ಭಕ್ತಿಯ ಹೆಸರಲ್ಲಿ ಜನ ಮರುಳೋ, ಜಾತ್ರೆ ಮರುಳೋ ಎಂದು ದೊಂಬಿ ಎಬ್ಬಿಸಿ, ಜನಸಾಗರ ಒಂದೇ ಕಡೆ ಸೇರಿದರೆ, ಅದರಿಂದ ಆ ದೇವರಿಗೆ ಏನಾಗುತ್ತದೋ ಬಿಡುತ್ತದೋ, ಈ ಭಕ್ತರ ಸ್ಥಿತಿಯಂತೂ ಅಯೋಮಯ! ಅದರಿಂದಾಗುವ ಅವಘಡ, ಅಪಘಾತ, ಸಾವುನೋವುಗಳಿಗೆ ಎಣೆಯುಂಟೇ…..?
ಕಳೆದ 2021ರಲ್ಲಿ ಅಮರ್ ನಾಥ್ ಯಾತ್ರೆಗೆ ಹೊರಟಿದ್ದ ಭಕ್ತಾದಿಗಳ ತಂಡ ಒಂದು ಭಯಂಕರ ಅಪಘಾತಕ್ಕೆ ಸಿಲುಕಿತ್ತು. ಇದ್ದಕ್ಕಿದ್ದಂತೆ ಹಿಮಪಾತವಾಗಿ ಉ.ಭಾರತದ ಈ ಪ್ರಾಂತ್ಯ ಪ್ರಕೃತಿಯ ಭಯಂಕರ ವಿಕೋಪಕ್ಕೆ ಗುರಿಯಾಯಿತು. ಮೀಡಿಯಾದವರು ಬಂದು ಸುದ್ದಿಗಳ ಸುಗ್ಗಿ ಮಾಡಿಕೊಂಡರು. ಎಲ್ಲೆಲ್ಲೂ ಮರಣ ಮೃದಂಗ ಮೊಳಗಿತ್ತು. ಅವಳು, ನೋವು, ಆಕ್ರಂದನ ಮುಗಿಲು ಮುಟ್ಟಿತ್ತು! ಸಾವುನೋವುಗಳಿಗೆ ಲೆಕ್ಕ ಹುಡುಕುವುದೇ ಕಷ್ಟವಾಯಿತು. ಹಸಿವು, ಬಾಯಾರಿಕೆ…. ರುದ್ರತಾಂಡವ ಆಡುತ್ತಿತ್ತು. ಭಾರತದ ಭೂಸೇನೆಯ ಸಾವಿರಾರು ಯೋಧರು ತಮ್ಮ ಜೀವವನ್ನು ಪಣಕ್ಕೊಡ್ಡಿ, ಈ ಅಮರ್ ನಾಥ್ ತೀರ್ಥಯಾತ್ರೆಗೆಂದು ಬಂದಿದ್ದ ಭಕ್ತಾದಿಗಳ ಜೀವ ಕಾಪಾಡಿದರು. ಅವರುಗಳನ್ನು ಸುರಕ್ಷಿತ ತಾಣ ತಲುಪಿಸುವಲ್ಲಿ ಯಶಸ್ವಿಯಾದರು. ದೇಶವಿಡೀ ಜನತೆ ಟಿವಿಯಲ್ಲಿ ಈ ಭೀಕರ ಸಾವಿನ ಆಟ ನೋಡಿ, ಜೀವನದ ಕ್ಷಣಭಂಗುರತೆಯ ಬಗ್ಗೆ ನಾನಾ ಚರ್ಚೆ ಮಾಡುತ್ತಾ, ತೋಚಿದ ಸಲಹೆ ನೀಡುತ್ತಾ, ಇಷ್ಟೊಂದು ಜನರನ್ನು ಒಮ್ಮೆಲೇ ಇಲ್ಲಿ ಸೇರಿಸಿದ್ದು ಏಕೆಂದು ಗೊಣಗಿಕೊಂಡಿತು. ಟಿವಿ, ಸಿನಿಮಾಗಳಲ್ಲಿ ತೋರಿಸುವಂತೆ ಯಾವ ಧರ್ಮದ ಯಾವ ದೇವರೂ ಆಕಾಶದಿಂದ ಇಳಿದು ಬಂದು ಇವರನ್ನು ರಕ್ಷಿಸಲಿಲ್ಲ!
ಈ ಹಗರಣದಲ್ಲಿ ನೂರಾರು ಜನ ಸತ್ತರು, ಸಾವಿರಕ್ಕೂ ಹೆಚ್ಚು ಗಾಯಗೊಂಡರು, 40-50 ಜನ ಹಿಮದ ಮಧ್ಯೆ ಕಣ್ಮರೆಯಾದರು. ಈ ಜವಾಬ್ದಾರಿಯನ್ನು ಆಸ್ತಿಕರು ದೇವರ ಮೇಲೆ ಹಾಕಲು ಸಾಧ್ಯವೇ? ಹೀಗಾಗಿ ಇದರ ಸಮಸ್ತ ಲೋಪದೋಷಗಳ ಹಣೆಪಟ್ಟಿಯನ್ನು ಅಲ್ಲಿಯ ಸ್ಥಳೀಯ ಅಮರ್ ನಾಥ್ ಶ್ರೈನ್ ಬೋರ್ಡ್ ಗೆ ಅಂಟಿಸಲಾಯಿತು. ಆ ಮಂಡಳಿಯ ನಿರ್ಲಕ್ಷ್ಯದಿಂದಲೇ ಇಷ್ಟೆಲ್ಲ ಆಯಿತು ಎಂದು ಘಂಟಾಘೋಷವಾಗಿ ಸಾರಲಾಯಿತು.
ಆದರೆ ಅಸಲಿಗೆ ತಪ್ಪಿನ ಹೊಣೆ, ದೇವರನ್ನು ನಂಬಿಕೊಂಡು ಅಲ್ಲಿ ಜಮಾಯಿಸಿದ್ದ ಆ ಮೂಢ ಜನರದ್ದು ಎಂದು ಯಾರು ತಾನೇ ಆ ಸಂದರ್ಭದಲ್ಲಿ ಚರ್ಚಿಸಲು ಸಾಧ್ಯ? ಅಂಥ ದುರ್ಗಮ ಪರ್ವತ ಪ್ರದೇಶದಲ್ಲಿ ಆ ಕಿಷ್ಕಿಂದಾ ಜಾಗದಲ್ಲಿ ಒಮ್ಮೆಲೇ ಅಷ್ಟು ಜನ ಹಿಮಪಾತಕ್ಕೆ ಸಿಲುಕಿದರೆ ಗತಿ ಏನಾದೀತು? ಹೀಗಾಗಿಯೇ ಅಲ್ಲಿನ ಹವಾಮಾನ ಇಲಾಖೆಯರು ಮತ್ತೆ ಮತ್ತೆ ಈ ಕುರಿತು ಎಚ್ಚರಿಕೆ ನೀಡಿದ್ದರೂ ಈ ಆಸ್ತಿಕರು ಇದನ್ನು ನಿರ್ಲಕ್ಷಿಸಿದರು.
ಇಂಥ ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋದರೆ ಅದು ಆತ್ಮಹತ್ಯೆಗೆ ಸಮ ಎಂದು ಅರಿವಾಗಲಿಲ್ಲವೇ? ಅಲ್ಲಿನ ಬೋರ್ಡ್ ಈ ಕಾರಣವೊಡ್ಡಿ, ಈ ಜನರ ಯಾತ್ರೆ ರದ್ದುಗೊಳಿಸಿದ್ದರೆ, ಎಲ್ಲರೂ ಸೇರಿ ಬೇಕೆಂದೇ ತಮ್ಮನ್ನು ತಡೆಹಿಡಿಯುತ್ತಿದ್ದಾರೆ, ಪವಿತ್ರ ಯಾತ್ರೆ ರದ್ದು ಪಡಿಸುತ್ತಾರೆ ಎಂದು ಹುಯಿಲೆಬ್ಬಿಸುವರು.
ಆ ವರ್ಷ 30ನೇ ಜೂನ್ ನಿಂದ ಅಮರ್ ನಾಥ್ ಯಾತ್ರೆ ಶುರುವಾಗಿತ್ತು. ಪ್ರತಿ ವರ್ಷದಂತೆ 2 ಆತಂಕಗಳನ್ನು ವಿಶೇಷವಾಗಿ ಪ್ರಸ್ತಾಪಿಸಲಾಗಿತ್ತು. ಮೊದಲನೆಯದು, ಭಯೋತ್ಪಾದಕರ ಹಲ್ಲೇ, ಆಕ್ರಮಣದ ಆತಂಕ. ಎರಡನೆಯದು, ಹವಾಮಾನ ಕಂಗೆಟ್ಟು ಯಾವಾಗ ಬೇಕಾದರೂ ಭೂಕುಸಿತ, ಹಿಮಪಾತದ ಅಪಾಯ! ಮೊದಲ ಆತಂಕ ನಿವಾರಿಸಲು, ಕೇಂದ್ರ ಸರ್ಕಾರ ಹೆಚ್ಚಿನ ಸುರಕ್ಷತೆಗಾಗಿ 1 ಲಕ್ಷಕ್ಕೂ ಹೆಚ್ಚು ಮಂದಿ ಸೈನಿಕರನ್ನು ಅಲ್ಲಿನ ಕಾವಲಿಗೆ ಕಳುಹಿಸಿತು. ಆದರೆ ಹವಾಮಾನದ ನಿಯಂತ್ರಣವಂತೂ ಸರ್ಕಾರದ ಕೈಯಲ್ಲಿಲ್ಲವಲ್ಲ? ಹೀಗಾಗಿ ಭಕ್ತರನ್ನು ಭಗವಂತನೇ ಕಾಪಾಡಿಕೊಳ್ಳಲಿ ಎಂದು ಯಾತ್ರೆ ರದ್ದು ಪಡಿಸಲಿಲ್ಲ. ಕೊರೋನಾ ಮಹಾಮಾರಿಯ ಕಾಟದಿಂದ 2 ವರ್ಷ ರದ್ದಾಗಿದ್ದ ಈ ಯಾತ್ರೆ, 2021ರಲ್ಲಿ ಹೆಚ್ಚಿನ ಹುಮ್ಮಸ್ಸಿನೊಂದಿಗೆ ಗರಿಗೆದರಿತ್ತು. ಆ ಕಾರಣದಿಂದ ಲಕ್ಷಾಂತರ ಮಂದಿ ಈ ಯಾತ್ರೆಗಾಗಿ ರಿಜಿಸ್ಟ್ರೇಷನ್ ಮಾಡಿಸಿದ್ದರು.
ಜನದಟ್ಟಣೆ ಹಾಹಾಕಾರ
ಅಮರ್ ನಾಥ್ ಗುಹೆಯ 2 ಕಿ.ಮೀ. ದೂರದಲ್ಲಿನ ಕಾಳಿ ಮಾತೆಯ ಘಟ್ಟದ ಬಳಿ, ಸಂಜೆ 5ರ ಹೊತ್ತಿಗೆ ಮೋಡಗಳ ಘರ್ಷಣೆಯಾದಾಗ, ಅಲ್ಲಿನ 25 ಟೆಂಟುಗಳಲ್ಲಿ ಸುಮಾರು 15 ಸಾವಿರ ಮಂದಿ ಉಪಸ್ಥಿತರಿದ್ದರು. ಘನಘೋರ, ಕುಂಭದ್ರೋಣ ಮಳೆಯಿಂದಾಗಿ ಧಾರಾಕಾರವಾಗಿ ನೀರು ಟೆಂಟುಗಳಿಗೆ ನುಗ್ಗಿ, ಹಲವು ಡೇರೆಗಳನ್ನು ಕೊಚ್ಚಿಕೊಂಡು ಹೋಯಿತು. ಇದರಲ್ಲಿ ಅದೆಷ್ಟು ಭಕ್ತರು ಕೊಚ್ಚಿಹೋದರೋ ಲೆಕ್ಕವೇ ಇಲ್ಲ! ಈ ಡೇರೆ, ಬಿಡಾರಗಳು ಮಹಾನಗರದ ಸ್ಲಂ ಏರಿಯಾ ತರಹ ಒಂದಕ್ಕೊಂದು ಅಂಟಿ ನಿಂತಿದ್ದವು. ಹತ್ತಿರದಲ್ಲಿಯೇ ಹಾಕಲಾಗಿದ್ದ 3 ಭೋಜನಾಲಯಗಳೂ ಕೊಚ್ಚಿಹೋದವು! ಈ ರೀತಿಯ ಮರಣ ಮೃದಂಗದ ರುದ್ರನಾಟಕ ಗಂಟೆಗಳ ಕಾಲ ನಡೆಯಿತು. ಆ ಅಂಧಕಾರದಲ್ಲಿ ಗುಟುಕು ಜೀವ ಉಳಿಸಿಕೊಂಡು ಹೋಗೋ ಅಲ್ಲಲ್ಲಿ ದಡಕ್ಕೆ ಅಂಟಿಕೊಂಡಿದ್ದ ಭಕ್ತರು ದೇವರ ನಾಮ ಧ್ಯಾನಿಸುತ್ತಾ ಬೆಳಕಾಗುವುದನ್ನೇ ಕಾಯುತ್ತಿದ್ದರು. ಆ ಭೀಕರ ಮಳೆಯಲ್ಲಿ ವಿದ್ಯುಚ್ಛಕ್ತಿ ಎಲ್ಲಿ ಉಳಿದೀತು?
ಈ ಮಿನಿ ಪ್ರಳಯ ಎಷ್ಟು ಭಯಂಕರವಾಗಿತ್ತು ಎಂದರೆ ಸಣ್ಣಪುಟ್ಟ ಬಂಡೆ, ಅಲ್ಲಿನ ಮಣ್ಣು ಎಲ್ಲ ಕೆಸರುಮಯವಾಗಿ ಎಲ್ಲೆಡೆ ರಾಡಿ ತೇಲುತ್ತಿತ್ತು. ಈ ರೀತಿ ಒಂದು ಇಕ್ಕಟ್ಟಾದ ಕಡೆ ಸಾವಿರಾರು ಜನರು ಒಟ್ಟುಗೂಡಿ, ತಾವಾಗಿಯೇ ತಮ್ಮ ಪ್ರಾಣವನ್ನು ಪಣಕ್ಕೊಡ್ಡಿಕೊಂಡರು.
ಇದೇ ತರಹ ಕೊರೋನಾಗೆ ಮುಂಚಿನ ಯಾತ್ರೆಯಲ್ಲಿ ಘೋರ ಮಳೆ ಸುರಿದಾಗ, ಯಾವೊಂದು ಸಾವುನೋವು ಆಗದೆ ಇದ್ದದ್ದು ಆಶ್ಚರ್ಯವೇ ಸರಿ! ಆಗ ಇಷ್ಟೊಂದು ಜನರ ಸಂತೆ ನೆರೆದಿರಲಿಲ್ಲ ಎಂಬುದೂ ಮುಖ್ಯ. ಜನದಟ್ಟಣೆ ಜಾಸ್ತಿಯಾದಷ್ಟೂ ಈ ಪ್ರಳಯದ ತಾಂಡವನೃತ್ಯ ಸಾವು ನೋವು ಹೆಚ್ಚಿಸಿತು. ಇದನ್ನು ಪ್ರಕೃತಿ ವಿಕೋಪ ಎನ್ನುವುದಕ್ಕಿಂತ ಮಾನವರು ತಾವೇ ಮಾಡಿಕೊಂಡ ಕುಕೃತ್ಯದ ಹತ್ಯಾಕಾಂಡ ಎಂದರೆ ತಪ್ಪಲ್ಲ. ಇಷ್ಟೊಂದು ಜನದಟ್ಟಣೆ ಏಕೆ ಎಂಬುದಕ್ಕಿಂತ, ಇಷ್ಟು ಮಂದಿ ಒಂದೇ ಬಾರಿಗೆ ಹೀಗೆ ಒಗ್ಗೂಡಿರದಿದ್ದರೆ ಖಂಡಿತಾ, ತಂತಮ್ಮ ಮನೆಗಳಲ್ಲಿ ಅವರು ಜೀವಂತ ಉಳಿದಿರುತ್ತಿದ್ದರು.
ಹಠದ ಭಾರಿ ದುಷ್ಪರಿಣಾಮ
ಅಮರ್ ನಾಥ್ ಯಾತ್ರೆಯ ಘೋಷಣೆ ಆಗುತ್ತಿದ್ದಂತೆ, ದೇಶವಿಡೀ ಹಾಹೋ ಎಂದು ಹುಯಿಲೆದ್ದಿತು. ಇದಕ್ಕಾಗಿ ಅಲರ್ಟ್‌ಘೋಷಿಸಿದ್ದೂ ಆಯಿತು. ಆದರೆ ಯಾತ್ರೆ ರದ್ದು ಮಾಡಬಾರದೆಂದು ಭಾರಿ ಒತ್ತಡ ಹೇರಲಾಯಿತು. ಹವಾಮಾನ ಸುಧಾರಿಸಲಿ ಎಂದು ಅಲ್ಲಿಯವರೆಗೂ ಸ್ಥಗಿತಗೊಳಿಸಿದ್ದಾಯಿತು. ಇದಾದ 3-4 ದಿನಗಳ ನಂತರ ಮತ್ತೆ ಪರಿಶೀಲನೆ ನಡೆಯಿತು. ಆದರೆ ಹವಾಮಾನ ಸುಧಾರಿಸುವ ಲಕ್ಷಣ ಕಾಣಲಿಲ್ಲ. ಯಾತ್ರೆ ಶುರುವಾದ ಮೇಲೂ ಈ ಹವಾಮಾನದ ಅನಾನುಕೂಲತೆಯಿಂದಾಗಿ ಯಾತ್ರೆ ರದ್ದಾದದ್ದೂ ಇದೆ. ಆದರೆ ಜನರಿಗೆ ಇದೆಲ್ಲ ಡೋಂಟ್ ಕೇರ್ ಎಂದಾಗಿತ್ತು.
ಅವರಿಗೆ ಇದ್ದ ಒಂದೇ ಗುರಿ, ಆ ಪವಿತ್ರ ಗುಹೆಯವರೆಗೂ ತಲುಪಲೇಬೇಕು, ಯಾವುದೇ ಸ್ಥಿತಿಯಲ್ಲಾದರೂ ಸರಿ. ಈ ಹಠ ತಣಿಸಲೆಂದೇ ಎಷ್ಟೋ ಮಂದಿ ಪ್ರಾಣ ತೆತ್ತರು, ಅಸಂಖ್ಯಾತ ಜನ ನೋವಿನಿಂದ ನರಳಿ ಗಾಯಡೆದರು, ಆದರೆ ಈಗಲೂ ಜನರಿಗೆ ಬುದ್ಧಿ ಬರಲಿಲ್ಲ.
ಯಾತ್ರೆಗೆ ತೆರಬೇಕಾದ ಬೆಲೆ
ಇದಾದ 4 ದಿನಗಳ ನಂತರ ಕೆಲವರಿಗೆ ಬುದ್ಧಿ ಬಂತೆಂದೇ ಹೇಳಬೇಕು, ಏಕೆಂದರೆ ಪ್ರತಿದಿನದ ಟೆಂಟ್ ಬಾಡಿಗೆ 150/ ರೂ. ಬದಲು 6,000/ ಎಂದು ಘೋಷಿಸಲಾಗಿತ್ತು! 20 ರೂ. ನೀರಿನ ಬಾಟಲ್ 100/ ರೂ. ಆಗಿತ್ತು. ಭೋಜನಾಲಯದಲ್ಲಿ ರೇಶನ್ ಸಾಮಗ್ರಿ ಖಾಲಿ ಆಗಿದ್ದರಿಂದ, ಮ್ಯಾಗಿ ಬಿಸ್ಕತ್ತುಗಳ ಬೆಲೆ ಸಹ 50 ಪಟ್ಟು ಹೆಚ್ಚಿತು. ಹಣ ಖಾಲಿಯಾದವರು ವಿಧಿ ಇಲ್ಲದೆ ಸಾಲ ಮಾಡಬೇಕಾಯಿತು.
ಅಲ್ಲಿನ ಒಬ್ಬ ಯಾತ್ರಿಕರು ಹೇಳುತ್ತಾರೆ, ನಮ್ಮ ಪರಿವಾರ ಗುಹೆಯಿಂದ ಕೇವಲ 200 ಮೀ. ದೂರ ಇತ್ತು. ಹಿಮಪಾತದ ಸೂಚನೆ ಬಂದಾಗ ನಾವು ನಡುಗಿಹೋದೆವು. ಅಲ್ಲಿದ್ದ ಟೆಂಟು, ಜನ ಪ್ರವಾಹದ ನೀರಲ್ಲಿ ಕೊಚ್ಚಿಹೋಗುತ್ತಿದ್ದರು. ಎಲ್ಲರೂ ಅಸಹಾಯಕರಾಗಿ, ಭಯಭೀತರಾದೆವು. ಅಂತೂ ಇಂತೂ ವಯಸ್ಸಾದ ನನ್ನ ತಾಯಿ ತಂದೆ, ಅತ್ತೆ ಮಾವಂದಿರನ್ನು ಹೇಗೋ ಮಾಡಿ ಪಂಚತರಣಿವರೆಗೆ ಕರೆತಂದೆ, ಅವರಿಗೆ ಉಸಿರುಗಟ್ಟಿ ತೇಲುಗಣ್ಣು ಮೇಲುಗಣ್ಣಾಯಿತು.
ಲೂಟಿಯ ಮಹಾಮಾರಿ
ಅಷ್ಟಕ್ಕೇ ಕಷ್ಟಕೋಟಲೆ ಮುಗಿಯಲಿಲ್ಲ. ಪಂಚತರಣಿ ತಲುಪಲು ಇವರು ಕುದುರೆ ಸವಾರಿಯ ಸಹಾಯ ಕೇಳಿದಾಗ, ತಾವು 6 ಸಾವಿರ ಕೊಡಬೇಕೆಂದು ಆತ ತಾಕೀತು ಮಾಡಿದ. ಹವಾಮಾನ ಅನುಕೂಲವಿದ್ದಾಗ ಅದು ಕೇವಲ 1500/ ರೂ. ಮಾತ್ರ. ಈ ರೀತಿ ಹಿರಿಯರನ್ನು ಸಾಗಿಸಲು 18 ಸಾವಿರ ಖರ್ಚಾಯಿತು. ಯಾವ ಯಾತ್ರೆಗೆ ಅವರ ಬಜೆಟ್ 25 ಸಾವಿರ ಇತ್ತೋ, ಅದೀಗ 50 ಸಾವಿರ ದಾಟಿತ್ತು.
ಜೊತೆಗೆ ಆ ಹಿರಿಯರ ಆರೋಗ್ಯ ಹದಗೆಟ್ಟಿತು. ಊಟ ತಿಂಡಿ ವ್ಯವಸ್ಥೆಯಂತೂ ಅಧ್ವಾನ ಆಗಿತ್ತು. ಈ ರೀತಿ ಈ ಯಾತ್ರೆಗಾಗಿ 2-3 ಪಟ್ಟು ಹೆಚ್ಚು ಹಣ ಖರ್ಚಾಗಿದ್ದಲ್ಲದೆ, ಕಷ್ಟಕೋಟಲೆಗಳ ಸರಮಾಲೆ ಬಡ್ಡಿಯಾಗಿ ದೊರಕಿತು. ಅಂತೂ ಇಂತೂ ಮನೆ ಸೇರಿದ ಅವರು, ಕನಸಲ್ಲೂ ತೀರ್ಥಯಾತ್ರೆಗೆ ಹೋಗುವುದು ಬೇಡ ಅಂತಾರೆ.
ಚಾರ್ ಧಾಮ್ ಯಾತ್ರೆಯ ಸಂಕಷ್ಟಗಳು
ಇದು ಕೇವಲ ಅಮರ್ ನಾಥ್ ಯಾತ್ರೆ ಒಂದೇ ಅಲ್ಲ, ಹಿಂದೂಗಳ ಮಹತ್ತರವಾದ ಚಾರ್ ಧಾಮ್ ಯಾತ್ರೆಗೆ ಹೊರಟಾಗಲೂ ಈ ಸಂಕಷ್ಟಗಳ ಸರಮಾಲೆ ತಪ್ಪಿದ್ದಲ್ಲ. ಆ ವರ್ಷ ಇದಕ್ಕಾಗಿ ಇಡೀ ದೇಶದ 22 ಲಕ್ಷ ಮಂದಿ ರೆಜಿಸ್ಟ್ರೇಶನ್ ಮಾಡಿಸಿದ್ದರು. ಈ ಯಾತ್ರೆಯಂತೂ ಇನ್ನೂ ದುರ್ಗಮ ಹಾಗೂ ಅಪಾಯಕಾರಿ ಎಂದೇ ಸಾಬೀತಾಗಿದೆ. ಇಷ್ಟಾದರೂ ಮಂದಿ ಇಲ್ಲಿ ಜನದಟ್ಟಣೆ ಮಾಡುವುದನ್ನು ಬಿಡುವುದಿಲ್ಲ.
ಜನ ಇಲ್ಲಿ ಕೇವಲ ಹಿಮಪಾತದಿಂದ ಮಾತ್ರವಲ್ಲ, ತಮ್ಮ ಅನಾರೋಗ್ಯ ಉಲ್ಬಣಗೊಂಡಿದ್ದರಿಂದ ಸಾಯುತ್ತಾರೆ. ಆರಂಭದ 20 ದಿನಗಳಲ್ಲೇ ಸುಮಾರು 100 ಜನ ಸತ್ತಿದ್ದಾರೆ.
ಈ ರೀತಿ ಯಾತ್ರಿಕರ ಸಾವಿನ ಸಂಖ್ಯೆ ಹೆಚ್ಚುತ್ತಿದ್ದಾಗ, ಎಲ್ಲರಿಗೂ ಚಿಂತೆ ಹೆಚ್ಚಿತು. ಆದರೆ ಅವರನ್ನು ರಕ್ಷಿಸುವ ಉಪಾಯ ಯಾರಿಗೂ ಗೊತ್ತಾಗಲಿಲ್ಲ. ಇಷ್ಟೊಂದು ಜನ ಒಂದೇ ಕಡೆ ಏಕೆ ದೊಂಬಿ ಸೇರಿದರೆಂದು ಕೇಳಲಾದೀತೇ? ಅದರಲ್ಲೂ ಅನಾರೋಗ್ಯ ಪೀಡಿತ ಹಿರಿಯರು ಬರಲೇಬಾರದಿತ್ತು. ಕೊನೆಗೆ ಪರಿಸ್ಥಿತಿ ಕೈ ಮೀರಿ, ಉತ್ತರಾಖಂಡ ರಾಜ್ಯದ ಆರೋಗ್ಯ ಸಚಿವರೇ ಮುಂದಾಗಿ, ನಾವು ಯಾತ್ರಿಕರ ಸಾವು ತಡೆಗಟ್ಟಲು ಹರಸಾಹಸ ಮಾಡುತ್ತಿದ್ದೇವೆ, ಇಲ್ಲಿ ಹಿರಿಯರೇ ಹೆಚ್ಚಿರುವುದರಿಂದ ಮುಂದೆ ರೋಗಪೀಡಿತರು ಬರುವ ತೊಂದರೆ ತೆಗೆದುಕೊಳ್ಳಬೇಡಿ, ಎಂದು ಹೇಳಬೇಕಾಯಿತು. ಚಾರ್ ಧಾಮ್ ಯಾತ್ರೆಯಲ್ಲಿ ಸತ್ತವರ ಸಂಖ್ಯೆ ಬಗ್ಗೆ ವಿಶೇಷ ಶೋಧವೇನೂ ನಡೆಯಲಿಲ್ಲ. ಆದರೆ ಅಲ್ಲಿನ ಹೆಲ್ತ್ ಕೇರ್ ಮುಖ್ಯಸ್ಥರ ಪ್ರಕಾರ, ಇಲ್ಲಿ ನಡೆದ ಇಷ್ಟೊಂದು ಸಾವುನೋವುಗಳಿಗೆ ಮುಖ್ಯ ಕಾರಣ, ಅನುಕೂಲಕರ ವಾತಾವರಣ ಇಲ್ಲದಿರುವುದು, ಯಾತ್ರಿಕರ ದುರ್ಬಲ ಇಮ್ಯುನಿಟಿ, ಹವಾಮಾನದ ಅನಿಶ್ಚಿತ ಬದಲಾವಣೆಗಳು. ಅಸಲಿಗೆ ಇಂಥ ದುರ್ಗಮ ಬೆಟ್ಟದ ಪ್ರದೇಶಗಳಿಗೆ ತಮ್ಮದೇ ವಿಭಿನ್ನ ಹವಾಮಾನ ಇರುತ್ತದೆ. ಅಲ್ಲಿ ಒಮ್ಮೆ ಹೆಚ್ಚಿನ ಬಿಸಿಲಿದ್ದರೆ, ಮತ್ತೊಮ್ಮೆ ದಿಢೀರ್ ಮಳೆ ಸುರಿಯುತ್ತದೆ. ಯಾವಾಗ ಬೇಕಾದರೂ ಅತ್ಯಧಿಕ ಥಂಡಿ ಆಕ್ರಮಿಸಬಹುದು. ಅಭ್ಯಾಸ ಇಲ್ಲದ ಕಾರಣ, ಹೊರಗಿನಿಂದ ಬಂದ ಯಾತ್ರಿಕರು ಇದರಿಂದ ಬಹಳ ಸಂಕಟಕ್ಕೆ ಒಳಗಾಗುತ್ತಾರೆ, ಚಾರ್ ಧಾಮ್ ಬೆಟ್ಟ ಪ್ರದೇಶಗಳ ಮಂದಿರಗಳು 1200 ಅಡಿ ಎತ್ತರದಲ್ಲಿರುತ್ತವೆ, ಅಲ್ಲಿಗೆ ತಲುಪಲು ಜನ ವಿಶೇಷ ತರಬೇತಿ ಪಡೆದಿರಬೇಕು. ಅಲ್ಲಿನ ಕಠಿಣಕರ ಪರಿಸ್ಥಿತಿಗೆ ಹೊಂದಿಕೊಳ್ಳಲಾರದ ಹಿರಿಯರು ತತ್ತರಿಸಿ ಹೋಗುತ್ತಾರೆ.
ಸಾವು ಇಲ್ಲಿ ಮಾಮೂಲಿ
ಕೇದಾರ್ ನಾಥ್ ದಾರಿಯಲ್ಲಿ ಹೆಚ್ಚಿನ ಸಾವು ಹೈಪರ್ ಥರ್ಮಿಯಾದಿಂದ ಆಗುತ್ತದೆ, ಇದು ತಡೆಯಲಾಗದ ತೀವ್ರ ಚಳಿಯ ಪರಿಣಾಮವಾಗಿದೆ. ಇದರ ಜೊತೆ ಹೃದಯಾಘಾತ, ಹೃದಯಸ್ತಂಭನಗಳೂ ಮಾಮೂಲಾಗಿಬಿಟ್ಟಿವೆ. ಗಾಳಿಯ ಒತ್ತಡ ಕಡಿಮೆ ಆಗುವಿಕೆ, UV ಕಿರಣಗಳ ಹಿಂಸೆ, ಆಮ್ಲಜನಕದ ಕೊರತೆ ಉಸಿರುಗಟ್ಟಿಸಿ ಇಂಥ ಹಿಂಸೆಗೆ ಮೂಲವಾಗುತ್ತದೆ. ಬಿ.ಪಿ, ಶುಗರ್‌ರೋಗಿಗಳ ತಲೆಯ ಮೇಲೆ ಸಾವು ಕಾದಿರುತ್ತದೆ. ಚಾರ್ ಧಾಮ್ ಯಾತ್ರೆಗಳಲ್ಲಿ ಹೀಗೆ ಪ್ರತಿ ವರ್ಷ ಜನ ಸಾಯುವುದು ಮಾಮೂಲಿ ಆಗಿಬಿಟ್ಟಿದೆ.
ಆಫ್ ಸೀಸನ್ ನಲ್ಲಿ ಇಲ್ಲಿಗೆ ರೋಮಾಂಚನ ಪಡೆಯಲು ಬಂದವರ ಕಷ್ಟಗಳೂ ಹೇಳತೀರದು. ಜನ ಗಿರಿಧಾಮಗಳ ಸುಖ ಅರಸಿ ಬರುತ್ತಾರೆ, ಆದರೆ ಕಷ್ಟಕ್ಕೆ ಸಿಲುಕುತ್ತಾರೆ. ಯಾತ್ರೆಗಳ ಸೀಸನ್ ನಲ್ಲಂತೂ ಲ್ಯಾಂಡ್ ಸ್ಲೈಡಿಂಗ್, ಜೋರು ಮಳೆ, ಚಳಿಗಾಳಿ, ಸಿಡಿಲು ಗುಡುಗಿನ ಹೊಡೆತ, ಹಿಮಪಾತದ ಅಪಾಯ ಇಲ್ಲಿನ ಸಾವುನೋವಿಗೆ ಮೂಲ. ಒಂದು ವಿಶೇಷ ಯಾತ್ರಾ ವೇಳೆಗೇ ಅಂಟಿಕೊಂಡು ಹೊರಟರೆ ಈ ಸಂಕಷ್ಟಗಳು ತಪ್ಪಿದ್ದಲ್ಲ.
ಇಂಥ ಯಾತ್ರೆಗಳಿಗೆ ಹೊರಡುವ ಆಸ್ತಿಕರು ಸರ್ಕಾರಿ ಶೆಡ್ಯೂಲ್ ಹಾಗೂ ಧಾರ್ಮಿಕ ಮುಹೂರ್ತಗಳ ಗುಲಾಮರಾಗಿ ಉಳಿಯುತ್ತಾರೆ. ಇಂಥ ಗಳಿಗೆಯಲ್ಲಿ ಒಂದೇ ಸಲ ಇಷ್ಟೊಂದು ಜನ ಜಮಾಯಿಸಿದರೆ, ಅವರು ಒಟ್ಟಾಗಿ ಹೇಗೆ ತಾನೇ ಪ್ರವಾಸದ ಆನಂದ ಪಡೆಯಲು ಸಾಧ್ಯ? ಇಂಥ ಬೆಟ್ಟ ಪ್ರದೇಶಗಳ ಯಾತ್ರೆಗಳನ್ನು ನಿಧಾನವಾಗಿ ಕ್ರಮಿಸಿದಷ್ಟೂ, ಯಾವ ತರಹದ ಅಪಾಯಗಳೂ ಕಾಡುವುದಿಲ್ಲ, ಜೊತೆಗೆ ಇಡೀ ಯಾತ್ರೆಯನ್ನು ಹಾಯಾಗಿ ಎಂಜಾಯ್ ಮಾಡುತ್ತಾ ಸಾಗಬಹುದು.
ದೂರವಾಗುತ್ತಿರುವ ಮಿಥ್ಯೆಗಳು
ಇದೇ ತರಹ ಇತರೇ ಉ. ಭಾರತೀಯ ಪರ್ವತ ಪ್ರವಾಸಿ ತಾಣಗಳಾದ ಕುಲೂ, ಮನಾಲಿ, ಸಿಮ್ಲಾ, ಡಾರ್ಜಿಲಿಂಗ್, ಕಾಶ್ಮೀರ, ನೈನಿತಾಲ್, ಅಲ್ಮೋರಾ ಮುಂತಾದೆಡೆಯಲ್ಲೂ ತುಸು ಎಚ್ಚರಿಕೆ ವಹಿಸುವುದು ಸೂಕ್ತ. ಇಂಥ ಪ್ರದೇಶಗಳಿಗೆ ಬೇಸಿಗೆಯಲ್ಲಿ ಮಾತ್ರ ಹೋಗುವುದು ಲೇಸು ಎಂದು ಭಾವಿಸುತ್ತಿದ್ದರು, ಆ ಮಿಥ್ಯೆಯೂ ಈಗ ದೂರವಾಗಿದೆ. ಮಳೆಗಾಲದ 2-3 ತಿಂಗಳು ಬಿಟ್ಟು, ಪ್ರವಾಸಿಗರು ಇಂಥ ಕಡೆ ಅದರಲ್ಲೂ ಚಳಿಗಾಲದಲ್ಲೇ ಹೆಚ್ಚಾಗಿ ಬರುತ್ತಿರುತ್ತಾರೆ.
ಅತಿ ಜನ ದಟ್ಟಣೆ ತಪ್ಪಿಸುವುದಲ್ಲದೆ, ಆಫ್ ಸೀಸನ್ ಬೆಟ್ಟಪ್ರದೇಶದ ಪ್ರವಾಸಗಳಿಂದ ಇನ್ನೂ ಅನೇಕ ಲಾಭಗಳಿವೆ. ತಂಗಲು ತುಸು ಅಗ್ಗದ ಹೋಟೆಲ್ ಗಳು ಲಭ್ಯ. ಊಟತಿಂಡಿ ಖರ್ಚು ಸಹ ಜೇಬಿಗೆ ಎಟುಕುವ ರೀತಿಯಲ್ಲೇ ಅನುಕೂಲಕರ ಆಗಿರುತ್ತದೆ. ಆಗ ಅಲ್ಲಿ ಬಳಸುವ ವಾಹನ, ಸವಾರಿಗಳೂ ಅಗ್ಗ. ಮಂದಿರ ಹಾಗೂ ಇತರೆ ಪ್ರೇಕ್ಷಣೀಯ ಸ್ಥಳಗಳೂ ನೂಕು ನುಗ್ಗಲಿನಿಂದ ಮುಕ್ತ ಆಗಿರುತ್ತವೆ.
ದೆಹಲಿಯಿಂದ ಸಾಮಾನ್ಯವಾಗಿ ಬದರೀನಾಥ್, ಕೇದಾರ್ ನಾಥ್‌ಗಳಿಗೆ ಹೊರಡುವವರು ಕಾಶ್ಮೀರಿ ಗೇಟ್ ನಿಂದ ಟ್ಯಾಕ್ಸಿ ಹಿಡಿಯುತ್ತಾರೆ. ಅಲ್ಲಿನ ಒಬ್ಬ ಡ್ರೈವರ್‌ಹೇಳುತ್ತಾರೆ, ತೀರ್ಥಯಾತ್ರೆಗಳ ಸೀಸನ್‌ನಲ್ಲಿ ಟ್ಯಾಕ್ಸಿಗಳ ಬಾಡಿಗೆ, ಜನಜಂಗುಳಿ ಅನುಸರಿಸಿ ಪ್ರತಿ ಕಿಲೋಮೀಟರ್ ಗೆ ಬೇಕೆಂದೇ 10-15 ರೂ. ಹೆಚ್ಚಿಸಲಾಗುತ್ತದೆ. ಯಾರಾದರೂ ದೆಹಲಿಯಿಂದ ಬಂದವರಿಗೆ ಟ್ಯಾಕ್ಸಿ ಬುಕ್ ಮಾಡಿದರೆ, ಅವರಿಗೆ ಇದಕ್ಕಾಗಿ 1 ಬದಿಗೆ 5 ಸಾವಿರಕ್ಕೂ ಹೆಚ್ಚು ಹಣ ತೆರಬೇಕಾಗುತ್ತದೆ. ಇದೇ ಸ್ಥಿತಿ ಹೋಟೆಲ್, ಧರ್ಮಶಾಲೆಗಳಿಗೂ ಅನ್ವಯಿಸುತ್ತದೆ. ಸೀಸನ್ ನಲ್ಲಿ ಬೇಕೆಂದೇ ಇವೆಲ್ಲ 4-5 ಪಟ್ಟು ದರ ಹೆಚ್ಚಿಸಿಕೊಳ್ಳುತ್ತವೆ.
ಇಲ್ಲಿ ವಿಷಯ ಕೇವಲ ಹಣಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲಕ್ಕೂ ಮಿಗಿಲಾದುದು ನಮ್ಮ ಜೀವ, ಅದನ್ನು ಇಂಥ ಕಡೆ ಹೋಗಿ ಕಳೆದುಕೊಳ್ಳಬೇಕೇ? ಜೀವನ ಒಂದು ಗಟ್ಟಿಯಾಗಿ ಉಳಿದರೆ ಮುಂದೆ ಇಂಥ ನೂರಾರು ಯಾತ್ರೆ ಕೈಗೊಳ್ಳಬಹುದು. ಚಾರ್ ಧಾಮ್, ಅಮರ್ ನಾಥ್ ಯಾತ್ರೆಗಳಿಗೆ ಹೋಗಿ ಜೀವ ಕಳೆದುಕೊಳ್ಳುರಿಗೆ ಅಪಾರ ಪುಣ್ಯ ಅಥವಾ ಸ್ವರ್ಗ ಪ್ರಾಪ್ತಿ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಜೊತೆಗೆ ಅವರು ಪ್ರವಾಸದ ಆನಂದ ಅನುಭವಿಸಲಿಕ್ಕಂತೂ ಸಾಧ್ಯವೇ ಇಲ್ಲ.
ಜೊತೆಗೆ ಇಂಥ ಹಿರಿಯರನ್ನು ಕರೆತಂದವರು ಪ್ರವಾಸವಿಡೀ ಕಷ್ಟ ಪಡುತ್ತಲೇ ಇರಬೇಕು. ಯಾಕಾದರೂ ಇಂಥ ಅಪಾಯಕಾರಿ ಯಾತ್ರೆಗೆ ಹೊರಡಲು ನಿರ್ಧರಿಸಿದೆವೋ ಎಂದು ಮನೆಮಂದಿಯ ಕೌಟುಂಬಿಕ ಕಲಹಕ್ಕೆ ಇದು ನಾಂದಿ ಹಾಡುತ್ತದೆ.
– ಪ್ರತಿನಿಧಿ
ಪ್ರವಾಸಕ್ಕೆ ಹೊರಡಲಿದ್ದೀರಾ?
ಹವಾಮಾನ ಇಲಾಖೆಯ ವರದಿ ಗಮನಿಸಿಕೊಂಡೇ ನಿಮ್ಮ ಪ್ರವಾಸ ನಿಗದಿಪಡಿಸಿಕೊಳ್ಳಿ. ಅಮರ್ ನಾಥ್ ಯಾತ್ರಿಕರು ಈ ವಿಷಯ ನಿರ್ಲಕ್ಷಿಸಿ, ಅಪಾರ ಸಂಕಟಕ್ಕೆ ಗುರಿಯಾದರು. ಬಿಪಿ, ಶುಗರ್, ಹೃದ್ರೋಗ ಅಥವಾ ಇನ್ನಾವುದೇ ಗಂಭೀರ ಕಾಯಿಲೆ ಇದ್ದರೆ, ಬೆಟ್ಟ ಪ್ರದೇಶದ ತೀರ್ಥಯಾತ್ರೆ ಬೇಡವೇ ಬೇಡ! ನಿಮ್ಮ ಆರೋಗ್ಯಕ್ಕೆ ಪೂರಕವಾಗಿರುವಂಥ, ವೈದ್ಯರು ಸೂಚಿಸಿದ ಸಕಲ ಸಲಹೆಗಳೊಂದಿಗೆ, ಬೇಕಾದ ಮದ್ದು, ಮಾತ್ರೆ, ಔಷಧಿ, ಇಂಜೆಕ್ಷನ್ ಜೊತೆ ಹೊರಡಿ. ಇಂಥ ತೀರ್ಥಯಾತ್ರೆಗಳ ನಡುವೆ ಪರ್ವತ ಶ್ರೇಣಿಗಳ ಬೇಸ್ ಕ್ಯಾಂಪ್ ನಲ್ಲಿ ಅಗತ್ಯವಾಗಿ ನಿಮ್ಮ ಮೆಡಿಕಲ್ ಚೆಕ್ ಅಪ್ ಮಾಡಿಸಿ. ನಿಮ್ಮ ವೈದ್ಯರು ಯಾತ್ರೆ ಬೇಡವೆಂದು ಸಲಹೆ ನೀಡಿದರೆ, ಒಪ್ಪಿಕೊಳ್ಳಿ. ಅನಗತ್ಯ ಹಠ ಬೇಡ! ಸಾಕಷ್ಟು ಉಣ್ಣೆ ಬಟ್ಟೆಗಳು, ಸ್ವೆಟರ್, ಸ್ಕಾರ್ಫ್, ಮಫ್ಲರ್, ಶಾಲು ಎಲ್ಲಾ ಇರಲಿ. ಮುಖ್ಯವಾಗಿ ಚಾರ್ ಧಾಮ್ ಯಾತ್ರೆಗೆ ಹೊರಟವರು ಇಂಥವನ್ನು ನಿರ್ಲಕ್ಷಿಸಲೇಬಾರದು. ಮೊಬೈಲ್ ಫೋನ್ ಬ್ಯಾಟರಿ ಸದಾ ಫುಲ್ ಇರಲಿ, ಅಗತ್ಯವಾಗಿ ಪವರ್ ಬ್ಯಾಂಕ್ ಕೊಂಡೊಯ್ಯಿರಿ. ಅವಕಾಶವಾದಾಗ ಎರಡನ್ನೂ ರೀಚಾರ್ಜ್ ಮಾಡಿಕೊಳ್ಳುತ್ತಿರಿ. ಹೊರಗಿನ ಪ್ರಪಂಚದ ಸಂಪರ್ಕ ಎಂದೂ ತಪ್ಪದಿರಲಿ.
ಸತತ 4-5 ವಾರಗಳ ಯಾತ್ರೆ ಬೇಡ. ಬಹಳ ದಣಿದು ಹೋದೀರಿ, ಆದಷ್ಟೂ 1-2 ವಾರಗಳದ್ದೇ ಪ್ಲಾನ್ ಮಾಡಿ. ಆದಷ್ಟೂ ಮಧ್ಯೆ ಮಧ್ಯೆ ಒಂದೆಡೆ ತಂಗಿ, ನಂತರ ಪ್ರಯಾಣ ಮುಂದುವರಿಸಿ. ಕಡಿದಾದ ಮೆಟ್ಟಿಲು ಏರಿ ಮೇಲೆ ಹೋಗಬೇಕಾದಾಗ, ಅತಿ ಉತ್ಸಾಹ ಬೇಡ, ಎಚ್ಚರಿಕೆಯಿಂದ ಮುನ್ನಡೆಯಿರಿ. ಬಹಳ ಸುಸ್ತಾದಾಗ, ಅಗತ್ಯ ವಿಶ್ರಾಂತಿ ಪಡೆದು, ನೀರು ಕುಡಿದು ಸುಧಾರಿಸಿಕೊಂಡು ಮುಂದುವರಿಯಿರಿ. ಇಂಥ ಪರ್ವತ ಪ್ರದೇಶಗಳ ಥಂಡಿ ಸಹಿಸಲು ನಡುನಡುವೆ ಬಿಸಿ ಅಥವಾ ತಣ್ಣೀರು ಸೇವಿಸುತ್ತಿರಿ. ಹೀಗಾಗಿ ನೀರಿನ ಸಂಗ್ರಹ ಸದಾ ಸುರಕ್ಷಿತವಾಗಿರುವಂತೆ ಪ್ರಯಾಣ ಇರಲಿ. ಇಷ್ಟೆಲ್ಲ ಎಚ್ಚರಿಕೆ ವಹಿಸಿದ ಮೇಲೂ ಅನಾರೋಗ್ಯ ಹೆಚ್ಚಾಗಿ ಕಾಡಿದರೆ, ತಕ್ಷಣ ನಿಮ್ಮ ಪ್ರವಾಸ ರದ್ದುಪಡಿಸಿ ಮನೆ ದಾರಿ ಹಿಡಿಯಿರಿ. ಸುರಕ್ಷಿತ ತಾಣ ತಲುಪಿದಾಕ್ಷಣ, ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಎಲ್ಲಕ್ಕೂ ಮುಖ್ಯ ವಿಚಾರ ಎಂದರೆ, ಜನದಟ್ಟಣೆಯ ಭಾಗ ಆಗದಿರಿ. ಯಾವುದೇ ಪ್ರಕೃತಿ ವಿಕೋಪ ಎದುರಾದರೂ, ಗುಂಪಿನ ನಡುವೆ ನುಸುಳುವ ಬದಲು, ಸುರಕ್ಷಿತ ಜಾಗ ಹುಡುಕಿಕೊಳ್ಳಿ. ಇಂಥ ಅಪಾಯ ಎದುರಾದಾಗ ಯಾವ ದೇವರಾಗಲಿ, ಸರ್ಕಾರವಾಗಲಿ ನಿಮ್ಮನ್ನು ಕಾಪಾಡಲಾರದು. ಹೀಗಾಗಿ ನಿಮ್ಮ ಸುರಕ್ಷೆ ನಿಮ್ಮ ಕೈಯಲ್ಲೇ ಎಂಬುದನ್ನು ನೆನಪಿಡಿ!
ಇಂಥ ಯಾತ್ರೆಗಳಿಗೆ ಹೊರಡುವ ಆಸ್ತಿಕರು ಸರ್ಕಾರಿ ಶೆಡ್ಯೂಲ್ ಹಾಗೂ ಧಾರ್ಮಿಕ ಮುಹೂರ್ತಗಳ ಗುಲಾಮರಾಗಿ ಉಳಿಯುತ್ತಾರೆ. ಇಂಥ ಗಳಿಗೆಯಲ್ಲಿ ಒಂದೇ ಸಲ ಇಷ್ಟೊಂದು ಜನ ಜಮಾಯಿಸಿದರೆ, ಅವರು ಒಟ್ಟಾಗಿ ಹೇಗೆ ತಾನೇ ಪ್ರವಾಸದ ಆನಂದ ಪಡೆಯಲು ಸಾಧ್ಯ? ಇಂಥ ಬೆಟ್ಟ ಪ್ರದೇಶಗಳ ಯಾತ್ರೆಗಳನ್ನು ನಿಧಾನವಾಗಿ ಕ್ರಮಿಸಿದಷ್ಟೂ, ಯಾವ ತರಹದ ಅಪಾಯಗಳೂ ಕಾಡುವುದಿಲ್ಲ, ಜೊತೆಗೆ ಇಡೀ ಯಾತ್ರೆಯನ್ನು ಹಾಯಾಗಿ ಎಂಜಾಯ್ ಮಾಡುತ್ತಾ ಸಾಗಬಹುದು.
ಇಲ್ಲಿ ವಿಷಯ ಕೇವಲ ಹಣಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲಕ್ಕೂ ಮಿಗಿಲಾದುದು ನಮ್ಮ ಜೀವ, ಅದನ್ನು ಇಂಥ ಕಡೆ ಹೋಗಿ ಕಳೆದುಕೊಳ್ಳಬೇಕೇ? ಜೀವನ ಒಂದು ಗಟ್ಟಿಯಾಗಿ ಉಳಿದರೆ ಮುಂದೆ ಇಂಥ ನೂರಾರು ಯಾತ್ರೆ ಕೈಗೊಳ್ಳಬಹುದು. ಚಾರ್ ಧಾಮ್, ಅಮರ್ ನಾಥ್ ಯಾತ್ರೆಗಳಿಗೆ ಹೋಗಿ ಜೀವ ಕಳೆದುಕೊಳ್ಳುವವರಿಗೆ ಅಪಾರ ಪುಣ್ಯ ಅಥವಾ ಸ್ವರ್ಗ ಪ್ರಾಪ್ತಿ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಜೊತೆಗೆ ಅವರು ಪ್ರವಾಸದ ಆನಂದ ಅನುಭವಿಸಲಿಕ್ಕಂತೂ ಸಾಧ್ಯವೇ ಇಲ್ಲ.