ಸ್ಪೆಷಲ್ ಕಬಾಬ್

ಸಾಮಗ್ರಿ : ಚೆನ್ನಾಗಿ ಮಸೆದ 250 ಗ್ರಾಂ ಪನೀರ್‌, 5-6 ಬ್ರೆಡ್‌ ಸ್ಲೈಸ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಏಲಕ್ಕಿ ಪುಡಿ, ಹಾಲಲ್ಲಿ ನೆನೆದ ಕೇಸರಿ, ಹುರಿದ ರವೆ, ಎಳ್ಳು, ಗಸಗಸೆ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಅಖರೋಟ್‌ ಚೂರು, ಕರಿಯಲು ಎಣ್ಣೆ.

ವಿಧಾನ : ಬ್ರೆಡ್‌ ಸ್ಲೈಸ್‌ನ್ನು ನೀರಿನಲ್ಲಿ ಅದ್ದಿ ಹಿಂಡಿಕೊಂಡು ಅದಕ್ಕೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ ಪಕೋಡ ಹದಕ್ಕೆ ಕಲಸಿಡಿ. ಚಿತ್ರದಲ್ಲಿರುವಂತೆ ಇದನ್ನು ಉಂಡೆ ಮಾಡಿ ಚಪ್ಪಟೆ ತಟ್ಟಿಕೊಂಡು ಹುರಿದ ರವೆ, ಎಳ್ಳು, ಗಸಗಸೆಯಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ಸಾಸ್‌ ಜೊತೆ ಸವಿಯಲು ಕೊಡಿ.

ಕಾಶ್ಮೀರಿ ಪಲಾವ್

ಸಾಮಗ್ರಿ : 500 ಗ್ರಾಂ ಬಾಸಮತಿ ಅಕ್ಕಿ, 7-8 ಹೆಚ್ಚಿದ ಈರುಳ್ಳಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ (ಒಟ್ಟಾಗಿ 100 ಗ್ರಾಂ), 1 ದೊಡ್ಡ ಸೇಬು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ದಾಳಿಂಬೆ ಹರಳು, 2-3 ಲವಂಗದೆಲೆ, ತುಸು ಮೊಗ್ಗು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಕಾಳುಮೆಣಸು, ಜೀರಿಗೆ, ಸೋಂಪು, ರೀಫೈಂಡ್‌ ಆಯಿಲ್, ತುಪ್ಪ, ಕೇದಗೆ ಎಸೆನ್ಸ್, ಹಾಲಲ್ಲಿ ನೆನೆಸಿದ ಕೇಸರಿ, ಹೆಚ್ಚಿದ ಕೊ.ಸೊಪ್ಪು, ಅರಿಶಿನ.

ವಿಧಾನ : ಅಕ್ಕಿಯನ್ನು 2 ಗಂಟೆ ಕಾಲ ನೆನೆಹಾಕಿಡಿ. ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಇದರಲ್ಲಿ ಅರ್ಧದಷ್ಟು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ ಬೇರೆಯಾಗಿಡಿ. ಉಳಿದ ಎಣ್ಣೆಗೆ ತುಪ್ಪ ಬೆರೆಸಿ. ಇದಕ್ಕೆ ಚಕ್ಕೆ ಲವಂಗ ಇತ್ಯಾದಿ ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ದ್ರಾಕ್ಷಿ ಗೋಡಂಬಿ ಎಲ್ಲಾ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಮಸಾಲೆ ಎಲ್ಲಾ ಸೇರಿಸಿ ಕೆದಕಬೇಕು. ಆಮೇಲೆ ಇದಕ್ಕೆ ನೆನೆದ ಅಕ್ಕಿ, ಉದುರುದುರಾಗಿ ಬರುವಷ್ಟು ನೀರು, ಚಿಟಕಿ ಅರಿಶಿನ ಸೇರಿಸಿ. ನಂತರ ಇನ್ನಷ್ಟು ತುಪ್ಪ, ಕೇಸರಿ, ಕೇದಗೆ ಎಸೆನ್ಸ್ ಬೆರೆಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, 2 ಸೀಟಿ ಕೂಗಿಸಿ. ಆಮೇಲೆ ಮುಚ್ಚಳ ತೆರೆದು ಇದಕ್ಕೆ ದಾಳಿಂಬೆ ಹರಳು, ಹೆಚ್ಚಿದ ಸೇಬು, ಬಾಡಿಸಿದ ಈರುಳ್ಳಿ ಎಲ್ಲಾ ಸೇರಿಸಿ ಒಮ್ಮೆ ಕಲಸಿಕೊಂಡು, ಬಿಸಿ ಬಿಸಿಯಾಗಿ ಟೊಮೇಟೊ ರಾಯ್ತಾ ಜೊತೆ ಸವಿಯಲು ಕೊಡಿ.

ಪನೀರ್‌ ಸ್ಪೆಷಲ್

ಸಾಮಗ್ರಿ : 500 ಗ್ರಾಂ ಪನೀರ್‌ ಕ್ಯೂಬ್ಸ್, ಹೆಚ್ಚಿದ 5-6 ಈರುಳ್ಳಿ, ತುಸು ಶುಂಠಿ, ಬೆಳ್ಳುಳ್ಳಿ, ಕೊ.ಸೊಪ್ಪು, ಹಾಲಲ್ಲಿ ನೆನೆಸಿದ 100 ಗ್ರಾಂ ದ್ರಾಕ್ಷಿ, ಅರ್ಧ ಲೀ. ಕೆನೆಮೊಸರು, ತುಸು ಎಣ್ಣೆ, ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಧನಿಯಾಪುಡಿ, ಜೀರಿಗೆ ಪುಡಿ, ಗರಂಮಸಾಲ, ಫ್ರೆಶ್‌ ಕ್ರೀಂ, ಕಾದಾರಿದ ಗಟ್ಟಿ ಹಾಲು, ಕಾರ್ನ್‌ಫ್ಲೋರ್‌, 2-2  ಲವಂಗ ಏಲಕ್ಕಿ, 1 ತುಂಡು ದಾಲ್ಚಿನ್ನಿ, ಸಕ್ಕರೆ.

ವಿಧಾನ :  ಎಲ್ಲಕ್ಕೂ ಮೊದಲು ಅರ್ಧದಷ್ಟು ಹೆಚ್ಚಿದ ಈರುಳ್ಳಿ, ಗೋಡಂಬಿ, ಬೆಳ್ಳುಳ್ಳಿ, ಶುಂಠಿ, ಹಾಲು ಬೆರೆಸಿ ನುಣ್ಣಗೆ ತಿರುವಿಕೊಳ್ಳಿ. ಬಾಣಲೆಯಲ್ಲಿ ತುಪ್ಪ, ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಚಕ್ಕೆ ಲವಂಗ ಹಾಕಿ ಚಟಪಟಾಯಿಸಿ. ಇದಕ್ಕೆ ಉಳಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಮಂದ ಉರಿಯಲ್ಲಿ ರುಬ್ಬಿದ ಮಿಶ್ರಣ ಹಾಕಿ ಘಮ್ಮೆನ್ನುವಂತೆ ಬಾಡಿಸಿ. ನಂತರ ಮೊಸರು, ಕೊ.ಸೊಪ್ಪು, ಜೀರಿಗೆ, ಪುಡಿ ಮೆಣಸು ಹಾಕಿ 3-4 ನಿಮಿಷ ಸತತ ಕೈಯಾಡಿಸಿ. ಪಕ್ಕದ ಒಲೆಯಲ್ಲಿ ಚಿಕ್ಕ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದರಲ್ಲಿ ಪನೀರ್‌ ಫ್ರೈ ಮಾಡಿಕೊಂಡು ಇದಕ್ಕೆ ಸೇರಿಸಿ ಕೆದಕಬೇಕು. ತುಸು ಬೆಚ್ಚಗಿನ ಹಾಲಿಗೆ ಕಾರ್ನ್‌ಫ್ಲೋರ್‌ ಬೆರೆಸಿ ಕದಡಿಕೊಂಡು ಇದಕ್ಕೆ ಸೇರಿಸಿ. ಕೊನೆಯಲ್ಲಿ ಕ್ರೀಂ ಬೆರೆಸಿ, ಕೊ.ಸೊಪ್ಪು ಉದುರಿಸಿ ಕೆಳಗಿಳಿಸಿ. ಬಿಸಿ ಬಿಸಿಯಾಗಿ ಅನ್ನ, ದೋಸೆ, ಇಡ್ಲಿ ಜೊತೆ ಸವಿಯಲು ಕೊಡಿ.

ಕ್ಯಾಪ್ಸಿಕಂ ಬೋಟ್ಸ್

ಸಾಮಗ್ರಿ : 4-5 ಮಧ್ಯಮ ಗಾತ್ರದ ಕ್ಯಾಪ್ಸಿಕಂ, 150 ಗ್ರಾಂ ಪನೀರ್‌, ಒಂದಿಷ್ಟು ಬೇಯಿಸಿ ಮಸೆದ ಆಲೂ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ, ಶುಂಠಿ, ಕೊ.ಸೊಪ್ಪು, ತುಂಡರಿಸಿದ ಪಿಜ್ಜಾ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಕೆಚಪ್‌, ಬೆಣ್ಣೆ.

ವಿಧಾನ : 2 ಭಾಗವಾಗಿ ಕ್ಯಾಪ್ಸಿಕಂ ಕತ್ತರಿಸಿ. ನಂತರ ಮಸೆದ ಪನೀರ್‌ ತುಸು ಈರುಳ್ಳಿ, ಆಲೂ, ಶುಂಠಿ, ಉಪ್ಪು, ಮೆಣಸು ಎಲ್ಲಾ  ಚೆನ್ನಾಗಿ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಎಲ್ಲಾ ಕ್ಯಾಪ್ಸಿಕಂ ಬಟ್ಟಲಿಗೂ ತುಂಬಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಉಳಿದ ಶುಂಠಿ, ಬೆಳ್ಳುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಮಸಾಲೆ ಹಾಕಿ ಕೆದಕಬೇಕು. ನಂತರ ಕೆಚಪ್‌, ತುಸು ನೀರು ಬೆರೆಸಿ ಗ್ರೇವಿ ಕುದಿಸಿ ಕೆಳಗಿಳಿಸಿ. ಬೇಕಿಂಗ್‌ ಟ್ರೇಗೆ ಜಿಡ್ಡು ಸವರಿ ಕ್ಯಾಪ್ಸಿಕಂ ಬಟ್ಟಲುಗಳನ್ನಿರಿಸಿ. ಇದರ ಮೇಲೆ ಗ್ರೇವಿ ಸುರಿದು, ಚೀಸ್‌, ಬೆಣ್ಣೆ ಹಾಕಿಡಿ. ಚೀಸ್‌ ಕರಗುವಂತೆ ಬೇಕ್‌ ಮಾಡಿ, ಕೆಳಗಿಳಿಸಿ ಬಿಸಿ ಬಿಸಿಯಾಗಿ ಚಪಾತಿ, ಪೂರಿ, ಪಿಜ್ಜಾ ಜೊತೆ ಸವಿಯಲು ಕೊಡಿ.

ತಂದೂರಿ ಸೋಯಾ ಚಾಪ್ಸ್

ಸಾಮಗ್ರಿ :  250 ಗ್ರಾಂ ಸೋಯಾ ಚಾಪ್ಸ್ (ರೆಡಿಮೇಡ್‌ ಲಭ್ಯ), ತುಸು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊ.ಸೊಪ್ಪು, ಮಸೆದ ಪನೀರ್‌, ತುರಿದ ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಪ್ಯೂರಿ, ಜೀರಿಗೆ ಪುಡಿ, ಹಸಿಮೆಣಸು, ಮೊಸರು, ಗರಂಮಸಾಲ, ಕಸೂರಿ ಮೇಥಿ, ಆರೆಂಜ್‌ ಕಲರ್‌, ದಾಲ್ಚಿನ್ನಿ ಪುಡಿ, ಅರಿಶಿನ, ಅರ್ಧ ಸೌಟು ಎಣ್ಣೆ, ಅಲಂಕರಿಸಲು ಈರುಳ್ಳಿ

ನಿಂಬೆ ಬಿಲ್ಲೆಗಳು.

ವಿಧಾನ : ಸೋಯಾ ಚಾಪ್ಸ್ ನ್ನು ಅರ್ಧ ಗಂಟೆ ಕಾಲ ನೀರಲ್ಲಿ ನೆನೆಹಾಕಿ. ನಂತರ ಅದೇ ನೀರಿನ ಸಮೇತ ಚಿಟಕಿ ಉಪ್ಪು ಹಾಕಿ ಬೇಯಿಸಿ. ನಂತರ ಎಚ್ಚರಿಕೆಯಿಂದ ಸ್ಟೀಲ್‌ ಕಡ್ಡಿಯಲ್ಲಿ ಸಿಗಿಸಿಕೊಳ್ಳುತ್ತಾ ಒಂದೊಂದನ್ನೇ ಹೊರಗೆ ತೆಗೆದಿರಿಸಿ. ಇದರ ಮೇಲೆ ದಾಲ್ಚಿನ್ನಿ ಪೌಡರ್‌ ಉದುರಿಸಿ ಹಾಗೇ ನೆನೆಯಲು ಬಿಡಿ. ನಂತರ ಮಿಕ್ಸಿಗೆ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಹಸಿಮೆಣಸು, ಮೊಸರು ಎಲ್ಲಾ ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ. ಇದಕ್ಕೆ ಟೊಮೇಟೊ ಪ್ಯೂರಿ, ಇತರ ಮಸಾಲೆ ಸೇರಿಸಿ ಆ ಮಿಶ್ರಣವನ್ನು ಚಾಪ್ಸ್ ಮೇಲೆ ಚೆನ್ನಾಗಿ ಸವರಿ ನೆನೆಯಲು ಬಿಡಿ. ಇದರ ಮೇಲೆ ಮಸೆದ ಪನೀರ್‌, ತುರಿದ ಚೀಸ್‌ ತುಸು ಉಪ್ಪು ಹಾಕಿ ಅದರಲ್ಲಿ ಚಾಪ್ಸ್ ಹೊರಳಿಸಿ ಮತ್ತೆ ನೆನೆಯಲು ಬಿಡಿ. ನಂತರ ಇದನ್ನು ತಂದೂರಿ ಒಲೆಯಲ್ಲಿರಿಸಿ ಎರಡೂ ಕಡೆ ಬೇಯುವಂತೆ ಮಾಡಬೇಕು ಅಥವಾ ಮೈಕ್ರೋವೇವ್ ‌ನಲ್ಲಿರಿಸಿ ಗ್ರಿಲ್‌ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಹಬ್ಬದ ಊಟದ ಜೊತೆ ಬೋಂಡ ಬಜ್ಜಿ ತರಹ ಬಿಸಿಯಾಗಿ ಸವಿಯಲು ಕೊಡಿ.

ಮಶ್ರೂಮ್ ಬಾಲ್ಸ್

ಸಾಮಗ್ರಿ : 100 ಗ್ರಾಂ ಹೆಚ್ಚಿದ ತಾಜಾ ಅಣಬೆ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊ.ಸೊಪ್ಪು, ಅಖರೋಟ್‌, ಫ್ಲಾಕ್ಸ್ ಸೀಡ್‌ ಪೌಡರ್‌, 3-4 ಬ್ರೆಡ್‌ ಸ್ಲೈಸ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಬ್ರೆಡ್‌ ಕ್ರಂಬ್ಸ್, ಕಡಲೆಹಿಟ್ಟು, ಕರಿಯಲು ಎಣ್ಣೆ.

ವಿಧಾನ : ಕಡಲೆಹಿಟ್ಟು, ಬ್ರೆಡ್‌ ಕ್ರಂಬ್ಸ್ ಬಿಟ್ಟು ನೀರು ಚಿಮುಕಿಸುತ್ತಾ, ಮೇಲಿನ ಬೇರೆಲ್ಲ ಸಾಮಗ್ರಿ ಬೆರೆಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಡಿ. ನಂತರ ಸಣ್ಣ ಸಣ್ಣ ಉಂಡೆ ಕಟ್ಟಿ, ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಅದನ್ನು ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಸೀಮೆಗೆಡ್ಡೆ ಸ್ಪೆಷಲ್

ಸಾಮಗ್ರಿ : 250 ಗ್ರಾಂ ಸೀಮೆಗೆಡ್ಡೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ಮಸಾಲ, ಅಮ್ಚೂರ್‌ಪುಡಿ, ಓಮ, ರವೆ, ನಿಂಬೆರಸ, ಕರಿಯಲು ಎಣ್ಣೆ.

ವಿಧಾನ : ಮೊದಲು ಸೀಮೆಗೆಡ್ಡೆ ಬೇಯಿಸಿ ಸಿಪ್ಪೆ ಸುಲಿದಿಡಿ. ನಂತರ ಒಂದು ಬೇಸನ್ನಿನಲ್ಲಿ ಮೇಲಿನ ಎಲ್ಲಾ ಮಸಾಲೆ ಹಾಕಿ ಮಿಶ್ರಣ ಮಾಡಿ. ಅದರಲ್ಲಿ ಈ ಬೆಂದ ಗೆಡ್ಡೆ ಹೊರಳಿಸಿ, ಮಧ್ಯೆ ಸೀಳಿ ಅಲ್ಲೂ ತುಸು ತುಂಬಿಸಿ. ನಂತರ ರವೆಯಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ನಿಂಬೆಹಣ್ಣು ಹಿಂಡಿಕೊಂಡು ಸವಿಯಲು ಕೊಡಿ.

ಟೊಮೇಟೊ ಸೇವ್

ಸಾಮಗ್ರಿ : 100 ಗ್ರಾಂ ಸೇವ್‌ ಮಿಕ್ಸ್ ಚರ್‌, ಒಂದಿಷ್ಟು ಹೆಚ್ಚಿದ ಈರುಳ್ಳಿ, ಜಾಸ್ತಿ ಟೊಮೇಟೊ, 1-2 ಹಸಿಮೆಣಸು, ತುಸು ಶುಂಠಿ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಬೆಲ್ಲ, ಅರಿಶಿನ, ಒಗ್ಗರಣೆಗೆ ಸಾಸುವೆ ಜೀರಿಗೆ, ಎಣ್ಣೆ, ಅಲಂಕರಿಸಲು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಚಿಕ್ಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಉಳಿದೆಲ್ಲ ಪದಾರ್ಥ ಒಂದೊಂದಾಗಿ ಹಾಕುತ್ತಾ ಫ್ರೈ ಮಾಡಿ ಮಂದ ಉರಿಯಲ್ಲಿ ಕೆದಕುತ್ತಿರಿ. ಬೆಲ್ಲ ಪುಡಿ ಮಾಡಿ ನೀರಲ್ಲಿ ಕರಗಿಸಿ, ಸೋಸಿಕೊಳ್ಳಿ. ಅದನ್ನು ಇದಕ್ಕೆ ಬೆರೆಸಿ ಉಪ್ಪು, ಖಾರ, ಉಳಿದ ಮಸಾಲೆ ಬೆರೆಸಿ ಕುದಿ ಬರುವಂತೆ ಮಾಡಿ. 2 ನಿಮಿಷ ಬಿಟ್ಟು ಕೆಳಗಿಳಿಸಿ, ಇದಕ್ಕೆ ಧಾರಾಳ ಸೇವ್ ಮಿಕ್ಸ್ ಚರ್‌ ಹಾಕಿ, ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.

ರಿಫ್ರೆಶಿಂಗ್‌ ಆರೆಂಜ್‌ ಜೂಸ್‌

ಸಾಮಗ್ರಿ : 1 ಗ್ಲಾಸ್‌ ಆರೆಂಜ್‌ ಜೂಸ್‌, ಅದರಲ್ಲಿ ಅರ್ಧ ಸೋಡ, 1 ನಿಂಬೆಹಣ್ಣು, ತುಸು ವೆನಿಲಾ ಐಸ್‌ಕ್ರೀಂ, 4-5 ಐಸ್‌ ಕ್ಯೂಬ್ಸ್, ಅಲಂಕರಿಸಲು ಒಂದಿಷ್ಟು ಹೆಚ್ಚಿದ ಪುದೀನಾ, ಚಿಟಕಿ ಉಪ್ಪು, ತುಸು ಸಕ್ಕರೆ.

ವಿಧಾನ : ಜೂಸರ್‌ನಲ್ಲಿ ಮೇಲಿನ ಎಲ್ಲಾ ಪದಾರ್ಥ ಹಾಕಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಕೊನೆಯಲ್ಲಿ ಇದಕ್ಕೆ ಐಸ್‌ ಕ್ಯೂಬ್ಸ್, ಹೆಚ್ಚಿದ ಪುದೀನಾ ಹಾಕಿ ಸವಿಯಲು ಕೊಡಿ.

ಆ್ಯಪಲ್ ಐಸ್‌ ಟೀ

ಸಾಮಗ್ರಿ : 1 ಗ್ಲಾಸ್‌ ಆ್ಯಪಲ್ ಜೂಸ್‌, 4-5 ಚಮಚ ಬ್ಲ್ಯಾಕ್‌ ಟೀ, ರುಚಿಗೆ ತಕ್ಕಷ್ಟು ಶುಗರ್‌ ಸಿರಪ್‌, ನಿಂಬೆರಸ, ಸೇಬಿನ ಚೂರು, ಹೆಚ್ಚಿದ ಪುದೀನಾ, ಐಸ್‌ ಕ್ಯೂಬ್ಸ್.

ವಿಧಾನ : ಮೇಲಿನ ಸಾಮಗ್ರಿ ಮಿಕ್ಸರ್‌ಗೆ ಹಾಕಿ ಬ್ಲೆಂಡ್‌ ಮಾಡಿ. ಜೊತೆಗೆ ಐಸ್‌ ಕ್ಯೂಬ್ಸ್, ಸೇಬಿನ ಚೂರು ತೇಲಿ ಬಿಡಿ. ಉದ್ದನೆ ಗ್ಲಾಸಿಗೆ ತುಂಬಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ