“ಅಕ್ಕಾ….. ಬಾಗಿಲು ಹಾಕ್ಕೊ, ಇದೋ ನಾನೀಗ ಹೊರಟೆ. ಇವತ್ತು ಬರುವಾಗ ಸ್ವಲ್ಪ ತಡವಾಗಬಹುದು. ನನ್ನ ಸ್ಕೂಟಿ ಸರ್ವೀಸಿಂಗ್‌ ಬಿಡಬೇಕು…..” ನಸೀಮಾ ಜೋರಾಗಿ ಹೇಳಿದಳು.

“ಅಪ್ಪ ಹೇಳಿದ್ರಲ್ಲ…. ಮನೆಯ ಕಂದಾಯದ ಹಣ ಕಟ್ಟಬೇಕು ಅಂತ, ಅದನ್ನು ಮರೆಯಬೇಡ.”

“ಹ್ಞೂಂ….ಹ್ಞೂಂ…. ನೆನಪಿದೆ ಬಿಡು. ರಿಯಾದ್‌-ಶಗುಫ್ತಾರ ವಿವಾಹ ವಾರ್ಷಿಕೋತ್ಸವ ಹತ್ತಿರ ಬಂತಲ್ಲ….. ಅವರಿಗಾಗಿ ಗಿಫ್ಟ್ ತಗೋಬೇಕು ಅದೂ ಇವತ್ತೇ……”

“ಸರಿ…. ಸರಿ….. ಏನೇ ಇರಲಿ ಬೇಗ ಬಂದು ಬಿಡು…. 2-3 ಗಂಟೆಗಿಂತ ಖಂಡಿತಾ ತಡ ಮಾಡಬಾರದು!” ಎನ್ನುತ್ತಾ ಅಕ್ಕಾ ಬಾಗಿಲು ಹಾಕಿಕೊಂಡಳು.

ನಸೀಮಾ ಇದೀಗ ಮುಂದಿನ 2-3 ಗಂಟೆಗಳವರೆಗೆ ಬಿಲ್‌ಕುಲ್‌ ಸ್ವತಂತ್ರಳಾಗಿದ್ದಳು. ಅವಳು ಮನೆಯಿಂದ ಹೊರಗೆ ಹೊರಡುವಾಗೆಲ್ಲ ಇಂತಿಷ್ಟೇ ಸಮಯಕ್ಕೆ ಹಿಂದಿರುಗಿ ಬಂದುಬಿಡಬೇಕು ಎಂದು ತಾಕೀತು ಮಾಡಲಾಗುತ್ತಿತ್ತು. ಆ ಎಚ್ಚರಿಕೆಯ ನುಡಿಗಳು ಸದಾ ಅವಳನ್ನು ಕಂಟ್ರೋಲ್ ಮಾಡುತ್ತಲೆ ಇರುತ್ತವೆ. ಅಪರಾಧ ಪ್ರಪಂಚದ ಕುರಿತು, ಹೆಣ್ಣಾದ ಕಾರಣ ಸದಾ ಅಪಾಯದ ಮಧ್ಯೆ ಸಿಲುಕಬೇಕಾದ ಭಯ, ಮನೆತನದ ಮರ್ಯಾದೆ ಸದಾ ಉನ್ನತಾಗಿರಬೇಕೆಂಬ ಆರ್ಡರ್‌….. ಇವೆಲ್ಲ ಉಳಿಸಿಕೊಳ್ಳುವ ಸಲುವಾಗಿ ಅವಳು ಬೇಗ, ಬೇಗ ತನ್ನೆಲ್ಲ ಹೊರಗಿನ ಕೆಲಸ ಮುಗಿಸಿ ಮನೆ ಸೇರಿಕೊಂಡು ಪ್ರತಿಸಲ ನಿಟ್ಟುಸಿರಿಡುತ್ತಾಳೆ.

ಛೇ….ಛೇ….. ತಾನು ಇದೆಂಥ ಮೂಢನಂಬಿಕೆಗಳ ಸಂದಿಗ್ಧತೆಗಳ ಮಧ್ಯೆ ಸಿಲುಕಿದ್ದೇನೆ….. ಇದೆಲ್ಲ ಸಾಲದೆಂದು ಬುರ್ಖಾ, ತಲೆಯ ಮೇಲೊಂದು ಹಿಜಾಬ್‌ (ಸ್ಕಾರ್ಫ್‌ ತರಹ ಪೂರ್ತಿ ತಲೆ, ಕುತ್ತಿಗೆ ಕವರ್‌ ಮಾಡುವುದು) ಮುಂತಾದುವನ್ನೂ ಸಂಭಾಳಿಸಬೇಕು. ಮನೆಯವರಿಗೆ ಹೇಗೂ ಗೊತ್ತಾಗಲ್ಲ, ತಾನೇಕೆ ಈ 2-3 ಗಂಟೆಗಳ ಕಾಲ ಇನ್ನೆಲ್ಲ ತೆಗೆದಿರಿಸಿ ಹಾಯಾಗಿ ಓಡಾಡಬಾರದು…..?

ನಸೀಮಾಳ ತಂದೆ ಹೋಮಿಯೋಪತಿ ಡಾಕ್ಟರ್‌. 70ರ ಹರೆಯದಲ್ಲೂ ಅವರ ಪ್ರಾಕ್ಟೀಸ್‌ ಬಲು ಜೋರಾಗಿ ನಡೆದಿತ್ತು. ಇವಳ ಹಿಂದಿನ ತಲೆಮಾರಿನಿಂದ ಆ ಮನೆತನಕ್ಕೆ ಇಡೀ ಮೊಹಲ್ಲಾದಲ್ಲಿ ಅತಿ ಉತ್ತಮ, ದೂರಾಲೋಚನೆಯ ಮಂದಿ ಎಂಬ ಹೆಸರಿತ್ತು.

ಹೆತ್ತವರಿಗೆ ಇವರು 6 ಜನ ಹೆಣ್ಣುಮಕ್ಕಳು. ನಸೀಮಾ ಎಲ್ಲರಿಗಿಂತ ಕಿರಿಯಳು. ಅವಳು ಮೈಕ್ರೋಬಯಾಲಜಿಯಲ್ಲಿ ಎಂಎಸ್ಸಿ ಪದವೀಧರೆ. ಇವಳ ಅಕ್ಕಂದಿರು ಸಹ ಪಿ.ಯು.ಸಿ. ಡಿಗ್ರಿ ಪಡೆದ ಪದವೀಧರೆಯರು. ಅಕ್ಕತಂಗಿಯರು ಬಲು ಪರಿಶ್ರಮ ವಹಿಸಿ, ನಿಷ್ಠೆಯಿಂದ ಅತ್ಯುತ್ತಮ ಫಲಿತಾಂಶ ಪಡೆದು ಓದಿನಲ್ಲಿ ಮುಂದೆ ಬಂದರು. ಓದಿನ ನಂತರ ಉತ್ತಮ ಕೆರಿಯರ್‌ ರೂಪಿಸಿಕೊಳ್ಳ ಬೇಕೆಂಬುದು ಅವಳಾಸೆ.

ಅವಳಿಗೆ ಒಂದು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಜೀವವಶಾಸ್ತ್ರ ಬೋಧಿಸುವ ಉತ್ತಮ ನೌಕರಿ ಸಿಕ್ಕಿತ್ತು. ಆದರೆ ಮಹಾ ಕಟ್ಟುನಿಟ್ಟಿನ ಕಂದಾಚಾರದ ಸಂಕೋಲೆಗೆ ಸಿಲುಕಿದ ಅವರು ಈ ಕಿರಿ ಮಗಳಿಗೆ ಆ ಮಟ್ಟದ ಆರ್ಥಿಕ ಸ್ವಾತಂತ್ರ್ಯ ಕೊಡಲು ಬಯಸಲಿಲ್ಲ, ಹೀಗಾಗಿ ಕೆಲಸಕ್ಕೆ ಕತ್ತರಿ ಬಿದ್ದಿತ್ತು.

ಹಿರಿಯಕ್ಕಾ ಜುಬೇದಾ ಮಾತ್ರವೇ ಹೆಚ್ಚು ಓದದವಳು. ಬೇರೆಯವರೆಲ್ಲ ಚೆನ್ನಾಗಿಯೇ ಕಲಿತಿದ್ದರು. ಏನಾದರೇನು? ಅವರೆಲ್ಲ ಈಗ ತಂತಮ್ಮ ಅತ್ತೆಮನೆಯಲ್ಲಿ ಕಂದಾಚಾರದ ಕಪಿಮುಷ್ಟಿಗೆ ಸಿಲುಕಿ ಬುರ್ಖಾಧಾರಿಗಳಾಗಿ ಕೈದಿಗಳಾಗಿದ್ದರು. ಹ್ಞಾಂ…, ನಸೀಮಾ ಪ್ರಕಾರ ಅವರೆಲ್ಲ ಪಕ್ಕಾ ಕೈದಿಗಳೇ! ಅವರು ತಮ್ಮ ಯೋಗ್ಯತೆ, ಶಿಕ್ಷಣ, ಕಲಿಕೆಗಳನ್ನೆಲ್ಲ ಸಂಪ್ರದಾಯದ ಪೆಠಾರಿಯಲ್ಲಿ ಕೂಡಿಟ್ಟು, ಬಂದ ಪರಿಸ್ಥಿತಿಗೆ ತಲೆಬಾಗಿ ಅದರಲ್ಲಿ ಸುಖ ಕಾಣಲು ಯತ್ನಿಸುತ್ತಿದ್ದರು.

ಗಂಡನ ಕೋಪ, ಸಿಡಿಗುಟ್ಟುವಿಕೆ, ಅವನ ಬೈಗುಳ….. ಎಲ್ಲವನ್ನೂ ನಗುನಗುತ್ತಾ ಸಹಿಸಿಕೊಂಡು ತಮ್ಮ ಮನೆಗಳೆಂಬ ಪಂಜರದಲ್ಲಿ ಬಂಧಿಗಳಾಗಿದ್ದರು. ಆ ನಾಲ್ವರು ಅಕ್ಕಂದಿರೂ ಮನೆಗೆಲಸದ ಜೊತೆ ಜೊತೆಗೆ ಗಂಡಸರ ನೆರವಿಲ್ಲದೆ ಹೊರಗಿನ ಕೆಲಸ ಮಾಡಿಕೊಂಡು ಬರುವುದರಲ್ಲೂ ಗಟ್ಟಿಗರು. ಆದರೆ ಜುಬೇದಾ ಅಕ್ಕಾ ಮಾತ್ರ 4ನೇ ಕ್ಲಾಸು ದಾಟದೆ, ಮನೆಯಲ್ಲೇ ಉಳಿದಳು. 15 ದಾಟುವುದರೊಳಗೆ ಅವಳ ಮದುವೆಯಾಯಿತು. ಮಗ ರಿಯಾದ್‌ನಿಗೆ 10 ತುಂಬುವ ಮೊದಲೇ ಗಂಡನಿಂದ ತಲಾಖ್‌ ಪಡೆದು, ತಾಯಿ ಇಲ್ಲದ ತವರಿಗೆ ಬಂದು ಶಾಶ್ವತವಾಗಿ ನೆಲೆನಿಂತಳು. ಹೀಗಾಗಿ ಹಿರಿಯಕ್ಕ ಮಾತ್ರವಲ್ಲದೆ, ಎಲ್ಲಾ ತಂಗಿಯರಿಗೂ ತಾಯಿಯಾಗಿ ಕರ್ತವ್ಯ ನಿವರ್ಹಿಸುತ್ತಾ, ತಂದೆಯನ್ನೂ ನೋಡಿಕೊಳ್ಳುವಳು.

ನಸೀಮಾಳ 2ನೇ ಅಕ್ಕಾ ಜೀನತ್‌ ಹತ್ತಿರದ ಹುಬ್ಬಳ್ಳಿಯಲ್ಲೇ ಮದುವೆಯಾಗಿ ನೆಲೆಸಿದ್ದಳು. ಹೈಸ್ಕೂಲು ಓದಿಗಾಗಿ ಅವಳ ಮಗಳು ಶಗುಫ್ತಾ ಇವರ ಮನೆಯಲ್ಲೇ ಓದಲೆಂದು ಬಂದು ಇದ್ದುಬಿಟ್ಟಳು. ರಿಯಾದ್‌ ಮತ್ತು ಶಗುಫ್ತಾರ ನಡುವೆ ಕಾಲೇಜಿನ ಓದಿನ ಜೊತೆ ಪ್ರೀತಿ ಪ್ರೇಮ ಗಾಢವಾಗಿ ಬೆಳೆದಾಗ, ಹಿರಿಯರ ನಿಶ್ಚಯದಂತೆ ಅವರಿಬ್ಬರ ಮದುವೆ ನಡೆಯಿತು.

ಈ ರೀತಿ ನಸೀಮಾಳ ಮನೆಯಲ್ಲೀಗ 5 ಮಂದಿ ಸದಸ್ಯರು ಖಾಯಂ ಆದರು. ಅಲ್ಲಿ ಎಲ್ಲ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಹೆಣ್ಣುಮಕ್ಕಳು ಮಾತ್ರ ಎಂದೂ ಸ್ವಾತಂತ್ರ್ಯದ ಲಕ್ಷ್ಮಣರೇಖೆ ಮೀರುವಂತೆ ಇರಲಿಲ್ಲ. ಆ ವಿಷಯದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.ಇಡೀ  ಮನೆ ತುಂಬಾ ಮುಸಲ್ಮಾನ ಪಂಥದ ಕಟ್ಟಾ ಸಂಪ್ರದಾಯಗಳು ದಟ್ಟವಾಗಿ ಹರಡಿದ್ದವು. ಅಂದಿನ ಕಾಲದವರಾದ ನಸೀಮಾಳ ತಂದೆ ಸ್ವತಃ ಹೋಮಿಯೋಪಥಿ ವೈದ್ಯರಾಗಿದ್ದರೂ, ಕಾಲಕ್ಕೆ ತಕ್ಕಂತೆ ಆಧುನಿಕತೆ ರೂಢಿಸಿಕೊಂಡಿದ್ದರೂ, ತಮ್ಮ ಮನೆತನದ ಹೆಣ್ಣುಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವಲ್ಲಿ ಹಿಂಜರಿಯುತ್ತಿದ್ದರು. ಅವರ ವಾಡೆ ಇದ್ದುದು ಧಾರವಾಡದಲ್ಲಿ. ಅದೇನೂ ಬೆಂಗಳೂರಿನಂಥ ಪಾಶ್‌ ಏರಿಯವಲ್ಲ, ಅಕ್ಕಪಕ್ಕದಲ್ಲಿ ಏನಾದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂದುಕೊಳ್ಳುವಂಥವರಲ್ಲ. ಸರೀಕರು ಏನಾದರೂ ಆರೋಪಿಸಬಹುದೇನೋ ಎಂದು ಆ ವಿಷಯಕ್ಕೆ ಅಂಜುತ್ತಿದ್ದರು. ಆದರೆ ಸ್ವಯಂ ಅವರೇ ವೈದ್ಯರಾದ್ದರಿಂದ, ಹೆಣ್ಣುಮಕ್ಕಳು ಬಯಸಿದ್ದನ್ನು ಧಾರಾಳವಾಗಿ ಓದಿಸಿದರು.

ನಸೀಮಾಳಿಗೆ ಕೆಲಸ ದೊರೆತಾಗಲೂ ಇವರ ಹಿರಿಮಗಳು ಜುಬೇದಾ ಅದಕ್ಕೆ ನೂರೆಂಟು ಕೊಂಕು ತೆಗೆದು, ಕಿರಿ ತಂಗಿ ಕೆಲಸಕ್ಕೆ ಸೇರಬಾರದೆಂದೇ ತಾಕೀತು ಮಾಡಿದಳು. ಸಪೋರ್ಟ್‌ ಮಾಡಲಾರದ ಅಪ್ಪನ ಮುಂದೆ, ಅಕ್ಕನ ವಿರೋಧ ಕಟ್ಟಿಕೊಳ್ಳಲಾಗದೆ ನಸೀಮಾ ಕೆಲಸಕ್ಕೆ ಸೇರಲಾಗದ ತನ್ನ ಅಸಹಾಯಕ ಸ್ಥಿತಿಗೆ ಹಲ್ಲು ಕಚ್ಚಿಕೊಂಡು ಸುಮ್ಮನಾದಳು. ಹೀಗಾಗಿಯೇ ಏನಾದರೂ ಮಾಡಿ ಇದನ್ನೆಲ್ಲ ವಿರೋಧಿಸಬೇಕೆಂಬ ಕ್ರಾಂತಿಕಾರಕ ಮನೋಭಾವ ಬೆಳೆಸಿಕೊಂಡಿದ್ದಳು.

ಏನಾದರೂ ಮಾಡಿ ಮನೆಗೆ ಸಂಬಂಧಿಸಿದ ಹೊರಗೆ ಹೋಗಿ ಬರುವ ಕೆಲಸಗಳನ್ನು ತಾನೇ ಮೈ ಮೇಲೆಳೆದುಕೊಂಡು ಮಾಡುತ್ತಿದ್ದಳು. ಡಾಕ್ಟರ್‌ ಸಾಹೇಬರಿಗೆ ತಮ್ಮ ರೋಗಿಗಳ ಸೇವೆಯೇ ಒಂದು ಲೋಕವಾಗಿತ್ತು. ಹೀಗಾಗಿ ಮನೆಗೆ ಸಂಬಂಧಿಸಿದ ಎಲ್ಲಾ ಹೊರಗಿನ ಕೆಲಸಗಳನ್ನೂ ಮಗಳು ನಿಷ್ಠೆಯಿಂದ ಮನೆಮಗನಂತೆ ಮಾಡುತ್ತಿದ್ದರೆ, ಅವರು ತಾನೇ ಅವಳನ್ನು ಹೊರಗೆ ಹೋಗಬೇಡ ಎಂದು ಹೇಳಿ ಅಡ್ಡಿಪಡಿಸಲು ಹೇಗೆ ಸಾಧ್ಯ?

ಆದರೆ ಜುಬೇದಾ ಮಾತ್ರ ತಂಗಿಯ ಈ ಹೊರಗಿನ ಸುತ್ತಾಟಕ್ಕೆ ಸದಾ ಅಡ್ಡಿಪಡಿಸುತ್ತಿದ್ದಳು. ಇಷ್ಟು ದಿನವೇನೋ ಮಗ ಚಿಕ್ಕವನು, ಕಾಲೇಜಿಗೆ ಹೋಗುತ್ತಿದ್ದ. ಈಗ ಅವನಿಗೊಂದು ಅಂಗಡಿಯ ಕೆಲಸವಾಗಿದೆ, ಮಗ ಮೆಚ್ಚಿದನೆಂದು ತಂಗಿಯ ಮಗಳನ್ನೇ ಸೊಸೆ ಆಗಿಸಿಕೊಂಡು, ತಾನೀಗ ಅತ್ತೆ ಪಟ್ಟ ಏರಿದ್ದಾಯಿತು. ಸೊಸೆ ಮುಂದೆ ತಂಗಿ ತನ್ನನ್ನು ವಿರೋಧಿಸಿದರೆ, ಆ ಮನೆಯಲ್ಲಿ ತನ್ನ ಪ್ರತಿಷ್ಠೆ ಏನು ಉಳಿದೀತು ಎಂದು ತಂಗಿಯ ಮೇಲೆ ಸದಾ ಸಿಡುಕುವಳು.

ಇಂದೂ ಹಾಗೇ ಆಯ್ತು. ಅವಳು ಬುರ್ಖಾ ತೆಗೆದಿರಿಸಿ, ಹಾಯಾಗಿ ಪೇಟೆ ತುಂಬಾ ಓಡಾಡುತ್ತಾ, ಕಂದಾಯದ ಕಛೇರಿಗೆ ಹೋಗಿ ಅಲ್ಲಿನ ಕೆಲಸ ಮುಗಿಸಿದಳು. ಅಲ್ಲಿಂದ ಬ್ಯಾಂಕಿಗೆ ಹೋಗಿ ಹಣ ಡ್ರಾ ಮಾಡಿಕೊಳ್ಳಲು ಕ್ಯಾಷ್‌ ಕೌಂಟರ್‌ಗೆ ಬಂದಳು. ಪಕ್ಕದಲ್ಲೇ ಚೆಕ್‌ ಪಾಸ್‌ ಮಾಡುವ ಅಧಿಕಾರಿ ಯಾರೆಂದು ನೋಡುತ್ತಾಳೆ, ತನ್ನ ಕ್ಲಾಸ್‌ಮೇಟ್‌ ಮಸೂದ್‌! ಅವಳಿಗೆ ಆಶ್ಚರ್ಯ, ಆನಂದ ಒಟ್ಟಿಗೆ ಉಂಟಾಯಿತು. ಪರಸ್ಪರ ಗುರುತಿಸಿ, ಬೇಗ ಇವಳ ಚೆಕ್‌ ಪಾಸ್‌ ಮಾಡಿದ ಮಸೂದ್‌, 2 ಗಂಟೆಗೆ ಲಂಚ್‌ ಬ್ರೇಕ್‌ ನಂತರ ನಿಧಾನವಾಗಿ ಮಾತನಾಡೋಣ ಹೋಗಬೇಡ ಎಂದು ತಾಕೀತು ಮಾಡಿದಾಗ ಒಪ್ಪಿದಳು.

ನಂತರ ಅವರಿಬ್ಬರೂ ಹತ್ತಿರದಲ್ಲಿದ್ದ ಹೋಟೆಲ್‌ಗೆ ಹೋಗಿ ಊಟ ಮಾಡುತ್ತಾ, ಹೈಸ್ಕೂಲ್‌ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಅಂತೂ ಮಸೂದ್‌ ಬ್ಯಾಂಕಿಗೆ ಮರಳಿದಾಗ 3 ಗಂಟೆ ಆಗಿತ್ತು. ಅಯ್ಯಯ್ಯೋ! ತಾನು ಗಾಡಿ ರಿಪೇರಿ ಮಾಡಿಸಿಕೊಂಡು ಮನೆ ತಲುಪುವಷ್ಟರಲ್ಲಿ 4 ಗಂಟೆ ಆಗುತ್ತದೆ ಎಂದು ಹೆದರಿದ ನಸೀಮಾ, ಅಕ್ಕನನ್ನು ಹೇಗಪ್ಪ ಎದುರಿಸಲಿ ಎಂದು ತಯಾರಿ ಮಾಡಿಕೊಂಡೇ ಬಂದಳು.

ಮನೆಯೊಳಗೆ ಬಂದು ಬುರ್ಖಾ ತೆಗೆದಿರಿಸಿ, ಅಕ್ಕನ ಕೈಗೆ ಕಂದಾಯದ ರಶೀತಿ ನೀಡಿ ಎಲ್ಲಾ ಕೆಲಸ ಆಯ್ತೆಂದು ವಿವರಿಸಿದಳು. ಇಷ್ಟು ತಡವಾಗಿ ಬಂದಳಲ್ಲ, ಮತ್ತೆ ಅಡುಗೆ ಬಿಸಿ ಮಾಡಬೇಕೆಂದು ಜುಬೇದಾ ಸಿಡುಕಿದಳು. ಬ್ಯಾಂಕಿನಲ್ಲಿ ಕಂಪ್ಯೂಟರ್‌ ಕೆಟ್ಟು, ಹಣ ಪಡೆಯುವುದು ತಡವಾಗಲು, ಗೆಳತಿ ಮನೆಗೆ ಹೋಗಿ ಅಲ್ಲೇ ಊಟ ಮಾಡಿ ಬಂದೆ ಎಂದು ನೆಪ ಹೇಳಿ ನಸೀಮಾ ತಪ್ಪಿಸಿಕೊಂಡಳು. ಜೊತೆಗೆ ಅಕ್ಕನ ಮಗ-ಸೊಸೆ ವಿವಾಹ ವಾರ್ಷಿಕೋತ್ಸವಕ್ಕೆ ಬೇಕಾದ ಉಡುಗೊರೆಗಳನ್ನು ತೋರಿಸಿದಾಗ ಅಕ್ಕನಿಗೆ ಸಮಾಧಾನವಾಯಿತು.

ಅಂತೂ ಮಾರನೇ ದಿನ ಅದ್ಧೂರಿಯಾಗಿ ಅವರ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ನಡೆಸಿದರು. ಹೆಣ್ಣುಮಕ್ಕಳು, ಮೊಮ್ಮಕ್ಕಳಿಂದ ಮನೆ ತುಂಬಿದಾಗ ತವರಿಗೆ ಹೆಚ್ಚಿನ ಕಳೆ ಮೂಡಿತು. ಬಿರಿಯಾನಿ ತಿಂದು ಮುಗಿಸಿದವರೆಲ್ಲ ಡಾಕ್ಟರ್‌ ಸಾಹೇಬರನ್ನು ಕೇಳಿದ್ದು ಒಂದೇ ಪ್ರಶ್ನೆ, `ನಸೀಮಾಳ ನಿಕಾಹ್‌ ಯಾವಾಗ?’ ಬಂದವರ ಮುಂದೆ ಸಹ ಜುಬೇದಾ ತಂಗಿಯನ್ನು ಸಿಡುಕದೆ ಬಿಡಲಿಲ್ಲ.

“ಇವಳನ್ನು ಇಷ್ಟು ಓದಲು ಹೇಳಿದವರಾರು? ನಮ್ಮವರ ಕಡೆ ವಿಚಾರಿಸಿದಾಗಲೆಲ್ಲ ಇಷ್ಟು ಕಲಿತ ಹುಡುಗಿ ಬೇಡ ಎಂದು ಮುಖ ತಿರುಗಿಸುತ್ತಾರೆ! ಅಬ್ಬಾಜಾನ್‌ ಬಳಿ ಆವತ್ತೆ ಬಡ್ಕೊಂಡೆ, ಅವಳು ಅಷ್ಟು ದೊಡ್ಡ ದೊಡ್ಡ ಓದಿಗಾಗಿ ಕಾಲೇಜು ಮೆಟ್ಟಿಲು ಹತ್ತೋದು ಬೇಡ ಅಂತ…. ಈಗ ನೋಡಿ, ಯಾರೋ ಒಪ್ಪಿದವರು ಕೇಳುವ ವರದಕ್ಷಿಣೆ ಪೂರೈಸುವ  ಸ್ಥಿತಿಯಲ್ಲಿದ್ದೀವಾ ನಾವು? ಅಬ್ಬಾಜಾನ್‌ಗೆ ವಯಸ್ಸಾಯ್ತು, ಯಾವಾಗ ಇವಳಿಗೆ ಮದುವೆ ಮಾಡಿಸಿ ಮನೆಯಿಂದ ಕಳಿಸೋದೋ…. ಗೊತ್ತಾಗ್ತಿಲ್ಲ…”

“ಇರಲಿ ಜುಬೇದಾ, ಅತಿಥಿಗಳು ಹೊರಡೋ ಟೈಂ ಆಯ್ತು. ಅವರಿಗೆ ಸಿಹಿ ಪ್ಯಾಕ್‌ ಮಾಡು,” ಎಂದು ಡಾಕ್ಟರ್‌ ಸಾಹೇಬರು ಹೇಳಿದಾಗಲೇ ಜುಬೇದಾ ಬಾಯಿ ಬಂದ್‌ ಆದದ್ದು. ನಸೀಮಾ ಅಂತೂ ಉಳಿದ ಅಕ್ಕಂದಿರ ಬಳಿ ಹಿರಿಯಕ್ಕ ಹುಡುಕುವ ಕಾಜಿಪೂಚಿ ಸಂಬಂಧದ ಬಗ್ಗೆ ದುಃಖ ತೋಡಿಕೊಳ್ಳುತ್ತಿದ್ದಳು. ಎಲ್ಲರೂ ವಿಚಾರಿಸುವುದಾಗಿ ವಾಗ್ದಾನ ನೀಡಿ ಹೊರಟುಬಿಟ್ಟರು.

ಹೀಗೆ ಹೊರಗಿನ ಕೆಲಸಗಳಿಗೆಂದು ಆಗಾಗ ನೆಪ ಹೂಡಿ ನಸೀಮಾ ಹೊರಡುವಷ್ಟರಲ್ಲಿ ಏಳು ಕೆರೆ ನೀರು ಕುಡಿಯಬೇಕಾಗುತ್ತಿತ್ತು. ಬಸ್ಸಿನಲ್ಲಿ ಹೊರಡುವುದೆಂದರೆ ಅಕ್ಕಾ ಒಪ್ಪುತ್ತಿರಲಿಲ್ಲ. ಪುಣ್ಯಕ್ಕೆ ಅಬ್ಬೂ ಗಾಡಿ ಕೊಡಿಸಿದ್ದು ಇವಳ ಓಡಾಟಕ್ಕೆ ಒಂದು ದಾರಿಯಾಯಿತು. ಅವಳು ಪೇಟೆ ಕಡೆ ಬಂದಾಗಲೆಲ್ಲ ತಪ್ಪದೆ ಕೆಲಸವಿರಲಿ ಬಿಡಲಿ, ಬ್ಯಾಂಕಿಗೆ ಹೋಗಿ ಮಸೂದ್‌ನನ್ನು ಭೇಟಿಯಾಗುವಳು. ಅವರು ಹೋಟೆಲ್‌, ಅಲ್ಲಿ ಇಲ್ಲಿ ಸುತ್ತಾಡುವುದು ಹೆಚ್ಚಾಯಿತು. ಅವರ ಸ್ನೇಹ ಈಗ ಪ್ರೇಮಕ್ಕೆ ತಿರುಗಿ ಮದುವೆ ಮಾತುಕಥೆಗೆ ಬಂದಿತ್ತು. ಎಂ.ಕಾಂ ಮುಗಿಸಿ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದ ಮಸೂದ್‌ ಅಕ್ಕ, ತಂಗಿ ಇಬ್ಬರ ಮದುವೆ ಜವಾಬ್ದಾರಿ ಮುಗಿಸಿಕೊಂಡಿದ್ದ. ಅವನ ತಂದೆ ತೀರಿಕೊಂಡಿದ್ದರು. ಮಗ ತಾಯಿಗೆ ವಿಷಯ ತಿಳಿಸಿ ಕಲಿತ ಹುಡುಗಿಯನ್ನೇ ಮದುವೆ ಆಗುವುದಾಗಿ ಹೇಳಿ ಹಠ ಹೂಡಿದ್ದ. ಇಷ್ಟವಿಲ್ಲದಿದ್ದರೂ ತಾಯಿ ಮಗನನ್ನು ಎದುರು ಹಾಕಿಕೊಳ್ಳಲಾರದೆ ಕೊರಗುತ್ತಿದ್ದರು.  ಆದರೆ ನಸೀಮಾ ಇಲ್ಲಿ ತನ್ನ ಮನೆಯಲ್ಲಿ ಒಪ್ಪಿಗೆ ಪಡೆಯುವುದೇ ಕಷ್ಟವಾಗಿತ್ತು. ಆಕಸ್ಮಿಕವಾಗಿ ನಸೀಮಾಳ ಕಿರಿಯಕ್ಕ ನೂರ್‌ ತೀವ್ರ ವಿಷಮಶೀತ ಜ್ವರಕ್ಕೆ ತುತ್ತಾಗಿ ತೀರಿಕೊಂಡಿದ್ದಳು. ಇಬ್ಬರು ಹಿರಿಯ ಹೆಣ್ಣು ಹಾಗೂ ಕೈಗೂಸಾದ ಒಂದು ಗಂಡು ಮಗುವಿತ್ತು. ಅವಳ ಗಂಡನ ಮನೆಯಲ್ಲಿ ಕೊಳ್ಳೆಹೋಗುವಷ್ಟು ಆಸ್ತಿ. ಸ್ವಂತ ಮನೆ, ಭವ್ಯವಾದ ತರಕಾರಿ ಮಂಡಿ, ಕಾರು, ಆಳುಕಾಳು ಯಾವುದಕ್ಕೂ ಕೊರತೆ ಇರಲಿಲ್ಲ. ಇವಳ ಭಾವ 10ನೇ ತರಗತಿ ಫೇಲ್‌. ಅದನ್ನು ಕೇಳುವವರು ಯಾರು? ಅಷ್ಟೆಲ್ಲ ಆಸ್ತಿ, ಆ ಮೂರು ರೆಡಿಮೇಡ್‌ ಮಕ್ಕಳಿಗೆ ಇವಳು ತಾಯಿ ಆಗಿ ಹೋಗಬೇಕು, ಹಿರಿಯಕ್ಕ ಜುಬೇದಾಳಿಗೆ ಬೇಕಾದುದಷ್ಟೆ.

ಇವಳಾದರೋ ಸ್ವಂತ ಚಿಕ್ಕಮ್ಮ, ಅಕ್ಕನ ಮಕ್ಕಳೆಂಬ ಅಕ್ಕರೆ ಇರುತ್ತದೆ, ಬೇರೆ ಮಲತಾಯಿ ಬಂದು, ಅವಳಿಗೂ ಮಕ್ಕಳಾದ ಮೇಲೆ ಈ ಮಕ್ಕಳು ಬೀದಿ ಪಾಲಾಗುತ್ತಾರೆ ಎಂಬ ಆತಂಕ ಜುಬೇದಾಳಿಗೆ. ಇದರ ಮಧ್ಯೆ ನಸೀಮಾಳಿಗೆ ಈ ಸಂಬಂಧ ಒಪ್ಪಿಗೆ ಇದೆಯೋ ಇಲ್ಲವೋ ಕೇಳಿಸಿಕೊಳ್ಳುವ ಯಾವ ವ್ಯವಧಾನ ಅಕ್ಕನಿಗಿರಲಿಲ್ಲ. ಕಲಿತ ನಾದಿನಿ ಹೆಂಡತಿಯಾಗಿ ಬಂದರೆ ಆ ಭಾವನಿಗೆ ಮುಚ್ಚಟೆಯಾಗಿ ಇಲ್ಲದಿರುತ್ತದೆಯೇ? ಯಾವಾಗ 4 ಜನರ ಮುಂದೆ ಶಹನಾಯಿ ಊದಿಸುತ್ತಾರೋ ಎಂದು ಅವನು ತುದಿಗಾಲಿನಲ್ಲಿ ಕಾಯುತ್ತಿದ್ದ.

ಈ ಮಧ್ಯೆ ನಸೀಮಾಳ ಅಳಲನ್ನು ಕೇಳುವವರಾರು? ಅವಳು ಸಮಯ ಸಿಕ್ಕಾಗ ತನ್ನ ದುಃಖವನ್ನು ಮಸೂದ್‌ ಮುಂದೆ ತೋಡಿಕೊಳ್ಳಬೇಕಷ್ಟೆ. ಸಲೀಸಾಗಿ ಮೊಬೈಲ್‌ನಲ್ಲಿ ಮಾತನಾಡುವಂತಿರಲಿಲ್ಲ. ಅವಳಿಗೆ ಆ ಮನೆಯಲ್ಲಿ ಪ್ರೈವೆಸಿ ಎಂಬುದು ಮರೀಚಿಕೆಯಾಗಿತ್ತು. ತಿಂಗಳಿಗೆ 1-2 ಸಲ ಹೇಗೋ ದುಸ್ಸಾಹಸದಿಂದ ಅವಳು ಪೇಟೆಯ ಬ್ಯಾಂಕಿಗೆ ಹೋಗುವಂತೆ ಮಾಡಿಕೊಳ್ಳುತ್ತಿದ್ದಳು.

“ಮಸೂದ್‌…. ನಮ್ಮ ಮನೆಯಲ್ಲಿ ನನ್ನ ಭಾವನೆಗಳಿಗೆ ಬೆಲೆ ಇಲ್ಲ. ಪ್ರೀತಿಪ್ರೇಮ ಅಂದ್ರೆ ಕೊಂದೇಬಿಡುತ್ತಾರೆ. ಈಗಂತೂ ಭಾವನ್ನ ಮದುವೆ ಆಗಲೇಬೇಕು ಅಂತ ಒತ್ತಡ ಅತಿಯಾಗಿದೆ. ನಮ್ಮ ತಂದೆಗೂ ಇದು ಬಿಸಿ ತುಪ್ಪ. ತಮ್ಮ ಮೊಮ್ಮಕ್ಕಳ ಭವಿಷ್ಯಕ್ಕಾಗಿ ಈ ಮಗಳನ್ನು ಬಲಿಕೊಡಲು ಮೌನವಾಗಿ ಒಪ್ಪಿದ್ದಾರೆ. 45ರ ಭಾವ ಇವರಿಗೆಲ್ಲ ವಯಸ್ಸಾದವರಂತೆ ಅನಿಸುವುದೇ ಇಲ್ಲ. ಆ ಮನೆಯ ಆಸ್ತಿ, ಅನುಕೂಲ ಇವರ ಕಣ್ಣು ಕುಕ್ಕುತ್ತಿದೆ. ನಮ್ಮಿಬ್ಬರ ಮಧ್ಯೆ 20 ವರ್ಷಗಳ ಅಂತರ…. ನನಗಂತೂ ಈ ಮದುವೆ ಖಂಡಿತಾ ಇಷ್ಟವಿಲ್ಲ! ನೀನೇ ಏನಾದರೂ ಮಾಡಬೇಕು.”

ಅವನಿಗೂ ಬಹಳ ಬೇಸರವಾಗಿತ್ತು, “ಈ ಸಂದರ್ಭದಲ್ಲಿ ನೇರವಾಗಿ ನಾನೇ ನಿನ್ನ ಮನೆಗೆ ಬಂದು ಹೆಣ್ಣು ಕೇಳಿದರೆ, ನಿಮ್ಮ ಮನೆಯವರು ಮುಖದ ಮೇಲೆ ಹೊಡೆದಂತೆ ಆಗೋದಿಲ್ಲ ಎಂದು ನನ್ನನ್ನು ಹೊರಗಟ್ಟುತ್ತಾರೆ. ಅವರಿಗೆ ಕಿರಿಮಗಳ ಯೋಗಕ್ಷೇಮಕ್ಕಿಂತ ಆ ಹಿರಿಮಗಳ ಮಕ್ಕಳು ಅನಾಥರಾಗುತ್ತಾರೆ, ಆ ಲಕ್ಷಲಕ್ಷ ಆಸ್ತಿ ಕಂಡವರಿಗೆ ಸೇರುತ್ತದೆ ಎಂಬುದೇ ದುಃಖದ ವಿಚಾರ. ಅಷ್ಟೆಲ್ಲ ಲಕ್ಷಾಂತರ ಆಸ್ತಿ ಇಲ್ಲದಿದ್ದರೂ, ಇರೋದೊಂದು ಬಾಡಿಗೆ ಮನೆ, ನೆಮ್ಮದಿಯ ಜೀವನ ನಾನು ನಿನಗೆ ಕೊಡಬಲ್ಲೆ…. ಇರಲಿ, ಅಮ್ಮನ ಬಳಿ ಮಾತನಾಡಿ ಇದಕ್ಕೆ ಬೇರೆ ಪರಿಹಾರವಿದೆಯೇ ನೋಡುತ್ತೇನೆ,” ಎಂದ ಮಸೂದ್‌.

ಆದರೆ ಅವನ ಅಮ್ಮನಿಗೂ ಒಳಗೊಳಗೆ ಈ ಮದುವೆ ಇಷ್ಟವಿರಲಿಲ್ಲ. ಮಗ ಮೆಚ್ಚಿದ ಹುಡುಗಿ ತವರಿನವರ ವಿರೋಧ ಕಟ್ಟಿಕೊಂಡು ಈ ಮನೆಗೆ ಸೊಸೆಯಾಗಿ ಬಂದರೆ ಕಿಲುಬು ಕಾಸು ವರದಕ್ಷಿಣೆ, ಒಡವೆ ವಸ್ತ್ರ ಏನೂ ದಕ್ಕುವುದಿಲ್ಲವೆಂದು ಚೆನ್ನಾಗಿ ಗೊತ್ತಿತ್ತು. ತನ್ನ ಹಿರಿಯಕ್ಕನ ಮಗಳ ಕೈ ಹಿಡಿದರೆ ಕೇಳಿದಷ್ಟು ವರದಕ್ಷಿಣೆ, ಸ್ಕೂಟರ್‌, ಸೈಟು ಎಲ್ಲಾ ಕೊಡುತ್ತಾರೆ. ಆದರೆ ಆ ಹುಡುಗಿ ತಾಯಿಯಂತೆ ಕುರೂಪಿ, ಹಲ್ಲುಬ್ಬಿ. ಎದೆ ಸೀಳಿದರೆ 4 ಅಕ್ಷರ ಬಾರದು. ಸದಾ ಮನೆಗೆ ಅಂಟಿಕೊಂಡು 40ರ ಹೆಂಗಸಿನಂತೆ ಕಾಣಿಸುತ್ತಿದ್ದಳು. ಹೀಗಾಗಿ ಮಸೂದ್‌ಗೆ ಮೊದಲಿನಿಂದಲೂ ದೊಡ್ಡಮ್ಮನ ಮನೆಗೆ ಹೋಗುವುದೆಂದರೆ ಅಲರ್ಜಿ. ಇವನು ಡಿಗ್ರಿ ಮುಗಿಸಿ, ಬ್ಯಾಂಕಿಗೆ ಕೆಲಸಕ್ಕೆ ಸೇರಿದಾಗಿನಿಂದ ಬಯಸಿದಾಗ ಇವನನ್ನು ಕರೆಸಿಕೊಂಡು ಬೇಕಾದಂತೆ ಉಪಚಾರ ಮಾಡುವರು. ಅಮ್ಮನಿಗೆ ಬೇಸರ ಆಗಬಾರದೆಂಬ ಒಂದೇ ಕಾರಣದಿಂದ ಅಮ್ಮ ಹೇಳಿದಾಗ, ದೂರದ ದೊಡ್ಡಮ್ಮನ ಮನೆಗೆ ಕರೆದೊಯ್ಯುತ್ತಿದ್ದ.

ಅವರದು ಒಂದೇ ವರಾತ. ಆದಷ್ಟು ಬೇಗ 30 ದಾಟಿದ ಮಗಳನ್ನು ತಂಗಿ ಮಗನಿಗೆ ಕಟ್ಟಿಬಿಡಬೇಕು ಎಂಬುದು. ಇವನ ತಾಯಿ ಒಡವೆ, ಹಣಕಾಸಿನ ಆಸೆಗಾಗಿ ಅಕ್ಕನ ಮಗಳೇ ತನ್ನ ಸೊಸೆ ಎಂದು ಮೊದಲಿನಿಂದಲೂ ಅಕ್ಕಭಾವನಿಗೆ ಮಾತು ಕೊಟ್ಟಿದ್ದರು. ಅಕ್ಕ ತಂಗಿಯರ ಮದುವೆ ಆಗಬೇಕು, ಆ ಸಾಲಸೋಲ ತೀರಬೇಕು, ತಾನು ಮದುವೆಗಾಗಿ ಮನೆ ಕಟ್ಟಲು 4 ಕಾಸು ಕೂಡಿಟ್ಟು, ಆಮೇಲೆ ಆ ಬಗ್ಗೆ ಯೋಚಿಸುವುದಾಗಿ ಅಮ್ಮನಿಗೆ ಹೇಳಿ ಅವರ ಬಾಯಿ ಮುಚ್ಚಿಸಿದ್ದ. ಮಗನ ಮಾತು ಸರಿಯಾಗೇ ಇದ್ದುದರಿಂದ ಅದನ್ನು ವಿರೋಧಿಸಲಾಗದೆ ತಾಯಿ ಹಲ್ಲು ಕಚ್ಚಿಕೊಂಡಿದ್ದರು. ಆದರೆ ಭಾವನ ಮನಸ್ಸು ಕೆಟ್ಟು, ಅವರ ಮಗಳನ್ನು ಬೇರೆ ಹೊಸ ಸಂಬಂಧಕ್ಕೆ ಕೊಟ್ಟುಬಿಡಬಾರದು ಎಂಬುದು ಅವರ ಆತಂಕ.

ಇಂಥ ಪರಿಸ್ಥಿತಿಯಲ್ಲಿ ಮಸೂದ್‌ ತಾಯಿಗೆ  ತೆಳ್ಳಗೆ ಬೆಳ್ಳಗಿರುವ ಮೆಚ್ಚಿದ ಹುಡುಗಿಯ ಫೋಟೋ ತೋರಿಸಿ ತಾನು ಅವಳನ್ನೇ ಮದುವೆ ಆಗುತ್ತೇನೆ ಎಂದಾಗ ಅವರಿಗೆ ಆ ಹುಡುಗಿ ಮೇಲೆ ತಿರಸ್ಕಾರ ಬರದೇ ಇರುತ್ತದೆಯೇ? ಅದೂ ಈಗ ಮಗರಾಯ ಆ ಹುಡುಗಿ ಮನೆಯವರಿಗೆ ಈ ಮದುವೆ ಇಷ್ಟವಿಲ್ಲ, ಕಾಟಾಚಾರಕ್ಕೆ ಮದುವೆ ಮಾಡಿಕೊಟ್ಟರೂ ಕೈಗೆ ಕರಿಮಣಿ ಕೊಡುವುದಿಲ್ಲ ಅಂತಾದಾಗ, ಭಾರಿ ಕನಸಿನ ಗೋಪುರ ಕಟ್ಟಿಕೊಂಡಿದ್ದ ಆ ತಾಯಿಗೆ ಕೋಪ ಬರದೆ ಇದ್ದೀತೇ?“

ಏನೇನೂ ಬೇಕಾಗಿಲ್ಲ…… ಈ ಹುಡುಗಿ ನೋಡಲು ಚೆನ್ನಾಗಿರಬಹುದು, ಓದಿ ಕಲಿತಿರಬಹುದು. ಮುಂದೆ ಕೆಲಸ ಸಿಗಬಹುದು…. ಹಾಗೇಂತ ಕೈಯಲ್ಲಿರುವ ಹಕ್ಕಿ ಬಿಟ್ಟು ಕನ್ನಡಿ ಗಂಟಿಗೆ ಆಸೆಪಡುತ್ತಾರೇನು? ಭಾವ ನಿನಗಾಗಿ ಸೈಟ್‌ ರಿಸರ್ವ್ ಮಾಡಿಸಿದ್ದಾರೆ. ಸ್ಕೂಟರ್‌ ಬುಕ್‌ ಮಾಡಿದ ತಕ್ಷಣ ಬರುತ್ತದೆ. ಮುಂದೆ ಮನೆ ಕಟ್ಟುತ್ತೇವೆ ಅಂದ್ರೆ ಖಂಡಿತಾ ಕೈಗಡ ಅಂತ 10-20 ಲಕ್ಷ ಕೊಟ್ಟೇ ಕೊಡುತ್ತಾರೆ…. ಇದನ್ನೆಲ್ಲ ಬಿಟ್ಟುಬಿಟ್ಟು, ಯಾವಳೋ ಬೆಡಗಿ ಠುಸ್‌ಪುಸ್‌ ಅಂತ ಇಂಗ್ಲಿಷಿನಲ್ಲಿ ಮಾತನಾಡಿ, ನಿನ್ನ ಜೊತೆ 4 ದಿನ ಸ್ನೇಹವಾಗಿ ಓಡಾಡಿದ್ದಕ್ಕೆ ಪ್ರೀತಿಪ್ರೇಮ ಅನ್ನೋ ನೆಪದಲ್ಲಿ ಬರಿಗೈ ಬೀಸಿಕೊಂಡು ಬರುವ ಅವಳಿಗೆ ನಾವು ಮಣೆ ಹಾಕಬೇಕಾ?

“ಆ ಲಕ್ಷಣಕ್ಕೆ ಮದುವೆಗೆ ನೀನೇ 1-2 ಲಕ್ಷ ಖರ್ಚು ಮಾಡಬೇಕು…. ಶಾಶ್ವತವಾಗಿ ಅಕ್ಕಭಾವನ ದ್ವೇಷ ಕಟ್ಟಿಕೊಳ್ಳಬೇಕು. ಸರೀಕರಿಗೆಲ್ಲ ನಾನು ಹೇಳಿಬಿಟ್ಟಿದ್ದೇನೆ, ಯಾವತ್ತಿದ್ದರೂ ಆಯೇಷಾನೇ ನನ್ನ ಸೊಸೆ ಅಂತ. ಹಾಗಿರುವಾಗ ಭಾವನ ಅಣ್ಣತಮ್ಮಂದಿರ ಮಕ್ಕಳು ಈಗ ಅವಳ ಕಡೆ ತಿರುಗಿಯೂ ನೋಡುವುದಿಲ್ಲ….. ಇಷ್ಟೆಲ್ಲ ಕೇಡಿಗೆ ಈಗ ನೀನು ಅವಳನ್ನು ಯಾಕೆ ಮದುವೆ ಆಗಬೇಕು?” ಎಂದು ನಸೀಮಾಳ ಫೋಟೋವನ್ನು ಮೇಜಿನ ಮೇಲೆಸೆದರು.

“ನೋಡು ಅಮ್ಮಿ…… ಮದುವೆ ಅಂತ ಆಗೋದಾದ್ರೆ ನಾನು ನಸೀಮಾಳನ್ನೇ ಆಗೋದು… ಆ ನಿನ್ನ ಹಲ್ಲುಬ್ಬಿ ಅಕ್ಕನ ಮಗಳು, ಆ ಕರಿ ಡುಮ್ಮಿ ನನಗೆ ಬೇಡ! ಇಲ್ಲದಿದ್ದರೆ ನನಗೆ ಮದುವೇನೇ ಬೇಡ ಬಿಡು, ಹಾಯಾಗಿ ಹೀಗೇ ಇದ್ದುಬಿಡುತ್ತೇನೆ,” ಎಂದು ಮಗರಾಯ ಸಿಡುಕುತ್ತಾ ಎದ್ದುಹೋದಾಗ ಆ ವಯಸ್ಸಾದ ಜೀವ ಗೊಳೋ ಎಂದು ಅಳತೊಡಗಿತು.

ಇತ್ತ ನಸೀಮಾಳ ಮನೆಯಲ್ಲೂ ಟೆನ್ಶನ್‌ ತಪ್ಪಲಿಲ್ಲ. ಅಕ್ಕನ ಹಿಂಸೆ ತಡೆಯಲಾರದೆ ನಸೀಮಾ ಮತ್ತೆ ಅಬ್ಬೂ ಬಳಿ ತನ್ನ ಸಂಕಟ ತೋಡಿಕೊಂಡಳು.

“ಅಬ್ಬಾಜಾನ್‌…. ಆಪಾಗಂತೂ ಏನೂ ಗೊತ್ತಾಗೋಲ್ಲ, ಹಳೆ ಕಾಲದವಳು, ತನ್ನ ಮೂಗಿನ ನೇರಕ್ಕೆ ಯೋಚಿಸುತ್ತಾಳೆ. ಅಮ್ಮೀಜಾನ್‌ ತೀರಿಕೊಂಡ ಮೇಲೆ ದಿಕ್ಕಿಲ್ಲದ ನಾವು 4 ಜನ ತಂಗಿಯರಿಗೆ ತಾಯಿಯಾಗಿ ನಿಂತು ಈ ಮನೆ ಕಾಪಾಡಿದ್ದಾಳೆ, ನಿಮ್ಮ ಸೇವೆ ಮಾಡುತ್ತಾ ಈ ಮನೆಗಾಗಿ ಜೀವ ತೇದಿದ್ದಾಳೆ…. ಹಾಗೇಂತ ನನ್ನ ಭವಿಷ್ಯ ಬಲಿಕೊಡಲೇ?”

“ಮತ್ತೆ…. ತಾಯಿಗಿಂತ ಹೆಚ್ಚಾಗಿ ನಿನ್ನನ್ನು ಸಾಕಿದ್ದಾಳಮ್ಮ. ಅವಳು ಇಲ್ಲಿಗೆ ವಾಪಸ್ಸು ಬಂದಾಗ ನಿನಗಿನ್ನೂ 2 ವರ್ಷ…. ಅಲ್ಲಿಂದ ಜೋಪಾನ ಮಾಡಿದ್ದಾಳೆ. ಮತ್ತೆ ನೂರ್‌ಳ ಮಕ್ಕಳ ಗತಿ? ನಿನ್ನ ಭಾವ ತುದಿಗಾಲಲ್ಲಿ ನಿಂತಿದ್ದಾನೆ. ಒಂದೇ ಒಂದು ಸಲ ನಾವು ಬೇಡ ಅಂದ್ರೆ ಅವನಿಗೇನು….. ಮಾರನೇ ದಿನವೇ ಹುಡುಗಿ ಸಿಗುತ್ತೆ.”

“ಹಾಗೇಂತ 20 ವರ್ಷದ ಏಜ್‌ ಗ್ಯಾಪ್‌ ಮರೆತುಬಿಟ್ರಾ? ನೀವೂ ಕಲಿತ ಡಾಕ್ಟರ್‌….. ಈಗಿನ ಕಾಲದ ಗ್ರಾಜುಯೇಟ್‌ ನಾನು, ಕೆಲಸಕ್ಕೆ ಬೇಡ ಅಂದ್ರಿ. ಅದನ್ನು ಬಿಟ್ಟೆ….. ಈಗ ಆ ಹುಬ್ಬಳ್ಳಿ ಮೂಲೆಯ ಕುಗ್ರಾಮಕ್ಕೆ ಆ ಇಡೀ ಬಂಗಲೆ ಚಾಕರಿ ಮಾಡುತ್ತಾ ಹಗಲು ರಾತ್ರಿ ಬಿರಿಯಾನಿ ಬೇಯಿಸಲು ನಾನು ಎಂ.ಎಸ್ಸಿ ಮೈಕ್ರೋ ಬಯಾಲಜಿ ಓದಬೇಕಿತ್ತೇ? ಆಪಾಗೆ ಹೇಳಿ ಒಪ್ಪಿಸಿ ಅಬ್ಬೂ…..,” ಎಂದು ಅಳತೊಡಗಿದಳು.

ಮಗಳು ಅಳುತ್ತಾ ಭುಜಕ್ಕೆ ಒರಗಿದಾಗ ಆ ತಂದೆಯ ಜೀವಕ್ಕೆ ಬಹಳ ಸಂಕಟ ಎನಿಸಿತು. ತಮ್ಮಿಬ್ಬರ ಪ್ರೀತಿಯ ಕೊನೆಯ ಕುಡಿಯದು…. ಜೀವನಪೂರ್ತಿ ಅವಳು ಕಣ್ಣೀರಿನಲ್ಲಿ ಕೈ ತೊಳೆಯಬಾರದು ಎನಿಸಿತು. ಇರಲಿ, ನೂರ್‌ ಮಕ್ಕಳಿಗೆ ಪ್ರೀತಿ ವಾತ್ಸಲ್ಯ ತೋರಿಸುವಂಥ, ಅಳಿಯನ ವಯಸ್ಸಿಗೆ ಈಡಾಗುವ ಹುಡುಗಿಯನ್ನು ತಮ್ಮ ಸಂಬಂಧದಲ್ಲೇ ಬೇರೆ ನೋಡಿದರಾಯಿತು ಎಂದು ನಿರ್ಧರಿಸಿದರು. ಹಿರೀ ಮಗಳಿಗೆ ಕೆಲ ದಿನಗಳ ಅಸಮಾಧಾನವಿರುತ್ತದೆ, ಅವಳನ್ನೂ ಓಲೈಸೋಣ ಎಂದು ನಸೀಮಾಳಿಗೆ ಕಣ್ಣೀರು ಒರೆಸಿಕೊಳ್ಳುವಂತೆ ಸಮಾಧಾನ ಹೇಳಿದರು.

ಅಂದು ಸಂಜೆ ಕ್ಲಿನಿಕ್‌ ಕೆಲಸ ಮುಗಿಸಿ ಬಂದು ಹಿರೀ ಮಗಳು ಜುಬೇದಾ ಕೊಟ್ಟ ಟೀ ಕುಡಿಯುತ್ತಾ  ಮತ್ತೆ ಮಾತು ಶುರು ಮಾಡಿದರು. “ನೋಡು ಬೇಟಿ, ಮತ್ತೆ ನಮ್ಮ ನಸೀಮಾ ಮದುವೆ ವಿಷಯ….”

“ಈಗಲೇ ನೂರ್‌ ಗಂಡನಿಗೆ ಹೇಳಿ ಕಳಿಸಿ, ಬೆಳಗ್ಗೆ ಮಾತಾಡಿಕೊಂಡು ಹೋಗಲಿ….. 1 ತಿಂಗಳೊಳಗೆ ನಿಕಾಹ್‌ ಮಾಡೋಣ. ಅವರಷ್ಟಲ್ಲದಿದ್ದರೂ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಮಾಡಿಕೊಡಬೇಕಲ್ಲವೇ?”

“ಮತ್ತೆ ಅವಳಿಗೆ ನೂರ್‌ ಗಂಡ ಬೇಡವಂತೆ…. ಇವಳ ಜೊತೆ ಓದಿದ ಮಸೂದ್‌ ಅಂತ ಬ್ಯಾಂಕ್‌ ಆಫೀಸರ್‌….”

“ಅವಳ ಮಾತಿಗೆ ನೀವೇಕೆ ಕುಣಿಯುತ್ತೀರಿ ಅಬ್ಬೂ…. ಅದಿನ್ನೂ ಕೂಸು. ಒಳ್ಳೆಯದು ಕೆಟ್ಟದ್ದು ಹಿರಿಯರಾಗಿ ನಾವು ತಾನೇ ನೋಡಬೇಕು? ಕಂಡುಕೇಳದ ಹುಡುಗನಿಗೆ ಕೊಡೋ ಬದಲು ನೂರ್‌ ಮನೆ ಸೇರಿದರೆ,  ಆ ಮಕ್ಕಳಿಗೆ ಒಂದು ದಿಕ್ಕಾಯಿತು…. ಲಕ್ಷಾಂತರ ರೂ. ಆಸ್ತಿ ಇವಳಿಗೆ ಬರುತ್ತೆ. ನೂರ್‌ ಗಂಡನಿಗೆ 45 ಇರಬಹುದು, 50-60ರ ಮುದುಕ ಅಲ್ಲ!”

“ಹಾಗಲ್ಲಮ್ಮ…. ಮುಂದೆ ಬಾಳಿ ಬದುಕಬೇಕಾದವಳು ಅವಳು. ಓದಿದ್ದಾಳೆ, ವಿದ್ಯಾವಂತೆ. ಕೆಲಸಕ್ಕಂತೂ ನಾವು ಕಳಿಸಲಿಲ್ಲ. ಇಷ್ಟು ಹೊತ್ತಿಗೆ ಒಳ್ಳೆ ಲೆಕ್ಚರರ್‌ ಅಂತ ಹೆಸರು ತಗೋತಿದ್ಲು….. ಇರಲಿ, ಅವಳ ಬದುಕಾದರೂ ಅವಳು ಬಯಸಿದಂತೆ ಬಂಗಾರವಾಗಿರಲಿ. ಒಮ್ಮೆ ಹುಡುಗನ್ನ ನೋಡಿಬಿಡೋಣ. ಏನಂತೀಯಾ?”

“ಏನೋ ಹಾಳಾಗಿ ಹೋಗಲಿ! ಅರಿಯದ ಮುಕ್ಕಾ ನಾನು, ಆ ದಿನ ಗಂಡ ಬಿಟ್ಟಾಗಿನಿಂದ ಈ ಮನೆಗೆ ನಾಯಿಯಾಗಿ ದುಡಿದಿದ್ದೀನಿ. ತಾಯಿ ತರಹ ಅವಳನ್ನು ಸಾಕಿದ್ದೀನಿ….. ನೂರ್‌ ಕೂಡ ನನ್ನ ತಂಗಿ ತಾನೇ…. ಅವಳ ಮಕ್ಕಳು ಚೆನ್ನಾಗಿರಲಿ ಅಂತ ಬಯಸಿದರೆ ತಪ್ಪೇ? ಅಪ್ಪ-ಮಗಳು ಏನು ಬೇಕೋ ಮಾಡಿಕೊಳ್ಳಿ…. ನಾನೂ ಸ್ಥಿತಿವಂತಳಾಗಿ ಗಂಡನ ಜೊತೆ ಜರ್ಬಾಗಿ ಬಂದು ಇಲ್ಲಿ ನಿಂತಿದ್ದರೆ ನನಗೆ ಇವತ್ತು ಈ ಗತಿ ಬರ್ತಿತ್ತೇ? ಇನ್ನೂ ಸಾಯದೆ ಬದುಕಿದ್ದೇನೆ…..” ಎಂದು ಹೋ ಎಂದು ಅತ್ತು ಕರೆದು ರಂಪ ಮಾಡಿದಾಗ ಡಾಕ್ಟರ್‌ ಸಾಹೇಬರು ಹಿರೀ ಮಗಳನ್ನು ಕಂಟ್ರೋಲ್ ಮಾಡಲು ಕಲಿತ ಬುದ್ಧಿ ಖರ್ಚು ಮಾಡಿ, ಮಾರನೇ ದಿನ ಮಸೂದ್‌ನನ್ನು ನೋಡಲು ಬರುವುದಾಗಿ ಅವನ ಮನೆಗೆ ಫೋನ್‌ ಮಾಡಿ ತಿಳಿಸಿದರು.

ಎರಡನೇ ಮೂರನೇ ಮಗಳು ಅಳಿಯ, ಹಿರೀ ಮಗಳ ಜೊತೆ ಬೇಕಾದಂತೆ ಸಿಹಿ, ಕಾಜೂ-ಖರ್ಜೂರ ಹಿಡಿದು ಭಾವಿ ಅಳಿಯನನ್ನು ನೋಡಲು ಹೊರಟರು. ಮಸೂದ್‌ ಸಹ ಅಮ್ಮನಿಗೆ ಹಗರಣ ಮಾಡಬಾರದೆಂದು ಕಾಡಿಬೇಡಿ ಒಪ್ಪಿಸಿದ್ದ, ಇಲ್ಲದಿದ್ದರೆ ಮದುವೆ ಬೇಡ ಎಂದು ಬೆದರಿಸಿದ. ಅವನ ತಂದೆ ಕಡೆ ಇಬ್ಬರು, ತಾಯಿ ಕಡೆ ಇಬ್ಬರು ಹಿರಿಯ ಬಂಧುಗಳು, ಅವನ ಅಕ್ಕತಂಗಿ ಬಂದು ಸೇರಿದರು.

ಮಸೂದ್‌ನ ಸರಳ ಸಜ್ಜನಿಕೆ, ವಿದ್ಯಾವಂತನಾಗಿ ಅವನ ಕರ್ತ್ಯನಿಷ್ಠೆ, ತಾಯಿ ತಂಗಿಯರ ಕಡೆ ಇದ್ದ ಪ್ರೀತಿ ಎಲ್ಲಾ ಗಮನಿಸಿ, ಬಾಡಿಗೆ ಮನೆ, ಮಧ್ಯಮ ವರ್ಗದ ಜೀವನ ದೊಡ್ಡ ಹೊರೆಯಲ್ಲ ಎಂದು ಡಾಕ್ಟರ್‌ ಸಾಹೇಬರು ತಲೆದೂಗಿದರು. ನೂರ್‌ ಗಂಡನ ಆಸ್ತಿ ಮುಂದೆ ಇದು ಪಾಪರ್‌ ಬದುಕು ಎಂದು ಗೊಣಗುತ್ತಲೇ ತಂದೆ-ಮಗಳ ಹಠದೆದುರು ಇವರ ಕಡೆಯ ಇತರರು, ಮುಖ್ಯವಾಗಿ ಜುಬೇದಾ ಒಪ್ಪಿದಳು.

ಅಕ್ಕನ ಮನೆಯವರ ತರಹ ಸೈಟ್‌, ಸ್ಕೂಟರ್‌, ಒಡವೆ ವಸ್ತ್ರ ಕೊಡದಿದ್ದರೂ ಅವರು ಧಾರಾಳಾಗಿ ಹೇಗೋ ಮದುವೆ ಮಾಡಿಕೊಡುತ್ತಾರೆ ಎಂದು ಮಗನ ತೃಪ್ತಿಗಾಗಿ ಅಸಮಾಧಾನದಿಂದ ಗೊಣಗುಟ್ಟುತ್ತಾ ಫಾತಿಮಾ ನಸೀಮಾಳನ್ನು ಸೊಸೆಯಾಗಿ ಆ ಮನೆಗೆ ತಂದುಕೊಳ್ಳಲು ಒಪ್ಪಿಗೆ ಇತ್ತರು.

ಇವರು ವಾಪಸ್ಸು ಮನೆಗೆ ಬಂದ ಮೇಲೂ, ಜುಬೇದಾ ತಂಗಿ ಎದುರು ನೂರ್‌ ಗಂಡನ ಆಸ್ತಿ ಐಶ್ವರ್ಯ ಬಣ್ಣಿಸದೆ ಇರಲಿಲ್ಲ. ನಸೀಮಾ ನಸುನಗುತ್ತಲೇ ಅಕ್ಕನ ಗೊಣಗಾಟ, ರೇಗಾಟ ಸ್ವೀಕರಿಸಿದಳು. 3 ದಿನ ಕಳೆದು ಭಾನುವಾರ ಭಾವಿ ಸೊಸೆಯನ್ನು ನೋಡಲು ಹೆಣ್ಣುಮಕ್ಕಳ ಸಮೇತ ಬರುವುದಾಗಿ ಫಾತಿಮಾ ಭಾವಿ ಬೀಗರಿಗೆ ಹೇಳಿ ಕಳಿಸಿದರು. ಡಾಕ್ಟರ್‌ ಸಾಹೇಬರು ಹಿರಿಮಗಳಿಗೆ ತಯಾರಿ ಮಾಡಿಕೊಳ್ಳುವಂತೆ ಹೇಳಿದರು. ಅವರುಗಳೆಲ್ಲ ಬಂದು ನೋಡಿ ನೆಪ ಮಾತ್ರಕ್ಕೆ ಒಪ್ಪಿಗೆ ಹೇಳಿದರು. ಮಗ ಆಗಲೇ ನಿರ್ಧರಿಸಿದ್ದರಿಂದ ಫಾತಿಮಾ ಹತಾಶರಾಗಿದ್ದರು. ಕೊನೆಗೆ ಹೆಣ್ಣುಮಕ್ಕಳೇ ಅಮ್ಮನಿಗೆ ಸಮಾಧಾನ ಹೇಳಿ, ವಿದ್ಯಾವಂತೆ ವಿನಯಶೀಲ ಸೊಸೆ ಸಿಕ್ಕಿದ್ದಾಳೆಂದು ಒಪ್ಪಿಸಿದರು.

ಅವರುಗಳು ಹೊರಟ ನಂತರ ಹುಬ್ಬಳ್ಳಿಯ ನೂರ್‌ ಮನೆಯವರಿಗೆ ವಿಷಯ ಗೊತ್ತಾಗಿ, ಅಳಿಯ ರೇಗಾಡಿದ. ತಾನೆಂದೂ ಇವರ ಮನೆ ದಾರಿ ತುಳಿಯುದಿಲ್ಲವೆಂದು ಕೂಗಾಡಿದವನಿಗೆ, ಹೇಗೋ ಮಾಡಿ ಸಮಾಧಾನ ಹೇಳಿದರು. ಅದೇ ತರಹ ಫಾತಿಮಾರ ಅಕ್ಕಭಾವ ಸಹ ಇವರಿಗೆ ಫೋನ್‌ ಮಾಡಿ, ಇಷ್ಟು ದಿನ ತಮ್ಮ ಮಗಳನ್ನು ಕಾಯಿಸಿ ಕತ್ತುಕೊಯ್ದರೆಂದು ರೇಗಾಡಿದರು. ಫಾತಿಮಾ ಮಗನ ಮುಂದೆ ತನ್ನದೇನೂ ನಡೆಯಲಿಲ್ಲ ಎಂದು ಅತ್ತು ಕರೆದಾಗ, ನಿಮ್ಮ ಸಂಬಂಧವೇ ಬೇಡ ಎಂದು ಅವರು ಫೋನ್‌ ಕುಕ್ಕಿದರು. ಅಂತೂ ಇಂತೂ ಗಲಾಟೆ, ಘರ್ಷಣೆ, ಅಸಮಾಧಾನ, ನಿಟ್ಟುಸಿರಿನ ನಡುವೆ ನಸೀಮಾ-ಮಸೂದ್‌ರ ಮದುವೆ ಸರಳವಾಗಿ ನೆರವೇರಿತು. ಫಾತಿಮಾ ಬಯಸಿದಷ್ಟು ಅಲ್ಲದಿದ್ದರೂ ಸಾಕಷ್ಟು ಒಡವೆ ವಸ್ತ್ರ, ಪಾತ್ರೆ-ಪಗಡದೊಂದಿಗೆ ನಸೀಮಾ ಸೊಸೆಯಾಗಿ ಆ ಮನೆಗೆ ಬಂದಳು. ಮೊದಲೇ ಗಂಡನ ಮನ ಗೆದ್ದಿದ್ದಳು, ತನ್ನ ಉತ್ತಮ ನಡಳಿಕೆಯಿಂದ ಅಂತೂ ಅತ್ತೆ ಮನ ಒಲಿಸಿಕೊಂಡಳು. ಬಂದು ಹೋಗುವ ನಾದಿನಿಯರಿಗೂ ಇವಳ ಸ್ನೇಹಮಯ ವ್ಯವಹಾರ ಇಷ್ಟವಾಯಿತು.

ಅದೇ ಖಾಸಗಿ ಕಾಲೇಜಿನಲ್ಲಿ ಇವಳಿಗೆ ಮರುವರ್ಷ ಬಾಟನಿ ಲೆಕ್ಚರರ್‌ ಕೆಲಸ ಖಾಯಂ ಹುದ್ದೆಯಾಗಿ ದೊರಕಿತು. ಮಸೂದ್‌ ದಿನ ಹೊಸ ಸ್ಕೂಟರ್‌ನಲ್ಲಿ ಅವಳನ್ನು. ಡ್ರಾಪ್‌ ಮಾಡಿ, ಬ್ಯಾಂಕಿಗೆ ಹೊರಡುತ್ತಿದ್ದ. ಕುರುಡು ಕಂದಾಚಾರ, ಮೂಢನಂಬಿಕೆ, ಸಂಪ್ರದಾಯಗಳಿಗೆ ಜೋತುಬೀಳದೆ ಇಂದಿನ ಆಧುನಿಕ ಹೆಣ್ಣಾಗಿ ನಸೀಮಾ ಹೊಸ ಬದುಕಿನತ್ತ ಹೊಸ ಹೆಜ್ಜೆ ಹಾಕಿ ಯಶಸ್ವಿ ಎನಿಸಿದಳು.

COMMENT