ಬೆಂಗಳೂರಿಗೆ ದೇಶ, ವಿದೇಶಗಳಿಂದ ಜನರು ಬರುತ್ತಿರುತ್ತಾರೆ. ಬಹಳಷ್ಟು ಕನ್ನಡೇತರರಿಂದ ಬೆಂಗಳೂರು ತುಂಬಿಹೋಗಿದೆ. ಅದರಲ್ಲೂ ಬಹುತೇಕ ಸಾಫ್ಟ್ ವೇರ್‌ ಕಂಪನಿಗಳಿರುವ ನಗರದ ಭಾಗಗಳಲ್ಲಿ ಕನ್ನಡ ಮಾಯವಾಗಿಬಿಟ್ಟಿದೆ ಎನ್ನಬಹುದು. ಇದು ಕನ್ನಡಿಗರೆಲ್ಲರ ಮನದಲ್ಲಿ ಮೂಡುವ ಬೇಸರದ ಮಾತು. ಆದರೆ ಎಲ್ಲರೂ ಕನ್ನಡ ಮಾತನಾಡುವಂತಾಗಲು ಏನು ಮಾಡಬೇಕು ಎನ್ನುವುದು ಸರ್ವರ ಮುಂದಿರುವ ಪ್ರಶ್ನೆಗಳು. ಮೊಟ್ಟ ಮೊದಲಿಗೆ ನಾವು ಕನ್ನಡಿಗರು ಎಲ್ಲರ ಜೊತೆ ಕನ್ನಡದಲ್ಲಿಯೇ ಮಾತನಾಡಬೇಕು. ಆಗ ಮಿಕ್ಕವರೂ ಕನ್ನಡ ಮಾತನಾಡಲು ಪ್ರಯತ್ನಿಸುತ್ತಾರೆ.

IMG_4817

ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಕೆಲಸವನ್ನು ಅನೇಕ ಸಂಸ್ಥೆಗಳು ಮಾಡುತ್ತಿವೆಯಾದರೂ ಅದು ಸಾಲದು. ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಎನ್ನುವ ಹಾಗೆ, ಆದರೂ ಮಾಡುವ ಪ್ರಯತ್ನವನ್ನು ನಿಲ್ಲಿಸಲಾಗದು. ಅಂತಹ ಒಂದು ಪ್ರಯತ್ನವನ್ನು ಆಶಾ ಇನ್ಛಿನೈಟ್‌ ಸಂಸ್ಥೆಯು ನಡೆಸಿತು. ಪ್ರತಿಷ್ಠಿತ ಅಡೋಬಿ ಕಂಪನಿಯ ಉದ್ಯೋಗಿಗಳಿಗೆ ಕನ್ನಡ ಮಾತನಾಡಲು ಕಲಿಸುವ ಕಾರ್ಯಾಗಾರವನ್ನು ನಡೆಸಿತು. ನಿಜಕ್ಕೂ ಹೇಳಬೇಕೆಂದರೆ ಅಂತಹ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಬೇಕೆಂದರೆ ಅವರು ನಿಜಕ್ಕೂ ಬುದ್ಧಿವಂತರೇ ಇರಬೇಕು. ಅಂತಹ ಪ್ರತಿಭಾವಂತರು ಚಿಕ್ಕಮಕ್ಕಳಂತೆ ಆ ಕಾರ್ಯಾಗಾರದಲ್ಲಿ ಆಸಕ್ತಿ ತೋರಿಸಿದಾಗ ಹೃದಯ ತುಂಬಿ ಬಂದಿತು.

ಕಾರ್ಯಾಗಾರವನ್ನು ಪೂರ್ಣವಾಗಿ ಬಹಳ ಆಕರ್ಷಕವಾಗಿ ರೂಪಿಸಲಾಗಿತ್ತು. ಅದು ಬರಿಯ ಭಾಷಣವಾಗಿರದೆ ಪೂರ್ಣವಾಗಿ ಕ್ರಿಯೆ ಪ್ರತಿಕ್ರಿಯೆಗಳಿಂದ ತುಂಬಿಹೋಗಿತ್ತು.

IMG_4732

 

ನಾಮಪದ ಕಲಿಯಲು ಬಿಂಗೋ ಆಟ

ಮೊದಲಿಗೆ ಅವರಿಗೆ ಕೆಲವು ನಾಮಪದಗಳನ್ನು ಹೇಳಿಕೊಟ್ಟು ನಂತರ ಅವರಿಗೆ ಬಿಂಗೊ ಆಟದ ಮೂಲಕ ಆ ಪದಗಳು ಮತ್ತಷ್ಟು ಅವರ ಮನದಲ್ಲಿ ಮೂಡುವ ಹಾಗೆ ಮಾಡಲಾಯಿತು.

ಮುಂದೆ ಬನ್ನಿ, ಹಿಂದೆ ಹೋಗಿ…..ನಂತರ  ಕ್ರಿಯಾ ಪದಗಳ ಸರದಿ. ಅಲ್ಲಿ ಪದಗಳನ್ನು ಹೇಳಿ ಅವರಿಂದ ಕ್ರಿಯೆಗಳನ್ನು ಅರ್ಥಾತ್ ಆ್ಯಕ್ಷನ್‌ ಮಾಡಿಸಲಾಯಿತು. ಇಲ್ಲಿ ಮತ್ತೊಂದು ಸ್ವಾರಸ್ಯವೆಂದರೆ ಭಾಷಾಸುರನ ಆಗಮನ. ಎಲ್ಲರ ನಿದ್ದೆಯನ್ನು ಎಬ್ಬಿಸಿದ ಅವನು ಆಕರ್ಷಣೆಯ ಕೇಂದ್ರವಾದ.

IMG_4597

ಹಾಡು ಹಾಡಿಸಿದಾಗ…..

ಪ್ರಶ್ನಾರ್ಥಕ ಪದಗಳಿಗೆ ಅವರೇ ರಾಗ ಕಟ್ಟಿ ರಾಗವಾಗಿ ಹಾಡುವಂತೆ ಮಾಡಲಾಯಿತು.

IMG_4636

ಚಿತ್ರಪದ ಜೋಡಿಸಿ

ದಿನನಿತ್ಯ ಬಳಸುವ ತರಕಾರಿ, ಹಣ್ಣುಗಳ ಸರದಿ. ಇಲ್ಲಿ ಅವರಿಗೆ ಹಣ್ಣು ತರಕಾರಿಗಳ ಪರಿಚಯ ಮಾಡಿಸಿ ನಂತರ ಅವುಗಳ ಚಿತ್ರಗಳು ಮತ್ತು ಕನ್ನಡದಲ್ಲಿ ಅವುಗಳ ಹೆಸರುಗಳು ಇರುವ ಚೌಕಾಕಾರದಲ್ಲಿ ಕತ್ತರಿಸಿದ ಕಾರ್ಡ್‌ ಬೋರ್ಡ್‌ ಗಳನ್ನು ನೀಡಿ, ಅವುಗಳನ್ನು ಹೆಸರಿಗೆ ಅನುಗುಣವಾಗಿ ಜೋಡಿಸಲು ಹೇಳಿದ್ದಾಯಿತು.

ಬಣ್ಣ, ನಿಮ್ಮ ಒಲವಿನ ಬಣ್ಣ

ಬಣ್ಣಗಳ ಹೆಸರನ್ನು ಹೇಳಿ ಅವರು ಧರಿಸಿದ ಬಟ್ಟೆ ಅಥವಾ ಅವರಲ್ಲಿರುವ ವಸ್ತುಗಳ ಮೂಲಕ ಅವರಿಗೆ ಬಣ್ಣಗಳ ಪರಿಚಯ ಮಾಡಿಸಲಾಯಿತು.

ಮೆಮರಿ ಗೇಂ

ನಂತರ ಈವರೆಗೂ ಕಲಿತ ಪದಗಳನ್ನು ಒಬ್ಬರಿಂದ ಒಬ್ಬರಿಗೆ ಹೆಚ್ಚಿಸಿಕೊಂಡು ಹೇಳುವ ಮೆಮರಿ ಆಟವನ್ನು ಆಡಿಸಲಾಯಿತು. ಒಬ್ಬರು ಒಂದು ಪದ ಹೇಳಿದರೆ ಮುಂದಿನವರು ಮೊದಲು ಹೇಳಿದವರ ಪದ ಮತ್ತು ಅದಕ್ಕೆ ಇವರೊಂದು ಪದವನ್ನು ಸೇರಿಸಿ ಹೇಳುವುದು, ಹಾಗೆಯೇ  ಮುಂದುವರಿಯುತ್ತಾ ಹೋಗುವುದು. ಕೊನೆಯವರು ಎಲ್ಲರನ್ನೂ ಸೇರಿಸಿ ಹೆಚ್ಚು ಪದಗಳನ್ನು ಹೇಳಬೇಕಾಗುತ್ತದೆ.

IMG_4697

ಒಟ್ಟಾರೆ ಎಲ್ಲರೂ ಇಲ್ಲಿ ಮಕ್ಕಳಂತೆ ನಕ್ಕು ನಲಿದರು. ಪ್ರತಿಯೊಂದು ಆಟದಲ್ಲೂ ಅವರ ಉತ್ಸಾಹ ಅಪರಿಮಿತವಾಗಿತ್ತು. ಆಟದ ಮೂಲಕ ಭಾಷೆಯನ್ನು ಕಲಿಸುವ ನಲಿ ಕಲಿ ತಂತ್ರವನ್ನು ಅಳವಡಿಸಿಕೊಂಡು ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು. ಆಶಾ ಇನ್ಛಿನೈಟ್‌ ಸಂಸ್ಥೆಯ ಮುಖ್ಯಸ್ಥೆ ಮೀರಾ ರಮಣರವರು, `ಇಂತಹ ಕಾರ್ಯಾಗಾರಗಳನ್ನು ಬರಿಯ ನವೆಂಬರಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸುವುದರ ಬದಲಿಗೆ, ನಿಯಮಿತವಾಗಿ ನಡೆಸಿದಾಗ ಖಂಡಿತಾ ಕನ್ನಡೇತರರು ಕನ್ನಡ ಕಲಿತು ಸ್ವಲ್ಪ ಮಟ್ಟಿಗಾದರೂ ಕನ್ನಡ ಮಾತನಾಡುವಂತೆ ಮಾಡುವುದು ಸಾಧ್ಯವಿದೆ,’ ಎನ್ನುತ್ತಾರೆ.

ಈ ನಿಟ್ಟಿನಲ್ಲಿ ಎಲ್ಲ ಸಾಫ್ಟ್ ವೇರ್‌ ಕಂಪನಿಗಳು ಮುತುವರ್ಜಿ ವಹಿಸಿದಲ್ಲಿ ಕನ್ನಡವನ್ನು ತಮ್ಮ ಉದ್ಯೋಗಿಗಳಿಗೆ ಕಲಿಸುವುದು ಸಾಧ್ಯವಿದೆ. ತನ್ಮೂಲಕ ಎಲ್ಲೆಡೆ ನಮ್ಮ ಭಾಷೆ ಪಸರಿಸುವುದು ಸಾಧ್ಯವಿದೆ. ಕರ್ನಾಟಕದಲ್ಲಿದ್ದು ಇಲ್ಲಿಯೇ ತಮ್ಮ ಜೀವನವನ್ನು ಕಟ್ಟಿಕೊಂಡಿರುವವರು ಬಹಳಷ್ಟು ಜನರಿದ್ದಾರೆ. ಇಲ್ಲಿಯ ನೆಲ ಜಲದ ಋಣವನ್ನು ತೀರಿಸಲಾದರೂ ನಮ್ಮ ಭಾಷೆಯನ್ನು ಅವರಿಗೆ ಕಲಿಸುವುದು ಕನ್ನಡಿಗರ ಧರ್ಮ. ಅಂತೆಯೇ ಕನ್ನಡ ಕಲಿತು ಜೊತೆಗೆ ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಇಲ್ಲಿಗೆ ಬಂದು ನೆವೆಸಿರುವವರ ಕರ್ತವ್ಯವೂ ಹೌದು. ಎಲ್ಲರಿಗೂ ಕನ್ನಡ ಕಲಿಸುವ ಕಾಯಕದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ.

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ