ಭಾರತ ಸರ್ಫಿಂಗ್ ಫೆಡರೇಷನ್ ಸಹಯೋಗದಲ್ಲಿ ಪ್ರಮುಖ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಾದ ಆರನೇ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆಯು ಇದೇ ಮೇ 30ರಿಂದ ಜೂನ್ 1ರ ವರೆಗೆ ಮಂಗಳೂರಿನ ತಣ್ಣೀರುಭಾವಿ ಎಕೋ ಬೀಚ್‌ನಲ್ಲಿ ನಡೆಯಲಿದೆ. ಈ ಸ್ಪರ್ಧೆಯನ್ನು ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸುತ್ತಿದೆ.
ಈ ಸರ್ಫಿಂಗ್ ಸ್ಪರ್ಧೆಗೆ ಪ್ರಮುಖ ಪ್ರಾಯೋಜಕರು ತಮ್ಮ ಬೆಂಬಲ ಘೋಷಿಸಿದ್ದಾರೆ. ಸತತ ಎರಡನೇ ವರ್ಷವೂ ನ್ಯೂ ಮಂಗಳೂರು ಬಂದರು ಪ್ರಾಧಿಕಾರ (NMPA) ಟೈಟಲ್ ಸ್ಪಾನ್ಸರ್ ಆಗಿ ಮುಂದುವರೆದಿದೆ. ರಾಜ್ಯದಲ್ಲಿ ದೀರ್ಘಕಾಲದಿಂದ ಸರ್ಫಿಂಗ್ ಅನ್ನು ಬೆಂಬಲಿಸುತ್ತಿರುವ ಕರ್ನಾಟಕ ಪ್ರವಾಸೋದ್ಯಮವು ಸತತ ಆರನೇ ವರ್ಷವೂ 'ಪ್ರೆಸೆಂಟೆಡ್ ಬೈ' ಪಾಲುದಾರರಾಗಿ ಸೇರಿಕೊಂಡಿದ್ದು ಜೊತೆಗೆ ಸೈಕಲ್ ಪ್ಯೂರ್ ಅಗರಬತ್ತಿ 'ಪವರ್ಡ್ ಬೈ' ಆಗಿ ಬೆಂಬಲ ಸೂಚಿಸಿದೆ.
ಕಳೆದ ವರ್ಷ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸಂಚಲನ ಮೂಡಿಸಿದ್ದ ಪ್ರಮುಖ ಸ್ಪರ್ಧಿಗಳು NMPA ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ಗೆ ಮರಳಲಿದ್ದಾರೆ. ಕಳೆದ ವರ್ಷ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಶಿಪ್ ಮತ್ತು ಮಾರುಹಾಬಾ ಕಪ್‌ಗಳಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಿದ ಕಿಶೋರ್ ಕುಮಾರ್, ಹರೀಶ್ ಮುತ್ತು ಕಮಲಿ ಪಿ, ಅಜೀಶ್ ಅಲಿ, ಶ್ರೀಕಾಂತ್ ಡಿ ಮತ್ತು ಸಂಜಯ್ ಸೆಲ್ವಮಣಿ ಈ ಆವೃತ್ತಿಯ ಪ್ರಮುಖ ಸರ್ಫರ್‌ಗಳಾಗಿದ್ದಾರೆ.
ಈ ಸ್ಪರ್ಧೆಯ ಬಗ್ಗೆ ಮಾತನಾಡಿದ ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟ ರಮಣ ಅಕ್ಕರಾಜು 'ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ನ ಶೀರ್ಷಿಕೆ ಪ್ರಾಯೋಜಕರಾಗಿ ಮರಳಲು ನಮಗೆ ಅಪಾರ ಹೆಮ್ಮೆಯಿದೆ. ಮಂಗಳೂರನ್ನು ಸಮುದ್ರ ಕ್ರೀಡೆಗಳು ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕಾಗಿ ಜಾಗತಿಕ ಗಮ್ಯಸ್ಥಳವನ್ನಾಗಿ ರೂಪಿಸಲು ಸರ್ಫಿಂಗ್ ಪ್ರಮುಖ ಪಾತ್ರವಹಿಸಬಹುದು ಎಂಬುದರಲ್ಲಿ ನಮಗೆ ದೃಢ ನಂಬಿಕೆಯಿದೆ. ಈ ಬಾರಿ ಮತ್ತೊಂದು ಪರಿಣಾಮಕಾರಿ ಆವೃತ್ತಿಗೆ ನಾವು ಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದೇವೆ' ಎಂದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ., ಐಎಎಸ್, ಅವರು ಮಾತನಾಡಿ 'ಕರ್ನಾಟಕ ಪ್ರವಾಸೋದ್ಯಮವು ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ನೊಂದಿಗೆ ತನ್ನ ದೀರ್ಘಕಾಲದ ಸಂಬಂಧವನ್ನು ಮುಂದುವರಿಸಲು ಹೆಮ್ಮೆಪಡುತ್ತದೆ. ಸಾಹಸ ಪ್ರವಾಸೋದ್ಯಮ ಮತ್ತು ಕರಾವಳಿ ಅಭಿವೃದ್ಧಿಯನ್ನು ಉತ್ತೇಜಿಸಲು ರಾಜ್ಯವು ಬದ್ಧವಾಗಿದೆ" ಎಂದು ಹೇಳಿದರು.
ಸೈಕಲ್ ಪ್ಯೂರ್ ಅಗರಬತ್ತಿಯ ಎನ್‌ಆರ್ ಗ್ರೂಪ್‌ನ ವ್ಯವಸ್ಥಾಪಕ ಪಾಲುದಾರ ಮತ್ತು ಎಂಡಿ ಅರ್ಜುನ್ ರಂಗ ಮಾತನಾಡಿ, “ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ಗೆ ನಾವು ಬೆಂಬಲ ನೀಡುತ್ತಿರುವುದನ್ನು ಮುಂದುವರೆಸುತ್ತಿರುವುದು ನಮಗೆ ಅತ್ಯಂತ ಸಂತೋಷ ತಂದಿದೆ. ಈ ಕ್ರೀಡೆ ನಮ್ಮ ಬ್ರಾಂಡ್‌ನ ಮೌಲ್ಯಗಳು ಮತ್ತು ಸಮುದಾಯದ ಕಲ್ಯಾಣದೊಂದಿಗೆ ತೀವ್ರವಾಗಿ ಬೆಸೆದುಕೊಂಡಿದೆ. ರಾಷ್ಟ್ರ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿರುವ ಭಾರತದ ಶ್ರೇಷ್ಠ ಸರ್ಫರ್‌ಗಳ ಉತ್ಸಾಹ ಮತ್ತು ಶಕ್ತಿಯನ್ನು ನೋಡಿ ನಾವು ಖುಷಿಯಾಗಿದ್ದೇವೆ” ಎಂದರು.
ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್, ನ್ಯಾಷನಲ್ ಸರ್ಫಿಂಗ್ ಚಾಂಪಿಯನ್‌ಶಿಪ್ ಸರಣಿಯ ಎರಡನೇ ಹಂತವಾಗಿದ್ದು, ಪುರುಷರ ಓಪನ್, ಮಹಿಳೆಯರ ಓಪನ್, ಗ್ರೋಮ್ಸ್ (U-16) ಬಾಲಕರು ಮತ್ತು ಗ್ರೋಮ್ಸ್ (U-16) ಬಾಲಕಿಯರು ಎಂಬ ನಾಲ್ಕು ಸ್ಪರ್ಧಾತ್ಮಕ ವಿಭಾಗಗಳಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಸರ್ಫರ್‌ಗಳು ಭಾಗವಹಿಸಲಿದ್ದಾರೆ. ಈ ಈವೆಂಟ್ ರಾಷ್ಟ್ರೀಯ ಶ್ರೇಯಾಂಕದಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ, ದೇಶಾದ್ಯಂತ ತೀವ್ರ ಪೈಪೋಟಿ ಮತ್ತು ಉನ್ನತ ಮಟ್ಟದ ಪ್ರದರ್ಶನ ನೀಡುವ ನಿರೀಕ್ಷೆಯಿದೆ.