ಫೆಬ್ರವರಿ 14 ಪ್ರೇಮಿಗಳ ದಿನ. ಈ ದಿನಕ್ಕಾಗಿ ಯುವಜನತೆ ಕಾತುರದಿಂದ ನಿರೀಕ್ಷಿಸುವ ದಿನ. ಭಾರತ ಸಂಜಾತೆ ನಿವೇದಿತಾ ಪ್ರಸಾದ್‌ಗೆ 14, ಫೆಬ್ರವರಿ 2018 ಮರೆಯಲಾಗದ ದಿನ.

ನಾಟ್ಯದ ಮೇಲಿನ ಪ್ರೀತಿ ಭಕ್ತಿಯನ್ನು ಪ್ರಚುರಪಡಿಸುವ `ರಂಗ ಪ್ರವೇಶ’ದ ಶುಭ ಸಮಾರಂಭ ಘಟಿಸಿದ ದಿನ. ಗುರು, ಜಗದ್ವಿಖ್ಯಾತ ಪದ್ಮಶ್ರೀ ಚಿತ್ರಾ ವಿಶ್ವೇಶ್ವರನ್‌ರ ಸಮ್ಮುಖದಲ್ಲಿ ಎನ್ನುವುದನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ವಿಷಯ. ನಿವೇದಿತಾ ಪ್ರಸಾದ್‌, ಹುಟ್ಟಿದ್ದು ಚೆನ್ನೈಯಲ್ಲಾದರೂ ಬಾಲ್ಯದ  ವರ್ಷಗಳನ್ನು ಅಮೆರಿಕಾದ ಸಿಪ್ರೆಸ್‌, ಕ್ಯಾಲಿಫೋರ್ನಿಯಾ, ಶಿಕಾಗೊ, ನ್ಯೂಯಾರ್ಕ್‌, ಸ್ಯಾನ್‌ಫ್ರಾನ್ಸಿಸ್ಕೋಗಳಲ್ಲಿ ಕಳೆದು ನಂತರ ಯು.ಕೆ.ಗೆ ಸ್ಥಳಾಂತರ. ಕಳೆದ 15 ವರ್ಷಗಳಿಂದ  ಬ್ರಿಸ್ಟೋಲ್‌ನಲ್ಲಿ ವಾಸ.

ತಂದೆ ಎನ್‌.ಆರ್‌.ಐ. ಪ್ರಸಾದ್‌ ವೃತ್ತಿಯಲ್ಲಿ ಎಂಜಿನಿಯರ್‌. ಮೃದಂಗ, ಲಘು ಸಂಗೀತದಲ್ಲಿ ಆಸಕ್ತಿಯುಳ್ಳವರು. ತಾಯಿ ಡಾಕ್ಟರ್‌ಸುಮತಿ ಪ್ರಸಾದ್‌, ವೃತ್ತಿಯಲ್ಲಿ ವೈದ್ಯೆಯಾದರೂ ಸ್ವತಃ ನಾಟ್ಯಪಟು. ಸಂಗೀತದ ವಾತಾವರಣದಲ್ಲಿ ಈ ಕಲೆ ಸಹಜವಾಗಿಯೇ ನಿವೇದಿತಾಳಿಗೆ ಆಪ್ತವಾಗಿತ್ತು.

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು. ಈ ವಾಕ್ಯವಂತೂ ಅಕ್ಷರಶಃ ನಿಜ. ತಾಯಿಯೂ, ಪದ್ಮಶ್ರೀ ಚಿತ್ರಾ ವಿಶ್ವೇಶ್ವರನ್‌ ಬಳಿ ಭರತನಾಟ್ಯ ಕಲೆಯನ್ನು ಅಭ್ಯಸಿಸಿದ್ದರು ಮತ್ತು `ಪ್ರವನರ್ತನ ಸ್ಕೂಲ್‌ ಆಫ್‌ ಇಂಡಿಯನ್‌ ಕ್ಲಾಸಿಕ್‌ ಡ್ಯಾನ್ಸ್’ ಕಲಿಕಾ ಶಾಲೆಯ ಒಡತಿ. ಹೀಗಾಗಿ ಗೆಜ್ಜೆಯ ಝೇಂಕಾರ ಮೊಳಗಲು ಶುರುವಾದದ್ದು ಅಮ್ಮನ ನಾಟ್ಯ ಶಾಲೆಯಲ್ಲಿ. ಅಕ್ಕಾ ನಿರಂಜನನೊಂದಿಗೆ  ಕಲಿಯತೊಡಗಿದ ನಿವೈದಿತಾ ಶಾಲಾ, ಕಾಲೇಜು ದಿನಗಳಲ್ಲಿ ಅಲ್ಲಿನ ಇಂಡಿಯನ್‌ ಸೊಸೈಟಿ, ಹಿಂದೂ ಸೊಸೈಟಿ, ಮುಂತಾದೆಡೆ ನಾಟ್ಯ ಪ್ರದರ್ಶನ ನೀಡಿದ್ದಾರೆ.

ಇವರ ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ಸಾಮಾಜಿಕ ಕಲಾಪ್ರದರ್ಶನಕ್ಕೆ ಇಂಡಿಯನ್‌ ಹೈ ಕಮೀಷನ್‌, ಟೆಂಪಲ್  ಕಮಿಟಿಯವರಿಂದ ಹಲವಾರು ಪದಕಗಳು, ಗೌರವ ಪ್ರಮಾಣಪತ್ರಗಳಿಗೆ ಭಾಜನರಾಗಿದ್ದಾರೆ. ಯೂನಿವರ್ಸಿಟಿ ಕಾಲೇಜ್‌  ಆಫ್‌ಲಂಡನ್‌ನಲ್ಲಿ ಬಿ.ಎಸ್ಸಿ. (ಎಕಾನಾಮಿಕ್ಸ್) ಕಲಿಯುವಾಗ, ವಿರಾಮದ ಅವಧಿಯಲ್ಲಿ ಮೊದಲೇ ಯೋಜಿಸಿದಂತೆ ಜರ್ಮನಿಗೆ ಹೆಚ್ಚಿನ ಅಧ್ಯಯನಕ್ಕೆ ಹೊರಡುವುದಿತ್ತು. ಆದರೆ ನಮ್ಮ ಸಾಂಪ್ರದಾಯಿಕ ಭರತನಾಟ್ಯದ ಸೆಳೆತ ನಿವೇದಿತಾಳನ್ನು ಭಾರತದ ಕಡೆ ತಿರುಗಿಸಿತ್ತು. ಸರಿ ಸುಮಾರು ಒಂದು ವರ್ಷ, ಗುರು ಪದ್ಮಶ್ರೀ ಚಿತ್ರಾ ವಿಶ್ವೇಶ್ವರನ್‌ ಬಳಿ ಹಗಲಿರುಳು ಶ್ರದ್ಧೆಯಿಂದ ಅಭ್ಯಸಿಸಿ, ನಾಟ್ಯದ ವಿವಿಧ ಆಯಾಮಗಳನ್ನೆಲ್ಲ ಕಲಿತರು. ಫಲಿತಾಂಶ ಚೆನ್ನೈನಲ್ಲಿ ಚಿದಂಬರಮ್ ಅಕಾಡೆಮಿ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್ ವತಿಯಿಂದ ರಂಗ ಪ್ರವೇಶದ ಸೌಭಾಗ್ಯ ದೊರಕಿತು.

ಭರತನಾಟ್ಯ ಹೊರತುಪಡಿಸಿ, ಕೀಬೋರ್ಡ್‌ ನುಡಿಸುವ ನಿವೇದಿತಾ, ಲಂಡನ್‌ ಕಾಲೇಜ್‌ ಆಫ್‌ ಮ್ಯೂಸಿಕ್‌ನ ಗ್ರೇಡ್‌ 1 ರಿಂದ ಗ್ರೇಡ್‌ರವರೆಗಿನ ಪರೀಕ್ಷೆಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್‌) ತೇರ್ಗಡೆಯಾಗಿದ್ದಾರೆ. ಜೊತೆಗೆ, ಯೂನಿವರ್ಸಿಟಿ ಕಾಲೇಜಿನ  ವಾದ್ಯ ವೃಂದರಹಿತ ಗಾಯನ ತಂಡದಲ್ಲೂ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ಪ್ರಸ್ತುತ ಯೂನಿರ್ಸಿಟಿ ಕಾಲೇಜ್‌ ಆಫ್‌ ಲಂಡನ್‌ನಲ್ಲಿ ಬಿ.ಎಸ್ಸಿ (ಎಕನಾಮಿಕ್ಸ್) ವಿದ್ಯಾರ್ಥಿನಿ, ಅವಕಾಶವಿದ್ದಾಗಲೆಲ್ಲ ಭಾರತಕ್ಕೆ ಭೇಟಿ ನೀಡಿ ತಮ್ಮ ನಾಟ್ಯ ಕಲೆಯಲ್ಲಿ ಇನ್ನಷ್ಟು ಮುನ್ನಡೆ ಮಹತ್ವಾಕಾಂಕ್ಷೆ ಉಳ್ಳವರು.

ವಿದೇಶದಲ್ಲಿದ್ದರೂ, ತಮ್ಮ ಬೇರುಗಳನ್ನು ಮರೆಯದೆ ನಮ್ಮ ನಾಡಿನ ಸಂಸ್ಕೃತಿ, ಕಲೆಯನ್ನು ಪಸರಿಸಿ, ಬೆಳೆಸುತ್ತಿರುವ ನಿವೇದಿತಾ ಯಶಸ್ಸಿನ ಶೃಂಗವನ್ನು ತಲುಪಲಿ ಎಂಬುದೇ ಎಲ್ಲರ ಹಾರೈಕೆ.

– ಕೆ.ವಿ. ರಾಜಲಕ್ಷ್ಮಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ