ಅಹಮದಾಬಾದ್​ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 275ಕ್ಕೆ ಏರಿಕೆಯಾಗಿದೆ. 275 ಮಂದಿ ಶವಗಳ ಗುರುತು ಪತ್ತೆ ಹಚ್ಚುವ ಜೊತೆಗೆ ಅವರಿಗೆ ಪರಿಹಾರ ನೀಡುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಏರ್ ಇಂಡಿಯಾ ಮೃತರ ಸಂಬಂಧಿಕರಿಗೆ ತಲಾ 1 ಕೋಟಿ 80 ಲಕ್ಷ ರೂಪಾಯಿ ನೀಡುವ ಸಾಧ್ಯತೆ ಇದೆ. ಒಬ್ಬೊಬ್ಬರಿಗೂ 1 ಕೋಟಿ 80 ಲಕ್ಷ ರೂಪಾಯಿ ಅಂದರೆ, ಏರ್ ಇಂಡಿಯಾ 400 ಕೋಟಿಗೂ ಅಧಿಕ ಮೊತ್ತವನ್ನು ಪರಿಹಾರವಾಗಿ ನೀಡಬೇಕಾಗುತ್ತದೆ.

ದೇಶದ ಇತಿಹಾಸದಲ್ಲೇ ಇಲ್ಲಿಯವರೆಗಿನ ಅತಿ ದೊಡ್ಡ ಇನ್ಸೂರೆನ್ಸ್ ಕ್ಲೇಮ್ ಅನ್ನು ಏರ್ ಇಂಡಿಯಾ ಕಂಪನಿ ಮಾಡಲಿದೆ. ಏರ್ ಇಂಡಿಯಾಗೆ ಇನ್ಶೂರೆನ್ಸ್ ಕಂಪನಿಯಿಂದ ಬರೋಬ್ಬರಿ 1,000 ಕೋಟಿ ಇಂದ 2,400 ಕೋಟಿ ರೂಪಾಯಿ ಸಿಗುವ ಸಾಧ್ಯತೆ ಇದೆ.

ಏರ್ ಇಂಡಿಯಾ ವಿಮಾನ ಪತನದ ಹಿನ್ನೆಲೆಯಲ್ಲಿ ಕಂಪನಿಗೆ ಬರೋಬ್ಬರಿ 665 ರಿಂದ 965 ಕೋಟಿ ರೂಪಾಯಿ ಇನ್ಶೂರೆನ್ಸ್‌ ಸಿಗುವ ನಿರೀಕ್ಷೆ ಇದೆ. 241 ಜನ ಮೃತಪಟ್ಟ ಪ್ರಯಾಣಿಕರಿಗೆ 377 ಕೋಟಿ ರೂಪಾಯಿಯಿಂದ 434 ಕೋಟಿ ರೂಪಾಯಿವರೆಗೆ ಪರಿಹಾರ ಮತ್ತು 3ನೇ ವ್ಯಕ್ತಿಯ ಇನ್ಶೂರೆನ್ಸ್ ಹಣ ಕೂಡ ಕ್ಲೇಮ್ ಆಗುತ್ತದೆ.

ಇದರ ಜೊತೆಗೆ ವಿಮಾನ ಪತನವಾದ B.J ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡದ ದುರ್ಘಟನೆಗೂ ಇನ್ಶೂರೆನ್ಸ್ ಕ್ಲೇಮ್ ಆಗುತ್ತಿದೆ. ಹಾಸ್ಟೆಲ್‌ನಲ್ಲಿ ನಿಧನ ಹೊಂದಿದ 30 ವಿದ್ಯಾರ್ಥಿಗಳಿಗೆ ಪರಿಹಾರ, ಗಾಯಾಳುಗಳಿಗೆ ವೈದ್ಯಕೀಯ ವೆಚ್ಚ ಹಾಗೂ ಪರಿಹಾರ ಕೂಡ ಬರಲಿದೆ. ಈ ಮೂಲಕ ಅಹಮದಾಬಾದ್ ವಿಮಾನ ಪತನದ ದುರಂತ ಭಾರತ ಇತಿಹಾಸದಲ್ಲೇ ಅತಿ ದೊಡ್ಡ ವಿಮೆ ಎಂದು ವರದಿಯಾಗಿದೆ.

ಸಾವಿನ ಸಂಖ್ಯೆ 275ಕ್ಕೆ ಏರಿಕೆ: ಅಹಮದಾಬಾದ್​ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಏರ್ ಇಂಡಿಯಾದ AI-171 ವಿಮಾನ ಪತನವಾದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಇಂದು ಏರ್ ಇಂಡಿಯಾ ವಿಮಾನ ಪತನವಾದ ಸ್ಥಳದಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. NDRF ಅಧಿಕಾರಿಗಳು ವಿಮಾನದ ಹಿಂಭಾಗದಿಂದ ಮತ್ತೊಂದು ಶವವನ್ನು ಹೊರ ತೆಗೆದಿದ್ದಾರೆ. ವಿಮಾನ ಹಾಸ್ಟೆಲ್ ಮೆಸ್ ಕಟ್ಟಡದ ಮೇಲೆ ಬಿದ್ದಿದ್ದು, ಕಟ್ಟಡದ ಮೇಲ್ಭಾಗದಿಂದ ಶವವನ್ನು ಹೊರಕ್ಕೆ ತೆಗೆಯಲಾಗಿದೆ.

ಸತತ 3ನೇ ದಿನವೂ ಬಿ.ಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಕಟ್ಟಡದಲ್ಲಿ ಶವ ಹೊರ ತೆಗೆಯುವ ಕಾರ್ಯಾಚರಣೆ ಮುಂದುವರಿಸಲಾಗಿದೆ. ವಿಮಾನದ ಹಿಂಭಾಗ, ರೆಕ್ಕೆಯನ್ನು ಇಂದು ಕಟ್ಟಡದಿಂದ ಕೆಳಕ್ಕೆ ಇಳಿಸಲು NSG, DGCA ಅಧಿಕಾರಿಗಳು ಶ್ರಮವಹಿಸುತ್ತಿದ್ದಾರೆ.

ಬಿ.ಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಮೇಲ್ಭಾಗದಲ್ಲಿ ‌ವಿಮಾನದ ಹಿಂಭಾಗ ಹಾಗೂ ರೆಕ್ಕೆ ಭಾಗಗಳು ಬಿದ್ದಿವೆ. ಮೆಸ್ ಕಟ್ಟಡದ ಮೇಲ್ಭಾಗ ಸಂಪೂರ್ಣ ಜಖಂ ಆಗಿದ್ದು, ವಿಮಾನ ಪತನದ ಸ್ಥಳದಲ್ಲಿ ಡಿಜಿಸಿಎ, NSG ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಜೂನ್ 12ರ ಮಧ್ಯಾಹ್ನ ಏರ್ ಇಂಡಿಯಾದ AI-171 ವಿಮಾನ ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿತ್ತು. ಜೂನ್ 13ರಂದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು 29 ಶವಗಳನ್ನು ಹೊರ ತೆಗೆಯಲಾಗಿತ್ತು. ಇದೀಗ ವಿಮಾನ ದುರಂತದಲ್ಲಿ ಮಡಿದವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.

ದುರಂತದಲ್ಲಿ ಮೃತಪಟ್ಟವರಲ್ಲಿ 241 ಮಂದಿ ವಿಮಾನದ ಪ್ರಯಾಣಿಕರಾಗಿದ್ದರೆ, 33 ಮಂದಿ ಮೆಡಿಕಲ್ ಹಾಸ್ಟೆಲ್‌ನಲ್ಲಿದ್ದವರು ಎನ್ನಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ