ಮೊದಲಿನಿಂದ ಅತಿ ಮುದ್ದಿಗೆ ಸಿಲುಕಿ ಹಠಮಾರಿಯಾದ ವಾಣಿ, ಒಪ್ಪವಾಗಿದ್ದ ತನ್ನ ಅಣ್ಣಅತ್ತಿಗೆಯರ ಸಂಸಾರದಲ್ಲಿ ಧೂಮಕೇತುವಾಗಿದ್ದಳು. ಅವಳ ತಾಯಿಯ ಯಾವ ನಿರ್ಧಾರ ವಾಣಿಯನ್ನು ಬದಲಾಯಿಸಿತು........?
ಸುಮಾ, ಎಂದಿಗಿಂತಲೂ ಅಂದು ಎರಡು ಗಂಟೆ ಬೇಗನೆ ಎದ್ದು, ಮನೆಗೆಲಸ ಪೂರೈಸಿ, ಅಡುಗೆ ಮಾಡಿ, ಒಂದಿಷ್ಟು ಲಾಡು ಹಾಗೂ ಅವಲಕ್ಕಿ ಚೂಡಾ ಮುಂತಾದವುಗಳನ್ನು ತುಂಬಾ ಖುಷಿ ಖುಷಿಯಿಂದ ರೆಡಿ ಮಾಡುತ್ತಿದ್ದಳು. ಕಾರಣ ಇಷ್ಟೇ, ಬರೋಬ್ಬರಿ ಐದು ವರ್ಷಗಳ ಅವಧಿ ನಂತರ ಆಕೆ ತನ್ನ ತವರು ಮನೆಗೆ ಹೊರಟು ನಿಂತಿದ್ದಳು. ಮುಖ್ಯವಾಗಿ ಅದಕ್ಕೆ ಅವಳ ಅತ್ತೆಯ ಹಾಗೂ ಪತಿಯ ಸಮ್ಮತಿ ದೊರಕಿತ್ತು.
ಹದಿನೈದು ದಿನಗಳ ತನ್ನ ಅನುಪಸ್ಥಿತಿಯಲ್ಲಿ ಅತ್ತೆಗೆ ಹಾಗೂ ಪತಿಗೆ ಯಾವ ರೀತಿಯ ತೊಂದರೆ ಆಗದಿರಲಿ ಎಂದು ಕಳೆದ ಎರಡು ಮೂರು ದಿನಗಳಿಂದ ಆಕೆ ಮನೆಗೆ ಬೇಕಾಗುವ ಸಾರಿನ ಪುಡಿ, ಸಾಂಬಾರ್ ಪುಡಿ, ಚಟ್ನಿ ಪುಡಿ ಅಲ್ಲದೇ ಗೊಜ್ಜು, ಉಪ್ಪಿನಕಾಯಿ ಎಲ್ಲವನ್ನೂ ಉಮೇದಿನಿಂದ ರೆಡಿ ಮಾಡಿ, ಆಯಾ ಡಬ್ಬಿಗಳಿಗೆ ತುಂಬಿ ಇಟ್ಟಿದ್ದಲ್ಲದೇ, ಅದನ್ನು ಅತ್ತೆಯ ಗಮನಕ್ಕೆ ತರಲು ಮರೆತಿರಲಿಲ್ಲ.
ಪೂರ್ವ ಯೋಜನೆಯಂತೆ ಸುಮಾಳ ಪತಿ ಅರುಣ್ ಆಕೆಗೆ ರೈಲು ಟಿಕೆಟ್ ಕೂಡ ರಿಸರ್ವ್ ಮಾಡಿಸಿದ್ದ. ಆ ದಿನ ಮಧ್ಯಾಹ್ನ ಸುಮಾ, ತನ್ನ ಬಟ್ಟೆ ಬರೆ ಇತ್ಯಾದಿಗಳನ್ನು ಸೂಟ್ ಕೇಸ್ ನೊಳಗೆ ನೀಟಾಗಿ ಜೋಡಿಸಿಕೊಳ್ಳುತ್ತಿದ್ದಾಗ, ಆಕೆಯ ನಾದಿನಿ ವಾಣಿಯ ಆಗಮನವಾಯಿತು. ಅವಳನ್ನು ನೋಡುತ್ತಿದ್ದಂತೆ ಸುಮಾಳ ಮನದಲ್ಲಿ, `ಆಯ್ತು..... ನಾ ಇನ್ನು ನನ್ನ ತವರಿಗೆ ಹೋದಹಾಗೆ ಅನ್ಸುತ್ತೆ,' ಎನ್ನುವ ಸಂಶಯದ ಅಲೆಗಳು ಒಂದರ ಹಿಂದೆ ಒಂದರಂತೆ ಏಳಲಾರಂಭಿಸಿದವು.
ಈ ಎಂಟು ವರ್ಷಗಳ ಹಿಂದೆ, ಸುಮಾ ಅರುಣ್ ನ ಕೈ ಹಿಡಿದು ಈ ಮನೆಗೆ ಬಂದಾಗ ಅವಳ ಏಕೈಕ ನಾದಿನಿ ವಾಣಿ, ಕಾಲೇಜಿನ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮನೆಯಲ್ಲಿ ಅವಳು ಎಲ್ಲರಿಗಿಂತ ಕಿರಿಯವಳಾಗಿದ್ದರಿಂದ ಅವಳಿಗೆ ಮುದ್ದು ತುಸು ಹೆಚ್ಚಾಗಿಯೇ ಇತ್ತು. ಹೀಗಾಗಿ ಅದನ್ನೇ ಬಂಡವಾಳಾಗಿಸಿಕೊಂಡ, ವಾಣಿ ಎಲ್ಲರ ಮೇಲೂ ವಿನಾಕಾರಣ ರೇಗಾಡುವುದು, ಸಿಡುಕಾಡುವುದು, ಹಕ್ಕು ಚಲಾಯಿಸುವುದು, ಎದುರು ವಾದಿಸುವುದು ಮುಂತಾದವುಗಳನ್ನು ಎಗ್ಗಿಲ್ಲದೇ ಮಾಡುತ್ತಿದ್ದಳು.
ಹೊಸದಾಗಿ ಮದುವೆ ಆಗಿ ಬಂದಿದ್ದ ಸುಮಾಳಿಗಂತೂ ಈ ವಾಣಿಯ ನಡೆ ನುಡಿಯ ಬಗ್ಗೆ ಒಂದೇ ವಾರದಲ್ಲಿ ತಲೆ ಚಿಟ್ಟು ಹಿಡಿಯುವಂತಾಗಿತ್ತು. ಮನೆಯಲ್ಲಿ ಪತಿಯಾಗಲಿ, ಅತ್ತೆಯಾಗಲಿ ಅವಳಿಗೆ ತಿಳಿಹೇಳುವ ಮಾತೇ ಇಲ್ಲವಾದಾಗ, ಇನ್ನೂ ತಾನು ಯಾವ ಧೈರ್ಯದಿಂದ ತಾನೆ ಹೇಳಿಯಾಳು? ಹೀಗಾಗಿ ಎಲ್ಲವನ್ನೂ ಸಹಿಸಿಕೊಂಡು ಇರತೊಡಗಿದಳು. ಆದರೆ ಬರಬರುತ್ತಾ ಇದು ಅತಿ ಆದಾಗ ಆಕೆಗೆ ಒಂದೊಂದು ದಿನ ಒಂದು ಯುಗ ಕಳೆದಂತೆ ಭಾಸವಾಗತೊಡಗಿತು.
ವಾಣಿಯ ಈ ಗುಣ ಕಂಡ ಅವಳ ಅಮ್ಮನಾಗಲಿ, ಅಣ್ಣನಾದ ಅರುಣ್ ಆಗಲಿ ಪ್ರತಿಯಾಗಿ ಮಾತನಾಡಲು ಹಿಂದೇಟು ಹಾಕುತ್ತಿದ್ದರು. ಪ್ರಾಯಶಃ ಅವರ ಮನದಲ್ಲಿ... `ಇವಳು ಇನ್ನೆಷ್ಟು ದಿನ ಈ ಮನೆಯಲ್ಲಿದ್ದಾಳು...? ಅಬ್ಬಬ್ಬಾ ಅಂದರೆ ಒಂದೆರಡು ವರ್ಷ. ಆನಂತರ ಮದುವೆಯಾಗಿ ಗಂಡನ ಮನೆಗೆ ಸೇರಿದ ಮೇಲೆ, ಅಲ್ಲಿ ಈ ರೀತಿ ವರ್ತಿಸಾಗಲ್ಲ,' ಎನ್ನುವುದು ಇತ್ತೇನೋ...? ಇಂತಹ ದಿನಗಳಲ್ಲಿ ವಾಣಿಗೆ ಕಂಕಣ ಬಲ ಕೂಡಿ ಬಂದಿದ್ದರಿಂದ ಅರುಣ್ ತನ್ನ ಶಕ್ತ್ಯಾನುಸಾರವಾಗಿ ಅವಳಿಗೆ ಧಾರೆ ಎರೆದು ಕೊಟ್ಟಿದ್ದ. ವಾಣಿಯ ಪತಿ ಮನೆ ಅದೇ ಊರಲ್ಲಿತ್ತು. ಅವಳ ಪತಿ ತುಂಬಾ ಭೋಳೆ ಸ್ವಭಾವದವನಾಗಿದ್ದ. ಹೀಗಾಗಿ ವಾಣಿಗೆ ನೆನಪಾದಗೆಲ್ಲ ತಾಯಿಯ ಮನೆಗೆ ಬಂದವಳು ಎರಡು ಮೂರು ದಿನವಾದರೂ ಇರುತ್ತಿದ್ದಳು.