ಗುಂಡ : ಯಾರೋ 4 ಜನ ರಸ್ತೆ ಬದಿ ಜಗಳ ಆಡುತ್ತಿದ್ದರೆ ನಾವು ನಿಂತು ನೋಡಬಾರದು.

ಕಿಟ್ಟಿ : ಮತ್ತೆ…..? ಅವರನ್ನು ಬಿಡಿಸಲು ಹೋಗಬೇಕು ಅಂತೀಯೇನು? ನಮಗೂ ಧರ್ಮದೇಟು ಬಿದ್ದರೆ?

ಗುಂಡ : ಹಾಗಲ್ಲ…. ನಿಂತು ನೋಡೋ ಬದಲು ಕುಂತು ನೋಡಬೇಕು. ಆಗ ಹಿಂದಿನವರಿಗೂ ಕಾಣಿಸ್ತದೆ ನೋಡು.

ಮಂಜು : ಅಲ್ಲ ಕಣ್ಲಾ, ಹೆಂಗಸರು ಕೆಲಸ ಮಾಡದ ಡಿಪಾರ್ಟ್‌ಮೆಂಟ್‌ ಏನಾರ ಇದೆ ಅಂತೀಯಾ?

ರಾಜ : ಇರುತ್ತೆ ಯಾಕಿಲ್ಲ? ಸರಿಯಾಗಿ ನೋಡ್ಬೇಕು.

ಮಂಜು : ಉದಾಹರಣೆ.

ರಾಜ : ನಮ್ಮ ಫೈರ್‌ ಬ್ರಿಗೇಡ್‌ ಡಿಪಾರ್ಟ್‌ಮೆಂಟ್‌ನಲ್ಲಿ ಹೆಂಗಸರು ಇಲ್ಲ ಅಂತೀನಿ.

ಮಂಜು : ಅದು ಹೇಗೆ ಹೇಳ್ತೀಯಾ?

ರಾಜ : ಹೆಂಗಸರದು ಬೆಂಕಿ ಹಚ್ಚೋ ಸಮಾಚಾರ, ಅದನ್ನು ಆರಿಸ್ಲಿಕ್ಕೆ ಬರಲ್ಲ ನೋಡು!

ಗುಂಡನನ್ನು ಮದುವೆ ಆಗಲು ಯಾವ ಹುಡುಗಿಯರೂ ಒಪ್ಪುತ್ತಲೇ ಇರಲಿಲ್ಲ. ಅದೇನು ಕಾರಣ ಅಂತೀರಾ?

ಹುಡುಗಿ ಮದುವೆ ನಂತರ ಟಿವಿ, ಫೇಸ್‌ಬುಕ್‌, ವಾಟ್ಸ್ಆ್ಯಪ್‌ ಬದಲು ತನ್ನ ಕಡೆ ಹೆಚ್ಚು ಗಮನ ಕೊಡಬೇಕು ಅನ್ನೋದೇ ಅವನ ಷರತ್ತು! ಅಂಥ ಮೂರ್ಖ ಹುಡುಗಿಯರು ಈ ಕಾಲದಲ್ಲುಂಟೇ?

ಒಬ್ಬ ಪತಿರಾಯ ನೀಟಾಗಿ ಪಾತ್ರೆ ತೊಳೆಯುತ್ತಿರುವುದನ್ನು ಕಂಡು, ಅವನ ಹೆಂಡತಿ ಕೆಲಸಕ್ಕೆ ಹೋಗಿರುವಾಗ ಪಕ್ಕದ್ಮನೆ ಪಾರು ಬಂದು ಕೇಳಿದಳು.

ಪಾರು : ನೀವು ಚೆನ್ನಾಗೇ ಪಾತ್ರೆ ತೊಳೆಯುತ್ತೀರಿ. ಬಿಡುವಿರುವಾಗ ನಮ್ಮ ಮನೆ ಪಾತ್ರೇನೂ ತೊಳೆದು ಕೊಡಬಾರದೇ? ಏನು ಕೊಡಬೇಕು ಅಂತ ಮೊದಲೇ ಹೇಳಿಬಿಡಿ.

ಪತಿ : ನಿಮ್ಮ ಹತ್ತಿರ ಏನು ಚೌಕಾಸಿ? ನನ್ನ ಹೆಂಡತಿ ಕೊಡೋದನ್ನೇ ನೀವು ಕೊಡಿ.

ಅಂದಿನಿಂದ ಪಾರು ಈತನನ್ನು ಕಂಡು ಮುಖ ತಿರುಗಿಸಿಕೊಂಡು ಹೋಗುತ್ತಾಳೆ.

ಪತಿ : ಯಾಕೆ ನೀವು ಮಾತೇ ಆಡ್ತಿಲ್ಲ?

ಪಾರು : ಮತ್ತೆ….. ನೀವು ಹಾಗಾ ಹೇಳುವುದು?

ಪತಿ : ನಾನೇನು ತಪ್ಪು ಹೇಳಿದೆ? ನನ್ನ ಹೆಂಡತಿ ನನಗೆ ಪಾಕೆಟ್‌ಮನಿ ಅಂತ 2 ಸಾವಿರ ಕೊಡೋ ಹಾಗೇ ನೀವು ಕೊಡಿ ಅಂದೆ!

ಒಮ್ಮೆ ಒಂದು ಗ್ರೂಪ್‌ನಲ್ಲಿ ಅಡ್ಮಿನ್‌ ರಾಧಾರಮಣಿ ಹೆಸರನ್ನು ಗ್ರೂಪಿಗೆ ಸೇರಿಸಿದರು. ಅದಾದ ಮೇಲೆ ಗ್ರೂಪಿನ ಸದಸ್ಯರು ಹೆಚ್ಚು ಆ್ಯಕ್ಟಿವ್‌ ಆದಂತೆ ಕಾಣತೊಡಗಿತು.

ಸೋಮೇಶ್‌ : ಹಾಯ್‌ ರಾಧಾ!

ವರುಣ್‌ : ಹಾಯ್‌ ರಮಣಿ!

ಸಂಜೀವ್ : ಹಲೋ ರಾಧಾ…. ಹೌ ಆರ್‌ ಯೂ?

ರಾಧಾರಮಣಿ : ಹಾಯ್‌ ಎವೆರಿಬಡಿ…. ಐ ಆ್ಯಮ್ ಫೈನ್‌.

ಗೋವಿಂದ್‌ : ನಿಮಗೆ ಏನಾದರೂ ತೊಂದರೆ ಆದರೆ, ಅಗತ್ಯ ವಸ್ತು ಬೇಕಾದರೆ ನಮ್ಮ ಅಂಗಡಿಗೆ ಬನ್ನಿ.

ನಾಗೇಶ್‌ : ಹಾಯ್‌ ರಾಧಾ… ನಿಮ್ಮ ಊರು ಯಾವುದು?

ರಾಧಾರಮಣಿ : ಹಾಯ್‌…. ಐ ಆ್ಯಮ್ ಫ್ರಂ ಕೋಲಾರ.

ನಾಗೇಶ್‌ : ನಾನೂ ಅಷ್ಟೆ… ಹತ್ತಿರದ ಕೆ.ಜಿ.ಎಫ್‌.

ವರುಣ್‌ : ನಿಮ್ಮ ಶಿಕ್ಷಣದ ಬಗ್ಗೆ…

ರಾಧಾರಮಣಿ : ನಾನು ಪೋಸ್ಟ್ ಗ್ರಾಜುಯೇಟ್‌

ವರುಣ್‌ : ಗ್ರೇಟ್‌! ಬೆಸ್ಟ್ ಆಫ್‌ ಲಕ್‌…..

ಸೋಮೇಶ್‌ : ನಿಮ್ಮ ಪೂರ್ತಿ ಹೆಸರು….

ರಾಧಾ : ರಾಧಾ ಆರ್‌. ರಮಣ್‌…. ಆಟೋ ಕರೆಕ್ಟ್ ನಿಂದ ರಾಧಾರಮಣಿ ಆಗಿತ್ತು.

ಅದಾದ ಮೇಲೆ ಗ್ರೂಪ್‌ನಲ್ಲಿ ಆ್ಯಕ್ಟಿವಿಟಿ ಇರಲೇ ಇಲ್ಲ. ಅಂದು ಸಂಜೆ ಹೊತ್ತಿಗೆ 4-5 ಜನ ಗ್ರೂಪ್‌ ಬಿಟ್ಟಿದ್ದರು!

ಕಿಟ್ಟಿಗೆ ಮದುವೆ ಆಗಿ 2 ವಾರ ಕಳೆದಿತ್ತು.

ರಮ್ಯಾ : ನೋಡ್ರಿ, ನಮ್ಮ ಕಿಟಕಿಗಳಿಗೆ ಮೊದಲು ಕರ್ಟನ್‌ ಹಾಕಿಸಿ. ಎದುರು ಮನೆಯವನು ನನ್ನನ್ನೇ ನೋಡಲು ಟ್ರೈ ಮಾಡ್ತಾ ಇರ್ತಾನೆ.

ಕಿಟ್ಟಿ : ಒಮ್ಮೆ  5 ನಿಮಿಷ ನಿಂತು ಅವನೊಡನೆ ಮಾತನಾಡಿಬಿಡು. ಆಮೇಲೆ ಅವನೇ ತನ್ನ ಕಿಟಕಿಗೆ ಕರ್ಟನ್‌ ಹಾಕಿಸಿಕೊಳ್ತಾನೆ.

ಜಡ್ಜ್ : ನೋಡಪ್ಪ, ನೀನು ನಿನ್ನ ಸಂಬಳದಲ್ಲಿ ಅರ್ಧ ಭಾಗ ನಿನ್ನ ಹೆಂಡತಿಗೆ ಕೊಡುವ ಹಾಗಿದ್ದರೆ ಮಾತ್ರ ಈ ಡೈವೋರ್ಸ್‌ ಸ್ಯಾಂಕ್ಷನ್‌ ಆಗುತ್ತೆ…. ಇಲ್ಲದಿದ್ದರೆ ಇಲ್ಲ!

ಗುಂಡ : ಧಾರಾಳವಾಗಿ ಆಗಲಿ ಮಹಾಸ್ವಾಮಿ, ನನ್ನ ಪಾಲಿಗೆ ಆಗ ಅರ್ಧವಾದ್ರೂ ಉಳಿಯುತ್ತಲ್ಲ…. ಅಷ್ಟೇ ಸಾಕು!

ಒಮ್ಮೆ ನಾಣಿ ಪತ್ರಿಕೆ ಓದುತ್ತಿದ್ದಾಗ ಅದರಲ್ಲಿ ಲೇಖನದ ಶೀರ್ಷಿಕೆ ಹೀಗಿತ್ತು : ಮಡದಿ ನಿಯಂತ್ರಿಸುವುದು ಹೇಗೆ?

ಬಲು ಉತ್ಸಾಹದಿಂದ ನಾಣಿ ತನ್ನ ಕನ್ನಡಕ ಸರಿಪಡಿಸಿಕೊಳ್ಳುತ್ತಾ ಓದಿದ.

ಬೆಳಗ್ಗೆ ಸಂಜೆ ವಾಕಿಂಗ್‌ ಹೋಗಿ, ನಿಯಮಿತವಾಗಿ ವ್ಯಾಯಾಮ ಮಾಡಿ, ಹಸಿರು ತರಕಾರಿ ಸೇವಿಸಿ, ಧೂಮಪಾನ ಬಿಟ್ಟುಬಿಡಿ.

`ಅರೆ…. ಇದಕ್ಕೂ ಮಡದಿಗೂ ಏನು ಸಂಬಂಧ?’ ಎಂದುಕೊಳ್ಳುತ್ತಾ ನಾಣಿ ಪತ್ರಿಕೆ ಹತ್ತಿರ ಹಿಡಿದು ಓದಿದ.

ಶೀರ್ಷಿಕೆ ಹೀಗಿತ್ತು : ಮನಸ್ಸು ನಿಯಂತ್ರಿಸುವುದು ಹೇಗೆ?

ಮಾರನೇ ದಿನವೇ ನಾಣಿ ತನ್ನ ಕನ್ನಡಕದ ನಂಬರ್‌ ಬದಲಾಗಿರಬೇಕೆಂದು ವೈದ್ಯರ ಬಳಿ ಹೋದ.

ಜಡ್ಜ್ : ಅಲ್ಲಯ್ಯ, ನೀನು ಕಳ್ಳತನ ಮಾಡಿದ್ದೇಕೆ?

ಕಳ್ಳ : ಹೆಂಡತಿಗೆ ಡ್ರೆಸ್‌ ಕೊಡಿಸಲು ಸ್ವಾಮಿ.

ಜಡ್ಜ್ : ಅದು ಸರಿ, ಒಂದೇ ರಾತ್ರಿ ಒಂದೇ ಅಂಗಡಿಗೆ 3 ಸಲ ಹೋಗಿ ಕಳ್ಳತನ ಮಾಡಿದ್ದೇಕೆ?

ಕಳ್ಳ : ಅವಳು ಬಡಪಟ್ಟಿಗೆ ಒಂದು ಸಲಕ್ಕೆ ಡ್ರೆಸ್‌ ಒಪ್ಪಿಕೊಳ್ಳುವವಳಲ್ಲ ಬಿಡಿ…

ಗರ್ಲ್ ಫ್ರೆಂಡ್‌ : ನೀನು ನನ್ನನ್ನು ಮದುವೆ ಆದರೆ ಖಂಡಿತಾ ನಾನು ನಿನ್ನ ಎಲ್ಲಾ ದುಃಖವನ್ನೂ ನನ್ನದಾಗಿಸಿಕೊಂಡು ನಿನ್ನನ್ನು ಕಾಪಾಡಿಕೊಳ್ಳುವೆ.

ಬಾಯ್‌ಫ್ರೆಂಡ್‌ : ಆದರೆ….. ನನಗೆ ಯಾವ ದುಃಖ ಇಲ್ಲವಲ್ಲ….?

ಗರ್ಲ್ ಫ್ರೆಂಡ್‌ : ಮದುವೆ ಆದ ಮೇಲೂ ದುಃಖಿಸದಿರುವ ಗಂಡಸು ಇದ್ದಾನೇನು?

ಗುಂಡಿ : ಅಯ್ಯೋ ಪಾಪ ಕಣ್ರಿ…. ನೀವು ತುಂಬಾ ಮುಗ್ಧರು, ಯಾರು ಬೇರಾದರೂ ನಿಮ್ಮನ್ನು ಬಲು ಸುಲಭವಾಗಿ ಏಮಾರಿಸಿ ಟೋಪಿ ಹಾಕಿ ಬಿಡಬಹುದು. ನನ್ನ ಮಾತು ನಿಜ ತಾನೇ?

ಗುಂಡ : ಅದೇನೋ ನಿಜ ನಿಜ…. ನಿಮ್ಮ ತಂದೆಯೇ ಅಲ್ಲವೇ ನನ್ನ ಮೇಲೆ ಇಂಥ ಪ್ರಯೋಗ ಮೊದಲು ಆರಂಭಿಸಿದ್ದು?

ಮದುವೆ ನಂತರ ಅವರಿಬ್ಬರೂ ಪರಸ್ಪರ ಹೇಮ, ಹೇಮ ಅಂತಾನೇ ಮಾತನಾಡಿಕೊಳ್ಳುತ್ತಿದ್ದರು.

ವಯಸ್ಸಾದ ವ್ಯಕ್ತಿಯೊಬ್ಬರು ಇದೇನು ಕರ್ಮ ಅಂತ ಈ ನವದಂಪತಿಗಳನ್ನು ವಿಚಾರಿಸಿದರು.

ಅದಕ್ಕೆ ಗಂಡ ಹೇಳಿದ, “ನನ್ನ ಹೆಸರು ಹೇಮಂತ. ಇವಳ ಹೆಸರು ಹೇಮಾ ಅಂತ!”

ಒಂದು ಸಲ ಡಾಕ್ಟರೊಬ್ಬರಿಗೆ ಫೋನ್‌ ಬಂತು, “ಡಾಕ್ಟ್ರೇ, ನನ್ನ ಹೆಂಡತಿಯ ದವಡೆಗಳೆರಡೂ ಬಿಗಿದುಕೊಂಡು ಬಿಟ್ಟಿವೆ. ಅವಳಿಗೆ ಈಗ ಬಾಯಿ ತೆರೆಯಲು ಆಗುತ್ತಿಲ್ಲ. ಮಾತನಾಡಲೂ ಆಗುತ್ತಿಲ್ಲ. ಈ ವಾರವೋ, ಮುಂದಿನ ವಾರವೋ ಅಥವಾ ಮುಂದಿನ ತಿಂಗಳೋ, ನಿಮಗೆ ಬಿಡುವಾದಾಗ ಒಂದು ಸಲ ಬಂದು ನೋಡಿಕೊಂಡು ಹೋಗಿ.”

ತಿಪ್ಪನ ಹೆಂಡತಿ ಅವಳ ತಂದೆ ತಾಯಿಗಳ ಒಬ್ಬಳೇ ಮಗಳಾಗಿದ್ದಳು. ಆದ್ದರಿಂದ ತಂದೆಯ ಆಸ್ತಿಯೆಲ್ಲಾ ಅವಳಿಗೇ ಬಂದಿತ್ತು ಹಾಗೂ ಅವಳ ಹೆಸರಿನಲ್ಲೇ ಇತ್ತು. ಒಂದು ದಿನ ಅವಳು ತಿಪ್ಪನೊಡನೆ, “ನೋಡಿ, ನನಗೂ ಮಕ್ಕಳಿಲ್ಲ. ಆದ್ದರಿಂದ ಆಸ್ತಿನ್ನೆಲ್ಲಾ ಯಾರಾದರೂ ಸನ್ಯಾಸಿಗೆ ದಾನ ಮಾಡಿ ಬಿಡೋಣವೆಂದುಕೊಂಡಿದ್ದೇನೆ,” ಎಂದಳು. ಇದನ್ನು ಕೇಳಿದವನೇ ತಿಪ್ಪ ಎದ್ದು ಹೊರಗೆ ನಡೆಯತೊಡಗಿದ. “ಅರೇ… ಎಲ್ಲಿಗೆ ಹೋಗ್ತಾ ಇದ್ದೀರಾ?” ಹೆಂಡತಿ ಕೇಳಿದಳು.

“ಸನ್ಯಾಸಿ ಆಗಲು….” ತಿಪ್ಪ ಹೇಳಿದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ