`ಓಹ್‌ ಮೈ ಗಾಡ್‌’ ಸಿನಿಮಾದಲ್ಲಿ ದೇವರನ್ನು ತಮಾಷೆ ಮಾಡಿದ್ದಕ್ಕಾಗಿ ಭಾರಿ ಗೊಂದಲವೇ ಉಂಟಾಗಿತ್ತು. ಈ ಚಿತ್ರದಲ್ಲಿ ಪರೇಶ್‌ರಾವ್ ಪಾತ್ರಧಾರಿಯು ದೇವಿ ಪ್ರಕೋಪ ಅಂದರೆ ಭೂಕಂಪದಿಂದ ಆದ ಹಾನಿಗಾಗಿ ದೇವರ ಮೇಲೆಯೇ ಮೊಕದ್ದಮೆ ದಾಖಲಿಸುತ್ತಾನೆ. ಅಷ್ಟೇ ಅಲ್ಲ, ದೇವರ ಅಸ್ತಿತ್ವ ಮತ್ತು ಶಕ್ತಿಗಳ ಕುರಿತಾಗಿಯೂ ಧರ್ಮದ ಪೊಳ್ಳುತನ ಹಾಗೂ ಅದರ ಪ್ರಚಾರಕರನ್ನು ಫಜೀತಿಗೀಡು ಮಾಡುತ್ತಾನೆ.

ಇದಂತೂ ಸಿನಿಮಾದ ಮಾತು. ವಾಸ್ತವದಲ್ಲೂ ಹೀಗಾಗಿದ್ದರೆ ದೇವರಿದ್ದಾನೆಂದು ಹೇಳಲಾಗುವ ದೇವಾಲಯಗಳು, ಆಶ್ರಮಗಳು, ತೀರ್ಥ ಸ್ಥಳಗಳು ಹಾಗೂ ರಥಯಾತ್ರೆಯ ಸಂದರ್ಭದಲ್ಲಿ ನಡೆದ ದುರ್ಘಟನೆಗಳಿಗೆ ಅವನ ಮೇಲೆ ಮೊಕದ್ದಮೆ ಹೂಡಬಹುದಿತ್ತು. ಆದರೆ ಹಾಗಾಗುವುದಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ಮುಗ್ಧ ಜನರು ನೂಕುನುಗ್ಗಲಿಗೆ ಸಿಕ್ಕಿ ಸಾಯುತ್ತಿರುವುದನ್ನು ನೋಡಿದರೆ ಇವರಿಗೆ ನ್ಯಾಯವಂತೂ ಸಿಗಲೇಬೇಕು ಎನಿಸುತ್ತದೆ.

ಯಾರು ಈ ಘಟನೆಗೆ ಹೊಣೆಯಾಗಿರುತ್ತಾರೊ, ಅವರಿಗೆ ಶಿಕ್ಷೆ ನೀಡಬೇಕು. ಅಂದರೆ ದೇಗುಲದ ಪೂಜಾರಿ, ದೇವರ ಹೆಸರಿನಲ್ಲಿ ಕೋಟ್ಯಂತರ ರೂ.ಗಳ ದಾನವನ್ನು ಜೇಬಿಗಿಳಿಸುತ್ತಿರುವ ಟ್ರಸ್ಟಿಗಳು ಹಾಗೂ ಧರ್ಮದ ಲಾಭ ಹೊಡೆಯುತ್ತಿರುವ ಧರ್ಮಪ್ರಚಾರಕರು ಇವರೆಲ್ಲರನ್ನು ಕೋರ್ಟಿಗೆಳೆಯಬೇಕು.

ಯಾವ ರೀತಿ ಯೋಜನಾಬದ್ಧವಾಗಿ ನಡೆಸುವ ಸ್ಛೋಟದ ಪ್ರಕರಣಗಳು ಹಾಗೂ ಗಲಭೆಗಳಲ್ಲಿ ಮುಗ್ಧರು ಜೀವ ಕಳೆದುಕೊಳ್ಳುತ್ತಾರೊ, ಅದೇ ರೀತಿ ಆಗಾಗ ದೇವಾಲಯಗಳಲ್ಲಿ ನೂಕುನುಗ್ಗಲಿಗೆ ಸಿಕ್ಕಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ. ಕಳೆದ ವರ್ಷ ಮಥುರಾದ ಬರ್ಸಾನಾ, ದೇವಘರ್‌, ಕಾನ್‌ಪುರದ ಮಂದಿರಗಳಲ್ಲಿ ಉಂಟಾದ ನೂಕು ನುಗ್ಗಲಿನಿಂದಾಗಿ ಎಷ್ಟೋ ಜನ ಕಾಲ್ತುಳಿತಕ್ಕೆ ಸಿಕ್ಕಿ ಸತ್ತುಹೋದರು. ಈ ಮೂರು ಘಟನೆಗಳು ಅದೆಷ್ಚೋ ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿದವು.

ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತ, ಪರಸ್ಪರ ಹೊಡೆದಾಟ, ಭಯೋತ್ಪಾದನಾ ಚಟುವಟಿಕೆಗಳಿಂದ ಎಷ್ಟು ಜನ ಸಾಯುತ್ತಾರೋ, ಅದಕ್ಕಿಂತಲೂ ಹೆಚ್ಚು ಜನ ಧರ್ಮದ ಹೆಸರಿನಲ್ಲಿ ಸಾವಿಗೀಡಾಗುತ್ತಿದ್ದಾರೆ. ದೇವಸ್ಥಾನಗಳಲ್ಲಿ ನಡೆದ ಕಾಲ್ತುಳಿತದಲ್ಲಿ 16 ಜನ, ಕೇರಳದ ಅಯ್ಯಪ್ಪ ದೇಗುಲದಲ್ಲಿ 102 ಜನ, ಭಕ್ತಿಧಾಮದಲ್ಲಿ 63 ಜನ ಮಹಿಳೆಯರು, ಮಕ್ಕಳು ಸತ್ತುಹೋದರು.

ಜೋಧಪುರದ ಚಾಮುಂಡಾ ದೇವಿಯ ಮಂದಿರದಲ್ಲಿ ನಡೆದ ನೂಕುನುಗ್ಗಲಿನಲ್ಲಿ 250 ಜನ, ಹಿಮಾಚಲಪ್ರದೇಶದ ನೈನೈದೇವಿ ಮಂದಿರದಲ್ಲಿ 162 ಜನ, ಮಹಾರಾಷ್ಟ್ರದ ಮಾದ್ರಾದೇವಿ ಮಂದಿರದಲ್ಲಿ 340 ಜನ ಕಾಲ್ತುಳಿತಕ್ಕೆ ಸಿಕ್ಕಿ ನಲುಗಿಹೋದರು. ಇವು ಕೆಲವು ಉದಾಹರಣೆಗಳು ಅಷ್ಟೆ. ಈ ದುರ್ಘಟನೆಗಳಿಗೆ ಪೊಲೀಸರು ಹಾಗೂ ಜಿಲ್ಲಾ ಆಡಳಿತವನ್ನು ದೂಷಿಸಿ ಪ್ರಕರಣಗಳನ್ನು ಮುಚ್ಚಿಬಿಡಲಾಯಿತು. ಯಾರ ವಿರುದ್ಧ ಪ್ರಕರಣ ದಾಖಲಾಗಲಿಲ್ಲ, ಶಿಕ್ಷೆಯೂ ಆಗಲಿಲ್ಲ.

ಪೊಲೀಸ್ಇಲಾಖೆಯ ಮೌನ

ಒಂದು ದುಃಖದ ಸಂಗತಿಯೆಂದರೆ, ಸಾಮಾನ್ಯ ಅಪಘಾತ, ಜಗಳ ಅಥವಾ ಭಯೋತ್ಪಾದನಾ ಘಟನೆಗಳಲ್ಲಿ ಪೊಲೀಸರಿಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಆರೋಪಿಗಳಿರುತ್ತಾರೆ. ಆದರೆ ಮಂದಿರ ಅಥವಾ ತೀರ್ಥಸ್ಥಳಗಳಲ್ಲಿ ಸಂಭವಿಸಿದ ಘಟನೆಗಳನ್ನು `ದೇವರ ಇಚ್ಛೆ’ ಎಂದು ತಿಳಿದು ಅದನ್ನು ಮುಚ್ಚಿ ಹಾಕಲಾಗುತ್ತದೆ. ಧರ್ಮದ ವ್ಯಾಪಾರಿಗಳು ಈ ಘಟನೆಯ ಕುರಿತಂತೆ ದೇವರಿಗೆ ಶಿಕ್ಷೆ ಕೊಡಲು ಸಾಧ್ಯವೇ ಇಲ್ಲ ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ. ಇನ್ನುಳಿದಂತೆ ದೇವಸ್ಥಾನದ ಪೂಜಾರಿ, ಪುರೋಹಿತರು ದೇವರ ಏಜೆಂಟರುಗಳು. ಹೀಗಾಗಿ ಅವರ ಅಪರಾಧಗಳನ್ನು `ಮಾಫ್‌’ ಮಾಡಲಾಗುತ್ತದೆ.

ಯಾವ ಭಕ್ತರು ಧರ್ಮದಲ್ಲಿ ಅಂಧರಾಗಿ ನೂರಾರು ಮೈಲಿ ದೂರದಲ್ಲಿರುವ ದೇವರಿಗೆ ತಮ್ಮ ಹರಕೆ ತೀರಿಸಲು ಹಾಗೂ ದೀರ್ಘಾಯುಷ್ಯದ ಕೋರಿಕೆ ಈಡೇರಿಸಿಕೊಳ್ಳಲು ಹೋಗಿರುತ್ತಾರೋ, ಅದೇ ದೇವರು ಅವರಿಗೆ ಈ ರೀತಿಯ ಸಾವನ್ನು ಕೊಡುತ್ತಾನೆ. ಒಂದು ವೇಳೆ ದೇವರು ಎಲ್ಲರನ್ನೂ ರಕ್ಷಿಸಲು ಸೃಷ್ಟಿಯಾಗಿದ್ದಾನೆಂದರೆ, ಅವನು ತನ್ನ ಭಕ್ತರ ರಕ್ಷಣೆಯನ್ನೇಕೆ ಮಾಡುವುದಿಲ್ಲ? ಇದೆಲ್ಲ ದೇವರ ಇಚ್ಛೆಯಿಂದ ಆಗುತ್ತದೆ ಎಂದಾದರೆ, ಇದರಲ್ಲಿ ಧರ್ಮದ ಗುತ್ತಿಗೆದಾರರು, ಪೂಜಾರಿ ಪುರೋಹಿತರು ಏಕೆ ಬಲಿಯಾಗುವುದಿಲ್ಲ? ಜನಸಾಮಾನ್ಯರಷ್ಟೇ ಏಕೆ ಸಾಯುತ್ತಾರೆ? ದೇವಾಲಯಗಳ ಪೂಜಾರಿ ಪುರೋಹಿತರಿಗೆ ಮಾತ್ರ ಏಕೆ ಸುರಕ್ಷತೆಯ ವ್ಯವಸ್ಥೆ ಇರುತ್ತದೆ? ಜನಸಾಮಾನ್ಯರು ನೂಕುನುಗ್ಗಲಿನಲ್ಲಿ ಸಾಯುವಂತಹ ಸ್ಥಿತಿ ಏಕೆ ನಿರ್ಮಾಣವಾಗುತ್ತದೆ?

ಕಳೆದ ವರ್ಷ ಝಾರ್ಖಂಡ್‌ನ ದೇವಘಡ್‌ನ ಒಂದು ಆಶ್ರಮದಲ್ಲಿ ನೂಕುನುಗ್ಗಲು ಉಂಟಾಗಿ 9 ಜನ ಸಾವಿಗೀಡಾದರು. ಸರ್ಕಾರ ಮೃತರ ಕುಟುಂಬದವರಿಗೆ ಪರಿಹಾರ ನೀಡುವ ಬಗ್ಗೆ ಘೋಷಣೆ ಮಾಡಿತು. ಆದರೆ ಇಲ್ಲಿ ಏಳುವ ಪ್ರಶ್ನೆ ಏನೆಂದರೆ, ಈ ಮುಗ್ಧರ ಸಾವಿಗೆ ಯಾರು ಕಾರಣರು? ಒಂದು ಬಹಿರಂಗ ಗುಟ್ಟೆಂದರೆ, ಯಾರು ತಮ್ಮ ಧರ್ಮದ ಅಂಗಡಿ ನಡೆಸಲು ದೇವಸ್ಥಾನಗಳಲ್ಲಿ ಜನರನ್ನು ಒಗ್ಗೂಡಿಸುತ್ತಾರೋ, ಅವರೇ ಇದೆಲ್ಲಕ್ಕೂ ಮುಖ ಕಾರಣರು. ದೇವಸ್ಥಾನಗಳಿಗೆ ಬರುವ ಭಕ್ತಾದಿಗಳಿಂದ ದಾನ, ಚಂದಾ, ಕಾಣಿಕೆಗಳಿಂದ ಮೋಜು ಮಾಡುವ ಪೂಜಾರಿ ಪುರೋಹಿತರಿಗೆ ಅವರ ಸುರಕ್ಷತೆಯ ಜವಾಬ್ದಾರಿಯೂ ಇರಬೇಕಲ್ಲವೇ?

ಮಲತಾಯಿ ಧೋರಣೆ ಏಕೆ?

ಡಿಸೆಂಬರ್‌ 3, 1984ರಂದು ಭೂಪಾಲ್ ಗ್ಯಾಸ್‌ ದುರಂತದಲ್ಲಿ ವಿಷಕಾರಿ ಅನಿಲ ಸೋರಿಕೆ ಕಾರಣ ಸಾವಿರಾರು ಜನ ತಮ್ಮ ಪ್ರಾಣ ಕಳೆದುಕೊಂಡರು. ಅದರ ಮುಖ್ಯಸ್ಥ ಲಾರೆನ್‌ ಎಂಡರ್‌ಸನ್‌ ಮೇಲೆ ಪ್ರಕರಣ ಇನ್ನೂ ನಡೆಯುತ್ತಿರುವಾಗಲೇ ಅವರು ಈಚೆಗೆ ನಿಧನರಾದರು. ಈ ಮುಂಚೆಯೇ ಆ ಕಂಪನಿಯನ್ನು ಡೌ ಕೆಮಿಕಲ್ ಕಂಪನಿ ಖರೀದಿಸಿತ್ತು. ಈಗ ಭಾರತ ಸರ್ಕಾರ ಆ ಕಂಪನಿಯ ಮೇಲೆ ಹಲವು ಬಗೆಯ ನಿರ್ಬಂಧಗಳನ್ನು ಹೇರಿದೆ.

ಜೋಧ್‌ಪುರದ ಚಾಮುಂಡಾದೇವಿಯ ಮಂದಿರದಲ್ಲಿ ಬಾಂಬ್‌ ಇಡಲಾಗಿದೆ ಎಂದು ಗಾಳಿ ಸುದ್ದಿ ಪಸರಿಸಿದ್ದರಿಂದಾಗಿ, 250ಕ್ಕೂ ಹೆಚ್ಚು ಜನ ಕಾಲ್ತುಳಿತಕ್ಕೆ ಸಿಕ್ಕಿ ಸತ್ತುಹೋದರು. 60ಕ್ಕೂ ಹೆಚ್ಚು ಜನ ತೀವ್ರ ಗಾಯಗೊಂಡರು. ಆಗ ಯಾರ ಮೇಲೂ ಯಾಕೆ ಕ್ರಮ ಕೈಗೊಳ್ಳಲಿಲ್ಲ? ದೇವಸ್ಥಾನದ ಮೇಲೆ ಯಾವುದೇ ರೀತಿಯ ಪ್ರತಿಬಂಧಗಳನ್ನು ಏಕೆ ವಿಧಿಸಲಿಲ್ಲ? ಎರಡೂ ಘಟನೆಗಳಲ್ಲಿ ಸಂಭವಿಸಿದ ನೂಕುನುಗ್ಗಲಿಗೆ ಪ್ರಾಣ ಕಳೆದುಕೊಂಡ ಜನರ ಪ್ರಾಣದ ಮೌಲ್ಯ ಒಂದೇ ಅಲ್ಲವೇ? ಧರ್ಮದ ಗುತ್ತಿಗೆದಾರರ ಮೇಲೆ ಏಕೆ ಪ್ರತಿಬಂಧ ಹೇರಲಿಲ್ಲ? ಯಾಕೆ ಇವರ ಧರ್ಮದ ಅಂಗಡಿಗಳ ಮೇಲೆ ಡೌ ಕೆಮಿಕಲ್ನ ಹಾಗೆ ಪ್ರತಿಬಂಧ ವಿಧಿಸಲಿಲ್ಲ?

ಒಂದುವೇಳೆ ರಾಜಕೀಯ ರಾಲಿ ಅಥವಾ ಯಾವುದಾದರೂ ಮನರಂಜನಾ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ಘಟಿಸಿ ಯಾರಾದರೂ ಸತ್ತು ಹೋಗಿದ್ದರೆ, ಕಾರ್ಯಕ್ರಮದ ಸಂಘಟಕರ ಮೇಲೆ ತಕ್ಷಣವೇ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದರು. ಆದರೆ ದೇವಸ್ಥಾನದಲ್ಲಿ ಬಿಟ್ಟಿಯಾಗಿ ಸಿಗುವ ಧರ್ಮದ ಗಳಿಕೆಯನ್ನು ಸ್ವಾಹಾ ಮಾಡುತ್ತಿರುವ ಈ ಪೂಜಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸುವುದಿಲ್ಲ.

1999ರ ಜನವರಿಯಲ್ಲಿ ಬಹುಚರ್ಚಿತ ಬಿಎಂಡಬ್ಲ್ಯೂ ಕೇಸ್‌ನಲ್ಲಿ ಸಂಜೀವ್ ‌ನಂದಾಗೆ 50 ವರ್ಷಗಳ ಜೈಲು ಶಿಕ್ಷೆಯಾಯಿತು. 2002ರಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ತನ್ನ ಲ್ಯಾಂಡ್‌ ಕ್ರೂಸರ್‌ನ್ನು ಫುಟ್‌ಪಾತ್‌ ಮೇಲೆ ಮಲಗಿದ್ದ ಜನರ ಮೇಲೆ ಹಾಯಿಸಿ ಜೈಲಿಗೆ ಹೋಗಿದ್ದ. ಈ ಮೊಕದ್ದಮೆಗಾಗಿ ಅವನು ಈಗಲೂ ಕೋರ್ಟಿಗೆ ಅಲೆದಾಡುತ್ತಿದ್ದಾನೆ. ಅದೇ ರೀತಿ ಪುರಿಯಲ್ಲಿ ಏರ್ಪಡಿಸುವ ರಥಯಾತ್ರೆಯ ಸಂದರ್ಭದಲ್ಲಿ ಕೆಲವು ಜನ ರಥದ ಗಾಲಿಗೆ ಸಿಲುಕಿ ಸತ್ತುಹೋದರು. ಆದರೆ ರಥದ ಸಂಚಾಲಕರು ಹಾಗೂ ಸಂಘಟಕರ ಮೇಲೆ ಯಾವುದೇ ಮೊಕದ್ದಮೆ ಏಕೆ ದಾಖಲಿಸಲಿಲ್ಲ? ಏಕೆಂದರೆ ಇವರು ಧರ್ಮವೆಂಬ ತೋಪಿನ ಮೇಲೆ ಸವಾರರಾಗಿದ್ದರು. ಯಾವ ರೀತಿ ಸಾಮಾಜಿಕ ಅಪರಾಧಗಳ ಬಗ್ಗೆ ಪೊಲೀಸರು ಕಠಿಣ ಕ್ರಮ ಜರುಗಿಸುತ್ತಾರೊ, ಅದೇ ರೀತಿ ಅವರು ಧಾರ್ಮಿಕ ವಿಷಯಗಳ ಬಗ್ಗೆ ಏಕೆ ಕಠಿಣ ಕ್ರಮ ಅನುಸರಿಸುವುದಿಲ್ಲ?

ಹಲವರ ಪ್ರಾಣಕ್ಕೆ ಎರವಾದ ದುರಾಸೆ

ಮಥುರಾದ ರಾಧಾರಾಣಿ ಮಂದಿರದಲ್ಲಿ ನಡೆದ ದುರಂತಕ್ಕೆ ಅರ್ಚಕರ ದುರಾಸೆ ಕಾರಣವಾಯಿತೆಂದು ಹೇಳಬಹುದು. ಏಕೆಂದರೆ ಈ ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ವಿಐಪಿಗಳಿಗೆ ದರ್ಶನ ವ್ಯವಸ್ಥೆ ಮಾಡಲು ಹೋಗಿ ಸಾಮಾನ್ಯ ಭಕ್ತರನ್ನು ಮರೆತುಬಿಟ್ಟಿತು. ಆ ಬಳಿಕ ದರ್ಶನ ಮಾಡಿಕೊಂಡು ವಾಪಸ್‌ ಹೋಗುವಾಗ ದಾರಿ ಕಿರಿದಾಗಿ ಒಮ್ಮೆಲೆ ನೂಕುನುಗ್ಗಲು ಉಂಟಾಯಿತು.

ಸಾಮಾನ್ಯ ಭಕ್ತರಿಗಿಂತ ಭಾರಿ ಪ್ರಮಾಣದಲ್ಲಿ ವಿಐಪಿ ಭಕ್ತರು ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಹೀಗಾಗಿ ಸಾಮಾನ್ಯ ಭಕ್ತರನ್ನು ತಡೆಹಿಡಿದು ವಿಐಪಿಗಳನ್ನು ದರ್ಶನಕ್ಕೆ ಕಳಿಸಲಾಯಿತು. ಅವರ ದುರಾಸೆಗೆ ಬಡ ಭಕ್ತರು ತಮ್ಮ ಪ್ರಾಣವನ್ನು ಬಲಿಕೊಡಬೇಕಾಯಿತು. ಜೂನ್‌ 13, 1997ರಂದು ದೆಹಲಿಯ ಉಪಾಹಾರ್‌ ಸಿನಿಮಾ ಮಂದಿರದಲ್ಲಿ ಅಗ್ನಿ ಅನಾಹುತ ಸಂಭವಿಸಿ 59 ಜನ ಸುಟ್ಟು ಕರಕಲಾದರು. ಆಗ ಕೇವಲ ಸಿನಿಮಾ ಮಂದಿರವನ್ನಷ್ಟೇ ಬಂದ್‌ ಮಾಡಲಿಲ್ಲ. ಅದರ ಮಾಲೀಕರನ್ನು ಇದಕ್ಕೆ ಜವಾಬ್ದಾರರನ್ನಾಗಿ ಮಾಡಿ ಜೈಲಿಗೆ ತಳ್ಳಲಾಯಿತು. ಉಪಾಹಾರ್‌ ಸಿನಿಮಾ ಮಂದಿರದ ಮಾಲೀಕರಿಗೆ ಶಿಕ್ಷೆ ಕೊಡಿಸುತ್ತಾರಾದರೆ, ಮಥುರಾದ ಆ ಪೂಜಾರಿಗಳನ್ನು ಏಕೆ ಜೈಲಿಗೆ ಕಳಿಸಲಿಲ್ಲ?

ಮೇ 16, 2008ರಂದು ರಾಜೇಶ್‌ ಹಾಗೂ ನುಪೂರ್‌ ತಲಾರ್‌ ಮನೆಯಲ್ಲಿ ಒಂದು ಹೆಣ ದೊರೆತಿತ್ತು. ಅದು ಅವರ ಮಗಳದ್ದೇ ಆಗಿತ್ತು. ಮರುದಿನ ಇನ್ನೊಂದು ಹೆಣ ದೊರೆಯಿತು. ಅದು ಅವರ ಮನೆ ಕೆಲಸಗಾರ ಹೇಮರಾಜ್‌ನದಾಗಿತ್ತು. ಆ ಬಳಿಕ ರಾಜೇಶ್‌ಹಾಗೂ ನುಪೂರ್‌ ತಲಾರ್‌ ಜೈಲಿನಲ್ಲಿಯೇ ಉಳಿದು ನ್ಯಾಯಾಲಯಕ್ಕೆ ಎಡತಾಕಬೇಕಾಯಿತು. ಅದೇ ಆಸಾರಾಮ್ ಬಾಪು ಆಶ್ರಮದಲ್ಲಿ ಹೆಣ ಸಿಕ್ಕಿದ್ದರೂ, ಈ ಸ್ವಾಮೀಜಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲವೇಕೆ? ಇದರರ್ಥ ಏನು? ಈಚೆಗೆ ಬಾಲೆಯೊಬ್ಬಳು ತನ್ನ ಮೇಲೆ ಆಸಾರಾಮ್ ಬಾಪು ಅತ್ಯಾಚಾರ ಎಸಗಿರುವ ಬಗ್ಗೆ ಆರೋಪ ಮಾಡಿದ ಬಳಿಕ ಪೊಲೀಸರು ಈ ಸ್ವಾಮೀಜಿಯನ್ನು ಬಂಧಿಸಿ ಜೈಲಿಗೆ ಕಳಿಸಿರುವುದು ಮಾತ್ರ ಒಳ್ಳೆಯ ಸಂಕೇತ.ಅರ್ಚಕರೇ ಗೊಂದಲಕ್ಕೆ ಕಾರಣ ದೇವಸ್ಥಾನಗಳಲ್ಲಿ ಉಂಟಾಗುವ ಗೊಂದಲ ಗಲಾಟೆಗಳಿಗೆ ಪೂಜಾರಿ ಅರ್ಚಕರ ದುರಾಸೆ ಹಾಗೂ ಧರ್ಮದ ಅಂಗಡಿಗಳ ಬೇಡಿಕೆಯನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕೆನ್ನುವ ಮಾನಸಿಕತೆ ಕೆಲಸ ಮಾಡುತ್ತದೆ.

ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಅಲಂಕಾರ ಮಾಡುವ ಕಾರಣದಿಂದ ಆಗಾಗ ಪರದೆ ಹಾಕಲಾಗುತ್ತದೆ. ಸಾವಿರಾರು ಮೈಲಿ ದೂರದಿಂದ ಬಂದ ಭಕ್ತಾದಿಗಳು ಗಂಟೆಗಟ್ಟಲೆ ದೇವಸ್ಥಾನದಲ್ಲಿ ಸಾಲುಗಟ್ಟಿ ನಿಂತಿರುತ್ತಾರೆ. ಭಕ್ತರ ತಾಳ್ಮೆ ತಪ್ಪಿದಾಗ ನೂಕುನುಗ್ಗಲಿನಂತಹ ಘಟನೆಗಳು ನಡೆದು ಅನೇಕ ಮುಗ್ಧರು ಸಾವಿಗೀಡಾಗುತ್ತಾರೆ.

ಪೂಜಾರಿ ಪುರೋಹಿತರು ತಮ್ಮನ್ನು ತಾವು ಕಾಪಾಡಿಕೊಳ್ಳುವ ಒಂದು ಹೇಳಿಕೆ ಗಮನಿಸಿ ದೇವರಿಗೆ ಅಲಂಕಾರ ಮಾಡುವ ಸಂದರ್ಭದಲ್ಲಿ ನಾವು ಪರದೆ ಹಾಕುತ್ತೇವೆ. ಇದಕ್ಕೆ ಮುಖ್ಯ ಕಾರಣ ದೇವರಿಗೆ ದೃಷ್ಟಿ ಆಗದಿರಲಿ ಎಂದು. ದೇವರು ಭಕ್ತರ ದೃಷ್ಟಿಯಿಂದ ತಪ್ಪಿಸಿಕೊಳ್ಳುವಷ್ಟು ಶಕ್ತಿವಂತನಾಗಿಲ್ಲವೇ? ಹಾಗಾದರೆ ಅವನೆಂಥ ದೇವರು?

ಪ್ರತಿನಿಧಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ