ರಾಧಾ ಮತ್ತು ಶೇಖರ್‌ ಮದುವೆಯಾಗಿ 2 ವರ್ಷಗಳೇ ಆಗಿದೆ. ರಾಧಾಗೆ ಉದ್ಯೋಗದ ಕಾರಣದಿಂದ ಮೇಲಿಂದ ಮೇಲೆ ಹೊರಗೆ ಹೋಗಬೇಕಾಗಿ ಬರುತ್ತದೆ. ವಾರಾಂತ್ಯದಲ್ಲಿ ಮನೆಯಲ್ಲಿ ಇದ್ದಾಗ, ಸ್ವಲ್ಪ ಹೊತ್ತು ತನಗಾಗಿ ಸಮಯ ಕಳೆಯಲು ಇಚ್ಛಿಸುತ್ತಾಳೆ, ಇಲ್ಲವೆ ಮಹತ್ವದ ಪುಸ್ತಕವೊಂದನ್ನು ಓದುವುದರಲ್ಲಿ ಕಳೆಯಬೇಕು ಅನಿಸುತ್ತದೆ. ಅದಾವುದೂ ಆಗದಿದ್ದರೆ ಮನೆಯ ಚಿಕ್ಕಪುಟ್ಟ ಕೆಲಸಗಳಲ್ಲಿ ಮಗ್ನಳಾಗುತ್ತಾಳೆ.

ಶೇಖರ್‌ ವಾರದಲ್ಲಿ 5 ದಿನ ಅವಳನ್ನು ಮಿಸ್‌ ಮಾಡಿಕೊಳ್ಳುತ್ತಿರುತ್ತಾನೆ. ಅವನು ಉಳಿದ ಆ ದಿನಗಳಾದರೂ ಅವಳೊಂದಿಗೆ ಹೆಚ್ಚೆಚ್ಚು ಸಮಯ ಕಳೆಯಬೇಕೆನ್ನುತ್ತಾನೆ. ಎಲ್ಲಿಯಾದರೂ ಹೊರಗೆ ಹೋಗಿ ಸುತ್ತಾಡಿ ಬರೋಣ ಎಂಬ ಹೆಸರು ಕೇಳಿಯೇ ಅವಳು ಸುಸ್ತಾಗಿ ಹೋಗಿರುತ್ತಾಳೆ. ಸಿನಿಮಾ ನೋಡಲು ಅಥವಾ ಹೋಟೆಲ್‌ಗೆ ಹೋಗಿ ಊಟ ಮಾಡುವುದು ಕೂಡ ಅವಳಿಗೆ ಬೇಡವೆನಿಸಿಬಿಡುತ್ತದೆ.

ಶೇಖರ್‌ಗೆ ತನ್ನ ಪತ್ನಿಯ ಈ ವರ್ತನೆ ಬೇಸರ ಹುಟ್ಟಿಸತೊಡಗಿತು. ಅವಳು ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎನಿಸತೊಡಗಿತು. ತನ್ನ ಜೊತೆ ಇರುವುದೇ ಅವಳಿಗೆ ಬೇಸರ ಹುಟ್ಟಿಸಿರಬಹುದು ಎಂದೆನಿಸತೊಡಗಿತು. ರಾಧಾಳಿಗೂ ಕೂಡ ಶೇಖರ್‌ಗೆ ತನ್ನ ಬಗ್ಗೆ, ತನ್ನ ಅಪೇಕ್ಷೆಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅವನು ತನ್ನ ಬೇಡಿಕೆಯನ್ನಷ್ಟೇ ಹೇರಲು ಇಚ್ಛಿಸುತ್ತಿದ್ದಾನೆ ಎನಿಸಿತು. ಈ ರೀತಿ ಇಬ್ಬರ ಮನಸ್ಸಿನಲ್ಲಿ ಪರಸ್ಪರರ ಬಗ್ಗೆ ತಪ್ಪು ಕಲ್ಪನೆಗಳ ಗೋಡೆ ಎದ್ದು ನಿಲ್ಲುತ್ತ ಹೋಯಿತು.

ಎಷ್ಟೋ ದಂಪತಿಗಳ ನಡುವಿನ ತಪ್ಪು ಕಲ್ಪನೆಗಳು ಹೇಗಿರುತ್ತವೆ ಎಂದರೆ ನಿವಾರಿಸಿಕೊಳ್ಳಲು ಆಗದೇ ಇರುವ ಕಾರಣದಿಂದ ಅವರ ಮದುವೆ ಮುರಿದುಬೀಳುತ್ತದೆ. ಚಿಕ್ಕದೊಂದು ತಪ್ಪು ಕಲ್ಪನೆ ದೊಡ್ಡ ರೂಪ ಪಡೆದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಅದನ್ನು ನಿರ್ಲಕ್ಷಿಸಬೇಡಿ. ತಪ್ಪು ಕಲ್ಪನೆ ಎಂಬುದು ಹಡಗಿನಲ್ಲಿ ಬಿದ್ದ ಒಂದು ಸಣ್ಣ ರಂಧ್ರದ ರೀತಿಯಲ್ಲಿ ಇರುತ್ತದೆ. ಒಂದು ವೇಳೆ ಈ ರಂಧ್ರವನ್ನು ಮುಚ್ಚದೇ ಇದ್ದರೆ ಅದು ಸಂಬಂಧವೆಂಬ ಹಡಗನ್ನು ಮುಳುಗಿಸಲು ಸಮಯ ಹಿಡಿಯುವುದಿಲ್ಲ.

ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ

ತಪ್ಪು ಕಲ್ಪನೆ ಎಂಬುದು ಒಂದು ಮುಳ್ಳಿನ ರೀತಿಯಲ್ಲಿ ಇರುತ್ತದೆ. ಅದು ಯಾವಾಗ ನಿಮ್ಮ ಸಂಬಂಧಕ್ಕೆ ಚುಚ್ಚತೊಡಗುತ್ತೋ, ಆಗ ಹೂವಿನ ಹಾಸಿಗೆಯಂತಿದ್ದ ಸಂಬಂಧ ನಿಮಗೆ ನೋವು ತರಲಾರಂಭಿಸುತ್ತದೆ. ಯಾವ ಜೋಡಿಗಳು ಪರಸ್ಪರರಿಗೆ ಜೀವ ಕೊಡಲು ಸಿದ್ಧವಿದ್ದವೋ, ಪರಸ್ಪರರ ಬಾಹುಗಳಲ್ಲಿ ನೆಮ್ಮದಿಯ ನಿರಾಳತೆ ದೊರಕುತ್ತಿತ್ತೊ, ಅವರಿಗೆ ತಪ್ಪು ಕಲ್ಪನೆಯೆಂಬ ಹಾವು ಕಚ್ಚಿದಾಗ, ಆಗ ಪ್ರೀತಿಯು ದ್ವೇಷದಲ್ಲಿ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆಗ ಬೇರೆ ಬೇರೆ ದಾರಿ ಕಂಡುಕೊಳ್ಳುವ ಅನಿವಾರ್ಯತೆಯ ಹೊರತು ಅವರಿಗೆ ಇನ್ನೇನೂ ಉಳಿದಿರುವುದಿಲ್ಲ.

ರಿಲೇಶನ್‌ಶಿಪ್‌ ಎಕ್ಸ್ ಪರ್ಟ್‌ ಅಂಜನಾರ ಪ್ರಕಾರ, ಸಂಗಾತಿಗೆ ನನ್ನ ಬಗ್ಗೆ ಕಾಳಜಿಯೇ ಇಲ್ಲ ಅಥವಾ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾನೆ/ಳೆ. ಈ ತೆರನಾದ ತಪ್ಪು ಕಲ್ಪನೆಗಳು ದಂಪತಿಗಳಲ್ಲಿ ಉಂಟಾಗುವುದು ಸಂಗಾತಿಯ ಆದ್ಯತೆ ಮತ್ತು ಯೋಚನೆಯನ್ನು ತಪ್ಪಾಗಿ ಭಾವಿಸುವುದು ಬಹಳ ಸುಲಭ. ಅದರಲ್ಲೂ ವಿಶೇಷವಾಗಿ ಬಹಳ ಬೇಗನೇ ಅತೃಪ್ತರಾಗುವುದು ಮತ್ತು ಕಮ್ಯುನಿಕೇಟ್‌ ಮಾಡಲು ಬಹಳ ಯೋಚಿಸುತ್ತ ಇರುವಂಥ ಸಂದರ್ಭಗಳು.

ಕಾರಣವೇನು?

ಸ್ವಾರ್ಥಿಯಾಗಿರುವುದು : ಗಂಡ ಹೆಂಡತಿಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮತ್ತು ಪರಸ್ಪರರ ಮೇಲೆ ವಿಶ್ವಾಸವಿಡುವುದು ಅತ್ಯವಶ್ಯಕವಾಗಿರುತ್ತದೆ. ಅದಕ್ಕಾಗಿ ಪರಸ್ಪರರಿಂದ ಏನನ್ನು ಬಚ್ಚಿಡಬಾರದು. ಎಂತಹ ಸಂದರ್ಭದಲ್ಲೂ ಪರಸ್ಪರರ ಸಹಾಯಕ್ಕೆ ನಿಲ್ಲಬೇಕು. ನೀವು ವೈಯಕ್ತಿಕವಾಗಿಯೇ ಅದನ್ನು ನಿರ್ವಹಣೆ ಮಾಡಲು ಹೋದಾಗ ಅಥವಾ ನಿಮ್ಮ ಬಗೆಗಷ್ಟೇ ಯೋಚಿಸಲು ಹೋದಾಗ ತಪ್ಪು ಕಲ್ಪನೆ ನುಸುಳುತ್ತದೆ. ನೀವು ಸಂಗಾತಿಗೆ ಸೂಕ್ತ ಸಂದರ್ಭದಲ್ಲಿ ನೆರವು ಅಥವಾ ಬೆಂಬಲ ನೀಡಿದರೆ, ಸಂಗಾತಿ ಕೂಡ ನಿಮಗೆ ಸಂಕಷ್ಟದ ಸಮಯದಲ್ಲಿ ನೆರವು ನೀಡದೇ ಇರಲಾರರು.

ನನ್ನ ಬಗ್ಗೆ ಕಾಳಜಿಯೇ ಇಲ್ಲ : ಸಂಗಾತಿಗೆ ತನ್ನ ಬಗ್ಗೆ ಕಾಳಜಿಯೇ ಇಲ್ಲ, ಪ್ರೀತಿಯಂತೂ ಇಲ್ಲವೇ ಇಲ್ಲ ಎಂದು ಇಬ್ಬರಿಗೂ ಒಮ್ಮೊಮ್ಮೆ ಅನ್ನಿಸುವುದು ಸಹಜ. ವಾಸ್ತವ ಸಂಗತಿ ಏನೆಂದರೆ, ವಿವಾಹವೆನ್ನುವುದು ಲವಿಂಗ್‌ ಹಾಗೂ ಕೇರಿಂಗ್‌ ಆಧಾರದ ಮೇಲೆ ನಿಂತಿದೆ. ಒಂದುವೇಳೆ ಸಂಗಾತಿಗೆ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿರುವ ಅಥವಾ ತಾನು ಅಪ್ರಸ್ತುತ ಎಂಬ ಫೀಲಿಂಗ್‌ ಬಂದುಬಿಟ್ಟರೆ ಸಂಬಂಧದ ಮಧ್ಯದಲ್ಲಿ ತಪ್ಪು ಕಲ್ಪನೆಯೆಂಬ ಗೋಡೆ ಎದ್ದು ನಿಲ್ಲುತ್ತದೆ.

ಜವಾಬ್ದಾರಿ ನಿಭಾಯಿಸಲು ಅಸಮರ್ಥ : ಸಂಗಾತಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಹಿಂದೇಟು ಹಾಕಿದರೆ ಆಗಲೂ ತಪ್ಪು ಕಲ್ಪನೆ ಉಂಟಾಗುತ್ತದೆ. ಆಗ ಸಂಗಾತಿಯ ಮನಸ್ಸಿನಲ್ಲಿ ಅವನು ತನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾನಾ? ಅವನಿಗೆ ನನ್ನ ಬಗ್ಗೆ ಕಾಳಜಿ ಇಲ್ಲವೇ? ವಿವಶತೆಯಿಂದ ನನ್ನ ಬಳಿ ಇರುತ್ತಿದ್ದಾನೆಯೇ ಎಂಬ ತಪ್ಪು ಕಲ್ಪನೆ ಸುಳಿಯಬಹುದು. ಹಾಗಾಗಿ ತಪ್ಪು ಕಲ್ಪನೆ ನುಸುಳಬಾರದೆಂದರೆ ನಿಮ್ಮ ನಿಮ್ಮ ಹೊಣೆಗಾರಿಕೆಯನ್ನು ಖುಷಿಯಿಂದ ನಿಭಾಯಿಸಬೇಕು.

ವೈವಾಹಿಕ ಸಲಹೆಗಾರರು ಹೇಳುವ ಪ್ರಕಾರ, ಸಂಬಂಧ ಖಾಯಂ ಆಗಿ ಉಳಿಯಬೇಕೆಂದರೆ 3 ಮುಖ್ಯ ಜವಾಬ್ದಾರಿಗಳನ್ನು ಅವಶ್ಯವಾಗಿ ನಿಭಾಯಿಸಿ. ಸಂಗಾತಿಯನ್ನು ಪ್ರೀತಿಸುವುದು, ಸಂಗಾತಿಯ ಬಗ್ಗೆ ಹೆಮ್ಮೆಪಡುವುದು ಮತ್ತು ಸಂಬಂಧವನ್ನು ಉಳಿಸಿಕೊಳ್ಳುವುದು.

ಕೆಲಸ ಮತ್ತು ಕಮಿಟ್‌ಮೆಂಟ್‌ : ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಕಾರ್ಯಕ್ಷೇತ್ರ ಮನೆಗಷ್ಟೇ ಸೀಮಿತವಾಗಿ ಉಳಿದಿಲ್ಲ. ಹೀಗಾಗಿ ಆಕೆಯ ವೃತ್ತಿ ಹಾಗೂ ಕಮಿಟ್‌ಮೆಂಟ್‌ನ್ನು ಗೌರವಿಸಿ. ಬದಲಾದ ಪರಿಸ್ಥಿತಿಯಲ್ಲಿ ಹೆಂಡತಿಗೆ ಸಹಕಾರ ಕೊಡಿ. ಸಂಬಂಧದಲ್ಲಿ ಬಂದ ಬದಲಾವಣೆಯನ್ನು ನಿರ್ವಹಿಸುವುದು ಪತಿಗೆ ಸವಾಲಿನ ಕೆಲಸವೇ ಹೌದು. ಏಕೆಂದರೆ ಇದೇ ಇಂದಿನ ದಿನಗಳಲ್ಲಿ ತಪ್ಪು ಕಲ್ಪನೆಗೆ ಬಹುದೊಡ್ಡ ಕಾರಣವಾಗುತ್ತಿದೆ. ಅದಕ್ಕಾಗಿಯೇ ಇಬ್ಬರೂ ಕೆಲಸದ ಕಮಿಂಟ್‌ಮೆಂಟ್‌ ಬಗ್ಗೆ ಚರ್ಚಿಸಿ ಅದರ ಬಗ್ಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.

ಅಪಾಯ : ಇದು ಎಲ್ಲಕ್ಕೂ ಸಾಮಾನ್ಯ ಕಾರಣ. ತನ್ನ ಸಂಗಾತಿಗೆ ಬೇರೆ ಯಾರದೊ ಜೊತೆಗೆ ಸಂಬಂಧ ಇದೆ ಎಂದಾಗ ಈ ರೀತಿಯ ತಪ್ಪುಕಲ್ಪನೆ ಆವರಿಸಿಕೊಳ್ಳುತ್ತದೆ. ಯಾವುದೇ ಸೂಕ್ತ ಪುರಾವೆ ಇಲ್ಲದಿದ್ದರೂ ಸಂಗಾತಿ ಬಹುಬೇಗ ಅದನ್ನು ನಂಬಿಬಿಡುತ್ತಾನೆ. ಅದನ್ನು ಸಕಾಲದಲ್ಲಿ ಸರಿಯಾಗಿ ನಿರ್ವಹಿಸದೇ ಹೋದರೆ, ಆ ಮದುವೆ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿ ತುಂಬಾ ಗೊಂದಲದಲ್ಲಿ ಇದ್ದರೆ, ನಿಮ್ಮನ್ನು ಸಂದೇಹಭರಿತ ದೃಷ್ಟಿಯಿಂದ ನೋಡುತ್ತಿದ್ದರೆ, ನೀವು ತಕ್ಷಣವೇ ಎಚ್ಚರಗೊಳ್ಳಬೇಕು.

ಬೇರೆಯವರ ಹಸ್ತಕ್ಷೇಪ : ಬೇರೆಯವರು ಅಂದರೆ ಅವರು ನಿಮ್ಮ ಮನೆಯವರೇ ಆಗಿರಬಹುದು ಅಥವಾ ನಿಮ್ಮ ಸಂಬಂಧಿಕರು, ನಿಮ್ಮ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಶುರು ಮಾಡಿದಾಗ ತಪ್ಪು ಕಲ್ಪನೆಗಳು ಉಂಟಾಗುತ್ತವೆ. ನಿಮ್ಮ ನಡುವೆ ಏನೇ ಜಗಳಗಳಿದ್ದರೂ ಅದನ್ನು ನೀವಿಬ್ಬರೇ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಅದರಲ್ಲಿ ಮೂರನೆಯವರಿಗೆ ಮೂಗು ತೂರಿಸಲು ಅವಕಾಶ ಮಾಡಿಕೊಡಬೇಡಿ.

ಸೆಕ್ಸ್ ಗೆ ಆದ್ಯತೆ ಕೊಡಿ : ಸೆಕ್ಸ್ ಸಂಬಂಧ ವೈವಾಹಿಕ ಜೀವನದ ಅಡಿಗಲ್ಲು. ಗಂಡಹೆಂಡತಿ ಇಬ್ಬರೂ ಅದರ ಆನಂದ ಪಡೆಯಲು ಯೋಚಿಸುತ್ತಾರೆ. ಒಂದು ವೇಳೆ ನೀವು ಲೈಂಗಿಕ ಸಂಬಂಧದಿಂದ ದೂರ ಉಳಿಯತೊಡಗಿದರೆ ಅದು ತಪ್ಪು ಕಲ್ಪನೆಗೆ ದಾರಿ ಮಾಡಿಕೊಡುತ್ತದೆ. ಸಂಬಂಧ ಹಾಳುಗೆಡವಲು ಕೂಡ ಕಾರಣವಾಗುತ್ತದೆ. ಹಾಗಾಗಿ ಸೆಕ್ಸ್ ನ್ನು ನಿರ್ಲಕ್ಷಿಸಬೇಡಿ.

– ಬಿ. ಸುಮತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ