ಸರೋಗೆಸಿ ತಜ್ಞರು ಮತ್ತು ಗೇ ಆ್ಯಕ್ಟಿವಿಸ್ಟ್ಸ್ ಕಳೆದ ವರ್ಷ ಕೇಂದ್ರ ಸರ್ಕಾರ ಅಂಗೀಕರಿಸಿದ `ಬಾಡಿಗೆ ತಾಯಿ’ಯ ಮೂಲಕ ಮಗು ಪಡೆಯುವ ಸರೋಗೆಸಿ ಬಿಲ್ ಬಗ್ಗೆ ಸಾಕಷ್ಟು ಟೀಕೆ ಮಾಡಿದ್ದಾರೆ. ಈ ಮಸೂದೆಯ ಒಟ್ಟಾರೆ ಉದ್ದೇಶ `ಸರೋಗೆಸಿ’ ಎನ್ನುವುದು ವ್ಯಾಪಾರೀಕರಣ ಆಗಬಾರದು. ಅವಿವಾಹಿತ ಪುರುಷ ಮತ್ತು ಮಹಿಳೆಯರು ಮಗು ಪಡೆಯುವುದನ್ನು ತಡೆಯಲು ಈ ಮಸೂದೆಯನ್ನು ತರಲಾಗಿದೆ. ಆದರೆ ಇದರಿಂದ ನಿಸ್ಸಂತಾನ ದಂಪತಿಗಳ ಕಷ್ಟಗಳೂ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಹೆಸರಾಂತ ಸ್ತ್ರೀರೋಗ ತಜ್ಞರೊಬ್ಬರು ತಮ್ಮ ಹೆಸರು ಹೇಳಲಿಚ್ಛಿಸದೆ ಹೀಗೆ ಹೇಳುತ್ತಾರೆ, “ಈ ಮಸೂದೆಯಿಂದ ಬಾಡಿಗೆ ತಾಯಿಯಾಗಲು ಇಚ್ಛಿಸುವ ಸಾವಿರಾರು ಮಹಿಳೆಯರ ಆದಾಯದ ಮೂಲವನ್ನು ಕಿತ್ತುಕೊಳ್ಳಲಿದೆ. ಒಂದು ವೇಳೆ ನಿಕಟ ಸಂಬಂಧಿಗಳೇ ಬಾಡಿಗೆ ತಾಯಿಯಾಗಲು ಒಪ್ಪಿಗೆ ಸೂಚಿಸಿದರೂ ವಿವಾಹಿತ ದಂಪತಿಗಳಿಗೆ ಅದರಿಂದಲೂ ಕಷ್ಟ ತಪ್ಪಿದ್ದಲ್ಲ. ಇದರಿಂದ ಸಿಂಗಲ್ ಪೇರೆಂಟ್‌ಗಳಿಗೆ ಮತ್ತು ಸಲಿಂಗಿಗಳಿಗೆ ಬಹಳ ತೊಂದರೆಯಾಗುತ್ತದೆ.”
ಈವರೆಗೆ ಸರೋಗೆಸಿಯಲ್ಲಿ ಒಬ್ಬ ಮಹಿಳೆಯು ದಂಪತಿಗಳಿಗಾಗಿ ಅಥವಾ ಒಬ್ಬನೇ ಪುರುಷನಿಗೆ ಅಥವಾ ಒಬ್ಬಳೇ ಮಹಿಳೆಗೆ ಮಗುವನ್ನು ಹೆತ್ತು ಅವರ ಅಧೀನಕ್ಕೆ ಕೊಡುತ್ತಿದ್ದಳು. ಆ ಸರೋಗೆಸಿ ಅದರಲ್ಲಿ ಬಾಡಿಗೆ ತಾಯಿ ಮತ್ತು ಇನ್ಶೂರೆನ್ಸ್ ಕವರೇಜ್‌ಗಾಗಿ ವೈದ್ಯಕೀಯ ಖರ್ಚಿನ ಹೊರತಾಗಿ ಬೇರಾವ ಹಣ ಅಥವಾ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಇದನ್ನು `ಜನಸೇವಾ ಸರೋಗೆಸಿ’ ಎಂದು ಕರೆಯಲಾಗುತ್ತದೆ. ಒಂದು ವೇಳೆ ಬಾಡಿಗೆ ತಾಯಿ ತನ್ನ ಸೇವೆಗಾಗಿ ಹಣ ಅಥವಾ ಶುಲ್ಕ ಪಡೆಯುವವಳಾಗಿದ್ದರೆ, `ಕಮರ್ಷಿಯಲ್ ಸರೋಗೆಸಿ’ ಎಂದು ಕರೆಯಲಾಗುತ್ತದೆ. ಹೊಸ ಮಸೂದೆಯ ಪ್ರಕಾರ, ಸಿನಿಮಾ ನಟ ತುಷಾರ್ ಕಪೂರ್‌ತಂದೆಯಾಗುವ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಆಗುವುದೇ ಇಲ್ಲ. ಶಾರೂಖ್ ಖಾನ್ ತನ್ನ ಮೂರನೇ ಮಗುವನ್ನು ಪಡೆದುಕೊಳ್ಳಲು ಆಗುತ್ತಿರಲಿಲ್ಲವೇನೋ? ಏಕೆಂದರೆ ಈ ಮಸೂದೆಯ ಪ್ರಕಾರ, ನಿಸ್ಸಂತಾನ ದಂಪತಿಗಳು ಮಾತ್ರ ಬಾಡಿಗೆಯ ತಾಯಿಯ ಮುಖಾಂತರ ಮಗು ಪಡೆಯಬಹುದು.
ಡಾ. ಚಂದ್ರಕಾಂತ್ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಈ ಮಸೂದೆಯು ವ್ಯಕ್ತಿಯೊಬ್ಬನ ಸಮಾನತೆ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡಂತೆ. ಕಾನೂನಿನ ಕಣ್ಣಿಗೆ ಮಣ್ಣೆರಚಲು ಜನ ರಂಗೋಲಿಯ ಕೆಳಗೆ ತೂರುತ್ತಾರೆ. ಸಲಿಂಗಕಾಮಿ ಜೋಡಿ ಪೋಷಣೆ ಮಾಡುವ ಮಗು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆಂದು ನೀವು ಹೇಗೆ ನಿರ್ಧರಿಸುವಿರಿ? ನೈತಿಕತೆಯನ್ನು ಬದಿಗೊತ್ತಿ ನಮ್ಮ ದೇಶಕ್ಕೆ ಸೆಕ್ಷುಯಾಲಿಟಿಯ ವಿಷಯವನ್ನು ಎದುರಿಸಲು ಬರಬೇಕು.”
`ಏಷ್ಯಾ ಪೆಸಿಫಿಕ್ ಇನಿಷಿಯೇಟಿವ್ ಆನ್‌ರಿಪ್ರೊಡಕ್ಷನ್’ನ ಪ್ರೆಸಿಡೆಂಟ್ ಡಾ. ಜಯದೀಪ್ ಹೀಗೆ ಹೇಳುತ್ತಾರೆ, “ಈ ಮಸೂದೆ ಮಹಿಳೆಯರ ಮೇಲೆ ಬಹು ಪ್ರಭಾವ ಬೀರುವಂಥದ್ದು. ಯಾವ ಮಹಿಳೆಗೆ ಮಗು ಆಗುವ ಸಾಧ್ಯತೆ ಇಲ್ಲವೋ ಹಾಗೂ ಅವರ ಕುಟುಂಬದವರಿಗೆ ಒಬ್ಬ ವಾರಸುದಾರ ಬೇಕಿದ್ದಾನೆ, ಅಂತಹ ಮಹಿಳೆಯ ಸ್ಥಿತಿ ಏನು? ಆ ಮಹಿಳೆಗೆ ಗಂಡ ವಿಚ್ಛೇದನ ಕೊಡಬಹುದು ಇಲ್ಲವೇ ಆಕೆಯ ಗಂಡ ಮತ್ತೊಂದು ಮದುವೆಯಾಗಬಹುದು. ಪುರುಷರ ಸಂತಾನ ಇಚ್ಛೆಯ ಕಾರಣದಿಂದಾಗಿ ಮಹಿಳೆಯರ ಶೋಷಣೆಯಾಗುತ್ತದೆ.”
ದೇಶದ ಹೆಸರಾಂತ ಸರೋಗೆಸಿ ತಜ್ಞೆ ನಯನಾ ಪಟೇಲ್ ಈ ಮಸೂದೆಯ ಬಗ್ಗೆ ಹೀಗೆ ವಿಶ್ಲೇಷಿಸುತ್ತಾರೆ, “ಮೊದಲೇ ಸಂತಾನ ಭಾಗ್ಯ ಇಲ್ಲದೆ ಕೊರಗುತ್ತಿರುವ ದಂಪತಿಗಳಿಗೆ ಈ ಮಸೂದೆ ಒಂದು ರೀತಿಯ ದೊಡ್ಡ ಹೊಡೆತವನ್ನೇ ನೀಡಿದೆ. ಪಟೇಲ್ ಈವರೆಗೆ ಬಾಡಿಗೆ ತಾಯಂದಿರ ಮುಖಾಂತರ 1100ಕ್ಕೂ ಹೆಚ್ಚು ಮಕ್ಕಳ ಹೆರಿಗೆ ಮಾಡಿಸಿದ್ದಾರೆ. ಅವರು ಕೃತಕ ಗರ್ಭಧಾರಣೆ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.
ಡಾ. ಪಟೇಲ್ ಪ್ರಕಾರ, “ಈ ಮಸೂದೆ ನೂರಾರು ವೃತ್ತಿಪರ ಬಾಡಿಗೆ ತಾಯಂದಿರ ಆದಾಯದ ಮೂಲಕ್ಕೆ ಕತ್ತರಿ ಹಾಕಲಿದೆ. ಆ ಮಹಿಳೆಯರು ಬಾಡಿಗೆ ತಾಯಿಯಾಗುವುಉದರ ಮೂಲಕ ತಮ್ಮ ಕುಟುಂಬಕ್ಕೆ ಆಧಾರಸ್ತಂಭವಾಗಿ ನಿಂತಿದ್ದಾರೆ. ಈ ಮಸೂದೆ ಕೇವಲ ಅವರಿಗಷ್ಟೇ ಅಲ್ಲ, ದೇಶದ ಅರ್ಥ ವ್ಯವಸ್ಥೆಯ ಮೇಲೂ ಬಹುದೊಡ್ಡ ಪರಿಣಾಮ ಬೀರಲಿದೆ. ವಿದೇಶಿ ತಾಯಂದಿರು ಬಾಡಿಗೆ ತಾಯಿಯನ್ನು ಹುಡುಕಿಕೊಂಡು 7-11 ಲಕ್ಷ ರೂ. ಖರ್ಚು ಮಾಡುತ್ತಾರೆ. ಅದೇ ಭಾರತೀಯ ದಂಪತಿಗಳು ಕೇವಲ 6 ಲಕ್ಷ ಮಾತ್ರ ಖರ್ಚು ಮಾಡುತ್ತಾರೆ.”
ಹೊಸ ಮಸೂದೆಯಲ್ಲಿ ನಮೂದಿಸಿದ ಪ್ರಕಾರ, ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಕೇವಲ ಒಂದು ಸಲ ಮಾತ್ರ ಬಾಡಿಗೆ ತಾಯಿಯಾಗಬಹುದು. ಆ ಮಹಿಳೆ ವಿವಾಹಿತಳಾಗಿರಬೇಕು, ಕನಿಷ್ಠ ಒಂದು ಆರೋಗ್ಯವಂತ ಮಗುವಿನ ತಾಯಿಯಾಗಿರಬೇಕು. ಇದರ ಹೊರತಾಗಿ ದಂಪತಿಗಳು ಮದುವೆಯಾದ 5 ವರ್ಷಗಳ ಬಳಿಕವೇ ಬಾಡಿಗೆ ತಾಯಿಯ ನೆರವು ಪಡೆದುಕೊಳ್ಳಬಹುದು. ಯಾವ ದಂಪತಿಗಳಿಗೆ ದೈಹಿಕ ಮಾನಸಿಕ ವಿಕಲಚೇತನ ಮಕ್ಕಳಿರುತ್ತಾರೊ ಅವರಿಗೆ ಮಸೂದೆ ವಿನಾಯಿತಿ ನೀಡುತ್ತದೆ.
ಆದಾಯಕ್ಕೆ ಕಲ್ಲು
2012ರಲ್ಲಿ ಗೃಹ ಸಚಿವಾಲಯ `ವಾಣಿಜ್ಯಾತ್ಮಕ ಸರೋಗೆಸಿ’ಗೆ ವಿದೇಶದಿಂದ ಬರುವ ನಾಗರಿಕರಿಗೆ ಕಠಿಣ ವೀಸಾ ನಿಯಮಗಳನ್ನು ಜಾರಿಗೊಳಿಸಿತು. ವಿದೇಶಿ ಸಲಿಂಗ ದಂಪತಿಗಳು, ಸಿಂಗಲ್ ಪೇರೆಂಟ್‌ಗಳಿಗೆ ಸರೋಗೆಸಿಗಾಗಿ ಭಾರತಕ್ಕೆ ಬರಲು ಅನುಮತಿ ನೀಡಲಾಗುವುದಿಲ್ಲ. ಅವರು ಕೇವಲ ಮೆಡಿಕಲ್ ವೀಸಾ ಮೇಲೆ ಭಾರತಕ್ಕೆ ಬರಬಹುದು. ಆದರೆ ಟೂರಿಸ್ಟ್ ವೀಸಾ ಮೇಲೆ ಬರುವ ಹಾಗಿಲ್ಲ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳುವುದು ಹೀಗೆ, “ಬಾಡಿಗೆ ತಾಯಿಯ ಮುಖಾಂತರ ಮಕ್ಕಳು ಬಯಸುವವರು ಕಾನೂನು ರೀತ್ಯಾ ವಿವಾಹಿತರಾಗಿರಬೇಕು. ಸಿಂಗಲ್ ಪೇರೆಂಟ್, ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರುವ ಜೋಡಿಗಳು ಸರೋಗೆಸಿ ಪ್ರಕ್ರಿಯೆಗೆ ಒಳಗಾಗುವಂತಿಲ್ಲ. ಪ್ರಸ್ತುತ ಭಾರತದಲ್ಲಿ 2000ಕ್ಕೂ ಹೆಚ್ಚು ಸರೋಗೆಸಿ ಕ್ಲಿನಿಕ್‌ಗಳಿವೆ.”
ಈ ದಂಪತಿಗಳಲ್ಲಿ ಹೆಂಡತಿಯ ವಯಸ್ಸು 25-50ರವರೆಗೆ ಗಂಡನ ವಯಸ್ಸು 26-55ರೊಳಗೆ ಇರಬೇಕು. ಇದು ಪ್ರಖರ ಹಿಂದೂ ವಿಚಾರಧಾರೆಯಿಂದ ಕೂಡಿದೆ. ಹಿಂದೂ ಪುರುಷರಲ್ಲಿ ನಿಯೋಗದ ಅನೇಕ ಉದಾಹರಣೆಗಳು ಸಿಗುತ್ತವೆ. ಹಿಂದೆ ಪರಪುರುಷನ ಸಂಪರ್ಕದಿಂದ ಹೆಂಡತಿ ಗರ್ಭ ಧರಿಸುತ್ತಿದ್ದಳು. ಹೆಂಡತಿಗೆ ಹುಟ್ಟುವ ಮಗುವನ್ನು ಗಂಡ ತನ್ನದೇ ಎಂದು ಒಪ್ಪಿಕೊಳ್ಳುತ್ತಿದ್ದ.
ಶಾರೂಖ್ ಖಾನ್‌ಗೆ ಮೂರನೇ ಮಗು ಬಾಡಿಗೆ ತಾಯ್ತನದ ಮೂಲಕ ಜನಿಸಿದೆ. ಸುಷ್ಮಾ ಸ್ವರಾಜ್, ಶಾರೂಖ್ ಹೆಸರು ಹೇಳಲಿಚ್ಛಿಸದೆ ಹೀಗೆ ಹೇಳುತ್ತಾರೆ, “ಅಗತ್ಯತೆ ಈಗ ಫ್ಯಾಷನ್ ಆಗಿಬಿಟ್ಟಿದೆ. ಹಲವು ಸೆಲೆಬ್ರಿಟಿಗಳಿಗೆ ಎರಡು ಮಕ್ಕಳಿವೆ. ಒಂದು ಗಂಡು, ಒಂದು ಹೆಣ್ಣು. ಆದರೂ ಅವರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಏಕೆ ಪಡೆಯುತ್ತಾರೆಂದರೆ, ತಮ್ಮ ಹೆಂಡತಿಗೆ ಹೆರಿಗೆ ನೋವು ಸಹಿಸಿಕೊಳ್ಳಲು ಆಗುವುದಿಲ್ಲವೆಂದು, ಮಗು ಬೇಕಿರುವುದು ಅಗತ್ಯಕ್ಕೆ ಹೊರತು ಫ್ಯಾಷನ್‌ಗೆ ಅಲ್ಲ.”
ಐವಿಎಫ್‌ನಲ್ಲಿ ತಾಯಿಯ ಅಂಡಾಣು ಮತ್ತು ತಂದೆಯ ವೀರ್ಯಾಣುವನ್ನು ಪ್ರಯೋಗಾಲಯದಲ್ಲಿ ಮಿಲನಗೊಳಿಸಿ ಗರ್ಭಕೋಶದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಸರೋಗೆಸಿ ಮದರ್ ಅಂದರೆ ಬಾಡಿಗೆಯ ತಾಯಿಯ ಗರ್ಭದಲ್ಲಿ ಮಗು ಬೆಳೆಯುತ್ತಿರುತ್ತದೆ. ಆದರೆ ಜೈವಿಕ ಹಾಗೂ ಆನುವಂಶಿಕ ಗುಣಗಳೆಲ್ಲ ತನ್ನ ತಂದೆತಾಯಿಗಳದ್ದೇ ಆಗಿರುತ್ತವೆ. ಏಕೆಂದರೆ ಮಗುವಿನ ಗುಣಗಳು ವೀರ್ಯಾಣು ಮತ್ತು ಅಂಡಾಣುವನ್ನು ಅಲಂಬಿಸಿರುತ್ತವೆಯೇ ಹೊರತು ಗರ್ಭಕೋಶವನ್ನಲ್ಲ. ಇದೊಂದು ಸುಲಭದ ಪ್ರಕ್ರಿಯೆ. ಆದರೆ ಇದರಲ್ಲಿ ಹೇರಳ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ.
ಹೆಚ್ಚುತ್ತಿರುವ ಬಾಡಿಗೆ ತಾಯಂದಿರು
ಹೆಸರಾಂತ ಆಸ್ಪತ್ರೆಯೊಂದರ ಸ್ತ್ರೀ ರೋಗ ತಜ್ಞೆ ಡಾ. ಕವಿತಾ ಹೀಗೆ ಹೇಳುತ್ತಾರೆ, ಬಾಡಿಗೆ ಗರ್ಭ ಹೊರಲು ಸನ್ನದ್ಧರಾಗಿರುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿದೆ. ಅದರಲ್ಲಿ ಹೆಚ್ಚಿನವರು ಎಸ್‌ಎಸ್‌ಎಲ್‌ಸಿ ಕೂಡ ಮುಗಿಸಿರುವುದಿಲ್ಲ. ಹೆಚ್ಚಿನ ಮಹಿಳೆಯರಿಗೆ ಯಾವುದೇ ಮೂಲ ಆದಾಯ ಇರುವುದಿಲ್ಲ. ಅವರ ಪತಿ ಯಾವುದೇ ಕೆಲಸ ಮಾಡುತ್ತಿರುವುದಿಲ್ಲ ಅಥವಾ ಅವರಿಂದ ದೂರ ವಾಸಿಸುತ್ತಿರುವವರು. ಕೆಲವರಂತೂ 500 ರೂ. ಸಹ ಕಂಡಿರುವುದಿಲ್ಲ. ಬಾಡಿಗೆ ತಾಯ್ತನದ ಮೂಲಕ ಅವರು ಲಕ್ಷಾಂತರ ರೂ.ಗಳಿಸಬಹುದು ಮತ್ತು ತಮ್ಮ ಮಕ್ಕಳನ್ನು ಓದಿಸಬಹುದು. ಮುಂಬೈನ ಬಾಂದ್ರಾದ ಕ್ಲಿನಿಕ್‌ವೊಂದು ಪ್ರಭಾದೇವಿ ಸಿದ್ಧಿವಿನಾಯಕ ದೇವಸ್ಥಾನದ ಸಮೀಪ 15 ಜನ ಬಾಡಿಗೆ ತಾಯಂದಿರಿಗಾಗಿಯೇ ಒಂದು ಫ್ಲಾಟ್‌ನ್ನು ಬಾಡಿಗೆಗೆ ಪಡೆದಿದೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಬಾಡಿಗೆ ಗರ್ಭ ಹೊರುವವರ ಸಂಖ್ಯೆ ಹೆಚ್ಚುತ್ತಲೇ ಹೊರಟಿದೆ. ಮೊದಲು ಇಲ್ಲಿ 5-6 ಜನ ಬಾಡಿಗೆ ತಾಯಂದಿರು ಮಾತ್ರ ಇರುತ್ತಿದ್ದರು. ಈಗ ಈ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಲೇ ಹೊರಟಿದೆ. ಮಗುವಿಗೆ ಜನ್ಮ ನೀಡಿ 2-3 ಲಕ್ಷ ರೂ.ಗಳವರೆಗೂ ಹಣ ಪಡೆದು ತಮ್ಮ ತಮ್ಮ ಮನೆಗಳಿಗೆ ವಾಪಸ್ಸಾಗುತ್ತಾರೆ. ಒಂದೇ ಫ್ಲಾಟ್‌ನಲ್ಲಿ ವಾಸಿಸುವ ಅಷ್ಟೂ ಬಾಡಿಗೆ ತಾಯಂದಿರನ್ನು ನೋಡಿಕೊಳ್ಳಲಾಗುತ್ತದೆ.
ನಾಣ್ಯದ ಎರಡನೇ ಮುಖ
ಮುಂಬೈನ ಕೆಲವು ಭಾಗಗಳಲ್ಲಿ ಸರೋಗೇಟ್ ತಾಯಂದಿರ ಏಜೆಂಟ್‌ರಿದ್ದಾರೆ. ಅವರು ಸುಳ್ಳು ನೆಪ ಹೇಳುತ್ತಾರೆ. ಡಾ. ಗುಪ್ತಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬಳ ವಯಸ್ಸು 38 ಆಗಿತ್ತು. ಆದರೆ ಆಕೆ ಬಾಡಿಗೆ ಗರ್ಭ ಹೊರಲು ತನ್ನ ವಯಸ್ಸು 32 ಎಂದು ಸುಳ್ಳು ಹೇಳಿದ್ದಳು. ಹಾಗಾಗಿ ಗರ್ಭಾವಸ್ಥೆಯಲ್ಲಿ ಅನೇಕ ಕ್ಲಿಷ್ಟಕರ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆ ಬಳಿಕ ಅವಧಿಗೆ ಮುನ್ನವೇ ಹೆರಿಗೆಯಾಯಿತು. ಅವಳಿಗೆ ಹಣದ ಅವಶ್ಯಕತೆ ತುಂಬಾ ಇತ್ತು. ಹಾಗಾಗಿ ಸುಳ್ಳು ಹೇಳಿ ಗರ್ಭ ಹೊತ್ತಿದ್ದಳು. ಆಕೆಯ ಅಳಿಯ ಇವರ 19 ವರ್ಷದ ಮಗಳನ್ನು ಹೊರಗೆ ಹಾಕಿದ್ದ. ಏಕೆಂದರೆ ಆಕೆ ವರದಕ್ಷಿಣೆ ಕೊಡಲು ಆಗಿರಲಿಲ್ಲ.”
ಪ್ರಭಾದೇವಿಯ ಆ ಫ್ಲಾಟ್‌ನಲ್ಲಿ ವಾಸಿಸುವ ಒಬ್ಬ ಮಹಿಳೆ (ಬಾಡಿಗೆ ತಾಯಿ) ತನ್ನ ಮನೆಯವರಿಗೆ ತಾನು ಬೇರೊಂದು ನಗರದಲ್ಲಿ ನರ್ಸ್ ಕೆಲಸ ಮಾಡುತ್ತಿದ್ದುದಾಗಿ ಹೇಳಿದ್ದಳು. ತನ್ನ ಮಗುವಿಗೆ ಹೃದಯದ ತೊಂದರೆಯಿದೆ. ಶಸ್ತ್ರಚಿಕಿತ್ಸೆಗೆ 2-3 ಲಕ್ಷ ರೂ.ಗಳ ಅವಶ್ಯಕತೆಯಿದೆ ಎಂದು ವೈದ್ಯರಿಗೆ ಹೇಳಿ ಬಾಡಿಗೆ ತಾಯಿಯಾಗಲು ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದಳು.
ಹಿಂದೊಮ್ಮೆ ಬಾಡಿಗೆ ತಾಯಿಯಾಗಿದ್ದ ಮಹಿಳೆಯೊಬ್ಬಳು ಈಗ ಅಂತಹ ಮಹಿಳೆಯರನ್ನು ಹುಡುಕಿ ವೈದ್ಯರ ಬಳಿ ಕರೆದುಕೊಂಡು ಬರುವ ಏಜೆಂಟ್ ಆಗಿದ್ದಾಳೆ. ಐವಿಎಫ್ ಸೆಂಟರ್‌ಗಳು ಇಂತಹ ಮಹಿಳೆಯರನ್ನು ಹುಡುಕುತ್ತಿರುತ್ತವೆ. ಆಕೆ, “ನಾನು 2 ಸಲ ಬಾಡಿಗೆ ತಾಯಿ ಆಗಿದ್ದೆ. ಈಗ ಪುನಃ ಅದನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಏಜೆಂಟ್ ಆಗಿರುವೆ. ಐವಿಎಫ್ ಸೆಂಟರ್‌ಗಳು ನನ್ನಂತಹ ಮಹಿಳೆಯರನ್ನೇ ಹುಡುಕುತ್ತಿರುತ್ತವೆ. ಈ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳಿವೆ,” ಎಂದು ಹೇಳುತ್ತಾಳೆ.
ಹೊಸ ಮಸೂದೆ ಸರಿಯಾಗಿಲ್ಲ. ಆದರೆ ಸರ್ಕಾರಗಳು ಜನರನ್ನು ಮೂರ್ಖರನ್ನಾಗಿಸಿ ಕಾನೂನು ರೂಪಿಸುತ್ತವೆ. ಒಳ್ಳೆಯ ಕೆಟ್ಟ ಪರಿಣಾಮಗಳನ್ನು ಜನರೇ ಅವಲೋಕಿಸಲು ಬಿಡಬೇಕು. ಈ ಕಾನೂನಿನ ಭವಿಷ್ಯದಲ್ಲಿ ಏನೇನು ಪರಿಣಾಮ ಬೀರಲಿದೆ ಕಾಯ್ದು ನೋಡಬೇಕು.
– ಡಾ. ಪೂರ್ಣಿಮಾ ಆನಂದ್