ಚಿಕ್ಕಮಗಳೂರಿನ ದಿ. ಹಠಯೋಗಿ ಟಿ.ಎನ್‌. ಸಿಂಹರವರ ಮೊಮ್ಮಗಳು ನಿವೇದಿತಾ. ಜನಿಸಿದ್ದು 11.02.1989 ರಲ್ಲಿ ಹೈದರಾಬಾದಿನಲ್ಲಿ. ಹುಟ್ಟುತ್ತಲೇ ಶಸ್ತ್ರಚಿಕಿತ್ಸೆಗೆ ಗುರಿಯಾಗಿ ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥಗೊಂಡಳು. ಈಕೆಗೆ ಶ್ರವಣ, ವಾಚಕ, ಸ್ಪ್ಯಾಸ್ಟಿಕ್‌ ಹಾಗೂ ಬುದ್ಧಿಮಾಂದ್ಯತೆಯ ಕಾರಣ `ವಿಶೇಷ ಅಗತ್ಯವುಳ್ಳ ಮಕ್ಕಳ’ ಸಾಲಿಗೆ ಸೇರಬೇಕಾದ ಅನಿವಾರ್ಯತೆ ಉಂಟಾಯಿತು.

28ರ ಹರೆಯದ ನಿವೇದಿತಾರಿಗೆ ಏನೇನೂ ಕಿವಿ ಕೇಳಿಸದು. ಎಡ ಪಾರ್ಶ್ವ ಸ್ವಲ್ಪ ಮಟ್ಟಿಗೆ ಬಲಹೀನವಾಗಿದೆ. ನಿವೇದಿತಾ ಪ್ರಖ್ಯಾತ ಗಾಯಕಿ ರಮಾ ಜಗನ್ನಾಥ್‌ (ಹೆಸರಾಂತ ಆಂಧ್ರ ನಾಟ್ಯ ಕೂಚಿಪುಡಿ ಮತ್ತು ಭರತನಾಟ್ಯ ಕಲಾವಿದರ ನೃತ್ಯಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ) ಹಾಗೂ ಇ.ಎಸ್‌.ಐ ಕಾರ್ಪೋರೇಷನ್‌, ಬೆಂಗಳೂರು ಕೇಂದ್ರ ಕಛೇರಿಯಲ್ಲಿ ಉದ್ಯೋಗಿಯಾಗಿರುವ ಟಿ.ಎನ್‌. ಜಗನ್ನಾಥರಾವ್‌ರವರ ಜ್ಯೇಷ್ಠ ಪುತ್ರಿ. ನಿವೇದಿತಾ ಜೆ.ಎಸ್‌.ಎಸ್‌. `ಸಹನಾ’ ವಿಶೇಷ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು 4ನೇ ತರಗತಿಯವರೆಗೆ ಓದಿದ್ದಾಳೆ. ಇವಳ ಶಾಲೆಯಲ್ಲಿ ದೊರೆತ ಪ್ರೋತ್ಸಾಹದಿಂದ ನಿವೇದಿತಾ ಈ ಹಂತಕ್ಕೆ ತಲುಪಿದ್ದಾಳೆ.

ನಿವೇದಿತಾಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನೃತ್ಯದ ಒಲವು ಹಾಗೂ ಆಸಕ್ತಿ. ರಮಾ ಜಗನ್ನಾಥ್‌ ನಿವೇದಿತಾರನ್ನು ತಾವು ಭಾಗಹಿಸುತ್ತಿದ್ದ ನೃತ್ಯ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ನೃತ್ಯವನ್ನು ನೋಡಿ ಹಾಗೂ ಸಹ ನೃತ್ಯದ ಅನುಕರಣೆ ಮಾಡುತ್ತಿದ್ದರು. ಅತ್ತೆ ಸುಭದ್ರಾ ಪ್ರಭು (ದಿ. ಹಠಯೋಗಿ ಟಿ.ಎನ್‌. ಸಿಂಹರ ಮಗಳು) ತಮ್ಮ ಬೆಂಗಳೂರು ನಟರಾಜ ನೃತ್ಯಕಲಾ ಮಂದಿರದಲ್ಲಿ ನೃತ್ಯ ಶಿಕ್ಷಣವನ್ನು 2-3 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ.

ನಿವೇದಿತಾ ಚಿಕ್ಕ ವಯಸ್ಸಿನಿಂದಲೂ ನೃತ್ಯಾಭ್ಯಾಸ ನಡೆಸುತ್ತಿರುವ ಸ್ಥಳಕ್ಕೆ ಬಂದು ನೃತ್ಯವನ್ನು ನೋಡಿ ಅದರ ನಕಲು ಮಾಡುತ್ತಿದ್ದರು. ಇದನ್ನು ಗಮನಿಸಿದ ತಾಯಿ ರಮಾ ಜಗನ್ನಾಥ್‌ ಹಾಗೂ ಅತ್ತೆ ಇಬ್ಬರೂ ಉತ್ತೇಜನ ನೀಡಿ ಪ್ರೋತ್ಸಾಹಿಸಿ ಅವಳಲ್ಲಿರುವ ಪ್ರತಿಭೆಯನ್ನು ಬೆಳೆಸಿದರು. 90% ಶ್ರವಣದ ನ್ಯೂನತೆ ಇದ್ದರೂ ಈಕೆ ಹೇಗೆ ನರ್ತಿಸಲು ಸಾಧ್ಯ ಎಂದು ಊಹಿಸಬಲ್ಲಿರಾ? ಈಕೆ ಅತ್ಯಂತ ಭಾವನಪೂರ್ಣಾವಾಗಿ ಎಲ್ಲಾ ಸಹಜ ಮಕ್ಕಳಂತೆ ನರ್ತಿಸಬಲ್ಲರು. ದಿನನಿತ್ಯ ಗಾನದ ನಿನಾದ, ಗೆಜ್ಜೆಯ ಝೇಂಕಾರ ತುಂಬಿರುವಂತಹ ಮನೆಯಲ್ಲಿ ನಿವೇದಿತಾ ಜನಿಸಿರುವುದು ಅವಳ ಅದೃಷ್ಟವೇ ಸರಿ.

ನಿವೇದಿತಾ ದಿನಾಂಕ 2007ರ ಏಪ್ರಿಲ್‌ನಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು.

ಇವರ ತಮ್ಮನ ಹೆಸರು ಟಿ.ಜೆ. ಅಜಯ್‌ ಸಿಂಹ, ಸಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಜೆ.ಎಸ್‌.ಎಸ್‌. ಸಹನಾ ವಿಶೇಷ ಶಾಲೆಯ ಅಧ್ಯಾಪಕರ ವರ್ಗದವರ ಸಹಕಾರ, ವಾಕ್‌ ಶ್ರವಣ ಶಿಕ್ಷಕಿ ಇವರುಗಳ ಪ್ರೋತ್ಸಾಹ ಮರೆಯಲು ಅಸಾಧ್ಯ. ನಿವೇದಿತಾರ ಶಾಲೆಯ ಗುರುಗಳು, ಆಕೆಯ ಅತ್ತೆ, ಶಿಕ್ಷಕಿ ಅಂಬುಜಮ್ಮ, ತಾಯಿಯ ಮಾರ್ಗದರ್ಶನ, ಸಾರ್ವಜನಿಕರ ಆಶೀರ್ವಾದ ಮತ್ತು ಭಗವಂತನ ಕೃಪೆ ಎಲ್ಲ ನಿವೇದಿತಾರ ಸಾಧನೆಗೆ ಪ್ರೇರಕ, ಅಂಗೈಕಲ್ಯವನ್ನು ಮೆಟ್ಟಿ ನಿಂತು, ಭರತನಾಟ್ಯದಲ್ಲಿ ಅನನ್ಯ ಸಾಧನೆಯ ಹಾದಿಯತ್ತ ಮುನ್ನುಗ್ಗುತ್ತಿರುವ ನಿವೇದಿತಾರಿಗೆ ಗೃಹಶೋಭಾಳ ಶುಭ ಹಾರೈಕೆಗಳು!

– ಬಿ. ಬಸವರಾಜು

ನಿವೇದಿತಾಗೆ ಸಂದ ಪ್ರಶಸ್ತಿ, ಬಹುಮಾನಗಳು 

ಅಖಿಲ ಭಾರತ ಎಬಿಲಿಟಿ ಉತ್ಸವ 2000, ನವದೆಹಲಿ, ಭರತನಾಟ್ಯದಲ್ಲಿ 2ನೇ ಸ್ಥಾನ.

ವಿಶ್ವ ಅಂಗವಿಕಲರ ದಿನಾಚರಣೆ 1999 ಮತ್ತು 2000, ನೃತ್ಯ ಪ್ರದರ್ಶನ.

ಬನಶಂಕರಿ ಮಹಿಳಾ ಸಾಂಸ್ಕೃತಿಕ ಸಂಸ್ಥೆ ಪ್ರಾಯೋಜಿಸಿದ ಸ್ಪರ್ಧೆಯಲ್ಲಿ 2ನೇ ಬಹುಮಾನ.

ಅಂಗವಿಕಲರು ಮತ್ತು ಕಿವುಡರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೊದಲನೆಯ ಸ್ಥಾನ.

ಶ್ರೀ ವಿವೇಕಾನಂದ ಕಲಾಕೇಂದ್ರ (ರಿ).,  ಬೆಂಗಳೂರು ಇವರಿಂದ ಸನ್ಮಾನ.

ನವನಾಟ್ಯ ಸಂಘ, ಬೆಂಗಳೂರು ಇವರಿಂದ `ಕೀರ್ತಿಶ್ರೀ’ ಬಿರುದು ಪ್ರದಾನ ಮತ್ತು ಸನ್ಮಾನ.

ಶ್ರೀ ಲಲಿತಾ ಕಲಾಸಂಗಮ, ಬೆಂಗಳೂರು ಇವರಿಂದ ಸನ್ಮಾನ.

`ಇ.ಎಸ್‌.ಐ., ಕಾರ್ಪೊರೇಷನ್‌ ವಿನೋದ ಕೂಟ,’ ಬೆಂಗಳೂರು ಇವರಿಂದ `ಅಪೂರ್ವ ಕಲಾರತ್ನ’ ಬಿರುದು ಪ್ರದಾನ.

ಕರ್ನಾಟಕ ರಾಜ್ಯ ಸರ್ಕಾರ ದಿನಾಂಕ 03.12.2007ರಂದು ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ ಅಂಗವಿಕಲ ಕ್ಷೇತ್ರದಲ್ಲಿನ ನಿವೇದಿತಾರ ಸಾಧನೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿತು.

ಸೃಷ್ಟಿ ಪ್ರಶಸ್ತಿ (ನೃತ್ಯ ಸಾರ್ಥಕತೆಗಾಗಿ) ದಿನಾಂಕ : 01.05.2008ರಂದು ನಡೆದ ವಿಶ್ವ ನೃತ್ಯ ದಿನಾಚರಣೆ 2008 ಸಮಾರಂಭದಲ್ಲಿ ಸೃಷ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ (2010).

ದಕ್ಷಿಣ ಬೆಂಗಳೂರಿನ 9 ರೋಟರಿ ಕ್ಲಬ್‌ಗಳಿಂದ `ಯಂಗ್‌ ಅಚೀವರ್‌ ಪ್ರಶಸ್ತಿ’  2011.

ಡಾ. ಬಾತ್ರ ಪಾಸಿಟಿವ್ ‌ಹೆಲ್ತ್ ಹೀರೋ ಪ್ರಶಸ್ತಿ 2012.

ವಿವೇಕ ಚೇತನ ಪ್ರಶಸ್ತಿ 2013.

ವಂಡರ್‌ ಬುಕ್‌ ಆಫ್‌ ರೆಕಾರ್ಡ್ಸ್ 2015ರಲ್ಲಿ ನಿವೇದಿತಾ ಹೆಸರು ಸೇರ್ಪಡೆಯಾಗಿದೆ.

ದಿನಾಂಕ: 03.02.2016ರಂದು ನಡೆದ ವಿಶ್ವ ಅಂಗವಿಕಲ ದಿನಾಚರಣೆಯಂದು ನಿವೇದಿತಾರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರದ ವತಿಯಿಂದ ರೋಲ್ ‌ಮಾಡೆಲ್ ‌ಪ್ರಶಸ್ತಿ ಲಭಿಸಿದೆ.

ಬಿ.ಬಿ.ಎಂ.ಪಿ., ಬೆಂಗಳೂರು ವತಿಯಿಂದ 2017ನೇ ವರ್ಷದಲ್ಲಿ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸುವರ್ಣ ನ್ಯೂಸ್‌ ಮತ್ತು ಕನ್ನಡ ಪ್ರಭಾ ದಿನಪತ್ರಿಕೆಯ ವತಿಯಿಂದ 2017ನೇ ವರ್ಷದಲ್ಲಿ ಮಹಿಳಾ ಸಾಧಕಿಯರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Tags:
COMMENT