ಕಾರಂಜಿ ಕೆರೆ ಸಾಂಸ್ಕೃತಿಕ ನಗರ ಮೈಸೂರಿನ ಹೃದಯ ಭಾಗದಲ್ಲಿರುವ ದಟ್ಟ ಹಸಿರಿನ ತಾಣ. ಒಳಗೆ ಪ್ರವೇಶಿಸಿದೊಡನೆಯೇ ಎತ್ತರದ ಸಾಲು ಮರಗಳು ಸ್ವಾಗತ ಹಾಡುತ್ತವೆ. ಹಾಗೆಯೇ ಸಾಗುತ್ತಾ ಹೋದಾಗ ಹಕ್ಕಿಗಳ ಚಿಲಿಪಿಲಿ ಕೇಳಿ ಬಂದಿತು. ಅಲ್ಲೊಂದು ಸುಂದರ ಹಕ್ಕಿಗಳ ತಾಣ, ಬೆಳ್ಳನೆಯ ಕೊಕ್ಕರೆ, ಬಾತುಗಳು, ಗರಿಯನ್ನು ಅಗಲಿಸಿಕೊಂಡು ನೃತ್ಯ ಮಾಡುವ ಹಿಂಡು ಹಿಂಡು ನವಿಲುಗಳು, ಇಂತಹದೊಂದು ಸುಂದರ ದೃಶ್ಯ ನೋಡಲು ಸಿಗುತ್ತದೆಯೆಂದು ನಮಗೆ ನಿಜಕ್ಕೂ ಗೊತ್ತಿರಲಿಲ್ಲ. ಒಂದಷ್ಟು ಹೊತ್ತು ಆ ಬಾತುಕೋಳಿಗಳ ಓಡಾಟ, ನವಿಲುಗಳ ನರ್ತನ ನೋಡುತ್ತಾ ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಏಷ್ಯಾದಲ್ಲೇ ದೊಡ್ಡದು ಎನಿಸಿಕೊಂಡಿರುವ ಈ ಪಕ್ಷಿಗಳ ತಾಣವನ್ನು ಬಹಳ ಸುಂದರವಾಗಿ ರೂಪಿಸಲಾಗಿದೆ.

ಅಲ್ಲಿಂದ ಹೊರ ಬಂದು ಸಾಗಿದರೆ 90 ಎಕರೆ ಪ್ರದೇಶದಲ್ಲಿ ಆವರಿಸಿಕೊಂಡಿರುವ ದೊಡ್ಡ ಕೆರೆ, ದೊಡ್ಡದೊಂದು ಕಾರಂಜಿ, ಅಲ್ಲೇ ಕುಳಿತ ಪ್ರೇಮಿಗಳ ಜೋಡಿಗಳು, ಆಸಕ್ತಿ ಇದ್ದರು ಬೋಟ್‌ ರೈಡ್‌ ಮಾಡಬಹುದು. ಬೋಟಿನಲ್ಲಿ ಸಾಗುತ್ತಾ ಪಕ್ಷಿಗಳ ಕಲರವ ಕೇಳುತ್ತಾ ನದಿಯ ಜುಳು ಜುಳು ನಾದವನ್ನಾಲಿಸುತ್ತಾ ಸಾಗಿದಾಗ ಚಾಮುಂಡಿ ಬೆಟ್ಟ ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆಯೇನೋ ಎಂದು ಭಾಸವಾಗುತ್ತದೆ.

karanji-kere-6

ಒಟ್ಟು 90 ಬಗೆಯ ಪಕ್ಷಿಗಳ ತಾಣವಾಗಿದೆ ಈ ಕೆರೆ, ಅಲ್ಲಿನ ಮತ್ತು ವಲಸೆ ಬಂದಿರುವ ಪಕ್ಷಿಗಳು. ಸುಮಾರು 100 ವರ್ಷಗಳ ಹಿಂದೆಯೇ ಮೈಸೂರಿನ ಮಹಾರಾಜರು ಈ ಕೆರೆಯನ್ನು ಕಟ್ಟಿಸಿದರು. ಈ ಕೆರೆಯ ನೀರನ್ನು ಬಟ್ಟೆ ಒಗೆಯುವುದಕ್ಕೆ, ಕುಡಿಯಲು ಮತ್ತು ದನ ಕರುಗಳನ್ನು ತೊಳೆಯಲು ಬಳಸಲಾಗುತ್ತಿತ್ತು. ಮೈಸೂರು ಮೃಗಾಲಯ 1970ರಲ್ಲಿ ಈ ಕೆರೆಯನ್ನು ತನ್ನ ವಶಕ್ಕೆ ತೆಗೆದುಕೊಂಡು ಭದ್ರಪಡಿಸಿತು.

ಈ 90 ಎಕರೆ ಪ್ರದೇಶ ಚಾಮುಂಡಿ ಬೆಟ್ಟದಿಂದ 2.5 ಕಿ.ಮೀ. ನೀರುಣಿಸುವ ಕಾಲುವೆ ಹಾಗೂ 745 ಎಕರೆ ಜಲಾನಯನ ಪ್ರದೇಶವನ್ನು ಹೊಂದಿದೆ. ಬೆಟ್ಟದಲ್ಲಿ ದೇವಿ ದರ್ಶನ ಪಡೆದು, ಕಾಲುವೆಯ ಅಂದ ವೀಕ್ಷಿಸಬಹುದು.

ಮೈಸೂರಿನಲ್ಲಿರುವ ಕುಕ್ಕರಹಳ್ಳಿ ಕೆರೆ, ಕೆಂಪಾಂಬುಧಿ ಕೆರೆ ಮತ್ತು ಕಾರಂಜಿ ಕೆರೆ ಈ ಮೂರು ಕೆರೆಗಳಲ್ಲಿ ಕಾರಂಜಿ ಕೆರೆ ಅತ್ಯಂತ ಸುಂದರವಾಗಿದೆ. ಅಲ್ಲಿನ ವೀಕ್ಷಣಾ ಗೋಪುರವನ್ನು ಹತ್ತಿ ಕಾರಂಜಿ ಕೆರೆಯ ಸುತ್ತ ನೋಟ ಹಾಯಿಸಬಹುದು. ಪ್ರವೇಶ ದ್ವಾರದಿಂದ ಅಕ್ಕಪಕ್ಕದಲ್ಲಿರುವ ಎತ್ತರದ ಮರಗಳ ನೆರಳಲ್ಲಿ ನಡೆಯುತ್ತಾ ಬಂದರೆ 3 ಕಿ.ಮೀ. ದೂರದಲ್ಲಿ ಚಿಟ್ಟೆ ಉದ್ಯಾನವನ ಕಾಣಸಿಗುತ್ತದೆ.

ಸುಂದರ ನವಿಲು, ಬೆಳ್ಳನೆಯ ಕೊಕ್ಕರೆ, ಬಾತುಕೋಳಿಗಳ ಪಕ್ಷಿಧಾಮ, ವಿಹಾರಕ್ಕೆ ದೋಣಿ ಪಯಣ ಸುತ್ತ ಹಸಿರಿನ ನಡುವೆ ಚಿಲಿಪಿಲಿಗುಟ್ಟುವ ಪಕ್ಷಿಗಳು ವಾರದ ಕೊನೆಯ ವಿಹಾರಕ್ಕೆ ಹೇಳಿ ಮಾಡಿಸಿದಂತಹ ತಾಣ. ಕಾಂಕ್ರೀಟ್‌ ನಗರದಲ್ಲಿ ಹಸಿರನ್ನು ಉಣಿಸಿ ಪಕ್ಷಿ ಮತ್ತು ಚಿಟ್ಟೆಗಳ ಸುಂದರ ನೋಟವನ್ನು ಒದಗಿಸುವ ಕಾರಂಜಿ ಕೆರೆ ಮನಸ್ಸಿಗೆ ಮುದವನ್ನು ನೀಡುವುದರಲ್ಲಿ ಎರಡು ಮಾತಿಲ್ಲ.

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ