ನಗರದ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿರುವ ಮಲ್ಲಿಕಾ ನ್ಯಾಯಾಲಯದಲ್ಲಿ ಕುಳಿತು ತನ್ನ ಕೇಸಿನ ಸರದಿಗಾಗಿ ಕಾಯುತ್ತಿದ್ದಳು. ಕಳೆದ ಎರಡು ವರ್ಷಗಳಿಂದ ತನ್ನ ಕೇಸಿನ ಹಿಯರಿಂಗ್‌ಗಾಗಿ ನ್ಯಾಯಾಲಯಕ್ಕೆ ಭೇಟಿ ಕೊಡುತ್ತಿರುವ ಮಲ್ಲಿಕಾ, ಈಗ 13ನೇ ಸಲ ಇಲ್ಲಿಗೆ ಬಂದಿದ್ದಾಳೆ. ಅವಳು ತನ್ನ ಪತಿಯಿಂದ ವಿಚ್ಛೇದನ, ಮಾಸಿಕ ವೆಚ್ಚ ಮತ್ತು ತನ್ನ ಮಗಳ ಕಸ್ಟಡಿಗಾಗಿ ಕೇಸ್ ದಾಖಲಿಸಿದ್ದಾಳೆ.
ಕೇಸಿನ ಅಂತಿಮ ತೀರ್ಪು ಹೊರಬರಲು ವರ್ಷವೇ ಆಗಬಹುದು ಎಂಬುದು ಮಲ್ಲಿಕಾಳಿಗೆ ಗೊತ್ತು. ಕೇಸ್‌ಗಾಗಿ ಕಾಲೇಜಿನ ರಜೆ, ಸಮಯ ಮತ್ತು ಹಣ ಎಲ್ಲ ವ್ಯಯವಾಗುತ್ತಿವೆ. ಕೇಸ್ ತೀರ್ಮಾನವಾಗಲು ಇಷ್ಟು ದೀರ್ಘಕಾಲ ಬೇಕಿರಲಿಲ್ಲ. ಆದರೆ ಕೆಲವು ಸಲ ನ್ಯಾಯಾಧೀಶರು ಬರುತ್ತಿರಲಿಲ್ಲ. ಮತ್ತೆ ಕೆಲವು ಸಲ ಅವಳ ಪತಿ ಗೈರುಹಾಜರಿಯಾಗುತ್ತಿದ್ದನು.
ನ್ಯಾಯಾಲಯ ಮತ್ತು ವಕೀಲರ ಧೋರಣೆಯ ಬಗ್ಗೆ ಮಲ್ಲಿಕಾ ಹೀಗೆ ಹೇಳುತ್ತಾಳೆ, “ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದಾಗ ಸಹನೆಯಿಂದ ನಡೆದುಕೊಳ್ಳುವಂತೆ ನನಗೆ ಹೇಳಿದರು. ನಂತರ ನಮ್ಮನ್ನು ಕೌನ್ಸೆಲಿಂಗ್‌ಗೆ ಕಳುಹಿಸಲಾಯಿತು. ನಾನು ಮಂಗಳ ಸೂತ್ರವನ್ನು ಧರಿಸಿಲ್ಲದಿರುವುದನ್ನು ಕಂಡು ಕೌನ್ಸೆಲರ್ ನನಗೆ `ನೀವಿನ್ನು ವಿವಾಹಿತರು, ಮಂಗಳಸೂತ್ರ ಧರಿಸದೆ ಭಾರತೀಯ ಸಂಸ್ಕೃತಿಯನ್ನು ಅನಾದರ ಮಾಡುತ್ತಿರುವಿರಿ,’ ಎಂದು ದೂಷಿಸಿದರು. ಮತ್ತೆ `ನಿಮಗೇನು ಬೇಕು?’ ಎಂದು ಕೇಳಿದರು. ನನಗೆ ಗೌರವ ಬೇಕು ಎಂದು ಹೇಳಿದೆ. ನಾನು ಗೌರವದ ವಿಷಯ ಹೇಳಿದರೆ ಯಾರೂ ಅದನ್ನು ಅನುಮೋದಿಸುವುದಿಲ್ಲ. ಎಲ್ಲರೂ ಪಕ್ಷಪಾತಿಗಳು.”
ನಗರದ ಮತ್ತೊಬ್ಬ ನಿವಾಸಿ 40 ವರ್ಷ ವಯಸ್ಸಿನ ಸುಜಾತಾ 2011ರಲ್ಲಿ ಫ್ಯಾಮಿಲಿ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದಾರೆ. ಅವರು ತಮ್ಮ ಪತಿಯಿಂದ ವಿಚ್ಛೇದನ ಮತ್ತು ತಮ್ಮ ಹೆಣ್ಣುಮಕ್ಕಳ ಕಸ್ಟಡಿ ಬಯಸುತ್ತಾರೆ. ಅಲ್ಲಿನ ನ್ಯಾಯಾಧೀಶರೂ ಸಹ ಪುರುಷಪ್ರಧಾನ ಮನೋಭಾವನೆಯಿಂದ ಕೂಡಿದ ಸಲಹೆಯಿತ್ತರು. “ನೀವು ನಿಮ್ಮ ಪತಿಯೊಂದಿಗೆ ಯಾವುದಾದರೂ ಹೋಟೆಲ್‌ನಲ್ಲಿ ಕುಳಿತು ಊಟ ಮಾಡಬೇಕು. ಆ ಸಮಯದಲ್ಲಿ ಮಾತುಕತೆಯ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೀಗೆ ಮಾಡುವುದು ಒಳ್ಳೆಯದು.”
ಸೆಪ್ಟೆಂಬರ್ 2017ರಲ್ಲಿ ಉಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶವೆಂದರೆ, ಯಾವುದೇ ದಂಪತಿಗೆ ವಿಚ್ಛೇದನ ಅನಿವಾರ್ಯವಾಗಿದ್ದು, ಪತಿ ಪತ್ನಿಯರಿಬ್ಬರೂ ಅದಕ್ಕೆ ಸಿದ್ಧವಾಗಿದ್ದರೆ ಅವರಿಗೆ 6 ತಿಂಗಳ ನಿರೀಕ್ಷಣಾ ಕಾಲ ಅಗತ್ಯವಿಲ್ಲ. ನಮ್ಮ ದೇಶದ ನ್ಯಾಯ ಪ್ರಣಾಳಿಕೆಯಲ್ಲಿ ಈ ಆದೇಶವನ್ನು ಒಂದು ಪ್ರಗತಿಪರ ಅಂಶವೆಂದು ತಿಳಿಯಲಾಗಿದೆ. ಏಕೆಂದರೆ ವಿಚ್ಛೇದನ ಪಡೆಯಲು 2 ರಿಂದ 12 ವರ್ಷ ಹಿಡಿಯಬಹುದಾಗಿದ್ದು, ಸಂಬಂಧಿತ ವ್ಯಕ್ತಿಗಳಿಗೆ ಅದೊಂದು ದುಃಸ್ವಪ್ನದಂತೆ ಭಾಸವಾಗುತ್ತದೆ. 3 ದಶಕಗಳಿಗೆ ಹಿಂದೆ ವೈವಾಹಿಕ ವಿವಾದಗಳನ್ನು ಸಿವಿಲ್ ಕೋರ್ಟ್‌ನಿಂದ ಬೇರ್ಪಡಿಸಿ ಫ್ಯಾಮಿಲಿ ಕೋರ್ಟ್‌ಗೆ ಸ್ಥಾನಾಂತರಗೊಳಿಸಲಾಗಿತ್ತು. ಇದರಿಂದ ಮಧ್ಯಸ್ಥಿಕೆ ಮತ್ತು ಸಲಹೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಯಿತು. ಆದರೆ ಫ್ಯಾಮಿಲಿ ಕೋರ್ಟ್‌ನ ಕಾರ್ಯವಿಧಾನ ವಿಳಂಬಗತಿಯಲ್ಲಿ ಸಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ನ್ಯಾಯಾಧೀಶರಿಂದ ಹಿಡಿದು ಉಳಿದೆಲ್ಲ ಸಿಬ್ಬಂದಿ ವರ್ಗದ ಕೊರತೆ. ಇದರಿಂದಾಗಿ ಕೇಸ್‌ಗಳನ್ನು ಬೇರೊಂದು ತಾರೀಖಿಗೆ ಮುಂದೂಡಲಾಗುತ್ತದೆ. ನ್ಯಾಯಾಲಯಗಳಲ್ಲಿ ದಿನಕ್ಕೆ ಸುಮಾರು 70-80 ಕೇಸ್‌ಗಳು ಹಿಯರಿಂಗ್‌ಗೆ ಪಟ್ಟಿ ಮಾಡಲ್ಪಟ್ಟಿರುತ್ತವೆ. ಆದರೆ ಕೆಲವನ್ನು ಮಾತ್ರ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ ಉಳಿದಕ್ಕೆ ಮುಂದಿನ ತಾರೀಖುಗಳನ್ನು ಸೂಚಿಸಲಾಗುತ್ತದೆ.
ಮಂಗಳೂರಿನ ರಮೇಶ್ ಹೊಳ್ಳ ಹೀಗೆ ಹೇಳುತ್ತಾರೆ, “ಫ್ಯಾಮಿಲಿ ಕೋರ್ಟ್‌ನಲ್ಲಿ ವಿವಾದಗಳು ದೀರ್ಘಕಾಲ ಎಳೆಯದಂತೆ ಸುಧಾರಣೆಯಾಗಬೇಕಾಗಿದೆ, ಅವುಗಳಿಗೆ ಒಂದು ಕಾಲಮಿತಿಯನ್ನು ಸೂಚಿಸಬೇಕಾಗಿದೆ. ಮಾಸಿಕ ಖರ್ಚು, ಮಕ್ಕಳ ಕಸ್ಟಡಿಯಂತಹ ವಿವಾದಗಳು ಶೀಘ್ರವಾಗಿ ಇತ್ಯರ್ಥವಾಗಬೇಕು. ಇದರ ಎಳೆದಾಟದಿಂದ ಎರಡೂ ಪಕ್ಷದವರಿಗೆ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ.”
ರಮೇಶ್ ಹೊಳ್ಳರ ಮಾತನ್ನು ಐ.ಟಿ. ಅಧಿಕಾರಿ ರವಿಪ್ರಸಾದ್ ಹೀಗೆ ಸಮರ್ಥಿಸುತ್ತಾರೆ, “ನನ್ನ ಕಿಶೋರ ವಯಸ್ಸಿನ ಮಕ್ಕಳ ಕಸ್ಟಡಿ ಪಡೆಯಲು ನಾನು 5 ವರ್ಷಗಳಿಂದ ಕೋರ್ಟಿನ ಮೆಟ್ಟಿಲು ಹತ್ತುತ್ತಿದ್ದೇನೆ. ಆದರೆ ಕೇಸ್ ಮುಂದೂಡಲ್ಪಡುತ್ತಿರುವುದರಿಂದ ಇದುವರೆಗೂ ತೀರ್ಪು ಸಿಕ್ಕಿಲ್ಲ. ಕೋರ್ಟಿನ ಹೊರಗೆ ವಿವಾದವನ್ನು ಪರಿಹರಿಸಿಕೊಳ್ಳಲು ನಾನು ಪ್ರಯತ್ನಿಸಿದೆ. ಆದರೆ ನನ್ನ ಪತ್ನಿಯ ವಕೀಲರು ಹಾಗೆ ಮಾಡಲು ಆಸ್ಪದ ಕೊಡಲಿಲ್ಲ.”
ವಾಸ್ತವವೆಂದರೆ, ಹಿಯರಿಂಗ್ ಇರುವಾಗ ಪೂರ್ವ ತಯಾರಿ ಮಾಡದಿರುವುದು, ಮುಂದಿನ ತಾರೀಖನ್ನು ಪಡೆದುಕೊಳ್ಳುವುದು, ಕೇಸನ್ನು ಆದಷ್ಟು ಮುಂದೂಡುವುದು, ಇವುಗಳಲ್ಲೆಲ್ಲ ವಕೀಲರ ಕೈವಾಡವಿರುತ್ತದೆ. ಮುಂದಿನ ಹಿಯರಿಂಗ್ ಎಂದರೆ ಮತ್ತೆ ಫೀಸ್. ಇದಕ್ಕಾಗಿಯೇ ವಕೀಲರು ವಿವಾದಗಳನ್ನು ದೀರ್ಘಕಾಲದವರೆಗೆ ಎಳೆಯುತ್ತಾರೆ. ವರ್ಷಗಳು ಉರುಳುತ್ತಿದ್ದಂತೆ ನ್ಯಾಯಾಧೀಶರು ಬದಲಾಗುತ್ತಾರೆ. ವಿಷಯ, ವಿವಾದಗಳು ಪುನರಾವರ್ತನೆಯಾಗಬೇಕಾಗುತ್ತವೆ. ಇದರಿಂದ ಮತ್ತಷ್ಟು ಸಮಯ ವ್ಯರ್ಥವಾಗುತ್ತದೆ.
ಮುಗಿಯದ ಪ್ರಕ್ರಿಯೆ : ತೀರ್ಪು ತಡವಾಗಲು ನಮ್ಮ ಸಮಾಜದ ಮನೋಭಾವ ಒಂದು ಕಾರಣವಾಗಿದೆ. ನಮ್ಮಲ್ಲಿ ವಿಚ್ಛೇದನವನ್ನು ಕೆಟ್ಟದ್ದೆಂದು ತಿಳಿಯಲಾಗುತ್ತದೆ. ಫ್ಯಾಮಿಲಿ ಕೋರ್ಟ್ ಸಹ ಮದುವೆಯನ್ನು ಉಳಿಸಲು ಆದಷ್ಟೂ ಪ್ರಯತ್ನಿಸುತ್ತದೆ. ಅದಕ್ಕಾಗಿ ಆಪ್ತ ಸಲಹೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ವಕೀಲೆ ಸುಧಾ ರಾಮನ್ ಹೇಳುವುದೆಂದರೆ, “ಆಪ್ತ ಸಲಹಾಕಾರರು ಮತ್ತು ನ್ಯಾಯಾಧೀಶರು ವಿವಾಹ ವಿಚ್ಛೇದನದ ತೀರ್ಪು ನೀಡುವ ಮೊದಲು ವಿವಾಹವನ್ನು ಉಳಿಸುವ ಪ್ರಯತ್ನ ಮಾಡುತ್ತಾರೆ. ಏಕೆಂದರೆ ಸಮಾಜ ವಿವಾಹವನ್ನು ಮುರಿಯದ ಬಂಧನವೆಂದು ಭಾವಿಸುತ್ತದೆ. ನ್ಯಾಯದ ತೀರ್ಪು ಸಮಾಜದ ಕನ್ನಡಿಯಂತಿರಬೇಕು.”
ಮಲ್ಲಿಕಾ ಮತ್ತು ಸುಜಾತಾರಂತಹ ಮಹಿಳೆಯರು ಕೊನೆಗಾಣದ ಸಲಹೆ ಮತ್ತು ಮಧ್ಯಸ್ಥಿಕೆಗಳ ನಡುವೆ ತೊಳಲುತ್ತಿದ್ದಾರೆ. ವಕೀಲೆ ಸುಧಾ ರಾಮನ್‌ರ ಪ್ರಕಾರ, ಕೌನ್ಸೆಲಿಂಗ್‌ನ್ನು ನ್ಯಾಯಾಲಯಕ್ಕೆ ಸಂಬಂಧಿಸದ ಸಲಹಾಗಾರರ ಮೂಲಕ ನಡೆಸುವುದು ಉತ್ತಮ. ಏಕೆಂದರೆ ಹಲವರು ಒಪ್ಪಂದ ಅಥವಾ ಪುನರ್ಮಿಲನವನ್ನು ಬಯಸುವುದಿಲ್ಲ.
ಫೆಡರೇಶನ್ ಆಫ್ ವುಮನ್ ಲಾಯರ್ಸ್‌ನ ಅಧ್ಯಕ್ಷೆ ಶಾಂತಕುಮಾರಿ ತಮ್ಮ ಒಂದು ಕೇಸ್ ಬಗ್ಗೆ ಹೇಳುತ್ತಾರೆ, “55 ವರ್ಷ ವಯಸ್ಸಿನ ಗೃಹಿಣಿಯೊಬ್ಬಳು ತನ್ನ ಪತಿಯಿಂದ ವಿಚ್ಛೇದನ ಪಡೆಯಲು ಕೇಸ್ ಹಾಕಿದ್ದಳು. ಅದು 10 ವರ್ಷಗಳ ಕಾಲ ನಡೆಯಿತು. ಎಲ್ಲರದೂ ಒಂದೇ ಪ್ರಶ್ನೆ. `ಈ ವಯಸ್ಸಿನಲ್ಲಿ ವಿಚ್ಛೇದನ ಏಕೆ ಬೇಕು?’ ಅದಕ್ಕೆ ಆ ಮಹಿಳೆ ಉತ್ತರವೆಂದರೆ, “ನನ್ನ ಮಕ್ಕಳ ಸುರಕ್ಷತೆ ಬಹಳ ಮುಖ್ಯ. ಅಲ್ಲದೆ ನನಗೆ ಬೇಕಾದಂತೆ ಬದುಕಲು ಇಷ್ಟಪಡುತ್ತೇನೆ.”
ಇಂದು ಕಾನೂನು ಪ್ರಕ್ರಿಯೆಯಲ್ಲಿ ಪ್ರತ್ಯೇಕವಾಗುವುದು ಸುಲಭವಲ್ಲ. ವಿವಾಹವೆಂಬುದು ಒಂದು ಧಾರ್ಮಿಕ ವಿಧಿಯಾಗಿದೆ. ನಿಮ್ಮ ಸಂಗಾತಿಯು ನಿಮ್ಮಿಂದ ಬೇರೆಯಾಗಲು ಒಪ್ಪದಿದ್ದರೆ, ನಿಮಗೆ ಕ್ರೌರ್ಯ, ವ್ಯಭಿಚಾರ, ಪರಿತ್ಯಾಗ, ಉನ್ಮಾದತೆಯ ಆಧಾರ ಪಡೆಯುವುದಲ್ಲದೆ, ಬೇರೆ ದಾರಿ ಇರದು. ಆದರೆ ಇವುಗಳನ್ನು ಸಾಬೀತುಪಡಿಸುವಲ್ಲಿ ಬಹಳ ಸಮಯ ಹಿಡಿಯುತ್ತದೆ. ಮದರಾಸು ವಿವಾಹ ಕಾನೂನು ಸುಧಾರಣಾ ಮಸೂದೆಯನ್ನು 2013ರಲ್ಲಿ ವಿಚ್ಛೇದನಾ ಕಾನೂನಿನಡಿಯಲ್ಲಿ ತಿರಸ್ಕರಿಸಲಾಯಿತು. ಅದು ಕೌಟುಂಬಿಕ ಮೌಲ್ಯಗಳು ಮತ್ತು ವಿವಾಹ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಹಲವು ಸಂಘ-ಸಂಸ್ಥೆಗಳು ಅದನ್ನು ವಿರೋಧಿಸಿದವು.
ಈ ಮಸೂದೆಯು ಸ್ವೀಕೃತವಾಗಿದ್ದರೆ ನೂರಾರು ಜೋಡಿಗಳಿಗೆ ವಿಚ್ಛೇದನ ಪಡೆಯಲು ಅನುಕೂಲವಾಗುತ್ತಿತ್ತು. ಕಾಳಜಿಯ ವಿಚಾರವೆಂದರೆ ಏಕಪಕ್ಷೀಯ ತೀರ್ಮಾನವಾದಾಗ ಮಹಿಳೆ ಮತ್ತು ಮಕ್ಕಳಿಗೆ ಖರ್ಚಿನ ಹಣ ದೊರೆಯುವುದು ಕಷ್ಟವಾಗುತ್ತಿತ್ತು.
ಕಾಲಕ್ಕೆ ತಕ್ಕಂತೆ ನಡೆಯಿರಿ : ಅಕ್ಟೋಬರ್ 2017ರಲ್ಲಿ ಸುಪ್ರೀಂ ಕೋರ್ಟ್ ಒಂದು ಆದೇಶ ಹೊರಡಿಸಿ. ಎಲ್ಲ ನ್ಯಾಯಾಲಯಗಳಲ್ಲಿಯೂ ವಿಚ್ಛೇದನದ ಮೊಕದ್ದಮೆಗಳ ಹಿಯರಿಂಗ್‌ಗಾಗಿ ವೀಡಿಯೋ ಕಾನ್ಛೆರೆನ್ಸಿಂಗ್‌ನ ಸೌಲಭ್ಯ ಇರಬೇಕು. ಕೇಸ್‌ಗೆ ಹಾಜರಾಗುವುದಕ್ಕಾಗಿ ಅರ್ಜಿದಾರರು ನಗರದಿಂದ ನಗರಕ್ಕೆ ಓಡಾಡುವಂತಾಗಬಾರದು ಎಂದು ತೀರ್ಪು ನೀಡಿತು. ಅದರೊಂದಿಗೆ ಫ್ಯಾಮಿಲಿ ಕೋರ್ಟ್‌ನ 1984 ಅಧಿನಿಯಮದ ಸಮಕಾಲೀನ ಸಾಮಾಜಿಕ ಪ್ರವೃತ್ತಿಗಳನ್ನು ಸ್ಪಷ್ಟಪಡಿಸಿತು. ಆದರೆ ಫ್ಯಾಮಿಲಿ ಕೋರ್ಟ್‌ನಲ್ಲಿ ದಂಪತಿಯ ಪರಸ್ಪರ ಸಮಾಲೋಚನೆಯ ಮೂಲಕ ಒಪ್ಪಂದಕ್ಕೆ ಬರಬಹುದಾದ ಅವಕಾಶ ಇದರಿಂದ ತಪ್ಪಿಹೋಗುವುದೆಂದು ಇತರೆ ಬೆಂಚ್‌ನ ನ್ಯಾಯ ಮಂಡಳಿಯು ಆಕ್ಷೇಪಿಸಿತು.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ತಮ್ಮ ವ್ಯಾಖ್ಯಾನದಲ್ಲಿ ತಿಳಿಸಿದ್ದು ಏನೆಂದರೆ, ಹೊಸ ವಿಧಾನದ ಪ್ರಯೋಗದಿಂದ ಮೊಕದ್ದಮೆಗಳ ವಿಳಂಬವನ್ನು ಕಡಿಮೆಗೊಳಿಸಬಹುದು ಮತ್ತು ಜನರಿಗೆ ನ್ಯಾಯಾಲಯಕ್ಕೆ ಬರುವ ಕಷ್ಟ ತಪ್ಪುತ್ತದೆ. ನ್ಯಾಯಾಲಯಕ್ಕೆ ಸಂಬಂಧಪಟ್ಟಂತೆ ಇದೊಂದು ಮಹತ್ವಪೂರ್ಣ ಸಂದೇಶ ಎಂಬುದು ವಾಸ್ತವವಾದರೂ, ವೈವಾಹಿಕ ಮನಸ್ತಾಪಗಳನ್ನು ಬಗೆಹರಿಸುವುದು ಅಥವಾ ಆ ಬಗ್ಗೆ ತೀರ್ಮಾನ ನೀಡುವುದು ಅಷ್ಟೊಂದು ಸುಲಭದ ವಿಷಯವಲ್ಲ.
ಕೌಟುಂಬಿಕ ನ್ಯಾಯಾಲಯದಂತಹ ಸಂಸ್ಥೆಗಳು ಕಷ್ಟದಲ್ಲಿರುವ ಕುಟುಂಬಗಳಿಗೆ ಸೇವೆ ನೀಡುವ ಉದ್ದೇಶದಿಂದ ಕೂಡಿರಬೇಕು. ದೌರ್ಜನ್ಯವನ್ನು ತಡೆಗಟ್ಟಲು ಶ್ರಮಿಸಬೇಕು. ಇಲ್ಲವಾದರೆ ಸಮಯ ಕಳೆದಂತೆ ಈ ಡಿಜಿಟಲ್ ಯುಗದಲ್ಲಿ ನಾವು ಹಿಂದುಳಿಯಬೇಕಾಗುತ್ತದೆ.
ಸುಪ್ರೀಂ ಕೋರ್ಟ್‌ನ ಇಂದಿರಾ ಜಯಸಿಂಹರರು ನ್ಯಾಯಮೂರ್ತಿ ಚಂದ್ರಚೂಡರ ಭಾವನೆಗಳಿಗೆ ಒತ್ತು ನೀಡುತ್ತಾ, “ವಿಚ್ಛೇದನಕ್ಕಾಗಿ ಜನರು ಜೀವನವಿಡೀ ಕಾಯಲಾರರು, ಜನರು ಉದಾರ ಭಾವನೆ ಹೊಂದಬೇಕು,” ಎನ್ನುತ್ತಾರೆ. ಕಾಲ ಬದಲಾಗುತ್ತಿದೆ, ವಿವಾಹವೇ ಜೀವನದ ಆರಂಭ ಅಛವಾ ಅಂತ್ಯವಲ್ಲ ಎಂಬುದು ನಮಗೆಲ್ಲ ತಿಳಿದಿದೆ.
– ಜಿ. ವೈಶಾಲಿ
ವಿಚ್ಛೇದನದ ಶೇಕಡಾವಾರು
ಭಾರತದಲ್ಲಿ ಹೆಚ್ಚುತ್ತಿರುವ ವಿಚ್ಛೇದನದ ಪ್ರಮಾಣ ಅಪಾಯಸೂಚಿಯಾಗಿದೆ. ಕಳೆದ ದಶಕದಲ್ಲಿ ಇದು ಸಾಕಷ್ಟು ಹೆಚ್ಚಿದೆ. 2016ರಲ್ಲಿ ಎಕನಾಮಿಸ್ಟ್ ಸೂರಜ್ ಜೇಕಬ್ ಮತ್ತು ಮಾನವ ವಿಜ್ಞಾನಿ ಶ್ರೀಚರಣ್ ಚಟ್ಟೋಪಾಧ್ಯಾಯರವರು ನಡೆಸಿದ ಒಂದು ಅಧ್ಯಯನದಲ್ಲಿ ಕಂಡು ಬಂದ ಅಂಶವೆಂದರೆ, ನಗರ ಮತ್ತು ಗ್ರಾಮೀಣ ಕ್ಷೇತ್ರಗಳ ವಿಚ್ಛೇದನದ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಗ್ರಾಮೀಣ ಕ್ಷೇತ್ರಗಳಲ್ಲಿ ವಿಚ್ಛೇದನದ ಪ್ರಮಾಣ 0.82% ಮತ್ತು ನಗರಗಳಲ್ಲಿ 0.89% ಇದ್ದಿತು. ಸಂಪೂರ್ಣ ಭಾರತದಲ್ಲಿ 0.24% ವಿಚ್ಛೇದನ ಪ್ರಮಾಣವಿದೆ. ಪ್ರತ್ಯೇಕ ರಾಜ್ಯಗಳಲ್ಲಿ ಇದು ವಿಭಿನ್ನ ಪ್ರಮಾಣದಲ್ಲಿದೆ. ಅತಿ ಹೆಚ್ಚು ಪ್ರಮಾಣ 4.08% ಮಿಜೋರಾಮ್ ನಲ್ಲಿದೆ. ತ್ರಿಪುರಾದಲ್ಲಿ 0.44%, ಕೇರಳದಲ್ಲಿ 0.32%, ಛತ್ತೀಸ್‌ಗಢದಲ್ಲಿದೆ 0.34% ಮತ್ತು ಗುಜರಾತ್‌ನಲ್ಲಿ 0.63% ವಿಚ್ಛೇದನದ ಪ್ರಮಾಣವಿರುವುದು ಕಂಡುಬಂದಿದೆ.