ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಉತ್ತನಹಳ್ಳಿ ಕ್ರಾಸ್ ಬರುತ್ತದೆ. ಅಲ್ಲಿಂದ 2 ಕಿ.ಮೀ. ಒಳದಾರಿಯಲ್ಲಿ ಸಾಗಿದರೆ ವಿದ್ಯಾನಗರ ಸಿಗುತ್ತದೆ. ಅಲ್ಲೊಂದು ಶಾಲೆ ಭಾರತದ ಭವಿಷ್ಯದ ಕ್ರೀಡಾಪಟುಗಳನ್ನು ತಯಾರುಗೊಳಿಸುವಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ.
ಆ ಶಾಲೆಯ ಹೆಸರು `ಶ್ರೀ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ತರಬೇತಿ ಕೇಂದ್ರ' ಸಂಕ್ಷಿಪ್ತವಾಗಿ ಅದನ್ನು `ವಿದ್ಯಾನಗರ ಕ್ರೀಡಾ ವಸತಿ ಶಾಲೆ' ಎಂದು ಕರೆಯಲಾಗುತ್ತದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 1995-96ರಲ್ಲಿ ಈ ಶಾಲೆ ಆರಂಭವಾಗಿದ್ದು, ಇಲ್ಲಿ ಕ್ರೀಡಾಪಟುಗಳಿಗೆ ವೈಜ್ಞಾನಿಕವಾಗಿ ತರಬೇತಿ ನೀಡಲಾಗುತ್ತಿದೆ.
ಆಯ್ಕೆ ಪ್ರಕ್ರಿಯೆ : ಈ ಕ್ರೀಡಾ ಶಾಲೆಯಲ್ಲಿ 8 ರಿಂದ 10ನೇ ತರಗತಿಯವರೆಗೆ ಪ್ರವೇಶ ನೀಡಲಾಗುತ್ತದೆ. ಆದರೆ ಇಲ್ಲಿ ಪ್ರವೇಶ ಪಡೆಯುವುದು ಅಷ್ಟು ಸುಲಭದ ಸಂಗತಿಯಲ್ಲ.
ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಥಿಗಳ ಕ್ರೀಡಾ ಅರ್ಹತೆಯನ್ನು ಅವರ ಚಾಲನಾಶಕ್ತಿ, ದೈಹಿಕವಾಗಿ ಅಂತರ್ಗತವಾದ ವೇಗ ಈ ಮುಂತಾದ ದೈಹಿಕ ಸಾಮರ್ಥ್ಯಗಳನ್ನು ಅಳೆಯಲು ನಿಗದಿಪಡಿಸಿದ ಓಟ, ನೆಗೆತ, ಎಸೆತದ ಪರೀಕ್ಷೆ ನಡೆಸಲಾಗುತ್ತದೆ. ದೈಹಿಕ ಪರೀಕ್ಷೆಯಲ್ಲಿ ತೋರಿದ ಸಾಧನೆಗೆ ಅಂಕಗಳನ್ನು ನೀಡಲಾಗುತ್ತದೆ.
ಆಯ್ಕೆಯಾದ ಕ್ರೀಡಾಪಟುಗಳನ್ನು ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಸುವ ಅಂತಿಮ ಪರಿಶೀಲನಾ ಶಿಬಿರ ನಡೆಸಿ ಅವರ ಅರ್ಹತೆಯನ್ನು ಪರೀಕ್ಷಿಸಲಾಗುತ್ತದೆ. ಇಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳು ಕ್ರೀಡಾ ಶಾಲೆಗೆ ಸೇರ್ಪಡೆಯಾಗುವರು.
ಎರಡು ಕ್ರೀಡಾ ವಸತಿ ಶಾಲೆಗಳು : ಕೊಡಗಿನ ಕುಶಾಲನಗರ ಸಮೀಪ ಕೂಡಿಗೆಯಲ್ಲಿ ಹಾಗೂ ಬೆಂಗಳೂರು ಹೊರವಲಯದ ವಿದ್ಯಾನಗರದಲ್ಲಿ ಎರಡು ಕ್ರೀಡಾ ವಸತಿ ಶಾಲೆಗಳು ಕ್ರೀಡಾಪಟುಗಳನ್ನು ಸೃಷ್ಟಿಸುವಲ್ಲಿ ನಿರತಾಗಿವೆ. ಕೂಡಿಗೆ ಹಾಗೂ ವಿದ್ಯಾನಗರ ಎರಡೂ ಕಡೆ ಬೇರೆ ಬೇರೆ ಕ್ರೀಡೆಗಳಲ್ಲಿ ತರಬೇತಿ ನೀಡುವುದರಿಂದ ಆಯಾ ಕ್ರೀಡೆಗಳಿಗೆ ಆಯ್ಕೆಯಾಗುವವರು ಅಲ್ಲಲ್ಲಿಯೇ ತರಬೇತಿ ಪಡೆಯುವರು.
ವಿದ್ಯಾನಗರ ಶಾಲೆಯ ವೈಶಿಷ್ಟ್ಯತೆ : ಇಲ್ಲಿ ಅಥ್ಲೆಟಿಕ್ಸ್, ಬ್ಯಾಸ್ಕೆಟ್ ಬಾಲ್, ಫುಟ್‌ಬಾಲ್ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ಬಾಲಕ ಬಾಲಕಿಯರಿಗೆ ತರಬೇತಿ ನೀಡಲಾಗುತ್ತದೆ.
ಶಿಕ್ಷಣ ಮಾಧ್ಯಮ : 8-10ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ರಾಜ್ಯ ಪಠ್ಯಕ್ರಮದ ಪ್ರಕಾರ ಬೋಧಿಸಲಾಗುತ್ತದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜೊತೆಗೆ ಕ್ರೀಡೆಯಲ್ಲಿ ತರಬೇತುಗೊಳಿಸುವ ಕಾರ್ಯ ಇಲ್ಲಿ ಸಾಂಗವಾಗಿ ನಡೆಯುತ್ತಿದೆ.
ಪೌಷ್ಟಿಕ ಆಹಾರ : ಭಾವಿ ಕ್ರೀಡಾಪಟುಗಳನ್ನು ಸನ್ನದ್ದುಗೊಳಿಸಲು ಕ್ರೀಡಾ ತರಬೇತಿ ಅತ್ಯಗತ್ಯ. ಅದರ ಜೊತೆ ಜೊತೆಗೆ ಅವರಿಗೆ ಸಂಪೂರ್ಣ ಪೌಷ್ಟಿಕ ಆಹಾರ ಕೂಡ ಬೇಕೇಬೇಕು. ಆ ನಿಟ್ಟಿನಲ್ಲಿ ಈ ಕ್ರೀಡಾ ವಸತಿ ಶಾಲೆ ಕ್ರೀಡಾಪಟುಗಳ ಆಹಾರದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದೆ.
ವಿದ್ಯಾರ್ಥಿಗಳಿಗೆ ಬೆಳಗ್ಗೆ 5.30ಕ್ಕೆ ತಾಜಾ ಮೊಳಕೆಕಾಳುಗಳನ್ನು ಕೊಡಲಾಗುತ್ತದೆ. ಕ್ರೀಡಾ ತರಬೇತಿಯ ಬಳಿಕ ಇಡ್ಲಿ, ವಡೆ, ಹಾಲು, ಮೊಟ್ಟೆ, ಮಧ್ಯಾಹ್ನ ಊಟದ ಬಳಿಕ ಬಾಳೆಹಣ್ಣು ಅಥವಾ ಆಯಾ ಋತುಮಾನದ ಹಣ್ಣು ನೀಡಲಾಗುತ್ತದೆ. ಸಂಜೆ 6 ಗಂಟೆಗೆ ಕ್ರೀಡಾ ಅಭ್ಯಾಸದ ಬಳಿಕ 50 ಗ್ರಾಂನಷ್ಟು ಖರ್ಜೂರ, ಗೋಡಂಬಿ, ಒಣದ್ರಾಕ್ಷಿ ಇವುಗಳ ಮಿಶ್ರಣವನ್ನು ಕೊಡಲಾಗುತ್ತದೆ. ರಾತ್ರಿ ಊಟದಲ್ಲಿ ನಾನ್ ವೆಜ್ ಇರುತ್ತದೆ. ಹೀಗಾಗಿ ಕ್ರೀಡಾಪಟುಗಳು ಇಲ್ಲಿ ದೈಹಿಕವಾಗಿ ಸಾಮರ್ಥ್ಯ ಪಡೆದುಕೊಳ್ಳುತ್ತಾರೆ.