ಗಣತಿಯವರು : ಎಷ್ಟು ಜನ ಮಕ್ಕಳು ನಿಮಗೆ?
ಮನೆ ಯಜಮಾನ : 5 ಮಂದಿ.
ಗಣತಿಯರು : ಹೆಸರು ಹೇಳ್ತೀರಾ…?
ಮನೆ ಯಜಮಾನ : ಮೊದಲನೆಯವನು ನೆಟ್ ನಾರಾಯಣ, ಎರಡನೆಯವನು ಫೇಸ್‌ಬುಕ್ ಪ್ರಹ್ಲಾದ, ಮೂರನೆಯವನು ಚಾಟಿಂಗ್ ಚರಣ, ನಾಲ್ಕನೆಯವನು ಸ್ಕೈಪ್ ಸಂತೋಷ್…
ಗಣತಿಯವರು : ಸಾರ್ ಬರೀ ಗಂಡು ಮಕ್ಕಳೇ ಇರೋದಾ…..? ಹೆಣ್ಣು ಮಕ್ಕಳಿಲ್ವಾ….?
ಮನೆ ಯಜಮಾನ : ಕೊನೆಯವಳು ಮಗಳು. ಅವಳ ಹೆಸರು ವಾಟ್ಸಪ್ ವಾರುಣಿ.
ಗಣತಿಯವರು : ಹೆಂಡತಿ ಹೆಸರೇನು?
ಮನೆ ಯಜಮಾನ : ಗೂಗಲ್ ಗೀತಾ
ಗಣತಿಯವರು : ಸರಿ ಸಾರ್ ಬರ್ತೇವೆ…..
ಮನೆ ಯಜಮಾನ : ನನ್ನ ಹೆಸರು ಕೇಳಲಿಲ್ಲ…?
ಗಣತಿಯವರು : ಗೊತ್ತಾಯ್ತು ಬಿಡಿ ಸಾರ್…. ನೀವು `ಜಿಯೋ ಜಯರಾವ್’ ಅಂತ….
ಶೆಟ್ರು ತಪಸ್ಸು ಮಾಡಿದರು. ಲಕ್ಷ್ಮೀ ಪ್ರತ್ಯಕ್ಷಳಾದಳು.
ಲಕ್ಷ್ಮೀ : ಶೆಟ್ರೆ ಏನು ಬೇಕು?
ಶೆಟ್ರು : ದುಡ್ಡು ಬೇಕು!
ಎರಡು ಗೋಣಿಚೀಲದಷ್ಟು ದುಡ್ಡು ಕೊಟ್ಟು ಲಕ್ಷ್ಮೀ ಮಾಯವಾದಳು. ಶೆಟ್ರು ಖುಷಿಯಿಂದ ಮನೆಗೆ ಬಂದು ಗೋಣಿಚೀಲಗಳನ್ನು ಬಿಚ್ಚಿ ನೋಡಿ ಬೆಚ್ಚಿ ಬಿದ್ದರು. ಆ ಗೋಣಿಚೀಲಗಳಲ್ಲಿದ್ದುದು 500 ರೂ. ಮತ್ತು 1000 ರೂ.ಗಳ ಹಳೆಯ ನೋಟುಗಳು! ಶೆಟ್ರು ಪುನಃ ತಪಸ್ಸು ಮಾಡಿದರು.
ಪ್ರತ್ಯಕ್ಷಳಾದ ಲಕ್ಷ್ಮೀ, “ಏನಾಯಿತು ಶೆಟ್ರೇ?” ಎಂದಳು.
ಶೆಟ್ರು ಹೇಳಿದರು, “ಇವೆಲ್ಲ ಹಳೆಯ ನೋಟುಗಳು! ಇವುಗಳಿಗೆ ಈಗ ಬೆಲೆಯಿಲ್ಲ.”
ಲಕ್ಷ್ಮೀ : ಶೆಟ್ರೇ… ನಾನು ಕೂಡ ಹಳೆಯ ಲಕ್ಷ್ಮೀ…. ನೋಟ್ ಬದಲಾವಣೆ ಮಾಡಿದ್ದು ಮೋದಿ…. ಓಟ್ ಮೋದಿಗೆ ಹಾಕ್ತೀರಾ…. ನೋಟ್ ನನ್ನ ಕೇಳ್ತೀರಾ….? ಲಾಠಿ ಚಾರ್ಜ್ ಮಾಡಿಸಬೇಕಾ…..? ಎಂದ ಲಕ್ಷ್ಮೀ ಮಾಯಾದಳು. ಶೆಟ್ರು ಮೂರ್ಛೆ ಹೋದರು.
ಗುಂಡ : ಒಬ್ಬ ಹೆಂಗಸು ತನ್ನ ಗಂಡನಿಗಿಂತ ಮಕ್ಕಳನ್ನೇ ಹೆಚ್ಚು ಇಷ್ಟಪಡುತ್ತೀನಿ ಎಂದು ಹೇಳಿದರೆ ಅದು ಶುದ್ಧ ಸುಳ್ಳು!
ಕಿಟ್ಟಿ : ಅದು ಹೇಗೆ ಹೇಳ್ತೀಯಾ?
ಗುಂಡ : ಅವಳು ಎಷ್ಟು ಹೊತ್ತು ಬೇಕಾದರೂ ತನ್ನ ಮಕ್ಕಳನ್ನು ನೆರೆಮನೆಯವಳ ಬಳಿ ಬಿಟ್ಟು ಶಾಪಿಂಗ್‌ಗೆ ಹೋಗುತ್ತಾಳೆ, ಆದರೆ ಅದೇ ನೆರೆಮನೆಯವಳ ಬಳಿ ಗಂಡನನ್ನು ಒಂದು ಕ್ಷಣ ಬಿಟ್ಟಿರುತ್ತಾಳಾ?
ಒಮ್ಮೆ ಟೈಲರ್ ರಾಮಣ್ಣ ತುಂಬಾ ರಶ್ಶಿದ್ದ ಬಸ್ಸಿಗೆ ಹತ್ತಿದ. ಸ್ವಲ್ಪ ಹೊತ್ತಿಗೆ ಅವನ ಮೊಬೈಲ್ ಗೆ 2 ನಿಮಿಷದಲ್ಲಿ ಒಂದು ಕಾಲ್ ಬಂತು. ರಾಮಣ್ಣ ಕಾಲ್ ರಿಸೀವ್ ಮಾಡಿ ಶಿಷ್ಯನಿಗೆ ಹೇಳತೊಡಗಿದ, “ನೀನು ಮೊದಲು ಕೈ ಕಾಲು ಕತ್ತರಿಸಿ ಬಿಡು, ನಾನು ಬಂದ ಮೇಲೆ ಕುತ್ತಿಗೆ ಕತ್ತರಿಸುತ್ತೀನಿ!” ಮುಂದಿನ ಸ್ಟಾಪ್‌ನಲ್ಲಿ ಆ ಬಸ್ಸಿನಲ್ಲಿದ್ದವರೆಲ್ಲ ಖಾಲಿ!
ಪ್ರಕಾಶ್ : ಜೀವನದಲ್ಲಿ ಗರ್ಲ್ ಫ್ರೆಂಡ್ಸ್ ಇಲ್ಲದಿದ್ದರೂ ಪರವಾಗಿಲ್ಲ ಆದರೆ ಮಾತ್ರ…..
ಸುರೇಶ್ : ಏನು ಆದರೆ ಮಾತ್ರ….?
ಪ್ರಕಾಶ್ : ಜಗಜೀತ್ ಸಿಂಗ್‌ರ ಗಜಲ್, ಕೇಳುತ್ತಾ ಕುಳಿತುಬಿಟ್ಟರೆ…
ಸುರೇಶ್ : ಕುಳಿತು ಬಿಟ್ಟರೆ…. ಏನಂತೀಯಾ?
ಪ್ರಕಾಶ್ : ಒಟ್ಟಿಗೆ 10-12 ಮಂದಿ ಗರ್ಲ್ಸ್ ಫ್ರೆಂಡ್ಸ್ ಬಿಟ್ಟು ಹೋದರೇನೋ ಎಂಬಷ್ಟು ದುಃಖ ಗಾಢವಾಗಿ ಆರಿಸುತ್ತದೆ!
ಗುಂಡ : ಜಗಜೀತ್ ಸಿಂಗ್‌ರ ಗಜಲ್ಸ್ ಕೇಳಿ ನಾನು ಒಂದು ಗಂಟೆ ಕಾಲ ಅಳುತ್ತಾ ಕುಳಿತೆ….
ಕಿಟ್ಟಿ : ಏ…. ನಿನಗೆ ಗರ್ಲ್ಸ್ ಫ್ರೆಂಡ್ಸೇ ಇಲ್ವಲ್ಲ…..?
ಗುಂಡ : ಹೌದಲ್ವಾ? ಹಾಗ್ಯಾಕೆ ಮಾಡಿದೆ?
ಕಿಟ್ಟಿ : ಅಪ್ಪಣ್ಣ ನಿನಗೆ…. ಮದುವೆ ಆಗಿದೆ ಅನ್ನೋದು ನೆನಪಿರಲಿ.
ಗುಂಡ : ಓ ಹೌದು, ಅದು ನೆನಪಾಗಿ 2 ಗಂಟೆ ಕಾಲ ಅಳುತ್ತಾ ಕುಳಿತುಬಿಟ್ಟೆ!
ಒಮ್ಮೆ ಕಿಲಾಡಿ ಕಿಟ್ಟಿ ತನ್ನ ಹೆಂಡತಿ ಜೊತೆ ಎಲ್ಲಾದರೂ ಹೋಗಬೇಕೆಂದು ಪ್ಲಾನ್ ಹಾಕುತ್ತಿದ್ದ. ಮಹಾ ಜಿಪುಣ, ಹೋದ ಹಾಗೂ ಇರಬೇಕು, ಖರ್ಚೂ ಆಗಬಾರದು ಎಂಬುದು ಅವನ ಐಡಿಯಾ. ಆಗ ಹೆಂಡತಿ ಹೇಳಿದಳು.
ಕಮಲಿ : ನೋಡ್ರಿ, ಈ ಸಲ ಸರ್ಕಸ್‌ಗೆ ಹೋಗೋಣವೇ?
ಕಿಟ್ಟಿ : ಬೇಡ ಬೇಡ…. ಅದು ದುಬಾರಿ! ಅದಲ್ಲದೆ ನಾನೀಗ ಬಹಳ ಬಿಝಿ ಆಗಿದ್ದೇನೆ.
ಕಮಲಿ : ಅಲ್ಲ ರೀ, ಆ ಸರ್ಕಸ್‌ನಲ್ಲಿ ಒಬ್ಬ ಹುಡುಗಿ ಬಟ್ಟೆ ಇಲ್ಲದೇ ಸಿಂಹ ಹತ್ತಿಕೊಂಡು ಬರುತ್ತಾಳಂತೆ…..
ಕಿಟ್ಟಿ : ಹೌದಾ…. (ಸ್ವಲ್ಪ ಯೋಚಿಸಿ) ನನಗೇನೋ ಹೋಗಲು ಮನಸ್ಸಿಲ್ಲ. ಆದರೆ ಪಾಪ, ನೀನು ಇಷ್ಟು ಹೇಳ್ತಿದ್ದೀಯಾ ಅಂತ, ಹೋಗೋಣ ನಡಿ. ಅದೂ ಅಲ್ಲದೆ ನಾನು ಸಿಂಹ ನೋಡಿ ಬಹಳ ದಿನ ಆಯ್ತು.
ಆಮೇಲೆ…. ಇಬ್ಬರೂ ಸರ್ಕಸ್ ನೋಡಲು ಹೊರಟರು. ಕಿಟ್ಟಿ ಹೆಂಡತಿ ಕೇಳಿದ್ದನ್ನೆಲ್ಲ ವಿಧಿಯಿಲ್ಲದೆ ಕೊಡಿಸಬೇಕಾಯಿತು. ಯಾವಾಗ ಸಿಂಹ ಬರುತ್ತೋ, ಅದರ ಮೇಲೆ ಅಂಥ ಹುಡುಗಿ ಯಾವಾಗ ಬರ್ತಾಳೋ ಅಂತ ಕಾದ. ಸಿಂಹದ ಮೇಲೆ ಹುಡುಗಿ ಬಂತು, ಆದರೆ ಕಮಲಿ ಹೇಳಿದ ಹಾಗಲ್ಲ.
ಕಿಟ್ಟಿ : ಏನೇ ಇದು…. ಹುಡುಗಿ ಬಟ್ಟೆ ಇಲ್ಲದೆ ಬರ್ತಾಳೆ ಅಂದ್ರೆ ಇಲ್ಲಿ ನೋಡಿದ್ರೆ ಮಾಮೂಲಿ!
ಕಮಲಿ : ನಾನು ಹೇಳಿದ್ದು ಸಿಂಹ ಬಟ್ಟೆಯಿಲ್ಲದೆ ಬರುತ್ತೆ ಅಂತ…. ಹುಡುಗಿ ಅಲ್ಲ!
ನೀತಿ : ಹೆಂಡತಿಗೆ ಬುದ್ಧಿ ಇಲ್ಲ ಅಂದುಕೊಳ್ಳುವ ಗಂಡಂದಿರೇ ಹುಷಾರ್…… ಯಾಮಾರದಿರಿ!
ಸೋಮಪ್ಪ ತೀರಿಕೊಂಡಾಗ ಅವನ ಹೆಂಡತಿ, ಗಂಡನ ಸಮಾಧಿ ಮೇಲೆ ಹೀಗೆ ಬರೆಸಿದಳಂತೆ.
“ಇಲ್ಲಿ ನೆಮ್ಮದಿಯಾಗಿ ಮಲಗಿರಿ…. ನಾನು ಬಂದು ಸೇರುವವರೆಗೂ!”
ಅದನ್ನು ನೋಡಿ ಸೋಮಣ್ಣನ ಸಮಾಧಿಗೆ ಬಂದವರು ಹೇಳಿಕೊಳ್ಳತೊಡಗಿದರು.
“ಇದಕ್ಕೆ ಹೇಳುವುದು….. ಜೀವಂತ ಬದುಕಿದ್ದಾಗಲೂ ಸತ್ತ ನಂತರ ಸಂಗಾತಿ ಜೊತೆಗಿರುವುದು ಅಂತ!”
ಗೀತಾ : ನೋಡೇ, 6 ತಿಂಗಳ ಹಿಂದೆ ನನ್ನ ಮಗ ಶಾಲೆಗೆ ಹೋದವನು ಕಳೆದುಹೋಗಿದ್ದಾನೆ ಅಂತ ವಾಟ್ಸ್ಆ್ಯಪ್ ಮೆಸೇಜ್ ಹಾಕಿದ್ದೇ ತಪ್ಪಾಯ್ತು. ನೀನೂ ಹಾಗೆ ಮಾಡಬೇಡ.
ಸೀತಾ : ಯಾಕೆ? ಏನಾಯ್ತು?
ಗೀತಾ : ಆ ದಿನ ನನ್ನ ಮಗನೇನೋ ಅರ್ಧ ಗಂಟೇಲಿ ಸಿಕ್ಕಿದ. ಆ ಮೆಸೇಜ್ ಮಾತ್ರ ಗ್ರೂಪ್ ಗ್ರೂಪಿಗೇ ಸುತ್ತಾಡಿ ರಿಪೀಟ್ ಆಗುತ್ತಲೇ ಇದೆ. ಅವನು ಯಾವಾಗ ಶಾಲೆಗೆ ಹೊರಟರೂ ಸರಿ, ಯಾರಾದರೂ ಅವನನ್ನು ಪುಸಕ್ಕನೇ ಎಳೆದುಕೊಂಡು ಮನೆಗೆ ಕರೆದುಕೊಂಡು ಬಂದು, “ನಿಮ್ಮ ಮಗ ಸಿಕ್ಕಿದ. ನಮಗೆ 1000/ ರೂ. ಬಹುಮಾನ ಕೊಡಿ,” ಅಂತ ಇವತ್ತಿಗೂ ಪೀಡಿಸ್ತಾರಲ್ಲ…..?
ಗುಂಡ : ನಿನಗೆ ಗೊತ್ತಾ? ಇತ್ತೀಚೆಗೆ ಜೆಟ್ ಏರ್‌ವೇಸ್‌ನ ಜೊತೆ ಗೋಲ್‌ಮಾಲ್ ಮಲ್ಯ ಸೇರಿಕೊಂಡು ಹೊಸ ಏರ್‌ಲೈನ್ಸ್ ಪ್ರಾರಂಭಿಸುತ್ತಾರಂತೆ. ಆದರೆ ಹೆಸರು ಏನು ಗೊತ್ತಾ? `ಗೋಲ್‌ಮಾಲ್ ಏರ್‌ಲೈನ್ಸ್!’
ಕಿಟ್ಟಿ : ಅದಿರಲಿ, ಅದಕ್ಕಿಂತ ಘೋರರಾದ ಇನ್ನೊಂದು ಸುದ್ದಿ ಇದೆ ಗೊತ್ತಾ….? ಇವರೊಂದಿಗೆ ಸಹಾರಾ ತಂಡದ ಸುಬ್ರತೋ ರಾಯ್ ಸಹ ಸೇರಿಕೊಂಡರೆ ಅದರ ಹೆಸರು `ಸಬ್ ಗೋಲ್‌ಮಾಲ್’ ಅಂತ….!
ಸತೀಶನಿಗೆ ಬಹಳ ದಿನಗಳ ನಂತರ ಅವನ ಮುಂಬೈ ಗೆಳೆಯನಿಂದ ನೋವು ತುಂಬಿದ ಹೃದಯ ವಿದ್ರಾವಕ ಮೆಸೇಜ್ ಒಂದು ಬಂದಿತ್ತು. “ಮುಂಬೈನ ಭಾರಿ ಮಳೆಯಿಂದಾಗಿ ನಾನು 4 ದಿನಗಳಿಂದ ಗೃಹಬಂಧನದಲ್ಲಿದ್ದೇನೆ. ನನ್ನ ಹೆಂಡತಿಯಿಂದ ಯಾರಾದರೂ ನನ್ನ ಕಾಪಾಡುವಿರಾ?”
ವಾಣಿ : ನೋಡಿ, ಸಾವಿತ್ರಿ ಎಂಥ ಶಕ್ತಿಶಾಲಿ ಅಂದ್ರೆ ಸಾಕ್ಷಾತ್ ಆ ಯಮನೊಡನೆ ಹೋರಾಡಿ ಹೋಗುತ್ತಿದ್ದ ತನ್ನ ಗಂಡನ ಪ್ರಾಣ ಕಾಪಾಡಿಕೊಂಡಳಂತೆ…..
ಮಹೇಶ : ಇದರಿಂದ ಏನು ತಿಳಿಯುತ್ತದೆ?
ವಾಣಿ : ಇನ್ನೇನು? ಸತಿ ಸಾವಿತ್ರಿ ಎಂಥ ಪತಿವ್ರತಾ ಶಿರೋಮಣಿ ಅಂತ ಗೊತ್ತಾಗುತ್ತೆ!
ಮಹೇಶ : ಅದಲ್ಲ…. ಒಮ್ಮೆ ಮದುವೆ ಬಂಧನದಲ್ಲಿ ಗಂಡ ಅನ್ನಿಸಿಕೊಂಡ ಪ್ರಾಣಿ ಸಿಕ್ಕಿಬಿದ್ದರೆ ಆಯ್ತು, ಹೆಂಡತಿಯಿಂದ ಅವನನ್ನು ಆ ಯಮನೂ ಬಿಡಿಸಲಾರ ಅಂತ.
ಗಿರೀಶ : ಆದರ್ಶ ಹೆಂಡತಿ ಅಂತ ಯಾರಿಗೆ ಹೇಳಬಹುದು?
ಮಹೇಶ : ಯಾರು ಗಂಡನಿಂದ ಮನೆ ಖರ್ಚಿಗೆ 6 ಸಾವಿರ ಖರ್ಚಾಯ್ತು ಅಂತ ಲೆಕ್ಕ ಒಪ್ಪಿಸಿ ಉಳಿದದ್ದನ್ನು ಉಳಿತಾಯ ಮಾಡುತ್ತಾಳೋ ಅವಳೇ ಆದರ್ಶ ಹೆಂಡತಿ!
ಹೊಸದಾಗಿ ಮದುವೆಯಾಗಿದ್ದ ಗುಂಡ ಗುಂಡಿ ಚಾಟ್ ಸವಿಯಲು ಸಂಜೆ ಹೊರಗೆ ಹೊರಟಿದ್ದರು.
ಗುಂಡಿ : ಆಗಿನಿಂದ ಅದೇಕೆ ಒಂದೇ ಸಮನೆ ನನ್ನ ಕಣ್ಣಿನಾಳದೊಳಗೆ ಇಣುಕಿ ನೋಡ್ತಿದ್ದೀರಿ…. ನೀವು ತುಂಬಾ ರೊಮ್ಯಾಂಟಿಕ್ ಅಂತ ಗೊತ್ತು, ರೀ ಹೋಗೀಪ್ಪ…. ಇಲ್ಲಿ ಬೀದೀಲೆಲ್ಲ ಹಾಗೆ ನನ್ನ ನೋಡಬಾರದು. ಜನ ಎಲ್ಲಾ ನಮ್ಮನ್ನೇ ಗಮನಿಸುತ್ತಾರೆ, ನಮ್ಮ ಪ್ರೀತಿಗೆ ಕಣ್ಣು ಬೀಳುತ್ತೆ ಅಷ್ಟೆ.
ಗುಂಡ : ಪ್ರೀತಿ ಮನೆ ಹಾಳಾಯ್ತು…… ಆಗಿನಿಂದ ಅವನು ಕೊಡುತ್ತಿರುವ ಪಾನಿಪೂರಿಯನ್ನು ನೀನೇ ಕೈ ಚಾಚಿ ಚಾಚಿ ತಗೊಂಡು ಸ್ವಾಹಾ ಮಾಡ್ತಿದ್ದೀಯಾ…. ನನಗೆ ಒಂದಾದರೂ ಬಿಡ್ತೀಯೇನೋ ಅಂತ ನಾನೂ ಆಗಿನಿಂದ ಗಮನಿಸ್ತಾನೇ ಇದ್ದೀನಿ…..