ರಾಜು ಸದಾ ಕವಿತಾಳ ಹಿಂದೆ ಬಿದ್ದಿರುತ್ತಿದ್ದ. ಏನಾದರೂ ಮಾಡಿ ಅವಳನ್ನು ಇಂಪ್ರೆಸ್‌ ಮಾಡಬೇಕೆಂಬುದು ಅವನ ಇರಾದೆ. ಕವಿತಾಳಿಗೂ ಅವನ ಮೇಲೆ ಇಷ್ಟವಿದ್ದರೂ ಅದನ್ನು ಪ್ರಕಟವಾಗಿ ಹೇಳಿರಲಿಲ್ಲ. ಅವನ ಪ್ರಯತ್ನಗಳನ್ನು ಅವಳು ಮೌನವಾಗಿ ಗಮನಿಸುತ್ತಿದ್ದಳು.

ಆ ದಿನ ಕಾಲೇಜಿನ ವಿದ್ಯಾರ್ಥಿಗಳೆಲ್ಲ ಕ್ಯಾಂಟೀನ್‌ನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಹುಡುಗಿಯರ ಬಳಿ ಕುಳಿತಿದ್ದ ಕವಿತಾಳನ್ನು ಹುಡುಕಿಕೊಂಡು ಬಂದ ರಾಜು, ತನ್ನದೇ ಲಹರಿಯಲ್ಲಿ ಹಾಡತೊಡಗಿದ, `ಇರುವುದೊಂದು ಹೃದಯ…. ಯಾರಿಗೆಂದು ಕೊಡಲಿ… ನಾವು ಯಾರಿಗಂತ ಕೊಡಲಿ….’

ಎಲ್ಲರೂ ಉತ್ಸಾಹದಿಂದ ರಾಜುವನ್ನೇ ಗಮನಿಸತೊಡಗಿದರು. ರೊಮ್ಯಾಂಟಿಕ್‌ ಆಗಿ ಅವನು ಮುಂದೇನು ಹೇಳಲಿದ್ದಾನೋ ಎಂದು ಕವಿತಾ ಸಹ ಅವನನ್ನೇ ನೋಡುತ್ತಿದ್ದಳು.

`ಇರುವುದೊಂದೇ ಹೃದಯ… ಯಾರಿಗೆಂದು ಕೊಡಲಿ… ನಾ ಯಾರಿಗೆಂದು ಕೊಡಲಿ….’ ಎಂದು ಬೇಕೆಂದೇ ಅವನು ರಾಗ ಎಳೆದಾಗ ಕವಿತಾಳಿಗೆ ರೇಗಿತು, “ಯಾವಳಿಗಾದ್ರೂ ಕೊಟ್ಕೋ, ಅದನ್ನು ಕಟ್ಟಿಕೊಂಡು ನನಗೇನು?” ಎಂದು ಸಿಡುಕುತ್ತಾ ಎದ್ದುಹೋದಾಗ ಅಲ್ಲಿದ್ದ ಎಲ್ಲರೂ ಜೋರಾಗಿ ನಕ್ಕರು.

ಹೆಚ್ಚಿನ ಸ್ಕೋಪ್‌ ತೆಗೆದುಕೊಳ್ಳಲು ಹೋಗಿ ರಾಜು ಪೆದ್ದುಪೆದ್ದಾಗಿ ಜಾರಿಬಿದ್ದಿದ್ದ.

ಟೀಚರ್‌ : ಸತೀಶ್‌, ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?

ಸತೀಶ್‌ : ಅದೂ…. ಅದೂ… ನನ್ನ ನಾಲಿಗೆ ಮೇಲೆ ಇದೆ. ಆದರೆ ಹೊರಗೆ ಬರುತ್ತಿಲ್ಲ….

ಟೀಚರ್‌ : ಸೋಡಿಯಂ ಕ್ಲೋರೈಡ್‌, ಅಷ್ಟೊಂದು ಉಪ್ಪನ್ನು ನಾಲಿಗೆ ಮೇಲೆ ಇಟ್ಟುಕೊಳ್ಳಬೇಡ…. ನಂಜಾದೀತು!

 

ಗೋವಿಂದ 2016ರ ಅಧಿಕ ವರ್ಷದ ಕ್ಯಾಲೆಂಡರ್‌ ನೋಡುತ್ತಾ ಹೇಳಿದ, “ಸುರೇಶ್‌, ಯಾವ ತಿಂಗಳಲ್ಲಿ 28 ಮತ್ತು 29 ಎಂಬ ದಿನಾಂಕ ಇರುತ್ತದೆ?“ಅದಕ್ಕಾಗಿ ಕ್ಯಾಲೆಂಡರ್‌ ಬಚ್ಚಿಡುವುದು ಬೇಡ, 28 ಮತ್ತು 29 ಎಂಬ ಎಲ್ಲಾ ತಿಂಗಳಲ್ಲೂ ಇರುತ್ತದೆ,” ಎಂದು ಥಟ್ಟನೆ ಉತ್ತರಿಸಿದ ಸುರೇಶ್‌.

ಹೊಸ ಹೋಟೆಲ್ ‌ಹೊಕ್ಕ ಜಿಪುಣ ತಿಮ್ಮಣ್ಣ ಕೇಳಿದ, “ಏನಪ್ಪ… ಈ ಹೋಟೆಲ್‌ನಲ್ಲಿ ಎಲ್ಲಕ್ಕಿಂತ ಅಗ್ಗ ಯಾವುದು?”

ಅವನ ಮುಖವನ್ನೇ ಪೆಕರುಪೆಕರಾಗಿ ನೋಡುತ್ತಾ ಮಾಣಿ ಉತ್ತರಿಸಿದ, “ಅದೇ…. ನೀರು!”

“ಹಾಗಿದ್ದರೆ 2 ಗ್ಲಾಸ್‌ ನೀರು ಕೊಡಪ್ಪ,” ಎಂದು ಜಿಪುಣಾಗ್ರೇಸ ತಿಮ್ಮಣ್ಮ ತನ್ನ ಜೇಬು ಸವರಿಕೊಂಡ.

ಆ ದಿನ ಕ್ಲಾಸಿನಲ್ಲಿ ಬಹಳ ಗಲಾಟೆ ನಡೆಯುತ್ತಿತ್ತು. ಎಂದಿನ ಕಾರಿಡಾರ್‌ ರೌಂಡ್ಸ್ ಗೆ ಹೊರಟಿದ್ದ ಪ್ರಿನ್ಸಿಪಲ್ ಸಾಹೇಬರು ಬಂದು ಈ ಕ್ಲಾಸ್‌ನ್ನು ಗದರಿಹೋದರು. ಇವರ ಗಲಾಟೆ ನಿಲ್ಲುವ ಹಾಗೇ ಇರಲಿಲ್ಲ. ಈ ಬಾರಿ ಸೋಜಿಗವೆಂದರೆ, ಹುಡುಗರೆಲ್ಲ ಮೌನವಾಗಿದ್ದರೆ, ಹುಡುಗಿಯರೇ ಜೋರು ಜೋರಾಗಿ ಹರಟುತ್ತಾ ಕಿಸಿಯುತ್ತಿದ್ದರು.

ಆಗ ಕ್ಲಾಸ್‌ ರೆಪ್ರೆಸೆಂಟೆಟಿವ್ ‌ಎದ್ದು ನಿಂತು, “ಸ್ವಲ್ಪ ಹೆಣ್ಣುಮಕ್ಕಳು ಶಾಂತರಾಗಬೇಕಾಗಿ ವಿನಂತಿ. ಯಾವಾಗಲೂ ವಟವಟ ಅಂತಿದ್ದರೆ ಪ್ರಿನ್ಸಿಪಾಲರು ಮೆವೊ ಇಶ್ಯು ಮಾಡುತ್ತಾರೆ,” ಎಂದಾಗ ಹುಡುಗಿಯರು 2 ನಿಮಿಷ ಸುಮ್ಮನಿದ್ದು ಮತ್ತೆ ಗುಸುಗುಸು ಶುರು ಮಾಡಿದರು. 5 ನಿಮಿಷದಲ್ಲಿ ಅದು ಮತ್ತೆ ತಾರಕಕ್ಕೆ ಹೋಯಿತು.

ಹುಡುಗಿಯರು ಹಠ ತೊಟ್ಟವರಂತೆ ಮತ್ತೆ ಶುರು ಹಚ್ಚಿಕೊಂಡಾಗ ಕ್ಲಾಸ್‌ ರೆಪ್ರೆಸೆಂಟೆಟಿವ್ ‌ಮತ್ತೆ ಎದ್ದು ನಿಂತು ಹೇಳಿದ, “ದಯವಿಟ್ಟು ಸುಮ್ಮನಿರ್ರಮ್ಮ… ಹುಡುಗಿಯರು 15 ನಿಮಿಷ ಸೈಲೆಂಟ್‌ ಆಗಿ ಕುಳಿತಿದ್ದರೆ ನಾನು ಇಡೀ ಕ್ಲಾಸಿಗೆ ಕಾಫಿ ಟ್ರೀಟ್‌ಕೊಡಿಸ್ತೀನಿ!”

ಇದನ್ನು ಕೇಳಿ ತನ್ನನ್ನು ತಾನು ಹೆಚ್ಚು ಸ್ಮಾರ್ಟ್‌ ಎಂದು ಭಾವಿಸಿ ಬೀಗುತ್ತಿದ್ದ ಕೋಕಿಲಾ, “ಆಯ್ತು. ನಾವು 15 ನಿಮಿಷ ಮೌನವಾಗಿ ಇರ್ತೀವಿ. ಆದರೆ ಪುಢಾರಿಯಂತೆ ಬರೀ ಆಶ್ವಾಸನೆ ಕೊಡೋದಲ್ಲ… ಖಂಡಿತಾ ಕಾಫಿ ಟ್ರೀಟ್‌ ಕೊಡಬೇಕು,” ಎಂದಾಗ ಆತ ಆಗಲೆಂದು ಒಪ್ಪಿಕೊಂಡ.

ಕ್ಲಾಸ್‌ನಲ್ಲಿ ಪಿನ್‌ ಡ್ರಾಪ್‌ ಸೈಲೆನ್ಲ್ ನೆಲೆಸಿತು. ಆದರೆ 5-6 ನಿಮಿಷಕ್ಕಿಂತ ಹೆಚ್ಚು ಹೊತ್ತು ಮೌನವಾಗಿ ಇರಲಾರದ ಕೊನೆ ಬೆಂಚಿನ ಹುಡುಗಿಯರ ಮುಖದಲ್ಲಿ ಚಡಪಡಿಕೆ ಕಾಣಿಸುತ್ತಿತ್ತು.

10 ನಿಮಿಷ ಮುಗಿಯುಷ್ಟರಲ್ಲಿ ತಡೆಯಲಾಗದೆ ಎದ್ದು ನಿಂತ ಕೋಕಿಲಾ, “ಏ…. 15 ನಿಮಿಷ ಆಗಿರಬೇಕು ನೋಡ್ರೆ…. ನಡೀರಿ, ಈ ಬ್ರೇಕ್‌ ಪಿರಿಯಡ್‌ನಲ್ಲೇ ಕಾಫಿ ಮುಗಿಸಿ ಬರೋಣ,” ಎಂದಳು. ಅವಳ ಮಾತು ಮುಗಿಯುವ ಮುನ್ನವೇ ಹುಡುಗರ ತಂಡ ಜೋರಾಗಿ ನಕ್ಕುಬಿಟ್ಟಿತು. ತಾನು ಮುಂದಿಟ್ಟ ಷರತ್ತನ್ನು ತಾನೇ ಮುರಿದ ಕೋಕಿಲಾಳ ಮೇಲೆ ಹುಡುಗಿಯರಿಗೆ ಕೆಂಡದಂಥ ಸಿಟ್ಟು ಉಕ್ಕಲು, ಮಾಲು ಸಮೇತ ಸಿಕ್ಕಿಬಿದ್ದ ಕಳ್ಳಿಯಂತೆ ಅವಳು ತಲೆ ತಗ್ಗಿಸಿ ಕುಳಿತಳು. ಈ ಬಾರಿ ಕ್ಲಾಸ್‌ ಸೀರಿಯಸ್‌ ಆಗಿ ಮೌನವಾಯಿತು.

ಗುಂಡ : ಅಪ್ಪ, 50/ ರೂ. ಕೊಡು. ಇವತ್ತು ಶಾಲೆಗೆ ಹೋಗಲು ತಡವಾಯ್ತು ಅಂತ ದಂಡ ಹಾಕಿದ್ದಾರೆ.

ಅಪ್ಪ : ಪರವಾಗಿಲ್ಲ, ನಾಳೆ ಅರ್ಧ ಗಂಟೆ ಬೇಗನೆ ಶಾಲೆಗೆ ಹೋಗಿಬಿಡು, ಅವರೇ ನಿನಗೆ 50/ ರೂ. ಕೊಡ್ತಾರೆ.

ಕಾಲೇಜಿನಲ್ಲಿ ಬಾಯ್‌ ಫ್ರೆಂಡ್‌ ಗರ್ಲ್ ಫ್ರೆಂಡ್‌ ಪ್ರಕರಣಗಳು ಸಾಮಾನ್ಯ. ಹೀಗಾಗಿ ಅಂಥವರು ಸದಾ ಗುಂಪಾಗಿ ಅಲ್ಲಿ ಇಲ್ಲಿ ಅಡ್ಡಾಡುತ್ತಿರುತ್ತಾರೆ. ಅಂಥವರಲ್ಲಿ ಗೋಪಿ ಫ್ಲರ್ಟಿಂಗ್‌ ಸ್ವಭಾವದ, ಉಡಾಳ ಪೋಕರಿ ಎನಿಸಿದ್ದ. ಹೊಸದಾಗಿ ಸೇರಿದ್ದ ಲತಾಳ ಮೇಲೆ ಅವನ ಕಣ್ಣು ಬಿತ್ತು. ಅವನ ಪುಂಡಾಟಿಕೆ ಗೊತ್ತಿದ್ದ ಲತಾ ಗೋಪಿಗೆಂದೂ ಉತ್ತೇಜನ ಕೊಡಲಿಲ್ಲ. ಎಂದಿನಂತೆ ಆ ವರ್ಷ ವ್ಯಾಲೆಂಟೈನ್‌ ಡೇ ಬಂತು. ಯುವ ಜೋಡಿಗಳು ತಂತಮ್ಮ ಸಂಗಾತಿಗಳ ಕೈಹಿಡಿದು ಎಲ್ಲರ ಮುಂದೆ ಸ್ಟೈಲಾಗಿ ಪೋಸ್ ಕೊಡುತ್ತಾ, ಕ್ಲಾಸ್‌ ಬಂಕ್‌ ಮಾಡಿ ಹೊರಗೆ ಸುತ್ತಾಡಲು ಹೊರಟರು. ಆಗ ಫ್ರೀ ಪಿರಿಯಡ್‌ ಇದ್ದ ಕಾರಣ ಲತಾ (ತನ್ನ ಗೆಳತಿಯರಿಗಾಗಿ) ಕ್ಯಾಂಟಿನ್‌ನಲ್ಲಿ ಕಾಯುತ್ತಾ ಕುಳಿತಿದ್ದಳು.

ಅಲ್ಲಿಗೆ ಆಕಸ್ಮಿಕವಾಗಿ ಬಂದ ಗೋಪಿ, “ಲತಾ ಮೈ ಡಿಯರ್‌, ಇವತ್ತಾದರೂ ನೀನು ನನ್ನ ಪ್ರೇಮ ಅಂಗೀಕರಿಸಿ ನನ್ನೊಂದಿಗೆ ಹೊರಗೆ ಬರಬಾರದೇ?” ಎಂದು ವಿನಂತಿಸಿಕೊಂಡ.

ಲತಾ ಅದಕ್ಕೆ, “ಅದೆಲ್ಲ ನನಗೆ ಬೇಕಾಗಿಲ್ಲ. ನಾನು ಫ್ರೆಂಡ್ಸ್ ಗಾಗಿ ಕಾಯುತ್ತಿದ್ದೇನೆ,” ಎಂದಳು.

ಸ್ವಲ್ಪ ಹೊತ್ತಿಗೆ ಅವಳ ಫ್ರೆಂಡ್ಸ್ ಅಲ್ಲಿಗೆ ಬಂದರು. ಆದರೆ ಗೋಪಿ ಭಂಡನಂತೆ ಇನ್ನೂ ಅಲ್ಲೇ ನಿಂತಿದ್ದ. “ಲತಾ, ಇವತ್ತು ಪ್ರೇಮಿಗಳ ದಿನ. ಎಲ್ಲೆಲ್ಲೂ ವಾತಾವರಣದಲ್ಲಿ ಪ್ರೇಮ ತುಂಬಿದೆ, ಲವ್ ವೈರಸ್‌ ಹರಡಿದೆ. ನಿನ್ನನ್ನು ನೋಡಿದಾಗಿನಿಂದ ಬಹುಶಃ ನನ್ನನ್ನೂ ಅದೇ ವೈರಸ್‌ ಅಟ್ಯಾಕ್‌ ಮಾಡಿರಬೇಕು,” ಎಂದ. ಆ ಭಂಡನ ಪ್ರೇಮಾಲಾಪ ಕೇಳಲಾರದೆ ಲತಾ ಥಟ್ಟನೆ, “ಚಿಂತೆ ಮಾಡಬೇಡ. ನನ್ನ ಬಳಿ ಹೊಸ ಸ್ಯಾಂಡಲ್ಸ್ ಇವೆ, ಅವು ಆ್ಯಂಟಿ ವೈರಸ್‌ ಕೆಲಸ ಮಾಡುತ್ತವೆ,” ಎನ್ನುತ್ತಾ ಅವಳು ತನ್ನ ಸ್ಯಾಂಡಲ್ಸ್ ಕೈಗೆತ್ತಿಕೊಂಡಾಗ ಅವನು ತನ್ನ ಕಾಲಿಗೆ ಬುದ್ಧಿ ಹೇಳಿದ. ಅದನ್ನು ಕಂಡು ಅಲ್ಲಿದ್ದ ಗೆಳತಿಯರೆಲ್ಲ ಜೋರಾಗಿ ನಕ್ಕರು.

ನ್ಯಾಯಾಧೀಶರು : ಭಾಷಣ ಮಾಡುತ್ತಿದ್ದ ಒಬ್ಬ ಪುಢಾರಿಗೆ ನೀನು ನೇರವಾಗಿ ಚಪ್ಪಲಿ ಎಸೆದು ಎಲ್ಲರ ಮುಂದೆ ಅವಮಾನ ಮಾಡಿದ್ದಿ. ಹೀಗಾಗಿ ನಿನಗೆ 500/ ರೂ. ದಂಡ ವಿಧಿಸಲಾಗಿದೆ.

ಆಪಾದಿತ : ಸ್ವಾಮಿ, ನನ್ನ ಬಳಿ ಕೇವಲ 1000/ ರೂ. ಒಂದೇ ನೋಟಿದೆ. ನೀವು ಹೂಂ ಅಂದ್ರೆ ಆತನಿಗೆ ಇನ್ನೊಂದು ಮೆಟ್ಟಿನ ಕಾಣಿಕೆ ಕೊಡಲೇ?

ಗುಂಡ ಎದುರು ಬೆಂಚಿನಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದ ಸೋಮನ ಪೇಪರ್‌ ನೋಡಿ ನೋಡಿ ಕಾಪಿ ಮಾಡುತ್ತಿದ್ದ. ಇದನ್ನು ಗಮನಿಸಿದ ಪರೀಕ್ಷಕರು ಕೋಪದಿಂದ, “ಏನಪ್ಪ ಗುಂಡ, ಲಕ್ಷಣವಾಗಿ ಸೋಮನ ಪಕ್ಕದಲ್ಲೇ ಕೂರುವುದು ತಾನೇ?” ಎಂದರು.

“ಥ್ಯಾಂಕ್ಸ್ ಸರ್‌, ನನಗೆ ಇಲ್ಲಿಂದಲೇ ಕಾಣುತ್ತೆ… ನೀವು ಸ್ವಲ್ಪ ಅಡ್ಜಸ್ಟ ಮಾಡಿಕೊಳ್ಳಿ,” ಎನ್ನುವುದೇ?

Tags:
COMMENT