ಸೋಯಾ ಡಂಪ್‌ಲಿಂಗ್ಸ್
ಸಾಮಗ್ರಿ : 100 ಗ್ರಾಂ ಮೊಳಕೆ ಕಟ್ಟಿದ ಸೋಯಾಬೀನ್ಸ್ (ಹದನಾಗಿ ಬೇಯಿಸಿ), 2 ಬೆಂದ ಆಲೂ, ಸೋಯಾ ಗ್ರಾನ್ಯುಯೆಲ್ಸ್, ಮೈದಾ, ಬಿಳಿ ಎಳ್ಳು (ತಲಾ 50 ಗ್ರಾಂ). ಅಗತ್ಯವಿದ್ದಷ್ಟು ಪಿಂಕ್, ರೆಡ್, ಆರೆಂಜ್ ಫುಡ್ ಕಲರ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಹೆಚ್ಚಿದ ಕೊ.ಸೊಪ್ಪು, ಹಸಿಮೆಣಸು, ಕರಿಬೇವು, ಪುದೀನಾ, ಕರಿಯಲು ಎಣ್ಣೆ.
ವಿಧಾನ : ಮೈದಾಗೆ ಉಪ್ಪು, ಚಿಟಕಿ ಖಾರ, ಎಲ್ಲಾ ಫುಡ್ ಕಲರ್ಸ್ ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಮಸೆದ ಆಲೂಗೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಕೊಳ್ಳಿ. ಇದನ್ನು ಚಿತ್ರದಲ್ಲಿರುವಂತೆ ಹಾರ್ಟ್ ಶೇಪ್‌ನಲ್ಲಿ ಮಾಡಿಕೊಂಡು, ಮೈದಾ ಮಿಶ್ರಣದಲ್ಲಿ ಅದ್ದಿ, ಎಳ್ಳಿನಲ್ಲಿ ಚೆನ್ನಾಗಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ, ಟೊಮೇಟೊ ಸಾಸ್ ಹುಳಿ ಸಿಹಿ ಚಟ್ನಿ ಜೊತೆ ಬಿಸಿಯಾಗಿ ಸವಿಯಲು ಕೊಡಿ.
ರೋಟೀಲಾ
ಸಾಮಗ್ರಿ : 500 ಗ್ರಾಂ ಹೆಸರುಬೇಳೆ, 1 ಕಪ್ ಬೆಂದ ನೂಡಲ್ಸ್, 100 ಗ್ರಾಂ ಮಸೆದ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಗರಂಮಸಾಲ, ಹುರಿದು ಪುಡಿ ಮಾಡಿದ ಜೀರಿಗೆ, ಅರ್ಧ ಸೌಟು ಎಣ್ಣೆ, ಅರ್ಧ ಕಪ್ ತುಪ್ಪ, 1 ಚಿಟಕಿ ಕಸೂರಿಮೇಥಿ.
ವಿಧಾನ : ಮೊದಲು ಹೆಸರುಬೇಳೆಯನ್ನು 4-5 ಗಂಟೆ ಕಾಲ ನೆನೆಸಿ ದೋಸೆಹಿಟ್ಟಿನಂತೆ ರುಬ್ಬಿಕೊಳ್ಳಿ. 2-3 ಗಂಟೆ ಕಾಲ ನೆನೆಯಲು ಬಿಡಿ. ಆಮೇಲೆ ಇದಕ್ಕೆ ಬೇರೆಲ್ಲ ಸಾಮಗ್ರಿ ಸೇರಿಸಿ ಚೆನ್ನಾಗಿ ಕದಡಿಕೊಳ್ಳಿ. ನಾನ್‌ಸ್ಟಿಕ್ ಪ್ಯಾನ್‌ಗೆ ತುಸು ತುಪ್ಪ ಸವರಿ ಎಣ್ಣೆ ಬಿಡುತ್ತಾ ಇದರಿಂದ ದೋಸೆ ಮಾಡಿಕೊಳ್ಳಿ. ಇದು ಅರೆ ಬೆಂದಾಗ ದೋಸೆ ಮೇಲೆ ಮತ್ತೆ ತುಸು ತುಪ್ಪ ಸವರಿ ತುರಿದ ಪನೀರ್, ಉಪ್ಪು ಖಾರ ಹಾಕಿದ ನೂಡಲ್ಸ್ ಹರಡಿ, ದೋಸೆಯನ್ನು ನೀಟಾಗಿ 2 ಭಾಗಕ್ಕೆ ಮಡಿಚಿ. ಮತ್ತೆ ಎಣ್ಣೆ ಬಿಟ್ಟು ತಿರುವಿಹಾಕಿ ಬೇಯಿಸಿ. ಬಿಸಿ ಇರುವಾಗಲೇ ಇದನ್ನು ಕಾಯಿಚಟ್ನಿ, ಪುದೀನಾ ಚಟ್ನಿ ಜೊತೆ ಸವಿಯಿರಿ.
ಸ್ಮೋಕಿ ರಿಸೋಟೋ ಡಿಲೈಟ್
ಸಾಮಗ್ರಿ : ಕಾಬೂಲ್ ಕಡಲೆಕಾಳು, ಜೋಳದ ಕಾಳು, ರಾಜ್ಮಾ, ನೂಡಲ್ಸ್ (ಎಲ್ಲ ಬೆಂದದ್ದು, ತಲಾ ಅರ್ಧರ್ಧ ಕಪ್), ಅರ್ಧ ಕಪ್ ಟೊಮೇಟೊ ಚಟ್ನಿ, ಅರ್ಧ ಸೌಟು ತುಪ್ಪ, 5-6 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಕಾಳು ಮೆಣಸು, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು.
ವಿಧಾನ : ಕಾಳುಗಳನ್ನು ಬೇಯಿಸಿಕೊಳ್ಳುವಾಗ ತುಸು ಉಪ್ಪು ಹಾಕಿರಲಿ. ಮಿಕ್ಸಿಗೆ ಟೊಮೇಟೊ ಚಟ್ನಿ, ಬೆಳ್ಳುಳ್ಳಿ, ಉಪ್ಪು, ಕಾಳುಮೆಣಸು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಆಮೇಲೆ ಬೆಂದ ಕಾಳು ಹಾಕಿ ಕೈಯಾಡಿಸಿ. ನಂತರ ನೂಡಲ್ಸ್, ಆಮೇಲೆ ಉದುರುದುರಾದ ಅನ್ನ ಸೇರಿಸಿ ಕೆದಕಬೇಕು. ಬಾಣಲೆ ಮಧ್ಯೆ ತುಸು ಜಾಗ ಮಾಡಿ ಸ್ಟೀಲ್ ಬಟ್ಟಲಿರಿಸಿ. ಇದಕ್ಕೆ ಕೆಂಡ ಹಾಕಿ, ಮೇಲೆ ತುಪ್ಪ ಹಾಕಿ ತಕ್ಷಣ ದೊಡ್ಡ ಮುಚ್ಚಳ ಮುಚ್ಚಿ. ಅದರ ಹೊಗೆ ಡಿಶ್‌ಗೆ ತಗುಲುವಂತೆ ಮಾಡಿ. 5 ನಿಮಿಷ ಬಿಟ್ಟು ಸ್ಟೀಲ್ ಬಟ್ಟಲು ತೆಗೆದು, ಬೇಗ ಬೇಗ ಕೆದಕಿ ಬಿಸಿಯಾಗಿ, ರಾಯ್ತಾ ಜೊತೆ ಸವಿಯಲು ಕೊಡಿ.
ಸ್ಟಫ್ಡ್ ಬಾಲ್ಸ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, ಸಾದಾ/ಕಾಬೂಲ್ ಕಡಲೆಕಾಳು, ಸೋಯಾಬೀನ್ (ಬೆಂದದ್ದು, ತಲಾ 50 ಗ್ರಾಂ), 1 ದೊಡ್ಡ ಆಲೂ (ಬೇಯಿಸಿ ಮಸೆದಿಡಿ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಜೀರಿಗೆ ಪುಡಿ, ಕರಿಯಲು ಎಣ್ಣೆ.
ವಿಧಾನ : ಮೇಲಿನ ಸಾಮಗ್ರಿ ಮಿಕ್ಸಿಗೆ ಹಾಕಿ ಮ್ಯಾಶ್ ಮಾಡಿ. ಇದಕ್ಕೆ ಮಸೆದ ಆಲೂ ಹಾಗೂ ಉಳಿದದ್ದು ಬೆರೆಸಿ ಬೋಂಡ ಉಂಡೆಗಳಾಗಿ ಸಣ್ಣದಾಗಿ ಹಿಡಿದಿಡಿ. ಬ್ರೆಡ್ ಸ್ಲೈಸ್‌ನ್ನು ನೀರಲ್ಲಿ ಅದ್ದಿ ಹಿಂಡಿಕೊಂಡು, ಅದರಲ್ಲಿ ಒಂದೊಂದು ಉಂಡೆ ಬರುವಂತೆ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಬಿಸಿ ಇರುವಾಗಲೇ ಟೊಮೇಟೊ ಸಾಸ್ ಜೊತೆ ಸವಿಯಬೇಕು.
ಪಂಚಭಕ್ಷ್ಯ
ಸಾಮಗ್ರಿ : 100 ಗ್ರಾಂ ಬೆಂದ ಸಾದಾ ಕಡಲೆಕಾಳು, ಮಿಶ್ರ ಕಾಳುಗಳ ಸ್ಪ್ರೌಟ್ಸ್ 2 ಕಪ್, ಅರ್ಧ ಕಪ್ ಉದುರಾದ ಅನ್ನ, 1 ಕಪ್ ಮೊಸರು, ಹೆಚ್ಚಿದ 2 ಈರುಳ್ಳಿ, 1 ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಕಾಳುಮೆಣಸು, ಸಕ್ಕರೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು, ತುಂಡರಿಸಿದ 2 ಒಣ ಮೆಣಸಿನಕಾಯಿ, ಅಲಂಕರಿಸಲು ಹೆಚ್ಚಿದ ಸೇಬು, ಬಾಳೆಹಣ್ಣು.
ವಿಧಾನ : ಒಂದು ಬೇಸನ್ನಿಗೆ ಮೊದಲು ಅನ್ನ ಹರಡಿ. ಇದರ ಮೇಲೆ ಉಳಿದೆಲ್ಲ ಸಾಮಗ್ರಿಗಳು ಒಂದೊಂದಾಗಿ ಬರಲಿ. ಕೊನೆಯಲ್ಲಿ ಒಗ್ಗರಣೆ ಕೊಟ್ಟು ಇದಕ್ಕೆ ಸೇರಿಸಿ, ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ತಕ್ಷಣ ಸವಿಯಲು ಕೊಡಿ.
ಪಾರಿಜ್ ಸಲಾಡ್
ಸಾಮಗ್ರಿ : 100-100 ಗ್ರಾಂ ಬೆಂದ ರಾಜ್ಮಾ, ಪಾಸ್ತಾ, ತುಸು ಆಲಿವ್ ಎಣ್ಣೆ, 1-2 ಈರುಳ್ಳಿ, 2-3 ಟೊಮೇಟೊ, 10-12 ಕವಳಿಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಸಾಸ್, ಕಾಳುಮೆಣಸು.
ವಿಧಾನ : ರಾಜ್ಮಾ, ಪಾಸ್ತಾ ಬೇರೆ ಬೇರೆಯಾಗಿ ಬೇಯಿಸಿಕೊಂಡು ಅದರ ನೀರು ಬೇರ್ಪಡಿಸಿ. ಆ ನೀರಿನಲ್ಲೇ ಕವಳಿಕಾಯಿಗಳನ್ನು ಲಘುವಾಗಿ ಬೇಯಿಸಿ. ಒಂದು ಬಟ್ಟಲಿಗೆ ಈ ಎಲ್ಲ ಸಾಮಗ್ರಿ ಹಾಕಿ, ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಸ್ಪ್ರೌಟ್ಸ್ ಕಡುಬು
ಸಾಮಗ್ರಿ : 1 ಕಪ್ ಮೈದಾ, 2 ಕಪ್ ಮಿಶ್ರ ಸ್ಪ್ರೌಟ್ಸ್, 4-5 ಕ್ಯೂಬ್ಸ್ ಮೋಜರೆಲಾ ಚೀಸ್, ಕರಿಯಲು ಎಣ್ಣೆ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಖಾರ, ಚಿಲೀ ಸಾಸ್, ಅರ್ಧ ಸೌಟು ತುಪ್ಪ.
ವಿಧಾನ : ಮೈದಾಗೆ ಹಾಲು, ಚಿಟಕಿ ಉಪ್ಪು ಹಾಕಿ, ಹಿಟ್ಟು ಬೆರೆಸಿ. ತುಪ್ಪ ಹಾಕಿ ಚೆನ್ನಾಗಿ ನಾದಿ ನೆನೆಯಲು ಬಿಡಿ. ಇದರಿಂದ ಉಂಡೆ ಮಾಡಿ, ಸಣ್ಣ ಪೂರಿಗಳಾಗಿ ಲಟ್ಟಿಸಿ. ಅದರಲ್ಲಿ ಸ್ಪ್ರೌಟ್ಸ್, ಚೀಸ್, ಬೇರೆಲ್ಲ ಸಾಮಗ್ರಿ ಹಾಕಿ, ಕಡುಬು ತರಹ ಆಕಾರ ಕೊಡಿ, ಅಂಚು ಬಿಡದಂತೆ ಒತ್ತಿಬಿಡಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದು, ಸಾಸ್ ಹಾಕಿ ಸವಿಯಲು ಕೊಡಿ.
ಸೋಯಾ ಡ್ರಿಂಕ್ ವಿತ್ ಐಸ್‌ಕ್ರೀಂ
ಸಾಮಗ್ರಿ : 1-2 ಸ್ಕೂಪ್ ಸ್ಟ್ರಾಬೆರಿ ಐಸ್‌ಕ್ರೀಂ, 1 ಕಪ್ ಸೋಯಾ ಹಾಲು, 4 ಚಮಚ ರೂಹಫ್ಝಾ, 4-6 ತುಂಡರಿಸಿದ ಬಾದಾಮಿ, 2 ಚಮಚ ಹೆಚ್ಚಿದ ಚೆರ್ರಿ ಹಣ್ಣು, 2 ಚಮಚ ಸಕ್ಕರೆ.
ವಿಧಾನ : ಸೋಯಾ ನೆನೆ ಹಾಕಿ ನಂತರ ರುಬ್ಬಿಕೊಂಡು ಹಾಲು ಸಿದ್ಧಪಡಿಸಿ. ಇದನ್ನು ಸೋಸಿಕೊಂಡು ಅದಕ್ಕೆ ಸಕ್ಕರೆ ಬೆರೆಸಿಡಿ. 2 ಗ್ಲಾಸುಗಳಿಗೆ ರೂಹಫ್ಝಾ ಸುರಿದು ಅದರ ಮೇಲೆ ಹಾಲು, ಅದರ ಮೇಲೆ ಐಸ್‌ಕ್ರಿಂ ಹಾಗೂ ಕೊನೆಯಲ್ಲಿ ಬಾದಾಮಿ, ಚೆರ್ರಿ ಬರುವಂತೆ ತೇಲಿಬಿಡಿ. ಇದನ್ನು ಕೂಲ್ ಕೂಲ್ ಆಗಿ ಸರ್ವ್ ಮಾಡಿ