ಪಾಪ.... ಹೃದಯದ್ದೇನು ತಪ್ಪು? : ರಾಜನಾದವನು ಸಾಧಾರಣ ಹುಡುಗಿಯನ್ನು ಬಯಸಿದರೆ ಅದರಲ್ಲಿ ಅವನ ಹೃದಯದ್ದೇನು ತಪ್ಪು? ಜೀರಾವಾಂಗ್ ಕಾರ್ನ್ ಎಂಬ ಹೆಸರಿನ ಈತ ಥೈಲೈಂಡ್‌ನ ಮಹಾರಾಜ. ತನ್ನ ರಕ್ಷಣಾಪಡೆಯ ದಳದ ಮುಖ್ಯಸ್ಥೆ ಸುಥಿಡಾ ಟಿಡ್‌ಜಾಯಿ ಎಂಬಾಕೆಯನ್ನು ಮದುವೆ ಆಗಿಯೇಬಿಟ್ಟ! ಈಕೆ ಹಿಂದೆ ಥೈಏರ್‌ವೇಸ್‌ನಲ್ಲಿ ಗಗನಸಖಿ. ರಾಜನ ಕೃಪಾದೃಷ್ಟಿ ಬಿದ್ದು ರಕ್ಷಣಾಪಡೆಗೆ ಹೆಡ್ ಆಗಿ ಈಗ ಸಿಂಹಾಸನಕ್ಕೇ ಪಾಲುದಾರಳಾಗಿದ್ದಾಳೆ! ಯಾರು ಏನೇ ಗುಸು ಗುಸು ಎಂದುಕೊಳ್ಳಲಿ, ಪ್ರೇಮ ಕುರುಡು ಎಂಬುದು ಇದಕ್ಕೇ ಏನೋ....?
ಮುಗುಳ್ನಗು ಎಂದರೆ ಹೀಗಿರಬೇಕು! : ಮುಗುಳ್ನಗು, ಮಂದಹಾಸ ಸದಾ ಎಲ್ಲಾ ಕಡೆ ಒಂದು ಸಂತಸದ ವಾತಾವರಣ ಸೃಷ್ಟಿಸುತ್ತದೆ. ಅಮೆರಿಕಾದ ರಿವರ್‌ಟೌನ್‌ನ ಒಂದು ಶಾಲೆಯಲ್ಲಿ ಈ ತರುಣಿಯರು ಮಾರ್ಚ್ 8ರ ಸಂದರ್ಭದಲ್ಲಿ ಬೀರಿದ ಈ ಮುಗುಳ್ನಗು ಇಡೀ ಶಾಲೆಯನ್ನು ಸಂತಸದ ಅಲೆಯಲ್ಲಿ ತೋಯಿಸಿದೆ.
ಪ್ರಕೃತಿಯೊಂದಿಗೆ ಕಿತಾಪತಿ ಸಲ್ಲದು : ಕ್ಲೈಮೆಟ್ ಚೇಂಜ್ ಕುರಿತು ಕೂಗು ಕೇಳಿಬಂದರೆ ಅದು ಯುವ ಜನತೆಯದೇ ಆಗಿರಬೇಕು. ಇವರು ಮುಂದಿನ 30-40 ವರ್ಷಗಳಲ್ಲಿ ಭಯಂಕರ ಬಿಸಿಲು, ಚಳಿ, ಮಳೆ, ಚಂಡಮಾರುತಗಳಿಗೆ ಈಡಾಗಲಿದ್ದಾರೆ. ಮುಖ್ಯವಾಗಿ ವೃದ್ಧರು ಹೆಚ್ಚು ಕಷ್ಟಕ್ಕೆ ಗುರಿಯಾಗುತ್ತಾರೆ. ಅಮೆರಿಕಾದ ಟೆಕ್ಸಾಸ್ ರಾಜ್ಯದಲ್ಲಿ ಪೌಡರ್‌ಹಾರ್ನ್ ಲೇಕ್ ಸುತ್ತಮುತ್ತಲೂ ಈ ಉರಿ ಬೇಸಿಗೆಯ ಏಪ್ರಿಲ್ ಮೇ ಸೀಸನ್‌ಲ್ಲಿ ಚಳಿ ಹೆಪ್ಪುಗಟ್ಟುತ್ತಿದೆಯಂತೆ! ಇದಂತೂ ಕ್ಲೈಮೆಟ್ ಚೇಂಜ್‌ನ ನೇರ ಪರಿಣಾಮ! ಇಲ್ಲಿನ ವಿಡಂಬನೆ ಎಂದರೆ ಇದನ್ನು ವಿರೋಧಿಸಲು ಲೇಕ್ ಬಳಿ ಒಟ್ಟುಗೂಡಿದ ಈ ಯುವಜನತೆಯೇ ವಿಶ್ವಾದ್ಯಂತದ ಅಸಂಖ್ಯಾತ ಪ್ರಾಡಕ್ಟ್ಸ್ ತರಿಸಿ ಬಳಸುತ್ತಾರೆ, ವೇಸ್ಟ್ ಮಾಡುತ್ತಾರೆ. ಇಂಥ ಕ್ಲೈಮೆಟ್ ಚೇಂಜ್‌ಗೆ ಅಸಲಿ ಕಾರಣವೆಂದರೆ ಈ ಯುವಜನತೆಯ ಬೇಡಿಕೆ ಪೂರೈಸಲೆಂದೇ ವಿಶ್ವಾದ್ಯಂತ ಕಾರ್ಖಾನೆಗಳು ಹೆಚ್ಚುತ್ತಲೇ ಇವೆ.
ನಾವು ಯಾರಿಗೇನು ಕಡಿಮೆ? : ಮೋಟರ್ ಸ್ಪೋರ್ಟ್ಸ್ ನಲ್ಲೂ ಹೆಂಗಸರಿಗೆ ಇದೀಗ ಹೇರಳ ಅವಕಾಶಗಳು ಲಭ್ಯ. ಸಾಮಾನ್ಯವಾಗಿ ಇದಕ್ಕೆ ಗಂಡಸರ ರೇಸಿಂಗ್ ಪಂದ್ಯವೆಂದೇ ಹಣೆಪಟ್ಟಿ ಇದೆ. ಆದರೆ ಅಸಲಿ ಸಂಗತಿ ಎಂದರೆ ಈ ಪೈಪೋಟಿಯ ಆಟ ನಿಂತಿರುವುದೇ ಬುದ್ಧಿಂತಿಕೆ ಆಧಾರದ ಮೇಲೆ, ಅದರಲ್ಲಿ ಹೆಂಗಸರು ಮಹಾ ಚಾಣಾಕ್ಷರು!
ಯೋಚನಾ ಧಾಟಿ ಬದಲಿಸಿಕೊಳ್ಳಿ : ಪಾಕಿಸ್ತಾನ ಎಂದರೆ ತೀರಾ ಹೀನಾಯ ಎಂದೇನೂ ಭಾವಿಸದಿರಿ. ಅದರ ಡಿಸೈನರ್‌ಗಳ ಫ್ಯಾಷನ್ ಶೋ ಲಂಡನ್‌ನಲ್ಲೂ ನಡೆಯುತ್ತದೆ. ಇತ್ತೀಚೆಗೆ ರಿಯಾತ್‌ನಲ್ಲಿ ಒಂದು ಶೋ ನಡೆದು, 30 ಡಿಸೈನರ್ಸ್ ಹಾಜರಿದ್ದರು. ಎರಡೂ ದೇಶಗಳು ಬೇರೆ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ, ಇಂಥ ಕಲೆಯ ವಿಷಯದಲ್ಲಿ ಜಗಳ ಬೇಡ. ಹಾಗಾದಾಗ ಎರಡರ ರಾಜಕೀಯದ ಮಧ್ಯೆ ಸೌಂದರ್ಯ ಮೂಲೆಗುಂಪಾದೀತು.
ಇಂಥದ್ದಕ್ಕೆ ಪ್ರಯತ್ನಿಸಿ ಯಾಮಾರದಿರಿ! : ಕೇವಲ ಇಲ್ಲಿ ಡ್ಯಾನ್ಸರ್‌ನ್ನು ಮಾತ್ರ ಗಮನಿಸಿ, ಆಕೆಯಂತೆ ನೀವು ಪ್ರಯತ್ನಿಸಲು ಹೋಗಿ ಪೇಚಿಗೆ ಸಿಲುಕದಿರಿ. ಆಕೆ ಅಷ್ಟು ವೇಗವಾಗಿ ಸುತ್ತು ಹಾಕುವಾಗ ಇತರರು ಇದಕ್ಕೆ ಸಾಟಿ ಆಗಲಾರರು. ಇತ್ತೀಚೆಗೆ ಕೊಲಂಬಿಯಾದಲ್ಲಿ ನಡೆದ ಈ ಅಂತಾರಾಷ್ಟ್ರೀಯ ನೃತ್ಯೋತ್ಸವದಲ್ಲಿ ಅಲ್ಲಿನ ಸಂಗೀತ ಸಂಸ್ಕೃತಿಗಳ ಸಂಗಮವಾದ ಇದರ ಮಹತ್ವ, ಸ್ಪ್ಯಾನಿಶ್ ಡ್ಯಾನ್ಸರ್ಸ್ ಪ್ರತಿಭೆಗೆ ನಾಂದಿಯಾಗಿತ್ತು.