ವಿಶ್ವದಲ್ಲಿನ ಪ್ರತಿಯೊಂದು ಸಮಾಜದಲ್ಲಿಯೂ ಅದು ಮುಂದುವರಿದ ವರ್ಗವಾಗಲಿ ಅಥವಾ ಹಿಂದುಳಿದ ವರ್ಗವಾಗಲಿ, ಮೂಢನಂಬಿಕೆಯ ಛಾಯೆ ಹರಡಿಕೊಂಡಿದೆ. ಮೂಢನಂಬಿಕೆಯು ವಿಭಿನ್ನ ಪ್ರಕಾರದ್ದಾಗಿರುತ್ತದೆ. ಕೆಲವು, ಜಾತಿಗೆ ಸಂಬಂಧಿಸಿದ್ದರೆ ಇನ್ನು ಕೆಲವು ಧರ್ಮ, ಸಮಾಜಗಳಿಗೆ ಸಂಬಂಧಪಟ್ಟಿರುತ್ತವೆ. ಮತ್ತೆ ಕೆಲವು ವಿಶ್ವವ್ಯಾಪಿಯಾಗಿದ್ದು ಅದೆಷ್ಟು ಆಳವಾಗಿ ಬೇರೂರಿರುತ್ತವೆಂದರೆ, ಅವುಗಳನ್ನು ಕಿತ್ತೊಗೆಯುವುದು ಕಷ್ಟ ಸಾಧ್ಯ. ಧರ್ಮದ ಹೆಸರಿನಲ್ಲಿ ಸ್ತ್ರೀಯರಿಗೆ ಬಗೆಬಗೆಯ ಆಚಾರ ಪದ್ಧತಿಗಳನ್ನು ರೂಪಿಸಲಾಗಿದ್ದು, ಅವರನ್ನು ಪುರುಷರಿಂದ ಪ್ರತ್ಯೇಕವಾಗಿ ಮತ್ತು ಸಾಮಾಜಿಕ ಹಕ್ಕುಗಳಿಂದ ದೂರವಾಗಿ ಇರಿಸಲಾಗಿದೆ.
ಬಹುತೇಕ ಧರ್ಮಗಳಲ್ಲಿ ಋತುಚಕ್ರದ ದಿನಗಳಲ್ಲಿ ಮಹಿಳೆಯರನ್ನು ಮೈಲಿಗೆಯೆಂದು ಭಾವಿಸಲಾಗುತ್ತದೆ. ಅಡುಗೆಮನೆ, ದೇವರ ಕೋಣೆಗಳಿಗೆ ಪ್ರವೇಶವನ್ನು ನಿಷಿದ್ಧಗೊಳಿಸುವುದಲ್ಲದೆ, ಅವರಿಗೆ ಮನೆಯಲ್ಲಿನ ಯಾವುದೇ ವಸ್ತುವನ್ನು ಮುಟ್ಟಲು ಆಸ್ಪದವಿರುವುದಿಲ್ಲ. ತಿನ್ನುವುದು, ತೊಡುವುದು, ಸ್ನಾನ, ನಿದ್ರೆಯ ವಿಷಯಗಳಲ್ಲಿಯೂ ಅವರಿಗೆ ಶತಮಾನಗಳಿಂದಲೂ ಕಟ್ಟುಕಟ್ಟಳೆ ಹೇರಲಾಗಿದೆ. ಇಂದೂ ಸಹ ಇದರಲ್ಲಿ ಹೆಚ್ಚಿನ ಪರಿವರ್ತನೆ ಆಗಿರುವುದಿಲ್ಲ.
ಕಾಲ ಕಳೆದಂತೆ ಖಂಡಿತಾ ವಿಜ್ಞಾನ ಯುಗದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ನೂರಾರು ವರ್ಷಗಳಿಂದ ಆಗದಿದ್ದುದು ಈಗ ಕಳೆದ 20-30 ವರ್ಷಗಳಲ್ಲಿ ನಡೆಯುತ್ತಿದೆ. ಮಹಿಳೆಯರು ತಮ್ಮ ಹಕ್ಕು ಮತ್ತು ಆತ್ಮಗೌರವಗಳ ಬಗ್ಗೆ ಜಾಗೃತರಾಗುತ್ತಿದ್ದಾರೆ. ಕೆಲವು ಧಾರ್ಮಿಕ ಮತ್ತು ಸಾಮಾಜಿಕ ಪದ್ಧತಿಗಳನ್ನು ಮುರಿದು ಮುಂದೆ ನಡೆಯುತ್ತಿದ್ದಾರೆ. ಆದರೆ 21ನೇ ಶತಮಾನದಲ್ಲಿಯೂ ಅವರು ಹಿಂದಿನ ಕೆಲವಾರು ಆಹಾರ ಪದ್ಧತಿ, ಆಡಂಬರಗಳನ್ನು ಮುಂದುವರಿಸಿಕೊಳ್ಳುತ್ತಾ ನಡೆದಿದ್ದಾರೆ.
ಇದನ್ನೆಲ್ಲ ಅವರು ತಾವಾಗಿ ಇಷ್ಟಪಟ್ಟು ಮಾಡುತ್ತಿರುವವರೋ ಅಥವಾ ಇದು ಅವರ ದಡ್ಡತನವೋ ಎಂಬುದನ್ನು ಕೆಲವು ಸ್ವತಂತ್ರ ವಿಚಾರಧಾರೆಯುಳ್ಳ ಮಹಿಳೆಯರಿಂದ ತಿಳಿಯೋಣ ಬನ್ನಿರಿ.
ಧರ್ಮದ ಹೊದಿಕೆಯಲ್ಲಿ ನಿಯಮಗಳು : ಪತ್ರಕರ್ತೆ ಮತ್ತು ಲೇಖಕಿ ರೇಣುಕಾ ಶರ್ಮ ಹೀಗೆ ಹೇಳುತ್ತಾರೆ, “ನಮ್ಮ ಪೂರ್ವಿಕರು ಮಹಿಳೆಯರಿಗಾಗಿ ಮಾಡಿದ ಕಟ್ಟಳೆಗಳು ಅವರ ಒಳಿತಿಗಾಗಿಯೇ ಇದ್ದವು. ತಿಂಗಳ ಮುಟ್ಟಿನ ದಿನಗಳ ನಿಯಮಗಳನ್ನು ಮಹಿಳೆಯರ ಆರೋಗ್ಯದ ದೃಷ್ಟಿಯಿಂದಲೇ ರೂಪಿಸಲಾಗಿದ್ದವು. ದಿನವಿಡೀ ಮೈಮುರಿತದ ದುಡಿಮೆಯಿಂದ ಕೊಂಚ ವಿಶ್ರಾಂತಿ ಸಿಗಲಿ ಎಂಬುದು ಅದರ ಉದ್ದೇಶ. ವಾಸ್ತವವಾಗಿ ಇದಕ್ಕೆ ವೈಜ್ಞಾನಿಕ ಆಧಾರ ಇದೆ. ಏಕೆಂದರೆ ತಿಂಗಳ ಆ ದಿನಗಳಲ್ಲಿ ಮಹಿಳೆಯರಲ್ಲಿ ಕೆಲವು ಶಾರೀರಿಕ ಮತ್ತು ಮಾನಸಿಕ ಏರುಪೇರುಗಳಾಗುತ್ತವೆ. ಅದಕ್ಕಾಗಿ ಮಾಡಿದ ನಿಯಮಗಳಿಗೆ ಧಾರ್ಮಿಕ ಹೊದಿಕೆ ಹೊದಿಸಿ, ಅವರನ್ನು ಮೈಲಿಗೆಯೆಂದು ಘೋಷಿಸಲಾಯಿತು. ಇದರಿಂದ ಅವರು ದೇವರ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಮಾಡಿದುದು ಮೂಢನಂಬಿಕೆ.
“ನನಗೆ ಇದರಲ್ಲಿ ನಂಬಿಕೆ ಇಲ್ಲ. ಆದರೆ ಶತಮಾನಗಳಿಂದ ನಡೆದು ಬಂದಿರುವ ಪದ್ಧತಿಯನ್ನು ಬದಲಾಯಿಸುವಲ್ಲಿ ಸಮಯ ಹಿಡಿಯುತ್ತದೆ. ನಾವು ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎನ್ನುವುದು ನಮ್ಮ ವೈಯಕ್ತಿಕ ವಿಷಯ. ಇದರಲ್ಲಿ ಮೂಢನಂಬಿಕೆ ಬೇಡ.”
ಮಹಿಳೆಯರ ಆರೋಗ್ಯ ಹಿತರಕ್ಷಣೆಗಾಗಿ ನಮ್ಮ ಪೂರ್ವಿಕರು ಇಂತಹ ನಿಯಮಗಳನ್ನು ಮಾಡಿರುವರೆಂಬ ರೇಣುಕಾ ಮಾತು ಎಷ್ಟು ಸರಿ? ಪೂಜಾರಿಗಳು ಮತ್ತು ಧರ್ಮಾಧಿಕಾರಿಗಳಿಂದ ಈ ಪದ್ಧತಿ ಜಾರಿಗೆ ಬಂದಿರಬಹುದು. ಇಲ್ಲವಾದರೆ ಒಂಟಿ ಮಹಿಳೆಯು ಹೇಗೆ ಋತು ಧರ್ಮವನ್ನು ಸಾವರಿಸಿಕೊಂಡು ಅಡುಗೆ ಮಾಡುತ್ತಾಳೆ ಮತ್ತು ಮಕ್ಕಳನ್ನು ಪೋಷಿಸುತ್ತಾಳೆ?
ಕುಸಿಯುತ್ತಿರುವ ಆಚಾರ ಪದ್ಧತಿಗಳು : ಬಿಸ್‌ನೆಸ್ ವುಮನ್ ಶೈಲಜಾ ಹೀಗೆ ಹೇಳುತ್ತಾರೆ, “ಈ ವಿಷಯದಲ್ಲಿ ನಾವು ಹಿಂದಿನ ಎಲ್ಲ ಪದ್ಧತಿಗಳನ್ನು ಮುರಿದಿದ್ದೇವೆ. ಇದು ನಿಮ್ಮ ವೈಯಕ್ತಿಕ ಅಭಿಪ್ರಾಯದಿಂದ ನಡೆಸುತ್ತಿರುವುದು. ನನಗೆ ಮತ್ತು ನಮ್ಮ ಮನೆಯಲ್ಲಿ ಯಾರಿಗೂ ಈ ಅಂಧ ವಿಶ್ವಾಸದಲ್ಲಿ ಮನ್ನಣೆ ಇಲ್ಲ. ಮುಟ್ಟಿನ ಸಮಯದಲ್ಲಿ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಬಹುದು. ಅಶುಭ, ಅಪವಿತ್ರ ಎಂಬಂತಹದೇನೂ ಆಗುವುದಿಲ್ಲ. ಇಂತಹ ಧಾರ್ಮಿಕ ತಪ್ಪು ಕಟ್ಟಳೆಗಳನ್ನು ಇಂದಿನ ಪೀಳಿಗೆಯು ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತಿದೆ.”
ನಮ್ಮ ಶಾರೀರಿಕ ಕ್ರಿಯೆಗಳೆಲ್ಲ ಎಂದಿನಂತೆ ನಡೆಯುತ್ತಿರುವಾಗ ಋತುಚಕ್ರದ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು ಏಕೆ ತಪ್ಪಾಗುತ್ತದೆ? ಇದು ಕೇವಲ ಮೂಢನಂಬಿಕೆಯಷ್ಟೇ. ಅದು ತಪ್ಪು ಎನ್ನುವುದಾದರೆ ಮೂತ್ರ ವಿಸರ್ಜನೆಯೂ ತಪ್ಪು. ಆದರೆ ದೇವಸ್ಥಾನಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಸತ್ಕರ್ಮ ಮತ್ತು ಮನಃಶುದ್ಧಿಯಿಂದ ಜೀವನದ ಏಳ್ಗೆ : ಡಾ. ಅನುಪಮಾ ಹೀಗೆ ಹೇಳುತ್ತಾರೆ, “ನಾನು ವೃತ್ತಿಯಿಂದ ವೈದ್ಯೆ ಮತ್ತು ವಿಜ್ಞಾನದಲ್ಲಿ ನಂಬಿಕೆಯುಳ್ಳವಳು. ಋತುಚಕ್ರದ ದಿನಗಳಲ್ಲಿ ದೇವರ ಪೂಜೆ ಮಾಡುವುದು, ದೇವಸ್ಥಾನಕ್ಕೆ ಹೋಗುವುದು ಅಶುಭವಲ್ಲ ಎಂಬುದು ನನ್ನ ಅಭಿಪ್ರಾಯ. ಮಹಿಳೆಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಏನು ಮಾಡಲೂ ಸ್ವತಂತ್ರರು. ಋತುಚಕ್ರ ಪ್ರಕೃತಿಯ ಒಂದು ಪ್ರಕ್ರಿಯೆ. ಧರ್ಮಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಪೂರ್ವಿಕರು ನಮ್ಮ ಹಿತಕ್ಕಾಗಿ ಅನೇಕ ಒಳ್ಳೆಯ ನಿಮಯಗಳನ್ನು ರೂಪಿಸಿದ್ದಾರೆ. ಆದರೆ ಧಾರ್ಮಿಕ ಸಂಕುಚಿತ ಮನಸ್ಸಿನ ಜನರು ಅವುಗಳನ್ನು ಧರ್ಮದ ಆಚರಣೆಯ ಹೆಸರಿನಿಂದ ಮಹಿಳಾ ಶೋಷಣೆಗೆ ಕಾರಣವನ್ನಾಗಿಸಿದ್ದಾರೆ. ನಮ್ಮ ಜೀವನ ನಮ್ಮ ಸತ್ಕರ್ಮ ಮತ್ತು ಮನಃಶುದ್ಧಿಯ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು ಸಮಾಜ ವ್ಯಾಪೀ ಧಾರ್ಮಿಕ ಕುಕರ್ಮಗಳಿಂದಲ್ಲ.”
ಈ ಅಭಿಪ್ರಾಯ ಅರೆ ವೈಜ್ಞಾನಿಕ ಮತ್ತು ಅರೆ ಮೂಢನಂಬಿಕೆಯಿಂದ ಕೂಡಿದೆ ಎಂದು ಹೇಳಬಹುದು.
ವೈಜ್ಞಾನಿಕ ಆಧಾರದ ಮೇಲೆಯೇ ರೂಪಿತವಾದ ನಿಯಮ?: ಸಮಾಜ ಸೇವಕಿ ನಿರ್ಮಲಾ ಹೀಗೆ ಹೇಳುತ್ತಾರೆ, “ನಾನು ಯಾವುದೇ ಸಾಂಪ್ರದಾಯಿಕ ವಿಚಾರಧಾರೆಯನ್ನು ಒಪ್ಪುವುದಿಲ್ಲ ಮತ್ತು ಮೂಢನಂಬಿಕೆಗಳನ್ನು ಉತ್ತೇಜಿಸುವುದಿಲ್ಲ. ಮುಟ್ಟಿನ ದಿನಗಳಲ್ಲಿ ನಾನು ದೇವಸ್ಥಾನಕ್ಕೆ ಹೋಗುವುದಿಲ್ಲವೆಂದರೆ ಅದು ನನ್ನ ವೈಯಕ್ತಿಕ ನಿರ್ಧಾರವೇ ಹೊರತು ಅಪಶಕುನದ ಭಯವಲ್ಲ. ನಮ್ಮ ಪೂರ್ವಿಕರು ಮಹಿಳೆಯರ ಹಿತಕ್ಕಾಗಿ ವೈಜ್ಞಾನಿಕ ಆಧಾರದ ಮೇಲೆಯೂ ನಿಯಮಗಳನ್ನು ರೂಪಿಸಿದ್ದಾರೆ ಮತ್ತು ಅದನ್ನು ದೃಢಗೊಳಿಸಲು ಧರ್ಮದ ಹೆಸರನ್ನು ಬಳಸಲಾಗಿದೆ. ಅಷ್ಟಲ್ಲದೆ ಋತುಚಕ್ರಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ಸಂಬಂಧಿಸಿದ ನಿಯಮ ಅಂದಿನ ಕಾಲ ಮತ್ತು ಪರಿಸ್ಥಿತಿಗೆ ಅನುಗುಣವಾಗಿದ್ದಿತು. ಇಂದು ಅದರ ಅವಶ್ಯಕತೆ ಇಲ್ಲ. ಆದರೂ ಅದನ್ನು ಅನುಸರಿಸಲಾಗುತ್ತಿದೆ ಎಂದರೆ, ಅದು ಖಂಡಿತ ಮೂಢನಂಬಿಕೆಯೇ. ನನ್ನ ಅಭಿಪ್ರಾಯದಲ್ಲಿ ನಾವು ಆರೋಗ್ಯವಂತರೂ, ಶುಚಿಭೂರ್ತರೂ ಆಗಿದ್ದೇವೆಂದರೆ, ದೇವರ ಪೂಜೆಯೂ ಸೇರಿದಂತೆ ಯಾವುದೇ ಕೆಲಸವನ್ನೂ ಮಾಡಲು ಅರ್ಹರಾಗಿರುತ್ತೇವೆ.”
ಸರಿತಪ್ಪುಗಳ ತೀರ್ಮಾನ ಸ್ವತಃ ಮಹಿಳೆಯರಿಂದ : ನಿವೃತ್ತ ಶಿಕ್ಷಕಿ ಶೋಭಾ ಹೀಗೆ ಹೇಳುತ್ತಾರೆ, “ಧರ್ಮದ ಹೆಸರಿನ ಯಾವುದೇ ಆಚರಣೆಯನ್ನು ನಾನು ಒಪ್ಪುವುದಿಲ್ಲ. ನನ್ನ ಜೀವನದಲ್ಲಿ ನಾನು ಇಂತಹ ಕೆಲವು ಆಚಾರ ಪದ್ಧತಿಗಳನ್ನು ಮುರಿದಿದ್ದೇನೆ. ನನ್ನ ತಂದೆಯ ಮೃತ್ಯುವಿನಲ್ಲಿ ನಾನು ಸ್ಮಶಾನಕ್ಕೂ ಹೋಗಿದ್ದೆನು. ಸ್ತ್ರೀಯರ ಮುಖ್ಯ ವ್ರತಗಳಾದ ಭೀಮನ ಅಮಾವಾಸ್ಯೆ, ಮಂಗಳ ಗೌರಿ ಪೂಜೆಗಳನ್ನೂ ನಾನು ಮಾಡುತ್ತಿಲ್ಲ. ಇದರಿಂದ ನನ್ನ ಪತಿ ಅಥವಾ ಕುಟುಂಬಕ್ಕೆ ಯಾವುದೇ ತೊಂದರೆಯಾಗಿಲ್ಲ.
“ಋತುಚಕ್ರಕ್ಕೆ ಸಂಬಂಧಿಸಿದ ಯಾವುದೇ ಪದ್ಧತಿಯನ್ನು ಮಹಿಳೆಯರ ಆರೋಗ್ಯದ ದೃಷ್ಟಿಯಿಂದಲೇ ಅನುಸರಿಸಲಾಗುತ್ತಿತ್ತು. ಅದಕ್ಕೆ ಧರ್ಮದ ಹೆಸರನ್ನು ಜೋಡಿಸಿ ಮೈಲಿಗೆಯ ಭಾವನೆ ತರಿಸಿ ಮಹಿಳೆಯರ ಶೋಷಣೆ ಮಾಡಲಾಗಿದೆ. ಇಂದು ನಾವು ಸ್ವತಂತ್ರರು. ಸರಿತಪ್ಪುಗಳ ವ್ಯತ್ಯಾಸ ತಿಳಿಯಬಲ್ಲೆವು. ಯಾವುದೇ ಧರ್ಮ ಅಥವಾ ಸಮಾಜದಿಂದ ಪ್ರಭಾವಿತರಾಗುವ ಅವಶ್ಯಕತೆ ಇಲ್ಲ.”
ಅಸಂಭವದ ಭಯ
ಮೇಲಿನ ಅಭಿಪ್ರಾಯಗಳೆಲ್ಲ ಸಮಾಜದ ವಿದ್ಯಾವಂತ, ಸ್ವತಂತ್ರ ಮನೋಭಾವದ ಮತ್ತು ಅಂಧವಿಶ್ವಾಸಗಳಲ್ಲಿ ನಂಬಿಕೆಯಿರಿಸಿದ ಮಹಿಳೆಯರು ವ್ಯಕ್ತಪಡಿಸಿದ ಹೇಳಿಕೆಗಳಾಗಿವೆ. ಇವರೆಲ್ಲ ಸಂಪ್ರದಾಯದ ಆಚರಣೆಯು ವೈಯಕ್ತಿಕ ವಿಚಾರವೆಂದು ತಿಳಿಯುತ್ತಾರೆ. ಆದರೆ ಧರ್ಮದ ವಿಷಯಕ್ಕೆ ಬಂದಾಗ, ಧಾರ್ಮಿಕ ಕುತರ್ಕಗಳಿಗೆ ಸಮಜಾಯಿಷಿ ನೀಡುತ್ತಾ ತಾವು ಅಂಧವಿಶ್ವಾಸಿಗಳೆಂಬುದನ್ನು ಸಾಬೀತುಪಡಿಸುತ್ತಾರೆ. ಅವರು ಒಂದು ಕಡೆ ತಾವು ಅಂಧವಿಶ್ವಾಸಿಗಳಲ್ಲವೆಂದು ಹೇಳಿದರೆ, ಮತ್ತೊಂದೆಡೆ ಧರ್ಮಕ್ಕೆ ಸಂಬಂಧಿಸಿದ ಎಲ್ಲ ಆಚರಣೆಗಳನ್ನೂ ಒಪ್ಪುತ್ತಾರೆ.
ಋತುಚಕ್ರ ಒಂದು ಪ್ರಕೃತಿ ನಿಯಮ. ಆ ಸಂದರ್ಭದಲ್ಲಿ ಪೂಜಾ ಕಾರ್ಯಗಳನ್ನು ಮಾಡಬಹುದು. ಮಂದಿರಗಳಿಗೆ ಹೋಗಬಹುದು ಎಂದೆಲ್ಲ ಅವರು ಹೇಳುತ್ತಾರೆ. ಆದರೆ ನೀವು ಹಾಗೆ ಮಾಡುವಿರಾ ಎಂದು ಅವರನ್ನು ಕೇಳಿದರೆ ಉತ್ತರ ದೊರೆಯುವುದಿಲ್ಲ. ಇದು ಮೂಢನಂಬಿಕೆಯಲ್ಲ, ವೈಯಕ್ತಿಕ ನಿರ್ಣಯ ಎಂದು ಹೇಳುತ್ತಾರೆ. ವಾಸ್ತವವೆಂದರೆ ಈ ವೈಯಕ್ತಿಕ ನಿರ್ಣಯ ಅಥವಾ ಸೆಲ್ಫ್ ಚಾಯ್ಸ್ ನ ಹಿಂದೆ ಶತಮಾನಗಳ ಕಾಲದಿಂದಲೂ ಮನಸ್ಸನ್ನು ವ್ಯಾಪಿಸಿರುವ ಯಾವುದೋ ಅಸಂಭವದ ಭಯ ಹುದುಗಿದೆ.
ವಿಚಾರ ಪರಿವರ್ತನೆ
ನಾವಿಂದು ಕಾಣುತ್ತಿರುವ ಬದಲಾವಣೆಯಲ್ಲಿ ನಮ್ಮ ಉಂಡಾಡುವ ರೀತಿ ಮತ್ತು ಜೀವನಶೈಲಿಗೆ ಸೀಮಿತವಾಗಿದೆ. ಆದರೆ ನಮ್ಮ ಮನಃಸ್ಥಿತಿ ಮಾತ್ರ ಹಿಂದಿನಂತೆಯೇ ಇದ್ದು, ಅದರ ಬದಲಾವಣೆ ಮುಖ್ಯವಾಗಿದೆ. ಇದು ಯಾವುದೇ ಧರ್ಮ ಸಂಬಂಧಿತ ವಿಷಯವಲ್ಲ, ಬದಲಾಗಿ ನಮ್ಮನ್ನು ವಿಚಲಿತಗೊಳಿಸಿ ಹಿಂದಕ್ಕೆಳೆಯುತ್ತಿದೆ. ಇದನ್ನು ಸುಲಭವಾಗಿ ಹೋಗಲಾಗಿಸುವುದಿಲ್ಲ.
ಮಹಿಳೆಯರಿಂದಲೇ ಪುರುಷತ್ವಕ್ಕೆ ಮನ್ನಣೆ
ಸುಮಾರು 1980ರಲ್ಲಿ ಕೊಹ್ಹರ್ ನಡೆಸಿದ ಒಂದು ಸೋಶಿಯಲ್ ಎಕ್ಸ್ ಪೆರಿಮೆಂಟ್‌ನ್ನು `ಫೈವ್ ಮಂಕೀಸ್ ಅಂಡ್ ಎ ಲ್ಯಾಡರ್’ ಎಂಬ ಕಥೆಯಲ್ಲಿ ಚಿತ್ರಿಸಲಾಗಿದೆ. ಅದರಲ್ಲಿ ವಿಜ್ಞಾನಿಗಳು ಒಂದು ಪಂಜರದಲ್ಲಿ ಏಣಿಯೊಂದರ ತುದಿಯಲ್ಲಿ ಬಾಳೆಹಣ್ಣುಗಳನ್ನಿರಿಸಿ 5 ಮಂಗಗಳನ್ನು ಅದರಲ್ಲಿ ಕೂಡಿಹಾಕಿದರು. ಒಂದು ಮಂಗ ಏಣಿಯನ್ನು ಹತ್ತಲು ತೊಡಗಿದರೆ, ಉಳಿದ ಮಂಗಗಳು ಅದಕ್ಕೆ ಹೊಡೆದು ಹಿಂದಕ್ಕೆಳೆಯುತ್ತಿದ್ದವು. ಕ್ರಮೇಣ ಅವುಗಳಲ್ಲಿ ಭೀತಿಯ ಭಾವನೆಯು ಉಂಟಾಗಿ ಯಾವ ಮಂಗವೂ ಹತ್ತುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ.
ನಂತರ ವಿಜ್ಞಾನಿಗಳು ಹಳೆಯ ಮಂಗಗಳ ಜಾಗದಲ್ಲಿ ಒಂದೊಂದಾಗಿ ಹೊಸ ಮಂಗಗಳನ್ನು ಸೇರಿಸಿದರು. ಅವು ಹತ್ತಲು ತೊಡಗಿದರೆ ಏಟು ಬೀಳುತ್ತಿತ್ತು. ಅದು ಏಕೆಂದು ಯಾರಿಗೂ ಗೊತ್ತಿಲ್ಲ. ಹಾಗೆ ನಡೆದು ಬಂದಿರುವುದರಿಂದ ಆಗುತ್ತದೆ ಎಂದಷ್ಟೇ ಗೊತ್ತು. ಮಾನವನ ವ್ಯವಹಾರ ಮತ್ತು ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಇದೊಂದು ಉತ್ತಮ ಉದಾಹರಣೆಯಾಗಿದೆ.
ಮಂಗ ಮತ್ತು ಮಾನವನ ಸ್ವಭಾವಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಹೀಗೆ ಮಾಡಬಾರದು, ಮಾಡಿದರೆ ಹಾಗಾಗುತ್ತದೆ ಎಂದು ಎಷ್ಟೋ ಬಾರಿ ನಮಗೆ ಹೇಳಲಾಗುತ್ತದೆ. ನಾವು ಮಂಗಗಳಂತೆ ಯೋಚಿಸದೆ ಹೇಳಿದಂತೆ ನಡೆಯುತ್ತೇವೆ. ಅದೇ ಸುಲಭವೆಂದು, ಒಳ್ಳೆಯದೆಂದು ಭಾವಿಸುತ್ತೇವೆ. ವಾಸ್ತವವಾಗಿ ಮಹಿಳೆಯರೇ ಪುರುಷ ಪ್ರಾಧಾನ್ಯತೆಗೆ ಮಾನ್ಯತೆ ನೀಡುತ್ತಾರೆ ಮತ್ತು ಇಂತಹ ಸಾಂಪ್ರದಾಯಿಕ ವಿಚಾರಗಳನ್ನು ಮುನ್ನಡೆಸುತ್ತಾ ಬಂದಿದ್ದಾರೆ.
ಸಂಪ್ರದಾಯಗಳ ಹೆಸರಿನಲ್ಲಿ ಶೋಷಣೆ
ಇಂದು ವಿಜ್ಞಾನ ಒಪ್ಪದ, ಸಮರ್ಥಿಸದ ಆಚಾರ, ನಂಬಿಕೆಗಳ ಮೂಲವನ್ನು ಅರ್ಥ ಮಾಡಿಕೊಂಡು, ಅವುಗಳ ಮೇಲಿನ ಮೂಢನಂಬಿಕೆಯ ಪರದೆಯನ್ನು ನಾವು ಕಿತ್ತೊಗೆಯಬೇಕಾಗಿದೆ. ಆದರೆ ನಾವು ವಿಜ್ಞಾನವನ್ನು ಸಹ ಅಜ್ಞಾನದ ಆಚಾರಗಳಿಗೆ ಸಹಾಯಕವನ್ನಾಗಿ ಮಾಡಿಕೊಳ್ಳುತ್ತಿದ್ದೇವೆ.
ಶತಮಾನಗಳಿಂದಲೂ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಭಿನ್ನವಾದ ನೀತಿ ನಿಯಮಗಳನ್ನು ರೂಪಿಸಲಾಗಿದೆ. ಇಂತಹ ನಿಯಮ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಅವರನ್ನು ಶೋಷಿಸಿ, ನಿಯಂತ್ರಣದಲ್ಲಿರಿಸಿ, ಅವರ ವಿಕಾಸವನ್ನು ತಡೆಯಲಾಯಿತು. ಇದರ ಫಲವಾಗಿ ಮಹಿಳೆಯರು ನಿಯಂತ್ರಿತರಾದುದೇ ಅಲ್ಲದೆ, ಇಂತಹ ಆಧಾರ ರಹಿತ ಪದ್ಧತಿಗಳಿಗೆ ದಾಸರೂ ಆದರು.
ಧರ್ಮ ಮಹಿಳೆಯರಿಗೆ ಪುರುಷ ಸಮಾನ ಸ್ಥಾನವನ್ನು ಕೊಡಲೊಲ್ಲದು. ಮಹಿಳೆಯರು ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ಗಳಿಸಿಕೊಳ್ಳಬೇಕಾದರೆ, ತಮ್ಮ ಹಕ್ಕು ಮತ್ತು ಆತ್ಮಗೌರವಗಳನ್ನು ಧರ್ಮಕ್ಕಿಂತ ಮೇಲಿನದೆಂದು ತಿಳಿಯಬೇಕು. ಶತಮಾನಗಳಿಂದ ಬೇರೂರಿದ ಈ ಮಾನಸಿಕತೆಯನ್ನು ಬದಲಾಯಿಸಿಕೊಳ್ಳಬೇಕು. ಚರ್ಚೆ ಮತ್ತು ಮೂಢನಂಬಿಕೆಯ ಜಾಗದಲ್ಲಿ ತರ್ಕ ಮತ್ತು ಆತ್ಮಚಿಂತನೆ ಇಂದಿನ ಅವಶ್ಯಕತೆಯಾಗಿದೆ.
ಆತ್ಮಗೌರಕ್ಕಿಂತ ದೊಡ್ಡ ಧರ್ಮವಿಲ್ಲ
ಕೆಲವು ತಿಂಗಳುಗಳ ಹಿಂದೆ ಒಂದು ಎನ್‌ಜಿಓ ಮೂಲಕ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಕೇಳಲಾಯಿತು. ದಕ್ಷಿಣ ಏಷ್ಯಾದ ಪ್ರಸಿದ್ಧ ಮಹಿಳಾ ಕಾರ್ಯಕರ್ತೆ ಮತ್ತು ಲೇಖಕಿಯಾದ ಕಮಲಾ ಹೀಗೆ ಹೇಳಿದರು, “ಮುಟ್ಟಿನ ಸಮಯದಲ್ಲಿ ಮಹಿಳೆಯರು ಮೈಲಿಗೆಯಾಗಿರುತ್ತಾರೆ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಮುಂತಾದ ಅನಿಷ್ಟ ಪದ್ಧತಿಗಳು ಪುರುಷ ಪ್ರಾಧಾನ್ಯತೆಯನ್ನು ಬೆಳೆಸುವ ತಂತ್ರವಾಗಿದೆ. ಇವುಗಳೆಲ್ಲ ಮಹಿಳಾ ವಿರೋಧ ಶಾಸ್ತ್ರವಾದ ಮನುಸ್ಮೃತಿಯ ಕೊಡುಗೆ. ಇವುಗಳನ್ನು ಜಾಣತನದಿಂದ ಮಹಿಳೆಯರ ಮೇಲೆ ಹೊರಿಸಿ ಅವರ ಮನಸ್ಸಿನಲ್ಲಿ ಭಯವನ್ನು ಹುಟ್ಟಿಸಲಾಗಿದೆ. ಇದರಿಂದ ಅವರ ಮನೋಬಲ ಮುರಿದು ಬೀಳುವುದರೊಂದಿಗೆ ಅವರ ಮನಃಸ್ಥಿತಿಯೂ ಅದೇ ರೀತಿ ಆಗಿಬಿಟ್ಟಿದೆ.“
ಈ ವಿಷಯವನ್ನು ಯಾರೂ ವಿರೋಧಿಸದೆ ಇದ್ದುದು ಒಂದು ವಿಡಂಬನೆ. ಕಾಲ ಕಳೆದಂತೆ ಆ ಮನಃಸ್ಥಿತಿಯು ದೃಢಗೊಳ್ಳುತ್ತಾ ಬಂದಿತು. ಆಡಂಬರಯುಕ್ತವಾದ ಧರ್ಮ ಮತ್ತು ಸಂಪ್ರದಾಯಗಳನ್ನು ಹೆಚ್ಚಿಸುವಲ್ಲಿ ಮಹಿಳೆಯರ ಪಾತ್ರವೇ ಹೆಚ್ಚಾಗಿದೆ. “ಇದು 50-100 ವರ್ಷಗಳ ಪ್ರಭಾವವಲ್ಲ. ಸಾವಿರಾರು ವರ್ಷಗಳಿಂದ ನಡೆದು ಬಂದ ದೋಷವಾಗಿದ್ದು, ಸುಲಭವಾಗಿ ನಿವಾರಿಸಲಾಗುವುದಿಲ್ಲ. ಆದ್ದರಿಂದ ಅಂಧಾನುಕರಣೆಯ ಬದಲು ಪ್ರಶ್ನೆ, ತರ್ಕ, ವಿಚಾರ ಮತ್ತು ಅಗತ್ಯ ಬಿದ್ದಾಗ ವಿರೋಧ, ಇವುಗಳ ಅವಶ್ಯಕತೆ ಇದೆ. ಆತ್ಮಗೌರವಕ್ಕಿಂತ ಹಿರಿದಾದ ಯಾವುದೇ ಧರ್ಮ ಅಥವಾ ಸಮಾಜ ಇರುವುದಿಲ್ಲ ಎಂಬುದನ್ನು ಸದಾ ನೆನಪಿಡಬೇಕು.”
ವಾಸ್ತವವೆಂದರೆ ಇಂತಹ ಮೂಢನಂಬಿಕೆಗಳು ಮತ್ತಷ್ಟು ಮೂಢನಂಬಿಕೆಗಳಿಗೆ ದಾರಿ ಮಾಡಿಕೊಡುತ್ತವೆ.
– ಪ್ರತಿನಿಧಿ
“ಆಚಾರ ವಿಚಾರ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಮಹಿಳೆಯರ ಶೋಷಣೆ ನಡೆಯಿತು. ಧರ್ಮದ ಹೆಸರಿನಲ್ಲಿ ಅವರನ್ನು ನಿರಾಧಾರ ಪದ್ಧತಿಗಳನ್ನು ಒಪ್ಪಿ ನಡೆಯುವಂತೆ ಮಾಡಲಾಯಿತು. ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಮೈಲಿಗೆಯೆಂದು ಹೇಳುವುದೂ ಸಹ ಇಂತಹ ಒಂದು ಅವೈಜ್ಞಾನಿಕ ಧೋರಣೆ…..”
“ಒಬ್ಬ ಮಹಿಳೆಗೆ ಆತ್ಮಗೌರವಕ್ಕಿಂತ ಹಿರಿದಾದ ಧರ್ಮ ಅಥವಾ ಸಮಾಜವಿಲ್ಲ. ಸಾಂಪ್ರದಾಯಿಕ ಆಲೋಚನೆಗಳಿಂದ ಹೊರಬಂದು ವೈಜ್ಞಾನಿಕ ಯುಗದಲ್ಲಿ ಜೀವಿಸುವುದು ಒಳ್ಳೆಯದು. ಆಗ ಮಾತ್ರವೇ ನಾವು ಮೂಢನಂಬಿಕೆಗಳಿಂದ ದೂರ ಹೆಜ್ಜೆ ಇಡಬಲ್ಲೆವು…..”