ನೀಳ್ಗಥೆ – ಸುಷ್ಮಾ ಸ್ವರೂಪ್‌ 

“ಅಣ್ಣಾ …. ನಿನ್ನ ಪುಸ್ತಕ ತಗೋ….. ಶಾಂತಿ ಕೊಟ್ಟಿದ್ದಾಳೆ,” ರಾಗಿಣಿ ಪುಸ್ತಕಗಳನ್ನು ಮೇಜಿನ ಮೇಲಿಡುತ್ತಾ ಹೇಳಿದಳು.

ತನ್ನ ಸ್ಟಡೀ ರೂಮಿನ ಬುಕ್‌ ಶೆಲ್ಫ್ ನಲ್ಲಿ ಪುಸ್ತಕಗಳನ್ನು ಜೋಡಿಸುತ್ತಿದ್ದ ದಿವಾಕರ ಮೇಜಿನ ಮೇಲಿದ್ದ ಪುಸ್ತಕಗಳತ್ತ ನೋಡಿ ಕೇಳಿದ, “ಶಾಂತಿ ಇಲ್ಲಿಗೆ ಬಂದಿದ್ದಳೇನು….?”

ದಿವಾಕರನ ಕಣ್ಣಿನಲ್ಲಿ ಮಿಂಚಿದ ಹೊಳಪನ್ನು ಗಮನಿಸಿದ ರಾಗಿಣಿ, “ಕಾಲೇಜಿನಲ್ಲಿ ಇದನ್ನು ಕೊಟ್ಟಳು ಅಣ್ಣಾ,” ಎಂದಳು.

“ಸರಿ,” ಎಂದು ಹೇಳಿ ದಿವಾಕರ್‌ ಮತ್ತೆ ಪುಸ್ತಕಗಳನ್ನು ಸರಿಪಡಿಸತೊಡಗಿದ.

ರಾಗಿಣಿ ಅಲ್ಲೇ ನಿಂತಿರುವುದನ್ನು ಕಂಡು ದಿವಾಕರ ಕೇಳಿದ, “ಈಚೆಗೆ ನಿನ್ನ ಗೆಳತಿಯರು ಮನೆಗೆ ಬರುತ್ತಲೇ ಇಲ್ಲವಲ್ಲ…. ಏಕೆ…?”

ಅಣ್ಣನ ಮನಸ್ಸನ್ನು ಓದಿಕೊಂಡ ರಾಗಿಣಿ ಅವನ ಮುಖವನ್ನು ದಿಟ್ಟಿಸುತ್ತಾ, “ಗೆಳತಿಯರೋ ಅಥವಾ ಶಾಂತಿಯೋ?” ಎಂದು ಕೇಳಿದಳು.

“ನಾನು ಹಾಗೆ ಹೇಳಲಿಲ್ಲ…..”

“ಅಣ್ಣಾ… ನೀನು ಹೇಳದಿದ್ದರೆ ನನಗೆ ಗೊತ್ತಾಗುವುದಿಲ್ಲವೇ? ಶಾಂತಿಯ ಹೆಸರು ಕೇಳಿದರೆ ನಿನ್ನ ಕಣ್ಣಿನಲ್ಲಿ ಅದೇನು ಮಿಂಚು, ಮುಖದಲ್ಲಿ ಅದೇನು ರಂಗು…..!” ರಾಗಿಣಿ ಛೇಡಿಸಿದಳು.

ದಿವಾಕರ್‌ ಮೌನವಾಗಿದ್ದ.

“ಶಾಂತಿಯನ್ನು ಕಂಡರೆ ನಿನಗೆ ಬಹಳ ಇಷ್ಟ ಅಲ್ಲವೇ ಅಣ್ಣಾ,” ರಾಗಿಣಿ ಅವನ ಪಕ್ಕಕ್ಕೆ ಸರಿದು ನಿಂತು ಕೇಳಿದಳು.

“ಇಲ್ಲವಲ್ಲ….. ನಾನು ಯಾವಾಗ ಹಾಗೆ ಹೇಳಿದೆ?” ದಿವಾಕರ್‌ ತಬ್ಬಿಬ್ಬಾದ.

“ಅಣ್ಣಾ, ಎಚ್ಚರವಾಗಿ ಹೆಜ್ಜೆ ಇಡು. ಇಲ್ಲವಾದರೆ ಪೆಟ್ಟು ತಿನ್ನಬೇಕಾಗುತ್ತದೆ…… ಶಾಂತಿ ನನ್ನ ಕ್ಲಾಸ್‌ನಲ್ಲಿ ಓದುತ್ತಿರುವಳು. ಅವಳಿಗಿನ್ನೂ 19 ವರ್ಷ ವಯಸ್ಸು. ಅವಳಿಗೆ 3 ಜನ ಅಣ್ಣಂದಿರಿದ್ದಾರೆ. ಅವಳ ಮದುವೆಗೆ ಇನ್ನೂ ಬಹಳ ಸಮಯ ಇದೆ….. ಶಾಂತಿಯ ಸ್ವಭಾವ ಎಂತಹದು ಅಂತ ನನಗೆ ಗೊತ್ತು. ಅವಳು ತನ್ನ ಮನೆಯವರ ವಿರುದ್ಧವಾಗಿ ಎಂದೂ ಹೋಗುವುದಿಲ್ಲ….. ಮತ್ತೆ ಅವಳ ತಂದೆ ಒಬ್ಬ ವಿವಾಹಿತನಾದ ಮತ್ತು 4 ವರ್ಷದ ಮಗುವಿನ ತಂದೆಯಾಗಿರುವವನಿಗೆ ತಮ್ಮ ಮಗಳನ್ನು ಖಂಡಿತ ಮದುವೆ ಮಾಡಿಕೊಡುವುದಿಲ್ಲ.”

“ರಾಗಿಣಿ….” ದಿವಾಕರ್‌ ಚೀರಿ ಹತಾಶೆಯಿಂದ ಕುರ್ಚಿಯ ಮೇಲೆ ಕುಸಿದು ಕುಳಿತು, “ನೀನು ಮತ್ತು ಅಮ್ಮ ಇಬ್ಬರೂ ಏಕೆ ಆ ವಿಷಯವನ್ನು ಜ್ಞಾಪಿಸುತ್ತೀರಿ…. ಅದು ನನ್ನ ಮದುವೆ ಅಲ್ಲ. ನನ್ನ ಜೀವನದ ಒಂದು ಭಯಾನಕ ಘಟನೆ…. ಅಪ್ಪನ ಹಠದಿಂದ ನಡೆದುಹೋಯಿತು. ಶರತ್‌ ನನ್ನ ಮಗನಲ್ಲ….. ಹಳೆಯದನ್ನೆಲ್ಲ ಬಿಟ್ಟುಬಿಡು. ಏನಿದ್ದರೂ ನಾನು 28 ವರ್ಷದ ಯುವಕ. ನನ್ನ ಹೆಚ್ಚಿನ ಗೆಳೆಯರಿಗೆಲ್ಲ ಇನ್ನೂ ಮದುವೆ ಆಗಿಯೇ ಇಲ್ಲ.”

“ಗೊತ್ತು ಅಣ್ಣಾ……, ನಾನು ನಿನ್ನ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದೇನೆ. ನಿನಗೆ ಸಂತೋಷ ಕೊಡುವುದಕ್ಕೆ ನನಗೆ ಸಾಧ್ಯವಿದ್ದಿದ್ದರೆ ಶಾಂತಿಯನ್ನು ನಿನ್ನ ಹತ್ತಿರಕ್ಕೆ ಎಳೆದು ತಂದು ನಿಲ್ಲಿಸುತ್ತಿದ್ದೆ. ನಿನ್ನ ಜೀವನದಲ್ಲಿ ಅದೆಲ್ಲ ನಡೆದಿಲ್ಲದಿದ್ದರೆ ನಿನ್ನಂತಹ ಯೋಗ್ಯನಾದ ಅಣ್ಣನ ವಿಷಯದ ಬಗ್ಗೆ ಶಾಂತಿಯ ಜೊತೆ ಮಾತುಕತೆ ನಡೆಸುತ್ತಿದ್ದೆ. ನಿನ್ನಷ್ಟು ಒಳ್ಳೆ ಹುಡುಗನನ್ನು ಬಾಳಸಂಗಾತಿಯಾಗಿ ಪಡೆಯುವುದು ಯಾವುದೇ ಹುಡುಗಿಯ ಭಾಗ್ಯವೇ ಸರಿ.”

ದಿವಾಕರ್‌ ಸುಮ್ಮನೆ ಕುಳಿತಿದ್ದ. ರಾಗಿಣಿ ಅವನ ಭುಜದ ಮೇಲೆ ಕೈಯಿಟ್ಟು, “ಆದರೆ ನಿನಗೆ ಇನ್ನೊಂದು ಪೆಟ್ಟು ಬೀಳುವುದು ನನಗೆ ಇಷ್ವವಿಲ್ಲ… ನೀನು ಬಯಸುತ್ತಿರುವುದು ಸಾಧ್ಯವಿಲ್ಲದ ವಿಷಯ. ನೀನೇ ಯೋಚನೆ ಮಾಡು. ಇಂತಹ ಹುಡುಗನ ಜೊತೆ ನನ್ನ ಮದುವೆ ಮಾಡುವುದಕ್ಕೆ ಒಪ್ಪುವೆಯಾ? ನಿನಗೆ ಕೆಲವು ಸಂಬಂಧಗಳು ಬಂದಿವೆ….. ಅಮ್ಮನ ಹತ್ತಿರ ಆ ಜಾತಕಗಳು ಇವೆ. ಅವುಗಳಲ್ಲಿ ಯಾವುದನ್ನಾದರೂ ಆರಿಸಿಕೊಂಡು ಮದುವೆಯಾಗು. ಆಗ ನಿನ್ನ ಮನಸ್ಸು ಶಾಂತಿಯಿಂದ ದೂರವಾಗುತ್ತದೆ,” ಎಂದಳು.

“ನನಗೆ ಮದುವೆ ಬೇಡವೇ ಬೇಡ!” ದಿವಾಕರ್‌ ನಿರಾಶನಾಗಿ ಹೇಳಿದ.

“ನೀನು ಮಲಗು ಹೋಗು….. ಹೋಗುವಾಗ ಬಾಗಿಲು ಮುಚ್ಚಿಕೊಂಡು ಹೋಗು…. ನಾನು ಸ್ವಲ್ಪ ಹೊತ್ತು ಓದುತ್ತೇನೆ….” ಎಂದ.

ಕೊಂಚ ಹೊತ್ತು ಸುಮ್ಮನೆ ನಿಂತಿದ್ದ ರಾಗಿಣಿ, ನಂತರ ಬಾಗಿಲು ಮುಚ್ಚಿ ಹೊರನಡೆದಳು.

ದಿವಾಕರ ಮೇಜಿನ ಮೇಲೆ ತಲೆಯಿರಿಸಿ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ಅವನ ಮನಸ್ಸಿನಲ್ಲಿ ಸುಳಿದಾಡುತ್ತಿದ್ದ ವಿಚಾರಗಳನ್ನು ರಾಗಿಣಿ ಶಬ್ದ ರೂಪದಲ್ಲಿ ಹೊರಗೆಡವಿದ್ದಳು. ಈಗ ಅವುಗಳು ಸುತ್ತಿಗೆಯ ಪೆಟ್ಟಿನಂತೆ ಅವನ ಮೆದುಳನ್ನು ಘಾಸಿಗೊಳಿಸತೊಡಗಿದವು.

ರಾತ್ರಿಯ ನೀರವ ಅಂಧಕಾರ. ದಿವಾಕರನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಸಂಗಾತಿ ಯಾರೂ ಅವನ ಜೊತೆಗಿರಲಿಲ್ಲ. ತಂಗಿ ರಾಗಿಣಿಯೇನೋ ಕೊಂಚ ಮಟ್ಟಿಗೆ ಅವನ ಮನದಳಲನ್ನು ಅರಿತಿದ್ದಳು. ಆದರೆ ಆ ಬಗ್ಗೆ ಏನಾದರೂ ಮಾಡುವಲ್ಲಿ ಅಸಮರ್ಥಳಾಗಿದ್ದಳು. ಮಗನ ಜೀವನದ ಕುರಿತು ಮೊದಲೇ ಚಿಂತಿತಳಾಗಿರುವ ತಾಯಿಯೊಡನೆಯೂ ಅವನು ತನ್ನ ನೋವನ್ನು ಹಂಚಿಕೊಳ್ಳಲಾರದವನಾಗಿದ್ದನು. ಕಳೆದ ಸಂಗತಿಗಳನ್ನು ಮರೆಯೋಣ ಎಂದರೆ, ಶರತ್‌ನ ಉಪಸ್ಥಿತಿ ಎಲ್ಲವನ್ನೂ ನೆನಪಿಗೆ ತರುತ್ತಿತ್ತು. ಶರತ್‌ ದೊಡ್ಡವನಾದಂತೆ ಅತೀತ ದೊಡ್ಡ ಆಕಾರ ಪಡೆಯುತ್ತಾ ಕಣ್ಮುಂದೆ ನಿಲ್ಲುತ್ತಿತ್ತು.

ದಿವಾಕರನಿಗೆ ಕಳೆದ ಆ ದಿನಗಳು ಇನ್ನೂ ಚೆನ್ನಾಗಿ ನೆನಪಿದೆ. ತಂದೆಗೆ ಕ್ಯಾನ್ಸರ್‌ ಆಗಿದೆಯೆಂದು ವೈದ್ಯರು ಪತ್ತೆ ಮಾಡಿದ್ದರು. ಅದೂ ಕೂಡ ಲಾಸ್ಟ್ ಸ್ಟೇಜ್‌ನಲ್ಲಿದೆ ಎಂದು ಹೇಳಿದ್ದರು. ದಿವಾಕರ್‌ ಆಗಷ್ಟೇ ತನ್ನ ಎಂಬಿಎ ಮುಗಿಸಿ ತಂದೆಯ ಬಿಸ್‌ನೆಸ್‌ನಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದ್ದ. ಅವರ ಕಾಯಿಲೆಯಿಂದಾಗಿ ವ್ಯವಹಾರದ ಎಲ್ಲ ಜವಾಬ್ದಾರಿಯೂ ಅವನ ಹೆಗಲಿಗೇ ತಗಲಿಕೊಂಡಿತು. ಆಗ ಅವನಿಗೆ ಕೇವಲ 23 ವರ್ಷ ಅಷ್ಟೇ.

ತಂದೆಯ ಕಾಯಿಲೆಯ ಚಿಕಿತ್ಸೆಗಾಗಿ ದಿವಾಕರ ಹಗಲು ರಾತ್ರಿ ಎನ್ನದೆ ಶ್ರಮಿಸಿದ. ಆದರೆ ಅವರು ಮರಣಶಯ್ಯೆಯಲ್ಲಿ ನಲುಗುತ್ತಿದ್ದರು. ತಮ್ಮ ಕಡೆಯ ಇಚ್ಛೆಯಾಗಿ ಮಗನ ಮದುವೆಯನ್ನು ಕಂಡು ಪ್ರಾಣ ಬಿಡುವ ಇಂಗಿತವನ್ನು ವ್ಯಕ್ತಪಡಿಸಿದರು. ಅದನ್ನು ಕೇಳಿ ದಿವಾಕರ ಅಧೀರನಾದ.

“ಇಷ್ಟು ಬೇಗ ಮದುವೆ! ನನ್ನದು ಮದುವೆಯಾಗುವ ವಯಸ್ಸೇನಪ್ಪಾ….? ನನ್ನ ಜೊತೆಯವರೆಲ್ಲ ಇನ್ನೂ ಓದುತ್ತಿದ್ದಾರೆ. ನಾನು ಈಗ ತಾನೇ ಬಿಸ್‌ನೆಸ್‌ಗೆ ಕಾಲಿಟ್ಟಿದ್ದೇನೆ. ಇನ್ನೂ ಬಹಳಷ್ಟು ಸಾಧಿಸಬೇಕಾಗಿದೆ.”

“ನಿನ್ನ ಮದುವೆ ನೋಡಿ ನಾನು ಶಾಂತಿಯಿಂದ ಜೀವ ಬಿಡುತ್ತೇನೆ. ನನ್ನ ಈ ಆಸೆಯನ್ನು ಪೂರೈಸಿಕೊಡು ಮಗನೇ…. ನನ್ನ ಜವಾಬ್ದಾರಿ ಮುಗಿಸಿದ ತೃಪ್ತಿ ನನಗಿರುತ್ತದೆ. ಸೊಸೆ ಮನೆಗೆ ಬಂದರೆ ನಿನ್ನ ತಾಯಿಗೂ ಸಹಾಯವಾಗುತ್ತದೆ. ನೀನು ಮಾಡಬೇಕೆಂದಿರುವುದನ್ನು ಆಮೇಲೆ ಮಾಡಬಹುದು.”

“ಆದರೆ ಅಪ್ಪಾ, ಇಷ್ಟು ಬೇಗ ಹುಡುಗಿ ಎಲ್ಲಿ ಸಿಗುತ್ತಾಳೆ? ಯಾರು ಹುಡುಕುತ್ತಾರೆ?” ದಿವಾಕರ್‌ ಅಸಹಾಯಕನಾಗಿ ಹೇಳಿದ.

“ನನ್ನ ಮನಸ್ಸಿನಲ್ಲಿ ಒಬ್ಬ ಹುಡುಗಿ ಇದ್ದಾಳೆ…. ನನ್ನ ಸ್ನೇಹಿತ ಸುಂದರೇಶನ ಮಗಳು. ಡಿಗ್ರಿ ಮಾಡಿದ್ದಾಳೆ, ಸುಂದರವಾಗಿದ್ದಾಳೆ. ಸುಂದರೇಶನಿಗೂ ಈ ಸಂಬಂಧ ಇಷ್ಟವಿದೆ.”

ತಂದೆಯ ಗಂಭೀರ ಸ್ಥಿತಿಯಿಂದ ಭಾವುಕನಾಗಿದ್ದ ದಿವಾಕರ್‌ ಏನೂ ಮಾತನಾಡಲಾರದಾದ.

ಲಗುಬಗೆಯಿಂದ ಸರಳವಾಗಿ ಮದುವೆ ನಡೆದುಹೋಯಿತು. ಅವನ ನವಿವಾಹಿತ ಪತ್ನಿ 1 ವಾರ ಅವನ ಜೊತೆಯಲ್ಲಿದ್ದಳು. ಆ  ದಿನಗಳಲ್ಲಿ ನಿರ್ಮಲಾಳ ಮುಖದಲ್ಲಿ ಸಂತೋಷದ ಸುಳಿವಿರಲಿಲ್ಲ. ಅವಳ ಸ್ವಭಾವ ವಿಚಿತ್ರವಾಗಿ ತೋರುತ್ತಿತ್ತು. ಬಹುಶಃ ಇದ್ದಕ್ಕಿದ್ದಂತೆ ನಡೆದ ಮದುವೆಯಿಂದಾಗಿ ಅವಳು ವಿಚಲಿತಳಾಗಿದ್ದಾಳೆಂದು ದಿವಾಕರ್‌ ಭಾವಿಸಿದ. ನಾಲ್ಕಾರು ದಿನಗಳು ತವರಿನಲ್ಲಿದ್ದು ಸುಧಾರಿಸಿಕೊಂಡು ಬರಲಿ ಎಂದು ಪತ್ನಿಯನ್ನು ಅಲ್ಲಿ ಬಿಟ್ಟು ಬಂದ. 4 ದಿನ ಬಿಟ್ಟು ಕರೆತರಲು ಹೋದಾಗ ನಿರ್ಮಲಾ ಬರಲು ನಿರಾಕರಿಸಿದಳು. ಕೆಲವು ದಿನಗಳ ನಂತರ ತಾವೇ ಕರೆತರುವುದಾಗಿ ಅವನ ಮಾವ ಹೇಳಿದರು.

ಮದುವೆಯಾಗಿ ತಿಂಗಳು ಕಳೆಯುವು ಮೊದಲೇ ದಿವಾಕರನ ತಂದೆ ಅಸುನೀಗಿದರು. ಆ ದುಃಖ ಕಳೆಯಲು ಕೊಂಚ ಕಾಲಹಿಡಿಯಿತು. ಆಮೇಲೆ ಅವನ ತಾಯಿ, ಸೊಸೆಯನ್ನು ಕಳುಹಿಸಿಕೊಡುವಂತೆ ಬೀಗರಿಗೆ ಹೇಳಿಕಳುಹಿಸಿದರು. ಆದರೆ ನಿರ್ಮಲಾ ಆಗಲೂ ಬರಲು ಒಪ್ಪಲಿಲ್ಲ. ದಿವಾಕರನಿಗೆ ಒಂದೂ ತಿಳಿಯದಂತಾಯಿತು. ಪತ್ನಿಯ ಜೊತೆ ಅವನ ಸಂಪರ್ಕ ಕೇವಲ 2 ದಿನಗಳಾದ್ದಾಗಿತ್ತು. ಹೀಗಾಗಿ ಒತ್ತಾಯ ಮಾಡಲೂ ಅವನಿಗಾಗಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಹೆಚ್ಚಿನ ಜವಾಬ್ದಾರಿಯಿಂದಾಗಿ ಅವನು ವಿಚಿತ್ರವಾದ ಸಂದಿಗ್ಧಕ್ಕೆ ಸಿಲುಕಿದ.

ನಿಧಾನವಾಗಿ ಒಡಕು ಸುದ್ದಿ ಹೊರಬರತೊಡಗಿತು. ನಿರ್ಮಲಾಳಿಗೆ ಬೇರೊಬ್ಬ ಹುಡುಗನೊಂದಿಗೆ ಪ್ರೀತಿ ಇತ್ತು. ಅವನನ್ನೇ ವಿವಾಹವಾಗಲು ಬಯಸಿದ್ದಳು. ಆದರೆ ಅವಳ ತಂದೆಗೆ ಅದು ಇಷ್ಟವಿರಲಿಲ್ಲ. ತನ್ನ ತಂದೆಯ ಹಠದಿಂದಾಗಿ ಇಷ್ಟವಿಲ್ಲದಿದ್ದರೂ ಅವಳು ದಿವಾಕರನನ್ನು ಮದುವೆಯಾಗಬೇಕಾಯಿತು.  ಆದರೆ ಅವನ ಮನೆಗೆ ಹೋಗಲು ಸುತರಾಂ ಒಪ್ಪಲಿಲ್ಲ.

ದಿವಾಕರ್‌ ಹತಾಶನಾದ. ವಿಧಿಯಾಟದಿಂದ ಅವನ ಬಾಳ ಹಾದಿ ಡೊಂಕಾಗಿ ಸಾಗಿತ್ತು. ಅದು ಅಷ್ಟಕ್ಕೇ ನಿಲ್ಲದೆ ಅವನನ್ನು ಕಂದಕಕ್ಕೆ ದೂಡಿತ್ತು. ಕೆಲವು ತಿಂಗಳ ಬಳಿಕ ನಿರ್ಮಲಾ ತಾಯಿಯಾಗಲಿದ್ದಾಳೆಂದು ತಿಳಿದು ಬಂದಿತು. ಆಗ ಅವನ ತಾಯಿ ಸೊಸೆಯನ್ನು ಕರೆತರುವಂತೆ ಮತ್ತೊಮ್ಮೆ ಮಗನಿಗೆ ಹೇಳಿದರು. ದಿವಾಕರ ಮನಸ್ಸಿಲ್ಲದೆ ಅತ್ತೆಯ ಮನೆಗೆ ಹೋದ.

ಹಳೆಯದನ್ನೆಲ್ಲ ಮರೆತು ಹೊಸಬಾಳು ಪ್ರಾರಂಭಿಸುವಂತೆ ಪತ್ನಿಯ ಮನವೊಲಿಸಲು ದಿವಾಕರ್‌ ಬಹಳ ಪ್ರಯತ್ನಿಸಿದ. ಅವಳ ತಂದೆ ತಾಯಿಯೂ ಮಗಳಿಗೆ ಬುದ್ಧಿ ಹೇಳಿದರು. ನಿರ್ಮಲಾ ಹುಚ್ಚಿಯಂತಾಗಿದ್ದಳು. ಯಾರ ಮಾತಿಗೂ ಬೆಲೆ ಕೊಡಲಿಲ್ಲ. ತನ್ನ ಆರೋಗ್ಯದ ಕಡೆಗೂ ಗಮನ ಕೊಡಲಿಲ್ಲ. ಅವಳೂ ಸಹ ತನ್ನಂತೆ ತಂದೆಯ ಹಠಕ್ಕೆ ಬಲಿಯಾಗಿದ್ದಾಳೆಂದು ದಿವಾಕರನಿಗೆ ಅವಳ ಬಗ್ಗೆ ಕರುಣೆ ಹುಟ್ಟಿತು. ಸೋತು ಮನೆಗೆ ಹಿಂದಿರುಗಿದ.

ದಿನ ತುಂಬಿ ನಿರ್ಮಲಾ ಗಂಡುಮಗುವಿಗೆ ಜನ್ಮವಿತ್ತು ಮೃತ್ಯುವಶಳಾದಳೆಂಬ ಸಮಾಚಾರ ಬಂದಿತು. ಅದನ್ನು ಕೇಳಿ ದಿವಾಕರನಿಗೆ ಅಳುವುದೋ, ನಗುವುದೋ ಎಂದು ತಿಳಿಯದಾಯಿತು. ಕೆಲವೇ ದಿನಗಳ ಒಡನಾಟ ಅವನಿಗೆ ಜೀವನವಿಡೀ ಶಿಕ್ಷೆ ಅನುಭವಿಸುವಂತೆ ಮಾಡಿತು. ಎಂದೂ ಕರಗದಂತಹ ಕಾರ್ಮೋಡ ಬಾಳನ್ನು ಆವರಿಸಿರುವಂತೆ ಅವನಿಗೆ ಭಾಸವಾಯಿತು. ಏನು ಮಾಡುವುದು ಬಿಡುವುದು….? ಒಂದೂ ತಿಳಿಯಲಿಲ್ಲ. ಒಂದೆರಡು ದಿನಗಳ ಕಾಲ ಅವನು ಅತ್ತೆಮನೆಯವರೊಂದಿಗೆ ಯಾವುದೇ ಸಂಪರ್ಕ ನಡೆಸಲಿಲ್ಲ.

ನಂತರ ಒಂದು ದಿನ ಅವನ ಮಾವ ಫೋನ್‌ ಮಾಡಿ, “ಮಗಳ ಸಾವಿನ ದುಃಖದಿಂದ ಇವಳು ಹಾಸಿಗೆ ಹಿಡಿದಿದ್ದಾಳೆ. ಪುಟ್ಟ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ನೀವು ಬಂದು ಕರೆದುಕೊಂಡು ಹೋಗಿ,” ಎಂದು ಹೇಳಿದರು. ದಿವಾಕರನಿಗೆ ತಮ್ಮಿಬ್ಬರ ತಂದೆಯರ ಮೇಲೂ ಕೋಪ ಬಂದಿತು. ಅವರಿಬ್ಬರನ್ನೂ ಕೂಗಿ ಕರೆದು ಕೇಳಬೇಕೆನಿಸಿತು. ತಮ್ಮ ಮಕ್ಕಳ ಬಾಳನ್ನು ಹಾಳು ಮಾಡಿ ಅವರೇನು ಪಡೆದರು? ಮಕ್ಕಳನ್ನು ಬಲವಂತದ ಸಂಬಂಧದಲ್ಲಿ ಅದೇಕೆ ಕಟ್ಟಿ ಹಾಕುವರು? ಸಣ್ಣ ಪುಟ್ಟ ವಿಷಯಗಳಿಗೆಲ್ಲ ಮಕ್ಕಳ ಇಚ್ಛೆಗೆ ಬೆಲೆ ಕೊಡುತ್ತಾರೆ. ಆದರೆ ಜೀವನದ ಬಗೆಗಿನ ತೀರ್ಮಾನ ಮಾಡುವಾಗ ತಮ್ಮ ಹಠವೇ ಅವರಿಗೆ ಮುಖ್ಯವಾಗುತ್ತದೆ. ಇದಕ್ಕಾಗಿ ದಿವಾಕರ್‌ ತನ್ನ ತಂದೆಯನ್ನು ಎಂದೂ ಕ್ಷಮಿಸಲಾರದಾದ.

ಪುಟ್ಟ ಶರತ್‌ ಮನೆಗೆ ಬಂದ. ಅಜ್ಜಿ ಮತ್ತು ಅತ್ತೆ ರಾಗಿಣಿ ಆರೈಕೆಯಲ್ಲಿ ಬೆಳೆಯತೊಡಗಿದ. ಆದರೆ ತಾಯಿಯ ಪ್ರೀತಿಯಿಂದ ವಂಚಿತನಾದ ಮಗುವಿಗೆ ತಂದೆಯ ಪ್ರೀತಿಯೂ ದೊರೆಯಲಿಲ್ಲ. ಮಗನನ್ನು ನೋಡಿದೊಡನೆ ದಿವಾಕರನ ಮುಖ ಕೋಪದ ಕಾವಿನಿಂದ ಕೂಡಿರುತ್ತಿತ್ತು. ಇದರಲ್ಲಿ ಮಗುವಿನದೇನು ತಪ್ಪು ಎಂದು ತಾಯಿ ತಂಗಿ ಸಮಾಧಾನಿಸಿದರೂ ಅವನಿಗೆ ಸಾಧ್ಯವಾಗಲಿಲ್ಲ. ಪುಟ್ಟ ಮಗು ತಂದೆಯ ಕೋಪ, ತಿರಸ್ಕಾರವನ್ನು ಅರ್ಥ ಮಾಡಿಕೊಂಡು ಅವನಿಂದ ದೂರವೇ ಇರುತ್ತಿತ್ತು.

ಹಿಂದೆಲ್ಲ ಮನೆ ಅಣ್ಣ ತಂಗಿಯರ ನಗು ಹಾಸ್ಯಗಳಿಂದ ಕೂಡಿರುತ್ತಿದ್ದವು. ಈ ನಾಲ್ಕು ಜನರಿದ್ದೂ ಸಹ ಸ್ಮಶಾನ ಮೌನದಿಂದ ಕೂಡಿರುತ್ತಿತ್ತು. ವ್ಯವಹಾರದ ಸಲುವಾಗಿ ದಿವಾಕರ್‌ ಹೆಚ್ಚು ಸಮಯ ಹೊರಗೇ ಇರುತ್ತಿದ್ದ. ಮನೆಗೆ ಬಂದಾಗಲೂ ತನ್ನ ಲೈಬ್ರೆರಿಯಲ್ಲಿ ಕುಳಿತುಬಿಡುತ್ತಿದ್ದ. ಸಾಹಿತ್ಯದಲ್ಲಿ ಅತೀ ಆಸಕ್ತಿಯುಳ್ಳ ಅವನ ಪುಸ್ತಕ ಭಂಡಾರ ಅನೇಕ ಮಹಾನ್‌ ಲೇಖಕರ ಕೃತಿಗಳಿಂದ ತುಂಬಿತ್ತು. ಅವನು ಎಲ್ಲಿಗೆ ಹೋದರೂ ಪುಸ್ತಕಗಳನ್ನು ಕೊಂಡು ತರುತ್ತಿದ್ದ.

ರಾಗಿಣಿ ಇಂಗ್ಲಿಷ್‌ ಎಂ.ಎ ಓದುತ್ತಿದ್ದಳು. ಶಾಂತಿ ಅವಳ ಸಹಪಾಠಿಯಾಗಿದ್ದಳು. ಸರಳ, ಮೃದು ಸ್ವಭಾವದ ಶಾಂತಿಯನ್ನು ರಾಗಿಣಿ ಮೆಚ್ಚಿದ್ದಳು. ಇಬ್ಬರೂ ಒಳ್ಳೆಯ ಗೆಳತಿಯರಾಗಿದ್ದರು.

ಒಂದು ದಿನ ರಾಗಿಣಿ ತನ್ನ ಕೆಲವು ಗೆಳತಿಯರನ್ನು ಮನೆಗೆ ಊಟಕ್ಕೆ ಆಮಂತ್ರಿಸಿದಳು. ಹುಡುಗಿಯರ ಮಾತು, ಕಿಲಕಿಲ ನಗುವಿನಿಂದ ಮೌನವಾಗಿದ್ದ ಮನೆಗೆ ಜೀವಕಳೆ ಬಂದಿತು. ವಿಶಾಲ ಮತ್ತು ಸುಂದರವಾಗಿದ್ದ ಮನೆಯನ್ನು ಕಂಡು ಗೆಳತಿಯರಿಗೆಲ್ಲ ಸಂತಸವಾಯಿತು. ರಾಗಿಣಿಯೂ ಸಂತೋಷದಿಂದ ಅವರಿಗೆ ಮನೆಯ 1-1 ಕೊಠಡಿಯನ್ನೂ ತೋರಿಸಿದಳು. ಹಾಗೆಯೇ ಅವರೆಲ್ಲ ದಿವಾಕರನ ಲೈಬ್ರೆರಿಗೆ ಬಂದರು. ಓದುವುದರಲ್ಲಿ ಆಸಕ್ತಿ ಹೊಂದಿದ್ದ ಶಾಂತಿ ಅಲ್ಲಿ ಮಹಾನ್‌ ಲೇಖಕರ ಪುಸ್ತಕಗಳನ್ನೆಲ್ಲ ಕಂಡು ಬೆರಗಾದಳು.

“ಅಬ್ಬಾ! ಎಷ್ಟು ಒಳ್ಳೆಯ ಪುಸ್ತಕಗಳಿವೆ. ರಾಗಿಣಿ, ನಿಮ್ಮ ಮನೆಯಲ್ಲಿ ಸಾಹಿತ್ಯಾಸಕ್ತಿ ಇರುವವರು ಯಾರು?”

“ಇದು ನನ್ನ ಅಣ್ಣನ ಲೈಬ್ರೆರಿ. ಅವನು ಹೊರಗೆ ಹೋದಾಗೆಲ್ಲ ಒಳ್ಳೆಯ ಪುಸ್ತಕ ಕಂಡರೆ ಕೊಂಡು ತರುತ್ತಾನೆ.”

“ನಾನು ಓದಬೇಕೆಂದುಕೊಂಡಿರುವ ಅನೇಕ ಪುಸ್ತಕಗಳು ಇಲ್ಲಿವೆ. ನಾನು ತೆಗೆದುಕೊಳ್ಳಲಾ? ಓದಿ ಹಿಂದಿರುಗಿಸುತ್ತೇನೆ,” ಶಾಂತಿ ಪುಸ್ತಕಗಳ ಮೇಲೆ ಆಸ್ಥೆಯಿಂದ ಕೈಯಾಡಿಸುತ್ತಾ ಕೇಳಿದಳು.

`’ಅಯ್ಯೋ… ಬೇಡ,” ರಾಗಿಣಿ ಹೇಳಿದಳು, “ಪುಸ್ತಕಗಳನ್ನು ಯಾರಾದರೂ ಮುಟ್ಟಿದರೂ ಅಣ್ಣನಿಗೆ ಗೊತ್ತಾಗಿಬಿಡುತ್ತದೆ. ಅವನನ್ನು ಕೇಳದೆ ಪುಸ್ತಕ ತೆಗೆದುಕೊಳ್ಳುವ ಹಾಗೇ ಇಲ್ಲ. ಅವನೀಗ ಊಟಕ್ಕೆ ಬರುತ್ತಾನೆ. ಕೇಳಿ ತೆಗೆದುಕೋ,” ಎಂದಳು.

ಊಟದ ಸಮಯಕ್ಕೆ ದಿವಾಕರ್‌ ಮನೆಗೆ ಬಂದ. ತಾಯಿ ಡೈನಿಂಗ್‌ ಟೇಬಲ್ ಮೇಲೆ ಎಲ್ಲರಿಗೂ ಊಟಕ್ಕೆ ಅಣಿ ಮಾಡಿದರು. ರಾಗಿಣಿ ಮತ್ತು ಗೆಳತಿಯರೆಲ್ಲ ಟೇಬಲ್ ಮುಂದೆ ಬಂದು ಕುಳಿತರು.

“ರಾಗಿ, ದಿವಾಕರನನ್ನೂ ಊಟಕ್ಕೆ ಕರೆದು ಬಾ,” ಎಂದು ತಾಯಿ ಹೇಳಿದರು.

ರೂಮಿನಲ್ಲಿದ್ದ ದಿವಾಕರನನ್ನು ರಾಗಿಣಿ ಊಟಕ್ಕೆ ಬರಲು ಹೇಳಿದಳು.

“ನೀವೆಲ್ಲ ಊಟ ಮಾಡಿ…. ನನಗೆ ಇಲ್ಲಿಗೇ ತಂದುಕೊಡು,” ಎಂದ ದಿವಾಕರ್‌.

“ಏನಣ್ಣಾ….. ನನ್ನ ಸ್ನೇಹಿತೆಯರೆಲ್ಲ ಏನು ತಿಳಿದುಕೊಳ್ಳುತ್ತಾರೆ…… ನೀನೇನು ಚಿಕ್ಕ ಹುಡುಗನಾ ನಾಚಿಕೊಂಡು ಒಳಗೆ ಕುಳಿತುಕೊಳ್ಳೋದಕ್ಕೆ….” ಎಂದು ಹೇಳುತ್ತಾ ರಾಗಿಣಿ ಅವನ ಕೈ ಹಿಡಿದು ಎಳೆದುಕೊಂಡು ಬಂದಳು. ಅವನು ಮನಸ್ಸಿಲ್ಲದಿದ್ದರೂ ಬಂದು ಕುಳಿತುಕೊಳ್ಳಬೇಕಾಯಿತು.

ರಾಗಿಣಿ ಗೆಳತಿಯರಿಗೆಲ್ಲ ಅಣ್ಣನ ಪರಿಚಯ ಮಾಡಿಸಿದಳು. ಎಲ್ಲರಿಗೂ ಔಪಚಾರಿಕವಾಗಿ “ಹಲೋ…” ಹೇಳಿದ ದಿವಾಕರ್‌, ಶಾಂತಿಯ ಪರಿಚಯ ಮಾಡಿಸಿದಾಗ 2 ನಿಮಿಷ ಕಾಲ ದೃಷ್ಟಿ ಅವಳ ಮೇಲೇ ಕೀಲಿಸಿದ.

ಗೌರವರ್ಣದಿಂದ ಕೂಡಿದ ಸುಂದರವಾದ ಮುಖ, ದೊಡ್ಡ ಕಣ್ಣುಗಳು, ಹೆಗಲ ಮೇಲೆ ಹರಡಿದ್ದ ರೇಶಿಮೆ ಕೂದಲು ಇವುಗಳೆಲ್ಲ ಅವಳನ್ನು ಆಕರ್ಷಕಗೊಳಿಸಿದ್ದವು. ಅನುಪಮ ಸೌಂದರ್ಯದೊಂದಿಗೆ ಅವಳ ಮುಖದಲ್ಲಿ ಕಂಡುಬರುತ್ತಿದ್ದ ಸರಳತೆಯು ಮತ್ತೊಮ್ಮೆ ಅವಳ ಮೇಲೆ ದೃಷ್ಟಿ ಹರಿಸುವಂತೆ ಮಾಡಿತು. ಅಣ್ಣನಲ್ಲಿ ಕಂಡುಬಂದ ಈ ಅಪರೂಪದ ಬದಲಾವಣೆಯನ್ನು ರಾಗಿಣಿ ಕೂಡಲೇ ಗಮನಿಸಿದಳು.

ಹುಡುಗಿಯರೆಲ್ಲ ತಮ್ಮ ತಮ್ಮಲ್ಲೇ ತಮಾಷೆ ಮಾಡಿಕೊಂಡು ಊಟ ಮಾಡತೊಡಗಿದರು. ಮಧ್ಯದಲ್ಲಿ ದಿವಾಕರನನ್ನೂ ಮಾತಿಗೆಳೆಯಲು ಪ್ರಯತ್ನಿಸಿದರು. ಶಾಂತಿ ಮಾತ್ರ ಹೆಚ್ಚು ಮಾತನಾಡದೆ ಬೇರೆಯವರ ಮಾತಿಗೆ ಮುಗುಳ್ನಗುತ್ತಾ ಇದ್ದಳು. ದಿವಾಕರನ ದೃಷ್ಟಿ ಆಗಾಗ ಅವಳತ್ತ ಹರಿಯುತ್ತಿತ್ತು.

ಎಲ್ಲರ ಊಟ ಮುಗಿಯುವ ವೇಳೆಗೆ ಮಲಗಿದ್ದ ಶರತ್‌ ಎದ್ದು ರೂಮಿನಿಂದ ಹೊರಗೆ ಬಂದ. ಹೊಸಬರನ್ನು ನೋಡಿ, ಓಡಿಹೋಗಿ ಅಜ್ಜಿಯ ಹಿಂದೆ ಅವಿತುಕೊಂಡ. ಆ ಮುದ್ದಾದ ಹುಡುಗನನ್ನು ಕಂಡು ಎಲ್ಲ ಹುಡುಗಿಯರೂ ಆಕರ್ಷಿತರಾದರು. ಹತ್ತಿರ ಬರುವಂತೆ ಮಾಡಲು ಏನೇನೋ ಆಸೆ ತೋರಿಸಿದರು. ಆದರೆ ಶರತ್‌ ಯಾರ ಬಳಿಗೂ ಹೋಗಲಿಲ್ಲ. ಬಗ್ಗಿ ಬಗ್ಗಿ ಎಲ್ಲರನ್ನೂ ನೋಡುತ್ತಾ ನಿಂತಿದ್ದ.

“ನನ್ನ ಹತ್ತಿರ ಬಾ,” ಶಾಂತಿ ಅವನ ಕೈ ಸವರುತ್ತಾ, “ನಾನು ನಿನಗೊಂದು ಕಥೆ ಹೇಳುತ್ತೇನೆ,” ಎಂದಳು.

“ಯಾವ ಕಥೆ?” ಯಾರ ಪ್ರಲೋಭನೆಗೂ ಒಳಗಾಗದಿದ್ದ ಶರತ್‌ ಶಾಂತಿಯೊಡನೆ ಮಾತನಾಡಿದ್ದನ್ನೂ ಕಂಡು ಎಲ್ಲರೂ ಬೆರಗಾದರು.

“ನಿನಗೆ ಯಾವುದು ಬೇಕೋ ಅದು….. ಮೊದಲು ನನ್ನ ಹತ್ತಿರ ಬಾ,” ಶಾಂತಿ ಮೆಲ್ಲನೆ ಅವನನ್ನು ತನ್ನತ್ತ ಎಳೆದುಕೊಳ್ಳುತ್ತಾ ಹೇಳಿದಳು.

“ಮೊದಲು ನಿನ್ನ ಹೆಸರು ಹೇಳು,” ಅವನ ಗುಂಗುರು ಕೂದಲನ್ನು ನೇವರಿಸುತ್ತಾ ಶಾಂತಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡಳು.

“ಶರತ್‌,” ಎನ್ನುತ್ತಾ ಅವನು ನಿಧಾನವಾಗಿ ಶಾಂತಿಯೊಡನೆ ಮಾತನಾಡತೊಡಗಿದ.

ಕಥೆ ಹೇಳುತ್ತಾ ಶಾಂತಿ ಒಮ್ಮೆ ಕತ್ತೆತ್ತಿ ನೋಡಿದಾಗ, ದಿವಾಕರ್‌ ತನ್ನನ್ನೇ ದಿಟ್ಟಿಸುತ್ತಿರುವುದನ್ನು ಕಂಡಳು. ಇಬ್ಬರ ದೃಷ್ಟಿ ಒಂದಾದಾಗ ದಿವಾಕರ್‌ ತಟ್ಟನೆ ಎದ್ದು ತನ್ನ ಸ್ಟಡೀ ರೂಮಿನತ್ತ ನಡೆದ.

ಮುಗ್ಧೆ ಶಾಂತಿ ತಂದೆ ಮಕ್ಕಳಿಬ್ಬರ ಮನಸ್ಸನ್ನೂ ಗೆದ್ದಿದ್ದಾಳೆಂಬುದು ರಾಗಿಣಿಗೆ ಅರ್ಥವಾಯಿತು.

ಎಲ್ಲರೂ ಡ್ರಾಯಿಂಗ್‌ರೂಮಿನಲ್ಲಿ ಕುಳಿತು ಮಾತನಾಡುತ್ತಿರುವಾಗ, “ಶಾಂತಿ, ನೀನು ಪುಸ್ತಕ ಬೇಕೆಂದು ಕೇಳಿದೆಯಲ್ಲ. ಅಣ್ಣನನ್ನು ಕೇಳಿ ತೆಗೆದುಕೊ. ಅವನು ಆಫೀಸ್‌ಗೆ ಹೊರಡುತ್ತಾನೆ,” ಎಂದಳು ರಾಗಿಣಿ.

“ನೀನೇ ತೆಗೆದುಕೊಂಡು ಬಾ,” ಶಾಂತಿ ಗೆಳತಿಯನ್ನು ಅನುನಯಿಸಿದಳು.

“ಅರೆ, ನಿನಗೆ ಯಾವ ಪುಸ್ತಕ ಬೇಕು ಅಂತ ನನಗೇನು ಗೊತ್ತು? ಅಲ್ಲದೆ, ನಾನು ಕೇಳಿದರೆ ಅಣ್ಣ ಒಪ್ಪದೆ ಇರಬಹುದು. ನಿನಗಾದರೆ ಇಲ್ಲ ಅನ್ನುವುದಕ್ಕಾಗಲ್ಲ,” ಶಾಂತಿ ಅನುಮಾನಿಸುತ್ತಾ ನಿಂತಳು. ರಾಗಿಣಿಯ ಒತ್ತಾಯದಿಂದ ಸ್ಟಡಿ ರೂಮಿಗೆ ಕಾಲಿಟ್ಟಳು.

ದಿವಾಕರ್‌ ಆರಾಮ ಕುರ್ಚಿಯಲ್ಲಿ ಕಣ್ಮುಚ್ಚಿ ಒರಗಿದ್ದ. ಅದನ್ನು ಕಂಡು ಶಾಂತಿ ಹೆಜ್ಜೆಯನ್ನು ಹಿಂದಿರಿಸಿದಳು.

ಸಣ್ಣ ಸಪ್ಪಳ ಕೇಳಿ ದಿವಾಕರ್‌ ಕಣ್ಣು ತೆರೆದ, “ಅರೆ, ನೀವಾ….. ಏನಾದರೂ ಕೆಲಸ ಇತ್ತೇನು….?”

“ನಿಮ್ಮ ಲೈಬ್ರೆರಿಯಲ್ಲಿ ಬಹಳ ಒಳ್ಳೆಯ ಪುಸ್ತಕಗಳಿವೆ….. ನನಗೆ ಕೆಲವು ಪುಸ್ತಕಗಳು ಬೇಕು. ನಾನು ಓದಿ ನಂತರ ಹಿಂದಿರುಗಿಸುತ್ತೇನೆ.”

“ಓಹೋ…. ಅದಕ್ಕೇನಂತೆ. ಯಾವುದು ಬೇಕೋ ತೆಗೆದುಕೊಳ್ಳಿ,” ದಿವಾಕರ್‌ ಹೇಳಿದ.

ಶಾಂತಿ ಶೆಲ್ಫ್ ಬಾಗಿಲು ತೆರೆದು ತನಗೆ ಬೇಕಾದ ಪುಸ್ತಕಗಳನ್ನು ಆರಿಸಿಕೊಳ್ಳತೊಡಗಿದಳು.

“ನಿಮಗೆ ಓದುವುದರಲ್ಲಿ ಆಸಕ್ತಿ ಇದೆಯಾ?”

“ಹೌದು….”

“ಬಹಳ ಒಳ್ಳೆಯದು. ಆದರೆ ಕಾಲೇಜಿನ ಪುಸ್ತಕಗಳ ಜೊತೆಗೆ ಇದನ್ನು ಹೇಗೆ ಓದುತ್ತೀರಿ….?”

“ಆಸಕ್ತಿ ಇದ್ದರೆ ಎಲ್ಲ ಆಗುತ್ತದೆ. ಈ ಪುಸ್ತಗಳನ್ನು ತೆಗೆದುಕೊಂಡಿದ್ದೇನೆ. ಬೇಗನೆ ಓದಿ ವಾಪಸ್‌ ಕೊಡುತ್ತೇನೆ.”

“ಸರಿ, ಓದಿ ಆದ ಮೇಲೆ ಕೊಡಿ….. ನಿಮಗೆ ಯಾವ ಪುಸ್ತಕ ಬೇಕಾದರೂ ಸಂಕೋಚವಿಲ್ಲದೆ ತೆಗೆದುಕೊಂಡು ಹೋಗಿ,” ದಿವಾಕರ್‌ ಪ್ರೀತಿಯಿಂದ ಅವಳತ್ತ ನೋಡುತ್ತಾ ಹೇಳಿದ.

“ಥ್ಯಾಂಕ್‌ ಯೂ,” ಎಂದು ಹೇಳಿ ಶಾಂತಿ ಸ್ಟಡಿ ರೂಮಿನಿಂದ ಹೊರಗೆ ಬಂದಳು.

“ರಾಗಿಣಿ, ನಿನ್ನ ಅಣ್ಣ ಬಹಳ ಚೆನ್ನಾಗಿ ಮಾತನಾಡುತ್ತಾರೆ. ನೀನು ಸುಮ್ಮನೆ ಹೆದರುತ್ತೀಯಾ. ಯಾವಾಗ ಬೇಕಾದರೂ ಪುಸ್ತಕಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಹೇಳಿದ್ದಾರೆ,” ಎಂದು ಶಾಂತಿ ಹೇಳಿದಳು.

ಶಾಂತಿ ತನ್ನ ಅಣ್ಣನ ಹೃದಯವನ್ನು ಹೊಕ್ಕಿದ್ದಾಳೆಂಬುದು ಅವಳಿಗೇ ತಿಳಿದಿಲ್ಲ ಎಂಬುದು ರಾಗಿಣಿಗೆ ಮಾತ್ರ ಅರ್ಥವಾಯಿತು.

ಪುಸ್ತಕಗಳಿಗಾಗಿ ಶಾಂತಿ ಆಗಾಗ ರಾಗಿಣಿಯ ಮನೆಗೆ ಬರತೊಡಗಿದಳು. ಕೆಲವೊಮ್ಮೆ ದಿವಾಕರ್‌ ಮನೆಯಲ್ಲಿರುತ್ತಿದ್ದ. ಮತ್ತೆ ಕೆಲವು ದಿನ ಇರುತ್ತಿರಲಿಲ್ಲ. ಅವಳು ಕೊಂಡೊಯ್ದಿದ್ದ ಪುಸ್ತಕವನ್ನು ತಂದಿಟ್ಟು ತನಗೆ ಬೇಕಾದ ಬೇರೆ ಪುಸ್ತಕವನ್ನು ತೆಗೆದುಕೊಂಡು ಹೋಗುತ್ತಿದ್ದಳು. ಅವಳ ಪುಸ್ತಕದ ಗೀಳು ಕಂಡು ದಿವಾಕರನೂ ಹೊಸ ಹೊಸ ಪುಸ್ತಕಗಳನ್ನು ತರುತ್ತಿದ್ದ. ಆಗೊಮ್ಮೆ ಈಗೊಮ್ಮೆ ಅವಳ ಭೇಟಿಯಾದಾಗ ದಿವಾಕರ್‌ ಅವಳ ರೂಪವನ್ನು ಕಣ್ತುಂಬಿಸಿಕೊಳ್ಳುತ್ತಿದ್ದ. ಶರತ್‌ ಅಂತೂ ಅವಳಿಗೆ ಎಷ್ಟು ಹೊಂದಿಕೊಂಡಿದ್ದನೆಂದರೆ 1 ನಿಮಿಷ ಅವಳನ್ನು ಬಿಟ್ಟಿರುತ್ತಿರಲಿಲ್ಲ. ಅವಳು ಮನೆಗೆ ಹೊರಟಳೆಂದರೆ ತಾನೂ ಜೊತೆಯಲ್ಲಿ ಹೋಗುವೆನೆಂದು ಅತ್ತು ರಂಪ ಮಾಡುತ್ತಿದ್ದ.

ದಿವಾಕರ್‌ ಮತ್ತು ಶಾಂತಿಯ ಪರಸ್ಪರ ಆಕರ್ಷಣೆಯನ್ನು ರಾಗಿಣಿ ಅರ್ಥ ಮಾಡಿಕೊಂಡಿದ್ದಳು. ಶಾಂತಿಯ ಪರಿಚಯವಾದಾಗಿನಿಂದ ದಿವಾಕರನ ಮುಖದಲ್ಲಿ ಮತ್ತೆ ಮುಗುಳ್ನಗೆ ಮೂಡುವಂತಾಗಿತ್ತು. ಅವನ ಭಾವರಹಿತ ಕಣ್ಣುಗಳಲ್ಲಿ ಹೊಳಪು ಕಾಣುವಂತಾಯಿತು. ಶಾಂತಿಗೂ ಅವನನ್ನು ಕಂಡರೆ ಮೆಚ್ಚುಗೆ ಇದೆ ಎಂದು ರಾಗಿಣಿಗೆ ಅನ್ನಿಸಿತ್ತು. ಆದರೆ ಅದು ಯಾವ ರೀತಿಯದು ಎಂದು ಅವಳಿಗೆ ಗೊತ್ತಿರಲಿಲ್ಲ.

ದಿವಾಕರನ ಮರುಮದುವೆಗಾಗಿ ಕೆಲವಾರು ಸಂಬಂಧಗಳು ಬಂದಿದ್ದುಂಟು. ಆದರೆ ದಿವಾಕರ್‌ ಅವುಗಳ ಬಗ್ಗೆ ಕೇಳಿಸಿಕೊಳ್ಳುತ್ತಲೇ ಇರಲಿಲ್ಲ. ತಾನು ವಿವಾಹವಾಗಿದ್ದವನು ಮತ್ತು ಒಂದು ಮಗುವಿನ ತಂದೆ ಎಂದು ಯೋಚಿಸಲೂ ಅವನಿಗಾಗುತ್ತಿರಲಿಲ್ಲ. ಶರತ್‌ ತನ್ನ ಜೀವನದ ಒಂದು ಅಡ್ಡಿ ಎಂದು ಭಾವಿಸಿದ್ದ. ಎಂದೂ ಆ ಮಗುವನ್ನು ಎತ್ತಿಕೊಳ್ಳಲಿಲ್ಲ ಮತ್ತು ಮುದ್ದಾಡಲಿಲ್ಲ. ಆ ಮುಗ್ಧ ಮಗುವಿನ ಬಗ್ಗೆ ತಿರಸ್ಕಾರದ ಭಾವನೆ ಹೊಂದಿದ್ದ. ಇದ್ದಕ್ಕಿದ್ದಂತೆ ದೂರದಲ್ಲೆಲ್ಲೋ ಆದ ವಾಹನದ ಜೋರಾದ ಹಾರ್ನ್‌ ಸದ್ದಿಗೆ ದಿವಾಕರ್‌ ಎಚ್ಚೆತ್ತು, ನೆನಪಿನಾಳದಿಂದ ಹೊರಬಂದ. ಗಡಿಯಾರದ ಕಡೆ ನೋಡಿದ. ರಾತ್ರಿ 12 ಗಂಟೆಯಾಗಿತ್ತು. ತಲೆ ಕೊಡಹಿ, ಒದ್ದೆಯಾಗಿದ್ದ ಕಣ್ಣುಗಳನ್ನು ಒರೆಸಿಕೊಂಡು ಎದ್ದು ಮಲಗಲು ಹೋದ.

ಆ ದಿನ ಕಾಲೇಜಿಗೆ ರಜವಿದ್ದುದರಿಂದ ಶಾಂತಿ ಪುಸ್ತಕಕ್ಕಾಗಿ ರಾಗಿಣಿಯ ಮನೆಗೆ ಬಂದಳು. ರಾಗಿಣಿ ತಾಯಿಯೊಡನೆ ದೇವಸ್ಥಾನಕ್ಕೆ ಹೋಗಿದ್ದಳು. ಕರೆಗಂಟೆ ಸದ್ದಾದಾಗ ರಾಗಿಣಿ ಬಂದಳೆಂದು ಬಾಗಿಲು ತೆರೆದ ದಿವಾಕರ್‌ ಎದುರಿಗೆ ಶಾಂತಿಯನ್ನು ಕಂಡು ತಡಬಡಾಯಿಸಿದ. ಆ ಅವೇಳೆಯಲ್ಲಿ ದಿವಾಕರನೊಬ್ಬನನ್ನೇ ಮನೆಯಲ್ಲಿ ಕಂಡು ಶಾಂತಿ ಬೆಚ್ಚಿದಳು.

“ಓಹ್‌! ನೀವು ಇಷ್ಟು ಹೊತ್ತಿನಲ್ಲಿ ಮನೆಯಲ್ಲಿದ್ದೀರಲ್ಲ….?” ಶಾಂತಿ ತಾನು ತಂದಿದ್ದ ಪುಸ್ತಕವನ್ನು ಶೆಲ್ಫಿನಲ್ಲಿ ಇಡುತ್ತಾ ಕೇಳಿದಳು.

“ಈಗ ಹೊರಡಬೇಕು…. ಮನೆಯಲ್ಲಿ ಯಾರೂ ಇಲ್ಲ…. ಅದಕ್ಕೆ ಅವರು ಬರುವುದನ್ನೇ ಕಾಯುತ್ತಿದ್ದೇನೆ,” ದಿವಾಕರನ ಹೃದಯದ ಡವಡವಿಕೆಯು ಅವನ ಮಾತನ್ನು ತಡೆಯುತ್ತಿತ್ತು. ತಾನೇನು ಹೇಳಿದೆ ಎಂಬ ಗಮನವಿಲ್ಲದೆ ಅವನು ಶಾಂತಿಯನ್ನೇ ದಿಟ್ಟಿಸಿ ನೋಡಿದ.

ಅವನ ನೇರ ದೃಷ್ಟಿಗೆ ನಾಚಿದ ಶಾಂತಿ ಸಂಕೋಚಗೊಂಡು, “ರಾಗಿಣಿ ಬರಲು ತಡವಾಗುವುದೇನು?” ಎಂದು ಕೇಳಿದಳು.

ಅವಳ ಪ್ರಶ್ನೆ ದಿವಾಕರನ ಕಿವಿಗೆ ಬೀಳಲೇ ಇಲ್ಲ. ಅವನು ತನ್ನ ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತಿದ್ದ. ಕಡೆಗೆ ಶಾಂತಿಯ ಮನಸ್ಸಿನಲ್ಲೇನಿದೆ ಎಂದು ತಿಳಿಯಬೇಕು ಎಂಬುದಾಗಿ ಆಲೋಚಿಸಿ ಮೆಲ್ಲಗೆ ಅವಳ ಬಳಿ ಬಂದ.

“ಶಾಂತಿ….” ಅವನ ಧ್ವನಿ ಭಾವುಕತೆಯಿಂದ ಕೂಡಿತ್ತು.

ಬುಕ್‌ ಶೆಲ್ಫಿನಲ್ಲಿ ಕಣ್ಣಾಡಿಸುತ್ತಿದ್ದ ಶಾಂತಿ ಅವನನ್ನು ಅಷ್ಟು ಹತ್ತಿರದಲ್ಲಿ ಕಂಡು ಬೆಚ್ಚಿ ಅವನತ್ತ ನೋಡಿದಳು.

“ನನ್ನನ್ನು ಮದುವೆಯಾಗುವೆಯಾ?” ಅವಳ ಕಣ್ಣಲ್ಲಿ ಕಣ್ಣಿಟ್ಟು ಮೃದುವಾಗಿ ಕೇಳಿದ.

“ನಾನು….. ಆ ಬಗ್ಗೆ ಇನ್ನೂ ಯೋಚಿಸಿಲ್ಲ,” ಶಾಂತಿ ತೊದಲಿದಳು.

“ಮತ್ತೆ ಯಾವಾಗ ಯೋಚಿಸುತ್ತೀಯ?”

“ನನ್ನ ಮನೆಯಲ್ಲಿ ಒಪ್ಪುವರೋ ಇಲ್ಲವೋ ಗೊತ್ತಿಲ್ಲ….”

“ನಿನ್ನ ಮನೆಯವರು ಒಪ್ಪುವುದಿಲ್ಲ ಅನ್ನಿಸಿದ್ದರೆ, ಮತ್ತೆ ನನ್ನ ಜೀವನದಲ್ಲಿ ಬಂದು ಬಿರುಗಾಳಿ ಬೀಸಿದ್ದು ಏಕೆ? ಹೇಳು ಶಾಂತಿ ಹೇಳು,” ಎನ್ನುತ್ತಾ ದಿವಾಕರ್‌ ಅವಳ ಭುಜವನ್ನು ಹಿಡಿದು ಅಲ್ಲಾಡಿಸಿದ. ಅವನ ಕಣ್ಣಿನಲ್ಲಿ ನೀರು ತುಂಬಿತ್ತು, ಮುಖ ಕಠೋರವಾಗಿತ್ತು.

ದಿವಾಕರನ ಈ ಬಗೆಯ ಮುಖಭಾವವನ್ನು ನೋಡಿ ಶಾಂತಿ ಗಾಬರಿಗೊಂಡು, “ಬಿಡಿ ನನ್ನನ್ನು, ನಿಮ್ಮ ಮನಸ್ಸು ಈಗ ಸರಿಯಾಗಿಲ್ಲ. ನಾನು ಹೋಗಬೇಕು,” ಎಂದು ಕೊಸರಾಡಿದಳು.

“ಹೌದು, ನನ್ನ ಮನಸ್ಸು ಸರಿಯಾಗಿಲ್ಲ, ಸರಿಯಾಗುವುದೂ ಇಲ್ಲ…. ನೀನು ಹೊರಟು ಹೋಗು. ಇನ್ನೆಂದೂ ನನ್ನ ಎದುರಿಗೆ ಬರಬೇಡ,” ಎಂದು ದಿವಾಕರ್‌ ತನ್ನ ಹಿಡಿತ ಸಡಿಲಿಸಿ ಅವಳನ್ನು ಅತ್ತ ನೂಕಿದ. ಶಾಂತಿ ಕಣ್ಣೊರೆಸಿಕೊಳ್ಳುತ್ತಾ ರೂಮಿನಿಂದ ಹೊರಗೆ ಬಂದಳು.

ದೇವಸ್ಥಾನಕ್ಕೆ ಹೋಗಿದ್ದ ರಾಗಿಣಿ ಮತ್ತು ಅವಳ ತಾಯಿಗೆ ಬರುವ ದಾರಿಯಲ್ಲಿ ಯಾರೋ ಪರಿಚಿತರು ಸಿಗಲು ಮಾತನಾಡುತ್ತಾ ನಿಂತರು. ತಾಯಿಯನ್ನು ಅಲ್ಲೇ ಬಿಟ್ಟು ರಾಗಿಣಿ ಮನೆಗೆ ಬಂದಳು. ಅದೇ ಸಮಯಕ್ಕೆ ಅಳುತ್ತಾ ಹೊರ ಬಂದ ಶಾಂತಿಯ ಭುಜ ಬಳಸಿ ಹಿಡಿದು, “ಏನಾಯಿತು ಶಾಂತಿ? ಏಕೆ ಅಳುತ್ತಿದ್ದೀಯಾ? ಅಣ್ಣ ಏನಾದರೂ ಅಂದನೇನು?” ಎಂದು ಕಕ್ಕುಲತೆಯಿಂದ ಕೇಳಿದಳು.

“ಏನಿಲ್ಲ ಬಿಡು. ನಾನು ಮನೆಗೆ ಹೋಗಬೇಕು.”

“ಹೋಗುವೆಯಂತೆ…. ಮೊದಲು ನನ್ನ ಜೊತೆ ಬಾ,” ಎನ್ನುತ್ತಾ ಹಾಗೆ ಬಲವಂತವಾಗಿ ಅವಳನ್ನು ತನ್ನ ಕೋಣೆಗೆ ಕರೆದೊಯ್ದಳು. ಅವಳ ಕಣ್ಣೊರೆಸಿ, ಕುಡಿಯಲು ನೀರು ಕೊಟ್ಟಳು.

ಶಾಂತಿ ಸ್ವಲ್ಪ ಸಮಾಧಾನಗೊಂಡ ಬಳಿಕ ರಾಗಿಣಿ, “ಶಾಂತಿ, ನಿನಗೂ ಅಣ್ಣನಿಗೂ ಏನು ಮಾತು ನಡೆಯಿತು ಅಂತ ನನಗೆ ಗೊತ್ತಿಲ್ಲ. ಆದರೆ ನಾನು ಕೊಂಚ ಊಹಿಸಬಲ್ಲೇ. ಅಣ್ಣ ನಿನ್ನನ್ನು ಬಹಳ ಪ್ರೀತಿಸುತ್ತಾನೆ, ನಿನ್ನನ್ನು ಮದುವೆಯಾಗಬೇಕೆಂದು ಇಷ್ಟಪಡುತ್ತಾನೆ ಅನ್ನುವುದು ನನಗೆ ಗೊತ್ತು….. ಆದರೆ ಇದು ಆಗದ ಮಾತು ಅಂತಲೂ ಗೊತ್ತು. ಆದರೂ ಸ್ನೇಹಿತೆಯಾಗಿ ನಿನ್ನನ್ನು  ಒಂದು ಮಾತು ಕೇಳುತ್ತೇನೆ. ನಿನ್ನ ಮನಸ್ಸಿನಲ್ಲಿ  ಏನಿದೆ ಹೇಳು. ನಿನಗೂ ಅಣ್ಣನ ಮೇಲೆ ಕೋಮಲ ಭಾವನೆ ಇದೆಯೇ? ನೀನೂ ಅವನನ್ನು ಇಷ್ಟಪಡುತ್ತೀಯಾ?” ಕೇಳಿದಳು.

ಶಾಂತಿ ಮಾತನಾಡಲಿಲ್ಲ. ಅವಳ ಕಣ್ಣಿನಿಂದ ಮುತ್ತಿನಂತೆ ನೀರು ಹನಿಯಿತು.

“ಹೇಳು ಶಾಂತಿ,” ರಾಗಿಣಿ ಪ್ರೀತಿಯಿಂದ ಅವಳ ಮೈ ಸವರಿದಳು.

“ನಾನು ಇಷ್ಟಪಟ್ಟರೆ ಏನಾಗುತ್ತದೆ….. ಅಪ್ಪ ಅಮ್ಮನನ್ನು ಒಪ್ಪಿಸುವವರು ಯಾರು? ನಾನಂತೂ ಅವರ ಜೊತೆ ಈ ವಿಷಯ ಮಾತನಾಡುವುದಕ್ಕೂ ಸಾಧ್ಯವಿಲ್ಲ.”

“ಅಂದರೆ, ನೀನೂ ಅಣ್ಣನನ್ನು ಪ್ರೀತಿಸುತ್ತಿದ್ದೀಯಾ ಅಂತ ಅರ್ಥ ತಾನೇ…. ಹೌದಾ….?”

ಶಾಂತಿ ಮಾತನಾಡದೆ ನೆಲ ನೋಡುತ್ತಾ ಕುಳಿತಳು. ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನಿದ್ದರು. ಆಮೇಲೆ ರಾಗಿಣಿಯೇ ಮೌನ ಮುರಿದಳು, “ನಮ್ಮ ತಂದೆಯ ಒತ್ತಾಯದಿಂದಾಗಿ ಅಣ್ಣ ಇಕ್ಕಟ್ಟಿಗೆ ಸಿಲುಕಿಕೊಂಡ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯ ಬಂಧನಕ್ಕೆ ಒಳಗಾಗಿ ದೊಡ್ಡ ಪೆಟ್ಟು ತಿನ್ನಬೇಕಾಯಿತು. ನನ್ನ ಅಣ್ಣ ಅಂತ ಹೊಗಳುತ್ತಿಲ್ಲ, ನಿನಗೂ ಗೊತ್ತು. ಇಂತಹ ಹುಡುಗನನ್ನು ಪತಿಯಾಗಿ ಪಡೆಯಬೇಕಾದರೆ ಹುಡುಗಿ ಪುಣ್ಯ ಮಾಡಿರಬೇಕಾಗುತ್ತದೆ.”

ಶಾಂತಿ ಏನೂ ಉತ್ತರ ಕೊಡದಿರಲು ರಾಗಿಣಿಯೇ ಮಾತು ಮುಂದುವರಿಸಿದಳು, “ನೀನು ಅಣ್ಣನನ್ನು ಪ್ರೀತಿಸುತ್ತಾ ಇರುವುದಾದರೆ ಬೇರೆಯವರನ್ನು ಮದುವೆಯಾಗಿ ಹೇಗೆ ಸಂತೋಷವಾಗಿರುತ್ತೀಯಾ? ಮತ್ತೆ….. ನೀನು ಈ ವಿಷಯ ಹೇಳದಿದ್ದರೆ ಮನೆಯವರಿಗೆ ಗೊತ್ತಾಗುವುದು ಹೇಗೆ….? ನೀನು ನಿಜವಾಗಲೂ ಪ್ರೀತಿಸುತ್ತಿದ್ದರೆ ಧೈರ್ಯ ತಂದುಕೊ. ಮನಸ್ಸಿನ ಮಾತನ್ನೂ ತಂದೆ ತಾಯಿಯರಿಗೆ ಹೇಳುವುದು ಏನೂ ಪಾಪದ ಕೆಲಸವಲ್ಲ. ಮೌನವಾಗಿದ್ದರೆ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ನಿನ್ನ ಮೌನದಿಂದ ನಿನ್ನ ಮತ್ತು ಅಣ್ಣ ಇಬ್ಬರ ಜೀವನ ಹಾಳಾಗುತ್ತದೆ.”

ರಾಗಿಣಿ ಹೇಳಿದ ಮಾತಿನ ಬಗ್ಗೆಯೇ ಯೋಚಿಸುತ್ತಾ ಶಾಂತಿ ಮನೆಗೆ ಹೋದಳು. ದಿವಾಕರ್‌ ಅವಳ ಮನಸ್ಸಿನ ತುಂಬಾ ಆವರಿಸಿಕೊಂಡಿದ್ದು ಯಾವಾಗ ಎಂದು ಅವಳಿಗೇ ತಿಳಿಯಲಿಲ್ಲ. ಮಗು ಶರತ್‌ ಅದೆಷ್ಟು ಆತ್ಮೀಯನಾಗಿ ಬಿಟ್ಟಿದ್ದಾನೆಂದು ಆಶ್ಚರ್ಯವಾಯಿತು. ರಾಗಿಣಿ ಹೇಳಿದ್ದು ಸರಿಯಾಗಿಯೇ ಇದೆ. ಮನಸ್ಸಿನ ಮಾತನ್ನು ತಂದೆ ತಾಯಿಯರಿಗೆ ತಿಳಿಸುವುದರಲ್ಲಿ ತಪ್ಪಿಲ್ಲ. ಇಲ್ಲವಾದರೆ ಬೇರೆ ಯಾರನ್ನೋ ಮದುವೆಯಾಗಿ ಸಂಕಟಪಬೇಕಾಗುತ್ತದೆ ಎಂದು ಅವಳು ಆಲೋಚಿಸಿದಳು.

ಕಡೆಗೆ ಒಂದು ದಿನ ಧೈರ್ಯ ಮಾಡಿ ಶಾಂತಿ ತನ್ನ ತಾಯಿಯೊಡನೆ ಮನದಿಂಗಿತವನ್ನು ಹೊರಗೆಡವಿದಳು. ತಾಯಿ ಗಂಭೀರವಾಗಿ, ಸಮಾಧಾನದಿಂದ ಮಗಳು ಹೇಳಿದುದನ್ನು ಕೇಳಿದರು.

“ಇದೇನಿದು ಶಾಂತಿ….. ದಿವಾಕರನೇನೋ ಎಲ್ಲ ರೀತಿಯಿಂದಲೂ ಒಳ್ಳೆಯ ಹುಡುಗನೇ ಸರಿ. ಆದರೆ ಅವನು ಒಂದು ಮಗುವಿನ ತಂದೆ. ಅವನಿಗೆ ಮೊದಲೊಂದು ಮದುವೆಯಾಗಿತ್ತು ಎಂಬುದನ್ನು ನಾವು ಮರೆಯಬಹುದಾದರೂ ಕಣ್ಣೆದುರಿಗೇ ಇರುವ ಮಗುವನ್ನು  ಮರೆಯಲು ಸಾಧ್ಯವೇ?” ಎಂದು ತಾಯಿ ಅವಳಿಗೇ ಸವಾಲು ಹಾಕಿದರು.

“ಆ ಪುಟ್ಟ ಮಗುವಿನ ಮೇಲೆ ಯಾಕೆ ಎಲ್ಲರಿಗೂ ಕೋಪ, ತಿರಸ್ಕಾರ?” ಎನ್ನುವಾಗ ಶಾಂತಿಗೆ ಅಳುವೇ ಬಂದುಬಿಟ್ಟಿತು.

“ಅದರ ತಂದೆಯೂ ಕೋಪದಿಂದಲೇ ನೋಡುತ್ತಾರೆ. ಅದು ಮುಗ್ಧ ಮಗು, ಅದಕ್ಕೆ ಪ್ರೀತಿಯೊಂದೇ ಅರ್ಥವಾಗುವುದು. ನನಗೆ ಆ ಬಗ್ಗೆ ಯಾವ ಸಮಸ್ಯೆಯೂ ಇಲ್ಲದಿರುವಾಗ ನಿಮಗೆಲ್ಲ ಚಿಂತೆ ಏಕೆ?”

ಅವಳ ತಂದೆಗೆ ವಿಷಯ ತಿಳಿದಾಗ ಅವರು ಕೋಪಿಷ್ಟರಾದರು. ಏನೂ ತಿಳಿಯದ ತಮ್ಮ ಮಗಳ ಮೇಲೆ ಆ ಜನರು ಬಲೆ ಬೀಸಿದ್ದಾರೆ ಎಂದು ಕೂಗಾಡಿದರು. ಆದರೆ ಶಾಂತಿ ತನ್ನ ನಿರ್ಧಾರದ ಬಗ್ಗೆ ಅಚಲಳಾಗಿದ್ದಳು. ಪ್ರಾರಂಭದಲ್ಲಿ ಅಳುಕಿನಿಂದ ಕೂಡಿದ್ದ ಅವಳು, ತಂದೆ ಅಣ್ಣನಿಗೇ ತಿಳಿಸಿ ಹೇಳುವಂತಾದಳು.

“ಒಂದು ವಿಷಯ ಯೋಚಿಸಿ ಅಪ್ಪಾ. ದಿವಾಕರ್‌ ಮತ್ತು ನಿರ್ಮಲಾರ ತಂದೆಯವರು ತಮ್ಮ ಹಠದಿಂದಾಗಿ ಇಬ್ಬರ ಜೀವನವನ್ನೂ ಹಾಳು ಮಾಡಿದರು….. ಆ ಮಗುವಿನ ಬಾಲ್ಯವನ್ನೂ ತೆಗೆದುಕೊಂಡರು…. ತಂದೆ ತಾಯಿಯ ಪ್ರೀತಿಯಿಂದ ವಂಚಿತವಾಗುವಂತೆ ಮಾಡಿದರು. ನೀವು ನನ್ನ ಬಗ್ಗೆ ಇಂತಹ ತಪ್ಪನ್ನೇ ಮಾಡುವಿರೇನು?”

ಶಾಂತಿಯ ದೃಢವಾದ ಮಾತುಗಳನ್ನು ಕೇಳಿ ಎಲ್ಲರೂ ಮೌನವಹಿಸಿ ಯೋಚಿಸತೊಡಗಿದರು. ಅವಳ ನಿರ್ಧಾರಯುತವಾದ ಮಾತುಗಳೋ ಅಥವಾ ಮಾತಿನಲ್ಲಿದ್ದ ಶಕ್ತಿಯೋ ಅಥವಾ ಆ ವಿಷಯದ ಸತ್ಯತೆಯೋ ಅಂತೂ ಗುರಿ ಮುಟ್ಟಿತು.

“ಸರಿಯಮ್ಮ….. ನಿನಗೆ ಅದರಿಂದ ಸಂತೋಷವಾಗುವುದಾದರೆ ನಮಗೂ ಸಂತೋಷವೇ,” ಎಂದು ಹೇಳಿದಾಗ ಶಾಂತಿಗೆ ಖುಷಿಯಿಂದ ಕುಣಿಯುವಂತಾಯಿತು.

ಅಂದು ದೀಪಾವಳಿ. ಸಂಜೆಗತ್ತಲು ಕವಿಯುತ್ತಿದ್ದಂತೆ ರಾಗಿಣಿ ಮನೆಯ ಮುಂದೆ ಸಾಲು ದೀಪಗಳನ್ನು ಇರಿಸಿದಳು. ಆಗ ಗೇಟ್‌ ತೆರೆದು ಒಳಗೆ ಬರುತ್ತಿರುವವಳನ್ನು ಕಂಡು ರಾಗಿಣಿ ಬೆಚ್ಚಿದಳು,

“ಶಾಂತಿ, ನೀನು? ಇಷ್ಟು ಹೊತ್ತಿನಲ್ಲಿ?” ರೇಶಿಮೆ ಸೀರೆಯುಟ್ಟು ಸುಂದರವಾದ ಬೊಂಬೆಯಂತೆ ನಿಂತಿದ್ದ ಗೆಳತಿಯನ್ನು ಕುರಿತು ಹೇಳಿದಳು.

“ಹೌದು ರಾಗಿಣಿ, ನಿಮ್ಮೆಲ್ಲರ ಜೊತೆ ಹಬ್ಬದ ಆನಂದವನ್ನು ಅನುಭವಿಸಲು ಬಂದಿದ್ದೇನೆ,” ಶಾಂತಿ ಮುಗುಳ್ನಗುತ್ತಾ ಹೇಳಿದಳು.

“ಏನು ನಿನ್ನ ಮಾತು….. ಆಗಲೇ ಕತ್ತಲಾಗಿದೆ. ಯಾರ ಜೊತೆ ಬಂದೆ?”

“ನಮ್ಮ ತಂದೆ ಒಪ್ಪಿಗೆ ಕೊಟ್ಟರು, ಅಣ್ಣ ನನ್ನನ್ನು ಇಲ್ಲಿ ಬಿಟ್ಟು ಹೋದ.”

“ಅಂದರೆ….” ರಾಗಿಣಿಗೆ ನಂಬಿಕೆ ಉಂಟಾಗಲಿಲ್ಲ,

“ನೀನು ನಿಜ ಹೇಳುತ್ತಿದ್ದೀಯಾ?”

“ಹೌದು ರಾಗಿಣಿ. ನಮ್ಮ ತಾಯಿ ತಂದೆ ಮದುವೆಗೆ ಒಪ್ಪಿದ್ದಾರೆ!”

“ಹಾಗಾದರೆ ಒಳಗೆ ನಡಿ,” ಸಂತೋಷದ ಆವೇಗದಿಂದ ರಾಗಿಣಿಯ ಧ್ವನಿ ಕಂಪಿಸಿತು,

“ಅಣ್ಣ ಸ್ಟಡಿ ರೂಮಿನಲ್ಲಿದ್ದಾನೆ. ಹೋಗಿ ಅವನನ್ನು ಕರೆದುಕೊಂಡು ಬಾ.”

ಊರೆಲ್ಲ ಹಬ್ಬದ ಸಂಭ್ರಮದಲ್ಲಿ ನಲಿಯುತ್ತಿದ್ದರೆ ದಿವಾಕರ್‌ ಮಾತ್ರ ತನ್ನ ಸ್ಟಡಿ ರೂಮಿನಲ್ಲಿ ಕತ್ತಲೆಯಲ್ಲಿ ಒಬ್ಬನೇ ಮೌನವಾಗಿ ಕುಳಿತಿದ್ದ. ಹಾಗೆ ನೋಡಿದರೆ ಅವನಿಗೆ ಯಾವ ಹಬ್ಬದಲ್ಲಿಯೂ ಆಸಕ್ತಿ ಇರಲಿಲ್ಲ. ಕಿಟಕಿಯಿಂದ ಹೊರಗೆ ಕಾಣುತ್ತಿದ್ದ ದೀಪಗಳ ಬೆಳಕನ್ನು ನೋಡುತ್ತಾ, ಪಟಾಕಿಗಳ ಸದ್ದನ್ನು ಆಲಿಸುತ್ತಾ, ತನ್ನ ಬಾಳಿನಲ್ಲಿ ಕವಿದಿರುವ ಅಂಧಕಾರ ಎಂದಾದರೂ ಕರಗುವುದೇ ಎಂದು ಯೋಚಿಸುತ್ತಿದ್ದ.

ಶಾಂತಿ ಅವನ ಕೋಣೆಯೊಳಗೆ ಕಾಲಿಟ್ಟಾಗ ದಿವಾಕರ್‌ ಕಣ್ಣು ಮುಚ್ಚಿ ಕುಳಿತಿದ್ದ. ಅವಳು ನಿಧಾನವಾಗಿ ನಡೆದು ಅವನ ಭುಜದ ಮೇಲೆ ಕೈಯಿರಿಸಿ, “ಎಲ್ಲರೂ ದೀಪ ಬೆಳಗಿಸುತ್ತಾ, ಪಟಾಕಿ ಹಚ್ಚುತ್ತಾ ಸಂತೋಷವಾಗಿದ್ದರೆ ನೀವು ಕತ್ತಲೆಯಲ್ಲಿ ಬೇಸರಿಸಿಕೊಂಡು ಕುಳಿತಿದ್ದೀರಲ್ಲ,” ಎಂದಳು. ಇದ್ದಕ್ಕಿದ್ದಂತೆ ಆದ ಅವಳ ಸ್ಪರ್ಶದಿಂದ ದಿವಾಕರ್‌ ಬೆಚ್ಚಿದ, “ಇಷ್ಟು ಹೊತ್ತಿನಲ್ಲಿ…. ನೀನಿಲ್ಲಿ…..?”  ಎಂದ.

“ಹೌದು,” ಶಾಂತಿ ದೀಪದ ಸ್ವಿಚ್‌ ಆನ್‌ ಮಾಡುತ್ತಾ ಹೇಳಿದಳು.

“ನಿಮ್ಮ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಲು ಬಂದಿದ್ದೇನೆ. ನಮ್ಮ ತಂದೆಯೇ ಅನುಮತಿ ಕೊಟ್ಟಿದ್ದಾರೆ. ನನ್ನ ಅಣ್ಣ ಇಲ್ಲಿ ಬಿಟ್ಟು ಹೋಗಿದ್ದಾರೆ. ಇನ್ನು ಮುಂದೆ ಜೀವನದುದ್ದಕ್ಕೂ ನಿಮ್ಮ ಜೊತೆಯಲ್ಲೇ ಹಬ್ಬದ ಸಂತೋಷವನ್ನು ಸವಿಯುತ್ತೇನೆ.”

ತಾನೇನು ಕನಸು ಕಾಣುತ್ತಿರುವೆನೇ….? ಎಂಬಂತೆ ದಿವಾಕರ್‌ ಸಂದೇಹದಿಂದ ಅವಳತ್ತ ನೋಡಿದ.

“ನಾನು ಅಣ್ಣನಿಗೆ ನನ್ನನ್ನು ಮನೆಗೆ ವಾಪಸ್‌ ಕರೆದುಕೊಂಡು ಹೋಗಲು ಬರುವುದು ಬೇಡ. ನೀವೇ ನನ್ನನ್ನು ಮನೆಗೆ ಬಿಡುತ್ತೀರಿ ಎಂದು ಹೇಳಿದ್ದೇನೆ. ನೀವು ನನ್ನನ್ನು ಮನೆಗೆ ಬಿಡುತ್ತೀರಿ ತಾನೇ?” ಶಾಂತಿಯೇ ಮತ್ತೆ ಹೇಳಿದಳು.

ದಿವಾಕರ್‌ ಉದ್ವೇಗಗೊಂಡು ಎದ್ದು ನಿಂತ, “ಶಾಂತಿ, ನೀನು ನಿಜ ಹೇಳುತ್ತಿದ್ದೀಯಾ? ತಮಾಷೆ ಮಾಡುತ್ತಿಲ್ಲ ತಾನೇ? ಇಂತಹ ತಮಾಷೆಯನ್ನು ನಾನು ಸಹಿಸಿಕೊಳ್ಳಲಾರೆ.”

“ನಾನು ನಿಜವನ್ನೇ ಹೇಳುತ್ತಿದ್ದೇನೆ. ನಾನು ಮನೆಯಲ್ಲಿ ಎಲ್ಲವನ್ನೂ ತಿಳಿಸಿದೆ….. ಎಲ್ಲರೂ ನನ್ನನ್ನು ಬಹಳವಾಗಿ ಪ್ರೀತಿಸುತ್ತಾರೆ. ನನ್ನ ಇಷ್ಟವೇ ತಮಗೂ ಇಷ್ಟ ಎಂದು ತಂದೆ ತಾಯಿ ಒಪ್ಪಿದ್ದಾರೆ.”

ಶಾಂತಿಯ ಮಾತಿನಿಂದ ತನಗೆ ಉಂಟಾದ ಸಂತೋಷವನ್ನು ತಾಳಲಾರದೆ ದಿವಾಕರ್‌ ಅವಳನ್ನು ಆಲಂಗಿಸಿದ.

“ಬಾ ಶಾಂತಿ. ಅಮ್ಮನ ಹತ್ತಿರ ಹೋಗೋಣ.”

“ಒಂದು ಷರತ್ತಿನ ಮೇಲೆ ಬರುತ್ತೇನೆ.”

“ಏನದು?”

“ಮೊದಲು ಮಗುವನ್ನು ಕರೆದುಕೊಂಡು ಬನ್ನಿ. ಮಕ್ಕಳ ಜೀವನದಲ್ಲಿ ತಾಯಿಯ ಪಾತ್ರ ಬಲು ದೊಡ್ಡದು. ಒಬ್ಬ ತಾಯಿಯ ಕಾರಣದಿಂದ ಈಗಾಗಲೇ ಅವನು ತಾಯಿ ತಂದೆಯ ಪ್ರೀತಿಯಿಂದ ವಂಚಿತನಾಗಿದ್ದಾನೆ. ಇನ್ನೊಬ್ಬ ತಾಯಿಯಾಗಿ ನಾನು ಅವನ ಬಾಲ್ಯದ ಸುಖವನ್ನು ದೂರ ಮಾಡಲಾರೆ. ತಾಯಿಯ ಪ್ರೀತಿಯ ಜೊತೆಗೆ ಅವನಿಗೆ ತಂದೆಯ ಪ್ರೀತಿಯೂ ದೊರೆಯುವಂತೆ ಆಗಬೇಕು. ನಿಮ್ಮ ಜೀವನದಲ್ಲಿ ಆದ ಘಟನೆಗೆ ಆ ಮುಗ್ಧ ಮಗು ಕಾರಣವಲ್ಲ.”

“ಸರಿ, ಶರತ್‌ನನ್ನು ಕರೆದುಕೊಂಡು ಬರುತ್ತೇನೆ,” ಎಂದು ನಗುತ್ತಾ ದಿವಾಕರ್‌ ಮಗುವನ್ನು ಕರೆತಂದ.

ಇಬ್ಬರೂ ಶರತ್‌ನ ಒಂದೊಂದು ಕೈ ಹಿಡಿದುಕೊಂಡು ತಾಯಿಯ ಬಳಿಗೆ ಹೋದರು.

“ಶಾಂತಿ, ನೀನು …. ಈ ಹೊತ್ತಿನಲ್ಲಿ…..?” ತಾಯಿಯೂ ಆತಂಕದಿಂದ ಅದೇ ಪ್ರಶ್ನೆಯನ್ನು ಕೇಳಿದರು.

ಶಾಂತಿ ಬಗ್ಗಿ ಅವರ ಕಾಲಿಗೆ ನಮಸ್ಕರಿಸಿದಳು.“ನಿನ್ನ ಭಾವಿ ಸೊಸೆಗೆ ಆಶೀರ್ವಾದ ಮಾಡಮ್ಮ,” ದಿವಾಕರ್‌ ಆನಂದದ ಕಣ್ಣೀರು ತುಂಬಿಕೊಂಡು ಹೇಳಿದ.

“ನೂರು ಕಾಲ ಬಾಳು ಮಗಳೇ, ಲಕ್ಷ್ಮಿಯ ಹಾಗೆ ಬಂದಿದ್ದೀಯಾ!” ತಾಯಿ ಮನತುಂಬಿ ಹರಸಿದರು.

ದಿವಾಕರನ ದುಃಖದಲ್ಲಿದ್ದ ಆನಂದವನ್ನು ಕಂಡು ತಾಯಿಗೆ ಮಗನ ಬಾಳು ಹಸನಾಗುವುದೆಂದು ಖಾತ್ರಿಯಾಗಿ ನೆಮ್ಮದಿಯಾಯಿತು.

ಹರ್ಷದ ಹೊಳೆಯಿಂದ ಭಾವುಕನಾದ ದಿವಾಕರ್‌ ಮಗ ಶರತ್‌ನನ್ನು ಎತ್ತಿಕೊಂಡು ಪ್ರೀತಿಯಿಂದ ಎದೆಗಾನಿಸಿಕೊಂಡ. ತನ್ನತ್ತ ಎಂದೂ ತಿರುಗಿ ನೋಡದ ತಂದೆಯ ವರ್ತನೆಯಿಂದ ಬೆರಗಾಗಿ ಶರತ್‌ ಅವರನ್ನೇ ದಿಟ್ಟಿಸಿದ. ಅಲ್ಲಿ ವಾತ್ಸಲ್ಯದ ವರ್ಷಧಾರೆಯಾಗುತ್ತಿತ್ತು. ಮಗು ಪ್ರೀತಿಯ ಭಾಷೆಯನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತದೆ. ಅವನು ತನ್ನ ಪುಟ್ಟ ಕೈಗಳಿಂದ ತಂದೆಯ ಕೊರಳನ್ನು ಬಳಸಿ ಹಿಡಿದ.

ರಾಗಿಣಿ ಹಿಂದೆ ನಿಂತು ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಂಡಳು. ಈ ಸಂತಸದ ಬುಗ್ಗೆಯು ತಮ್ಮ ಮನೆಯಲ್ಲಿ ಸದಾ ಹೀಗೇ ಚಿಮ್ಮುತ್ತಿರಲಿ ಎಂದು ಅವಳು ಮನದಲ್ಲೇ ಪ್ರಾರ್ಥಿಸಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ