ಚಿತ್ರಾ ಮದುವೆಯಾದ 3 ತಿಂಗಳಿಗೆ ಮೊದಲ ಬಾರಿ ತವರಿಗೆ ಬಂದಿದ್ದಳು. ಬರುತ್ತಿದ್ದಂತೆಯೇ ಅವಳು ಅಮ್ಮನನ್ನು ಆಲಂಗಿಸಿಕೊಂಡು ಅಳುತ್ತಲೇ ಹೇಳಿದ್ದಳು, “ಅಮ್ಮಾ , ನಾನು ಇನ್ಮುಂದೆ ಆ ಮನೆಗೆ ಹೋಗೋದಿಲ್ಲ.”

ಅವಳು ಹೇಳಿದ್ದನ್ನು ಕೇಳಿ, ಅಮ್ಮ ಅಪ್ಪ ಗಾಬರಿಗೊಳಗಾದರು. ಅವರು ಅವಳ ಮದುವೆಯನ್ನು ಅತ್ಯಂತ ಅದ್ಧೂರಿಯಾಗಿ ಮಾಡಿದ್ದರು. ಅತ್ತೆಮನೆಯಲ್ಲಿ ಅಂಥದ್ದೇನು ನಡೆದಿರಬೇಕು ಎಂದು ಅವರು ಮಗಳ ಕಡೆ ನೋಡುತ್ತ ವಿಚಾರ ಮಾಡತೊಡಗಿದರು. ಅಳಿಯ ಮದುವೆಗೂ ಮೊದಲೇ ಹಲವು ಸಲ ತಮ್ಮನ್ನೆಲ್ಲ ಭೇಟಿಯಾಗಲು ಬಂದಿದ್ದ. ಅವನ ವರ್ತನೆಯಲ್ಲಿ ಅಂತಹ ದೋಷವೇನೂ ಅವರಿಗೆ ಕಂಡಿರಲಿಲ್ಲ.

ತಾಯಿ ತಂದೆಯ ಏಕೈಕ ಪುತ್ರ ಸುದರ್ಶನ. ಒಳ್ಳೆಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ. ಅವನಿಗೆ ಯಾವುದೇ ದುಶ್ಚಟಗಳಿರಲಿಲ್ಲ. ಅವನ ಒಳ್ಳೆಯ ಗುಣನಡತೆ ನೋಡಿ ಅವನಿಗೆ ಮಗಳನ್ನು ಧಾರೆಯೆರೆದು ಕೊಟ್ಟಿದ್ದರು. ಅವನ ತಾಯಿ ತಂದೆ ಕೂಡ ಆಧುನಿಕ ಮನೋಭಾವದವರಾಗಿದ್ದರು. ಏನೋ ಗಂಭೀರ ಸಮಸ್ಯೆ ಇದೆ. ಅದು ಮದುವೆಯ ಬಳಿಕ ಗೊತ್ತಾಗಿರಬಹುದು ಎಂದು ಎಲ್ಲರೂ ಯೋಚಿಸತೊಡಗಿದರು. ಮಗಳು ತಾನೇಕೆ ತವರುಮನೆಗೆ ವಾಪಸ್‌ ಬಂದೆ ಎಂದು ಕಾರಣಗಳನ್ನು ಹೇಳಿದಾಗ, ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೆಂದು ಅಮ್ಮ ಅಪ್ಪನಿಗೆ ಗೊತ್ತಾಗಲಿಲ್ಲ.

ಚಿತ್ರಾ ಹೇಳಿದ್ದೇನು ಗೊತ್ತೆ, “ಸುದರ್ಶನ ಮದುವೆಗೂ ಮುಂಚೆ, ನನ್ನನ್ನು ಬಹಳ ಪ್ರೀತಿಸುತ್ತಿದ್ದ. ಆದರೆ ಈಗ ಹಾಗೆ ಮಾಡಬೇಡ, ಹೀಗೆ ಮಾಡಬೇಡ, ಅಮ್ಮ ಅಪ್ಪನಿಗೆ ನೋವಾಗದಂತೆ ನಡೆದುಕೊ ಎನ್ನುತ್ತಾನೆ. ಮುಂಜಾನೆ 6ಕ್ಕೆ ಎದ್ದು ತಿಂಡಿ ಮಾಡು ಎಂದು ಹೇಳುತ್ತಾನೆ!”

ಚಿತ್ರಾ ಉದ್ಯೋಗ ಕೂಡ ಮಾಡುತ್ತಾಳೆ. ಅವಳು ಮನೆಗೆ ದಣಿದು ಬಂದರೂ ಅತ್ತೆಗೆ ಸಹಾಯ ಮಾಡಲು ತಯಾರಾಗಬೇಕು. ಈ ಬಗ್ಗೆ ಅತ್ತೆಯೇನೂ ಕರೆಯುವುದಿಲ್ಲ. ಆದರೆ ಸುದರ್ಶನ ಅಮ್ಮ ಒಬ್ಬಳೇ ಅಡುಗೆ ಕೆಲಸ ಮಾಡಬೇಕಾ, ನೀನೂ ಅವರಿಗೆ ನೆರವಾಗು ಎಂದು ಅವಳನ್ನು ಕಳಿಸುತ್ತಾನೆ. ಸುದರ್ಶನ ಕೂಡ ಅವಳಿಗೆ ಕೆಲಸಕ್ಕೆ ನೆರವಾಗಲು ಇಚ್ಛಿಸುತ್ತಾನೆ. ಆದರೆ ಮದುವೆಗೂ ಮುಂಚೆ ಅವನು ಅಡುಗೆಮನೆಯಲ್ಲಿ ಕೆಲಸ ಮಾಡಿಲ್ಲ. ಹಾಗಾಗಿ ತಾನು ಅಡುಗೆಮನೆಗೆ ಸಹಾಯಕ್ಕೆ ಬಂದರೆ ಅಮ್ಮ ಅಪ್ಪ ಏನು ಅನ್ನುತ್ತಾರೊ ಎಂಬ ಸಂಕೋಚ ಅವನಿಗೆ.

ತಮ್ಮ ಮಗಳು ಇಷ್ಟು ಚಿಕ್ಕಪುಟ್ಟ ವಿಷಯಗಳಿಗೆ ಅತ್ತೆಮನೆ ಬಿಟ್ಟು ಬರುತ್ತಾಳೆಂಬುದು ಅವರ ಕಲ್ಪನೆಗೂ ಮೀರಿದ ವಿಷಯವಾಗಿತ್ತು. ತಮ್ಮ ಪಾಲನೆ ಪೋಷಣೆಯಲ್ಲಿಯೇ ಏನಾದರೂ ಲೋಪ ಆಯ್ತಾ, ಅದಕ್ಕಾಗಿ ತಾವು ಇಂತಹದನ್ನು ನೋಡಬೇಕಾಗಿ ಬಂತಾ ಎಂದರು ಯೋಚಿಸಿದರು.

ಚಿತ್ರಾಳ ಈ ಮಾನಸಿಕತೆಯ ಹಿಂದಿನ ಕಾರಣವೇನಿರಬಹುದು? ಅದರ ಬಗ್ಗೆ ಒಂದಿಷ್ಟು ತಿಳಿಯುವ ಪ್ರಯತ್ನ ಮಾಡೋಣ :

ತಾಯಿ ತಂದೆಯ ಅತಿಯಾದ ಮುದ್ದಿನ ಪರಿಣಾಮ ಎಂಬಂತೆ ಅವಳು ಪರಾವಲಂಬಿ ಆಗಿಬಿಟ್ಟಿದ್ದಾಳೆ.

ಅವಳಿಗೆ ಪುಸ್ತಕ ಜ್ಞಾನವನ್ನೇನೊ ಕೊಟ್ಟಿದ್ದಾರೆ. ಆದರೆ ಅವಳಿಗೆ ವ್ಯವಹಾರ ಜ್ಞಾನವನ್ನೇನೂ ಹೇಳಿಕೊಟ್ಟಿರಲಿಲ್ಲ ಸಂಬಂಧಗಳ  ಸಂವೇದನಾಶೀಲತೆ ಮತ್ತು ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಕಲಿಸಿಯೇ ಇರಲಿಲ್ಲ. ವಿವಾಹದ ಮೂಲ ಆಧಾರವೇ ಹೊಂದಾಣಿಕೆಯಾಗಿದೆ.

ಯಾವುದೇ ಕೆಲಸ ಮಾಡಲು ಹೇಳದೇ ಇರುವುದರಿಂದ ಅವರು ಸ್ವಾವಲಂಬಿಗಳಾಗಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಅವರು ಯಾವುದೇ ಸಣ್ಣ ಕೆಲಸ ಮಾಡಲು ಕೂಡ ಹಿಂದೇಟು ಹಾಕುತ್ತಾರೆ.

ಮಹಿಳೆಯರಿಗಾಗಿಯೇ ರೂಪಿಸಿದ ವಿಶೇಷ ಕಾನೂನುಗಳಿಂದ ಅವರಿಗೆ ಮದುವೆ ಎಂಬ ವ್ಯವಸ್ಥೆಯ ಬಗ್ಗೆ ಬದ್ಧತೆ ಇಲ್ಲ.  ಮಹಿಳೆಯರು ಆ ಕಾನೂನುಗಳ ಸದ್ಬಳಕೆಗಿಂತ ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚಾಗಿದೆ.

ಇಂದಿನ ಆಧುನಿಕ ತಲೆಮಾರಿನ ಯುವತಿಯರಲ್ಲಿ ಸಹನಶೀಲತೆ ಕಡಿಮೆಯಾಗಿದೆ. ಮದುವೆಗೂ ಮುಂಚಿನ ಬೇಕಾಬಿಟ್ಟಿ ದಿನಚರಿ ಮದುವೆಯ ಬಳಿಕದ ಒಂದಿಷ್ಟು ಬದಲಾವಣೆ ಕೂಡ ಅವರಿಗೆ ಅಸಹನೀಯ ಎನಿಸುತ್ತದೆ. ಈ ಕಾರಣದಿಂದ ಅವರು ಸಿಡಿದೇಳುತ್ತಾರೆ.

ವಿವಹದ ಬಗೆಗಿನ ಬದಲಾದ ಸಮಾಜದ ದೃಷ್ಟಿಕೋನ ಕೂಡ ದೋಷಿಯಾಗಿದೆ. ಇತ್ತೀಚೆಗೆ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ಅಥವಾ ಪರಿಚಯದವರಿಂದ ವಿಚ್ಛೇದನದ ಬಗ್ಗೆ ಹೆಚ್ಚೆಚ್ಚು ಚರ್ಚೆ ಮಾಡುವುದರಿಂದ ಅವರ ಮನಸ್ಸು ವಿಚಲಿತವಾಗುತ್ತದೆ.

ತಾಯಿ ತಂದೆ ಕೂಡ ಮಗಳ ಮದುವೆಯ ಬಳಿಕ ಅವಳ ಜೀವನದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸುತ್ತಾರೆ.

ಓದಲು ಅಥವಾ ನೌಕರಿ ಮಾಡಲು ಕುಟುಂಬದಿಂದ ದೂರ ಹೋದುದರ ಪರಿಣಾಮವಾಗಿ ಅವರಿಗೆ ಕುಟುಂಬದ ಮಹತ್ವ ಗೊತ್ತಾಗದೇ ಇದ್ದಿರಬಹುದು.

ಮಹಿಳೆಯರು ಮದುವೆಗಿಂತ ಹೆಚ್ಚಾಗಿ ಕೆರಿಯರ್‌ಗೆ ಮಹತ್ವ ಕೊಡುತ್ತಾರೆ. ಮದುವೆಯ ಬಳಿಕ ಕುಟುಂಬ ನಿರ್ವಹಣೆ ಅಥವಾ ಅತ್ತೆಮನೆಯ ಕೆಲಸ ಕಾರ್ಯಗಳಲ್ಲಿ ಸಮಯ ಕೊಡುವುದು ಅವರಿಗೆ ಕೆರಿಯರ್‌ಗೆ ಅಡ್ಡಿಯೆನಿಸುತ್ತದೆ.

ಕೆಲವು ಪ್ರಮುಖ ಸಲಹೆಗಳು

ಮಗ ಅಥವಾ ಮಗಳ ವೈವೈಹಿಕ ಜೀವನದಲ್ಲಿ ಅಡ್ಡಿಯುಂಟಾಗದಿರಲು ಕೆಳಕಂಡ ಸಲಹೆಗಳನ್ನು ಗಮನಿಸಿ :

ಮಕ್ಕಳಿಗೆ ಬಾಲ್ಯದಿಂದಲೇ ಮನೆ ಕೆಲಸ ಕಾರ್ಯಗಳನ್ನು ಕಲಿಸಬೇಕು. ಹೆಣ್ಣುಮಕ್ಕಳು ಇತ್ತೀಚೆಗೆ ನೌಕರಿ ಮಾಡಿ ಗಂಡನಿಗೆ ಆರ್ಥಿಕ ಸಹಕಾರ ನೀಡುತ್ತಾರೆ. ಹೀಗಾಗಿ ಗಂಡು ಮಕ್ಕಳಿಗೂ ಮನೆಗೆಲಸ ಮಾಡುವುದನ್ನು ಕಲಿಸಬೇಕು.

ಮಕ್ಕಳು ಮನೆಯಿಂದ ದೂರ ಇದ್ದರೂ ಅವರಿಗೆ ಸಂಬಂಧಗಳ ಬಗ್ಗೆ ಸಂವೇದನಾಶೀಲರಾಗಲು ಕಲಿಸಿ. ಸಂಬಂಧಿಕರು, ಚಿರಪರಿಚಿತರ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಿ.

ಅವರು ತಮ್ಮೊಳಗೆ ತಾವು ಕಳೆದುಹೋಗದಿರಲು ಅವರ ಪ್ರತಿಯೊಂದು ಬೇಡಿಕೆಗಳನ್ನೂ ಈಡೇರಿಸಬೇಡಿ. ಅದರಿಂದಾಗಿ ಅವರು ತಮ್ಮ ಬಗೆಗಷ್ಟೇ ಯೋಚಿಸುವುದು ಕಡಿಮೆ ಮಾಡುತ್ತಾರೆ. ಕೊರತೆಗಳ ನಡುವೆಯೂ ಬದುಕುವುದನ್ನು ಅವರು ರೂಢಿಸಿಕೊಳ್ಳಬೇಕು.

ಓದು ಹಾಗೂ ನೌಕರಿ ಜೊತೆಗೆ ವೈವಾಹಿಕ ಜೀವನವನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವುದು ಮಹಿಳೆಯರ ಕರ್ತವ್ಯ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಿ. ಕೆರಿಯರ್‌ಗಿಂತ  ಹೆಚ್ಚಾಗಿ ಕುಟುಂಬಕ್ಕೆ ಮಹತ್ವ ಕೊಡುವುದನ್ನು ಕಲಿಸಬೇಕು. ಪುಸ್ತಕ ಜ್ಞಾನದ ಜೊತೆಗೆ ಅವರಿಗೆ ವ್ಯವಹಾರಿಕ ಜ್ಞಾನವನ್ನೂ ಕಲಿಸಬೇಕು.

ಮದುವೆಯ ಬಳಿಕ ಅತ್ತೆಮಾವಂದಿರ ಜೊತೆಗೆ ಇರುವುದರ ಲಾಭವನ್ನು ಅವರಿಗೆ ತಿಳಿಸಿಕೊಡಬೇಕು. ಒಂದಿಷ್ಟು ತ್ಯಾಗ ಮಾಡುವುದರಿಂದ ಅವರಿಂದ ದೊರೆತ ಆಶೀರ್ವಾದ ಯಾವುದೇ ವರದಾನಕ್ಕಿಂತ ಕಡಿಮೆಯೇನಲ್ಲ ಎಂದು ಅವರಿಗೆ ತಿಳಿಸಿ ಹೇಳಿ. ನಾವು ಹಿರಿಯರ ಜೊತೆ ಇರುವುದರಿಂದ ಬಹಳಷ್ಟು ವಿಷಯಗಳನ್ನು ಕಲಿತುಕೊಳ್ಳುತ್ತೇವೆ.

ಹೊಸ ಸೊಸೆಗೆ ಅತ್ತೆಮನೆಯಲ್ಲಿ ಹೊಂದಾಣಿಕೆಯಾಗಲು ಸಾಕಷ್ಟು ಸಮಯಾವಕಾಶಬೇಕು. ಮದುವೆಯಾಗುತ್ತಿದ್ದಂತೆ ಅಡುಗೆಮನೆಯ ಜವಾಬ್ದಾರಿಯನ್ನು ಪೂರ್ತಿ ಅವರಿಗೆ ಒಪ್ಪಿಸಬಾರದು.

ಸೊಸೆ ಮತ್ತು ಮಗ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು ಅವರಿಗೆ ಸುತ್ತಾಡಿ ಬರಲು ಒಂದಷ್ಟು ಅವಕಾಶ ಕೊಡಬೇಕು. ಅದರಿಂದ ಅವರ ವೈವಾಹಿಕ ಜೀವನದ ಅಡಿಪಾಯ ಭದ್ರಗೊಳ್ಳುತ್ತದೆ.

ಬದಲಾಗುತ್ತಿರುವ ಇಂದಿನ ಕಾಲಮಾನದ ಪ್ರಕಾರ ಅತ್ತೆಮಾವನಿಗೆ ತಮ್ಮ ಹೊಸ ಸೊಸೆಯ ಬಗ್ಗೆ ಬದಲಾವಣೆ ತಂದುಕೊಳ್ಳುವುದು ಅತ್ಯವಶ್ಯಕ! ನಾವು ನಮ್ಮ ಕಾಲಮಾನದೊಂದಿಗೆ ಅವರನ್ನು ಹೋಲಿಸಿ ನೋಡುತ್ತಿದ್ದರೆ ಅವರು ಅದಕ್ಕೆಂದೂ ಫಿಟ್‌ ಆಗುವುದಿಲ್ಲ. ಹಳೆಯ ಸೊಸೆ ಅತ್ತೆಮನೆಯ ರೀತಿ ನೀತಿಗಳಿಗಾಗಿ ಸಮರ್ಪಿತಳಾಗಿರುತ್ತಿದ್ದಳು. ಆದರೆ ಇಂದಿನ ಆಧುನಿಕ ಸೊಸೆ ಸ್ವಾವಲಂಬಿ ಆಗಿರುವ ಕಾರಣದಿಂದ ಅವಳಿಗೆ ತನ್ನದೇ ಆದ ಯೋಚನೆಗಳಿರುತ್ತವೆ. ಅದಕ್ಕೆ ತಕ್ಕಂತೆಯೇ ಅವಳು ತರ್ಕ ಮಾಡುತ್ತಾಳೆ. ಹೀಗಾಗಿ ಅವಳ ವಿಚಾರಗಳನ್ನು ಗೌರವಿಸುವುದು ಕೂಡ ಅಷ್ಟೇ ಮಹತ್ವದ್ದು.

ಕೆಲವು ವಿಶೇಷ ಕಾರಣಗಳನ್ನು ಹೊರತುಪಡಿಸಿ ತಾಯಿ ತಂದೆಯ ಮುಖಾಂತರ ಮಗಳು ಮಗ ಇವರ ಪಾಲನೆ ಪೋಷಣೆಯ ಆಧಾರದ ಮೇಲೆಯೇ ವೈವಾಹಿಕ ಜೀವನದ ಯಶಸ್ಸು ನಿಂತಿದೆ.

– ಸುಧಾ ಭಟ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ