಪ್ರಕೃತಿ ಹಾಗೂ ಇತಿಹಾಸ ಎರಡನ್ನೂ ಒಟ್ಟಿಗೆ ನೋಡಬಹುದಾದಂತಹ ಸ್ಥಳಗಳನ್ನು ಹುಡುಕುತ್ತಿದ್ದಾರೆ. ಅಂಡಮಾನ್‌-ನಿಕೋಬಾರ್‌ ದ್ವೀಪ ಸಮಾಜ ಅದಕ್ಕೆ ಒಳ್ಳೆಯ ಆಯ್ಕೆಯಾಗಿದೆ. ಇದು ಭಾರತ ಸರ್ಕಾರದ ಕೇಂದ್ರಾಡಳಿತ ಪ್ರದೇಶಗಳಾಗಿವೆ. ಇದು ಬಂಗಾಳಕೊಲ್ಲಿಯ ದಕ್ಷಿಣದಲ್ಲಿ ಹಿಂದೂ ಮಹಾಸಾಗರದಲ್ಲಿದೆ. ಅಂಡಮಾನ್-ನಿಕೋಬಾರ್‌ 572 ಸಣ್ಣ ಸಣ್ಣ ದ್ವೀಪಗಳ ಒಂದು ಸಮೂಹವಾಗಿದೆ. ಇಲ್ಲಿನ ರಾಜಧಾನಿ ಪೋರ್ಟ್‌ಬ್ಲೇರ್‌. ರಾಸ್‌ ದ್ವೀಪ ಇಲ್ಲಿನ ಅತ್ಯಂತ ಮನೋಹರ ಸ್ಥಳವಾಗಿದೆ. ಇಲ್ಲಿ ಬ್ರಿಟಿಷ್‌ ವಾಸ್ತುಶಿಲ್ಪಗಳ ಅವಶೇಷಗಳನ್ನು ನೋಡಬಹುದು. ಬೆಳಗ್ಗೆ ಮತ್ತು ಸಂಜೆ ಇಲ್ಲಿ ಬಹಳಷ್ಟು ವಿಧದ ಪಕ್ಷಿಗಳನ್ನು ನೋಡಬಹುದು. ಇದನ್ನು ಪಕ್ಷಿಗಳ ಸ್ವರ್ಗ ಎಂದೂ ಕರೆಯುತ್ತಾರೆ. ರಾಸ್‌ ದ್ವೀಪವನ್ನು ತಲುಪಲು ಫೀನಿಕ್ಸ್ ಸಾಗರದಿಂದ ದೋಣಿ ಸಿಗುತ್ತದೆ. ಪೋರ್ಟ್‌ಬ್ಲೇರ್‌ಗೆ ತಲುಪಲು 2 ದಾರಿಗಳಿವೆ. ಮೊದಲನೆಯದು ವಿಮಾನ ನಿಲ್ದಾಣ. ಚೆನ್ನೈ, ಕೋಲ್ಕತಾ ಮತ್ತು ಭುವನೇಶ್ವರದಿಂದ ಪೋರ್ಟ್‌ಬ್ಲೇರ್‌ಗೆ ವಿಮಾನಗಳು ಸಿಗುತ್ತವೆ. ಇನ್ನೊಂದು ದಾರಿ ಕೋಲ್ಕತಾ, ಚೆನ್ನೈ ಮತ್ತು ವಿಶಾಖಪಟ್ಟಣಂನಿಂದ ಹಡಗುಗಳು ಸಿಗುತ್ತವೆ. ಅವುಗಳ ಮೂಲಕ ಪೋರ್ಟ್‌ಬ್ಲೇರ್‌ಗೆ ಹೋಗಬಹುದು. ಹಡಗಿನಲ್ಲಿ ಇಲ್ಲಿಗೆ ಬರಲು ಸುಮಾರು 2 ದಿನಗಳು ಬೇಕಾಗುತ್ತವೆ.

ನಕ್ಕಿ ಸರೋವರದಿಂದ ಮೌಂಟ್ಅಬು

ರಾಜಾಸ್ಥಾನ ಮರಳುಗಾಡಿನಿಂದಾಗಿ ಪ್ರಸಿದ್ಧಿಯಾಗಿದೆ. ಇಲ್ಲಿನ ಸಿರೋಹಿ ಜಿಲ್ಲೆಯ ಸಮೀಪದಲ್ಲಿರುವ ಮೌಂಟ್‌ ಅಬು ನೀಲಗಿರಿ ಬೆಟ್ಟಗಳ ಅತ್ಯಂತ ಎತ್ತರದ ಶಿಖರದ ಮೇಲಿದೆ. ಬ್ರಿಟಿಷರ ಆಡಳಿತದಲ್ಲೂ ಇದನ್ನು ಪ್ರಮುಖ ಪ್ರವಾಸಿ ನಗರವೆಂದು ಅಭಿವೃದ್ಧಿಪಡಿಸಲಾಯಿತು. ಇಲ್ಲಿ ಚಳಿಗಾಲ, ಬೇಸಿಗೆ ಎರಡೂ ಸಮಯದಲ್ಲಿ ಪ್ರವಾಸಿಗಳು ಬರುತ್ತಾರೆ. ಇಲ್ಲಿ ಸುತ್ತಾಡಲು ಬಹಳಷ್ಟು ಜಾಗಗಳಿವೆ. ಅತ್ಯಂತ ಪ್ರಸಿದ್ಧವಾದ ನಕ್ಕಿ ಸರೋರವಿದೆ. ಇದರಲ್ಲಿ ದೋಣಿ ವಿಹಾರ ಮಾಡಬಹುದು. ಸರೋವರದ ನಾಲ್ಕೂ ಕಡೆ ಬೆಟ್ಟಗಳ ದೃಶ್ಯ ಬಹಳ ಸುಂದರವಾಗಿರುತ್ತದೆ. ಇಲ್ಲಿ ಒಂದು ಸನ್‌ ಸೆಟ್‌ ಪಾಯಿಂಟ್‌ ಕೂಡ ಇದೆ. ಅಲ್ಲಿಂದ ಮುಳುಗುವ ಸೂರ್ಯನನ್ನು ಕಾಣಬಹುದು.

ಮೌಂಟ್‌ ಅಬುಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಉದಯಪುರ. ಇಲ್ಲಿಂದ ಮೌಂಟ್‌ ಅಬು 185 ಕಿ.ಮೀ. ಇದೆ. ಉದಯಪುರ್‌ನಿಂದ ಟ್ಯಾಕ್ಸಿ ಅಥವಾ ಬಸ್‌ನಿಂದಲೂ ಇಲ್ಲಿಗೆ ಬರಬಹುದು. ಇಲ್ಲಿಂದ ಮೌಂಟ್‌ ಅಬು 28 ಕಿ.ಮೀ. ದೂರವಿದೆ. ಅಹಮದಾಬಾದ್‌, ದಿಗೀ, ಜೈಪುರ್‌ ಮತ್ತು ಜೋಧ್‌ಪುರ್‌ನಿಂದ ಸೀದಾ ಬಸ್‌ಲ್ಲಿ ಇಲ್ಲಿಗೆ ಬರಬಹುದು.

ಪಣಜಿಯಲ್ಲಿ ರಿವರ್ಕ್ರೂಝ್ ಆನಂದ

ಹೊಸ ವರ್ಷದಲ್ಲಿ ಉತ್ಸವ ಮಾಡುವ ಇಚ್ಛೆ ಇದ್ದರೆ ಗೋವಾದ ಹೆಸರು ಬರದಿರಲು ಸಾಧ್ಯವಿಲ್ಲ. ನಾಲ್ಕೂ ಕಡೆ ಸಮುದ್ರ ತುಂಬಿಕೊಂಡಿರುವುದರಿಂದ ಅದು ಭಾರತದ ಆಕರ್ಷಕ ಪ್ರವಾಸಿ ಸ್ಥಳವಾಗಿದೆ. ಅಲ್ಲಿಗೆ ತಲುಪಲು ಬೆಳಗಾವಿಯಿಂದ 113 ಕಿ.ಮೀ. 3 ಗಂಟೆ ಪ್ರಯಾಣ. ಹುಬ್ಬಳ್ಳಿಯಿಂದ 184 ಕಿ.ಮೀ. ಆಗುತ್ತದೆ. ಪ್ರಯಾಣ 4 ಗಂಟೆ. ಮಾರ್ಗ, ರಸ್ತೆ ಹಾಗೂ ರೇಲ್ವೆಗಳನ್ನು ಉಪಯೋಗಿಸಬಹುದು. ಕೊಂಕಣ ರೇಲ್ವೆ ಶುರುವಾಗಿದ್ದರಿಂದ ಗೋವಾದ ಪ್ರವಾಸ ಸರಳ ಹಾಗೂ ಮಿತವ್ಯಯ ಆಗಿದೆ. ಗೋವಾದ ಸಮುದ್ರ ತೀರದಲ್ಲಿ ವಾಟರ್‌ ಸರ್ಫಿಂಗ್‌, ಪ್ಯಾರಾಸೀಲಿಂಗ್‌ ಮತ್ತು ವಾಟರ್‌ ಸ್ಪೋರ್ಟ್ಸ್ ಗಳ ಮೋಜು ಪಡೆಯಬಹುದು.

ಗೋವಾದ ರಾಜಧಾನಿ ಪಣಜಿ ಕೂಡ ಪ್ರವಾಸಕ್ಕೆ ಪ್ರಸಿದ್ಧವಾಗಿದೆ. ಹೆಚ್ಚಿನ ಪ್ರವಾಸಿಗಳು ಗೋವಾದ ಸಮುದ್ರ ತೀರಗಳಲ್ಲಿ ಮೋಜು ಪಡೆಯುತ್ತಾರೆ. ಪಣಜಿ ಮಾಂಡವಿ ನದಿಯ ದಂಡೆಯಲ್ಲಿದೆ. ಇಲ್ಲಿನ ರಿವರ್‌ ಬ್ರಿಜ್‌ ನೋಡಲು ಸುಂದರವಾಗಿದೆ. ಮಾಂಡವಿ ನದಿಯಲ್ಲಿ ರಿವರ್‌ ಕ್ರೂಝ್ ನಲ್ಲಿ ಮ್ಯೂಸಿಕ್‌ ಮತ್ತು ಡ್ಯಾನ್ಸ್ ನ ಮೋಜು ಪಡೆಯಬಹುದು. ಹೊಸ ವರ್ಷದಲ್ಲಿ ಇಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಸಮುದ್ರದ ಸೌಂದರ್ಯ ಮತ್ತು ಬದುಕಿನ ಮೋಜು ಪಡೆಯಲು ವಿದೇಶಕ್ಕೆ ಹೋಗಲಾರದವರು ಗೋವಾ ಪ್ರವಾಸ ಕೈಗೊಳ್ಳಬಹುದು. ಅದು ಯಾವುದೇ ವಿದೇಶಯಾತ್ರೆಗೆ ಕಡಿಮೆಯಲ್ಲ.

ಕೊಳ್ಳುವವರ ಸ್ವರ್ಗ ದುಬೈ

ಸಂಯುಕ್ತ ಅರಬ್‌ ಎಮಿರೇಟ್ಸ್ ದೇಶಗಳಲ್ಲಿ ದುಬೈ ಅತ್ಯಂತ ವಿಶೇಷವಾಗಿದೆ. ಇಲ್ಲಿ ಪ್ರಾಕೃತಿಕ ಗ್ಯಾಸ್‌ನ ಭಂಡಾರವಿದೆ. ಇದನ್ನು ಆಧುನಿಕವಾಗಿ ಅಭಿವೃದ್ಧಿಪಡಿಸಲಾಗಿದೆ. ಸರ್ಕಾರಿ ನಿಯಮಗಳನ್ನು ಪ್ರವಾಸಿಗಳಿಗೆ ಪ್ರೋತ್ಸಾಹ ಸಿಗುವಂತೆ ರೂಪಿಸಲಾಗಿದೆ. ವಾಸ್ತುಕಲೆಯಲ್ಲಿ ನೋಡುವುದಾದರೆ ಇದು ವಿಶ್ವದ ಅತ್ಯಂತ ಪ್ರಮುಖ ಆಧುನಿಕ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಕಟ್ಟಡಗಳು ಬಹಳ ಶ್ರೀಮಂತವಾಗಿವೆ. ಬುರ್ಜ್‌ ಖಲೀಫಾ ನೋಡಲು ವಿಶ್ವದೆಲ್ಲೆಡೆಯಿಂದ ಪ್ರವಾಸಿಗಳು ಬರುತ್ತಾರೆ. ವಿಶ್ವದಲ್ಲಿ ಆರ್ಥಿಕ ಉದಾರೀಕರಣ ಇಲ್ಲದಿದ್ದಾಗ ಜನ ದುಬೈಗೆ ಖರೀದಿಗಾಗಿ ಹೋಗುತ್ತಿದ್ದರು. ದುಬೈ ಇಡೀ ವಿಶ್ವದೊಂದಿಗೆ ನೇರವಾಗಿ ಬೆಸೆದುಕೊಂಡಿದೆ. ಇಲ್ಲಿನ ಮಾರುಕಟ್ಟೆಗಳಲ್ಲಿ ಬಟ್ಟೆ, ಒಡವೆಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಆಟದ ಸಾಮಾನುಗಳು, ಇಂಟೀರಿಯರ್ಸ್, ಸೌಂದರ್ಯ ಪ್ರಸಾಧನಗಳು ಹೆಚ್ಚಿಗೆ ಸಿಗುತ್ತವೆ. ಹೀಗಾಗಿ ದುಬೈ ಕೊಳ್ಳುವವರ ಸ್ವರ್ಗ ಎನಿಸಿದೆ. ದುಬೈನಲ್ಲಿ ಆಧುನಿಕ ಜೀವನಕ್ಕೆ ತಕ್ಕಂತೆ ಎಲ್ಲ ರೀತಿಯ ಸೌಲಭ್ಯಗಳೂ ಸಿಗುತ್ತವೆ.

ಥಾಯ್ಲೆಂಡ್ ಕೋರಲ್ ಐಸ್ಲ್ಯಾಂಡ್

ವಿದೇಶ ಪ್ರವಾಸಕ್ಕೆ ಥಾಯ್ಲೆಂಡ್‌ ಅತ್ಯಂತ ಸಮೀಪದಲ್ಲಿದೆ. ಇಲ್ಲಿ ಪ್ರವಾಸಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳವೆ. ಥಾಯ್ಲೆಂಡ್‌ನಲ್ಲಿ ರಾಜಧಾನಿ ಬ್ಯಾಂಕಾಕ್‌ ಅಲ್ಲದೆ, ಪಟ್ಟಯೂ, ಪಕೆಟ್‌, ಚಿಯಾಂಗ್‌ಮಾಯಿ ಮತ್ತು ನಖೋಸ್‌ ಪಥೋಮ್ ಸುತ್ತಾಡುವ ನಗರಗಳು.

ಥಾಯ್ಲೆಂಡ್‌ನಲ್ಲಿ ಪಟ್ಟಯೂ ನಗರ ಅತ್ಯಂತ ಸುಂದರವಾಗಿದೆ. ಅದರ ಸಮೀಪವೇ ಕೋರಲ್ ಐಸ್‌ಲ್ಯಾಂಡ್‌ ಇದೆ. ಇಲ್ಲಿ ಪ್ಯಾರಾ ಸೀಲಿಂಗ್‌ ಮತ್ತು ವಾಟರ್‌ ಸ್ಪೋರ್ಟ್ಸ್ ನ ಆನಂದ ಸವಿಯಬಹುದು. ಇಲ್ಲಿ ಸುತ್ತಾಡಲು ಗಾಜಿನ ತಳವಿರುವ ದೋಣಿ ಸಿಗುತ್ತದೆ. ಅದರ ಮೂಲಕ ನೀರಿನಲ್ಲಿರುವ ಜೀವಿಗಳು ಮತ್ತು ಹವಳ ಇತ್ಯಾದಿಗಳನ್ನು ನೋಡಬಹುದು. ಇದಲ್ಲದೆ ಪಟ್ಟಯೂದಲ್ಲಿ ಅಲಕಾಜರ್‌ಕ್ಯಾಬರೆ ನೋಡುವ ಜಾಗ ಇದೆ. ಇಲ್ಲಿ ಡ್ಯಾನ್ಸ್  ಮತ್ತು ಮ್ಯೂಸಿಕ್‌ ಶೋ ನೋಡಬಹುದು. ಈ ಕಾರ್ಯಕ್ರಮಗಳಲ್ಲಿರುವ ಸುಂದರ ಅಭಿನೇತ್ರಿಯರು ವಾಸ್ತವದಲ್ಲಿ ಪುರುಷರು. ಥಾಯ್ಲೆಂಡ್‌ನ ಅತ್ಯಂದ ದೊಡ್ಡ ಹಾಗೂ ಹೆಚ್ಚು ಜನಸಂಖ್ಯೆಯುಳ್ಳ ದ್ವೀಪ ಪಕೆಟ್‌. ಬಣ್ಣಗಳಿಂದ ತುಂಬಿದ ಈ ಜಾಗದ ಅಭಿವೃದ್ಧಿ ಪ್ರವಾಸಗಳ ಕಾರಣದಿಂದಾಗಿಯೇ ಉಂಟಾಗಿದೆ. ಸಮುದ್ರದ ಸುಂದರ ತೀರಗಳನ್ನು ನೋಡಲು ಇಚ್ಛಿಸುವವರಿಗೆ ಥಾಯ್ಲೆಂಡ್‌ಗಿಂತ ಸುಂದರ ಜಾಗ ಯಾವುದೂ ಇಲ್ಲ. ಇದರಲ್ಲಿ ಕೋರಲ್ ಐಸ್‌ಲ್ಯಾಂಡ್‌ ಅತ್ಯಂತ ಪ್ರಮುಖವಾಗಿದೆ.

ಜಿಮ್ ಕಾರ್ಬೆಟ್ನಲ್ಲಿ ವೈಲ್ಡ್ಲೈಫ್

ವೈಲ್ಡ್‌ ಲೈಫ್‌ ಟೂರ್‌ ಹೋಗಲು ಇಚ್ಛಿಸುವವರು ಜಿಮ್ ಕಾರ್ಬೆಟ್‌ ನ್ಯಾಷನಲ್ ಪಾರ್ಕ್‌ಗೆ ಹೋಗಬಹುದು. ಉತ್ತರಾಖಂಡದ ನೈನಿತಾಲ್ ‌ಜಿಲ್ಲೆಯಲ್ಲಿರುವ ಈ ಪಾರ್ಕ್‌ 1318 ಸ್ಕ್ವೇರ್‌ ಕಿ.ಮೀ.ಗಳಲ್ಲಿ ಹರಡಿಕೊಂಡಿದೆ. ಇದರ 821 ಸ್ಕ್ವೇರ್‌ ಕಿ.ಮೀ.ನಲ್ಲಿ ಹುಲಿಯ ಸಂರಕ್ಷಣೆ ಮಾಡಲಾಗುತ್ತದೆ. ದಿಗೀಯಿಂದ ಈ ಪಾರ್ಕ್‌ 290 ಕಿ.ಮೀ. ದೂರದಲ್ಲಿದೆ. ಮುರಾದಾಬಾದ್‌ನಿಂದ ಕಾಶೀಪುರ್‌ ಮತ್ತು ರಾಮಗನರದ ಕಡೆಯಿಂದ ಇಲ್ಲಿಗೆ ತಲುಪಬಹುದು.

ಇಲ್ಲಿ ಎಲ್ಲ ರೀತಿಯ ಪ್ರಾಣಿಗಳಿವೆ. ಸಿಂಹ, ಕರಡಿ, ಆನೆ, ಜಿಂಕೆ, ಚಿರತೆ, ಹಸು ಇತ್ಯಾದಿ ಪ್ರಮುಖವಾಗಿವೆ. ಇಲ್ಲಿ ಕಾಡುಪ್ರಾಣಿಗಳನ್ನು ಸಂರಕ್ಷಿಸಲಾಗುತ್ತದೆ. 1935ರಲ್ಲಿ ಇದರ ನಿರ್ಮಾಣವಾಯಿತು. ಮೊದಲು ಇದರ ಹೆಸರು ಹೆಲಿ ನ್ಯಾಷನಲ್ ಪಾರ್ಕ್‌. ಬ್ರಿಟಿಷ್‌ ಗವರ್ನರ್‌ ಮಾಲ್ಕಂ ಹೆಲಿರವರ ಹೆಸರನ್ನು ಇಡಲಾಗಿತ್ತು. ಅವರೇ ಈ ಪಾರ್ಕನ್ನು ನಿರ್ಮಿಸಿದ್ದರು. ಸ್ವಾತಂತ್ರ್ಯ ಬಂದ ನಂತರ ಇದನ್ನು ರಾಮಗಂಗಾ ನ್ಯಾಷನಲ್ ಪಾರ್ಕ್‌ ಎಂದು ಕರೆದರು. ಅಲ್ಲಿ ನರಭಕ್ಷಕ ಹುಲಿಗಳು ಜನರಿಗೆ ಬಹಳ ತೊಂದರೆ ಕೊಟ್ಟವು.

ಜಿಮ್ ಕಾರ್ಬೆಟ್‌ ದೊಡ್ಡ ಶಿಕಾರಿಯಾಗಿದ್ದರು. ಅವರ ಪೂರ್ತಿ ಹೆಸರು ಜೇಮ್ಸ್ ಎಡ್ವರ್ಡ್‌ ಕಾರ್ಬೆಟ್‌. ಅವರು ಕುಮಾನ ನರಭಕ್ಷಕ ಹುಲಿಗಳನ್ನು ಕೊಂದು ಜನರ ಪ್ರಾಣ ಕಾಪಾಡಿದ್ದರು. ಅದಕ್ಕೇ ಜನ ಇದನ್ನು ಜಿಮ್ ಕಾರ್ಬೆಟ್‌ ಹೆಸರಿನಿಂದಲೂ ಕರೆಯುತ್ತಾರೆ.

1957ರಲ್ಲಿ ಭಾರತ ಸರ್ಕಾರ ಈ ಪಾರ್ಕಿಗೆ ಜಿಮ್ ಕಾರ್ಬೆಟ್‌ ನ್ಯಾಷನಲ್ ಪಾರ್ಕ್‌ ಎಂದು ಹೆಸರಿಟ್ಟಿತು. ಈಗಿನ ಪಾರ್ಕ್‌ ಬಹಳ ಚೆನ್ನಾಗಿದೆ. ಇದರಲ್ಲಿ 200 ಪ್ರವಾಸಿಗಳು ತಂಗಲು ವ್ಯವಸ್ಥೆ ಇದೆ. ಇಲ್ಲಿ ಅತಿಥಿಗೃಹ, ಕ್ಯಾಬಿನ್‌ ಮತ್ತು ಟೆಂಟ್‌ ಲಭ್ಯವಿವೆ. ಇದು ರಾಮನಗರ ರೇಲ್ವೆ ಸ್ಟೇಷನ್‌ನಿಂದ 12 ಕಿ.ಮೀ ದೂರದಲ್ಲಿದೆ. ರಾಮನಗರ ರೇಲ್ವೆ ಸ್ಟೇಷನ್‌ನಿಂದ ಪಾರ್ಕಿಗೆ ಸಣ್ಣದು, ದೊಡ್ಡದು ಎಲ್ಲ ರೀತಿಯ ವಾಹನಗಳು ಸಿಗುತ್ತವೆ. ಇಲ್ಲಿ ಜಿಪ್ಸಿ ಮೂಲಕ ಪಾರ್ಕಿನಲ್ಲಿ ಸುತ್ತಾಡಲು ವ್ಯವಸ್ಥೆ ಇದೆ. ಸುತ್ತಾಡುವಾಗ ವಾಹನದ ಗಾಜುಗಳನ್ನು ಮುಚ್ಚಬೇಕಾಗುತ್ತದೆ. ಏಕೆಂದರೆ ಕಾಡುಪ್ರಾಣಿಗಳ ದಾಳಿಯ ಭಯವಿರುತ್ತದೆ. ಬೆಳಗ್ಗೆ 6 ರಿಂದ ಸಂಜೆ 4ರ ನಡುವೆ ನೇಚರ್‌ ವಾಕ್‌ನ್ನು ಆಯೋಜಿಸಿರುತ್ತಾರೆ.

ಶೈಲಜಾ ಪ್ರಭು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ