ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್, ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ (GEPL) ನಲ್ಲಿ ಮುಂಬೈ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಡಿಜಿಟಲ್ ಮನರಂಜನೆ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಜೆಟ್‌ಸಿಂಥೆಸಿಸ್‌ನಿಂದ ನಡೆಸಲ್ಪಡುವ ಜಿಇಪಿಎಲ್ ಅನ್ನು ವಿಶ್ವದ ಅತಿದೊಡ್ಡ ಇ-ಕ್ರಿಕೆಟ್ ಮತ್ತು ಮನರಂಜನಾ ಲೀಗ್ ಎಂದು ಪರಿಗಣಿಸಲಾಗಿದೆ.
ಇದು GEPL ನ ಎರಡನೇ ಸೀಸನ್ ಆಗಿದ್ದು, ಈ ಆಟವನ್ನು ರಿಯಲ್ ಕ್ರಿಕೆಟ್‌ನಲ್ಲಿ ಆಡಲಾಗುತ್ತದೆ. ಇದನ್ನು 350 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದ್ದು, ಈ ಸೀಸನ್ ಮೇ 2025 ರಲ್ಲಿ ಗ್ರ್ಯಾಂಡ್ ಫಿನಾಲೆಯೊಂದಿಗೆ ಮುಕ್ತಾಯಗೊಳ್ಳಲಿದೆ.
ಇದೀಗ ಈ ಲೀಗ್‌ನಲ್ಲಿ ಮುಂಬೈ ಫ್ರಾಂಚೈಸಿಯನ್ನೇ ಸಾರಾ ತೆಂಡೂಲ್ಕರ್ ಖರೀದಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಮೇಲೆ ಅವರಿಗಿರುವ ಉತ್ಸಾಹವನ್ನು ತೋರಿಸಿಕೊಟ್ಟಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಾರಾ ತೆಂಡೂಲ್ಕರ್, 'ಕ್ರಿಕೆಟ್ ನಮ್ಮ ಕುಟುಂಬದ ಅವಿಭಾಜ್ಯ ಅಂಗ. ಇ-ಸ್ಪೋರ್ಟ್ಸ್‌ನಲ್ಲಿ ಅದರ ಸಾಧ್ಯತೆಗಳನ್ನು ಅನ್ವೇಷಿಸುವುದು ರೋಮಾಂಚನಕಾರಿಯಾಗಿದೆ. ಜಿಇಪಿಎಲ್‌ನಲ್ಲಿ ಮುಂಬೈ ಫ್ರಾಂಚೈಸಿಯನ್ನು ಹೊಂದಿದ್ದ ನನ್ನ ಕನಸು ನನಸಾಗಿದೆ. ಕ್ರೀಡೆ ಮತ್ತು ನಗರದ ಮೇಲಿನ ನನ್ನ ಪ್ರೀತಿಯನ್ನು ಇದು ಒಟ್ಟುಗೂಡಿಸುತ್ತದೆ. ಸ್ಪೂರ್ತಿದಾಯಕ ಮತ್ತು ಮನರಂಜನೆಯ ಇ-ಸ್ಪೋರ್ಟ್ಸ್ ಫ್ರಾಂಚೈಸಿ ಅನ್ನು ನಿರ್ಮಿಸಲು ನಮ್ಮ ಪ್ರತಿಭಾನ್ವಿತ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.
ಸಾರಾ ತೆಂಡೂಲ್ಕರ್ ತಮ್ಮ ಫ್ಯಾಷನ್ ಸೆನ್ಸ್ ಮತ್ತು ಉದ್ಯಮಶೀಲತಾ ಬುದ್ಧಿವಂತಿಕೆಗೆ ಹೆಸರುವಾಸಿಯಾಗುವ ಮೊದಲು, ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಮುಂಬೈನ ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಬಳಿಕ ಲಂಡನ್ ಯೂನಿವರ್ಸಿಟಿಯಲ್ಲಿ ಕ್ಲಿನಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಪೋಷಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಾರಾ ತೆಂಡೂಲ್ಕರ್ ಕೇವಲ 27 ನೇ ವಯಸ್ಸಿನಲ್ಲೇ ಲಕ್ಷಾಂತರ ರೂ. ಮೌಲ್ಯದ ವ್ಯವಹಾರವನ್ನು ನಡೆಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, 2023 ರಲ್ಲಿ ಅವರ ನಿವ್ವಳ ಮೌಲ್ಯವು 50 ಲಕ್ಷದಿಂದ 1 ಕೋಟಿ ರೂ.ಗಳ ನಡುವೆ ಇತ್ತು. ಅವರ ಆದಾಯದ ಮುಖ್ಯ ಮೂಲವೆಂದರೆ ಆನ್‌ಲೈನ್ ಸ್ಟೋರ್ "ಸಾರಾ ತೆಂಡೂಲ್ಕರ್ ಶಾಪ್".
ಇನ್ನು ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಇರುವ ಸಾರಾ, Instagram ನಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ವ್ಯವಹಾರ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳನ್ನು ಬಳಸುತ್ತಿದ್ದಾರೆ.