ಪ್ರೀತಿಯಲ್ಲಿ ಸಾಮಾನ್ಯವಾಗಿ ಹೃದಯ ಬಡಿತ ತೀವ್ರವಾಗುತ್ತದೆ. ಉಸಿರಾಟ ಏರು ಮುಖವಾಗುತ್ತದೆ. ಮನಸ್ಸಿನಾಳದಲ್ಲಿ ಯಾರೋ ಕುಳಿತುಬಿಡುತ್ತಾರೆ. ಆದರೆ ನಿಮ್ಮ ಹೃದಯ ಬೇರೊಬ್ಬರ ಅಧೀನವಾದಾಗ ಪ್ರೀತಿಯ ಈ ಉತ್ಕಟ ಸ್ಥಿತಿಗೆ ಕಂಟಕ ಬರುತ್ತದೆ.

ದೆಹಲಿಯ ಕೋರ್ಟಿಗೆ ಪತಿಯೊಬ್ಬ ನ್ಯಾಯ ಕೇಳಿದ್ದು ಹೀಗೆ, “ನಾನು ನನ್ನ ಪತ್ನಿಯಿಂದ ತೊಂದರೆಗೆ ಸಿಲುಕಿರುವೆ. ಪೊಲೀಸರು ಕೂಡ ನನ್ನ ನೆರವಿಗೆ ಬರುತ್ತಿಲ್ಲ. ನೀವೇ ನನಗೆ ನ್ಯಾಯ ಕೊಡಿಸಿ.”

ಅಂದಹಾಗೆ ರವಿ ಎಂಬ ವ್ಯಕ್ತಿ ಸರಿತಾ (ಹೆಸರು ಬದಲಿಸಲಾಗಿದೆ) ಜೊತೆಗೆ ಮದುವೆಯಾದಾಗ ಅವನ ಖುಷಿಗೆ ಯಾವುದೇ ಮೇರೆ ಇರಲಿಲ್ಲ. ಅವಳು ಮಹಾ ಸುಂದರಿ. ಅವಳ ಸೌಂದರ್ಯದ ಬಗ್ಗೆ ತನ್ನ ಸ್ನೇಹಿತರ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದ.

ಆದರೆ ಅವನ ಖುಷಿ ಬಹಳ ದಿನ ಉಳಿಯಲಿಲ್ಲ. ಹೆಂಡತಿಯ ವಾಸ್ತವ ಕಾದಂಬರಿಯ ಪುಟಗಳು ಹಾಗೇ ಹಲವು ದಿನಗಳಲ್ಲಿಯೇ ಬಯಲಾಗಿಬಿಟ್ಟಿತು. ಸರಿತಾ ಬೇರೊಬ್ಬ ಪುರುಷನ ಜೊತೆ ಪ್ರೀತಿಗೆ ಬಿದ್ದಿದ್ದಳು. 1-2 ಸಲ ಅದು ಪತಿಯ ಗಮನಕ್ಕೆ ಬಂತು. ಆ ಬಳಿಕ ಅವಳು ಗಂಡನ ಜೊತೆಗೆ ಮನೆಯವರಿಗೂ ಕೂಡ ತೊಂದರೆ ಕೊಡಲಾರಂಭಿಸಿದಳು. ನಿಮ್ಮನ್ನೆಲ್ಲ ವರದಕ್ಷಿಣೆ ಕೇಸಿನಲ್ಲಿ  ಒಳಗೆ ಹಾಕಿಸುವುದಾಗಿ ಅವರಿಗೆ ಬೆದರಿಕೆ ಹಾಕತೊಡಗಿದಳು. ನಾನು ನನ್ನ ಕೈ ನರಗಳನ್ನು ಕತ್ತರಿಸಿಕೊಂಡು ಬಿಡುತ್ತೇನೆ ಎಂದು ಕೂಡ ಹೇಳತೊಡಗಿದಳು.

ರವಿ ಹಾಗೂ ಅವನ ಕುಟುಂಬದವರು ಈ ಮುಂಚೆ ಎಂದೂ ಪೊಲೀಸ್‌ ಠಾಣೆಗೆ ಹೋದವರಲ್ಲ. ಸಮಾಜದಲ್ಲಿ ತಮ್ಮ ಹೆಸರು ಕೆಟ್ಟು ಹೋದರೇನು ಗತಿ ಎಂದು ಅವರು ಅವಳಿಗೆ ತಿಳಿ ಹೇಳಲು ಪ್ರಯತ್ನಿಸಿದರು. ಆದರೆ ಅವಳು ಮಾತ್ರ ಅವರಿಗೆ ಬೆದರಿಕೆ ಹಾಕಲು ಶುರು ಮಾಡಿದಳು. ಬೇಸತ್ತು ಹೋದ ಗಂಡ ಪೊಲೀಸರಿಗೆ ಹೇಳಿದ. ಆದರೆ ಇದನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಅವರು ಹೇಳಿದರು. ಆಗ ಅವನು ನ್ಯಾಯಾಲಯದ ಮೊರೆಹೋದ.

ಏನು ಹೇಳುತ್ತದೆ ಕಾನೂನು?

ಅಡ್ವೋಕೇಟ್‌ ದೀಪ್ತಿ ಹೀಗೆ ಹೇಳುತ್ತಾರೆ, “ಈ ತೆರನಾದ ಪ್ರಕರಣಗಳು ಇತ್ತೀಚೆಗೆ ಕೋರ್ಟಿಗೆ ಹೆಚ್ಚಾಗಿ ಬರುತ್ತಿವೆ. ಅಕ್ರಮ ಸಂಬಂಧದ ರಹಸ್ಯ ಬಯಲಾದಾಗ ಏಕಕಾಲಕ್ಕೆ ಅನೇಕ ಜನರ ಜೀವನ ಪಣಕ್ಕೊಡುತ್ತದೆ. ಸಂಬಂಧ ಮುರಿದು ಬೀಳುತ್ತದೆ. ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ಕಾನೂನಿನನ್ವಯ ಪುರುಷನ ತಪ್ಪು ಇದ್ದಾಗ ಅವನಿಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಮಹಿಳೆಯರ ಮೇಲೆ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಇದು ಐಪಿಸಿ 497ರ ಪ್ರಕಾರ ಬರುತ್ತದೆ. ಅಂದಹಾಗೆ ಇದು ಹಳೆಯ ಕಾನೂನು ಇದರ ತಿದ್ದುಪಡಿಗೆ ಆಗ್ರಹ ಕೇಳಿ ಬರುತ್ತಿರುತ್ತದೆ.

497ನೇ ಪರಿಚ್ಛೇದದ ಕ್ಲಿಷ್ಟತೆ

ಸಾಮಾನ್ಯವಾಗಿ ಕ್ರಿಮಿನಲ್ ಲಾನಲ್ಲಿ ಜೆಂಡರ್‌ ಸಮಾನತೆ ಕಂಡುಬರುತ್ತದೆ. ಆದರೆ 497ನೇ ವಿಧಿಯಲ್ಲಿ ಇದು ಇಲ್ಲ. ಈ ವಿಧಿಯನ್ವಯ ಕೇವಲ ಪುರುಷರನ್ನು ಮಾತ್ರ ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಆದರೆ ಮಹಿಳೆಯರು ಕೇವಲ ಬಲಿಪಶು ಅಂದರೆ `ವಿಕ್ಟಿಮ್’ ಎಂದಷ್ಟೇ ಭಾವಿಸಲಾಗುತ್ತದೆ. ಅಂದರೆ ಯಾವುದೇ ವಿವಾಹಿತ ಪುರುಷ, ವಿವಾಹಿತ ಮಹಿಳೆಯ ಜೊತೆ ಒಪ್ಪಿಗೆಯ ಮೇರೆಗೆ ಸಂಬಂಧ ಬೆಳೆಸಿದರೆ, ಪುರುಷನ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಆದರೆ ಮಹಿಳೆಯ ವಿರುದ್ಧ ಕ್ರಮ ಜರುಗಿಸಲು ವ್ಯವಸ್ಥೆ ಇಲ್ಲ.

ಆರ್ಥಿಕ ಅಗತ್ಯತೆ, ರೋಮಾಂಚನ ಏನನ್ನಾದರೂ ಹೊಸದನ್ನು ಮಾಡಬೇಕೆನ್ನುವುದು, ದೈಹಿಕ ಹಸಿವು ನಿವಾರಿಸಿಕೊಳ್ಳಬೇಕೆಂಬ ಅಪೇಕ್ಷೆಯಿಂದ ಗಂಡು ಹೆಣ್ಣು ಒಂದು ಸಲ ಸಂಬಂಧ ಬೆಳೆಸುತ್ತಾರೆ. ಆಮೇಲೆ ಅದರ ಸುಳಿಗೆ ಸಿಲುಕುತ್ತಲೇ ಹೋಗುತ್ತಾರೆ. ಆ ಬಳಿಕ ಈ ಸುಳಿಯಿಂದ ಹೊರಬರುವುದು ಅವರಿಗೆ ಕಷ್ಟಕರವಾಗಿ ಪರಿಣಮಿಸುತ್ತದೆ.

ಡಿಸೆಂಬರ್‌ 2011ರಲ್ಲಿ ವಿವಾಹ ಬಾಹಿರ ಸಂಬಂಧಗಳ ಬಗ್ಗೆ ನಡೆಸಲಾದ ಒಂದು ಅಧ್ಯಯನದಲ್ಲಿ ಕೆಲವು ಅಚ್ಚರಿದಾಯಕ ಸಂಗತಿಗಳು ಬೆಳಕಿಗೆ ಬಂದಿದ್ದವು. ಶೇ.16ರಷ್ಟು ಮಹಿಳೆಯರು ಅಕ್ರಮ ಸಂಬಂಧದಲ್ಲಿ ತೊಡಗಿದ್ದಾರೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು.

ಕ್ರಿಕೆಟರ್‌ ಮೊಹಮ್ಮದ್‌ ಶಮಿ ಹಾಗೂ ಪತ್ನಿಯ ನಡುವೆ ಇದೇ ರೀತಿಯ ವಿವಾದ ಕಾಣಿಸಿಕೊಂಡಿತ್ತು. ತನ್ನ ಗಂಡ ಬೇರೆ ಹುಡುಗಿಯರ ಜೊತೆ ಸಂಪರ್ಕದಲ್ಲಿದ್ದಾನೆ. ಅವರ ಜೊತೆ ಚಾಟ್‌ ಮಾಡುತ್ತಿರುತ್ತಾನೆ ಎಂದು ಬಹಿರಂಗವಾಗಿಯೇ ಆರೋಪಿಸಿದ್ದಳು. ಇದು ಶಮಿಯ ಕ್ರಿಕೆಟ್‌ ಜೀವನಕ್ಕೆ ಬಹುದೊಡ್ಡ ಹೊಡೆತ ಉಂಟು ಮಾಡಿತು.

ಒಮ್ಮೊಮ್ಮೆ ಈ ಅಕ್ರಮ ಸಂಬಂಧಗಳು ವೈವಾಹಿಕ ಜೀವನವನ್ನೇ ನಾಶ ಮಾಡಿಬಿಡುತ್ತವೆ. ಇಲ್ಲಿವೆ ಕೆಲವು ಉದಾಹರಣೆಗಳು :

ಅಲಿಪುರ, ದೆಹಲಿಯಲ್ಲಿ ವಾಸಿಸುವ ಸುರೇಂದ್ರರನ್ನು ಅವರ ಪತ್ನಿಯ ಪ್ರಿಯಕರನೇ ಕೊಂದು ಹಾಕಿದ. ಸುರೇಂದ್ರನಿಗೆ ಇವರಿಬ್ಬರ ಅಕ್ರಮ ಸಂಬಂಧದ ಬಗ್ಗೆ ತಿಳಿದಿರುವುದೇ ಈ ಕೊಲೆಗೆ ಕಾರಣ. ಆರೋಪಿ ಈಗ ಜೈಲಿನಲ್ಲಿದ್ದಾನೆ.

ದೆಹಲಿಯ ಗಾಜಿಪುರದಲ್ಲಿ ಹೃದಯ ನಡುಗಿಸುವ ಒಂದು ಘಟನೆ ನಡೆಯಿತು. ವ್ಯಕ್ತಿಯೊಬ್ಬ ನಾಲ್ಕು ವರ್ಷದ ಮಗುವನ್ನು ನಿರ್ದಯವಾಗಿ ಕೊಂದು ಹಾಕಿದ. ಅವರ ಅಕ್ರಮ ಸಂಬಂಧಕ್ಕೆ ತೊಂದರೆ ಕೊಡುತ್ತಿತು ಎಂಬ ಕಾರಣಕ್ಕೆ ಆ ಮಗು ಕೊಲೆಗೀಡಾಯಿತು.

ಮುಂಬೈನಲ್ಲಿ ಗಂಡಹೆಂಡತಿ ಸೇರಿಕೊಂಡು ಪ್ರೇಮಿಯೊಬ್ಬನನ್ನು ಸಾಯಿಸಿದರು. ತಮ್ಮ ವೈವಾಹಿಕ ಜೀವನ ಹಾಳಾಗಬಾರದೆಂದು ಅವರು ಈ ಕೃತ್ಯ ಎಸಗಿದರು. ಆದರೆ ಈಗ ಇಬ್ಬರೂ ಜೈಲಿನಲ್ಲಿದ್ದಾರೆ.

ದೆಹಲಿಯ ಅಶೋಕನಗರದಲ್ಲಿ ಹೆಂಡತಿಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ಗಂಡನನ್ನೇ ಕೊಲೆ ಮಾಡಿಸಿದಳು. ತನ್ನ ಮತ್ತು ಪ್ರಿಯಕರನ ಸಂಬಂಧದ ಬಗ್ಗೆ ತಿಳಿದಿರುವುದೇ ಅವನ ಜೀವಕ್ಕೆ ಕುತ್ತಾಯಿತು. ಈಗ ಇಬ್ಬರೂ ಜೈಲಿನಲ್ಲಿದ್ದಾರೆ.

ಈ ಸಂಬಂಧಗಳು ಏಕೆ ಹುಟ್ಟುತ್ತಿವೆ?

ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ಅವಿನಾಶ್‌ ಅಕ್ರಮ ಸಂಬಂಧ ಹೇಗೆ ಏರ್ಪಡುತ್ತವೆ ಎಂಬುದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ.

ಭಾವನಾತ್ಮಕ ಕಾರಣಗಳು : ಮದುವೆಯ ಬಳಿಕ ಗಂಡಹೆಂಡತಿ ಭಾವನಾತ್ಮಕ ಆಸರೆ ಬಯಸುತ್ತಾರೆ. ಸಂಗಾತಿ ತನ್ನನ್ನು ಹೃದಯ ಪೂರ್ವಕವಾಗಿ ಪ್ರೀತಿಸಬೇಕು ಎನ್ನುವುದು ಅವರ ಅಪೇಕ್ಷೆಯಾಗಿರುತ್ತದೆ. ಸಂಗಾತಿಯಿಂದ ಅಂತಹ ಪ್ರತಿಕ್ರಿಯೆ ದೊರೆಯದಿದ್ದಾಗ ಅವರು ಮೂರನೇ ವ್ಯಕ್ತಿಯ ಕಡೆ ಆಕರ್ಷಿತರಾಗುತ್ತಾರೆ. ಅದೇ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಡುತ್ತದೆ.

ಏಕಾಂಗಿತನ : ಗಂಡಹೆಂಡತಿ ಇಬ್ಬರಲ್ಲಿ ಒಬ್ಬರ ಏಕಾಂಗಿತನ ಕೂಡ ಒಮ್ಮೊಮ್ಮೆ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಡಬಹುದು. ಕೆಲಸದ ವ್ಯಸ್ತತೆಯಿಂದ ಸಂಗಾತಿಗೆ ಸಮಯ ಕೊಡದೇ ಇರುವುದುರಿಂದ ಅಥವಾ ಉದಾಸೀನ ಧೋರಣೆಯಿಂದ ಸಂಗಾತಿ ಇನ್ನೊಬ್ಬರ ಆಕರ್ಷಣೆಗೆ ಒಳಗಾಗಬಹುದು.

ಜೀವನದಲ್ಲಿ ರೋಮಾಂಚನ ತರಲು : ಜೀವನದಲ್ಲಿ ಏನನ್ನಾದರೂ ಹೊಸದನ್ನು ಮಾಡಲು ಹುಮ್ಮಸ್ಸು ಅಕ್ರಮಕ್ಕೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಇಂಥವರು ಪರ್ಸನಾಲಿಟಿ ಡಿಸಾರ್ಡರ್‌ನಿಂದ ಬಳಲುತ್ತಿರುತ್ತಾರೆ. ಅವರ ಹೆಚ್ಚಿನ ಸಮಯ ನೆಟ್‌ ಸರ್ಫಿಂಗ್‌, ಫ್ರೆಂಡ್‌ ರಿಕ್ವೆಸ್ಟ್ ಕಳಿಸಲು, ಸೋಶಿಯಲ್ ನೆಟ್‌ವರ್ಕಿಂಗ್‌ನಲ್ಲಿ ಕಳೆಯುತ್ತಿರುತ್ತದೆ. ಇಂಥವರು ಜೀವನವನ್ನು ರೋಮಾಂಚನವೆಂದು ಭಾವಿಸಿ, ಕೇವಲ ಒಬ್ಬರ ಜೊತೆ ಸಂಬಂಧ ಇಟ್ಟುಕೊಳ್ಳುವುದನ್ನು ಬೇಸರ ಎಂದು ಭಾವಿಸುತ್ತಾರೆ.

– ಪ್ರಭಾ ಭರತ್‌

ಸುಖಿ ದಾಂಪತ್ಯಕ್ಕೆ

ಡಾ. ಅವಿನಾಶ್‌ ಸುಖಿ ದಾಂಪತ್ಯಕ್ಕೆ ಕೆಲವೊಂದು ಸಲಹೆ ಕೊಟ್ಟಿದ್ದಾರೆ.

ಗಂಡಹೆಂಡತಿ ಎಷ್ಟೇ ಬಿಝಿ ಇದ್ದರೂ ಪರಸ್ಪರರಿಗಾಗಿ ಒಂದಿಷ್ಟು ಸಮಯ ಮೀಸಲಿಡಬೇಕು.

ಮನೆಯಲ್ಲಿ ಟಿವಿ, ಮೊಬೈಲ್‌, ಫೇಸ್‌ಬುಕ್‌, ವಾಟ್ಸ್ಆ್ಯಪ್‌ಗಳಿಂದ ದೂರವಿರಿ.

ಇಬ್ಬರೂ ಆಗಾಗ ರಜೆ ಹಾಕಿ ಎಲ್ಲಾದರೂ ಪ್ರವಾಸಕ್ಕೆ ಹೊರಡಬೇಕು.

ರಾತ್ರಿ ಊಟವನ್ನೂ ಇಬ್ಬರೂ ಜೊತೆಯಲ್ಲೇ ಸವಿಯಬೇಕು.

ಪರಸ್ಪರರ ಆಸಕ್ತಿ ಅಭಿಲಾಷೆಗಳನ್ನು ಗಮನಿಸಿ.

ಸಮಾಗಮಕ್ಕೆ ಹೊಸ ಹೊಸ ಆಸನಗಳನ್ನು ಅನುಸರಿಸಿ.

ಎಲ್ಲಕ್ಕೂ ಮುಖ್ಯವಾದುದೆಂದರೆ, ಸಂಗಾತಿಗೆ ಭಾವನಾತ್ಮಕ ಆಸರೆಯ ಕೊರತೆ ಕಾಡದಂತೆ ನೋಡಿಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ